ಡಿಪಿಡಿಪಿ ಕಾಯ್ದೆಯ ಹೊಸ ನಿಯಮಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆದರಿಕೆಯೇ?

ಸರಕಾರ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ (ಡಿಪಿಡಿಪಿ) ನಿಯಮಗಳನ್ನು ಜಾರಿಗೆ ತರಲಿದೆ. ಈ ನಿಯಮಗಳ ಪ್ರಕಾರ ಯಾವುದೇ ಪತ್ರಕರ್ತ ಅಥವಾ ಯಾವುದೇ ಸಂಸ್ಥೆ ಅನುಮತಿಯಿಲ್ಲದೆ ಯಾರ ಹೆಸರು ಅಥವಾ ವೈಯಕ್ತಿಕ ಮಾಹಿತಿಯನ್ನು ಮುದ್ರಿಸುವುದರಿಂದ ತೊಂದರೆಯಾಗಬಹುದು ಎಂದು ಹೇಳಲಾಗುತ್ತಿದೆ.
ಅದಕ್ಕಾಗಿ 250 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಪಾವತಿಸದಿದ್ದರೆ ಅದನ್ನು 500 ಕೋಟಿ ರೂ.ಗೆ ಹೆಚ್ಚಿಸಲಾಗುತ್ತದೆ.
ಹೆಚ್ಚಿನ ವರದಿಗಾರರ ಸಂಬಳ 25 ಸಾವಿರ ರೂ. ಕೂಡ ಇಲ್ಲದಿರಬಹುದು. ಅಂತಹವರಿಗೆ 500ರಿಂದ 250 ಕೋಟಿ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
ಡಿಪಿಡಿಪಿ ಕಾಯ್ದೆಯ ಈ ನಿಯಮಗಳನ್ನು ಜಾರಿಗೆ ತಂದರೆ, ಯಾರದೇ ಹೆಸರನ್ನು ತೆಗೆದುಕೊಂಡು ಮಾತನಾಡಲು ಅಥವಾ ಬರೆಯಲು ಕಷ್ಟವಾಗುತ್ತದೆ ಎಂದು ನಾಗರಿಕ ಹಕ್ಕುಗಳಿಗಾಗಿ ಕೆಲಸ ಮಾಡುವ 30ಕ್ಕೂ ಹೆಚ್ಚು ಸಂಸ್ಥೆಗಳು ಭಾವಿಸುತ್ತವೆ.
ಹೆಸರನ್ನು ಪ್ರಕಟಿಸುವ ಮೊದಲು ಆ ವ್ಯಕ್ತಿಯ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾರ ಬಗ್ಗೆಯಾದರೂ ವೈಯಕ್ತಿಕ ಮಾಹಿತಿಯನ್ನು ಹೊರತೆಗೆಯುವುದು ಕಷ್ಟಕರವಾಗಿದ್ದರೆ ಮತ್ತು ಅನುಮತಿಯಿಲ್ಲದೆ ಹೆಸರುಗಳನ್ನು ಪ್ರಕಟಿಸಿದ್ದಕ್ಕಾಗಿ ಕೋಟ್ಯಂತರ ರೂಪಾಯಿ ದಂಡ ವಿಧಿಸಿದರೆ, ಈ ದೇಶದಲ್ಲಿ ಈಗ ಉಳಿದಿರುವ ಪತ್ರಿಕೋದ್ಯಮವೂ ನಾಶವಾಗುತ್ತದೆ.
ನ್ಯಾಯಾಧೀಶರ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೆ, ಅವರ ಆಸ್ತಿಯ ಡಿಜಿಟಲ್ ದಾಖಲೆಯನ್ನು ಮತ್ತು ನ್ಯಾಯಾಧೀಶರ ಹೆಸರನ್ನು ಮುದ್ರಿಸಬೇಕು. ಆದರೆ ಅದಕ್ಕೆ ಅನುಮತಿ ಪಡೆಯದಿದ್ದರೆ, ಡಿಜಿಟಲ್ ಪ್ರೊಟೆಕ್ಷನ್ ಬೋರ್ಡ್ 250 ಕೋಟಿ ರೂ. ದಂಡ ವಿಧಿಸುತ್ತದೆ ಮತ್ತು ಪಾವತಿಸದಿದ್ದರೆ, ಅದು 500 ಕೋಟಿ ರೂ. ಆಗಬಹುದು.
ಕ್ಷೇತ್ರ ವರದಿಯ ಮೂಲಕ ಇದನ್ನು ಮಾಡಿದರೆ ಅಂಥವರು ಖಂಡಿತವಾಗಿಯೂ ಈ ಕಾನೂನಿನ ಅಡಿಯಲ್ಲಿ ಬರುತ್ತಾರೆ. ಎಲ್ಲಾ ಅಧಿಕಾರ ಸರಕಾರದ ಬಳಿ ಇರುತ್ತದೆ. ಅದು ನಿಮ್ಮ ಡೇಟಾವನ್ನು ಮಾತ್ರವಲ್ಲದೆ ನಿಮ್ಮ ಮೂಲಗಳ ಡೇಟಾವನ್ನು ಡೇಟಾ ಪ್ರೊಸೆಸರ್‌ಗಳ ಮೂಲಕ ನೋಡಬಹುದು ಮತ್ತು ನಿಮ್ಮ ಮೂಲದ ಗೌಪ್ಯತೆ ಬಟಾ ಬಯಲಾಗುತ್ತದೆ.
ಡಿಪಿಡಿಪಿ ಕಾಯ್ದೆಯ ಕರಡು ನಿಯಮಗಳಲ್ಲಿ ಪತ್ರಕರ್ತರಿಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ ಎಂದು ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫರ್‌ಮೇಶನ್ (ಎನ್‌ಸಿಪಿಆರ್‌ಐ) ಎಂಬ ಸಂಸ್ಥೆ ಹೇಳಿದೆ.
2017ರಲ್ಲಿ ವಸುಂಧರಾ ರಾಜೇ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ಧಾಗ, ಅವರಿಗೆ ಪತ್ರಕರ್ತರನ್ನು ನಿಯಂತ್ರಿಸುವ ಒಂದು ಯೋಚನೆ ಹೊಳೆಯಿತು. ನಿವೃತ್ತ ಮತ್ತು ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್‌ಗಳು ಮತ್ತು ಸಾರ್ವಜನಿಕ ಸೇವಕರು, ಅಂದರೆ ಅಧಿಕಾರಿಗಳ ತನಿಖೆಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸುವ ಮೊದಲು ಸರಕಾರದಿಂದ ಅನುಮತಿ ಪಡೆಯಬೇಕು ಎಂಬ ಕಾನೂನಿನ ಕರಡನ್ನು ಅವರು ತಂದರು.
ಅನುಮತಿ ಪಡೆಯುವ ಮೊದಲು ಹೆಸರನ್ನು ಪ್ರಕಟಿಸಿದರೆ, ಆ ವ್ಯಕ್ತಿಯನ್ನು 2 ವರ್ಷಗಳ ಕಾಲ ಜೈಲಿಗೆ ಹಾಕಲಾಗುತ್ತದೆ ಎಂಬ ನಿಯಮ ಅದರಲ್ಲಿತ್ತು. ಆದರೆ ಅದಕ್ಕೆ ತೀವ್ರ ವಿರೋಧ ಬಂತು. ರಾಜಸ್ಥಾನದಲ್ಲಿ ತರಲು ಸಾಧ್ಯವಾಗದ್ದನ್ನು ಈಗ ಡಿಜಿಟಲ್ ವೈಯಕ್ತಿಕ ರಕ್ಷಣಾ ಕಾಯ್ದೆಯ ಮೂಲಕ ಈಡೇರಿಸಿಕೊಳ್ಳಲು ಬಿಜೆಪಿ ಬಯಸುತ್ತಿದೆಯೇ?
ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಂಶೋಧನಾ ಗುಂಪುಗಳು, ಆರ್‌ಟಿಐ ಕಾರ್ಯಕರ್ತರು ಕೂಡ ಇದರ ವ್ಯಾಪ್ತಿಗೆ ಬರುತ್ತಾರೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ನಿಯಮಗಳಲ್ಲಿ ಸರಕಾರ ಪತ್ರಕರ್ತರನ್ನು ಮಾತ್ರವಲ್ಲ, ಯಾರನ್ನೂ ಉಲ್ಲೇಖಿಸಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಗಾಗಿ ದತ್ತಾಂಶ ಮತ್ತು ಮಾಹಿತಿಯೊಂದಿಗೆ ಕೆಲಸ ಮಾಡುತ್ತಿರುವವರನ್ನು ಈ ಕಾನೂನಿನಿಂದ ಹೊರಗಿಡಬೇಕಿತ್ತು.
ಜಗತ್ತಿನಲ್ಲಿ ಎಲ್ಲೆಲ್ಲಿ ಅಂತಹ ಕಾನೂನುಗಳನ್ನು ಮಾಡಲಾಗಿದೆಯೋ ಅಲ್ಲೆಲ್ಲಾ, ಯಾರಾದರೂ ತಪ್ಪು ಮಾಡುತ್ತಿದ್ದಾರೆಂದು ಹುಡುಕಿ ಜನರಿಗೆ ತಿಳಿಸುವುದು ಪತ್ರಕರ್ತನ ಕೆಲಸ. ಆಗ ಮಾತ್ರ ಈ ಕಾನೂನಿನಲ್ಲಿ ಯಾವುದೇ ಸುಧಾರಣೆ ಸಾಧ್ಯ.
ಈ ಕಾನೂನನ್ನು ದೊಡ್ಡ ಕಂಪೆನಿಗಳ ಮೇಲೆ ಜಾರಿಗೆ ತರಬೇಕಾಗಿತ್ತು. ಏಕೆಂದರೆ ಅವು ನಮ್ಮ ಎಲ್ಲಾ ಡೇಟಾವನ್ನು ಎಲ್ಲಾ ಸಾಧನಗಳ ಮೂಲಕ ಹೊರತೆಗೆದು ನಂತರ ಅದನ್ನು ಮಾರಾಟ ಮಾಡಬಹುದು. ಅವು ನಮ್ಮಿಂದ ಅನುಮತಿ ಕೇಳುತ್ತವೆ. ನಾವು ಕ್ಲಿಕ್ ಮಾಡಿದ ತಕ್ಷಣ, ನಾವು ಅನುಮತಿ ನೀಡಿದಂತಾಗುತ್ತದೆ. ಆದರೆ ಪತ್ರಕರ್ತ ಯಾರ ಹೆಸರನ್ನಾದರೂ ತೆಗೆದುಕೊಂಡರೆ, ಅವರ ಅನುಮತಿ ಪಡೆಯಬೇಕಾಗುತ್ತದೆ. ಯಾರಾದರೂ ತಾನು ಮಾಡುವ ಯಾವುದೇ ತಪ್ಪು ಕೆಲಸದ ವರದಿಗೆ ಏಕೆ ಒಪ್ಪಿಗೆ ನೀಡುತ್ತಾರೆ?
ಇಂತಹ ಕಾನೂನು ಬ್ರಿಟಿಷರ ಕಾಲದಲ್ಲಿಯೂ ಇರಲಿಲ್ಲ, ಅದು ಈಗ ಬಂದಿದೆ. ಇದು ಸರಕಾರವನ್ನು ಸಂಪೂರ್ಣವಾಗಿ ಸಬಲಗೊಳಿಸುತ್ತದೆ. ಕಂಪೆನಿಗಳಿಗೆ ವಿನಾಯಿತಿ ನೀಡುತ್ತದೆ ಮತ್ತು ಉಳಿದ ಜನರನ್ನು ಈ ಸರ್ವಾಧಿಕಾರದ ವ್ಯಾಪ್ತಿಗೆ ತರುತ್ತದೆ.
ವೈಯಕ್ತಿಕ ಡೇಟಾವನ್ನು ರಕ್ಷಿಸುವ ನಿಯಮಗಳು ತುಂಬಾ ಕಟ್ಟುನಿಟ್ಟಾಗಿರಬೇಕು. ಆದರೆ ಈ ನೆಪದಲ್ಲಿ ಭ್ರಷ್ಟ ಜನರ ಡೇಟಾವನ್ನು ಕಾಯುವುದು ಸರಕಾರದ ಕೆಲಸ ಅಲ್ಲ.
ಸರಕಾರದ ಉದ್ದೇಶ ಕಾಗದದ ಮೇಲೆ ಸರಿಯಾಗಿರಬಹುದು, ಆದರೆ ಈ ನಿಯಮಗಳ ಗುರಿ ಏನು?
2023ರ ಆಗಸ್ಟ್‌ನಲ್ಲಿ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಅಂಗೀಕರಿಸಲಾಯಿತು. ಈಗ ಅದರ ನಿಯಮಗಳ ಕರಡು ಸಿದ್ಧವಾಗಿದೆ. ಸರಕಾರ ಆ ನಿಯಮಗಳನ್ನು ಅನುಮೋದಿಸಿದರೆ, ಭ್ರಷ್ಟಾಚಾರದ ಪ್ರಕರಣದಲ್ಲಿ ಯಾರೊಬ್ಬರ ಹೆಸರನ್ನು ತೆಗೆದುಕೊಂಡು ಮಾತನಾಡುವುದೂ ಸಾಧ್ಯವಿಲ್ಲ.
ಎನ್‌ಸಿಪಿಆರ್‌ಐ ನೇತೃತ್ವದಲ್ಲಿ ಈ ಸಂಘಟನೆಗಳ ಸುದ್ದಿಗೋಷ್ಠಿ ದಿಲ್ಲಿಯಲ್ಲಿ ನಡೆಯಿತು. ಅದರ ಪ್ರತಿನಿಧಿಗಳು ವಿರೋಧ ಪಕ್ಷದ ಸಂಸದರು ಮತ್ತು ನಾಯಕರನ್ನು ನಿಯಮಿತವಾಗಿ ಭೇಟಿ ಮಾಡಲು ಪ್ರಾರಂಭಿಸಿದ್ದಾರೆ.
ಭಾರತದಲ್ಲಿ ಪ್ರತೀ ವರ್ಷ 60 ಲಕ್ಷ ಅರ್ಜಿಗಳು ಮಾಹಿತಿ ಹಕ್ಕಿನಡಿಯಲ್ಲಿ ದಾಖಲಾಗುತ್ತವೆ. ಇವುಗಳ ಮೂಲಕ ಲಕ್ಷಾಂತರ ಜನರು ಮಾಹಿತಿಯನ್ನು ಸಂಗ್ರಹಿಸಿ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತಾರೆ. ಆದರೆ ಈಗ ವೈಯಕ್ತಿಕ ಮಾಹಿತಿಯ ವ್ಯಾಖ್ಯಾನವನ್ನು ಬದಲಾಯಿಸಲಾಗುತ್ತಿದೆ. ಈಗ ಅವುಗಳನ್ನು ನೀಡಲಾಗುವುದಿಲ್ಲ ಮತ್ತು ಅದರ ಜೊತೆಗೆ, ಅನುಮತಿಯಿಲ್ಲದೆ ಯಾರ ಹೆಸರನ್ನಾದರೂ ಮುದ್ರಿಸಿದರೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಬಳಸಿದರೆ, 250 ಕೋಟಿ ರೂ. ದಂಡ ವಿಧಿಸಬಹುದು ಎಂದು ನಾಗರಿಕ ಸಂಘಟನೆಗಳು ಹೇಳುತ್ತಿವೆ. ಹಾಗಾದರೆ ಇಷ್ಟು ದೊಡ್ಡ ಮೊತ್ತದ ದಂಡದ ಮೂಲಕ ಲಕ್ಷಾಂತರ ಜನರನ್ನು ಹೆದರಿಸುವ ಯೋಜನೆ ಇದೆಯೇ?
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭಾರತ ಸರಕಾರ ತನ್ನ ಬಜೆಟ್‌ನಲ್ಲಿ 500 ಕೋಟಿ ರೂ. ಮೀಸಲಿಟ್ಟಿದೆ. ದಿಲ್ಲಿ ಸರಕಾರ ಯಮುನಾ ನದಿಯನ್ನು ಸ್ವಚ್ಛಗೊಳಿಸಲು 500 ಕೋಟಿ ರೂ. ಮೀಸಲಿಟ್ಟಿದೆ. ಹಾಗಾದರೆ ದತ್ತಾಂಶ ಸಂರಕ್ಷಣಾ ದಂಡದಿಂದ ಸರಕಾರ ತನ್ನ ಖರ್ಚುಗಳನ್ನು ಭರಿಸುತ್ತದೆಯೇ?
250 ಕೋಟಿ ದಂಡ ವಿಧಿಸಲು ಕಾರಣವೇನು ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ. ಒಬ್ಬ ವ್ಯಕ್ತಿಯ ನಿವ್ವಳ ಮೌಲ್ಯ 250 ಕೋಟಿ ರೂ. ಅಲ್ಲದಿದ್ದರೂ, ಇಷ್ಟೊಂದು ದೊಡ್ಡ ದಂಡ ವಿಧಿಸಲಾಗುತ್ತದೆಯೇ?
ಈ ಕಾನೂನಿನಡಿಯಲ್ಲಿ ಪತ್ರಕರ್ತರಿಗೆ ಯಾವ ರಕ್ಷಣೆ ಇದೆ ಎಂಬುದನ್ನು ಸರಕಾರ ಹೇಳಬೇಕು.
ಒಬ್ಬ ಪತ್ರಕರ್ತ ಮತದಾರರ ಪಟ್ಟಿ ಅಥವಾ ಪಡಿತರ ಚೀಟಿಯಲ್ಲಿನ ವಂಚನೆಯನ್ನು ತನಿಖೆ ಮಾಡಿ, ಪ್ರತಿಯೊಬ್ಬ ವ್ಯಕ್ತಿಯ ಹೆಸರನ್ನು ಪ್ರಕಟಿಸುವ ಮೊದಲು ಅನುಮತಿ ಪಡೆಯಲು ಹೋದರೆ, ವರದಿ ತಯಾರಿಸಲು ಹಲವಾರು ವರ್ಷಗಳೇ ಬೇಕು. ಆಗ ಪತ್ರಿಕೋದ್ಯಮವೇ ನಿಂತುಹೋಗುತ್ತದೆ.
ಯಾರು ಇಂತಹ ಆಲೋಚನೆಗಳನ್ನು ಹುಟ್ಟುಹಾಕುತ್ತಾರೆ? ಇಲ್ಲಿ ಪತ್ರಿಕೋದ್ಯಮ ಈಗಾಗಲೇ ಮುಗಿದಿದೆ. ತಿಂಗಳುಗಟ್ಟಲೆ ದಾಖಲೆಗಳನ್ನು ಹುಡುಕಿ ಅಂತಿಮವಾಗಿ ತನಿಖಾ ವರದಿಗಳನ್ನು ಪ್ರಕಟಿಸುವ ಕೆಲವೇ ಪತ್ರಕರ್ತರು ಉಳಿದಿದ್ದಾರೆ. ಹಾಗಾದರೆ ಡಿಪಿಡಿಪಿ ಕಾಯ್ದೆಯ ಈ ನಿಯಮಗಳು ಅಂತಹ ಪತ್ರಕರ್ತರ ಪೆನ್ನುಗಳನ್ನು ಶಾಶ್ವತವಾಗಿ ನಿಲ್ಲಿಸುತ್ತವೆಯೇ? ಹಾಗಾದರೆ, ಸುದ್ದಿಯನ್ನು ಹೇಗೆ ಬರೆಯಬಹುದು?
ಆರ್‌ಟಿಐಗಾಗಿ ಹೋರಾಟ ಒಂದೇ ಏಟಿಗೆ ಕೊನೆಗೊಳ್ಳುವ ಗಂಭೀರ ಅಪಾಯವಿದೆ. ಈ ಅಪಾಯಗಳನ್ನು ರಾಜಕೀಯ ಪಕ್ಷಗಳು, ಸಾಮಾನ್ಯ ನಾಗರಿಕರು, ಪತ್ರಕರ್ತರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
ಸರಕಾರ ಒಂದು ರೀತಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ದಾರಿಗಳನ್ನು ಮುಚ್ಚಿದೆ. ಬಂಡವಾಳಶಾಹಿಗಳಿಗೆ ಬ್ಯಾಂಕುಗಳಿಂದ ಕೋಟ್ಯಂತರ ರೂ ನೀಡಲಾಗುತ್ತದೆ. ನಂತರ ಅವರು ಪರಾರಿಯಾಗುತ್ತಾರೆ. ಅವರ ಸಾಲಗಳನ್ನು ಮನ್ನಾ ಮಾಡಲಾಗುತ್ತದೆ. ಆಗ ಇದನ್ನು ಯಾರೊಬ್ಬರ ವೈಯಕ್ತಿಕ ಮಾಹಿತಿ ಎಂದು ಹೇಳಲಾಗುತ್ತದೆ. ಅದನ್ನು ಬಹಿರಂಗಪಡಿಸುವುದಿಲ್ಲ ಎನ್ನಲಾಗುತ್ತದೆ. ಅಂದರೆ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕುವ ವಿಧಾನವನ್ನು ಈ ಕಾಯ್ದೆಯಿಂದ ಇಲ್ಲವಾಗಿಸಲಾಗಿದೆ.
ಮೊದಲು, ಅದು ಸಾರ್ವಜನಿಕ ಚಟುವಟಿಕೆಗೆ ಸಂಬಂಧಿಸಿದ್ದರೆ ವೈಯಕ್ತಿಕ ಮಾಹಿತಿಯನ್ನು ತೆಗೆದುಕೊಳ್ಳಬಹುದಿತ್ತು. ಸಾರ್ವಜನಿಕ ಹಿತಾಸಕ್ತಿ ಅಥವಾ ಚಟುವಟಿಕೆಗೆ ಸಂಬಂಧಿಸದ ವೈಯಕ್ತಿಕ ಮಾಹಿತಿಯನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಆದರೆ ಈಗ ಈ ಕರಡು ನಿಯಮ ಜಾರಿಗೆ ಬಂದ ನಂತರ, ಯಾವುದೇ ರೀತಿಯ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇದರ ಅರ್ಥ ಏನು?
ಆರ್‌ಟಿಐ ಮೂಲಕ ಯಾರಾದರೂ ಮಾಹಿತಿಯನ್ನು ಪಡೆಯಬಹುದು. ಆದರೆ ಈಗ ಅದರ ಮೇಲೆ ಬೆಟ್ಟದಷ್ಟು ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ನೀವು ದಂಡದ ಭಯದಿಂದ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುತ್ತೀರಿ ಮತ್ತು ನೀವು ಕೇಳಿದರೂ ಸಹ, ವೈಯಕ್ತಿಕ ಮಾಹಿತಿಯ ಹೆಸರಿನಲ್ಲಿ ಮಾಹಿತಿ ಕೊಡಲಾಗುವುದಿಲ್ಲ.
ಮಾಹಿತಿಯನ್ನು ಮರೆಮಾಚುವ ಸಲುವಾಗಿ ಸರಕಾರ ಚುನಾವಣಾ ಬಾಂಡ್ ಕಾನೂನನ್ನು ಸಂವಿಧಾನಬಾಹಿರ ರೀತಿಯಲ್ಲಿ ಮಾಡಿತ್ತು. ಅದು ವೈಯಕ್ತಿಕ ಮಾಹಿತಿಯನ್ನು ರಕ್ಷಿಸುತ್ತಿದೆ ಎಂದು ಭಾವಿಸಲಾಗಿತ್ತು.
ಆದರೆ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದು ಯಾರಿಗಾಗಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.
ಅದು ಸರಕಾರ ತನ್ನನ್ನು ತಾನು ಉಳಿಸಿಕೊಳ್ಳಲು, ತನ್ನ ಮಂತ್ರಿಗಳು ಮತ್ತು ಅಧಿಕಾರಿಗಳನ್ನು ಉಳಿಸಿಕೊಳ್ಳಲು ಎಂಬುದನ್ನು ತಿಳಿಯಬೇಕು.
ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದಾಗ, ಈ ಕಾನೂನು ಮಾಹಿತಿ ಹಕ್ಕು ಕಾಯ್ದೆಯ ಅಡಿಪಾಯಕ್ಕೆ ವಿರುದ್ಧವಾಗಿದೆ ಎಂದಿತ್ತು.
2024ರ ಚುನಾವಣೆ ಮುಗಿದ ನಂತರ ಬಿಜೆಪಿಯ ಖಜಾನೆಯಲ್ಲಿ ಕೋಟಿಗಳಷ್ಟು ಹಣ ಹೆಚ್ಚಾಯಿತು. ಹೆಚ್ಚಿನ ಹಣ ಬಂತು. ಪಕ್ಷಕ್ಕೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ, ಯಾರು ದೇಣಿಗೆ ನೀಡುತ್ತಿದ್ದಾರೆ?
ಈಗ, ಯಾವುದೇ ಪತ್ರಕರ್ತ ಇದರ ಬಗ್ಗೆ ತನಿಖೆ ನಡೆಸಿದರೆ, ನಿಧಿಯ ಬಗ್ಗೆ ತಿಳಿದುಕೊಂಡರೆ, ಹಣವನ್ನು ಯಾರು ನೀಡಿದರು ಎಂದು ಕಂಡುಕೊಂಡರೆ ಮತ್ತು ಕೆಲವು ಹೆಸರುಗಳನ್ನು ಮುದ್ರಿಸಿದರೆ, ಡಿಪಿಡಿಪಿ ಕಾಯ್ದೆಯ ಹೊಸ ನಿಯಮಗಳ ಪ್ರಕಾರ, ಅವರ ಮೇಲೆ ಕೋಟಿಗಟ್ಟಲೆ ರೂ. ದಂಡ ವಿಧಿಸಲಾಗುತ್ತದೆ.
ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು.
ಸರಕಾರ ಜನರಿಂದ ಎಲ್ಲಾ ರೀತಿಯ ಮಾಹಿತಿಯನ್ನು ಸಂಗ್ರಹಿಸಬಹುದು, ತನಿಖೆಯ ಹೆಸರಿನಲ್ಲಿ ನಕಲಿ ಮಾಹಿತಿ ಸಂಗ್ರಹಿಸಬಹುದು. ಆದರೆ ನೀವು ಒಬ್ಬ ನಾಗರಿಕನಾಗಿ ಮಾಹಿತಿಯನ್ನು ಕೇಳಿದರೆ, ಅದು ವೈಯಕ್ತಿಕ ಎಂದು ಹೇಳಿ ನೀಡಲಾಗುವುದಿಲ್ಲ.
ಮಾಹಿತಿ ಹಕ್ಕು ಕಾಯ್ದೆಯನ್ನು 2005ರಲ್ಲಿ ಜಾರಿಗೆ ತರಲಾಯಿತು. 20 ವರ್ಷಗಳಲ್ಲಿ ಈ ಕಾನೂನು ತಮ್ಮ ಜೀವಗಳನ್ನು ಪಣಕ್ಕಿಟ್ಟು ಸರಕಾರದ ಪ್ರತಿಯೊಂದು ಮೂಲೆಯಿಂದಲೂ ಭ್ರಷ್ಟಾಚಾರದ ಗೆದ್ದಲುಗಳನ್ನು ಪತ್ತೆಹಚ್ಚುವ ಆರ್‌ಟಿಐ ಕಾರ್ಯಕರ್ತರನ್ನು ಸೃಷ್ಟಿಸಿದೆ.
ಅದು ಇಲ್ಲದೇ ಹೋದರೆ ಜನರ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಮಾಹಿತಿ ಗಳು ಸಿಗುವುದಿಲ್ಲ ಅಥವಾ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ.
ಹೇಗೆ ಪ್ರಶ್ನೆಗಳನ್ನು ಮುಗಿಸಿಹಾಕಲಾಗುತ್ತಿದೆ ನೋಡಿ.