ಪ್ರಗತಿಯತ್ತ ಕಲ್ಯಾಣ ಕರ್ನಾಟಕದ ಮತ್ತೊಂದು ಹೆಜ್ಜೆ
ಐದು ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ನಮ್ಮ ಸರಕಾರ ನೀಡುತ್ತಿರುವ ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ; ಬದಲಿಗೆ ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂಬುದು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಸಲದ ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಅಭಿವೃದ್ಧಿ ಕೇಂದ್ರಿತ, ನಗರಾಭಿವೃದ್ಧಿ, ಹೂಡಿಕೆ ಮತ್ತು ಉದ್ಯೋಗ ಸೃಜನೆ ಹಾಗೂ ಆಡಳಿತ ಸುಧಾರಣೆ ಎಂಬ ಆರು ಆಯಾಮಗಳನ್ನು ಪ್ರಮುಖವಾಗಿಸಿಕೊಳ್ಳಲಾಗಿದೆ. ಆರರಲ್ಲೂ ಕಲ್ಯಾಣ ಕರ್ನಾಟಕಕ್ಕೆ ಪ್ರಾಮುಖ್ಯತೆ ದೊರೆತಿದೆ. ಜೊತೆಗೆ ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.;

ಆಯವ್ಯಯ ಎನ್ನುವುದು ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂಬ ಅರಿವಿನೊಂದಿಗೆ ನಮ್ಮ ಸಂಕಲ್ಪಗಳನ್ನು ನಾಡಿನ ಜನಕೋಟಿಯ ಮುಂದಿರಿಸುವ ಬಹುದೊಡ್ಡ ಹೊಣೆಗಾರಿಕೆಯೊಂದಿಗೆ ನಿಂತಿದ್ದೇನೆ ಎಂದು ಮುಖ್ಯಮಂತ್ರಿಗಳು ಬಜೆಟ್ ಭಾಷಣ ಆರಂಭಿಸಿದರು. ಅದೇ ರೀತಿ ರಾಜ್ಯದ ಪ್ರತೀ ಪ್ರಜೆಯ ಕನಸನ್ನು ಸಾಕಾರಗೊಳಿಸುವಂತಹ ಬಜೆಟ್ ಮಂಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಬಗ್ಗೆಯೂ ಇದೇ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ನುಡಿದಂತೆ ನಡೆಯುವ ಸರಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ನಮ್ಮ ಸರಕಾರ ನೀಡುತ್ತಿರುವ ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ; ಬದಲಿಗೆ ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂಬುದು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಸಲದ ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಅಭಿವೃದ್ಧಿ ಕೇಂದ್ರಿತ, ನಗರಾಭಿವೃದ್ಧಿ, ಹೂಡಿಕೆ ಮತ್ತು ಉದ್ಯೋಗ ಸೃಜನೆ ಹಾಗೂ ಆಡಳಿತ ಸುಧಾರಣೆ ಎಂಬ ಆರು ಆಯಾಮಗಳನ್ನು ಪ್ರಮುಖವಾಗಿಸಿಕೊಳ್ಳಲಾಗಿದೆ. ಆರರಲ್ಲೂ ಕಲ್ಯಾಣ ಕರ್ನಾಟಕಕ್ಕೆ ಪ್ರಾಮುಖ್ಯತೆ ದೊರೆತಿದೆ. ಜೊತೆಗೆ ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲು 200 ಕೋಟಿ ರೂ. ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಘೋಷಿಸಲಾಗಿದೆ. ಕೆಕೆಆರ್ ಡಿಬಿ ವತಿಯಿಂದ 23,000 ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 10 ಕೋಟಿ ರೂ. ನೀಡಲಾಗಿದೆ.
ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆ ಅಳವಡಿಕೆ, ಕ್ಷೇತ್ರ ವಿಸ್ತರಣೆಗಾಗಿ 88 ಕೋಟಿ ರೂ. ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ 138 ಕೋಟಿ ರೂ. ನೀಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಪ್ರಥಮ ಹಂತದಲ್ಲಿ 10 ಕೋಟಿ ರೂ. ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಸಹಯೋಗದಿಂದ ಈ ಭಾಗದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಉಗ್ರಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಕೆಕೆಆರ್‌ಡಿಬಿ ವತಿಯಿಂದ ಕಲಬುರಗಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ, 10 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನ, ನಿಮ್ಹಾನ್ಸ್ ಮಾದರಿಯ ಸಂಸ್ಥೆ, ಜೇವರ್ಗಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜು, ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಸೇಡಂನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಐಟಿಐ ಉನ್ನತೀಕರಣ ಮಾಡಲಾಗುತ್ತಿದೆ. ಬೀದರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಪತ್ತೆ ವಿಭಾಗ ಮತ್ತು ಬೀದರ್ ಜಿಲ್ಲೆಯಲ್ಲಿ ಲಂಬಾಣಿ ಜನಾಂಗದ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ.
ಕೆಕೆಆರ್‌ಡಿಬಿ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೂದುಗುಂಪ ಗ್ರಾಮದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆ, ಕುಕನೂರು, ಕಾರಟಗಿಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಲಾಗಿದೆ. ಅಲ್ಲದೆ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನಿಂದಾಗಿ ನೀರಿನ ಸಂಗ್ರಹಣೆಯಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸಲು ಕೊಪ್ಪಳ ಜಿಲ್ಲೆಯಲ್ಲಿ ನವಲಿ ಸಮತೋಲನಾ ಜಲಾಶಯ ನಿರ್ಮಾಣ ಮಾಡುವ ಬಗ್ಗೆ ತಿಳಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕೆಕೆಆರ್‌ಡಿಬಿ ವತಿಯಿಂದ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡಲಾಗುತ್ತಿದೆ.
ರಾಯಚೂರು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪೆರಿಫರೆಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ ಜಿಟಿಟಿಸಿ ನಿರ್ಮಿಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯನ್ನು ಪ್ರೌಢ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹೀಗೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ಮೇರೆಗೆ ಘೋಷಣೆ ಮಾಡಲಾಗಿದೆ ಮತ್ತು ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
2024-2025ರ ಬಜೆಟ್‌ನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕಂಕಣ ತೊಟ್ಟು ನಿಂತಿತ್ತು. ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯಲು ದೃಢಸಂಕಲ್ಪ ಮಾಡಿತ್ತು. ಆರ್ಟಿಕಲ್ 371(ಎ) ತಿದ್ದುಪಡಿಯಾಗಿ 10 ವರ್ಷಗಳಾಗಿ ದಶಮಾನೋತ್ಸವ ಆಚರಿಸುತ್ತಿರುವ ಹೊತ್ತಿಗೆ ಹೊಸ ದಿಕ್ಕು ತೋರುವ ದೂರದೃಷ್ಟಿಯನ್ನು ಹೊಂದಿತ್ತು. ಅದಕ್ಕಾಗಿ 5,000 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.
ಕರ್ನಾಟಕ ಸರಕಾರದ ಆಶಯಕ್ಕೆ ತಕ್ಕಂತೆ ಬರಪೀಡಿತ ಕಲ್ಯಾಣ ಕರ್ನಾಟಕದ ಭಾಗವನ್ನು ಸಮೃದ್ಧಿಭರಿತ ಕಲ್ಯಾಣ ಕರ್ನಾಟಕವನ್ನಾಗಿ ಮಾಡುವುದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಆದ್ಯ ಕರ್ತವ್ಯ. ಇದೇ ಹಿನ್ನೆಲೆಯಲ್ಲಿ ಮಂಡಳಿಯು ‘ಕೃಷಿ ಆವಿಷ್ಕಾರ’ಕ್ಕೆ ಮುಂದಾಗಿದೆ. ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆಯ ಸಚಿವ ಎನ್.ಎಸ್. ಬೋಸರಾಜು ಅವರ ಸಹಕಾರದಿಂದ ಜಲಭಾಗ್ಯ ಯೋಜನೆಯಡಿ ಈ ಭಾಗದ ತಾಲೂಕುಗಳಲ್ಲಿ ಜಲಸಂವರ್ಧನೆಗಾಗಿ ಇದೇ ಮೊದಲ ಬಾರಿಗೆ 100 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂಗಳು ಬ್ರಿಡ್ಜ್ ಕಮ್ ಬ್ಯಾರೇಜ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಅಂತರ್ಜಲ ವೃದ್ಧಿಗೆ ಅನುವು ಮಾಡಿಕೊಡಲಾಗಿದೆ. ಸಹಜವಾಗಿ ಇದರಿಂದ ಬರದ ನಾಡಿನಲ್ಲಿ ಬೇಸಾಯ ಮಾಡಲು ರೈತರಿಗೆ ಅನುಕೂಲವಾಗುತ್ತಿದೆ.
ಇದೇ ರೀತಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ಕಲ್ಯಾಣ ಕರ್ನಾಟಕದ ಸಮರ್ಪಕ ರಸ್ತೆ ಸಂಪರ್ಕ ವ್ಯವಸ್ಥೆಗಾಗಿ ಕಲ್ಯಾಣ ಪಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಲ್ಯಾಣ ಪಥ ಕಾರ್ಯಕ್ರಮದ ಮೂಲಕ 38 ವಿಧಾನಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 1,000 ಕೋಟಿ ರೂ. ವೆಚ್ಚದಲ್ಲಿ ಪರಿಣಾಮಕಾರಿ ರಸ್ತೆ ಸಂಪರ್ಕ ಹಾಗೂ ಜನಸ್ನೇಹಿ ಸಾರಿಗೆ ಸೌಕರ್ಯಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸಹಕಾರದೊಂದಿಗೆ ಈ ಭಾಗದ ಬಸ್ ನಿಲ್ದಾಣಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಸುಗಮ ಸಾರಿಗೆ ವ್ಯವಸ್ಥೆಗಾಗಿ 224 ಹೊಸ ಬಸ್‌ಗಳ ಖರೀದಿಗೆ 90 ಕೋಟಿ ರೂ.ಗಳನ್ನು ನೀಡಿದೆ. ಕಳೆದ ವರ್ಷ ಸೆಪ್ಟಂಬರ್ 17ರಂದು ಅಂದರೆ ಕಲ್ಯಾಣ ಕರ್ನಾಟಕ ಉತ್ಸವದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಸಹಕಾರದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಆಡಳಿತ ವ್ಯವಸ್ಥೆಯ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ತಾಲೂಕು ಆಡಳಿತ ಸೌಧ ಮತ್ತು ಮಿನಿ ವಿಧಾನಸೌಧಗಳ ನಿರ್ಮಾಣ ಮಾಡುತ್ತಿದೆ. ಇದಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಭವನಗಳು, ಕ್ರೀಡಾಂಗಣಗಳು, ಅಗ್ನಿಶಾಮಕ ಕಚೇರಿಗಳ ನಿರ್ಮಾಣ ಮತ್ತು ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹಕಾರದೊಂದಿಗೆ ‘ಆರೋಗ್ಯ ಆವಿಷ್ಕಾರ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದಕ್ಕಾಗಿ 300 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ, ಆಂಬುಲೆನ್ಸ್ ಸೇವೆಗೆ ಹೆಚ್ಚಿನ ಒತ್ತುಕೊಡಲಾಗಿದೆ. ಇದೇ ಮಾದರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಸಹಕಾರದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ಜನರ ಹೃದಯ ಸಂಬಂಧಿ ತೊಂದರೆಗಳಿಗೆ ತ್ವರಿತ ಸ್ಪಂದನೆ ಸಿಗಬೇಕು ಎಂದು ಕಲಬುರಗಿಯಲ್ಲಿ 222 ಕೋಟಿ ರೂ. ವೆಚ್ಚದಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ಮಿಸಲಾಗುತ್ತಿದೆ.
ಶಿಕ್ಷಣದಲ್ಲೂ ಕಲ್ಯಾಣ ಕರ್ನಾಟಕ ಸುಧಾರಣೆಯನ್ನು ಸಾಧಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ‘ಅಕ್ಷರ ಆವಿಷ್ಕಾರ’ ಎಂಬ ಅಪರೂಪದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ರಾಜ್ಯ ಸರಕಾರ ನೀಡಿರುವ 5,000 ಕೋಟಿ ರೂ. ಅನುದಾನದಲ್ಲಿ ಶೇ. 25ರಷ್ಟನ್ನು ಅಂದರೆ 1,250 ಕೋಟಿ ರೂ.ಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತಿದೆ. ಸುಸಜ್ಜಿತ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಲು ‘ಅಕ್ಷರ ಮಿತ್ರ’ ಎಂಬ ಯೋಜನೆಯನ್ನು ರೂಪಿಸಿ 2,618 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಬಿಸಿಎಂ ಹಾಸ್ಟೆಲ್ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 150 ಕೋಟಿ ರೂ.ಗಳನ್ನೂ ಮೀಸಲಿಟ್ಟಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಸರಕಾರಿ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಅರಿವು ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬಂದಮೇಲೆ ಕಲ್ಯಾಣ ಕರ್ನಾಟಕದ ಪ್ರಗತಿಯ ಕಡೆ ಮತ್ತೊಂದು ಹೆಜ್ಜೆ ಹಾಕಿದಂತಾಗಿದೆ. ಸಾಧಿಸಬೇಕಿರುವುದು, ಸಾಗಬೇಕಿರುವುದು ಸಾಕಷ್ಟಿದೆ ಹೀಗೆ ಒಂದೊಂದೇ ಹೆಜ್ಜೆಯ ಮೂಲಕ. ನೀವೂ ಜೊತೆಗಿದ್ದರೆ ಅದು ಕಷ್ಟವಲ್ಲ.