ಶಾಹು ಮಹಾರಾಜರ ವೈದಿಕ ಸಂಸ್ಕಾರ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ

ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಪಶ್ಚಿಮ ಭಾರತದ, ಒಂದು ಮಧ್ಯಮ ಪ್ರಮಾಣದ ರಾಜ್ಯವಾದ, 3,200 ಚದರ ಮೈಲಿಗಳಷ್ಟು ವಿಸ್ತೀರ್ಣ ಹೊಂದಿದ್ದ ಕೊಲ್ಲಾಪುರದ ರಾಜ ಮೊದಲ ಬಾರಿಗೆ ಕರುಣಿಸಿದರು. ಒಂದು ಸಾಧಾರಣ ಸಂಸ್ಥಾನ ವಾದ ಕೊಲ್ಲಾಪುರವನ್ನು ಆಳಿದ ರಾಜವಂಶವು 17ನೇ ಶತಮಾನದ ರಾಜ ಶಿವಾಜಿಯಿಂದ ಪ್ರಾರಂಭವಾದದ್ದರಿಂದ ರಾಜಕೀಯವಾಗಿ ಮಹತ್ವದ್ದಾಗಿತ್ತು. ಶಿವಾಜಿಯು ಮಹಾರಾಷ್ಟ್ರ ರಾಜಕೀಯದಲ್ಲಿ ಮರಾಠರ ಹೆಮ್ಮೆಯ ಒಬ್ಬ ಸುಪ್ರಸಿದ್ಧ ರಾಜನಾಗಿದ್ದ. 1884ರಲ್ಲಿ, ಕೊಲ್ಲಾಪುರದ ಮಹಾರಾಜ 5ನೇ ಶಿವಾಜಿ ಸಂತಾನವಿಲ್ಲದ ಕಾರಣ, ಉತ್ತರಾಧಿಕಾರಿಯಾಗಿ ತನ್ನ ಸಾಮಂತರಲ್ಲಿ ಒಬ್ಬ ರಾಜನ ಹಿರಿಯ ಪುತ್ರನನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ. ಸುಮಾರು ಹತ್ತು ವರ್ಷಗಳು ಕಳೆದ ನಂತರ, ದತ್ತಕ ಪುತ್ರ ಶಾಹು ಛತ್ರಪತಿ ಮಹಾರಾಜ ತನ್ನ 20ನೇ ವರ್ಷದಲ್ಲಿ ಕೊಲ್ಲಾಪುರ ಸಂಸ್ಥಾನದ ರಾಜಕುಮಾರನಾಗಿ ಅಧಿಕಾರಸ್ಥರಾದ. ಆ ಸಮಯದಲ್ಲಿ ರಾಜ್ಯದ ಆಡಳಿತದಲ್ಲಿ 71ಮಂದಿ ಅಧಿಕಾರಿಗಳ ಪೈಕಿ 60 ಮಂದಿ ಬ್ರಾಹ್ಮಣರಾಗಿದ್ದರು. ಬಹುತೇಕ ಅವರೆಲ್ಲರೂ ಚಿತ್ಪಾವನ ಬ್ರಾಹ್ಮಣರು. ಕೇವಲ ಶೇಕಡ ನಾಲ್ಕರಷ್ಟು, ರಾಜ್ಯದ ಜನಸಂಖ್ಯೆಯಲ್ಲಿ ಬ್ರಾಹ್ಮಣರಿದ್ದರೂ, ಅವರಲ್ಲಿ ಬಹುತೇಕರು ಸಾಕ್ಷರರಾಗಿದ್ದರು.
ಮರಾಠಾ ಜಾತಿಗೆ ಸೇರಿದ ಶಾಹು ಮಹಾರಾಜರು ರಾಜ್ಯದ ಇತರ ಸಮುದಾಯಗಳಾದ ಜೈನರು, ವೀರಶೈವರು (ಲಿಂಗಾಯತರು) ಮತ್ತು ಅಸ್ಪೃಶ್ಯ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವ ಮೂಲಕ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದರು. ಕೊಲ್ಲಾಪುರದ ಮೂವರು ಸಾಮಂತರೂ ( ವಿಶಾಲ್ ಘಡ್, ಬಾವ್ಡ ಮತ್ತು ಈಚಲಕರಂಜಿ) ಬ್ರಾಹ್ಮಣ ಕುಟುಂಬದವರಾಗಿದ್ದರು. ಈ ಪ್ರದೇಶಗಳ ಮೇಲೆ ತನ್ನ ಅಧಿಕಾರ ಸ್ಥಾಪಿಸಲು ಆ ಸಾಮಂತರ ಪಾಳೆಯ ಪಟ್ಟುಗಳನ್ನು ಮರಳಿ ಪಡೆಯಲು ಅನುವಾಗುವಂತೆ ವಸಾಹತುಶಾಹಿ ಸರಕಾರಕ್ಕೆ ಅರ್ಜಿ ಸಲ್ಲಿಸಿದರು. ಅವರು ಸರಕಾರದಿಂದ ಮರಾಠರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಿದರು ಮತ್ತು ಬ್ರಾಹ್ಮಣೇತರರನ್ನು ಹಿರಿಯ ಸಲಹೆಗಾರರನ್ನಾಗಿ ನೇಮಿಸಿಕೊಂಡರು. ಈ ಕ್ರಮಗಳು ರಾಜ್ಯದಲ್ಲಿ ಅಂತರ್ಜಾತಿ ಉದ್ವಿಗ್ನತೆಯ ಕುಲುಮೆಯನ್ನು ಕೆರಳಿಸಿದವು. ಲೋಕಮಾನ್ಯ ತಿಲಕರು ತಮ್ಮ ಇಂಗ್ಲಿಷ್ ಪತ್ರಿಕೆಯಲ್ಲಿ ಜಾತಿಪರ ವಿದ್ಯಾರ್ಥಿನಿಲಯಗಳಿಗೆ ಹಣಕಾಸು ಒದಗಿಸುವ ಶಾಹು ಮಹಾರಾಜರ ನಿರ್ಧಾರವನ್ನು ಟೀಕಿಸಿದರು. ‘ಒಂದು ರಾಜ್ಯದ ಆಡಳಿತಗಾರ ಪ್ರಾಯೋಗಿಕವಾಗಿ ಜಾತಿ ಅಥವಾ ಪಂಥದ ಪೂರ್ವಾಗ್ರಹಗಳನ್ನು ಮೀರಿರಬೇಕೆಂದು ವಾದಿಸಿದರು’.
ಆದರೆ, 1901ರಲ್ಲಿ ವೇದೋಕ್ತ ವಿವಾದ ಎಂಬ ಘಟನೆ ಸಂಭವಿಸಿತು. ಇದು ಪರಿಸ್ಥಿತಿಯನ್ನು ಶಾಶ್ವತವಾಗಿ ಬದಲಾಯಿಸಿತು. ಆಗಸ್ಟ್ 1901ರಲ್ಲಿ ಕೊಲ್ಲಾಪುರದ ಬ್ರಾಹ್ಮಣ ಪುರೋಹಿತರಾದ ನಾರಾಯಣ ಭಟ್ ಸೇವೇಕರಿ ಅವರು ಶಾಹು ಕುಟುಂಬಕ್ಕೆ ವೈದಿಕ ವಿಧಿಗಳ ಪ್ರಕಾರ ‘ಶ್ರಾವಣಿ ’ಎಂಬ ಯಜ್ಞೋಪವೀತ ಸಮಾರಂಭವನ್ನು ಮಾಡಿದರು. ಕೊಲ್ಲಾಪುರದ ಬ್ರಾಹ್ಮಣ ಪಂಚಾಯತ್ ಬ್ರಹ್ಮವೃಂದ ಸೇವೇಕರಿಯನ್ನು ಬಹಿಷ್ಕರಿಸಿತು. ಶಾಹು ಅವರನ್ನು ದತ್ತು ಪಡೆದ ಕುಟುಂಬವು ನಿಜವಾಗಿಯೂ ಜಾತಿಯಿಂದ ಕ್ಷತ್ರಿಯವಲ್ಲ ಆದ್ದರಿಂದ ಶಾಹು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಿಗೆ ವೈದಿಕ ಆಚರಣೆಗಳನ್ನು ಮಾಡಲಾಗುವುದಿಲ್ಲ ಎಂದು ಅವರು ನಂಬಿದ್ದರು. ವೇದೋಕ್ತ ಆಚರಣೆಯನ್ನು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಮಾತ್ರ ಮಾಡಬಹುದು, ಆದರೆ ಪುರಾಣೋಕ್ತ ಆಚರಣೆಯನ್ನು ಇತರರಿಗೆ ಮಾಡಲವಕಾಶವಿದೆ.
ಪ್ರತಿಯಾಗಿ ಅಕ್ಟೋಬರ್ 1901ರಲ್ಲಿ ಶಾಹು ಮಹಾರಾಜರು ಎಲ್ಲಾ ಅರಮನೆ ಸಮಾರಂಭಗಳನ್ನು ವೇದೋಕ್ತ ಆಚರಣೆಗೆ ಅನಗುಣವಾಗಿ ನಡೆಸಬೇಕೆಂದು ಆದೇಶವಿತ್ತರು. ರಾಜ ಪುರೋಹಿತ ಅಥವಾ ರಾಜೋಪಾಧ್ಯಾಯ ಹಾಗೆ ಮಾಡಲು ನಿರಾಕರಿಸಿದಾಗ ಮೇ 1902 ರಲ್ಲಿ ಶಾಹು ಮಹಾರಾಜರು ತಮ್ಮ ಇನಾಂ ಭೂಮಿಗಳನ್ನು ಹಿಂದೆೆಗೆದುಕೊಂಡರು ಮತ್ತು ಕೊಲ್ಲಾಪುರದ ಇತರ ಕೆಲವು ಬ್ರಾಹ್ಮಣ ಕುಟುಂಬಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡರು. ಇದಕ್ಕೆ ತಿಲಕರ ‘ಮರಾಠಾ’ ಪತ್ರಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಶಾಹು ಮಹಾರಾಜರು ವೈಯಕ್ತಿಕ ಸೇಡಿನ ಭಾವನೆ ಮತ್ತು ಬ್ರಾಹ್ಮ್ಮಾಣರ ಮೇಲಿನ ದ್ವೇಷದಿಂದ ವರ್ತಿಸಿದ್ದಾರೆ ಎಂದು ಅದು ಬರೆಯಿತು.
ಕಟ್ಟುನಿಟ್ಟಾಗಿ ಹೇಳಬೇಕೆಂದರೆ ಈ ಪ್ರದೇಶದ ಸಾಮಾಜಿಕ -ರಾಜಕೀಯ ಪ್ರಸಂಗದಲ್ಲಿ ವೇದೋಕ್ತ ವಿವಾದವು ಪೂರ್ವ ನಿದರ್ಶನವಾಗಿರಲಿಲ್ಲ. 1818ರಲ್ಲಿ ಪಶ್ಚಿಮ ಭಾರತದಲ್ಲಿ ಬ್ರಿಟಿಷರು ಎರಡನೇ ಬಾಜಿರಾಯನನ್ನು ಸೋಲಿಸಿ ಬ್ರಾಹ್ಮ್ಮಾಣ ಪೇಶ್ವೆ ಆಡಳಿತವನ್ನು ಕೈವಶ ಮಾಡಿಕೊಂಡರು. ಅವರು ಮರಾಠಾ ರಾಜ ಪ್ರತಾಪ ಸಿಂಹ ಭೋಂಸ್ಲೆಯನ್ನು ಸತಾರಾದ ರಾಜನನ್ನಾಗಿಸಿದರು. ಶಿವಾಜಿಯ ವಂಶಸ್ಥರಾಗಿರುವುದರಿಂದ ಪ್ರತಾಪ ಸಿಂಹ ಕ್ಷತ್ರಿಯ ಮೂಲದವರು ಎಂದು ಹೇಳಿಕೊಂಡರು. ಆದ್ದರಿಂದ ಬ್ರಾಹ್ಮಣರು ತಮ್ಮ ಕುಟುಂಬಕ್ಕೆ ವೈದಿಕ ಆಚರಣೆಗಳನ್ನು ಮಾಡುವಂತೆ ಕೇಳಿಕೊಂಡರು. ಮತ್ತೊಂದೆಡೆ ಸತಾರಾದಲ್ಲಿನ ಚಿತ್ಪಾವನ ಬ್ರಾಹ್ಮಣರು ಪ್ರತಾಪ ಸಿಂಹನಂತಹ ಮರಾಠರು ಕ್ಷತ್ರಿಯರು ಎಂಬ ಮೂಲ ಕಲ್ಪನೆಯನ್ನೇ ತಿರಸ್ಕರಿಸಿದರು. ಈ ಪ್ರದೇಶದಲ್ಲಿ ಬ್ರಾಹ್ಮಣರು ಮತ್ತು ಶೂದ್ರರ ಮಧ್ಯೆ ಯಾವುದೇ ಜಾತಿಗಳಿಲ್ಲ. ಎಲ್ಲಾ ಕ್ಷತ್ರಿಯರು ಪರಶುರಾಮನಿಂದ ಹತರಾಗಿದ್ದಾರೆ ಎಂದು ಅವರು ವಾದಿಸಿದರು. ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳಿಂದ ಪರೋಕ್ಷವಾಗಿ ಪ್ರಚೋದಿಸಲ್ಪಟ್ಟ, ಈ ವಿವಾದವನ್ನು ಅಂತಿಮವಾಗಿ 1830ರಲ್ಲಿ ಬ್ರಾಹ್ಮಣರ ವಿರುದ್ಧ ನಿರ್ಧರಿಸಲಾಯಿತು.
ಕೊಲ್ಲಾಪುರದಲ್ಲಿ ವೇದೋಕ್ತ ವಿವಾದದ ಸಮಯದಲ್ಲಿ ತಿಲಕ್ ಮತ್ತು ಶಾಹು ಮಹಾರಾಜರು ತೀವ್ರ ವಿವಾದಾತ್ಮಕವಾದ ತಾಯ್ ಮಹಾರಾಜ್ ದತ್ತು ಪ್ರಕರಣದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರು. 1897ರಲ್ಲಿ, ಬಾಬಾ ಮಹಾರಾಜ್ ಎಂಬ ಶ್ರೀಮಂತ ವ್ಯಕ್ತಿ ನಿಧನನಾದನು. ಆತ ತನ್ನ ಸಾಕಷ್ಟು ಆಸ್ತಿಯನ್ನು ವಿಧವೆ ಪತ್ನಿ ತಾಯ್ ಮಹಾರಾಜ್‌ಗೆ ಬಿಟ್ಟು ಹೋದನು. ಬಾಬಾ ಮಹಾರಾಜ್ ತನ್ನ ಮೃತ್ಯು ಪತ್ರದಲ್ಲಿ ತನ್ನ ವಿಧವೆ ಪತ್ನಿಗೆ ಒಬ್ಬ ಮಗನನ್ನು ದತ್ತು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದನು, ಆದರೆ, ಹಾಗೆ ಮಾಡಲು ಮೃತ್ಯುಪತ್ರದ ನಿರ್ವಾಹಕರ ಅನುಮೋದನೆ ಪಡೆಯುವ ಅಗತ್ಯವಿತ್ತು. ಅಂಥಾ ನಿರ್ವಾಹಕರಲ್ಲಿ ಒಬ್ಬರಾದ ತಿಲಕರು ವಿಧವೆಯು ಔರಂಗಬಾದ್ ನಿಂದ ಒಬ್ಬ ಹುಡುಗನನ್ನು ದತ್ತು ತೆಗೆದುಕೊಳ್ಳಬೇಕೆಂದು ಬಯಸಿದ್ದರು; ಆದರೆ ಶಾಹು ಮಹಾರಾಜರು ಕೊಲ್ಲಾಪುರದಿಂದ ಒಬ್ಬನನ್ನು ದತ್ತು ತೆಗೆದುಕೊಳ್ಳಬೇಕೆಂದು ಅಪೇಕ್ಷಿಸಿದ್ದರು. ತಿಲಕರು ಈ ಪ್ರಕರಣಕ್ಕಾಗಿ 60 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ಅಂತಿಮವಾಗಿ ಲಂಡನ್‌ನ ಪ್ರಿವಿ ಕೌನ್ಸಿಲ್‌ಗೆ ಮೇಲ್ಮನವಿ ಸಲ್ಲಿಸಿ, ಅವರ ಸಾವಿಗೆ ಸ್ವಲ್ಪ ದಿನಗಳ ಮೊದಲು ಮೇಲ್ಮನವಿ ಪ್ರಕರಣದಲ್ಲಿ ವಿಜೇತರಾಗಿದ್ದರು. ಬಾಂಬೆಯ ಬ್ರಿಟಿಷ್ ಗವರ್ನರ್ ಸರ್ ಹೆನ್ರಿ ಸ್ಟಾಪೆರ್ಡ್ ತಾಯ್ ಮಹಾರಾಜ್ ಪ್ರಕರಣಕ್ಕೆ ಪ್ರತೀಕಾರವಾಗಿ ತಿಲಕರು ವೇದೋಕ್ತ ವಿವಾದವನ್ನು ಪ್ರಚೋದಿಸಿದ್ದಿರಬಹುದು ಎಂದು ಭಾವಿಸಿದ್ದರು.
ರಾಜೋಪಾಧ್ಯಾಯರ ವಿರುದ್ಧ ಆದೇಶ ಹೊರಡಿಸಿದ ಕೂಡಲೇ ಶಾಹು ಮಹಾರಾಜರು ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿರುವಾಗ, ಜುಲೈ 26 1902 ರಂದು ಒಂದು ವಿಶಿಷ್ಟ ಮತ್ತು ಅಭೂತಪೂರ್ವ ನಿರ್ಣಯಯೊಂದನ್ನು ಹೊರಡಿಸಿದರು. ನಿರ್ಣಯದಲ್ಲಿ ಅವರು, ಆಡಳಿತದಲ್ಲಿನ ಎಲ್ಲಾ ಖಾಲಿ ಹುದ್ದೆಗಳಲ್ಲಿ ಶೇಕಡ 50ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗಗ’ ಳಿಂದ ತುಂಬಬೇಕು ಎಂದು ಹೇಳಿದ್ದರು. ಹಿಂದುಳಿದ ವರ್ಗ ಎಂದರೆ , ಅವರು ಬ್ರಾಹ್ಮಣರು, ಪ್ರಭುಗಳು, ಶೆನ್ವಿಗಳು , ಪಾರ್ಸಿಗಳು ಮತ್ತು ಇತರ ಮುಂದುವರಿದ ವರ್ಗಗಳನ್ನು ಹೊರತು ಪಡಿಸಿ ಎಲ್ಲಾ ಜಾತಿಗಳು ಎಂದು ಅರ್ಥೈಸಿದ್ದರು. ತನ್ನ ರಾಜ್ಯದ ಹಿಂದುಳಿದ ವರ್ಗಗಳು ಶಿಕ್ಷಣ ಪಡೆಯುವಂತೆ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿರ್ಣಯವನ್ನು ಮಾಡಲಾಗಿತ್ತು. ಕೊಲ್ಲಾಪುರದ ಬ್ರಾಹ್ಮಣ ಸಮುದಾಯವು ಇದರ ಬಗ್ಗೆ ಸ್ಪಷ್ಟವಾಗಿ ಅತೃಪ್ತಿ ಹೊಂದಿತ್ತು. ಬ್ರಾಹ್ಮಣರ ಒಡೆತನದ ಕೊಲ್ಲಾಪುರದ ವಾರಪತ್ರಿಕೆ ‘ಸಮರ್ಥ್ ’ ಹೀಗೆ ಬರದಿದೆ:
ಇಡೀ ಸಮುದಾಯ ಅಂದರೆ ಬ್ರಾಹ್ಮಣರು ಬಹಿಷ್ಕರಿಸಲ್ಪಟ್ಟಿದ್ದಾರೆ.... ಹಿಂದುಳಿದ ವರ್ಗಗಳನ್ನು ಪ್ರೋತ್ಸಾಹಿಸುವ ನೆಪದಲ್ಲಿ ಎಲ್ಲಾ ಸಂಭಾವ್ಯ ಹುದ್ದೆಗಳನ್ನು ಮರಾಠರಿಗೆ ನೀಡಲಾಗುತ್ತದೆ. ಶಾಹು ಅವರ ನಿರ್ಧಾರವು ಜಾತಿಯನ್ನು ಅರ್ಹತೆಗಿಂತ ಮೇಲೇರಿಸಿದೆ ಎಂದು ತಿಲಕರ್’ ಮರಾಠಾ ’ಪತ್ರಿಕೆ ಬರೆದಿತ್ತು.
ಶಾಹು ಮಹಾರಾಜರು ತಮ್ಮ ರಾಜ್ಯದಲ್ಲಿ ಬ್ರಾಹ್ಮಣರ ವಿರುದ್ಧ ತೆಗೆದುಕೊಂಡ ಕ್ರಮ ಇದೊಂದೇ ಆಗಿರಲಿಲ್ಲ. ಉದಾಹರಣೆಗೆ- ಅವರು ಬ್ರಾಹ್ಮಣೇತರರ ಪುರೋಹಿತರ ಗುಂಪನ್ನು ರಚಿಸುವುದನ್ನು ಬೆಂಬಲಿಸಿದ್ದರು ಮತ್ತು ರಾಜಾರಾಮ್ ಕಾಲೇಜಿನಲ್ಲಿ ಬ್ರಾಹ್ಮಣ ಪ್ರಾಧ್ಯಾಪಕನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದರು. ನಂತರದಲ್ಲಿ, ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ತಮ್ಮ ಎಂಎಸ್ಸಿ. ಯನ್ನು ಪುನರಾರಂಭಿಸಲು ಸಾಧ್ಯವಾಯಿತು. ಇದೆಲ್ಲಾ ಸಾಧ್ಯವಾದುದು ಶಾಹು ಮಹಾರಾಜರು ನೀಡಿದ ಆರ್ಥಿಕ ಸಹಾಯದಿಂದ ಎಂಬುದು ಮುಖ್ಯ. ಹಾಗೆಯೇ, ಅಂಬೇಡ್ಕರ್ ಅವರಿಗೆ ವಕೀಲೀ ವೃತ್ತಿಗೆ ಕರೆ ಬಂದಿತು ಕೂಡಾ. ಲಂಡನ್‌ನಲ್ಲಿ ಬ್ರಾಹ್ಮಣೇತರರನ್ನು ಉತ್ತೇಜಿಸುವುದನ್ನು ಅಂಬೇಡ್ಕರ್ ಪರಿಗ್ರಹಿಸುತ್ತಾರೆ ಎಂದು ಶಾಹು ಮಹಾರಾಜ್ ಆಶಿಸಿದ್ದರು.
ಇದೆಲ್ಲದಕ್ಕೂ ಬಾಂಬೆಯಲ್ಲಿ ವಸಾಹತುಶಾಹಿ ಸರಕಾರದ ಮೌನ ಒಪ್ಪಿಗೆ ಇತ್ತು. 19 ನೇ ಶತಮಾನದ ಕಾಲಾವಧಿಯಲ್ಲಿ, ಬಾಂಬೆಯಲ್ಲಿ ಬ್ರಿಟಿಷ್ ಅಧಿಕಾರಿಗಳು ಬ್ರಾಹ್ಮಣರನ್ನು ಅನುಮಾನದಿಂದ ನೋಡುತ್ತಿದ್ದರು, ಮತ್ತು 1881ರಷ್ಟು ಹಿಂದೆಯೇ, ಸರಕಾರಿ ಉದ್ಯೋಗಗಳಲ್ಲಿ ‘ವಿವಿಧ ಜನಾಂಗಗಳು ಮತ್ತು ಜಾತಿಗಳ ಸರಿಯಾದ ಸಂಯೋಜನೆಯನ್ನು’ ಹುಡುಕುವ ಮೂಲಕ ಆಡಳಿತದಲ್ಲಿ ಬ್ರಾಹ್ಮಣ ಪ್ರಾಬಲ್ಯವನ್ನು ದುರ್ಬಲಗೊಳಿಸಲು ಸರಕಾರ ಪ್ರಯತ್ನ ಮಾಡಿತು. ಶತಮಾನದ ತಿರುವಿನಲ್ಲಿ ತಿಲಕ್ ಮತ್ತು ಗೋಖಲೆಯಂತಹ ಬ್ರಾಹ್ಮಣರು ರಾಷ್ಟ್ರೀಯತಾವಾದಿ ಚಳವಳಿಯ ನಾಯಕರಾಗಿದ್ದರು ಮತ್ತು ಬ್ರಿಟಿಷ್ ಅಧಿಕಾರಿಗಳು ಬ್ರಾಹ್ಮಣರ ವಿರುದ್ಧ ಶಾಹು ಮಹಾರಾಜರು ತೆಗೆದುಕೊಂಡ ಕ್ರಮಗಳಲ್ಲಿ ತಮ್ಮ ಹಿತಾಸಕ್ತಿಯನ್ನಷ್ಟೇ ಕಾಣುತ್ತಿದ್ದರು. 1906ರಲ್ಲಿ ತಿಲಕರ ಇಂಗ್ಲಿಷ್ ಪತ್ರಿಕೆ’ ಮರಾಠಾ’
ಕೊಲ್ಲಾಪುರದ ಬ್ರಿಟಿಷ್ ರೆಸಿಡೆಂಟ್ ಕರ್ನಲ್ ಫೆರ್ರಿಸ್ ಅವರನ್ನು ಉದ್ದೇಶಿಸಿ ‘ಈ ನಿರ್ಭಾಗ್ಯ ಬ್ರಾಹ್ಮಣರಿರುವ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪುನರುತ್ಪಾದಿಸುವ ಪವಿತ್ರ ಕಾರ್ಯದಲ್ಲಿ ಮಹಾರಾಜರಿಗೆ ಸಹಾಯ ಮಾಡಲು ದೇವರು ದೇವದೂತನನ್ನು ಆಯ್ಕೆ ಮಾಡಿದ್ದಾನೆ’ ಎಂದು ಬರೆಯಿತು. 1910 ರಲ್ಲಿ ಬಾಂಬೆ ಸರಕಾರ ಮತ್ತೊಮ್ಮೆ ತಮ್ಮ ಆಡಳಿತದಲ್ಲಿ ಬ್ರಾಹ್ಮಣರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂದು ಸಲಹೆ ನೀಡಿತು. ಈ ಸಮಯದಲ್ಲಿ ಬಾಂಬೆ ಪ್ರಾಂತದಲ್ಲಿ ಮತ್ತು ಸಾಮಾನ್ಯವಾಗಿ ಭಾರತದ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ವ್ಯಾಪಕವಾದ ಬ್ರಾಹ್ಮಣೇತರ ಚಳವಳಿಯೂ ಒಂದು ಸ್ಪಷ್ಟ ರೂಪ ಪಡೆದಿತ್ತು. ವಾಸ್ತವವಾಗಿ, ಬ್ರಿಟಿಷರು ತಮ್ಮ ಪ್ರಾಚೀನ ಒಡೆದು ಆಳುವ ನೀತಿಯ ಭಾಗವಾಗಿ ಕೊಲ್ಲಾಪುರದಲ್ಲಿ ಬ್ರಾಹ್ಮಣರ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಾಹು ಮಹಾರಾಜರನ್ನು ಪ್ರಚೋದಿಸಿರಬಹುದು ಎಂಬುದಕ್ಕೆ ಪುರಾವೆಗಳಿವೆ. ವೇದೋಕ್ತ ವಿವಾದದ ನಂತರ ಇಂಗ್ಲೆಂಡಿನ ವಿದೇಶಾಂಗ ಕಾರ್ಯದರ್ಶಿಗೆ ಬರೆದ ಗವರ್ನರ್ ನಾರ್ತ್ಕೋಟ್, ಶಾಹು ಮಹಾರಾಜರು ಬ್ರಾಹ್ಮಣರ ವಿರುದ್ಧ ತೆಗೆದುಕೊಂಡ ಕ್ರಮಗಳಿಗೆ ಮನ್ನಣೆ ನೀಡಿದರು. ರಾಜೋಪಾಧ್ಯಾಯರ ವಿರುದ್ಧ ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಹು ಮಹಾರಾಜರು ಮಹಾಬಲೇಶ್ವರದಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಮತ್ತು ಅದೇ ಸಮಯದಲ್ಲಿ ನಾರ್ತ್ಕ್ಕೋ
ಟ್ ಬರೆಯುತ್ತಾರೆ - ‘ನಾವು ಸದ್ದಿಲ್ಲದೆ ಅವರಲ್ಲಿ ಸ್ವಲ್ಪ ಧೈರ್ಯ ತುಂಬಿದೆವು’ ಎಂದು. ಇಲ್ಲದಿದ್ದರೆ ಶಾಹು ಮಹಾರಾಜರು ಬ್ರಾಹ್ಮಣರಿಗೆ ಮಣಿಯುತ್ತಿದ್ದರು ಎಂದು ನಾತ್ಕೋಟ್ ಭಾವಿಸಿದರು. ಇದಲ್ಲದೆ 1902 ರಲ್ಲಿ ಇಂಗ್ಲೆಂಡ್ ನ ಪ್ರವಾಸ ಸಮಯದಲ್ಲಿ ಶಾಹು ಮಹಾರಾಜರು ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡಿದರು. ಅವರು ‘ಬ್ರಾಹ್ಮಣರನ್ನು ಎದುರಿಸಬೇಕು’ ಎಂದು ಸಲಹೆ ನೀಡಿದರು. ಆದ್ದರಿಂದ 1902ರ ನಿರ್ಣಯವು ಬ್ರಾಹ್ಮಣೇತರರಿಗೆ ಶೇಕಡ 50ರಷ್ಟು ಸ್ಥಾನಗಳನ್ನು ಮೀಸಲಿಡುವುದಕ್ಕೆ ಹ್ಯಾಮಿಲ್ಟನ್ ನಿಂದ ಪ್ರೇರಿತರಾಗಿರಬಹುದು. ಈ ಸಮಯದಲ್ಲಿ ತಿಲಕರಂತಹ ಪೂನಾ ಬ್ರಾಹ್ಮಣರು ಗಣಪತಿ ಹಬ್ಬವನ್ನು ಆಚರಿಸುವ ಅಥವಾ ಶಿವಾಜಿಯನ್ನು ಸ್ಮರಿಸುವ ರಾಜಕೀಯ ಉತ್ಸವಗಳನ್ನು ಆಯೋಜಿಸುತ್ತಿದ್ದರು, ಬ್ರಾಹ್ಮಣರು ಮತ್ತು ಮರಾಠರ ಹಿತಾಸಕ್ತಿಗಳು ಒಂದೇ ಆಗಿವೆ ಬ್ರಾಹ್ಮಣರು ಮಾನ್ಯತೆ ಪಡೆದ ನಾಯಕರು ಎಂಬ ಮನೋಭಾವನೆಯನ್ನು ಪ್ರಚಾರ ಮಾಡುತ್ತಿದ್ದರು. ಅದೇನೇ ಇರಲಿ ಶಾಹು ಮಹಾರಾಜರ ಬಗ್ಗೆ ಬ್ರಿಟಿಷರು ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದರು ಎಂಬುದಕ್ಕೆ ಹ್ಯಾಮಿಲ್ಟನ್ ಅವರ ಮಾತೇ ಸಾಕ್ಷಿ. ವಿದೇಶಾಂಗ ಕಾರ್ಯದರ್ಶಿ ಹ್ಯಾಮಿಲ್ಟನ್ ಶಾಹು ಮಹಾರಾಜರು ವಸಾಹತು ಆಡಳಿತಕ್ಕೆ ಪ್ರಮುಖ ಮಿತ್ರರಾಗಿದ್ದಾರೆ ಎಂದು ಹೊಗಳಿದ್ದಾರೆ.
ಒಂದು ಶತಮಾನದ ನಂತರ 2014ರಲ್ಲಿ ಮಹಾರಾಷ್ಟ್ರ ಸರಕಾರವು ಮರಾಠರಿಗೆ ಮೀಸಲಾತಿ ನೀಡಲು ಕಾನೂನನ್ನು ಅನುಷ್ಠಾನಗೊಳಿಸಿದಾಗ (ಸರ್ವೋಚ್ಚ ನ್ಯಾಯಾಲಯದಿಂದ ಅನೂರ್ಜಿತಗೊಂಡಿದೆ, ಆದರೆ ಅದು ಬೇರೆ ಮಾತು), ಮಹಾರಾಷ್ಟ್ರ ಸರಕಾರ ಸ್ಫೂರ್ತಿ ಪಡೆದುದು, ವೇದೋಕ್ತ ವಿವಾದದ ನಂತರ ಕೊಲ್ಲಾಪುರದಲ್ಲಿ ಶಾಹು ಮಹಾರಾಜರು1902 ರಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬೇಕೆಂದು ಅಂಗೀಕರಿಸಿದ ನಿರ್ಣಯ.
(ವಿವಿಧ ಮೂಲಗಳಿಂದ)