ಜಗಲಿಯಲ್ಲೇ ಸೃಷ್ಟಿಯಾಗುವ ಅನುಭವ ಮಂಟಪಗಳು!
ಪ್ರತೀ ದಿವಸ ಅದೇ ಮುಖ ಅದೇ ಮನಸ್ಸು ಅದೇ ಪ್ರೀತಿ ಸಂಬಂಧಗಳ ಸಹವಾಸಗಳು ಮತ್ತೆ ಮತ್ತೆ ಅಂತಹ ಕಟ್ಟೆ- ಜಗಲಿಯಲ್ಲಿ ಸೇರುತ್ತಿದ್ದವು. ಊರೊಳಗಡೆ ಯಾರಾದರೂ ಸತ್ತರೆ, ಓಡಿ ಹೋದರೆ ಕಥೆಗಳು ಹುಟ್ಟಿಕೊಳ್ಳುತ್ತಿದ್ದವು. ಅಲ್ಲಿಂದ ಕಥೆಗಳನ್ನು ಎತ್ತಿಕೊಂಡು ಹೋಗುವವರು, ಅಲ್ಲಿಗೊಂದು ಕಥೆ ಸೇರಿಸುವವರು ಇದ್ದೇ ಇರುತ್ತಿದ್ದರು. ಹಾಗೆ ಕೂರುವ ಆ ಜಾಗಕ್ಕೆ ಆಯಾಪಾಯಗಳಿರಲಿಲ್ಲ. ಎಷ್ಟೋ ಬಾರಿ ಇಲ್ಲಿ ಕೂತರೆ ಯಜಮಾನ, ಅಲ್ಲಿ ಕೂತರೆ ಸೇವಕ, ಆ ಜಾಗದಲ್ಲಿ ಶಾನುಭಾಗ, ಈ ಜಾಗದಲ್ಲಿ ಪಟೇಲ, ನೆಲಮೂಲೆಯಲ್ಲಿ ಕೂತರೆ ಕೃಷಿಕ-ನೆಲದವ ಅನ್ನುವ ಸ್ಥಾನಭೇದಗಳಿರಲಿಲ್ಲ. ಎಲ್ಲರೂ ಮಾತನಾಡುತ್ತಿದ್ದದ್ದು ಲೋಕದ ನ್ಯಾಯ, ಆಗು ಹೋಗು, ವ್ಯವಹಾರ, ಬದುಕು, ನೋವು, ಸಂಕಟ, ಖುಷಿ, ಸತ್ಯದ ಸುದ್ದಿ ಶ್ಲೋಕಗಳನ್ನು.;

ಇತ್ತೀಚೆಗೆ ನಮ್ಮನೆಗೆ ಬಂದ ನನ್ನದೇ ವಯಸ್ಸಿನ ಹಿರಿಯರೊಬ್ಬರು ‘‘ನಿಮ್ಮ ‘ಅಜ್ಜನ ಜಗಲಿ’ಯನ್ನು ತೋರಿಸಿ, ಅಲ್ಲೇ ಕೂತು ಮಾತನಾಡುವ’’ ಅಂದರು. ನಿಮಗೂ ಗೊತ್ತಿರಬೇಕು, ಆರೇಳು ವರ್ಷಗಳ ಹಿಂದೆ ’ಪ್ರಜಾವಾಣಿ’ಯ ಪ್ರಾದೇಶಿಕ ಪುಟಕ್ಕೆ ‘ಅಜ್ಜನ ಜಗಲಿ’ ಎನ್ನುವ ಅಂಕಣವೊಂದನ್ನು ಪ್ರತಿವಾರ ಬರೆಯುತ್ತಿದ್ದೆ. ಆ ಕಾಲಂನ್ನು ನಿರಂತರ ಓದುತ್ತಿದ್ದ ಹಿರಿಯರೇ ಈಗ ಈ ಮೇಲಿನ ಪ್ರಶ್ನೆ ಕೇಳಿದ್ದು.
ನಾನು ಸೃಷ್ಟಿಸಿದ ಅಜ್ಜನ ಜಗಲಿಯ ಆಕಾರ ಎಷ್ಟು ಗಟ್ಟಿಯಾಗಿ ಕೂತಿತ್ತು ಎಂದರೆ ಸುಮಾರು ಸಾವಿರ ವರ್ಷಗಳ ನಂತರ ಈಗಲೂ ವಚನ ಸಾಹಿತ್ಯವನ್ನು ಓದುವ ಓದುಗರಿಗೆ ‘ಅನುಭವ ಮಂಟಪ’ ಮನಸ್ಸಿನೊಳಗಡೆ ಕೂತ ಹಾಗೆಯೇ. ವಚನ ಸಾಹಿತ್ಯ ಹುಟ್ಟಿಕೊಂಡ ಪ್ರಾಂತಕ್ಕೆ ಹೋಗಿ ಲಿಂಗಾಯತ ಸ್ವಾಮೀಜಿ, ಅನುಯಾಯಿ, ಮುಂದಾಳುಗಳಲ್ಲಿ ನಿಮ್ಮ ಅನುಭವ ಮಂಟಪ ತೋರಿಸಿ, ಅದು ಎಲ್ಲಿದೆ, ಅದರ ವಾಸ್ತು ಶೈಲಿ ಹೇಗಿದೆ ಎಂದರೆ ಅವರಿಗೆಷ್ಟು ಕಸಿವಿಸಿಯಾಗಬಲ್ಲದೋ ಅಜ್ಜನ ಜಗಲಿ ಎಲ್ಲಿದೆ ಎಂದು ಕೇಳಿದ ಹಿರಿಯರ ಮಾತಿಗೂ ನಾನು ಆ ಕ್ಷಣಕ್ಕೆ ನಿರುತ್ತರನಾದೆ.
ಮತ್ತೆ ನೆನಪಿಸಿಕೊಂಡು ‘‘ಸರ್ ನೀವೀಗ ಅದೇ ಜಗಲಿಯಲ್ಲಿ ಕೂತಿದ್ದೀರಿ, ನಾನು ಇಲ್ಲೇ ಇದ್ದೇನೆ, ನಾವೀಗ ಸಂಭಾಷಿಸುತ್ತಿರುವುದು ಅಜ್ಜನ ಜಗಲಿಯಲ್ಲೇ’’ ಎಂದಾಗ ಸುಳ್ಳೊಂದನ್ನು ನಾನು ಸತ್ಯವೆಂದು ಸಾಬೀತು ಪಡಿಸುತ್ತಿದ್ದೇನೆ ಎಂಬ ತೃಪ್ತಿಯೊಂದು ಅವರ ಮುಖದಲ್ಲಿ ಹಾದು ಹೋದಂತಾಯಿತು, ಇಲ್ಲ ಅದು ಹಾಗಲ್ಲ ಅಜ್ಜನ ಜಗಲಿ ಎಂಬುವುದು ಕಣ್ಣಿಗೆ ಕಾಣಿಸುವ, ಮನುಷ್ಯ ಮನುಷ್ಯ ಆರಾಮವಾಗಿ ಕೂತು ಸಲ್ಲಾಪ ನಡೆಸುವ ಒಂದು ಕಟ್ಟಡವಲ್ಲ, ಗಾರೆ ಸಿಮೆಂಟ್‌ನ ಸ್ಥಾವರವಲ್ಲ ಅದೊಂದು ‘ಮನೋ ಭೂಮಿಕೆ’ಎಂದು ವಿವರಿಸುವಲ್ಲಿ ನಾನು ಸೋಲದೆ ನಿಧಾನವಾಗಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗತೊಡಗಿದೆ.
ದೇವರಾಣೆಗೂ ಹೇಳುತ್ತೇನೆ ನನ್ನ ಮನೆಯಲ್ಲಿ ಚರ್ಚೆಗಾಗಿಯೇ ಕಟ್ಟಿದ ಒಂದು ಜಗಲಿ ಇಲ್ಲ. ಕಲ್ಲು ಸಾರಣೆಯ ಚಂದದ ಕೂರುಮನೆ ಅದು ಆಗಿರಲಿಲ್ಲ. ಸಾಮಾನ್ಯವಾಗಿ ಈ ದೇಶದ ಆತ್ಮ ಭಾಗವಾಗಿರುವ ಹಳ್ಳಿಗಳಲ್ಲಿ ಅರಳಿ ಕಟ್ಟೆಗಳು, ದೇವಾಲಯದ ಜಗಲಿಗಳು, ಊರ ಶಾನುಭೋಗರ, ಪಟೇಲರ, ಗೌಡರ ಗುತ್ತು- ತರವಾಡು ಮಹಾಮನೆಗಳ ಜಗಲಿಗಳಲ್ಲಿ ಆ ಊರಿನ ಸುಖ-ದುಃಖಗಳು ನಿಯತವಾಗಿ ಹಂಚಿಕೆಯಾಗುತ್ತಿದ್ದವು. ಎಷ್ಟೋ ನ್ಯಾಯಗಳು, ದುಃಖ ದುಮ್ಮಾನಗಳು, ಕೌಟುಂಬಿಕ ಸಮಸ್ಯೆಗಳು, ಭೂಮಿ ವ್ಯಾಜ್ಯಗಳು ಅಲ್ಲಿ ತೀರ್ಮಾನವಾಗುತ್ತಿದ್ದವು. ಅಷ್ಟೇ ಅಲ್ಲ ಇಡೀ ಊರ ಸಮುದಾಯಗಳ ಸಂಬಂಧಗಳ ಸ್ಥಾಪನೆ, ಬಂಧುತ್ವದ ನವೀಕರಣ ವಿಸ್ತರಣೆ ಅಲ್ಲಿ ನಡೆಯುತ್ತಿತ್ತು.
ಅದಕ್ಕಿಂತಲೂ ಹೆಚ್ಚು ಪ್ರತೀ ದಿವಸ ಅದೇ ಮುಖ ಅದೇ ಮನಸ್ಸು ಅದೇ ಪ್ರೀತಿ ಸಂಬಂಧಗಳ ಸಹವಾಸಗಳು ಮತ್ತೆ ಮತ್ತೆ ಅಂತಹ ಕಟ್ಟೆ- ಜಗಲಿಯಲ್ಲಿ ಸೇರುತ್ತಿದ್ದವು. ಊರೊಳಗಡೆ ಯಾರಾದರೂ ಸತ್ತರೆ, ಓಡಿ ಹೋದರೆ ಕಥೆಗಳು ಹುಟ್ಟಿಕೊಳ್ಳುತ್ತಿದ್ದವು. ಅಲ್ಲಿಂದ ಕಥೆಗಳನ್ನು ಎತ್ತಿಕೊಂಡು ಹೋಗುವವರು, ಅಲ್ಲಿಗೊಂದು ಕಥೆ ಸೇರಿಸುವವರು ಇದ್ದೇ ಇರುತ್ತಿದ್ದರು. ಹಾಗೆ ಕೂರುವ ಆ ಜಾಗಕ್ಕೆ ಆಯಾಪಾಯಗಳಿರಲಿಲ್ಲ. ಎಷ್ಟೋ ಬಾರಿ ಇಲ್ಲಿ ಕೂತರೆ ಯಜಮಾನ, ಅಲ್ಲಿ ಕೂತರೆ ಸೇವಕ, ಆ ಜಾಗದಲ್ಲಿ ಶಾನುಭಾಗ, ಈ ಜಾಗದಲ್ಲಿ ಪಟೇಲ, ನೆಲಮೂಲೆಯಲ್ಲಿ ಕೂತರೆ ಕೃಷಿಕ-ನೆಲದವ ಅನ್ನುವ ಸ್ಥಾನಭೇದಗಳಿರಲಿಲ್ಲ. ಎಲ್ಲರೂ ಮಾತನಾಡುತ್ತಿದ್ದದ್ದು ಲೋಕದ ನ್ಯಾಯ, ಆಗು ಹೋಗು, ವ್ಯವಹಾರ, ಬದುಕು, ನೋವು, ಸಂಕಟ, ಖುಷಿ, ಸತ್ಯದ ಸುದ್ದಿ ಶ್ಲೋಕಗಳನ್ನು.
ವಸಾಹತುಶಾಹಿ ಪ್ರವೇಶದ ನಂತರ ಇಂತಹ ನೆಲ ಮೂಲಜ್ಞಾನ ಮಾಹಿತಿ ಮಾಧ್ಯಮ ಕೇಂದ್ರಗಳು ಛಿದ್ರೀಕರಣಗೊಂಡವು. ಜ್ಞಾನವು ಪುಸ್ತಕಗಳಲ್ಲಿ, ತರಗತಿಯ ಕೊಠಡಿಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಮಾತ್ರ ಹುಟ್ಟುತ್ತವೆ, ಹಂಚಿಕೆಯಾಗುತ್ತವೆ ಎಂಬ ನಂಬಿಕೆ ಬಲವಾಯಿತು. ಜ್ಞಾನ ಕೇಂದ್ರಗಳು ಸಾಂಸ್ಥಿಕ ಸ್ಥಾವರ ರೂಪವನ್ನು ಪಡೆದು ಶೈಕ್ಷಣಿಕ ವಿನ್ಯಾಸಕ್ಕೆ ಪಾಠಪಟ್ಟಿಗೆ ಒಳಪಟ್ಟವು. ಯಾರು ಅಲ್ಲಿ ಕೂತು ಮಾತನಾಡುತ್ತಿದ್ದರೋ ಹರಟ್ಟುತ್ತಿದ್ದರೋ ಅವರೆಲ್ಲರ ಮಕ್ಕಳು ಪುಸ್ತಕದ ಚೀಲ, ಕಡ್ಡಿ, ಪೆನ್ಸಿಲ್ ಹೊತ್ತು ಶಾಲೆಗಳಿಗೆ ನಡೆದರು. ಜಗಲಿ ಕಟ್ಟೆ ಮಂಟಪ ಇಂಥ ಕೂಡು ಭವನಗಳಲ್ಲಿ, ಬಯಲ ಬದುಕಿನ ಕೂಡುಕಾಲದಲ್ಲಿ ಇಡಿಯಾಗಿ ಜನ ಯೋಚಿಸಿ ಹಂಚುತ್ತಿದ್ದ ಜ್ಞಾನದಾರಿಯನ್ನು ವಿಂಗಡಿಸಿ ಬಿಡಿ ಬಿಡಿಯಾಗಿ ನೋಡುವ ಸೂಕ್ಷ್ಮ ಜ್ಞಾನ ಪರಭಾರೆಯ ಕೇಂದ್ರಗಳೇ ಇವತ್ತಿನ ಅಧ್ಯಯನಾಂಗಗಳು. ಶಿಕ್ಷಣ ಮಾರುವ ಸಾಲು ಸಾಲು ಶಾಲೆಗಳು.
ಹಿಂದೆ ಯಾವುದು ಹಳ್ಳಿಯ ಜಗಲಿಯಲ್ಲಿ, ಅರಳಿ ಕಟ್ಟೆಯಲ್ಲಿ ಹಂಚಿಕೆಯಾಗು ತ್ತಿತ್ತೋ ಅವೆಲ್ಲವೂ ಒಂದು ರೀತಿ ಅನ್ನಮೂಲದ ಆಚರಣಾ ಜ್ಞಾನಗಳು. ರೈತರು ಬೀಜಗಳನ್ನು ಆಯ್ಕೆ ಮಾಡುವಾಗ, ಬಿತ್ತಲು ಭೂಮಿಯನ್ನು ಹದ ಮಾಡುವಾಗ, ನೇಜಿ ನೆಡುವಾಗ, ಕೊಯ್ಯುವಾಗ, ಧಾನ್ಯ ಸಂಗ್ರಹಿಸುವಾಗ, ಬೇರ್ಪಡಿಸುವಾಗ, ಕುಟ್ಟುವಾಗ ತಲೆತಲೆಮಾರುಗಳಿಂದ ಮಣ್ಣು, ಮಳೆ, ಬಿಸಿಲು, ಸೂರ್ಯ, ನಕ್ಷತ್ರ, ಹುಣ್ಣಿಮೆ, ಅಮಾವಾಸ್ಯೆ ಇತ್ಯಾದಿಗಳ ಗಮನಿಸುತ್ತಲೇ ಸೂಕ್ಷ್ಮ ಅಧ್ಯಯನಗಳ ಮೂಲಕ ದಕ್ಕಿಸಿಕೊಂಡ ಜ್ಞಾನಗಳನ್ನು ಅವರು ಆ ಜಗಲಿ ಕಟ್ಟೆಗಳಲ್ಲಿ ಕೂತು ಹಂಚುತ್ತಿದ್ದರು. ಅದು ಬಾಯಿಯಲ್ಲಿ ಹಂಚಿಕೆಯಾಗಿ ಮೆದುಳಿಗೆ ಅಂಟಿಕೊಂಡು ತಲೆಯಿಂದ ತಲೆಗೆ ಪರಭಾರೆಯಾಗುತ್ತಿತ್ತು.
ಬರೀ ಬಿತ್ತನೆಗೆ ಬೀಜಗಳನ್ನು ಸಿದ್ಧಗೊಳಿಸುವ ಕ್ರಮಗಳನ್ನೇ ಗಮನಿಸಿ. ಅವುಗಳನ್ನು ನೀರಲ್ಲಿ ನೆನೆಹಾಕಿ ಸೆಗಣಿನೀರು ಕೊಟ್ಟು ಬೆತ್ತ ಕಾಡುಬೂರಿನ ಬುಟ್ಟಿಗೆ ತುಂಬಿಸಿ ಒಂದು ದಿನ ಅವುಗಳ ಮೇಲೆ ಕೆಲವು ನಿರ್ದಿಷ್ಟ ಸೊಪ್ಪುಗಳನ್ನಿಟ್ಟು ಅದರ ಮೇಲೆ ಕಡೆಯುವ ಕಲ್ಲು ಅಥವಾ ಇನ್ನಿತರ ಭಾರವನ್ನು ಮುಚ್ಚುವ ಆ ಮೂಲಕ ಒದ್ದೆ ಬೀಜಗಳಿಗೆ ಒತ್ತಡ ಕೊಡುವ ಕ್ರಮ, ಮೊಳಕೆ ಬರಿಸುವ ನೆಲಾನುಭವ, ಆ ಬೀಜಗಳನ್ನು ವರ್ಷದ ನಿರ್ದಿಷ್ಟ ದಿನವೇ ಬಿತ್ತಬೇಕೆನ್ನುವ ನಿರ್ಧಾರಗಳನ್ನು ನೂರಾರು ವರ್ಷಗಳಿಂದ ಬಯಲ ಅನುಭವಗಳನ್ನೇ ಆಧರಿಸಿ ನಮ್ಮ ಹಿರಿಯರು ದಕ್ಕಿಸಿಕೊಂಡಿದ್ದರು. ಅವುಗಳನ್ನು ವರ್ಷದ ಇಂತಹದ್ದೇ ದಿನಗಳಲ್ಲಿ ಬಿತ್ತಬೇಕೆಂದು ನಿರ್ಧರಿಸಿದ್ದರು. ತರಕಾರಿ ನೆಟ್ಟರೆ ಆ ಬಳ್ಳಿ ಹತ್ತಲು ಇಂಥದ್ದೇ ಕಾಡು ರೆಂಬೆಗಳನ್ನು ಕುತ್ತಬೇಕು, ಕೀಟಗಳನ್ನು ನಿಯಂತ್ರಿಸುವ ಕ್ರಮ ಈ ಎಲ್ಲವೂ ಭೂಮಿ ಸಂಬಂಧದ ಅನುಭವದಿಂದಲೇ ಸಿದ್ಧಿಸಿದ್ದಾಗಿತ್ತು.
ಈ ಇಡೀ ಅನುಭವವನ್ನು ಬಿಡಿ ಮಾಡುವುದೆಂದರೆ ಹಾಗೆ ಮೊಳಕೆ ಬರಿಸುವ ಆ ಸೊಪ್ಪು ಯಾವುದು? ಸೆಗಣಿ ನೀರಿನ ಪ್ರಮಾಣವೆಷ್ಟು? ಬೀಜ ಮೊಳಕೆ ಬರಿಸ ಬೇಕಾದರೆ ಒತ್ತಡವೆಷ್ಟಿರಬೇಕು? ಎಂಬಿತ್ಯಾದಿಗಳನ್ನು ಲ್ಯಾಬಿನ ಒಳಗಡೆ ಸೂಕ್ಷ್ಮದರ್ಶಕದ ಮೂಲಕ ಅಧ್ಯಯನ ಮಾಡಿ ಆ ಸಮಪಾತ ಪಾಕಗಳನ್ನು ಸೂಕ್ಷ್ಮ ಪ್ರಮಾಣದಲ್ಲಿ ವಿಲೇವಾರಿ ಮಾಡುವುದು ಅದು ವಿಜ್ಞಾನದ ಕಸುಬುಗಾರಿಕೆ. ಇದೇ ವಿಜ್ಞಾನ ಎಷ್ಟೋ ಬಾರಿ ಜಗಲಿ ಚರ್ಚೆಯ ಸತ್ಯಗಳನ್ನು ಅಪ್ರಸ್ತುತ, ಅಪ್ರಯೋಜಕ ಎಂದು ಭಾವಿಸುವುದೂ ಇದೆ. ಈ ದೇಶಕ್ಕೆ ಪಾಶ್ಚಿಮಾತ್ಯರು ಬಂದಾಗ ಈ ನೆಲದ ಎಷ್ಟೋ ಇಂಥ ನೆಲದ ದೇಸೀ ಪಾರಂಪರಿಕ ಇಡೀ ಸತ್ಯವನ್ನು ಅಹಂಕಾರದಿಂದ ನೋಡಲಾರಂಭಿಸಿದರು. ಇವೆಲ್ಲ ಅವೈಜ್ಞಾನಿಕ, ಅಜ್ಞಾನ, ಅಪಾಯಕಾರಿ, ಮೂಢನಂಬಿಕೆಯದ್ದು ಎಂದರು. ಕ್ರಮಬದ್ಧವಲ್ಲದ್ದು ಎಂದು ಸಾರಿದರು. ಕೆಲವರು ಇಂಥ ಜಗಲಿ ಮೂಲದ ಸಾಂಸ್ಥಿಕ ಆಚರಣೆ ಅನುಭವಗಳನ್ನು ಸಂಶೋಧನಾ ಕೇಂದ್ರದ ಜ್ಞಾನವಾಗಿ ಪರಿವರ್ತಿಸುವುದಕ್ಕೆ, ದಾಖಲೀಕರಿಸುವುದಕ್ಕೆ ಶಿಕ್ಷಣ ವಿಜ್ಞಾನ ಶಾಲೆ ಕಾಲೇಜುಗಳು ಅಗತ್ಯವೆಂದು ಸಾರಿದರು. ಅನುಷ್ಠಾನಕ್ಕೆ ತಂದರು. ಆಚರಣಾತ್ಮಕ ಎಷ್ಟೋ ಜ್ಞಾನಗಳನ್ನು ಪುಸ್ತಕದಲ್ಲಿ ದಾಖಲಿಸಿ ಕ್ರಮಬದ್ಧಗೊಳಿಸಿದರು.
ರೈತಾಪಿಗಳ ಪ್ರತೀ ಊರು ಹಳ್ಳಿಯ ಮನೆ ಮನೆಯ ಜಗಲಿ, ಊರ ನಡುವಿನ ಕಟ್ಟೆಗಳು ಇಂತಹ ಆಚರಣಾತ್ಮಕ ಅನುಭವಗಳನ್ನು ಪರಸ್ಪರ ಹಂಚುತ್ತಿತ್ತು. ಇವು ಉಣ್ಣುವ ಅನ್ನ ನೆಮ್ಮದಿಯ ಸುಸ್ಥಿರ ಬದುಕು ಸ್ಥಾಪಿಸುವ ಕಥನವಾದರೆ, ಬದುಕನ್ನು ಸಂಸ್ಕರಿಸುವ, ಜೀವನಕ್ಕೆ ಅರ್ಥ ಕಲ್ಪಿಸುವ, ಮುಕ್ತಿಯ ದಾರಿ ತೋರಿಸುವ, ಒಳ್ಳೆಯ ಮನುಷ್ಯತ್ವ ಮಾನವೀಯತೆ ಭಕ್ತಿಯ ಚಹರೆಯನ್ನು ವ್ಯವಸ್ಥೆಗೊಳಿಸುವ ಚರ್ಚೆಗಳು ಕೂಡ ಇಲ್ಲಿ ಅಥವಾ ಇಂಥದ್ದೇ ವೇದಿಕೆಗಳಲ್ಲಿ ನಡೆದಿವೆೆ. ಇಂಥ ಮಾನವೀಯ ಅಧ್ಯಾತ್ಮ ಚರ್ಚೆಗಳು ನಡೆದ ಜಾಗವೇ ಅನುಭವ ಮಂಟಪ ಇರಬಹುದು. ಈಗ ಅಜ್ಜನ ಜಗಲಿಯನ್ನಾಗಲಿ, ಅನುಭವ ಮಂಟಪವನ್ನಾಗಲಿ ಅದು ಹೇಗಿತ್ತು, ಅದರ ಅಗಲವೆಷ್ಟು, ಉದ್ದವೆಷ್ಟು, ಅವುಗಳನ್ನು ಕಟ್ಟಿದ ಮೇಸ್ತ್ರಿಗಳು ಯಾರು?, ಗಾರೆ ಯಾವುದು, ಅದರ ಅಡಿಯಲ್ಲಿ ಯಾರಾದರೂ ಹೆಸರು ಕೆತ್ತಿದ್ದಾರೆಯೇ? ಇತ್ಯಾದಿಗಳನ್ನು ಭೌತಿಕ ನೆಲೆಯಲ್ಲಿ ಗುರುತಿಸಿ ವಿಶ್ಲೇಷಿಸುವುದು ಕಷ್ಟವೇ.
ಚರ್ಚಿತ ವಿಚಾರ ಅನುಭವಗಳ ಮೂಲಕ ಸಾಕ್ಷಿಗಳನ್ನು ಗುರುತಿಸುವುದು ಬೇರೆ, ಭೌತಿಕತೆಯ ಮೂಲಕ ದಾಖಲೆಗಳನ್ನು ಕಂಡುಹಿಡಿಯುವುದು ಬೇರೆ. ಎಷ್ಟೋ ಸಂದರ್ಭದಲ್ಲಿ ಇವು ಒಂದಕ್ಕೊಂದು ಪೂರಕವಾಗಿರುತ್ತದೆಯೇ ಹೊರತು ಬೇರೆ ಬೇರೆಯಾಗಿರುವುದಿಲ್ಲ. ಇವತ್ತು ಕಟ್ಟುವ ಜಗಲಿಗಳು ಮಂದಿರಗಳು ಮಂಟಪಗಳು ಹೆಸರನ್ನು ಬಯಸುತ್ತವೆ ಮತ್ತು ಅಲ್ಲಿ ಅದು ಹೆಸರನ್ನು ದಾಖಲಿಸುತ್ತವೆ. ಆದರೆ ತಮ್ಮ ತಮ್ಮ ವಚನಗಳಲ್ಲೇ ಹೆಸರು ಹಾಕದ ಕಾಲದ ಮನಸ್ಥಿತಿ, ಅನುಭವದ ಹಂಚಿಕೆಗಳು ಸ್ಥಾವರಗಳನ್ನು ತಬ್ಬಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ. ಹಾಗಂತ ಅನುಭವ ಮಂಟಪವೇ ಇರಲಿಲ್ಲ ಎನ್ನುವುದು ಅಕ್ಷಮ್ಯ ಅಪರಾಧ.
ಗ್ರಾಮ ಜೀವನದ ಬಗ್ಗೆ, ಹಳ್ಳಿಗಳಲ್ಲಿ ಬದುಕುವ ರೈತರ ಒಳ ಸಂಬಂಧಗಳು, ಕೃಷಿ ಅನುಭವಗಳ ಹಂಚಿಕೆ, ಸಮಸ್ಯೆ, ಕೊರತೆ, ಸಂಕಟಗಳು, ಪರಸ್ಪರ ವಸ್ತುಗಳ ವಿನಿಮಯ ಪದ್ಧತಿ, ಶ್ರಮ ನೋವು ಬೆವರು ಸಂಕಟಗಳ ಹಂಚಿಕೆ ಇತ್ಯಾದಿಗಳ ಕುರಿತು ನಾನು ನೂರಾರು ಅಂಕಣಗಳಲ್ಲಿ ಗ್ರಾಮ ಜನರ ಹಾವಭಾವಗಳನ್ನು ತೆರೆದಿಟ್ಟಿದ್ದೆ. ಯಾವ ರೀತಿ ಸ್ಥಾವರ ರೂಪಿ ಆ ಜಗಲಿಯನ್ನು ಈಗ ಗುರುತಿಸಲು, ಸ್ಪರ್ಶಿಸಲು ಸಾಧ್ಯವಿಲ್ಲವೋ ಹಾಗೆ ಅಲ್ಲಿ ಚರ್ಚೆಯಾದ ವಿಷಯಗಳನ್ನು ಇಂಥವರೇ ಇಂಥದ್ದೇ ದಿನ ಹೇಳಿದ್ದು ಎಂದುಮುಟ್ಟಲಾಗದು. ಅದನ್ನು ಇವರೇ ಹೇಳಿದ್ದು ಹೀಗೆಯೇ ಹೇಳಿದ್ದು ಎಂಬ ನಿಯಮಾನುಪಾತಗಳು ಆ ಅನುಭವದ ಹಂಚಿಕೆಗೆ ಇರಲಿಲ್ಲ. ಪರಿವಿಡಿ, ಮುನ್ನುಡಿ, ಪ್ರಸ್ತಾವನೆ ಸಮಾರೋಪ, ಅಧ್ಯಾಯಗಳ ಹಂಚಿಕೆ ಇವು ಯಾವುದೂ ಇಂತಹ ಅನುಭವದ ಕೂಡು ನೆಲೆಗಳಿಗೆ ಇರುವುದೇ ಇಲ್ಲ.ಆಗ ಜಗಲಿ ಚರ್ಚೆಗೆ ಬಂದು ಹೋದ ರಾಮಣ್ಣಗೌಡರು, ಸಂಕಪ್ಪ ಶೆಟ್ಟರಾಗಲಿ, ಗೆಣಸು ಕುಮೆರು, ಮಿತ್ತ ಮಜಲು ಇಂತಹ ಊರುಗಳಾಗಲಿ ನಿಜಾರ್ಥದಲ್ಲಿ ಇರಲಿಲ್ಲ. ಇವರೆಲ್ಲ ನಾನೇ ಸೃಷ್ಟಿಸಿದ ಪಾತ್ರಗಳು. ನನ್ನ ಅಪ್ಪಯ್ಯ ನನ್ನೊಳಗಡೆ ತುಂಬಿಸಿದ ಎಷ್ಟೋ ಅನುಭವಗಳನ್ನು ನಾನೇ ಓಡಾಡಿ ಗಳಿಸಿದ ಸತ್ಯಗಳು, ನನ್ನ ಅಜ್ಜ, ಹಿರಿಯ ಕೆಲಸದಾಳು ಇವರೆಲ್ಲರ ಪರಿಣತಿಯ ಪ್ರಜ್ಞೆ ನನ್ನೊಳಗಡೆ ತುಂಬಿ ಈ ಮೇಲಿನ ಪಾತ್ರಗಳ ಬಾಯಿಯಲ್ಲಿ ನಾನೇ ಹೇಳಿಸಿರಬಹುದು. ಹೀಗೆ ಖಾಲಿಜಗಲಿಯಲ್ಲಿ ಬಹು ಪಾತ್ರಗಳು ಮಾತನಾಡಿದ ಎಷ್ಟೋ ದೃಷ್ಟಾಂತಗಳಿವೆ. ದಿನಗಳಿವೆ. ಅವೆಲ್ಲವನ್ನು ಭೌತಿಕ ಕಾಲಮಾನಗಳಲ್ಲಿ ವಿಂಗಡಿಸುವುದು ವ್ಯರ್ಥ ಪ್ರಯತ್ನವೇ ಸರಿ. ವಚನಗಳಲ್ಲೇ ಹೆಸರು ಕೆತ್ತದ ವಚನಗಾರರು, ಬೌದ್ಧಿಕ ಹಕ್ಕನ್ನು ಪ್ರತಿಪಾದಿಸದ ನೆಲದವರು ನಮ್ಮ ನೆನಪಾಗಿ ಉಳಿಯಬೇಕೇ ಹೊರತು ಕಲ್ಲು, ಸ್ಥಾವರ, ಶಾಸನ, ಮಂಟಪ, ಜಗಲಿಯ ರೂಪದಲ್ಲಿ ಅಲ್ಲವೇ ಅಲ್ಲ.