ಒಳಮೀಸಲಾತಿ ದತ್ತಾಂಶಗಳಿಗಾಗಿ ಉದ್ದೇಶಿತ ಸಮೀಕ್ಷೆ ಸಾಮೂಹಿಕ ಹೊಣೆಗಾರಿಕೆಯಡಿ ಅನುಷ್ಠಾನವಾಗಲಿ

ಮಾಹಿತಿ ಸಂಗ್ರಹಕರು ಸ್ವಲ್ಪ ಕಣ್ಣು ಮುಚ್ಚಿದರೂ ಸಮೀಕ್ಷೆಗಳಲ್ಲಿ ಈ ಸೂಕ್ಷ್ಮ ಜಾತಿಗಳು ಮಂಗಮಾಯ ಆಗಲೂ ಬಹುದು. ಜಾತಿಗಳನ್ನು ಗುರುತಿಸುವಲ್ಲಿ ಎಡವಿದರೆ ಇನ್ನಷ್ಟು ಅಧ್ವಾನಗಳು ಸೇರಿಕೊಳ್ಳುತ್ತವೆ. ರಾಜ್ಯದ ನಗರ ಪ್ರದೇಶಗಳು 5,856 ಚ.ಕಿ. ಮೀಟರುಗಳಲ್ಲಿ ಹಬ್ಬಿದೆ. ಇಲ್ಲಿರುವ 316 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 6,609 ವಾರ್ಡ್‌ಗಳ ಒಳಗೆ ಪರಿಶಿಷ್ಟರ ಹುಡುಕಾಟ ಯಕ್ಷ ಪ್ರಶ್ನೆಯಾಗದು. ಈ ಕಾರ್ಯಗಳು ಪ್ರಾಮಾಣಿಕ ಮತ್ತು ಶ್ರದ್ಧೆಯ ಕಾಯಕಗಳಡಿ ಒಂದು ಸಂಘಟಿತ ಕಾರ್ಯ ಚಟುವಟಿಕೆಗಳಾದರೆ ಉದ್ದೇಶಿತ ಗುರಿ ಮುಟ್ಟಲು ಸಾಧ್ಯವಿದೆ ಅಥವಾ 1995-96ರಲ್ಲಾದ ಎಡವಟ್ಟುಗಳು ಈ ಸಮೀಕ್ಷೆಯಲ್ಲೂ ಮರುಕಳಿಸಿದರೆ ಜನರ ತೆರಿಗೆ ಹಣವನ್ನು ಹೊಳೆಯಲ್ಲಿ ಚೆಲ್ಲಿದಂತಾಗುತ್ತದೆ. ಹಾಗಾಗಿ ಸಮೀಕ್ಷಾ ಪೂರ್ವಸಿದ್ಧತೆಗಳು ತಪಸ್ಸಿನಂತೆ ಪ್ರತೀ ಹಂತಗಳಲ್ಲಿಯೂ ಜರುಗಬೇಕಿದೆ.;

Update: 2025-04-03 12:15 IST
ಒಳಮೀಸಲಾತಿ ದತ್ತಾಂಶಗಳಿಗಾಗಿ ಉದ್ದೇಶಿತ ಸಮೀಕ್ಷೆ ಸಾಮೂಹಿಕ ಹೊಣೆಗಾರಿಕೆಯಡಿ ಅನುಷ್ಠಾನವಾಗಲಿ
  • whatsapp icon

ನ್ಯಾಯಮೂರ್ತಿ ನಾಗಮೋಹನ್ ದಾಸ್ ವಿಚಾರಣೆ ಆಯೋಗ ಒಳ ಮೀಸಲಾತಿಯ ಮಧ್ಯಂತರ ವರದಿ ಗಂಟನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ, ಅವುಗಳೆಲ್ಲವೂ ಬಹುನಿರೀಕ್ಷಿತ ಶಿಫಾರಸುಗಳಂತಿವೆ. ಸರಕಾರದ ಆಯೋಗ ನಿಯೋಜನೆ ಆದೇಶದಲ್ಲಿಯೂ 2011 ಜನಗಣತಿ ಪರಿಗಣಿಸಲು ಬಯಸಿತ್ತು. ಇದ್ಯಾವುದೂ ಬೇಡ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ದತ್ತಾಂಶ ಸಾಕೆನ್ನುವವರಿಗೆ ಕೊರತೆಯಿರಲಿಲ್ಲ. ಏತನ್ಮಧ್ಯೆ ಮಾಧುಸ್ವಾಮಿ ಶಿಫಾರಸುಗಳೇ ವೈಜ್ಞಾನಿಕವಾಗಿವೆಂದು ಕೊಂಡಾಡುವವರು ಇದ್ದಾರೆ. ಈ ಹಿಂದೆ, ರಾಜ್ಯ ಸರಕಾರ 1995-96ರಲ್ಲೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ‘ಸಮಾಜೋ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ ಕೈಗೊಂಡಿತ್ತು. ಅದನ್ನು ಕಾಣದ ಕೈಗಳು ದಾರಿತಪ್ಪಿಸಿದ ಕಾರಣಕ್ಕೆ ಬೇಕಿಲ್ಲದ ಒಂದು ಸಾಮಾನ್ಯ ಅಧ್ಯಯನ ವರದಿಯಾಗಿ ಮೂಡಿ ಮೂಲೆಗುಂಪಾಗಿದೆ. ಸಮೀಕ್ಷೆ (Survey) ಮತ್ತು ಜನಗಣತಿ (Census) ಪರಿಭಾವನೆಗಳೆರಡು ವಿಭಿನ್ನವಾಗಿರುತ್ತವೆ. ಭಾರತದಲ್ಲಿ 10ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ರಾಷ್ಟ್ರೀಯ ಮುನ್ನೆಲೆಯಲ್ಲಿ ಸಮಗ್ರವಾದ ಅಂಕಿ-ಅಂಶಗಳನ್ನು ಪ್ರತಿಪಾದಿಸಿದರೆ, ಸಮೀಕ್ಷೆ ಕೆಲವೊಂದು ಉದ್ದೇಶಗಳಿಗಾಗಿ ಕೈಗೊಳ್ಳಲಾಗುತ್ತದೆ. ಇಲ್ಲಿಯ ತನಕ ಹಿಂದುಳಿದ ವರ್ಗಗಳ ಆಯೋಗಗಳು ಕೇವಲ ಪ್ರಾತಿನಿಧಿಕ ಸಮೀಕ್ಷೆ ನಡೆಸಿವೆ. ರಾಜ್ಯ ಸರಕಾರ 2015ರಲ್ಲಿ ಅದರ ಕೊರತೆ ನೀಗಲು ‘ಸಮಗ್ರ ಸಮಾಜೋ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ ಕೈಗೊಂಡಿತ್ತು. ಇದನ್ನು ನ್ಯಾಯಾಲಯದಲ್ಲಿಯೂ ಪ್ರಶ್ನಿಸಲಾಗಿತ್ತು. ಅದಕ್ಕೆ ಎಲ್ಲಿಲ್ಲದ ವಕ್ರದೃಷ್ಟಿಯ ಕಾಟ ಹೆಚ್ಚಾಗಿ ಖಜಾನೆಯ ಬಾಗಿಲಾಚೆ ಬರಲು ಕಾದು ಕಾದು ನಿದ್ರಿಸುತ್ತಿದೆ. ಒಂದುವೇಳೆ, ಅದರ ದತ್ತಾಂಶಗಳು ಲಭ್ಯವಾಗಿದ್ದರೆ ಪರಿಶಿಷ್ಟರ ಒಳ ಮೀಸಲಾತಿಗೆ ಇನ್ನೊಂದು ಸಮೀಕ್ಷೆ ಅಗತ್ಯ ಬೀಳುತ್ತಿರಲಿಲ್ಲ ಅಥವಾ 2021 ಜನಗಣತಿ ವಿಳಂಬವಾಗಿಯಾದರೂ ನಡೆದಿದ್ದರೆ ನಿಖರವಾದ ದತ್ತಾಂಶ ಸಿಗುತ್ತಿತ್ತು. ಕೇಂದ್ರ ಸರಕಾರ ಜನಗಣತಿ ನಡೆಸಲು ಮೀನಾಮೇಷವೆಣಿಸುತ್ತಿದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪರಿಶಿಷ್ಟ ಜಾತಿಗಳು ಹೆಚ್ಚು ಕಡಿಮೆ ಮಾದಿಗ ಮತ್ತು ಮಾಲ ಸಂಬಂಧಿತ ಉಪಜಾತಿಗಳಾಗಿವೆ. ಆದರೆ ಕರ್ನಾಟಕದಲ್ಲಿ ಮೂರು ಭಿನ್ನ ಸಾಮಾಜಿಕತೆಗಳ ಜಾತಿ/ಪಂಗಡಗಳಿವೆ. ಅವುಗಳೆಲ್ಲದರ ಪೈಕಿ ತಲೆಬಿಸಿ ಆಗಿರುವುದು ಜಾತಿ ವಿನಾಶದ ಮೂಸೆಯಿಂದ ಬಂದಿರುವ ಆದಿ ಆಂಧ್ರೀಯರು (8,005 ಕುಟುಂಬಗಳು; 26,486 ಜನಸಂಖ್ಯೆ), ಆದಿ ದ್ರಾವಿಡರು (1.91 ಲಕ್ಷ ಕುಟುಂಬಗಳಲ್ಲಿ 8 ಲಕ್ಷ ಜನರಿದ್ದಾರೆ) ಮತ್ತು ಆದಿ ಕರ್ನಾಟಕರು (6.81 ಲಕ್ಷ ಕುಟುಂಬಗಳಿಲ್ಲಿ 29.21ಲಕ್ಷ ಜನರಿದ್ದಾರೆ). ಈ ಹೊಸ ಜನರಿಕ್ ಜಾತಿಪದಗಳು ಹೊಲೆಯ ಮತ್ತು ಮಾದಿಗರಿಗೆ ತಲೆನೋವಾಗಿ ಬಿಟ್ಟಿದೆ. ಇವುಗಳನ್ನು ಬಿಡಿಸಲು ಆಯೋಗದ ಮುಂದೆ ಅನೇಕ ಪ್ರಾಜ್ಞರು ವೈಜ್ಞಾನಿಕ ಸೂತ್ರಗಳನ್ನು ನೀಡಿದ್ದರು. ಆದರೆ, ಸೂತ್ರಗಳನ್ವಯ ಈ ಮೂರು ಜನರಿಕ್‌ಉಪ ಪಂಗಡಗಳ ಒಳಗಿರುವವರನ್ನು ಹೊಲೆಯ-ಮಾದಿಗರ ನಡುವೆ ಹಂಚಿದ ಮೇಲೂ ಸಂಶಯದ ಒಗಟುಗಳ ಉದ್ಭವಿಸುತ್ತವೆ ಎಂಬ ಅನುಮಾನಗಳು ಆಯೋಗ ಸ್ವೀಕರಿಸಿದ ಸಾವಿರಾರು ಅರ್ಜಿಗಳ ಮಹಾಪೂರವನ್ನು ಪರಿಶೀಲಿಸಿದ ಬಳಿಕ ಅದಕ್ಕೆ ಸ್ಪಷ್ಟವಾಗಿ ಮನವರಿಕೆಯಾಗಿದೆ. ಮತ್ತೊಂದು ಕಡೆ 2011ರಲ್ಲಿ ನಿರ್ದಿಷ್ಟ ಉಪ ಜಾತಿಗಳನ್ನು ನಮೂದಿಸದ 6 ಲಕ್ಷಕ್ಕೂ ಅಧಿಕ ಜನರಿಗೆ ಯಾವ ಆಧಾರದ ಮೇಲೆ ಅವರಿಗೆ ಮೀಸಲು ಪ್ರಮಾಣ ನಿಗದಿಪಡಿಸುತ್ತೀರಾ ಎಂಬ ಗಂಭೀರ ಪ್ರಶ್ನೆಗಳು ಜನರಲ್ಲಿ ಮೂಡಿದವು.

ಆಯೋಗ ಮತ್ತೊಂದು ಪ್ರಯತ್ನದಲ್ಲಿ ಸಾರ್ವಜನಿಕ ವಲಯದಲ್ಲಿರುವ ಪರಿಶಿಷ್ಟ ಜಾತಿ ನೌಕರರ ಸಂಖ್ಯಾಬಲ ಕ್ರೋಡೀಕರಣಕ್ಕೆ ಮುಂದಾಯಿತು. ಬಹುಶಃ, ಇಲ್ಲಿಯೂ ನಿಗದಿತ ಸಮಯದೊಳಗೆ ಆಯೋಗ ಬಯಸಿದಂತೆ ಕ್ಷೇತ್ರೀಯ ಮಾಹಿತಿಗಳು ಸ್ವೀಕೃತವಾಗುವಲ್ಲಿ ವಿಳಂಬ ಧೋರಣೆ ಅನುಭವಿಸಿದೆ. ಅನೇಕ ಕಡೆ ಆಯೋಗದ ನಮೂನೆಯಲ್ಲಿ ಸ್ಪಷ್ಟತೆಗಳಿದ್ದರೂ ನೌಕರರು ತಮ್ಮ ಉಪಜಾತಿಗಳನ್ನು ನಮೂದಿಸುವಲ್ಲಿ ಎಲ್ಲಿಲ್ಲದ ಉದಾಸೀನತೆ ತೋರ್ಪಡಿಸಿದ್ದಾರೆ. ಕೆಲವು ಕಡೆ ಬಟವಾಡೆ ಅಧಿಕಾರಿಗಳು ತೊಂದರೆ ನೀಡಿರುವ ನಿದರ್ಶನಗಳಿವೆ. ಈ ಎಲ್ಲಾ ಸಂಕಷ್ಟಗಳಿಂದ ಹೊರಬರಲು ಆಯೋಗ ಸಮಯೋಚಿತವಾದ ನಿರ್ಧಾರ ಕೈಗೊಂಡು ನಾಲ್ಕು ಅಂಶಗಳ ಮೇಲೆ ಆಧುನಿಕ ತಂತ್ರಜ್ಞಾನ ಬಳಸಿ ಕುಟುಂಬ ಆಧಾರಿತ ದತ್ತಾಂಶ ಕ್ರೋಡೀಕರಣಕ್ಕೆ ಶಿಫಾರಸು ಮಾಡಿದೆ. ಈ ವಿಚಾರದ ಮೇಲೆ ಯಾರು ಏನೇ ಟೀಕೆ-ಟಿಪ್ಪಣಿ ಮಾಡಿದರೂ ಸಮಸ್ಯೆ ಇತ್ಯಾತ್ಮಕ ಇರಾದೆ ದೃಷ್ಟಿಯಿಂದ ಸ್ವಾಗತಾರ್ಹವಾಗಿದೆ. ಅನೇಕರು ಆಯೋಗ ವಿನಾಕಾರಣ ಕಾಲಹರಣ ಮಾಡಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳ ಶ್ರಮದಡಿ ಶಾಸನಬದ್ಧವಾಗಿ ಕರ್ತವ್ಯ ನಿರ್ವಹಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನೇ ಅವಹೇಳನ ಮಾಡಿದವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರ್ಗೀಕರಣವನ್ನು ಒಪ್ಪುತ್ತಾರೆ ಅನ್ನುವುದಕ್ಕೆ ಯಾವುದೇ ಸಕಾಲಿಕ ಕಾರಣಗಳಿರಲಿಲ್ಲ. ಹತ್ತಾರು ಜನರ ಸಂಶಯಗಳಿಗೆ ಪರಿಹಾರ ಹುಡುಕಬಹುದು. ಆದರೆ ಮೀಸಲಾತಿ ಪಡೆದಿರುವವರ ಸಂಖ್ಯಾಬಲಗಳ ಬಗ್ಗೆ ಒಂದು ಸಮುದಾಯದಿಂದ ಮತ್ತೊಂದು ಸಮುದಾಯದೊಳಗೆ ಕಾಡ್ಗಿಚ್ಚಿನಂತೆ ಹರಡುವ ಸಂಶಯದ ಪೆಡಂಭೂತ ಮೆರೆದಾಡುವುದನ್ನು ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲ. ಈ ದೃಷ್ಟಿಯಲ್ಲಿ ನ್ಯಾಯಮೂರ್ತಿ ದಾಸ್ ಆಯೋಗದ ಶಿಫಾರಸುಗಳು ನ್ಯಾಯೋಚಿತ ಮತ್ತು ಸಕಾಲಿಕವಾಗಿವೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಷ್ಟು ನಿರ್ಧಾರ ಮಾಡಿದ್ದರೂ ಅವರು ರಾಜ್ಯದ ಮುಂದೆ ಟ್ರೋಲ್ ಆಗಿ, ಟೀಕೆ-ಟಿಪ್ಪಣಿಗಳನ್ನು ಸ್ವೀಕರಿಸಿದಷ್ಟು ಬೇರಾರಿಗೂ ಸಿಕ್ಕಿಲ್ಲ. ಆದುದರಿಂದ, ದಶ ಮೂಲೆಗಳಿಂದ ಮೂಡಿರುವ ಸಂಶಯಗಳಿಗೆ ಸರಕಾರ ಎಲ್ಲಾ ಬಗೆಯ ಇಕ್ಕಟ್ಟಿನಿಂದ ಹೊರಬಂದು ಒಳ ಮೀಸಲಾತಿಯನ್ನು ಕಾರ್ಯರೂಪಕ್ಕೆ ತರಲು ಸಮೀಕ್ಷೆ ನೆರವು ನೀಡಬಲ್ಲದು. ಈ ಸಮೀಕ್ಷೆಯು ಕೇವಲ ಮಾದಿಗ ಮತ್ತು ಅದರ ಉಪ ಜಾತಿಗಳಿಗೆ ಪ್ರಯೋಜನವಾಗುತ್ತದೆ ಅಂದರೆ ತಪ್ಪಾದೀತು. ಈ ಸಮೀಕ್ಷೆ ಅತ್ಯಂತ ವಿಶ್ವಾಸಾರ್ಹತೆಗಳಿಂದ ನಡೆದರೆ 101 ಜಾತಿಗಳಿಗೂ ತಮ್ಮ ಸಂಖ್ಯಾಬಲಗಳನ್ನು ಪ್ರಚುರ ಪಡಿಸುವುದಕ್ಕೆ ಉತ್ತಮ ವೇದಿಕೆ ಆಗಲಿದೆ. ಎಲ್ಲರ ಅನುಮಾನಗಳಿಗೆ ಸಕಾಲಿಕ ಉತ್ತರ ಸಿಗಲಿದೆ.

ನ್ಯಾಯಮೂರ್ತಿ ದಾಸ್ ಆಯೋಗದ ನಿರೀಕ್ಷೆಯಂತೆ ಸಮೀಕ್ಷೆ ಸರಳವೂ ಅಲ್ಲ ಮತ್ತು ಜಟಿಲವೂ ಅಲ್ಲ. ಏಕೆಂದರೆ 1995-96ರಲ್ಲಿ ಈ ಉದ್ದೇಶಕ್ಕಾಗಿ ಆಯೋಜಿಸಿದ್ದ ಸಮೀಕ್ಷೆ ಧೂಳೀಪಟವಾದ ಸಚಿತ್ರಣ ರಾಜ್ಯದ ಕಣ್ಣಮುಂದಿದೆ. ಹಾಗೆಯೇ, 2015ರಲ್ಲಿ ಸಿದ್ದರಾಮಯ್ಯ ಸರಕಾರ ನೂರಾರು ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರಕ್ಕೆ ಮಾದರಿಯಾದ ಸಮೀಕ್ಷೆ ಮಾಡಿದ್ದರೂ ಅದರ ಮೇಲೆ ದಟ್ಟವಾದ ಅನುಮಾನದ ಮಾತುಗಳು ಕೇಳಿಬರುತ್ತಿವೆ. ನಿಯೋಜಿತ ನೂತನ ಪರಿಶಿಷ್ಟ ಜಾತಿಗಳ ಕುಟುಂಬ ಸಮೀಕ್ಷೆಯೂ ಅದರ ವಿರುದ್ಧ ದಾಖಲಾಗಿರುವ ಸರಣಿ ಆರೋಪಗಳಿಂದ ಮುಕ್ತವಾಗಬೇಕು. ಸಮುದಾಯದ ಸಹಭಾಗಿತ್ವದ ಮೂಲಕ ಯಶಸ್ವಿಗೊಳಿಸಬೇಕಿದೆ. ಈ ಸಮೀಕ್ಷೆ ನಡೆಯಬೇಕಾದರೆ ಅದರಲ್ಲೂ ನಗರ ಪ್ರದೇಶಗಳಲ್ಲಿ ವಿವಿಧ ಕಾಲನಿಗಳಲ್ಲಿ ಸ್ವಂತ ಮನೆಗಳಲ್ಲಿ, ಬಾಡಿಗೆದಾರರಾಗಿ ಇಲ್ಲವೆ ಭೋಗ್ಯದಾರರಾಗಿ ವಾಸಿಸುವ ಕುಟುಂಬಗಳನ್ನು ಸೆಳೆಯಲು ವಿಶೇಷ ಕಾರ್ಯಸೂಚಿ ಅಗತ್ಯವಿದೆ. ಇವರಲ್ಲಿ ಬಹುತೇಕರು ಜಾತಿ ಮುಚ್ಚಿಟ್ಟು ಜೀವಿಸುತ್ತಿದ್ದಾರೆ. ಅಂತಹ ಜನರ ಮಾಹಿತಿಗಳೂ ಮುಖ್ಯವಾಹಿನಿಗೆ ಸೇರಬೇಕು.

ರಾಜ್ಯದಲ್ಲಿ 32,518 ಗ್ರಾಮಗಳು 5,977 ಪಂಚಾಯತ್‌ಗಳಲ್ಲಿ ಗ್ರಾಮೀಣರು ಹಂಚಿದ್ದಾರೆ. ಆದರೆ 101 ಪರಿಶಿಷ್ಟ ಜಾತಿಗಳೆಲ್ಲರೂ ಎಲ್ಲಾ ಗ್ರಾಮಗಳಲ್ಲಿ ವಾಸಿಸುವುದಿಲ್ಲ. ಕೆಲವು ವಿಶಿಷ್ಟ ಸಾಮಾಜಿಕತೆಯ ಜಾತಿಗಳು ಕೆಲವೇ ಭೂಪ್ರದೇಶಗಳಲ್ಲಿರುತ್ತವೆ. ಹಲವು ಕಾರಣಗಳಿಗಾಗಿ ಆಂತರಿಕ ವಲಸೆಗಳು (Internal Migrations) ನಡೆಯುತ್ತಿವೆ. ಸಮೀಪವರ್ತಿ ಜಿಲ್ಲೆಗಳು ಅಥವಾ ದೂರದ ನಗರಪ್ರದೇಶಗಳಿಗೆ ಅತಿವಿರಳವಾಗಿ ಹೋಗಿರುತ್ತಾರೆ. ಉದಾಹರಣೆಗೆ ಆದಿಆಂಧ್ರೀಯರು, ಆದಿದ್ರಾವಿಡರು ಮತ್ತು ಆದಿ ಕರ್ನಾಟಕ ಜಾತಿಗಳು 1961ರ ಜನಗಣತಿ ಪ್ರಕಾರ ದಟ್ಟವಾಗಿ ಮೈಸೂರು ಪ್ರಾಂತದಲ್ಲಿದ್ದವು. 1981ರ ತರುವಾಯ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಜಿಲ್ಲೆಗಳಲ್ಲಿಯೂ ದಶಾಂಕ ಮತ್ತು ಶತಾಂಕ ಮಾದರಿಗಳಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಇನ್ನುಳಿದ ಉಪಜಾತಿಗಳೂ ಸಹ ಇದೇ ತತ್ಸಮಾನವಾಗಿ ಕಾಣುತ್ತಿವೆ. ಇಂತಹ ಸಾಧ್ಯತೆಗಳ ಅಂಕಿ-ಅಂಶಗಳು ಸಾಮಾನ್ಯ ಜನಗಣತಿ ಕಾರ್ಯಾಚರಣೆಗಳಲ್ಲಿ ಕಾಣಲ್ಪಡುತ್ತವೆ. ಮಾಹಿತಿ ಸಂಗ್ರಹಕರು ಸ್ವಲ್ಪ ಕಣ್ಣು ಮುಚ್ಚಿದರೂ ಸಮೀಕ್ಷೆಗಳಲ್ಲಿ ಈ ಸೂಕ್ಷ್ಮ ಜಾತಿಗಳು ಮಂಗಮಾಯ ಆಗಲೂ ಬಹುದು. ಜಾತಿಗಳನ್ನು ಗುರುತಿಸುವಲ್ಲಿ ಎಡವಿದರೆ ಇನ್ನಷ್ಟು ಅಧ್ವಾನಗಳು ಸೇರಿಕೊಳ್ಳುತ್ತವೆ. ರಾಜ್ಯದ ನಗರ ಪ್ರದೇಶಗಳು 5,856 ಚ.ಕಿ.ಮೀಟರುಗಳಲ್ಲಿ ಹಬ್ಬಿದೆ. ಇಲ್ಲಿರುವ 316 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 6,609 ವಾರ್ಡ್‌ಗಳ ಒಳಗೆ ಪರಿಶಿಷ್ಟರ ಹುಡುಕಾಟ ಯಕ್ಷ ಪ್ರಶ್ನೆಯಾಗದು. ಈ ಕಾರ್ಯಗಳು ಪ್ರಾಮಾಣಿಕ ಮತ್ತು ಶ್ರದ್ಧೆಯ ಕಾಯಕಗಳಡಿ ಒಂದು ಸಂಘಟಿತ ಕಾರ್ಯ ಚಟುವಟಿಕೆಗಳಾದರೆ ಉದ್ದೇಶಿತ ಗುರಿ ಮುಟ್ಟಲು ಸಾಧ್ಯವಿದೆ ಅಥವಾ 1995-96ರಲ್ಲಾದ ಎಡವಟ್ಟುಗಳು ಈ ಸಮೀಕ್ಷೆಯಲ್ಲೂ ಮರುಕಳಿಸಿದರೆ ಜನರ ತೆರಿಗೆ ಹಣವನ್ನು ಹೊಳೆಯಲ್ಲಿ ಚೆಲ್ಲಿದಂತಾಗುತ್ತದೆ. ಹಾಗಾಗಿ ಸಮೀಕ್ಷಾ ಪೂರ್ವಸಿದ್ಧತೆಗಳು ತಪಸ್ಸಿನಂತೆ ಪ್ರತೀ ಹಂತಗಳಲ್ಲಿಯೂ ಜರುಗಬೇಕಿದೆ.

ಸಮೀಕ್ಷೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ, ಪಂಚಾಯತ್ ರಾಜ್, ಪೌರಾಡಳಿತ, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಜಂಟಿ ಸಮಿತಿಗಳ ಮೂಲಕ ಕಾರ್ಯನಿರ್ವಹಣೆ ಆಗಬೇಕು. ಇದೇ ಮಾದರಿಯಲ್ಲಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ಸಂಚಾಲನ ಸಮಿತಿ ಇರಬೇಕು. ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿ ಘಟಕ ಅಧಿಕಾರಿಯಾಗಿ, ಅವರ ಜೊತೆ ವಿವಿಧ ಅಧಿಕಾರಿಗಳ/ನೌಕರರ ತಂಡಗಳು ಮೈತ್ರಿಯುತವಾಗಿ ಗಣತಿ ಕಾರ್ಯಗಳನ್ನು ಶ್ರೇಣಿ ನಿಯಂತ್ರಣಗಳ (Span of Control) ಮೂಲಕ ಅನುಷ್ಠಾನ ಮಾಡಬೇಕು. ನಾಲ್ಕು ಕಂದಾಯ ವಿಭಾಗಗಳಿಗೆ ಹಿರಿಯ ಅಧಿಕಾರಿಗಳಿಗೆ ಸಮೀಕ್ಷೆ ಉಸ್ತುವಾರಿ ನೀಡಬೇಕು. ಇದೆಲ್ಲದರ ಸಮಗ್ರ ಉಸ್ತುವಾರಿ ಅಭಿವೃದ್ಧಿ ಆಯುಕ್ತರಿಗೆ ಇರಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಅದರ ವಿವಿಧ ಅಂಗಸಂಸ್ಥೆಗಳು ಒಟ್ಟಾರೆ ಸಂಚಾಲನ ನೇತೃತ್ವ ಹೊಂದಿರಬೇಕು.

ಇನ್ನು ಸಮೀಕ್ಷೆಯ ಪ್ರಶ್ನಾವಳಿಗಳು ಆನೆ ಭಾರವೂ ಆಗಿರಬಾರದು, ಸಾಸಿವೆಯಷ್ಟು ಕನಿಷ್ಠ ತೂಕವೂ ಇರಬಾರದು. ಸ್ವಪ್ರತಿಷ್ಠೆಗಾಗಿ ಪ್ರಶ್ನೆಗಳನ್ನು ತುರುಕುವ ಪ್ರಯತ್ನಗಳಾದರೆ ನಿಶ್ಚಿತ ಅವಧಿಯಲ್ಲಿ ದತ್ತಾಂಶ ಕ್ರೋಡೀಕರಣ ಅಸಾಧ್ಯವಾಗುತ್ತದೆ. ಕುಟುಂಬದವರಿಂದ ಪಡೆದ ಮಾಹಿತಿಗಳು ಗಣಕೀಕರಣವಾದ ಮೇಲೆ ಅದರ ಮುದ್ರಿತ ಪ್ರತಿಯನ್ನು ದೃಢೀಕರಿಸಿ ಅವರಿಗೆ ನೀಡಬೇಕು. ಇದರ ಇನ್ನೊಂದು ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಜೋಪಾನ ಮಾಡಬೇಕು. ಇದನ್ನು ಕುಳುವಾರು ಪಟ್ಟಿಯಾಗಿ ಜೋಪಾನ ಮಾಡಿದರೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಹಾಯವಾಗುತ್ತದೆ. ಇಂತಹ ಪ್ರಯತ್ನಗಳಿದ್ದರೂ ಕಾಂತರಾಜು ಆಯೋಗದ ವಿರುದ್ಧ ‘‘ನಮ್ಮವರನ್ನು ಗಣತಿ ಮಾಡಿಲ್ಲ’’ ಅಥವಾ ‘‘ನಮ್ಮ ಮನೆಗೆ ಯಾರೂ ಬಂದಿಲ್ಲ’’ ಎಂಬ ಮುಂಬರಲಿರುವ ಅನವಶ್ಯಕ ಆರೋಪಗಳಿಗೆ ಕಡಿವಾಣ ಬೀಳುತ್ತದೆ ಅಥವಾ ದತ್ತಾಂಶಗಳ ಕಳ್ಳತನ ಇಲ್ಲವೇ ನಾಶಗಳನ್ನು ನಿಯಂತ್ರಿಸಲು ಸಾಧ್ಯವಿರುತ್ತದೆ. ಕೋಡ್ ಆಧಾರಿತ ಸಂಖ್ಯೆಗಳು ಅಭಿವೃದ್ಧಿ ಕಾರ್ಯಗಳಿಗೆ ಉತ್ತಮ ಆಕರ ಮಾಹಿತಿಗಳಾಗಿ ಉಪಯೋಗವಾದೀತು.

ನಗರ ಪ್ರದೇಶಗಳಲ್ಲಿ ಸಂಪ್ರದಾಯಿಕವಾಗಿ ವಾಸಿಸುವ ಕಾಲನಿಗಳಲ್ಲಿ ಜಾತಿಗಳ ಇರುವಿಕೆ ಗುರುತಿಸಲು ಬಲುಸುಲಭ. ಆದರೆ ವಿವಿಧ ಬಡಾವಣೆಗಳಲ್ಲಿ ಅಸ್ಪಶ್ಯತೆಯ ಕಾರಣಗಳಿಗಾಗಿ ಸ್ವಜಾತಿಗಳನ್ನು ಮುಚ್ಚಿಟ್ಟು ಬದುಕುವವರಿಗೆ ದಾಖಲಿಸಿಕೊಳ್ಳುವ ಅವಕಾಶ ನೀಡಬೇಕು. 2011 ಜನಗಣತಿಯಲ್ಲಿ ಜಾತಿ ಹೇಳದವರೇ 6.25 ಲಕ್ಷದಷ್ಟಿದ್ದಾರೆಂದು ಹಿಂದಿನ ಸಂಪುಟ ಸಭೆಯ ಮಾಹಿತಿಗಳಲ್ಲಿ ಬಹಿರಂಗವಾಗಿದೆ. 2011 ಜನಗಣತಿಯ ಬೆಳವಣಿಗೆ ದರದ ಆಧಾರದಡಿ ಮಧ್ಯಂತರ ವಾರ್ಷಿಕ ಜನಸಂಖ್ಯೆಯನ್ನು ಅಂದಾಜಿಸಲಾಗಿದೆ. ಅದರ ಗರಿಷ್ಠತೆಯ ಸಮೀಪವರ್ತಿಯಾಗಿ ಸಮೀಕ್ಷೆಯಲ್ಲಿ ದತ್ತಾಂಶಗಳು ಅನಾವರಣವಾಗಬೇಕು. ಆವಾಗಲೇ, ಸಮೀಕ್ಷೆ ಗುರಿ ಸಾರ್ಥಕವಾಗುತ್ತದೆ.

ಆಯೋಜಿಸಲಿರುವ ಸಮೀಕ್ಷೆಯು ನೂತನ ಸಾಮಾಜಿಕ ಬದಲಾವಣೆಗಾಗಿ ಎಂಬ ಆಶಯಗಳನ್ನು ಈಡೇರಿಸಬೇಕಿದೆ. ಅದಕ್ಕಾಗಿ ವ್ಯಾಪಕ ಪ್ರಚಾರವನ್ನು ವಿವಿಧ ಸ್ತರಗಳಲ್ಲಿ ಆಯೋಜಿಸಬೇಕು. ಕಾಂತರಾಜು ಆಯೋಗದ ಬಗ್ಗೆ ಭುಗಿಲೆದ್ದಿರುವ ಅಪಸ್ವರಗಳು ಈ ಸಮೀಕ್ಷೆಯಲ್ಲಿ ಮೇಳೈಸದಂತೆ ಸರಕಾರ ಎಚ್ಚರವಹಿಸಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ರಾಷ್ಟ್ರಾಧ್ಯಕ್ಷರ ಅನುಮೋದನೆ ಪ್ರಕಾರ ಜೋಡಣೆ ಆಗಿರುವ ಮಾದರಿಯಲ್ಲೇ ದತ್ತಾಂಶ ಸ್ವೀಕರಿಸಬೇಕು. ಅವುಗಳ ಮುಂದಿರುವ ಯಾವುದೇ ಚಿಹ್ನೆಗಳನ್ನು ಬದಲಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ. ಆದರೆ ಅನುಕ್ರಮದಲ್ಲಿರುವ ಉಪಜಾತಿಗೆ ಒಂದಕ್ಕಿಂತ ಹೆಚ್ಚಿನ ಉಪ ಸಮಾನಾರ್ಥಕ ಪದಗಳಿದ್ದಾಗ ಅವುಗಳಿಗೆ ಅದರೊಳಗೆ ತಾತ್ಕಾಲಿಕವಾಗಿ ಪ್ರತ್ಯೇಕ ರೋಮನ್ ಮಾದರಿಯ ಕೋಡ್ ಸಂಖ್ಯೆ ನೀಡಿ ದತ್ತಾಂಶ ಸ್ವೀಕೃತಿಯಾದ ಮೇಲೆ ಅಂತಿಮ ಫಲಿತಾಂಶದಲ್ಲಿ ಕ್ರೋಡೀಕರಣಗೊಳಿಸಬೇಕು. ಉದಾಹರಣೆಗೆ ರಾಜ್ಯದಲ್ಲಿ 1956ರ ರಾಷ್ಟ್ರಾಧ್ಯಕ್ಷರ ಅನುಮೋದಿತ ಪಟ್ಟಿಯಲ್ಲಿ ಕ್ರ.ಸಂ 19.Beda (Budga) Jangam ಎಂದಿದೆ; ಆದರೆ ರಾಜ್ಯ ಸರಕಾರ ಅವೆರಡನ್ನು ಬಿಡಿಸಿ ಉತ್ತರ-ದಕ್ಷಿಣ ಮಾಡಿದೆ. ಇಂತಹ ಅಸಾಂವಿಧಾನಿಕ ನಡಾವಳಿಗಳು ಸಮೀಕ್ಷೆಯಲ್ಲಿ ತೂರಿಬರಬಾರದು. ರಾಜ್ಯದ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ ಸ್ಥಾಯಿ ಸ್ವರೂಪ ರಾಷ್ಟ್ರೀಯ ಜನಗಣತಿ ಆಯುಕ್ತರ ದಸ್ತಾವೇಜುಗಳಲ್ಲಿ ದಾಖಲಿಸಿರುವುದಕ್ಕೆ ತದ್ವಿರುದ್ಧವಾಗಿರಬಾರದು ಅಥವಾ ವ್ಯತಿರಿಕ್ತವಾಗಿ ಮೂಡಬಾರದು.

ಕೆಲವು ಸೂಕ್ಷ್ಮ ಜಾತಿ/ಪಂಗಡಗಳ ಸಮಾನಾಂತರ/ ಸಮಾನಾರ್ಥಕ (Synonymous/Identical words) ಪದಗಳು ನಿರಂತರವಾಗಿ ದುರುಪಯೋಗ ಆಗುತ್ತಾ ಬಂದಿವೆ. ಬಹಳ ಹಿಂದಿನಿಂದಲೂ ಶಾಲಾ-ಕಾಲೇಜು ಪ್ರವೇಶ ಪಡೆಯಲು ಜಾತಿ ಪತ್ರಗಳನ್ನೇ ದುರುಪಯೋಗ ಮಾಡಿಕೊಂಡ ನಿದರ್ಶನವಿದೆ. ಇಂತಹವರು ನ್ಯಾಯಾಧೀಶರು, ಅಧಿಕಾರಿಗಳು, ಶಾಸಕರು ಮತ್ತು ಸಂಸದರಾಗಿರುವ ಹಲವಾರು ನಿದರ್ಶನಗಳಿವೆ. ಆದುದರಿಂದ, ಸಲ್ಲದ ಜಾತಿಗಳ ಹೆಸರುಗಳ ಮೂಲಕ ಯಾವುದಾದರೂ ಸಮುದಾಯಗಳು ಅಕ್ರಮವಾಗಿ ದುರುಪಯೋಗ ಮಾಡಿಕೊಂಡು ನುಸುಳಿದರೆ ಹುಬ್ಬೇರಿಸುವ ಅಂಕಿ-ಅಂಶಗಳ ಹುಟ್ಟಿಗೆ ಕಾರಣವಾಗುತ್ತದೆ. ಅದರಲ್ಲೂ ಕರಾವಳಿ ಮತ್ತು ಇತರ ಪ್ರದೇಶಗಳಲ್ಲಿ ಈ ಸಮಾನಾಂತರ ಪದಗಳು ವ್ಯಾಪಕವಾಗಿ ದುರುಪಯೋಗವಾಗಿವೆ. ಇಂತಹ ಅವಘಡಗಳು ಮತ್ತೇನಾದರೂ ಆಕಸ್ಮಿಕವಾಗಿ ಸಂಭವಿಸಿದರೆ ಅಸಹಜ ಪೈಪೋಟಿಗಳಿಗೆ ದಾರಿಮಾಡುತ್ತದೆ. ಅನೇಕ ಹಿಂದುಳಿದ ವರ್ಗಗಳು ಮೀಸಲಾತಿ ನುಂಗುವ ಸಲುವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಳಗೆ ನುಸುಳಿರುವ ಹಲವಾರು ನಿದರ್ಶನಗಳಿವೆ. ಅಂತಹ ಜನರ ಅಕ್ರಮ ಪ್ರವೇಶಗಳನ್ನು ಸಂಪೂರ್ಣವಾಗಿ ಸಮೀಕ್ಷೆ ಸಂದರ್ಭದಲ್ಲಿ ನಿಯಂತ್ರಿಸಬೇಕು. ಉದಾಹರಣೆಗೆ ವೀರಶೈವ ಜಂಗಮರು/ ಲಿಂಗಾಯತ ಜಂಗಮರು, ಜಂಗಮರು, ಮಠಪತಿಗಳು ಮತ್ತು ಆರಾಧ್ಯರು ಮೂಲತಃ ಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿ ಜನರಲ್ಲ. ಅವರೇನಾದರೂ ಅಕ್ರಮವಾಗಿ ಒಳನುಸುಳಿದರೆ ಬೇಡ (ಬುಡ್ಗ) ಜಂಗಮರ ಇಲ್ಲವೇ ಮಾಲ ಜಂಗಮರ ಸಂಖ್ಯಾಬಲ ಮೂರುಪಟ್ಟು ದ್ವಿಗುಣವಾಗುತ್ತದೆ. ನ್ಯಾಯಮೂರ್ತಿ ಟಿ. ವೆಂಕಟಸ್ವಾಮಿ ಆಯೋಗದ ಪ್ರಕಾರ ಇವರು ಲಿಂಗಾಯತರ ಒಟ್ಟು ಜನಸಂಖ್ಯೆಯಲ್ಲಿ ಜಂಗಮರು 3,73,239 ಜನರು (ಶೇ 1.03); ಆರಾಧ್ಯ/ಆರಾಧ್ಯರು 17,344 ಜನರಿದ್ದರು (ಶೇ.0.05). ಅತ್ಯಧಿಕ ಜನಸಂಖ್ಯೆ ಮೂಡಿದಲ್ಲಿ ಅವರಿಗಾಗಿಯೇ ಪ್ರತ್ಯೇಕ ವರ್ಗೀಕರಣ ಮಾಡಬೇಕಾಗಬಹುದು. ಈ ಕಾರಣಗಳಿಗಾಗಿಯೇ ಸಮೀಕ್ಷೆ ನಿರ್ವಹಿಸುವವರಿಗೆ ಪ್ರತೀ ಹಂತಗಳಲ್ಲಿ ಸಾಂವಿಧಾನಿಕ ಎಚ್ಚರಿಕೆಗಳು ಮನವರಿಕೆ ಆಗುತ್ತಿರಬೇಕು. ಯಾತ್ರೆ, ಪ್ರತಿಯಾತ್ರೆ, ಸರಣಿ ಗೋಷ್ಠಿಗಳು, ಪ್ರತಿಭಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಿತವಾಗಿ ದಿನಾಲು ನಡೆದರೂ ಸಮೀಕ್ಷೆ ದತ್ತಾಂಶಗಳು ಆಯೋಗದ ಕೈ ಸೇರುವ ತನಕ ಒಳ ಮೀಸಲಾತಿ ಅಖೈರು ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಉಪ ಜಾತಿಗಳೂ ಈಗ ಸಮೀಕ್ಷೆಗೆ ಕೈ ಜೋಡಿಸಿದಾಗ ಅವರವರ ಸಾಂವಿಧಾನಿಕ ಪಾಲು ಪಡೆಯಲು ಸಾಧ್ಯವಿದೆಯೇ ಹೊರತು; ಹೊಳೆಯಲ್ಲಿ ಹುಣಸೆಹಣ್ಣು ಕಿವಿಚುವ ಪ್ರಯೋಗಗಳಿಂದ ಒಳ ಮೀಸಲಾತಿ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಸಮೀಕ್ಷೆ ಬಗ್ಗೆ ಅವರವರ ಸಮುದಾಯಗಳಲ್ಲಿ ವ್ಯಾಪಕ ಜಾಗೃತಿ ಮೂಡಬೇಕಿದೆ. ಪ್ರತೀ ಸಮುದಾಯವೂ ತಮ್ಮ ಮಾನವ ಸಂಪನ್ಮೂಲಗಳನ್ನು ಸಮೀಕ್ಷೆಯ ಯಶಸ್ವಿಗೆ ವಿನಿಯೋಗಿಸಿದಾಗ ಮಾತ್ರ ಅವುಗಳ ಬೇಡಿಕೆಗೆ ಪೂರಕವಾದ ದತ್ತಾಂಶಗಳು ಮೂಡುತ್ತವೆ.

ಅನೇಕ ಮುನ್ನೆಚ್ಚರಿಕೆಗಳ ನಡುವೆಯೂ, ಗುರುತರವಾದ ತರಬೇತಿ ನೀಡಿಯೂ ಗಣತಿದಾರರ ಉದಾಸೀನತೆಗಳಿಂದ, ತಪ್ಪುಗ್ರಹಿಕೆಗಳಿಂದ ಪ್ರಮಾದಗಳಾಗುತ್ತವೆ. ಅಂತಹ ತಪ್ಪುಗಳನ್ನು ಪ್ರಾಥಮಿಕ ಹಂತದಲ್ಲೇ ತಡೆಗಟ್ಟಲು ಶ್ರೇಣೀಕೃತ ನಿಯಂತ್ರಣದ (Span of Control) ಮೂಲಕ ಆಗಾಗ ಮಾದರಿ ತಪಾಸಣೆ (Sample Tests) ಮಾಡಬೇಕಾಗುತ್ತದೆ. ಸಾಮಾಜಿಕ ಸಾಮರಸ್ಯ ಮತ್ತು ಅದರ ಬದಲಾವಣೆಗಾಗಿ ಸಮೀಕ್ಷೆ ಎಂಬರ್ಥದ ಮನೋಧರ್ಮಗಳು ಸಮೀಕ್ಷೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರಲ್ಲೂ ಹೊಣೆಗಾರಿಕೆ ರೂಪದಲ್ಲಿ ಧಾರಣವಾಗಬೇಕು. ಆಗ ಒಂದು ಶುದ್ಧ ಮತ್ತು ಗೊಂದಲರಹಿತ ಸಮೀಕ್ಷಾ ಫಲಿತಗಳು ರಾಜ್ಯದಲ್ಲಿ ಮೂಡುತ್ತವೆ. ಒಳಮೀಸಲಾತಿಯ ಕೂಗನ್ನು ಶಾಶ್ವತವಾಗಿ ಮಲಗಿಸುವ ಅವಕಾಶವನ್ನು ಸರಕಾರ ಸದುಪಯೋಗ ಮಾಡಿಕೊಳ್ಳಬೇಕು. ‘‘ಒಬ್ಬ ಎಲ್ಲರಿಗಾಗಿ; ಎಲ್ಲರೂ ಒಬ್ಬನಿಗಾಗಿ’’ ಎಂಬ ಸಹಕಾರ ತತ್ವ ಸಮೀಕ್ಷೆಯ ಬೀಜ ಮಂತ್ರವಾಗಲಿ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ದಾಸನೂರು ಕೂಸಣ್ಣ

ಸಮುದಾಯ ಚಿಂತಕರು

Similar News