ಅಮೆರಿಕ ವಿಧಿಸಿರುವ ಪ್ರತಿ ಸುಂಕವನ್ನು ಭಾರತ ತಡೆದುಕೊಳ್ಳಲು ಸಾಧ್ಯವೇ?

ಟ್ರಂಪ್ ನೀತಿ ಬಗ್ಗೆ ಪ್ರತಿಯೊಂದು ದೇಶವೂ ಏನಾದರೂ ಒಂದು ಪ್ರತಿಕ್ರಿಯೆ ಕೊಟ್ಟಿದೆ. ಆದರೆ ಭಾರತದ ಪ್ರಧಾನಿ ಮಾತ್ರ ಏನನ್ನೂ ಹೇಳುತ್ತಿಲ್ಲ, ನಮ್ಮ ಸುತ್ತಲಿನ ಪ್ರಪಂಚ ವೇಗವಾಗಿ ಬದಲಾಗುತ್ತಿದೆ, ಉದ್ಯೋಗಗಳು ಅಪಾಯದಲ್ಲಿವೆ, ಕಂಪೆನಿಗಳ ಅಸ್ತಿತ್ವ ಅಪಾಯದಲ್ಲಿದೆ, ಸಂಬಳ ಹೆಚ್ಚಳವನ್ನು ಬಹಳ ಸಮಯದಿಂದ ನಿಲ್ಲಿಸಲಾಗಿದೆ. ಆದರೆ ಭಾರತ ಆರ್ಥಿಕ ಚಿಂತೆಗಳಿಂದ ಮುಕ್ತವಾಗಿರುವ ಹಾಗೆ ಕಾಣಿಸುತ್ತಿದೆ. ಆದರೆ ದೇಶದ ವಾಸ್ತವ ಪರಿಸ್ಥಿತಿ ಹಾಗಿದೆಯೇ?;

Update: 2025-04-06 10:58 IST
ಅಮೆರಿಕ ವಿಧಿಸಿರುವ ಪ್ರತಿ ಸುಂಕವನ್ನು ಭಾರತ ತಡೆದುಕೊಳ್ಳಲು ಸಾಧ್ಯವೇ?
  • whatsapp icon

ಭಾರತದ ಮೇಲೆ ಅಮೆರಿಕದ ಟ್ರಂಪ್ ಸರಕಾರ ಶೇ. 27 ಸುಂಕ ವಿಧಿಸಲಾಗಿದೆ.

ಇದು ಚೀನಾ ಮತ್ತು ವಿಯೆಟ್ನಾಂ ಮೇಲಿನ ಸುಂಕಕ್ಕಿಂತ ಕಡಿಮೆ ಎಂದುಕೊಳ್ಳಬೇಕೇ ಅಥವಾ ಭಾರತದ ಸಂದರ್ಭದಲ್ಲಿ ಶೇ. 27 ಸುಂಕ ಎಷ್ಟು ದುಬಾರಿಯಾಗುತ್ತದೆ ಎಂದು ನೋಡಬೇಕೇ ಎಂಬುದು ಪ್ರಶ್ನೆ.

ಸುಂಕದ ವಿಷಯ ಅಷ್ಟು ಸರಳವಲ್ಲ ಮತ್ತು ಸುಂಕದ ಕಾರಣದಿಂದಾಗಿಯೇ ದೇಶಗಳ ನಡುವೆ ಪರಸ್ಪರ ಸಂಪರ್ಕ ಇರುತ್ತದೆ.

ಚೀನಾದ ಯಾವುದೇ ಉತ್ಪನ್ನ ಯಾವುದೇ ವಲಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಮತ್ತು ಭಾರತ ಕೂಡ ಅದರ ಮೇಲೆ ಅವಲಂಬಿತವಾಗಿದೆ. ಅದು ಭಾರತದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಾಗುತ್ತದೆ.

ಸುಂಕದ ವಿಷಯದಲ್ಲಿ ಭಾರತ ಬಚಾವಾಗಿದೆ ಅಥವಾ ಚೀನಾಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂಬುದಕ್ಕಿಂತಲೂ ಆಚೆಗೆ ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಟ್ರಂಪ್ ಹಲವು ದೇಶಗಳ ಮೇಲೆ ಸುಂಕ ವಿಧಿಸಿದ್ದಾರೆ. ಹಾಗಾದರೆ ಜಾಗತಿಕ ಮಾರುಕಟ್ಟೆ ಮುಕ್ತ ಮಾರುಕಟ್ಟೆಯಾಗಿಯೇ ಉಳಿದಿದೆಯೇ? 1990ರ ದಶಕದ ಮುಂಚಿನ ಸಮಯಕ್ಕೆ ನಾವು ಹೋಗಿದ್ದೇವೆಯೆ?

ಆಗ ಜಗತ್ತು ರಕ್ಷಣಾ ನೀತಿಯನ್ನು ಅನುಸರಿಸುತ್ತಿತ್ತು ಮತ್ತು ಮಾರುಕಟ್ಟೆ ಮುಕ್ತವಾಗಿರಲಿಲ್ಲ. ಎಲ್ಲಾ ದೇಶಗಳು ತಮ್ಮದೇ ಆದ ಉತ್ಪನ್ನಗಳು ಅಥವಾ ಕಂಪೆನಿಗಳನ್ನು ರಕ್ಷಿಸಿಕೊಳ್ಳಲು ಆಮದಿನ ಮೇಲೆ ಭಾರೀ ತೆರಿಗೆಗಳನ್ನು ವಿಧಿಸಿದ್ದವು.

ಇದೀಗ ಅದರ ಪ್ರಭಾವ ಅಮೆರಿಕದ ಮೇಲೆ ಮಾತ್ರವಲ್ಲ, ಪ್ರಪಂಚದ ಮೇಲೂ ಇದೆ.

ಎಷ್ಟು ಸುಂಕ ವಿಧಿಸಲಾಗುತ್ತದೆ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ.

ಅಮೆರಿಕದ ಮಾರುಕಟ್ಟೆಗೆ ತನ್ನ ಸರಕುಗಳನ್ನು ಕಳುಹಿಸುವ ಪ್ರತಿಯೊಂದು ದೇಶ ಟ್ರಂಪ್ ತನ್ನ ಮೇಲೆ ಎಷ್ಟು ಸುಂಕ ವಿಧಿಸಿದ್ದಾರೆಂದು ನೋಡುತ್ತದೆ ಮತ್ತು ಅಮೆರಿಕದ ಸುಂಕ ಕ್ರಮಕ್ಕೆ ಆ ಎಲ್ಲಾ ದೇಶಗಳು ಎಷ್ಟು ಪ್ರತಿಸುಂಕ ವಿಧಿಸುತ್ತವೆ ಎಂಬುದನ್ನು ನೋಡಬೇಕು.

ಎರಡೂ ಕಡೆಯಿಂದ ಸಮಾನ ಸುಂಕಗಳನ್ನು ವಿಧಿಸುವ ಪೈಪೋಟಿ ಶುರುವಾದರೆ, ಜಗತ್ತು 1930ರ ಮಹಾ ಆರ್ಥಿಕ ಕುಸಿತವನ್ನು ಕಾಣಬಹುದು ಎಂದು ಕೆಲ ಅಧ್ಯಯನಗಳು ಹೇಳಿವೆ.

ಅಮೆರಿಕದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಮೆರಿಕದ ಮಾರುಕಟ್ಟೆ ನಷ್ಟ ಕಾಣುತ್ತದೆ ಎಂಬ ವದಂತಿಗಳಿವೆ. ಆದರೆ ಟ್ರಂಪ್ ಮಾತ್ರ ಇದರಿಂದ ಅಮೆರಿಕಕ್ಕೆ ಲಾಭವಾಗುತ್ತದೆ ಎಂದು ನಂಬಿದ್ದಾರೆ. ಅಮೆರಿಕದಲ್ಲಿ ಕಾರ್ಖಾನೆಗಳು ಶುರುವಾಗುತ್ತವೆ, ಉದ್ಯೋಗಗಳು ಸೃಷ್ಟಿಯಾಗುತ್ತವೆ ಎನ್ನುತ್ತಿದ್ದಾರೆ.

ಹಾಗಾದರೆ ಭಾರತದ ಯುವಕರ ಗತಿ ಏನಾಗುತ್ತದೆ?

ಟ್ರಂಪ್ ಎಲ್ಲಾ ದೇಶಗಳ ಮೇಲೆ ಶೇ. 10 ಮೂಲ ಸುಂಕವನ್ನು ವಿಧಿಸಿದ್ದಾರೆ. ಅಮೆರಿಕದೊಂದಿಗೆ ವ್ಯವಹಾರ ಮಾಡುವ ಮತ್ತು ಅಮೆರಿಕಕ್ಕೆ ರಫ್ತು ಮಾಡುವ ದೇಶಗಳಿಗೆ ಇಷ್ಟೊಂದು ಸುಂಕ ವಿಧಿಸಲಾಗುತ್ತದೆ.

ಚೀನಾದ ಮೇಲೆ ಶೇ. 54ರವರೆಗೆ ಸುಂಕ ವಿಧಿಸಲಾಗಿದೆ.

ದೇಶಗಳು ತಮ್ಮ ಮೇಲೆ ಶೂನ್ಯ ಪ್ರತಿಶತ ಸುಂಕ ದರ ಬಯಸಿದರೆ, ಅವು ತಮ್ಮ ಉತ್ಪನ್ನಗಳನ್ನು ಅಮೆರಿಕದಲ್ಲಿ ಮಾತ್ರ ತಯಾರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳುತ್ತಾರೆ.

ಟ್ರಂಪ್ ಬಯಸಿದಂತೆ ಎಲ್ಲವೂ ನಡೆಯುವುದು ಅಷ್ಟು ಸುಲಭವಲ್ಲ. ಆದರೆ ಟ್ರಂಪ್ ಕಳೆದ 3 ತಿಂಗಳಿನಿಂದ ಇದನ್ನು ನಿರಂತರವಾಗಿ ಹೇಳುತ್ತಿದ್ದಾರೆ ಮತ್ತು ಅವರು ಹೇಳುತ್ತಲೇ ಇರುತ್ತಾರೆ. ಅದಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಕೂಡ ಖಂಡಿತವಾಗಿಯೂ ನಿಜ.

ಹೊಸ ಸುಂಕ ಪಟ್ಟಿಯನ್ನು ತೋರಿಸುತ್ತಾ ಟ್ರಂಪ್, ಇತರ ದೇಶಗಳು ಅಮೆರಿಕದ ಮೇಲೆ ವಿಧಿಸುತ್ತಿರುವ ಸುಂಕದ ಅರ್ಧದಷ್ಟನ್ನು ನಾವು ವಿಧಿಸುತ್ತೇವೆ ಎಂದು ಹೇಳಿದರು.

ಟ್ರಂಪ್ ಮೋದಿಯನ್ನು ಹೊಗಳುತ್ತಲೇ ಭಾರತದ ಮೇಲೆ ಪ್ರತಿಸುಂಕ ಹೇರಿದ್ದಾರೆ. ಹಾಗೆಯೇ ಬೇರೆ ಬೇರೆ ದೇಶಗಳನ್ನು ಕೂಡ ಹೊಗಳುತ್ತಲೇ ಆ ಎಲ್ಲ ದೇಶಗಳ ಮೇಲೂ ಒಂದಲ್ಲ ಒಂದು ಸುಂಕ ವಿಧಿಸಿದ್ಧಾರೆ.

ಅವರು ಜಪಾನ್ ಅನ್ನು ಅದ್ಭುತ ಎಂದರು, ಆಸ್ಟ್ರೇಲಿಯವನ್ನು ಅದ್ಭುತ ಎಂದು ಕರೆದರು, ವಿಯೆಟ್ನಾಂನ ಜನರನ್ನು ಅದ್ಭುತ ಎಂದರು. ಭಾರತ ಮತ್ತು ಜಪಾನ್ ಅನ್ನು ಉಲ್ಲೇಖಿಸಿ, ಈ ದೇಶಗಳು ಸುಂಕದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿವೆ ಎಂದು ಹೇಳಿದರು.

ಮೋದಿ ನನಗೆ ಒಳ್ಳೆಯ ಸ್ನೇಹಿತ. ಆದರೆ ಅವರು ನಮ್ಮೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂದರು.

ಟ್ರಂಪ್ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಆದರೆ ಭಾರತ ಸರಕಾರ ಈ ಬಗ್ಗೆ ಜನರೊಂದಿಗೆ ಮಾತನಾಡುತ್ತಿಲ್ಲ.

ಟ್ರಂಪ್ ಅವರ ನೀತಿ ತಪ್ಪಾಗಿರಬಹುದು. ಆದರೆ ಅವರು ಪದೇ ಪದೇ ಜನರ ಮುಂದೆ ಬಂದು ತಾವು ಹೀಗೆ ಏಕೆ ಮಾಡುತ್ತಿದ್ದೇವೆ ಮತ್ತು ಹೀಗೆ ಮಾಡುವುದರಿಂದ ಏನಾಗುತ್ತದೆ ಎಂಬುದನ್ನು ಹೇಳುತ್ತಿದ್ದಾರೆ.

ಭಾರತದ ವಾಣಿಜ್ಯ ಸಚಿವಾಲಯ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಭಾರತ ಅಧ್ಯಯನ ಮಾಡುತ್ತಿದೆ, ಎಲ್ಲಾ ಪಾಲುದಾರರೊಂದಿಗೆ ಮಾತನಾಡುತ್ತಿದೆ ಎಂದು ಮಾತ್ರ ಹೇಳಲಾಗಿದೆ.

ಭಾರತ ಸರಕಾರ ಸುಂಕದ ಬಗ್ಗೆ ವಿವರವಾಗಿ ವಿವರಿಸಬೇಕಾಗಿತ್ತು. ಯಾವ ವಲಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಿಳಿಸಬೇಕಿತ್ತು. ಆದರೆ ಟ್ರಂಪ್ ಅವರ ಸುಂಕದ ಬಗ್ಗೆ ಮೋದಿ ಸರಕಾರದ ಒಬ್ಬರೇ ಒಬ್ಬರೂ ಮಾತನಾಡುವುದಿಲ್ಲ.

ಭಾರತದ ಉತ್ಪಾದನಾ ವಲಯ ಈಗಾಗಲೇ ಸರಾಸರಿ ಮಟ್ಟದಲ್ಲಿದೆ ಎಂದು ಯಾರೂ ಜನರ ಮುಂದೆ ಹೇಳುತ್ತಿಲ್ಲ,

ಮೇಕ್ ಇನ್ ಇಂಡಿಯಾ ವಿಫಲವಾಗಿದೆ ಮತ್ತು ಆತ್ಮನಿರ್ಭರ ಭಾರತ್ ಬರೀ ಘೋಷಣೆಯಾಗಿಯಷ್ಟೇ ಉಳಿದಿದೆ.

ಭಾರತವನ್ನು ಸುಂಕದ ಮೂಲಕ ಎಷ್ಟೇ ಅವಮಾನಿಸಿದರೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಲಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಆಗಲಿ, ಪ್ರಧಾನಿ ನರೇಂದ್ರ ಮೋದಿ ಆಗಲಿ ಮಾತನಾಡುವುದಿಲ್ಲ.

ಚೀನಾ, ವಿಯೆಟ್ನಾಂಗಿಂತ ಭಾರತದ ಮೇಲೆ ಕಡಿಮೆ ಸುಂಕ ವಿಧಿಸಲಾಗಿದೆ ಎಂದು ಯಾರಾದರೂ ಹೇಳಬಹುದು.

ಆದರೆ, ಇದು ಭಾರತಕ್ಕೆ ಸಮಾಧಾನಕರ ವಿಷಯವೇ?

ಟ್ರಂಪ್ ಅವರ ಘೋಷಣೆಯ ನಂತರ ಅವರ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಇತರ ದೇಶಗಳು ಸುಂಕದ ವಿರುದ್ಧ ಪ್ರತೀಕಾರ ಕ್ರಮಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಎಲ್ಲಾ ದೇಶಗಳು ಆರಾಮವಾಗಿ ಕುಳಿತು ಈ ನೀತಿಯನ್ನು ಒಪ್ಪಿಕೊಳ್ಳಬೇಕು ಎಂಬುದು ಅವರ ಧೋರಣೆ. ಪ್ರತೀಕಾರಕ್ಕೆ ಮುಂದಾದರೆ ಸುಂಕ ಇನ್ನೂ ಹೆಚ್ಚಾಗಬಹುದು ಎಂಬ ಭಯ ಹುಟ್ಟಿಸಲಾಗುತ್ತಿದೆ.

ಅಮೆರಿಕದ ಹೊಸ ಸುಂಕಗಳನ್ನು ಬಲವಾಗಿ ವಿರೋಧಿಸುವುದಾಗಿ ಮತ್ತು ತನ್ನ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ದೃಢವಾದ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಚೀನಾದ ಹಣಕಾಸು ಸಚಿವಾಲಯ ಹೇಳಿದೆ.

ಅಮೆರಿಕ ಸರಕಾರದ ಸಮಗ್ರ ವ್ಯಾಪಾರ ನಿರ್ಬಂಧಗಳು ಜಪಾನ್ ಮತ್ತು ಅಮೆರಿಕ ನಡುವಿನ ಆರ್ಥಿಕ ಸಂಬಂಧಗಳ ಮೇಲೆ ಮಾತ್ರವಲ್ಲದೆ, ಒಟ್ಟಾರೆಯಾಗಿ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ ಎಂದು ಜಪಾನ್ ಪ್ರಧಾನಿ ಇಶಿಬಾ ಹೇಳಿದ್ದಾರೆ.

ಟ್ರಂಪ್ ಅವರ ಸುಂಕ ಯೋಜನೆ ವಿಶ್ವ ಆರ್ಥಿಕತೆಗೆ ದೊಡ್ಡ ಹಿನ್ನಡೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷರು ಹೇಳಿದ್ದಾರೆ.

ಈ ಸುಂಕ ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ಷಣಾ ವಾದವನ್ನು ಉತ್ತೇಜಿಸುತ್ತದೆ. ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಭೀಕರ ಸಂಕಷ್ಟಗಳಿಗೆ ತಳ್ಳುತ್ತದೆ ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ.

ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ವ್ಯಾಪಾರ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಆದರೆ ಭಾರತದ ಪ್ರತಿಕ್ರಿಯೆ ಮಾತ್ರ ಬಂದಿಲ್ಲ.

ಟ್ರಂಪ್ ಘೋಷಣೆಯ ನಂತರ, ಈ ನಿರ್ಧಾರದಿಂದ ಅಮೆರಿಕವನ್ನು ಶ್ರೀಮಂತ ಗೊಳಿಸಲು ಬಯಸುವುದಾಗಿ ಹೇಳಿದರು. ಹೊಸ ಸುಂಕ ಘೋಷಿಸಿದ ದಿನವನ್ನು ಅಮೆರಿಕದ ವಿಮೋಚನಾ ದಿನ ಎಂದು ಕರೆದರು.

ಭಾರತದಲ್ಲಿಯೂ ಜಿಎಸ್‌ಟಿ ಜಾರಿಗೆ ತರುವ ಸಮಯದಲ್ಲಿ ಹೊಸ ಸ್ವಾತಂತ್ರ್ಯವನ್ನು ಘೋಷಿಸಲಾಯಿತು.

ಜಿಎಸ್‌ಟಿ ಜಾರಿಗೆ ತರಲು ಮಧ್ಯರಾತ್ರಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ದೀರ್ಘ ಭಾಷಣ ಮಾಡಲಾಯಿತು. ಆದರೆ ಜಿಎಸ್‌ಟಿ ಪಾವತಿಸುವುದರಿಂದ ತಮ್ಮ ಜೇಬು ಖಾಲಿಯಾಗಿದೆ ಎಂದು ಜನರಿಗೆ ನಂತರ ತಿಳಿಯಿತು.

ವಿಮೆಯ ಮೇಲೆಯೂ ಜಿಎಸ್‌ಟಿ ಪಾವತಿಸುವ ಅತ್ಯಂತ ಕೆಟ್ಟ ಸ್ಥಿತಿ ಈಗ ನಮ್ಮ ಜನರಿಗೆ ಬಂದಿದೆ.

ಒಬ್ಬ ನಾಯಕ ನಿಮಗೆ ಸ್ವಾತಂತ್ರ್ಯ ಘೋಷಿಸಿದಾಗಲೆಲ್ಲಾ, ನಿಮ್ಮ ಜೇಬು ಹೆಚ್ಚಿನ ತೆರಿಗೆ ಭರಿಸಬೇಕಾಗುತ್ತದೆ ಎಂದೇ ಅರ್ಥ.

ಜಿಎಸ್‌ಟಿಯಿಂದಾಗಿ ಅನೇಕ ಸಣ್ಣ ಉದ್ಯಮಿಗಳು ನಾಶವಾದರು. ಜಿಎಸ್‌ಟಿಗೆ ಸಂಬಂಧಿಸಿದಂತೆ ಹಗರಣಗಳು ಕೂಡ ಆರಂಭವಾಗಿವೆ.

ಅಮೆರಿಕದಲ್ಲಿಯೇ ಸುಂಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನೀತಿಯಿಂದ ಲಾಭವಾಗುತ್ತದೆಯೋ ಇಲ್ಲವೋ, ಹಣದುಬ್ಬರ ಹೆಚ್ಚಾಗುತ್ತದೆ.

ಟ್ರಂಪ್ ವಿಮೋಚನಾ ದಿನ ಎಂದು ಕರೆದಿರಬಹುದು, ಆದರೆ ಅಮೆರಿಕದ ವ್ಯಾಪಾರ ಪಾಲುದಾರರಿಗೆ ಅದು ಅಂತರ್‌ರಾಷ್ಟ್ರೀಯ ವ್ಯಾಪಾರದ ಯುಗದ ಅಂತ್ಯವನ್ನು ಸೂಚಿಸುವ ದಿನ ಎಂದು ಫೈನಾನ್ಷಿಯಲ್ ಟೈಮ್ಸ್‌ನಲ್ಲಿ ಬರೆಯಲಾಗಿದೆ.

1930ರ ದಶಕದ ಮಹಾ ಆರ್ಥಿಕ ಕುಸಿತಕ್ಕಿಂತ ಹೆಚ್ಚಿನ ಸುಂಕಗಳನ್ನು ಟ್ರಂಪ್ ಅಂತರ್‌ರಾಷ್ಟ್ರೀಯ ವ್ಯಾಪಾರದ ಮೇಲೆ ವಿಧಿಸಿದ್ದಾರೆ.

ಈ ನೀತಿಯ ಒಂದು ಪರಿಣಾಮವೆಂದರೆ, ವಿವಿಧ ದೇಶಗಳಿಗೆ ಈಗ ಸುಂಕದಿಂದ ವಿನಾಯಿತಿ ನೀಡುವಂತೆ ಅಮೆರಿಕದ ಕಂಪೆನಿಗಳು ಸರಕಾರದ ಬಳಿ ಲಾಬಿ ಮಾಡುತ್ತವೆ. ಇದರೊಂದಿಗೆ, ಟ್ರಂಪ್ ಅವುಗಳ ಮೇಲೆ ನಿಯಂತ್ರಣ ಕಾಯ್ದುಕೊಳ್ಳುತ್ತಾರೆ.

ಮತ್ತೊಂದೆಡೆ, ಸ್ವಂತವಾಗಿ ರಿಯಾಯಿತಿಗಳನ್ನು ನೀಡುವ ದೇಶಗಳು ಮತ್ತು ಕಂಪೆನಿಗಳು ಕಡಿಮೆ ಬೆಲೆಗಳನ್ನು ವಿಧಿಸುವ ಅಥವಾ ರಿಯಾಯಿತಿಗಳನ್ನು ನೀಡುವ ಮೂಲಕ ಲಾಭ ಪಡೆಯುತ್ತವೆ.ಆದರೆ, ಯಾವುದೇ ದೇಶ ತನ್ನ ಸುಂಕವನ್ನು ಹೆಚ್ಚಿಸಿದರೆ, ಟ್ರಂಪ್ ಕೂಡ ಸುಂಕವನ್ನು ಹೆಚ್ಚಿಸಬಹುದು.

ಭಾರತದಲ್ಲೂ ಸಂಸದರು, ಅಮೆರಿಕ ಸಂತೋಷವಾಗಿರಲು ಗೂಗಲ್‌ಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಪ್ರಶ್ನೆ ಏನೆಂದರೆ, ಅವರನ್ನು ಎಷ್ಟು ದಿನ ಸಂತೋಷವಾಗಿ ಇಡಲಾಗುತ್ತದೆ ಮತ್ತು ಇದಕ್ಕೆ ಬೆಲೆ ತೆರುವವರು ಯಾರು ಎಂಬುದು.

ಈಗ, ಅಮೆರಿಕವನ್ನು ಮೆಚ್ಚಿಸಲು ಕೃಷಿ ಕ್ಷೇತ್ರದ ಬಾಗಿಲು ತೆರೆದರೆ ಭಾರತದ ರೈತರನ್ನು ಯಾರು ಉಳಿಸುತ್ತಾರೆ?

ಭಾರತ ಯಾವಾಗಲೂ ಅಮೆರಿಕ ಹೇಳಿದ್ದನ್ನು ಮಾಡುತ್ತದೆ. ಅಮೆರಿಕ ಇರಾನ್‌ನಿಂದ ಕಡಿಮೆ ತೈಲ ಖರೀದಿಸಿ ಎಂದು ಹೇಳುತ್ತದೆ. ನಾವು ಹಾಗೆಯೇ ಖರೀದಿಸುತ್ತೇವೆ. ಅಮೆರಿಕ ತನ್ನ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹೇಳುತ್ತದೆ, ನಾವು ಅವರಿಂದ ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಖರೀದಿಸುತ್ತೇವೆ. ಇಂತಿಂಥ ದೇಶದ ಮೇಲೆ ನಿರ್ಬಂಧಗಳನ್ನು ಹಾಕಿದ್ದು, ಅವುಗಳೊಂದಿಗೆ ವ್ಯಾಪಾರ ನಿಲ್ಲಿಸಲು ಅಮೆರಿಕ ಹೇಳಿದರೆ ನಾವು ವ್ಯಾಪಾರ ನಿಲ್ಲಿಸುತ್ತೇವೆ.

ನಿಷ್ಠಾವಂತ ಸ್ನೇಹಿತರಾಗಿ ಹೀಗೆ ಅಮೆರಿಕ ಹೇಳಿದ್ದನ್ನೆಲ್ಲ ಮಾಡುತ್ತಿದ್ದರೆ, ಭಾರತಕ್ಕೆ ಪ್ರತಿಯಾಗಿ ಏನು ಸಿಗುತ್ತದೆ?

ಬಿಜೆಪಿ ಬೆಂಬಲಿಗರು ಟ್ರಂಪ್ ಅವರನ್ನು ಗೆಲ್ಲಿಸಲು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆಸಿದರು, ಕೆಲವರು ಟ್ರಂಪ್ ಗೆಲುವಿಗಾಗಿ ಹೋಮ, ಹವನಗಳನ್ನು ಕೂಡ ಮಾಡಿದರು. ಆದರೆ ಅದಕ್ಕೆ ಪ್ರತಿಯಾಗಿ ಭಾರತಕ್ಕೆ ಸಿಕ್ಕಿದ್ದೇನು?

ಭಾರತದ ಮೇಲಿನ ಪರಿಣಾಮಗಳ ಕುರಿತ ಚರ್ಚೆಯಲ್ಲಿ ಪರ್ಯಾಯಗಳ ಕುರಿತ ವಿಚಾರ ಅಷ್ಟು ಸರಳ ಮತ್ತು ನೇರವಾದಂತೆ ತೋರುತ್ತಿಲ್ಲ.

ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಕೇವಲ ಘೋಷಣೆಗಳಾಗಿ ಉಳಿದಿವೆ.

ಚೀನಾದ ಕಂಪೆನಿ ಪ್ಯಾರಿಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊಗಿಂತ ದೊಡ್ಡದಾದ ಕಾರ್ಖಾನೆಯನ್ನು ನಿರ್ಮಿಸುತ್ತಿದೆ. 1 ಲಕ್ಷ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಮನೆಗಳು, ಅಂಗಡಿಗಳು, ಶಾಲೆಗಳು ಮತ್ತು ಫುಟ್ಬಾಲ್ ಮೈದಾನಗಳನ್ನು ನಿರ್ಮಿಸುತ್ತಿದೆ.

ಒಂದು ವರ್ಷದಲ್ಲಿ 10 ಲಕ್ಷ ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸುವುದು ಕಂಪೆನಿಯ ಗುರಿಯಾಗಿದೆ. ಭಾರತದಲ್ಲಿ ಅಂತಹ ಹೂಡಿಕೆಗಳನ್ನು ಮಾಡಲಾಗುತ್ತಿದೆಯೇ?

ತೈವಾನ್ ಗಾತ್ರದಲ್ಲಿ ಹರ್ಯಾಣಕ್ಕಿಂತ ಚಿಕ್ಕದಾಗಿದೆ, ಆದರೆ ವರ್ಷಗಳಿಂದ ಸೆಮಿ ಕಂಡಕ್ಟರ್‌ಗಳ ಅರೆವಾಹಕಗಳ ಅತಿದೊಡ್ಡ ಉತ್ಪಾದಕ ದೇಶವಾಗಿದೆ.

2021ರಿಂದಲೂ ಮೋದಿ ಭಾರತವನ್ನು ಸೆಮಿಕಂಡಕ್ಟರ್‌ಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅದು ಏಕೆ ಆಗಿಲ್ಲ?

ಮಂದಿರ, ಗೋ ರಕ್ಷಣೆ, ಸಂಭಲ್, ವಕ್ಫ್ ಬಿಲ್ ಹೊರತು ಮೋದಿ ಸರಕಾರದ 10 ವರ್ಷಗಳ ಸಾಧನೆಗಳೇನು?

ಆದರೆ ಭಾರತ ಇವುಗಳ ಆಧಾರದ ಮೇಲೆಯೇ ಜಗತ್ತಿನೊಂದಿಗೆ ಸ್ಪರ್ಧಿಸುತ್ತಿದೆಯೇ?

ಅಮೆರಿಕ ಏಕೆ ಶೇ. 27 ಸುಂಕ ವಿಧಿಸಿತು ಎಂಬಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಮುಖ್ಯ. ಆದರೆ ಭಾರತ ಅಮೆರಿಕದಿಂದ ಶೇ. 52ರಷ್ಟು ಸುಂಕ ಸಂಗ್ರಹಿಸುತ್ತಿದೆಯೇ?

ಭಾರತದ ಜಿಎಸ್‌ಟಿಯನ್ನು ಅಮೆರಿಕ ಕೂಡ ವ್ಯಾಪಾರ ನಿರ್ಬಂಧವಾಗಿ ನೋಡುತ್ತದೆಯೇ?

ಕೃಷಿಯ ಮೇಲಿನ ಹೆಚ್ಚಿನ ಸುಂಕ ಹಾಗೆಯೇ ಉಳಿದು ಅಮೆರಿಕದ ಸರಕುಗಳ ಮೇಲಿನ ಜಿಎಸ್‌ಟಿ ಕಡಿಮೆಯಾದರೆ, ಅಮೆರಿಕ ಭಾರತದ ಮೇಲೆ ಶೇ. 10 ಮೂಲ ಸುಂಕವನ್ನು ವಿಧಿಸುತ್ತದೆಯೇ?

ಟ್ರಂಪ್ ನೀತಿ ಬಗ್ಗೆ ಪ್ರತಿಯೊಂದು ದೇಶವೂ ಏನಾದರೂ ಒಂದು ಪ್ರತಿಕ್ರಿಯೆ ಕೊಟ್ಟಿದೆ. ಆದರೆ ಭಾರತದ ಪ್ರಧಾನಿ ಮಾತ್ರ ಏನನ್ನೂ ಹೇಳುತ್ತಿಲ್ಲ,

ನಮ್ಮ ಸುತ್ತಲಿನ ಪ್ರಪಂಚ ವೇಗವಾಗಿ ಬದಲಾಗುತ್ತಿದೆ, ಉದ್ಯೋಗಗಳು ಅಪಾಯದಲ್ಲಿವೆ, ಕಂಪೆನಿಗಳ ಅಸ್ತಿತ್ವ ಅಪಾಯದಲ್ಲಿದೆ, ಸಂಬಳ ಹೆಚ್ಚಳವನ್ನು ಬಹಳ ಸಮಯದಿಂದ ನಿಲ್ಲಿಸಲಾಗಿದೆ. ಆದರೆ ಭಾರತ ಆರ್ಥಿಕ ಚಿಂತೆಗಳಿಂದ ಮುಕ್ತವಾಗಿರುವ ಹಾಗೆ ಕಾಣಿಸುತ್ತಿದೆ.

ಆದರೆ ದೇಶದ ವಾಸ್ತವ ಪರಿಸ್ಥಿತಿ ಹಾಗಿದೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News