ಉಪವಾಸಾಂತ್ಯದ ಸಡಗರದ ಹಬ್ಬ ಈದುಲ್ ಫಿತ್ರ್

ಇಸ್ಲಾಮಿನ ಎರಡೂ ಹಬ್ಬಗಳು ಹಸಿವು ಮುಕ್ತವಾದ ದಿನವನ್ನು ಖಾತ್ರಿಪಡಿಸುವ ಮನುಷ್ಯರಿಗೆ ಹಲವು ರೀತಿಯ ಉಪಕಾರಗಳನ್ನು ಉಂಟುಮಾಡುವ ಹಾಗೂ ಯಾರಿಗೂ ಕಿಂಚಿತ್ತೂ ಉಪದ್ರವ ಆಗದಂತೆ ನೋಡಿಕೊಳ್ಳುವ ಹಬ್ಬಗಳಾಗಿವೆೆ. ಇಸ್ಲಾಮಿನ ಹಬ್ಬಾಚರಣೆಯ ಶಿಷ್ಟಾಚಾರಗಳನ್ನು ನೋಡಿದಾಗ ಇದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.ಆದ್ದರಿಂದ ಮುಸ್ಲಿಮರು ಸೇರಿದಂತೆ ಎಲ್ಲರೂ ತಮ್ಮ ಹಬ್ಬಗಳನ್ನು ಮಾನವ ಸ್ನೇಹವನ್ನು ಉದ್ದೀಪಿಸುವ, ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ, ಮುಗ್ಧ ಮಕ್ಕಳ ಮುಖದಲ್ಲಿ ಮಂದಹಾಸವನ್ನು ತರುವ,ಬಡ ಬಗ್ಗರು ಹಿರಿಹಿಗ್ಗುವಂತೆ ಮಾಡುವ,ಸಮಾಜದಲ್ಲಿ ಸಾಂಸ್ಕೃತಿಕ ವಿನಿಮಯದ ಮೂಲಕ ವೈಚಾರಿಕ ಸಿರಿವಂತಿಕೆಯನ್ನು ಬೆಳೆಸುವ ಹಬ್ಬಗಳನ್ನಾಗಿ ಮಾಡುವುದು ಇಂದಿನ ಸಮಾಜದ ದೊಡ್ಡ ಅವಶ್ಯಕತೆಯಾಗಿದೆ.;

Update: 2025-03-30 10:56 IST
ಉಪವಾಸಾಂತ್ಯದ ಸಡಗರದ ಹಬ್ಬ ಈದುಲ್ ಫಿತ್ರ್
  • whatsapp icon

ರಮಝಾನ್ ತಿಂಗಳ ಅಂತ್ಯಕ್ಕೆ ಬರುವ ಹಬ್ಬವೇ ಈದುಲ್ ಫಿತ್ರ್ ಅಥವಾ ಉಪವಾಸ ತೊರೆಯುವ ಹಬ್ಬ. ಇಸ್ಲಾಮಿನಲ್ಲಿ ಮೂಲಭೂತವಾಗಿ ಎರಡೇ ಹಬ್ಬಗಳಿವೆ. ಒಂದು ರಮಝಾನ್ ತಿಂಗಳ ಕೊನೆಯಲ್ಲಿ ಬರುವ ಈದುಲ್ ಫಿತ್ರ್ ಅಥವಾ ಉಪವಾಸ ತೊರೆಯುವ ಹಬ್ಬ. ಇನ್ನೊಂದು ಈ ಹಬ್ಬದ ಎರಡು ತಿಂಗಳು ಕಳೆದು ಹತ್ತನೇ ದಿನದಂದು ಬರುವ ಈದುಲ್ ಅಝ್‌ಹಾ ಅಥವಾ ತ್ಯಾಗ ಬಲಿದಾನಗಳ ಸ್ಫೂರ್ತಿಯನ್ನು ಬೆಳೆಸುವ ಹಬ್ಬ.

ಈದುಲ್ ಫಿತ್ರ್ ಯಾಕೆ?

ಪ್ರವಾದಿ ಮುಹಮ್ಮದ್ (ಸ)ರು ಹೇಳಿದರು ‘‘ಉಪವಾಸಿಗನಿಗೆ ಸಂತೋಷದ ಎರಡು ಸಂದರ್ಭಗಳಿವೆ.ಒಂದು,ಉಪವಾಸ ತೊರೆಯುವಾಗ ಆಗುವ ಸಂತೋಷ. ಮತ್ತೊಂದು ಪರಲೋಕ ಜೀವನದಲ್ಲಿ ತನ್ನ ಪ್ರಭುವನ್ನು ಭೇಟಿಯಾಗುವ ವೇಳೆ ಸಿಗುವ ಸಂತೋಷ’’.(ಬುಖಾರಿ,ಮುಸ್ಲಿಮ್)

ಇದು ಬಹಳ ವಿಶಾಲಾರ್ಥ ಉಳ್ಳಂತಹ ಪ್ರವಾದಿ ವಚನವಾಗಿದೆ. ಇಲ್ಲಿ ಉಪವಾಸ ತೊರೆಯುವಾಗ ಸಿಗುವ ಸಂತೋಷವೆಂದರೆ ರಮಝಾನ್ ತಿಂಗಳ ಉಪವಾಸ ಮುಗಿಸಿ ಹಬ್ಬದ ದಿನದಂದು ಆಚರಿಸುವ ಸಂತೋಷ ಎಂಬ ಅರ್ಥದಲ್ಲೂ ಇದನ್ನು ಹೇಳಲಾಗಿದೆ.

ರಮಝಾನ್ ತಿಂಗಳಲ್ಲಿ ಮುಸ್ಲಿಮರೆಲ್ಲರೂ ಹಲವು ಸತ್ಕರ್ಮಗಳನ್ನು ಮಾಡುತ್ತಾರೆ. ಕೆಟ್ಟ ಕೆಲಸಗಳಿಂದ ದೂರ ಉಳಿಯಲು ಪ್ರಯತ್ನ ಮಾಡುತ್ತಾರೆ. ಹೆಚ್ಚೆಚ್ಚು ದಾನ ಧರ್ಮಗಳನ್ನು ಮಾಡುತ್ತಾರೆ. ಮುಸ್ಲಿಮರ ಪಾಲಿಗೆ ಕಡ್ಡಾಯವಾಗಿರುವ ‘ಝಕಾತ್’ ಎಂಬ ಕಡ್ಡಾಯ ದಾನವನ್ನೂ ಅನೇಕ ಮುಸ್ಲಿಮರು ಈ ತಿಂಗಳಲ್ಲೇ ಕೊಡಲು ಪ್ರಯತ್ನಿಸುತ್ತಾರೆ.

ಯಾವುದೇ ವ್ಯಕ್ತಿ ಹಸಿದು ಬಳಲಿ ಬೆಂಡಾದಾಗ ಇತರರ ಸಂಕಷ್ಟಗಳನ್ನು, ಹಸಿವೆಯ ಕಿಚ್ಚನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ.ರಮಝಾನ್ ತಿಂಗಳು ಕೊನೆಗೊಂಡಾಗ ನಾನು ಮೊದಲಿಗಿಂತ ಹೆಚ್ಚು ದೇವಶ್ರದ್ಧೆ ಬೆಳೆಸಿಕೊಂಡಿದ್ದೇನೆ, ಅನೇಕ ಸತ್ಕರ್ಮಗಳನ್ನು ಮಾಡಿದ್ದೇನೆ, ಕೆಡುಕುಗಳಿಂದ ದೂರ ಸಾಗಿದ್ದೇನೆ, ಜನರ ಅವಶ್ಯಕತೆಗಳನ್ನು ಈಡೇರಿಸಲು ಶ್ರಮಿಸಿದ್ದೇನೆ,ಆತ್ಮ ಸಂಸ್ಕರಣೆ ಮಾಡಿಕೊಂಡಿದ್ದೇನೆ ಎಂಬ ಕೃತಾರ್ಥ ಭಾವನೆ ಮೂಡುವುದು ಸಹಜ. ಈ ಕೃತಾರ್ಥ ಭಾವನೆಯ ಪ್ರಕಟನೆಯೇ ಈದುಲ್ ಫಿತ್ರ್ ಅಥವಾ ಉಪವಾಸಾಂತ್ಯದ ಹಬ್ಬ.

‘‘ತನ್ನ ಒಳಿತುಗಳಿಂದ ಸಂತುಷ್ಟನಾಗಿ ಕೆಡುಕುಗಳ ಬಗ್ಗೆ ಅಸಮಾಧಾನ ತೋರುವುದೇ ಸತ್ಯವಿಶ್ವಾಸಿಯ ಲಕ್ಷಣ’’ ಎಂದು ಪ್ರವಾದಿವರ್ಯರು (ಸ)ಹೇಳಿದ್ದಾರೆ. ಈ ಅರ್ಥದಲ್ಲ್ಲೂ ‘ಈದುಲ್ ಫಿತ್ರ್’ ತಾನು ಗಳಿಸಿಕೊಂಡ ಒಳಿತುಗಳಿಗಾಗಿ ಸಂತೋಷ ಪಡುವಂತಹ ಅರ್ಥಪೂರ್ಣ ಹಬ್ಬವಾಗಿದೆ.

ರಮಝಾನ್ ತಿಂಗಳು ಕುರ್‌ಆನ್ ಅವತೀರ್ಣವಾದ ತಿಂಗಳಾಗಿದೆ.ಮುಸ್ಲಿಮರು ರಮಝಾನ್ ತಿಂಗಳಲ್ಲಿ ಸಂಪೂರ್ಣ ಕುರ್‌ಆನ್ ಓದಿ ಮುಗಿಸಲು ಪ್ರಯತ್ನಿಸುತ್ತಾರೆ. ಮಸೀದಿಗಳಲ್ಲಿ ರಮಝಾನ್ ತಿಂಗಳಲ್ಲಿ ಮಾಡಲಾಗುವ ‘ತರಾವೀಹ್’ ಎಂಬ ವಿಶೇಷ ನಮಾಝಿನಲ್ಲಿ ಕುರ್‌ಆನನ್ನು ಕಂಠಪಾಠ ಮಾಡಿರುವ ‘ಹಾಫಿಝ್’ಗಳ ಮೂಲಕ ಸಂಪೂರ್ಣ ಕುರ್‌ಆನನ್ನು ಸುಶ್ರಾವ್ಯವಾಗಿ ಓದಿ ಕೇಳಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಕುರ್‌ಆನ್ ಮಾನವರ ಮಾರ್ಗದರ್ಶಿ ಮತ್ತು ಸಂರಕ್ಷಿತವಾಗುಳಿದಿರುವ ದೈವಿಕ ಗ್ರಂಥ ಎಂದು ತನ್ನನ್ನು ಪರಿಚಯಿಸುತ್ತದೆ. ಆದ್ದರಿಂದ ಕುರ್‌ಆನ್‌ನೊಂದಿಗೆ ಸಂಬಂಧವನ್ನು ಪುನರುಜ್ಜೀವನ ಗೊಳಿಸುವ ಅವಕಾಶವೂ ಸಂತೋಷಪಡಬೇಕಾದ ಸಂದರ್ಭವಾಗಿದೆ. ‘‘ಈ ಪವಿತ್ರ ಕುರ್‌ಆನ್ ಅಲ್ಲಾಹನ ಅಪಾರವಾದ ಔದಾರ್ಯ ಮತ್ತು ಅನುಗ್ರಹದ ಮೂಲಕ ನಿಮಗೆ ಬಂದು ತಲುಪಿದೆ. ಇದಕ್ಕಾಗಿ ಜನರು ಸಂತೋಷಾಚರಣೆ ಮಾಡಲಿ. ಅವರು ಸಂಗ್ರಹಿಸುವ ಎಲ್ಲ ವಸ್ತುಗಳಿಗಿಂತ ಇದುವೇ ಉತ್ತಮವಾದುದಾಗಿದೆ’’. (10:58) ಎಂದು ಕುರ್‌ಆನ್ ಹೇಳುತ್ತದೆ. ಕುರ್‌ಆನ್ ಸುರಕ್ಷಿತವಾಗುಳಿದಿರುವ, ಬದಲಾವಣೆಗೆ ಈಡಾಗದ ಏಕೈಕ ದೈವಿಕ ಗ್ರಂಥವಾಗಿದೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಆದ್ದರಿಂದ ಕುರ್‌ಆನ್‌ನೊಂದಿಗೆ ಸಂಬಂಧವನ್ನು ಬೆಳೆಸುವ ತಿಂಗಳನ್ನು ಪಡೆದ ಧನ್ಯತಾ ಮನೋಭಾವವೂ ಈದುಲ್ ಫಿತ್ರ್‌ನ ಸಂತೋಷದ ಭಾಗವಾಗಿದೆ.

ಝಕಾತ್ ಅಲ್ ಫಿತ್ರ್ ಅಥವಾ ಹಬ್ಬದ ದಿನ ಮಾಡಬೇಕಾದ ಕಡ್ಡಾಯ ದಾನ

ಈದುಲ್ ಫಿತ್ರ್‌ನಂದು ಕಡ್ಡಾಯವಾಗಿ ಮಾಡಬೇಕಾದ ಕರ್ಮಗಳಲ್ಲಿ ‘ಝಕಾತ್ ಫಿತ್ರ್’ ಎಂಬ ದಾನವೂ ಒಂದಾಗಿದೆ. ಹಬ್ಬದ ನಮಾಝಿಗೆ ಹೋಗುವ ಮೊದಲು ಆ ದಿನದ ಮೂಲಭೂತ ಖರ್ಚಿಗೆ ಬೇಕಾದಷ್ಟು ಸ್ಥಿತಿವಂತಿಕೆ ಇರುವ ಪ್ರತಿಯೊಬ್ಬ ಮುಸ್ಲಿಮ್ ಮನೆಯೊಡೆಯ ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯನ ಪರವಾಗಿ ಈ ದಾನವನ್ನು ಮಾಡಬೇಕಾಗಿದೆ. ಮನೆಯಲ್ಲಿರುವ ಸಣ್ಣ ಮಗು ಸೇರಿದಂತೆ ಪ್ರತಿಯೊಬ್ಬ ಸದಸ್ಯನ ಪರವಾಗಿ ಎರಡೂವರೆ-ಮೂರು ಕಿಲೋ ಧಾನ್ಯ ಅಥವಾ ಅದಕ್ಕೆ ತುಲ್ಯವಾದ ಮೊತ್ತವನ್ನು ದಾನಮಾಡಬೇಕಾಗಿದೆ. ವಾಸಿಸುವ ಪ್ರದೇಶ ಮತ್ತು ಪರಿಗಣಿಸುವ ಧಾನ್ಯದ ಮೊತ್ತಕ್ಕೆ ಅನುಗುಣವಾಗಿ ಈ ಮೊತ್ತದಲ್ಲಿ ವ್ಯತ್ಯಾಸ ಸಂಭವಿಸುತ್ತದೆ. ಎರಡೂವರೆ-ಮೂರು ಕಿಲೋ ಅಕ್ಕಿಯ ಮೊತ್ತ ಸುಮಾರು 200 ರೂಪಾಯಿ ಆದರೆ ಅದೇ ತೂಕದ ಖರ್ಜೂರದ ಬೆಲೆ ಸುಮಾರು 1,000 ರೂಪಾಯಿಯಾಗುತ್ತದೆ. ಗರಿಷ್ಠ ಎಷ್ಟು ಬೇಕಾದರೂ ಕೊಡಬಹುದು . ಆದರೆ ಕನಿಷ್ಠ ಮೌಲ್ಯಕ್ಕಿಂತ ಕಡಿಮೆಯಾಗದಂತೆ ಎಚ್ಚರ ವಹಿಸಬೇಕಾಗಿದೆ.

ಇಂದು ಜಗತ್ತಿನಾದ್ಯಂತ ಮುಂಗಡವಾಗಿ ‘ಫಿತ್ರ್ ಝಕಾತ್’ನ್ನು ಸಂಗ್ರಹಿಸಿ ನೈಜ ಅಪೇಕ್ಷಿತರನ್ನು ಗುರುತಿಸಿ ಅವರಿಗೆ ತಲುಪಿಸುವಂತಹ ವ್ಯವಸ್ಥೆ ಮಾಡುವ ಅನೇಕ ಸಂಘ ಸಂಸ್ಥೆಗಳು ಎಲ್ಲಾ ಕಡೆಗಳಲ್ಲಿವೆ. ಆದ್ದರಿಂದ ಫಿತ್ರ್ ಝಕಾತನ್ನು ವಿತರಿಸುವ ಕಾರ್ಯ ಇಂದಿನ ಕಾಲದಲ್ಲಿ ಬಹಳ ಸುಲಭವಾಗಿದೆ. ಇದನ್ನು ಅದರ ನೈಜ ಸ್ಫೂರ್ತಿಯೊಂದಿಗೆ ಸಂಗ್ರಹಿಸಿ ವಿತರಿಸುವ ವ್ಯವಸ್ಥೆಯಾದರೆ ಜಗತ್ತಿನ ಯಾವ ಮೂಲೆಯಲ್ಲೂ ಯಾವ ಬಡಕುಟುಂಬಗಳೂ ಹಬ್ಬಾಚರಣೆಯಿಂದ ಮತ್ತು ವಿಶೇಷವಾಗಿ ಹಬ್ಬದೂಟದಿಂದ ವಂಚಿತವಾಗಿರಲು ಸಾಧ್ಯವೇ ಇಲ್ಲ.

ಭಾರತದಲ್ಲಿ ಹಬ್ಬದ ದಿನದಂದು ಅಥವಾ ಮುಂಗಡವಾಗಿ ಸಹಸ್ರಾರು ಕೋಟಿ ರೂಪಾಯಿಗಳ ಮೊತ್ತ ಶೇಖರಣೆಯಾಗಿ ಅತ್ಯಂತ ಅಪೇಕ್ಷಿತರಾದ ಬಡಬಗ್ಗರಿಗೆ ವಿತರಣೆಯಾಗುತ್ತದೆ. ಕಡು ಬಡವರಿಲ್ಲದ ಕೊಲ್ಲಿ ರಾಷ್ಟ್ರಗಳಂತಹ ಸಿರಿವಂತ ದೇಶಗಳಲ್ಲಿ ಫಿತ್ರ್ ಝಕಾತ್‌ನ ಮೊತ್ತವನ್ನು ಸಂಗ್ರಹಿಸಿ ಭಾರತ ಉಪಖಂಡ, ಆಫ್ರಿಕಾ ಮುಂತಾದ ದೇಶಗಳ ಬಡಬಗ್ಗರಿಗೆ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟಿನಲ್ಲಿ ‘ಫಿತ್ರ್ ಝಕಾತ್’ ಎಂಬ ಕಡ್ಡಾಯ ದಾನ ಅತೀವ ಬಡತನದಲ್ಲಿರುವ ಕುಟುಂಬಗಳಿಗೆ ನೆರವಾಗಿ ಅವರ ಮಕ್ಕಳಲ್ಲೂ ಹಬ್ಬದ ಮಂದಹಾಸ ಬೀರುವಂತೆ ಮಾಡುತ್ತದೆ.

ಫಿತ್ರ್ ಝಕಾತ್ ಸತ್ಯವಿಶ್ವಾಸಿಗೆ ರಮಝಾನ್‌ನಲ್ಲಿ ಸಂಭವಿಸಿರಬಹುದಾದ ದುಷ್ಕೃತ್ಯ ಮತ್ತು ಕೆಟ್ಟ ಮಾತುಗಳನ್ನು ಶುದ್ಧೀಕರಿಸುತ್ತದೆ ಎಂದು ಪ್ರವಾದಿವರ್ಯರು (ಸ) ಹೇಳಿದ್ದಾರೆ. ಈ ಮೂಲಕ ರಮಝಾನ್‌ನಲ್ಲೂ ವ್ಯಕ್ತಿಯಿಂದ ಏನಾದರೂ ಕುಂದುಕೊರತೆ ಸಂಭವಿಸಿದ್ದರೆ ಶುದ್ಧೀಕರಣ ಮತ್ತು ಕ್ಷಮೆಯ ಮತ್ತೊಂದು ಅವಕಾಶವನ್ನು ಕಲ್ಪಿಸಲಾಗಿದೆ. ‘ನಾನು ಪಾಪ ವಿಮೋಚಿತನಾಗಿದ್ದೇನೆ’ ಎಂಬ ಕೃತಾರ್ಥ ಭಾವನೆ ಮತ್ತು ದೇವನ ದೃಷ್ಟಿಯಲ್ಲಿ ಓರ್ವ ಸದ್‌ವ್ಯಕ್ತಿಯಾಗಿದ್ದೇನೆ ಎಂಬ ಆಶಾ ಭಾವನೆ ಮನಸ್ಸಿನಲ್ಲಿ ಹೊಸ ಹುರುಪನ್ನು ತುಂಬುತ್ತದೆ. ಇದು ಕೂಡ ಮನಸ್ಸಿನ ಶಾಂತಿ ಮತ್ತು ಆತ್ಮ ಸಮಾಧಾನ ದಯಪಾಲಿಸುವ ಮೂಲಕ ವ್ಯಾಪಕವಾಗಿ ಸಂತೋಷವನ್ನು ಹರಡುವ ಸಾಧನವಾಗಿದೆ.

ಮನಃಶಾಸ್ತ್ರದಲ್ಲಿ ಇಂತಹ ಆತ್ಮ ಸಮಾಧಾನಕ್ಕೆ ಬಹಳ ಮಹತ್ವ ಕಲ್ಪಿಸಲಾಗಿದೆ. ಅದು ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.

ಬಹುರೂಪಿ ಸಮಾಜ ಮತ್ತು ಹಬ್ಬಗಳು

ಭಾರತದಂತಹ ಬಹುರೂಪಿ ಸಮಾಜದಲ್ಲಿ ಹಬ್ಬಗಳು ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸಾಂಸ್ಕೃತಿಕ ವಿನಿಮಯದ ದೊಡ್ಡ ಅವಕಾಶವನ್ನು ಕಲ್ಪಿಸುತ್ತದೆ. ಮಕ್ಕಳಿಗೂ ಪರಸ್ಪರ ಸಂಸ್ಕೃತಿಗಳನ್ನು ಅರಿಯಲು ಅವಕಾಶ ಕಲ್ಪಿಸುತ್ತ್ತದೆ.ಆದರೆ ದ್ವೇಷ ರಾಜಕಾರಣ ಮತ್ತು ಧರ್ಮಾಧಾರಿತ ರಾಜಕಾರಣ ಸಕ್ರಿಯಗೊಂಡಿರುವ ಈ ಕಾಲದಲ್ಲಿ ಹಬ್ಬಗಳನ್ನು ಸ್ವಾರ್ಥಹಿತಾಸಕ್ತಿಗೆ ಬಳಸಲಾಗುತ್ತಿರುವುದು ಅತ್ಯಂತ ದುರದೃಷ್ಟಕರ. ನಮ್ಮ ಹಬ್ಬದಂದು ನೀವು ಹೊರಗೆ ಬರಬೇಡಿ ಅಥವಾ ನಿಮ್ಮ ಆರಾಧನಾಲಯಗಳನ್ನು ಮುಚ್ಚಿಕೊಳ್ಳಿ ಎನ್ನುವಂತಹ ಸಂದೇಶ, ಭಾರತದ ಶತಮಾನಗಳ ಇತಿಹಾಸದಲ್ಲಿ ನಮಗೆ ಕಂಡು ಬರುವುದಿಲ್ಲ. ವಿವಿಧ ಧರ್ಮಾನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿ ಬದುಕುತ್ತಿರುವ ಭಾರತದಲ್ಲಿ ಒಂದು ಧರ್ಮದ ಅನುಯಾಯಿಗಳ ಹಬ್ಬ, ಇನ್ನೊಂದು ಧರ್ಮದ ಅನುಯಾಯಿಗಳಲ್ಲಿ ಆತಂಕ ಮೂಡಿಸುವಂತಹ ಚರಿತ್ರೆ ಕಂಡುಬರುವುದಿಲ್ಲ. ಆದರೆ ರಾಜಕೀಯ ಹಿತಾಸಕ್ತಿಯಿಂದ ಇತ್ತೀಚಿನ ದಿನಗಳಲ್ಲಿ ಹಬ್ಬಗಳಿಗೂ ಕೋಮುವಾದದ ಮಸಿ ಬಳಿಯಲು ಪ್ರಯತ್ನಿಸಲಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ಹಬ್ಬದ ದಿನದಂದು ಅಂತರ್‌ಧರ್ಮೀಯ ಸಂಬಂಧ ಮತ್ತು ಸೌಹಾರ್ದದ ವಾತಾವರಣವನ್ನು ಕಾಪಾಡಿ ಸಂತೋಷದ ನೈಜ ಸಂದೇಶವನ್ನು ಕೊಡಬೇಕಾದುದು ಕೂಡ ಇಂದಿನ ಅವಶ್ಯಕತೆಯಾಗಿದೆ.

ಇಸ್ಲಾಮಿನ ಎರಡೂ ಹಬ್ಬಗಳು ಹಸಿವು ಮುಕ್ತವಾದ ದಿನವನ್ನು ಖಾತ್ರಿಪಡಿಸುವ ಮನುಷ್ಯರಿಗೆ ಹಲವು ರೀತಿಯ ಉಪಕಾರಗಳನ್ನು ಉಂಟುಮಾಡುವ ಹಾಗೂ ಯಾರಿಗೂ ಕಿಂಚಿತ್ತೂ ಉಪದ್ರವ ಆಗದಂತೆ ನೋಡಿಕೊಳ್ಳುವ ಹಬ್ಬಗಳಾಗಿವೆೆ. ಇಸ್ಲಾಮಿನ ಹಬ್ಬಾಚರಣೆಯ ಶಿಷ್ಟಾಚಾರಗಳನ್ನು ನೋಡಿದಾಗ ಇದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.ಆದ್ದರಿಂದ ಮುಸ್ಲಿಮರು ಸೇರಿದಂತೆ ಎಲ್ಲರೂ ತಮ್ಮ ಹಬ್ಬಗಳನ್ನು ಮಾನವ ಸ್ನೇಹವನ್ನು ಉದ್ದೀಪಿಸುವ,

ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ, ಮುಗ್ಧ ಮಕ್ಕಳ ಮುಖದಲ್ಲಿ ಮಂದಹಾಸವನ್ನು ತರುವ,ಬಡ ಬಗ್ಗರು ಹಿರಿಹಿಗ್ಗುವಂತೆ ಮಾಡುವ,ಸಮಾಜದಲ್ಲಿ ಸಾಂಸ್ಕೃತಿಕ ವಿನಿಮಯದ ಮೂಲಕ ವೈಚಾರಿಕ ಸಿರಿವಂತಿಕೆಯನ್ನು ಬೆಳೆಸುವ ಹಬ್ಬಗಳನ್ನಾಗಿ ಮಾಡುವುದು ಇಂದಿನ ಸಮಾಜದ ದೊಡ್ಡ ಅವಶ್ಯಕತೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ.ಎಸ್.ಶರ್ಫುದ್ದೀನ್

contributor

Similar News