‘ಏಮ್ಸ್’ ಬಗ್ಗೆ ಪ್ರಸ್ತಾವವಿಲ್ಲ ಎಂದ ಕೇಂದ್ರ ಮಂತ್ರಿ: ಮತ್ತೆ ನಿರಾಸೆ

Update: 2025-04-07 10:26 IST
‘ಏಮ್ಸ್’ ಬಗ್ಗೆ ಪ್ರಸ್ತಾವವಿಲ್ಲ ಎಂದ ಕೇಂದ್ರ ಮಂತ್ರಿ: ಮತ್ತೆ ನಿರಾಸೆ
  • whatsapp icon

ರಾಯಚೂರು : ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಏಮ್ಸ್ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಕೆಸರೆರಚಾಟ ಮುಂದುವರಿದಿದ್ದು ಜಿಲ್ಲೆಯ ಜನರಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದೆ.

ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ 1,059 ದಿನಗಳಿಂದ ಏಮ್ಸ್ ಹೋರಾಟ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೂ ಮುಂಚೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ಬಾರಿ ಪತ್ರ ಬರೆದು ಕೈತೊಳೆದುಕೊಂಡಿದ್ದು ಇದನ್ನೇ ನೆಪವಾಗಿಟ್ಟುಕೊಂಡು ಕೇಂದ್ರ ಸರಕಾರ ರಾಜ್ಯದಿಂದ ಯಾವುದಾದರೂ ಪ್ರಸ್ತಾಪ ಬಂದಿಲ್ಲ ಎನ್ನುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.

ಆರಂಭದಲ್ಲಿ ಜಿಲ್ಲೆಗಷ್ಟೇ ಸೀಮಿತವಾದ ಏಮ್ಸ್ ಹೋರಾಟ ನಂತರ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಬಹುತೇಕ ರಾಜ್ಯದ ಸಂಸದರು, ಶಾಸಕರು ಏಮ್ಸ್ ರಾಯಚೂರಿಗೆ ನೀಡುವಂತೆ ಧ್ವನಿ ಗೂಡಿಸುವ ಮೂಲಕ ರಾಜ್ಯಮಟ್ಟದ ಬೇಡಿಕೆಯಾಗಿ ಪರಿಗಣಿಸಿದ್ದರಿಂದ ಆಶಾದಾಯಕ ಬೆಳವಣಿಗೆಯಾಗಿದೆ.

ಆದರೆ ದಾವಣಗೆರೆ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವ ಪ್ರತಾಪರಾವ್ ಜಾಧವ ನೀಡಿದ ಉತ್ತರದಲ್ಲಿ ಏಮ್ಸ್ ಸ್ಥಾಪಿಸುವ ಪ್ರಸ್ತಾವ ಇನ್ನು ತಲುಪಿಲ್ಲವೇ ಎನ್ನುವ ಅನುಮಾನಕ್ಕೆ ಕಾರಣವಾಗಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರದ ರಾಜ್ಯ ಆರೋಗ್ಯ ಸಚಿವ ಲಿಖಿತ ಉತ್ತರ ನೀಡುವ ಮೂಲಕ ಮತ್ತೊಮ್ಮೆ ನಿರಾಶೆ ಮೂಡಿಸಿದ್ದಾರೆ.

ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ ದೇಶದಲ್ಲಿ 22 ಏಮ್ಸ್ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಆರೋಗ್ಯ ಸೌಲಭ್ಯಗಳ ಕೊರತೆ ನೀಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಸರಕಾರದ ಮುಂದಿಲ್ಲ ಎಂದು ಲಿಖಿತ ಉತ್ತರ ನೀಡಿದ್ದು ಈಗ ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸುಳ್ಳಾದ ಪತ್ರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದರು. ಅದರೀಗ ಪ್ರಸ್ತಾವ ಇಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರಕಾರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬದು ಬಹಿರಂಗಗೊಂಡಂತಾಗಿದೆ.

ರಾಜ್ಯದ ಮುಖ್ಯಮಂತ್ರಿ ಎರಡು ಬಾರಿ ಕೇಂದ್ರಕ್ಕೆ ಪತ್ರ ಬರೆದು ಏಮ್ಸ್ ಮಂಜೂರಾತಿ ಅಗತ್ಯವನ್ನು ತಿಳಿಸಿದ್ದರು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ ಸಹ ದಿಲ್ಲಿಗೆ ಹೋಗಿ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ನೀಡಿದ್ದರು. ಆದರೂ ಕೇಂದ್ರ ಸರಕಾರ ರಾಜ್ಯದ ಬೇಡಿಕೆಯನ್ನು ಮನ್ನಿಸಿಲ್ಲ. ಅಲ್ಲದೇ ಲೋಕಸಭಾ ಅಧಿವೇಶನದಲ್ಲಿ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ ಸಹ ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸುವ ಅಗತ್ಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದರು.

ಏಮ್ಸ್ ಹೋರಾಟ ಸಮಿತಿ ನಿಯೋಗ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಂಸದರನ್ನು ಭೇಟಿ ಮಾಡಿ ಏಮ್ಸ್ ಸ್ಥಾಪಿಸುವ ಅಗತ್ಯತೆಯನ್ನು ಮನವರಿಕೆ ಮಾಡಿ ಬಂದಿದ್ದಾರೆ. ಇಷ್ಟಾಗಿಯೂ ಆದರೆ ಕೇಂದ್ರ ಸರಕಾರ ಮಾತ್ರ ಏಮ್ಸ್ ಮಂಜೂರಾತಿ ವಿಷಯದಲ್ಲಿ ರಾಜ್ಯದ ಬೇಡಿಕೆಯನ್ನು ಪರಿಗಣಿಸದೇ ಇರುವದು ಕಳವಳಕಾರಿ ಸಂಗತಿಯಾಗಿದೆ.

ರಾಜ್ಯದಿಂದ ಏಮ್ಸ್ ಮಂಜೂರಾತಿ ನೀಡುವ ಪ್ರಸ್ತಾವ ಸಲ್ಲಿಕೆಯಾಗಿದೆ ಎಂಬುದು ಗೊಂದಲಗೂಡಾಗಿದೆ. ರಾಜ್ಯದಿಂದ ಪ್ರಸ್ತಾವ ಹೋಗಿಲ್ಲವೋ, ಸಿಎಂ ಬರೆದ ಪತ್ರಕ್ಕೆ ಬೆಲೆಯೇ ಇಲ್ಲವೋ ಎನ್ನುವುದು ತಿಳಿಯದಾಗಿದೆ.

ಏಮ್ಸ್ ತರಲು ರಾಜ್ಯ ಬಿಜೆಪಿ ನಾಯಕರಿಗೆ ಸವಾಲು : 

ಕರ್ನಾಟಕಕ್ಕೆ ಏಮ್ಸ್ ಮಂಜೂರು ಮಾಡಲು ವಿಶೇಷವಾಗಿ ರಾಯಚೂರಿನ ಹೆಸರು ಪ್ರಸ್ತಾಪಿಸಿ 2 ಬಾರಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ, ಕೇಂದ್ರ ಸಚಿವರಿಗೂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಆದರೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ರಾಯಚೂರಿಗೆ ಏಮ್ಸ್ ನೀಡುವ ಪ್ರಸ್ತಾಪವಿಲ್ಲ ಹಾಗೂ ಏಮ್ಸ್ ಬದಲಾಗಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ದಾರಿ ತಪ್ಪಿಸುತ್ತಿದ್ದಾರೆ. ಇದರ ಬಗ್ಗೆ ಮಾತನಾಡದ ರಾಜ್ಯದ ಬಿಜೆಪಿ ನಾಯಕರು ಸಚಿವ ಸಂಪುಟದಿಂದ ನಿರ್ಧಾರ ಕೈಗೊಂಡಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ. ರಾಜ್ಯ ಸಚಿವ ಸಂಪುಟದಲ್ಲಿ ಏಮ್ಸ್ ಕುರಿತು ತೀರ್ಮಾನ ಕೈಗೊಂಡರೆ ಬಿಜೆಪಿ ನಾಯಕರಿಗೆ ಕೇಂದ್ರ ಸರಕಾರದ ಬಳಿ ಒತ್ತಾಯಿಸಿ ಏಮ್ಸ್ ಮಂಜೂರು ಮಾಡಿಸುವ ತಾಕತ್ತು ಇದೆಯಾ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಸವಾಲು ಹಾಕಿದರು.

ಕೇಂದ್ರ ಸರಕಾರ ಏಮ್ಸ್ ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟದ ನಿರ್ಧಾರ ಕೈಗೊಂಡಿಲ್ಲ ಎನ್ನುವುದಾದರೆ ರಾಜ್ಯ ಸರಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಬದಲು ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಿ, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಹಾಗೂ ಎನ್.ಎಸ್.ಭೋಸರಾಜು ಅವರು ಮುಖ್ಯಮಂತ್ರಿ ಮೇಲೆ ಒತ್ತಡ ತರಲಿ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡಲಾಗುವುದು.

-ಬಸವರಾಜ ಕಳಸ, ಪ್ರಧಾನ ಸಂಚಾಲಕ, ರಾಯಚೂರು ಏಮ್ಸ್ ಹೋರಾಟ ಸಮಿತಿ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಬಾವಸಲಿ, ರಾಯಚೂರು

contributor

Similar News