ಭಾರತೀಯ ಸಿನೆಮಾಗಳಲ್ಲಿ ಈಗ ಆಡಳಿತಾರೂಢರ ಸಿದ್ಧಾಂತಕ್ಕೆ ಮಾತ್ರ ಬೆಲೆಯೇ?

Update: 2025-04-02 12:53 IST
ಭಾರತೀಯ ಸಿನೆಮಾಗಳಲ್ಲಿ ಈಗ ಆಡಳಿತಾರೂಢರ ಸಿದ್ಧಾಂತಕ್ಕೆ ಮಾತ್ರ ಬೆಲೆಯೇ?
  • whatsapp icon

ಈದೇಶದಲ್ಲಿ ಎರಡು ರೀತಿಯ ಜನರಿದ್ದಾರೆ. ಒಂದೆಡೆ ಕುನಾಲ್ ಕಾಮ್ರಾ ಥರದ, ಕಾಮಿಡಿಯನ್. ಮತ್ತೊಂದೆಡೆ ಸೂಪರ್ ಸ್ಟಾರ್ ಮೋಹನ್ ಲಾಲ್.

ಕುನಾಲ್ ಕಾಮ್ರಾ ಯೂಟ್ಯೂಬ್‌ನಲ್ಲಿ ವೀಡಿಯೊ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ, ಅವರ ಕಾರ್ಯಕ್ರಮದ ಚಿತ್ರೀಕರಣ ನಡೆದ ಸ್ಟುಡಿಯೊವನ್ನು ಧ್ವಂಸ ಮಾಡಲಾಯಿತು. ಅದಾದ ನಂತರ, ಅವರನ್ನು ಫೋನ್‌ನಲ್ಲಿ ನಿಂದಿಸಲಾಗುತ್ತದೆ, ಬೆದರಿಸಲಾಗುತ್ತದೆ, ಕೊಲೆ ಬೆದರಿಕೆ ಹಾಕಲಾಗುತ್ತದೆ. ಮಹಾರಾಷ್ಟ್ರದ ಹಲವೆಡೆ ಅವರ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಕೂಡ ದಾಂಧಲೆ, ಬೆದರಿಕೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುವಂತೆ ಕುನಾಲ್ ಕಾಮ್ರಾ ಕ್ಷಮೆ ಯಾಚಿಸಬೇಕೆಂದು ಹೇಳುತ್ತಾರೆ. ಆದರೆ ಕುನಾಲ್ ಕಾಮ್ರಾ ‘‘ನಾನು ಕ್ಷಮೆ ಯಾಚಿಸುವುದಿಲ್ಲ, ನಾನು ಹೆದರುವುದೂ ಇಲ್ಲ’’ ಎನ್ನುತ್ತಾರೆ. ತನ್ನ ಮಾತಿನ ಬಗ್ಗೆ ಸಿಟ್ಟಾಗಿರುವವರ ವಿರುದ್ಧ ಇನ್ನಷ್ಟು ವ್ಯಂಗ್ಯ ಹರಿಬಿಡುತ್ತಾರೆ

ಮಲಯಾಳಂ ಚಿತ್ರರಂಗದಲ್ಲಿ ಮೋಹನ್ ಲಾಲ್ ಬಹಳ ದೊಡ್ಡ ಹೆಸರು. ಅವರ ಹೊಸ ಸಿನೆಮಾ ‘ಎಲ್ 2: ಎಂಪುರಾನ್’ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ 2002ರ ಗುಜರಾತ್ ಗಲಭೆಯನ್ನು ಹೋಲುವ ಘಟನೆಗಳಿವೆ ಎಂಬ ಕಾರಣಕ್ಕಾಗಿ ವಿವಾದವೆದ್ದಿದೆ. ಬಲಪಂಥೀಯರು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ಕೂಡ ಆ ಸಿನೆಮಾದ ವಿರುದ್ಧ ಬರೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಮೋಹನ್ ಲಾಲ್ ಅವರನ್ನು ಟ್ರೋಲ್ ಮಾಡಲು ಶುರು ಮಾಡುತ್ತಾರೆ. ಅವರ ಚಿತ್ರ ಬಹಿಷ್ಕರಿಸುತ್ತಿದ್ದೇವೆ, ಟಿಕೆಟ್‌ಗಳನ್ನು ರದ್ದುಗೊಳಿಸುತ್ತಿದ್ದೇವೆ ಎಂದೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತದೆ.

ಹೀಗೆ ಹಲವು ರೀತಿಯಲ್ಲಿ ಒತ್ತಡ ಎದುರಿಸಿದ ಬಳಿಕ ಮೋಹನ್ ಲಾಲ್ ಮತ್ತು ಚಿತ್ರತಂಡದವರು ಕ್ಷಮೆ ಯಾಚಿಸುತ್ತಾರೆ. ಮಾತ್ರವಲ್ಲ, ಸಿನೆಮಾದಲ್ಲಿ 17 ಕಡೆ ಕತ್ತರಿ ಪ್ರಯೋಗಕ್ಕೆ ಸ್ವತಃ ಒಪ್ಪುತ್ತಾರೆ. ಇದರೊಂದಿಗೆ, ದೇಶದಲ್ಲಿ ಬಲಪಂಥೀಯರು ಶಾಂತರಾಗುತ್ತಾರೆ.

ಗಮನಿಸಿ.

ಯಾವುದೇ ಪ್ರಭಾವ ಇಲ್ಲದ ಕುನಾಲ್ ಪ್ರತಿಕ್ರಿಯಿಸಿದ ದಿಟ್ಟ ರೀತಿ ಒಂದೆಡೆಯಾದರೆ, ಎಲ್ಲ ಪ್ರಭಾವ, ಪ್ರಭಾವಳಿ ಇರುವ ಸೂಪರ್ ಸ್ಟಾರ್ ಮೋಹನ್ ಲಾಲ್ ಪ್ರತಿಕ್ರಿಯಿಸಿದ ರೀತಿ ಇನ್ನೊಂದೆಡೆ ನಿರಾಶೆ ಮೂಡಿಸಿದೆ.

ದೇಶದಲ್ಲಿ ಹೇಗೆ ಸೆನ್ಸರ್ ವಾತಾವರಣ ಬೆಳೆದಿದೆ ಎಂಬುದಕ್ಕೆ ಕೇರಳದಲ್ಲಿ ಕಾಣುತ್ತಿರುವ ಈ ರಾಜಕೀಯ ಸ್ಥಿತ್ಯಂತರ ಸಾಕ್ಷಿಯಾಗುತ್ತಿದೆ.

ಮೋಹನ್ ಲಾಲ್ ನಾಯಕನಾಗಿ ನಟಿಸಿರುವ ‘ಎಲ್ 2: ಎಂಪುರಾನ್’ ಸಿನೆಮಾವನ್ನು ಇನ್ನೊಬ್ಬ ದೊಡ್ಡ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ. 2019ರ ಯಶಸ್ವಿ ಸಿನೆಮಾ ‘ಲೂಸಿಫರ್’. ಅದರ ಎರಡನೇ ಭಾಗವೇ ಈ ‘ಎಲ್ 2: ಎಂಪುರಾನ್’.

ಬಲಪಂಥೀಯ ರಾಜಕಾರಣದ ಬಗೆಗಿನ ಟೀಕೆ ಹಾಗೂ ಗುಜರಾತ್ ಹತ್ಯಾಕಾಂಡವನ್ನು ಪರೋಕ್ಷವಾಗಿ ಉಲ್ಲೇಖಿಸಿದೆ ಎಂಬ ಕಾರಣಕ್ಕೆ ಈ ಸಿನೆಮಾ ವಿರುದ್ಧ ಬಿಸಿಬಿಸಿ ಚರ್ಚೆ ನಡೆದಿದೆ. ಬಿಡುಗಡೆಯಾದ ಎರಡು-ಮೂರು ದಿನಗಳಲ್ಲೇ ಚಿತ್ರ ವಿಶ್ವಾದ್ಯಂತ 100 ಕೋಟಿ ರೂ. ಗಳಿಸಿದೆ.

ಈ ಚಿತ್ರದ ಕಥಾವಸ್ತು 2002ರ ಗುಜರಾತ್ ಹತ್ಯಾಕಾಂಡ ಥರದ ಸನ್ನಿವೇಶಗಳ ಬಗ್ಗೆ ಹೇಳುತ್ತದೆ. ಭಾರತದಲ್ಲಿ ಗಲಭೆಗಳು ನಡೆಯುತ್ತವೆ, ಮುಸ್ಲಿಮರು ಹೇಗೆ ದಬ್ಬಾಳಿಕೆಯನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ತೋರಿಸಲಾಗುತ್ತದೆ.

ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ದ್ದಾಗ 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡಕ್ಕೆ ನೇರವಾಗಿ ಹೋಲಿಸಬಹುದಾದ ಅನೇಕ ವಿಷಯಗಳಿವೆ ಎಂಬ ಅಭಿಪ್ರಾಯಗಳು ಬಂದಿವೆ. ಅದನ್ನು ಎತ್ತಿಹೇಳುತ್ತ ಇಡೀ ಬಲಪಂಥೀಯ ನಿರೂಪಣೆ ಈ ಚಿತ್ರವನ್ನು ಟ್ರೋಲ್ ಮಾಡಲು ತೊಡಗಿತು. ಅದನ್ನು ಹಿಂದೂ ವಿರೋಧಿ ನಿರೂಪಣೆ ಎಂದು ಕರೆಯಲಾಯಿತು.

ಆರೆಸ್ಸೆಸ್‌ನ ಮುಖವಾಣಿ ‘ದಿ ಆರ್ಗನೈಸರ್’ ಈ ಚಿತ್ರ ಹಿಂದೂ ವಿರೋಧಿ ಹಾಗೂ ಬಿಜೆಪಿ ವಿರೋಧಿ ನಿರೂಪಣೆಯನ್ನು ಹರಡುತ್ತಿದೆ ಎಂದು ಟೀಕಿಸಿತು.

ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಗಲಭೆಯನ್ನು ಅಪಾಯಕಾರಿ ಪಕ್ಷಪಾತದೊಂದಿಗೆ ನಿರೂಪಿಸಲಾಗಿದೆ ಎಂದು ಆರ್ಗನೈಸರ್ ಆರೋಪಿಸಿ, ಐತಿಹಾಸಿಕ ಸತ್ಯ ಘಟನೆಗಳ ಕಡೆ ಗಮನ ಹರಿಸುವ ಬದಲು, ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಬೆದರಿಕೆ ಒಡ್ಡುವ ವಿಭಜನಕಾರಿ ನಿರೂಪಣೆ ಈ ಸಿನೆಮಾದಲ್ಲಿದೆ ಎಂದು ಅದು ಟೀಕಿಸಿತು.

ಆರ್ಗನೈಸರ್ ಪ್ರಕಾರ, ಇದು ಪ್ರೊಪಗಂಡಾ ಚಿತ್ರ.ಮತ್ತೆ ಕೆಲವರು ಇದನ್ನು ಜಿಹಾದಿ ಪ್ರಚಾರ ಚಿತ್ರ ಎಂದು ಕರೆದಿದ್ದಾರೆ. ಅದರ ಒತ್ತಡ ಈ ಚಿತ್ರದ ನಿರ್ಮಾಪಕರ ಮೇಲೆ ಹಾಗೂ ಮೋಹನ್ ಲಾಲ್ ಮೇಲೂ ಬಿತ್ತು. ಅದರ ಪರಿಣಾಮ, ಮೋಹನ್ ಲಾಲ್ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆ ಯಾಚಿಸಿದ್ದು ಮಾತ್ರವಲ್ಲದೆ ಈ ಚಿತ್ರಕ್ಕೆ 17 ಕಡೆ ಕತ್ತರಿ ಹಾಕುವುದಕ್ಕೂ ಚಿತ್ರ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಮೋಹನ್ ಲಾಲ್ ಹೇಳಿದ್ದಾರೆ. ‘‘ಕೆಲ ರಾಜಕೀಯ-ಸಾಮಾಜಿಕ ವಿಷಯಗಳು ನನ್ನ ಅನೇಕ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟುಮಾಡಿದೆ ಎಂದು ಗೊತ್ತಾಗಿದೆ. ಕಲಾವಿದನಾಗಿ, ನನ್ನ ಯಾವುದೇ ಸಿನೆಮಾ ಯಾವುದೇ ರಾಜಕೀಯ ಚಳವಳಿ, ಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷ ಹೊಂದದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ನಾನು ಮತ್ತು ಎಂಪುರಾನ್ ತಂಡ ನನ್ನ ಪ್ರೀತಿಪಾತ್ರರಿಗೆ ಉಂಟಾದ ಮಾನಸಿಕ ನೋವಿಗೆ ವಿಷಾದಿಸುತ್ತೇವೆ. ಅಂತಹ ದೃಶ್ಯಗಳನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ’’ ಎಂದಿದ್ದಾರೆ.

‘‘ಕಳೆದ ನಾಲ್ಕು ದಶಕಗಳಿಂದ ಸಿನೆಮಾ ಜೀವನ ನಡೆಸಿದ್ದೇನೆ. ನಿಮ್ಮ ಪ್ರೀತಿ ಮತ್ತು ನಂಬಿಕೆಯೇ ನನ್ನ ಏಕೈಕ ಶಕ್ತಿ. ಮೋಹನ್ ಲಾಲ್ ಅದಕ್ಕಿಂತ ದೊಡ್ಡವನಲ್ಲ ಎಂದು ನಾನು ನಂಬುತ್ತೇನೆ’’ ಎಂದೂ ಅವರು ಹೇಳಿದ್ದಾರೆ.

ಬಹುಶಃ ಈ ಋಣ ಅವರು ಮಣಿಯುವಂತೆ ಮಾಡಿದೆ.

ಇಲ್ಲೇ ಒಂದು ವಿಷಯವನ್ನು ಗಮನಿಸಬೇಕು.

ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ತಾಯಿ ಸಿನೆಮಾವನ್ನು ಈಗಿರುವಂತೆಯೇ ಸಮರ್ಥಿಸಿಕೊಂಡಿದ್ದಾರೆ.ಚಿತ್ರೀಕರಣದ ಸಮಯದಲ್ಲಿ ಭಾಗಿಯಾಗಿರುವ ಎಲ್ಲರೂ ದೃಶ್ಯಗಳನ್ನು ಒಪ್ಪಿದ್ದರ ಬಗ್ಗೆ ಅವರು ಹೇಳಿದ್ದಾರೆ. ಬಿಜೆಪಿ ಬೆಂಬಲಿಗರು ಮತ್ತು ಆರೆಸ್ಸೆಸ್‌ನವರು ಈ ಚಿತ್ರದ ವಿರುದ್ಧ ಮಾತಾಡುತ್ತಿರುವುದು ಅವರ ರಾಜಕೀಯ ಅಜೆಂಡಾ ಆಗಿದೆ ಎಂದು ಅವರು ಟೀಕಿಸಿದ್ದಾರೆ. ಆದರೆ ಈಗ ಈ ಚಿತ್ರಕ್ಕೆ 17 ಕಡೆ ಕತ್ತರಿ ಪ್ರಯೋಗವಾಗಿದೆ. ಮತ್ತಿದು ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಂಪುರಾನ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಘ ಪರಿವಾರ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದಿರುವ ವಿಜಯನ್, ಈ ಚಿತ್ರ ದೇಶ ಕಂಡ ಅತ್ಯಂತ ಕ್ರೂರ ನರಮೇಧಗಳಲ್ಲಿ ಒಂದನ್ನು ಉಲ್ಲೇಖಿಸುತ್ತದೆ. ಇದು ಸಂಘ ಪರಿವಾರ ಮತ್ತು ಅದರ ಸೂತ್ರಧಾರರನ್ನು ಕೆರಳಿಸಿದೆ ಎಂದು ಆರೋಪಿಸಿದ್ದಾರೆ.

ಮಲಯಾಳಂ ಚಲನಚಿತ್ರೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಚಿತ್ರ ಎಂಪುರಾನ್ ಎಂದು ಕೇರಳ ಸಿಎಂ ಶ್ಲಾಘಿಸಿದ್ದಾರೆ. ಸಂಘ ಪರಿವಾರ ಈ ಸಿನೆಮಾ ವಿರುದ್ಧ ವ್ಯಾಪಕ ದ್ವೇಷ ಅಭಿಯಾನವನ್ನು ಬಿಚ್ಚಿಟ್ಟ ಹಿನ್ನೆಲೆಯಲ್ಲಿ ಅದನ್ನು ವೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.

ಸಂಘ ಪರಿವಾರ ಸೃಷ್ಟಿಸಿರುವ ಈ ಭಯದ ವಾತಾವರಣ ಕಳವಳಕಾರಿ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕೋಮುವಾದದ ವಿರುದ್ಧ ನಿಲುವು ತೆಗೆದುಕೊಂಡು ಅದರ ಭಯಾನಕತೆಯನ್ನು ಚಿತ್ರಿಸಲಾಗಿದೆ ಎಂಬ ಕಾರಣಕ್ಕಾಗಿ ಕಲಾಕೃತಿಯನ್ನು ನಾಶಪಡಿಸಲು ಮತ್ತು ಕಲಾವಿದರ ಮೇಲೆ ದಾಳಿ ಮಾಡಲು ಸಾಧ್ಯವಾಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಪಿಣರಾಯಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ಸಮಾಜದಲ್ಲಿ, ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ಕಲೆ ಮತ್ತು ಕಲಾವಿದರನ್ನು ನಾಶಮಾಡಲು ಮತ್ತು ನಿಷೇಧಿಸಲು ಹಿಂಸಾತ್ಮಕ ಕರೆ ನೀಡುವುದು ಫ್ಯಾಶಿಸ್ಟ್ ಮನಸ್ಥಿತಿ ಎಂದು ಪಿಣರಾಯಿ ಆರೋಪಿಸಿದ್ದಾರೆ.

ಬಲಪಂಥೀಯ ನಿರೂಪಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಅದು ನಮ್ಮ ದೇಶಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು.

ಈಗ ಚಿತ್ರದಲ್ಲಿ ತೋರಿಸಿರುವ ಗಲಭೆ ದೃಶ್ಯಗಳನ್ನು ಅರ್ಧದಷ್ಟು ಕಡಿಮೆ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಚಿತ್ರದಲ್ಲಿ ಗರ್ಭಿಣಿ ಮೇಲಿನ ಅತ್ಯಾಚಾರವನ್ನೂ ತೋರಿಸಲಾಗಿದೆ. ಬಿಲ್ಕಿಸ್ ಬಾನು ದುರಂತ ನಮ್ಮೆಲ್ಲರ ಕಣ್ಣೆದುರು ಇದೆ. ಆ ದೃಶ್ಯವನ್ನೂ ಈಗ ಅರ್ಧದಷ್ಟು ಕಡಿಮೆ ಮಾಡಲಾಗಿದೆ ಎಂಬ ವರದಿಯಿದೆ.

ಬ್ರಿಟಿಷರು ಆಳುತ್ತಿದ್ದಾಗ, ಮಹಾತ್ಮಾ ಗಾಂಧಿಯವರು ಇಲ್ಲಿ ಅಹಿಂಸೆಯ ಮೂಲಕ ಹೋರಾಡುತ್ತಿದ್ದರು ಮತ್ತು ಬ್ರಿಟಿಷರು ಮಹಾತ್ಮಾ ಗಾಂಧಿಯವರಿಗೆ ಹೆದರುತ್ತಿದ್ದರು.

ಈಗ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಆದರೆ ಮೋಹನ್ ಲಾಲ್ ಥರದ ಸೂಪರ್ ಸ್ಟಾರ್‌ಗಳು, ದೊಡ್ಡ ಜನರು ಭಯಭೀತರಾಗುತ್ತಾರೆ. ಕುನಾಲ್ ಕಾಮ್ರಾ ಅಂಥವರು ಮಾತ್ರ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾರೆ.

ಈಗಾಗಲೇ ಬಾಲಿವುಡ್ ಪೂರ್ತಿಯಾಗಿ ಮೋದಿ ಸರಕಾರಕ್ಕೆ ಶರಣಾದ ಹಾಗಿದೆ. ಈಗ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ, ವಿಶೇಷವಾಗಿ, ಮಲಯಾಳಿ ಸಿನೆಮಾ ಉದ್ಯಮದೊಳಗೂ ಬಲಪಂಥೀಯರು ನಿಧಾನವಾಗಿ ಜಾಗ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಸಮಯದಲ್ಲಿ ಬಾಲಿವುಡ್‌ನಿಂದ ಯಾವ ಸಿನೆಮಾಗಳು ಬಂದವು ಮತ್ತು ಅವನ್ನು ಇಡೀ ಕೇಂದ್ರ ಸರಕಾರದ ಮಂದಿ ಹೇಗೆ ಪ್ರಮೋಟ್ ಮಾಡುತ್ತಾರೆ ಎಂಬುದನ್ನು ನೋಡಿದ್ದೇವೆ,

‘ದಿ ಕಾಶ್ಮೀರ್ ಫೈಲ್ಸ್’ ಬಂದಿತ್ತು, ಅದಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು, ಅದು 252 ಕೋಟಿ ರೂ. ಗಳಿಸಿತು. ಆದರೆ ಇತಿಹಾಸಕಾರರನ್ನು ಕೇಳಿದರೆ, ಇದು ಸಂಪೂರ್ಣವಾಗಿ ಸುಳ್ಳುಗಳ ಚಿತ್ರ. ಕಾಶ್ಮೀರಿ ಮುಸ್ಲಿಮರನ್ನು ಗುರಿಯಾಗಿಸಿದ್ದ ಆ ಚಿತ್ರ ಬಲಪಂಥೀಯರ ನಿರೂಪಣೆಗೆ ಸರಿಹೊಂದುವುದರಿಂದ, ರಾಷ್ಟ್ರೀಯ ಪ್ರಶಸ್ತಿಯೂ ಸಿಕ್ಕಿತು.

‘ಬಸ್ತರ್ ದಿ ನಕ್ಸಲ್ ಸ್ಟೋರಿ’ ಚಿತ್ರದಲ್ಲಿ ಬಸ್ತರ್‌ನಲ್ಲಿ ನಮ್ಮ 76 ಸೈನಿಕರು ಸತ್ತಾಗ, ಯಾರಿಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಗುಜರಾತ್ ಗಲಭೆಯ ಬಗ್ಗೆ ಮಾತನಾಡಿದರೆ ಸನ್ನಿವೇಶವೇ ಪೂರ್ತಿ ಬದಲಾಗುತ್ತದೆ.

ಜೆಎನ್‌ಯು ಬಗ್ಗೆ ಚಿತ್ರ ಬಂದಿತ್ತು, ಅದನ್ನು ಜಹಾಂಗೀರ್ ರಾಷ್ಟ್ರೀಯ ವಿಶ್ವವಿದ್ಯಾನಿಲಯ ಎಂದು ಹೆಸರಿಸಲಾಗಿತ್ತು.ಜೆಎನ್‌ಯುನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾರತ ವಿರೋಧಿಗಳು ಎಂದು ತೋರಿಸಲು ಪ್ರಯತ್ನಿಸಲಾಯಿತು.

‘ಸಾವರ್ಕರ್’ ಕುರಿತ ಸಿನೆಮಾ ಬಂತು.

‘ಎಮರ್ಜೆನ್ಸಿ’ ಸಿನೆಮಾವನ್ನು ದೇವೇಂದ್ರ ಫಡ್ನವೀಸ್ ಸೇರಿದಂತೆ ಮಹಾರಾಷ್ಟ್ರದ ಅನೇಕ ಬಿಜೆಪಿ ನಾಯಕರು ವೀಕ್ಷಿಸಲು ಹೋಗಿದ್ದರು.

‘ಸಾಬರಮತಿ ರಿಪೋರ್ಟ್’ ಬಿಡುಗಡೆಯಾದಾಗ, ಮೋದಿ ಅದನ್ನು ಹೊಗಳಿದ್ದಲ್ಲದೆ, ಸ್ವತಃ ಚಿತ್ರವನ್ನು ನೋಡಲು ಹೋದರು.

ಆದರೆ ಗುಜರಾತ್ ಹತ್ಯಾಕಾಂಡದ ಬಗ್ಗೆ ಮಾತನಾಡಿದರೆ, ಈ ದೇಶದಲ್ಲಿ ಎಲ್ಲಿಯೂ ಅಂಥದಕ್ಕೆ ಸ್ಥಳ ಸಿಗುವುದಿಲ್ಲ,

ಇದು ನವಭಾರತ.

ಇಲ್ಲಿ ಆಳುವವರನ್ನು ಮೆಚ್ಚಿಸಿದರಷ್ಟೇ ಸುರಕ್ಷಿತವಾಗಿರಲು ಸಾಧ್ಯ. ಇಲ್ಲದೇ ಹೋದಲ್ಲಿ, ಮೋಹನ್ ಲಾಲ್ ಅವರಂತೆ, ಎಷ್ಟೇ ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ಅಥವಾ ಎಷ್ಟೇ ದೊಡ್ಡ ಸಿನೆಮಾಗಳನ್ನು ಮಾಡಿದ್ದರೂ, ಅಭಿಮಾನಿ ಬಳಗ ಎಷ್ಟೇ ದೊಡ್ಡದಾಗಿದ್ದರೂ ಕ್ಷಮೆ ಯಾಚಿಸಬೇಕಾಗುತ್ತದೆ.

ತಮ್ಮದೇ ಚಿತ್ರದಲ್ಲಿ ಮತ್ತೆ 17 ಕಟ್‌ಗಳಿಗೂ ಮರು ಮಾತಾಡದೆ ಒಪ್ಪಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News