‘ಹಾಲಿನ ದರ ಏರಿಕೆ ಹೊರೆಯಲ್ಲ, ರೈತರ ಋಣ ಸಂದಾಯಕ್ಕೆ ಸಿಕ್ಕ ಒಂದು ಅವಕಾಶ’

ಕರ್ನಾಟಕ ಸರಕಾರ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತೀ ಲೀಟರ್ / ಕೆ.ಜಿ. ಗೆ ರೂ.4 ರಂತೆ ಹೆಚ್ಚಿ ಸಲು ತೀರ್ಮಾನಿಸಿದೆ. ನಿರೀಕ್ಷೆಯಂತೆ ವಿರೋಧಪಕ್ಷಗಳು ಇದನ್ನು ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಿವೆ. ಈ ರೀತಿ ವಿರೋಧಿಸುವವರು ಗ್ರಾಹಕರು ಖರೀದಿಸುವ ದರದಲ್ಲಿ ಮಾಡಲಾದ ಏರಿಕೆಯನ್ನು ಪ್ರಸ್ತಾಪ ಮಾಡುತ್ತಾರೆಯೇ ಹೊರತು ದರ ಏರಿಕೆಯ ಹಣವನ್ನು ಹಾಲು ಮಾರಾಟ ಮಾಡುವ ರೈತರಿಗೆ ನೀಡುತ್ತಿರುವ ಸರ್ಕಾರದ ನಿರ್ಧಾರದ ಬಗ್ಗೆ ಸೊಲ್ಲೆತ್ತುವುದಿಲ್ಲ.
ರೈತರು ನಮ್ಮ ಅನ್ನದಾತರು, ಸಮಾಜದ ಬೆನ್ನೆಲುಬು ಎಂದೆಲ್ಲ ಕೊಂಡಾಡುವ ನಾವೆಲ್ಲರೂ ರೈತರು ಬೆಳೆದ ಧಾನ್ಯ, ತರಕಾರಿ, ಉತ್ಪಾಧಿಸುವ ಹಾಲು-ಮೊಸರಿನ ಬೆಲೆ ಹೆಚ್ಚಾದಕೂಡಲೇ ರೈತರು ನಮ್ಮನ್ನೇ ಲೂಟಿ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬೊಬ್ಬೆ ಹಾಕುತ್ತೇವೆ. ಇದು ರೈತರನ್ನು ಮಣ್ಣಿನ ಮಕ್ಕಳು ಎಂದು ಬಣ್ಣಿಸುವ ನಮ್ಮೆಲ್ಲರ ಆತ್ಮವಂಚನೆ.
ರಾಜ್ಯ ಸರಕಾರ ಹಾಲು ಮೊಸರಿನ ಬೆಲೆ ಹೆಚ್ಚಿಸಿರುವುದು ತನ್ನ ಖಜಾನೆ ತುಂಬಿಸಿಕೊಳ್ಳಲು ಅಲ್ಲ. ರಾಜ್ಯದ ರೈತರು ಕಳೆದ ಕೆಲವು ತಿಂಗಳುಗಳಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ. ಅವರ ಮನವಿಗೆ ಸ್ಪಂದಿಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಈ ಕಾರಣದಿಂದಾಗಿ ಹಾಲು ಮತ್ತು ಮೊಸರಿನ ದರವನ್ನು ಪ್ರತೀ ಲೀಟರ್ / ಕೆ.ಜಿ. ಗೆ ರೂ.4 ರಂತೆ ಹೆಚ್ಚಿಸಲು ತೀರ್ಮಾನಿಸಿದೆ.
ಅಕ್ಕಿ, ಬೇಳೆಕಾಳು, ಎಣ್ಣೆ, ಸಂಬಾರ ಪದಾರ್ಥ, ತರಕಾರಿ, ಹಾಲು, ಮಾಂಸ, ಮೊಟ್ಟೆ ಹೀಗೆ ದಿನ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆ ಸಹಜ ಪ್ರಕ್ರಿಯೆ. ಇದಕ್ಕೆ ಕಾರಣ ಅವುಗಳ ಉತ್ಪಾದನೆಯ ವೆಚ್ಚದಲ್ಲಿ ಆಗುತ್ತಿರುವ ಬೆಲೆ ಏರಿಕೆ. ಹೈನುಗಾರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಹಿಂಡಿ, ಬೂಸಾ, ಜಾನುವಾರುಗಳ ಔಷಧ ಈ ಯಾವುದೂ ಕಳೆದ ವರ್ಷ ಸಿಗುತ್ತಿದ್ದ ಬೆಲೆಯಲ್ಲಿ ಇಂದು ದೊರೆಯುತ್ತಿಲ್ಲ. ಮೊದಲೇ ಹೈನುಗಾರಿಕೆ ಎಂಬುದು ನಷ್ಟದ ಉದ್ಯೋಗವೆಂದು ಹೆಸರುವಾಸಿಯಾಗಿರುವಾಗ, ಆಕಳು ಸಾಕಣೆ ಎಂದರೆ ಜನರು ಮೂಗು ಮುರಿಯುವಂಹ ಸ್ಥಿತಿ ಇರುವಾಗ ಈ ಬೆಲೆಯೇರಿಕೆ ಕೂಡ ರೈತರನ್ನು ಮತ್ತಷ್ಟು ಬಾಧಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಹಾಲಿನ ಬೆಲೆ ಹೆಚ್ಚಳ ಮಾಡಬೇಕು ಎಂಬುದು ಹೈನುಗಾರರ ಬಹುದಿನದ ಬೇಡಿಕೆಯಾಗಿತ್ತು.
ರೈತರ ಹಿತದೃಷ್ಟಿಯಿಂದ ಮಾಡಲಾದ ಈ ದರ ಏರಿಕೆಯನ್ನು ರಾಜ್ಯ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲು ಸಿಕ್ಕ ಸುವರ್ಣಾವಕಾಶವೆಂಬಂತೆ ವಿಪಕ್ಷಗಳ ನಾಯಕರು ‘‘ಗ್ಯಾರಂಟಿಗಳಿಂದ ಸರಕಾರ ದಿವಾಳಿಯಾಗಿದೆ ಹಾಗಾಗಿ ಬೆಲೆಯೇರಿಕೆ ಮಾಡಿದೆ, ಕೆಎಂಎಫ್ ನಷ್ಟದಲ್ಲಿತ್ತು ಅದಕ್ಕೆ ಬೆಲೆಯೇರಿಕೆ ಮಾಡಲಾಗಿದೆ’’ಎಂಬೆಲ್ಲಾ ಸುಳ್ಳುಗಳನ್ನು ಹಬ್ಬಿಸಲು ಸರಕಾರ ದರ ಏರಿಕೆ ನಿರ್ಧಾರ ಕೈಗೊಂಡ ಮರುಕ್ಷಣದಿಂದಲೇ ಆರಂಭ ಮಾಡಿದ್ದಾರೆ.
ನಿಜವಾಗಿ ಹೇಳಬೇಕೆಂದರೆ ಕೆಎಂಎಫ್ ಎನ್ನುವುದು ಸರಕಾರಕ್ಕೆ ಲಾಭ ತಂದುಕೊಡುವ ಉದ್ದೇಶದಿಂದ ಹುಟ್ಟುಹಾಕಿದ ಸಂಸ್ಥೆಯಲ್ಲ. ಇದು ರೈತರ ಕಲ್ಯಾಣಕ್ಕಾಗಿ, ಅವರು ನೀಡುವ ಹಾಲಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಬೇಕು ಮತ್ತು ಜೊತೆಯಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ಕನ್ನಡಿಗರಿಗೆ ನೀಡಬೇಕು ಎನ್ನುವುದು ಕೆಎಂಎಫ್‌ನ ಮೂಲ ಉದ್ದೇಶ. ಈ ಕಾರಣದಿಂದಾಗಿ ತನ್ನ ಉತ್ಪನ್ನಗಳ ಮಾರಾಟದಿಂದ ಕೆಎಂಎಫ್ ಸಂಗ್ರಹಿಸುವ ಪ್ರತೀ ಒಂದು ರೂಪಾಯಿಯಲ್ಲಿ 80 ಪೈಸೆಗೂ ಹೆಚ್ಚಿನ ಪಾಲನ್ನು ನೇರವಾಗಿ ರೈತರಿಗೆ ವರ್ಗಾವಣೆ ಮಾಡುತ್ತಿದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಅಸ್ಸಾಮಿನಲ್ಲಿ ವಮುಲ್ ಸಂಸ್ಥೆ ರೈತರಿಂದ ಲೀಟರ್ ಹಾಲಿಗೆ 37.93 ರೂಪಾಯಿ ನೀಡಿ ಖರೀದಿ ಮಾಡಿ, ಅದನ್ನು 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಸರಕಾರ ಅಥವಾ ಹಾಲು ಮಹಾಮಂಡಳ 20 ರೂಪಾಯಿಗೂ ಅಧಿಕ ಹಣವನ್ನು ತಾನು ಪಡೆಯುತ್ತಿದೆ. ಅದೇ ರೀತಿ ಹರ್ಯಾಣದಲ್ಲಿ 35.05 ರೂಪಾಯಿಗೆ ಖರೀದಿಸಿ 56ಕ್ಕೆ, ಆಂಧ್ರಪ್ರದೇಶದಲ್ಲಿ 39ಕ್ಕೆ ಖರೀದಿಸಿ 60ಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ರಾಜ್ಯದಲ್ಲಿ ರೈತರಿಂದ 31.68ಕ್ಕೆ ಖರೀದಿ ಮಾಡುವ ಕೆಎಂಎಫ್ ಸಂಸ್ಕರಣೆ, ಪ್ಯಾಕಿಂಗ್, ಸಾಗಾಟ ಹೀಗೆ ಎಲ್ಲ ವೆಚ್ಚವನ್ನು ನಿರ್ವಹಿಸಿ ಲೀಟರ್ ಪ್ಯಾಕೇಟ್ ಮೇಲೆ ಕೇವಲ 10 ರೂಪಾಯಿ ಹೆಚ್ಚಳ ಮಾಡಿ 42ಕ್ಕೆ ಮಾರಾಟ ಮಾಡುತ್ತಿದೆ.
ಇನ್ನು ಈಗ ಹೆಚ್ಚಳ ಮಾಡಲಾಗಿರುವ ಹಾಲಿನ ದರ ಗ್ರಾಹಕರಿಗೆ ದೊಡ್ಡ ಮಟ್ಟದ ಹೊರೆಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಬೇರೆ ರಾಜ್ಯಗಳ ಹಾಲಿನ ಬೆಲೆಯ ಅರಿವಿದ್ದೋ, ಇಲ್ಲದೆಯೋ ಇವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ ಎಂಬುದನ್ನು ನೋಡಿದರೆ, ಲೀಟರ್ ಹಾಲಿಗೆ 4 ರೂಪಾಯಿ ಹೆಚ್ಚಳದ ನಂತರವೂ ಕರ್ನಾಟಕದಲ್ಲಿ ಮಾತ್ರವೇ ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿರುವುದನ್ನು ಗಮನಿಸಬೇಕಾಗಿದೆ. ಪಕ್ಕದ ತಮಿಳುನಾಡಿನಿಂದ ಹಿಡಿದು ದೂರದ ದಿಲ್ಲಿಯ ವರೆಗೆ ಯಾವ ರಾಜ್ಯಗಳಲ್ಲೂ ಹಾಲಿನ ಬೆಲೆ 50 ರೂಪಾಯಿಗಿಂತ ಕಡಿಮೆಯಿಲ್ಲ.
ಕರ್ನಾಟಕದಲ್ಲಿ ಹಾಲಿನ ಬೆಲೆ ಗಗನಕ್ಕೇರಿದೆ ಎಂದು ಬೊಬ್ಬೆ ಹಾಕುತ್ತಿರುವ ಬಿಜೆಪಿ ನಾಯಕರಿಗೆ ನನ್ನದೊಂದು ಪ್ರಶ್ನೆ, ಕಳೆದ 20 ವರ್ಷಗಳಿಂದ ಬಿಜೆಪಿಯೇ ಅಧಿಕಾರದಲ್ಲಿರುವ ಗುಜರಾತ್ ನಲ್ಲಿ ಹಾಲಿನ ಬೆಲೆ ಎಷ್ಟಿದೆ? ಅಲ್ಲಿ ಪ್ರತೀ ಲೀಟರ್ ಹಾಲಿನ ಬೆಲೆ 53 ರೂಪಾಯಿ. ಇದನ್ನು ಕೂಡಾ ಗ್ರಾಹಕರ ಮೇಲೆ ಹಾಲಿನ ದರ ಹೆಚ್ಚಳ ಬರೆ ಎಂದು ಬಣ್ಣಿಸಬಹುದೇ?
ಹೈನುಗಾರಿಕೆ ಇಂದು ಭಾರೀ ಲಾಭ ತರುವ ವೃತ್ತಿ ಅಲ್ಲ. ಇತ್ತೀಚೆಗೆ ಚರ್ಮಗಂಟು, ಕಾಲುಬಾಯಿ ರೋಗದಿಂದ ಇಡೀ ಹೈನುಗಾರಿಕಾ ಉದ್ಯಮವೇ ತತ್ತರಿಸಿ ಹೋಗಿದೆ. ಹೈನುಗಾರಿಕೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದೆ. ಹೀಗಿರುವಾಗ ಹಾಲಿನ ಬೆಲೆ ಮಾತ್ರ ಹೆಚ್ಚಾಗಬಾರದು ಎನ್ನುವುದು ಯಾವ ನ್ಯಾಯ?
ವಿರೋಧ ಪಕ್ಷಗಳು ಇರುವುದೇ ಸರಕಾರವನ್ನು ಟೀಕಿಸುವುದಕ್ಕಾಗಿ. ಹಾಗಾಗಿ ಅದನ್ನು ನಿರ್ಲಕ್ಷಿಸೋಣ. ಹಾಲಿನ ಗ್ರಾಹಕರಾದ ಜನರಿಗೆ ಏನಾಗಿದೆ? ಪ್ರತೀ ಕುಟುಂಬ ಪ್ರತಿದಿನ ಒಂದು ಲೀಟರ್ ಹಾಲು ಬಳಸುತ್ತದೆ ಎಂದು ಇಟ್ಟುಕೊಳ್ಳೋಣ. ಇದರಂತೆ ತಿಂಗಳಿಗೆ 30 ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 120 ರೂಪಾಯಿ ನೀಡಬೇಕಾಗುತ್ತದೆ. ಈ ಹಣ ಸಂದಾಯವಾಗುವುದು ರೈತರಿಗೆ ಎನ್ನುವುದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪಶುಸಂಗೋಪನಾ ಸಚಿವರು ಮತ್ತು ಕೆಎಂಎಫ್ ಸೇರಿದಂತೆ ಎಲ್ಲರೂ ಮತ್ತೆ ಮತ್ತೆ ಸಾರಿ ಹೇಳುತ್ತಿದ್ದಾರೆ. ನಾವು ನೀಡುತ್ತಿರುವ ಹೆಚ್ಚುವರಿ ಹಣ ಮಳೆ-ಬಿಸಿಲು ಎನ್ನದೆ ಹೊಲಗದ್ದೆಗಳಲ್ಲಿ ದುಡಿಯುತ್ತಿರುವ, ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಬಡ ರೈತ ಕುಟುಂಬಕ್ಕೆ ಹೋಗುತ್ತದೆ ಎನ್ನುವುದನ್ನು ನಾವು ಮರೆಯಬಾರದು.
ಇದೊಂದು ರೀತಿಯ ರೈತರ ಋಣ ಸಂದಾಯದ ಅವಕಾಶ ಎಂದು ಗ್ರಾಹಕರು ತಿಳಿದುಕೊಂಡು ಹಾಲಿನ ದರ ಏರಿಕೆಯನ್ನು ಸ್ವಯಂಪ್ರೇರಿತರಾಗಿ ಬೆಂಬಲಿಸಬೇಕಾಗಿದೆ.