ಕುಂದಾಪುರ, ಬೈಂದೂರು ಕಡಲಾಮೆಗಳ ‘ಹಾಟ್‌ಸ್ಪಾಟ್’!

Update: 2025-04-07 10:34 IST
ಕುಂದಾಪುರ, ಬೈಂದೂರು ಕಡಲಾಮೆಗಳ ‘ಹಾಟ್‌ಸ್ಪಾಟ್’!
  • whatsapp icon

ಕುಂದಾಪುರ: ಪ್ರತಿ ವರ್ಷಾಂತ್ಯದ ತಿಂಗಳು ಬಂತೆಂದರೆ ಕಡಲಾಮೆಗಳು ಮೊಟ್ಟೆಯಿಡಲು ಉಡುಪಿ ಜಿಲ್ಲೆಯ ಕಡಲ ಕಿನಾರೆಯತ್ತ ಮರಳಿ ಬರುತ್ತವೆ. ಅಂತೆಯೇ ಈ ವರ್ಷ ಕೂಡ ಕುಂದಾಪುರದ ಕೋಡಿ, ಬೈಂದೂರು ವಲಯದ ಮರವಂತೆ ಹಾಗೂ ತಾರಾಪತಿ ಕಡಲತೀರಕ್ಕೆ ಆಗಮಿಸಿದ ಕಡಲಾಮೆಗಳು ಮೊಟ್ಟೆಯಿಟ್ಟು ನೂರಾರು ಸಂಖ್ಯೆಗಳಲ್ಲಿ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರಿವೆ. ಈ ಬಾರಿ ಬೈಂದೂರು ಭಾಗದಲ್ಲಿ ಕಡಲಾಮೆಗಳ ಓಡಾಟ ಹಾಗೂ ಹ್ಯಾಚರಿ ನಿರ್ಮಾಣ ಇತಿಹಾಸದಲ್ಲೆ ಮೊದಲು.

ಕಡಲಾಮೆಗಳು ಆರೋಗ್ಯಪೂರ್ಣ ಸಮುದ್ರದ ಜೀವಕೊಂಡಿಯಾಗಿವೆ. ಕಡಲಿನಲ್ಲಿ ಜೆಲ್ಲಿ ಫಿಶ್‌ಗಳ ಸಂಖ್ಯೆ ವೃದ್ಧಿಯಾಗದಂತೆ ಕಾಯುವುದರೊಂದಿಗೆ ಸಮುದ್ರದ ಜೈವಿಕ ವ್ಯವಸ್ಥೆಯನ್ನು ಸಮತೋಲನದಲ್ಲಿಡುವ ಮೂಲಬೇರು ಈ ಕಡಲಾಮೆಗಳು. ಒಟ್ಟು ಏಳು ಬಗೆಯ ಸಮುದ್ರ ಆಮೆಗಳಿದ್ದು, ಇವುಗಳಲ್ಲಿ ಕರ್ನಾಟಕದಲ್ಲಿ ಆಲಿವ್ ರೀಡ್ಲೆ ಹೆಚ್ಚಾಗಿ ಕಂಡುಬರುವ ಕಡಲಾಮೆ ಪ್ರಭೇದ ಎನ್ನಲಾಗಿದೆ.

ಸಂತಾನೋತ್ಪತ್ತಿ :

ಕಡಲಾಮೆಯ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಅದ್ಭುತ ಎಂದು ಬಣ್ಣಿಸಲಾಗುತ್ತದೆ. ನವೆಂಬರ್‌ನಿಂದ ಜನವರಿವರೆಗೆ ಮೊಟ್ಟೆಯಿಡಲು ಸಮುದ್ರ ತೀರದತ್ತ ವಯಸ್ಕ ಹೆಣ್ಣಾಮೆ ಸಾಗಿ ಬರುತ್ತವೆ. ಚಂದ್ರನ ಸುತ್ತ ವೃತ್ತಾಕಾರದ ಕೊಡೆಯಂಥ ಚಿತ್ತಾರ ಮೂಡಿದ ರಾತ್ರಿ ಆಮೆ ಮೊಟ್ಟೆಯಿಡಲು ಬರುತ್ತವೆನ್ನುವುದು ಹಿರಿಯರ ನಂಬಿಕೆ. ಸಮುದ್ರದ ಅಲೆ ಬೀಳುವ ಜಾಗದಿಂದ ಸುಮಾರು 50ರಿಂದ 100 ಅಡಿ ದೂರದ ಪ್ಲಾಸ್ಟಿಕ್ ಕಸಗಳಿರದ ತೀರ ಆಯ್ದುಕೊಳ್ಳುವ ಆಮೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತವೆ. ನಂತರ ತನ್ನ ಕಾಲುಗಳ ಸಹಾಯದಿಂದ ಮರಳು ಅಗೆದು 3-4 ಅಡಿ ಹೊಂಡದೊಳಗೆ 100ರಿಂದ 120 ರಷ್ಟು ಮೊಟ್ಟೆಗಳನ್ನಿಟ್ಟು ಮರಳನ್ನು ಪುನಃ ಮುಚ್ಚುತ್ತವೆ.

ತಾನು ಮೊಟ್ಟೆಯಿಟ್ಟ ಕುರುಹು ಯಾರಿಗೂ ಸಿಗದಂತೆ ತನ್ನ ಹೆಜ್ಜೆ ಗುರುತು ಆಚೀಚೆ ಗೊಂದಲಕಾರಿಯಾಗಿ ಮೂಡಿಸಿ ಕಡಲೊಡಲನ್ನು ಸೇರುತ್ತವೆ. ಸ್ಥಳೀಯ ಹಿರಿಯ ಅನುಭವಿಗಳಿಗೆ ಹೊರತುಪಡಿಸಿದರೆ ಮತ್ಯಾರಿಗೂ ಆಮೆ ಮೊಟ್ಟೆಯಿಟ್ಟ ಜಾಗವನ್ನು ಗುರುತಿ ಸುವುದು ಸುಲಭ ಸಾಧ್ಯವಿಲ್ಲ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಮಾಹಿತಿ ನೀಡಿದರು.

ಮೊಟ್ಟೆಯೊಡೆದ ಬಳಿಕದ ಪ್ರಕ್ರಿಯೆ :

ಮೊಟ್ಟೆಯಿಟ್ಟ ದಿನದಿಂದ 40-60 ದಿನದೊಳಗೆ ಮೊಟ್ಟೆಯೊಡೆದು ಹೊರಬರುವ ಆಮೆ ಮರಿಗಳು ಸಮುದ್ರ ಸೇರುತ್ತವೆ. ಹುಟ್ಟುವ ಮರಿ ಗಂಡೋ ಅಥವಾ ಹೆಣ್ಣೋ ಎಂಬುದು ನಿರ್ಧಾರವಾಗುವುದು ಸೂರ್ಯನಿಂದ ಎನ್ನುವುದು ಇಲ್ಲಿ ಪ್ರಕೃತಿಯ ವೈಶಿಷ್ಟ್ಯಗಳಲ್ಲೊಂದು. ಮೊಟ್ಟೆಯ ಮೇಲೆ ಬೀಳುವ ಉಷ್ಣತೆ ಮೇಲೆ ಲಿಂಗ ನಿರ್ಧಾರವಾಗುತ್ತದೆ ಅನ್ನುವುದು ಸೋಜಿಗದ ವಿಚಾರ.

ಮೊಟ್ಟೆಗಳಿಗೆ ಕಾವು ಕೊಡುವ ಸೂರ್ಯನ ಉಷ್ಣತೆ ಇದರ ಮೇಲೆ 27.7 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದರೆ ಹುಟ್ಟುವ ಮರಿಗಳೆಲ್ಲಾ ಗಂಡಾಗುತ್ತವೆ. 31 ಡಿಗ್ರಿ ಸೆಲ್ಸಿಯಸ್‌ಗಿಂತ ಜಾಸ್ತಿಯಿದ್ದರೆ ಹುಟ್ಟುವ ಮರಿಗಳೆಲ್ಲಾ ಹೆಣ್ಣಾಗುತ್ತವೆ ಎನ್ನುವುದು ವೈಜ್ಞಾನಿಕ ವಾಸ್ತವ ಎನ್ನುತ್ತಾರೆ ಬಲ್ಲವರು.

ಎಲ್ಲವೂ ಕೌತುಕ! :

50ರಿಂದ 60 ದಿನ ದಾಟಿದ ಮೇಲೆ ಪೂರ್ಣ ಬಲಿತ ಮರಿಗಳು ಮೊಟ್ಟೆಯೊಡೆದು ಹೆಚ್ಚಾಗಿ ರಾತ್ರಿ ಚಂದ್ರನ ಬೆಳದಿಂಗಳು ಮೂಡಿದ ಮೇಲೆ ಹೊರಬರುತ್ತವೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ರಾತ್ರಿ ಸಮುದ್ರ ಸೇರುವಂತೆ ಸಮಯ ಆಯ್ದುಕೊಳ್ಳುತ್ತವೆ. ಮರಳಿನ ಅಡಿಯಲ್ಲಿ ಹೂತಿರುವ ಪ್ರಪಂಚ ಕಣ್ಣಿಟ್ಟು ನೋಡದ ಆಮೆ ಮರಿಗಳು 4-5 ಅಡಿಯಷ್ಟಿರುವ ಮರಳು ರಾಶಿ ಸರಿಸಿ ಹೊರ ಬಂದು ಬೆಳದಿಂಗಳ ಬೆಳಕಿಗೆ ಕರೆಯುವ ಕಡಲ ಅಲೆಗಳ ಸೆಳೆತದತ್ತ ಸಾಗುತ್ತವೆ.

ಹ್ಯಾಚರಿಯಿಂದ 50-100 ಅಡಿಗಳಷ್ಟು ದೂರ ಸಾಗಿ ಸಮುದ್ರ ಸೇರುವುದು ಈ ಮರಿಗಳಿಗೆ ದೊಡ್ಡ ಸಾಹಸವೇ. ಕಡಲು ಸೇರಿದ ಮೇಲೆ ಕಣ್ಣೆದುರು ಕಾಣುವ ರಾಕ್ಷಸಾಕಾರದ ಅಲೆಗಳನ್ನು ದಾಟಲೇಬೇಕು. ಆಳ ಸಮುದ್ರ ಸಾಗುವವರೆಗೆ ಮೀನುಗಳು, ಏಡಿಯಿಂದ ಹಿಡಿದು ಬಲೆ, ಪ್ಲಾಸ್ಟಿಕ್ ಹೀಗೆ ಸಾವಿರ ಅಡ್ಡಿಗಳು ಅವು ಗಳಿಗೆ ಎದುರಾಗುತ್ತವೆ. ಇವೆಲ್ಲವನ್ನೂ ಮೀರಿ ಕೆಲವೇ ಆಮೆಗಳು ಮಾತ್ರ ಬದುಕು ಕಾಣುತ್ತವೆ.

ಕಡಲಾಮೆ ರಕ್ಷಣೆಗೆ ‘ಹ್ಯಾಚರಿ ನಿರ್ಮಾಣ’ :

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಅವೈಜ್ಞಾನಿಕ ಮೀನುಗಾರಿಕೆ, ಪ್ಲಾಸ್ಟಿಕ್ ಕಸ-ತ್ಯಾಜ್ಯಗಳು, ಇತರ ಪರಿಸರ ವಿರೋಧಿ ಚಟುವಟಿಕೆಗಳಿಂದ ಈ ಆಲಿವ್ ರೀಡ್ಲೆ ಕಡಲಾಮೆ ಅಳಿವಿನಂಚಿಗೆ ತಲುಪಿವೆ. ಅಲ್ಲದೆ ಕಡಲ ತೀರದಲ್ಲಿ ನಾಯಿಗಳು, ಇತರ ಪ್ರಾಣಿ ಪಕ್ಷಿಗಳಿಂದ ಕಡಲಾಮೆ ಸಂತತಿಗೆ ಭಾರೀ ಅಪಾಯ ಎದುರಾಗುತ್ತಿದೆ. ಇದಕ್ಕಾಗಿ ಜಿಲ್ಲೆಯ ಅರಣ್ಯ ಇಲಾಖೆಯವರು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಕಡಲಾಮೆ ರಕ್ಷಣೆಗೆ ‘ಹ್ಯಾಚರಿ’ ನಿರ್ಮಾಣ ಮಾಡುತ್ತಿದ್ದಾರೆ.

ಕಡಲಾಮೆಗಳು ಮೊಟ್ಟೆ ಇಟ್ಟ ಸ್ಥಳದಲ್ಲಿ ಒಂದು ಅಡಿ ಆಳದಲ್ಲಿ ನಾಲ್ಕು ಕಡೆ ರಕ್ಷಣಾ ಬೇಲಿಗಳಂತೆ ಬೋನಿನ ಮಾದರಿಯಲ್ಲಿ ಮೇಲ್ಭಾಗದಲ್ಲೂ ಬಲೆ ಅಳವಡಿಸಿ ಮೊಟ್ಟೆಗಳನ್ನು ಸಂರಕ್ಷಿಸಲಾಗುತ್ತದೆ. ನಡೆದಾಡುವ ಜನರಿಗೆ ಹ್ಯಾಚರಿ ಬಗ್ಗೆ ಅರಿವು ಮೂಡಿಸಲು ಸೂಚನಾ ಫಲಕಗಳನ್ನು ಹ್ಯಾಚರಿಗೆ ಅಳವಡಿಸಿ ನಿತ್ಯ ಅದನ್ನು ಅರಣ್ಯ ವೀಕ್ಷಕ ಸಿಬ್ಬಂದಿ ಕಾಯುತ್ತಿರುತ್ತಾರೆ.

ಈ ಬಾರಿ ಕುಂದಾಪುರ, ಬೈಂದೂರು, ಉಡುಪಿ ಯಲ್ಲಿ ಅಂದಾಜು 23 ಹ್ಯಾಚರಿಗಳನ್ನು ನಿರ್ಮಿಸಲಾಗಿದ್ದು, ಈಗಾಗಾಲೇ ಸಾವಿರಾರು ಕಡಲಾಮೆ ಮರಿಗಳು ಸಮುದ್ರ ಸೇರಿವೆ. ಅಲ್ಲದೆ, ಪ್ರತಿವರ್ಷ ಮೊಟ್ಟೆಯಿಟ್ಟು ಹ್ಯಾಚರಿ ನಿರ್ಮಿಸುವ ಆಯಕಟ್ಟಿನ ಸ್ಥಳದಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರು, ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮ ವಹಿಸಿದೆ.

ಬೈಂದೂರಿನಲ್ಲಿ ಮೊದಲ ಬಾರಿ ಮೊಟ್ಟೆಗಳ ಸಂರಕ್ಷಣೆ :

ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ವ್ಯಾಪ್ತಿಗೆ ಬರುವ ಉಡುಪಿ ಹಾಗೂ ಕುಂದಾಪುರ ವಲಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸುವ (ಹ್ಯಾಚರಿ ನಿರ್ಮಾಣ) ಕೆಲಸ ನಡೆದಿತ್ತು. ಆದರೆ ಬೈಂದೂರು ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ 300ಕ್ಕೂ ಅಧಿಕ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಸೇರಿಸಲಾಗಿದೆ.

ಬೈಂದೂರು ವ್ಯಾಪ್ತಿಯಲ್ಲಿ ಸಾರ್ವಜನಿಕರು ಮತ್ತು ಶಾಸಕರ ನೇತೃತ್ವದಲ್ಲಿ ಕ್ಲೀನ್ ಕಿನಾರ ಮೊದಲಾದ ಸಂಘಟನೆಗಳ ವತಿಯಿಂದ ಸಮುದ್ರ ತೀರದ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಈ ಕಾರಣದಿಂದ ಕಡಲಾಮೆಗಳು ಮೊಟ್ಟೆ ಇರಿಸಲು ಬೈಂದೂರು ವ್ಯಾಪ್ತಿಗೂ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉಡುಪಿ, ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಲಾಗಿದೆ. ಕಡಲಾಮೆಗಳ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು.

-ಗಣಪತಿ ಕೆ., ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಯೋಗೀಶ್ ಕುಂಭಾಶಿ

contributor

Similar News