ಉಳ್ಳವರ ಹಿತ ಕಾಯಲು ಉರುಳುತ್ತಿವೆ ಮರಗಳು!
ಹೈದರಾಬಾದ್ ಸರಕಾರದ ಕ್ರಮದಿಂದ ಆಕ್ರೋಶಿತರಾಗಿರುವ ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ ಎಪ್ರಿಲ್ 1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದು, ತರಗತಿಗಳನ್ನು ಬಹಿಷ್ಕರಿಸುತ್ತಿದೆ. ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಯಂತ್ರಗಳನ್ನು ತಕ್ಷಣವೇ ವಿಶ್ವವಿದ್ಯಾನಿಲಯದ ಆವರಣದಿಂದ ತೆಗೆದುಹಾಕಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಇದಲ್ಲದೆ, ಶಾಂತಿಯುತ ಪ್ರತಿಭಟನೆಯ ಮೇಲೆ ಪೊಲೀಸರ ಕಠಿಣ ಕ್ರಮವನ್ನು ಕೂಡ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.;

ಹೈದರಾಬಾದ್‌ನಲ್ಲಿ 400 ಎಕರೆ ಅರಣ್ಯವನ್ನು ಕಡಿದು ಹಾಕಲಾಗಿದೆ. ಇದು ಈಗ ತೆಲಂಗಾಣ ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪರಿಸರದ ಬಗ್ಗೆ ಗಮನ ಹರಿಸಬೇಕಿದ್ದ ಸರಕಾರವೇ ಪರಿಸರ ನಾಶಕ್ಕೆ ಮುಂದಾಗಿದೆ ಎಂಬುದು ವಿಪರ್ಯಾಸ.
ಹೈದರಾಬಾದ್ ವಿಶ್ವವಿದ್ಯಾನಿಲಯದ ಸುಮಾರು 2,300 ಎಕರೆ ಕ್ಯಾಂಪಸ್‌ನ ಪಕ್ಕದಲ್ಲಿರುವ ಗಚ್ಚಿ ಬಾವ್ಲಿ ಪ್ರದೇಶದಲ್ಲಿ 400 ಎಕರೆ ಕಾಡನ್ನು ಸರಕಾರ ಕಡಿದುರುಳಿಸಿದೆ.
ಸರಕಾರದ ಈ ಕ್ರಮದಿಂದ ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಪರಿಸರ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ವಿದ್ಯಾರ್ಥಿಗಳು ಮತ್ತು ತೆಲಂಗಾಣ ಸರಕಾರ ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯುತ್ತಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಕೂಡ ಈ ಗಚ್ಚಿ ಬಾವ್ಲಿ ಪ್ರದೇಶದಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರತಿಭಟನೆಯ ಧ್ವನಿಗಳು ಜೋರಾಗಿವೆ. ಹೈದರಾಬಾದ್ ಆಕಾಶದಲ್ಲಿ ಹಕ್ಕಿಗಳ ಆಕ್ರಂದನ ಕೇಳಿಸುತ್ತಿದೆ.
ಇಂಥ ದೊಡ್ಡ ಅಪರಾಧ ಏಕೆ ನಡೆಯುತ್ತಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಏಕೆ ಸರಕಾರ ಈ ಪಾಪ ಮಾಡುತ್ತಿದೆ?
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ ಎಪ್ರಿಲ್ 1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದು, ತರಗತಿಗಳನ್ನು ಬಹಿಷ್ಕರಿಸುತ್ತಿದೆ. ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಯಂತ್ರಗಳನ್ನು ತಕ್ಷಣವೇ ವಿಶ್ವವಿದ್ಯಾನಿಲಯದ ಆವರಣದಿಂದ ತೆಗೆದುಹಾಕಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಇದಲ್ಲದೆ, ಶಾಂತಿಯುತ ಪ್ರತಿಭಟನೆಯ ಮೇಲೆ ಪೊಲೀಸರ ಕಠಿಣ ಕ್ರಮವನ್ನು ಕೂಡ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಮಾರ್ಚ್ 30ರಂದು ಪೊಲೀಸರ ಸಮ್ಮುಖದಲ್ಲಿ ಕಾಡು ಕಡಿಯುವಾಗ, ವಿದ್ಯಾರ್ಥಿಗಳು ಅದನ್ನು ತಡೆಯಲು ಪ್ರಯತ್ನಿಸಿದಾಗ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಸರಕಾರ ಇದನ್ನೆಲ್ಲ ಏಕೆ ಮಾಡುತ್ತಿದೆ ಎಂಬುದಕ್ಕೆ ಉತ್ತರ, ದುಡ್ಡು.
ಈ 400 ಎಕರೆ ಭೂಮಿಯ ಪ್ರಸ್ತಾವಿತ ಹರಾಜಿನಿಂದ ರಾಜ್ಯ ಸರಕಾರಕ್ಕೆ ರೂ. 10,000 ಕೋಟಿಯಿಂದ 15,000 ಕೋಟಿ ವರೆಗೆ ಬರಬಹುದು ಎನ್ನಲಾಗುತ್ತಿದೆ.
ಆದರೆ ಸರಕಾರ ಇದಕ್ಕೆ ಕೊಡುತ್ತಿರುವ ವಿವರಣೆಯೇ ಬೇರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ರಾಜ್ಯ ಸರಕಾರ ಈ ಭೂಮಿಯ ಕಾನೂನುಬದ್ಧ ಮಾಲಕತ್ವ ಹೊಂದಿದೆ ಎಂದು ಹೇಳಲಾಗಿದೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಕಾನೂನು ವಿವಾದದಲ್ಲಿ, ಅಂತಿಮವಾಗಿ ಮೇ 2024ರಲ್ಲಿ ಕೋರ್ಟ್ ಸರಕಾರದ ಪರವಾಗಿ ತೀರ್ಪು ನೀಡಿದೆ. ಹೀಗಾಗಿ ಈ ಭೂಮಿಯ ಮೇಲೆ ಈಗ ಸರಕಾರಕ್ಕೆ ಸಂಪೂರ್ಣ ಹಕ್ಕು ಇದೆ ಎಂಬುದು ಸರಕಾರದ ವಾದ.
ಆದರೆ ಸರಕಾರದ ಈ ಹೇಳಿಕೆ ಸುಳ್ಳು ಎಂಬುದು ವಿದ್ಯಾರ್ಥಿಗಳ ತಕರಾರು.
ಈ ಭೂಮಿಯನ್ನು ವಿಶ್ವವಿದ್ಯಾನಿಲಯದ ಆವರಣದಿಂದ ಬೇರ್ಪಡಿಸಲು ಸರಕಾರ ಇನ್ನೂ ಯಾವುದೇ ಸಮೀಕ್ಷೆಯನ್ನು ಮಾಡಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.ವಿಶ್ವವಿದ್ಯಾನಿಲಯ ಆಡಳಿತ ಸಹ ವಿದ್ಯಾರ್ಥಿಗಳನ್ನು ಬೆಂಬಲಿಸಿದೆ ಮತ್ತು ಸರಕಾರದ ಹೇಳಿಕೆಗಳು ಸುಳ್ಳು ಎಂದು ಹೇಳಿದೆ. ಯಾವುದೇ ಸಮೀಕ್ಷೆಯನ್ನು ಮಾಡಲಾಗಿಲ್ಲ ಎಂದು ವಿಶ್ವವಿದ್ಯಾನಿಲಯ ಆಡಳಿತ ಹೇಳುತ್ತದೆ.
ಈ ಭೂಮಿಯನ್ನು ಅರಣ್ಯ ಪ್ರದೇಶವೆಂದು ಎಲ್ಲೂ ದಾಖಲಿಸಲಾಗಿಲ್ಲ. ಆದರೆ ಅದು ಸರಕಾರದ ಆಸ್ತಿ ಎನ್ನಲಾಗುತ್ತಿದೆ. ಸರಕಾರದ್ದೇ ಆಗಿದೆ ಎಂದೇ ಅಂದುಕೊಂಡರೂ, ಸರಕಾರ ಏನು ಬೇಕಾದರೂ ಮಾಡಬಹುದೆ? ಇದು ಸರಕಾರದ ಗೂಂಡಾಗಿರಿಯಾಗಲಿಲ್ಲವೆ?
ಅದೇ ರೇವಂತ್ ರೆಡ್ಡಿಯವರ ಸರಕಾರವೇ ತಾಯಿಯ ಹೆಸರಲ್ಲಿ ಒಂದು ಮರ ಎಂಬ ಬ್ಯಾನರ್ ಬರೆಸುತ್ತದೆ.
ಆದರೆ ಅದೇ ಸರಕಾರ ಇಡೀ ಅರಣ್ಯವನ್ನು ನಾಶಮಾಡಲು ಹೊರಡುತ್ತದೆ ಎಂಬುದೇ ದೊಡ್ಡ ವ್ಯಂಗ್ಯ.
ಇದು ಹೈದರಾಬಾದ್‌ನ ಕಥೆ ಮಾತ್ರವಲ್ಲ. ದೇಶದಲ್ಲಿ ಗರಿಷ್ಠ ಅರಣ್ಯ ಸಂಪತ್ತನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾದ ಛತ್ತೀಸ್‌ಗಡದಲ್ಲಿಯೂ ಸಹ, ಕಾಡುಗಳ ನಾಶದ ಬಗ್ಗೆ ನಾಗರಿಕರು ಮತ್ತು ಸರಕಾರದ ನಡುವೆ ಸಂಘರ್ಷ ನಡೆದಿದೆ. ಮರಗಳನ್ನು ಉಳಿಸಲು, ಬುಡಕಟ್ಟು ಜನಾಂಗದವರು ಪೊಲೀಸರ ಬಂದೂಕುಗಳ ಮುಂದೆ ನಿಲ್ಲಬೇಕಾಗಿದೆ.
ಈಗಲೂ ಅಲ್ಲಿ ಕಾಡನ್ನು ಉಳಿಸುವ ಹೋರಾಟ ನಡೆಯುತ್ತಿದೆ. ಛತ್ತೀಸ್‌ಗಡದ ಹಸ್ಡಿಯೊ ಅರಣ್ಯದಲ್ಲಿ ಅರಣ್ಯಗಳು ಎಷ್ಟರ ಮಟ್ಟಿಗೆ ನಾಶವಾಗುತ್ತಿವೆ ಎಂಬುದನ್ನು ಕಂಡರೇ ಆಘಾತವಾಗುತ್ತದೆ. ಈ ಪ್ರದೇಶದಲ್ಲಿ 137 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಅರಣ್ಯದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಮುಂದಿನ ದಿನಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುವುದು ಎಂದು ಹೇಳಲಾಗುತ್ತಿದೆ.
ಈ ಮರಗಳನ್ನು ಕಲ್ಲಿದ್ದಲು ಗಣಿಗಳ ನಿರ್ಮಾಣಕ್ಕಾಗಿ ಕಡಿಯಲಾಗುತ್ತಿದೆ. ಅದಾನಿ ಗ್ರೂಪ್ ನಡೆಸುತ್ತಿರುವ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮಕ್ಕೆ ಹಂಚಿಕೆಯಾಗಿರುವ ಗಣಿ ಅದು.
ಆದರೆ ಯಾರೂ ಅದರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ.
ಭಾರತೀಯ ಗಣಿ ಬ್ಯೂರೋದ ಪ್ರಕಾರ, ಹಸ್ಡಿಯೊ ಅರಣ್ಯದಲ್ಲಿ ಕಲ್ಲಿದ್ದಲಿನ ಬೃಹತ್ ನಿಕ್ಷೇಪಗಳಿವೆ. ಇಲ್ಲಿ ಸುಮಾರು 5,500 ಮಿಲಿಯನ್ ಟನ್ ಕಲ್ಲಿದ್ದಲು ನಿಕ್ಷೇಪವಿದೆ ಎಂದು ಅಂದಾಜಿಸಲಾಗಿದೆ. ಈ ಕಲ್ಲಿದ್ದಲೇ ಈಗ ಹಸ್ಡಿಯೊದ ಅತಿದೊಡ್ಡ ಸಮಸ್ಯೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಮತ್ತು ಪರಿಸರ ಕಾರ್ಯಕರ್ತರು ಹೇಳುತ್ತಾರೆ.
ಸರಕಾರಗಳು ಮತ್ತು ಕೈಗಾರಿಕೋದ್ಯಮಿಗಳು ಕಲ್ಲಿದ್ದಲು ಗಣಿಗಾರಿಕೆಗೆ ಮುಂದಾಗಿರುವಾಗ, ಪರಿಸರ ಕಾರ್ಯಕರ್ತರು, ಸ್ಥಳೀಯ ಜನರು ಮತ್ತು ಬುಡಕಟ್ಟು ಜನರು ಇದನ್ನು ವಿರೋಧಿಸುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ಸಂಘರ್ಷದ ಪರಿಸ್ಥಿತಿ ಇದೆ.
ಇದೆಲ್ಲವೂ ಕಾಂಗ್ರೆಸ್ ಸರಕಾರವಿದ್ದಾಗ ಶುರುವಾಗಿ, ಈಗ ಬಿಜೆಪಿ ಅವಧಿಯಲ್ಲಿ ಮುಂದುವರಿದಿದೆ.
ಇಲ್ಲೆಲ್ಲ ಹೀಗೆ ನಡೆಯುತ್ತಿರುವಾಗ, ಇದಾವುದೂ ಸುದ್ದಿಯಾಗುವುದೇ ಇಲ್ಲ. ಪರಿಸರ ಮತ್ತು ಮಾಲಿನ್ಯದ ಬಗ್ಗೆ ಚರ್ಚೆಯಾಗುವುದು, ದಿಲ್ಲಿಯಲ್ಲಿ ಚಳಿಗಾಲ ಬಂದಾಗ.
ದಿಲ್ಲಿಯ ರಿಡ್ಜ್ ಪ್ರದೇಶದಲ್ಲಿ ಅಂದರೆ ಅರಣ್ಯ ಪ್ರದೇಶದಲ್ಲಿ, ರಸ್ತೆ ವಿಸ್ತರಣೆ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿಯಲಾಯಿತು. ಈ ಪ್ರದೇಶದಲ್ಲಿ ಒಂದೇ ಒಂದು ಮರವನ್ನು ಕಡಿಯಲು ಬಯಸಿದರೆ, ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ವಿಷಯ ಸುಪ್ರೀಂ ಕೋರ್ಟ್ ತಲುಪುವ ಹೊತ್ತಿಗೆ, ದಿಲ್ಲಿಯಲ್ಲಿ ನೂರಾರು ಮರಗಳನ್ನು ಬಲಿ ನೀಡಲಾಗಿತ್ತು. ಈ ಇಡೀ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೂ ಸಮನ್ಸ್ ಜಾರಿ ಮಾಡಿತ್ತು. ಮರಗಳನ್ನು ಕಡಿಯಲು ಸುಪ್ರೀಂ ಕೋರ್ಟ್‌ನ ಅನುಮತಿ ಅಗತ್ಯವಿದೆ ಎಂದು ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದರು.
ಅಂದರೆ, ನಿಯಮಗಳನ್ನು ಜಾರಿಗೆ ತರುವವರಿಗೇ ನಿಯಮಗಳು ತಿಳಿದಿಲ್ಲ.
ದಿಲ್ಲಿ, ಹೈದರಾಬಾದ್ ಅಥವಾ ಛತ್ತೀಸ್‌ಗಡದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ, ಪ್ರತಿದಿನ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಲೂಟಿ ನಡೆಯುತ್ತಿದೆ.
ಹಾಗಾದರೆ, ಇಂಥ ನಾಶವನ್ನು ನಿಲ್ಲಿಸಲು ಸಾಧ್ಯವಿಲ್ಲವೆ?
ಸಾಧ್ಯವಿದೆ. ಸರಕಾರ ಅಥವಾ ಪರಿಸರವನ್ನು ಉಳಿಸಲು ರಚಿಸಲಾದ ಸಂಸ್ಥೆಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕು. ಈ ಸಂಸ್ಥೆಗಳಲ್ಲಿ ದೊಡ್ಡ ಹೆಸರು ಎನ್‌ಜಿಟಿ ಅಂದರೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಪರಿಸರ ಸಚಿವಾಲಯ.
ಆದರೆ ಈಗ ನಮ್ಮ ಸರಕಾರ ಕಲ್ಲಿದ್ದಲು ಹೊರತೆಗೆಯಲು ಪ್ರಸಿದ್ಧರಾಗಿರುವ ಕೈಗಾರಿಕೋದ್ಯಮಿ ಜೊತೆ ಸ್ನೇಹ ಹೊಂದಿದೆ. ಹೀಗಿರುವಾಗ ಆ ಸರಕಾರದ ಪರಿಸರ ಸಚಿವಾಲಯದಿಂದ ಏನನ್ನು ನಿರೀಕ್ಷಿಸಬಹುದು?
ಇನ್ನು ಎನ್‌ಜಿಟಿ ಅರೆ ನ್ಯಾಯಾಂಗ ಸಂಸ್ಥೆಯಾಗಿದೆ. ಅಂದರೆ ಜನರಿಗೆ ಸಮನ್ಸ್ ನೀಡುವ, ದಂಡ ವಿಧಿಸುವ ಅಥವಾ ಉತ್ತರಗಳನ್ನು ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿರುವ ಸಂಸ್ಥೆ. ಮರಗಳನ್ನು ಕಡಿಯುವಂತಹ ಪರಿಸರ ವಿರೋಧಿ ಚಟುವಟಿಕೆಗಳ ಮೇಲೂ ಎನ್‌ಜಿಟಿ ಭಾರೀ ದಂಡ ವಿಧಿಸಬಹುದು.
ಆದರೆ ಪ್ರಸ್ತುತ, ಈ ಸಂಸ್ಥೆಯ ನಿಧಾನಗತಿಯನ್ನು ನೋಡಿದರೆ, ಬಹುಶಃ ಇದರ ಗತಿ ಕೂಡ ಸಿಬಿಐ, ಚುನಾವಣಾ ಆಯೋಗ, ಈ.ಡಿ. ಮತ್ತು ಎನ್‌ಸಿಬಿಯಂತಹ ಸಂಸ್ಥೆಗಳ ಹಾಗೆಯೇ ಆದಂತಿದೆ.
2017ರಲ್ಲಿ ಎನ್‌ಜಿಟಿ ಶ್ರೀ ರವಿಶಂಕರ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಮೊದಲು 120 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಆದರೆ ಆನಂತರ ಅದನ್ನು 5 ಕೋಟಿಗೆ ಇಳಿಸಲಾಗುತ್ತದೆ.
ಇದೆಲ್ಲವೂ ಒಂದೆಡೆ ನಡೆಯುತ್ತಿರುವಾಗ, ಇದರಲ್ಲಿ ನಮ್ಮದೇ ತಪ್ಪಿನ ಪಾಲೂ ಇದೆ ಎನ್ನುವುದನ್ನು ಜನರು ಮರೆಯಬಾರದು.
ಎಲ್ಲದಕ್ಕೂ ಹಾಸ್ಯಮಾಡಿ, ಮೀಮ್ಸ್ ಮಾಡಿ ನಕ್ಕು ಮರೆತುಬಿಡುವ ಇವತ್ತಿನ ಪ್ರವೃತ್ತಿ ಇಂಥ ಗಂಭೀರ ವಿಷಯಗಳಿಗೆ ಸ್ಪಂದಿಸಬೇಕಿರುವ ರೀತಿಯಿಂದಲೇ ನಮ್ಮನ್ನು ವಿಮುಖರನ್ನಾಗಿ ಮಾಡಿದೆ.
ಆದರೆ ಪ್ರಶ್ನಿಸಬೇಕಿದೆ. ಮತ ಪಡೆದು ಅಧಿಕಾರಕ್ಕೇರುವವರು ಮರಗಳ ನಾಶಕ್ಕೆ ನಿಂತರೆ, ಅಂಥವರನ್ನು ಹಿಡಿದು ಕೇಳುವ ಅವಶ್ಯಕತೆಯಿದೆ.