ಪ್ರಮೋದಾ ದೇವಿಯಿಂದ ಚಾಮರಾಜನಗರ ಜಿಲ್ಲಾಡಳಿತಕ್ಕೆ ಪತ್ರ ವಿಚಾರ : ಸಚಿವ ಸಂಪುಟದಲ್ಲಿ ಚರ್ಚೆ ಸಾಧ್ಯತೆ

ಪ್ರಮೋದಾ ದೇವಿ
ಚಾಮರಾಜನಗರ : ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾದೇವಿ ಒಡೆಯರ್‌ರವರು ಚಾಮರಾಜನಗರ ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರದಿಂದ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಈ ಬಗ್ಗೆ ಎ.24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವುದು ಖಚಿತವಾಗಿದೆ.
ಮೈಸೂರು ಜಿಲ್ಲೆಯಿಂದ ಬೇರ್ಪಟ್ಟ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮ ಪಂಚಾಯತ್‌ನ ಸಿದ್ದಯ್ಯನಪುರ ಗ್ರಾಮಸ್ಥರೇ ಇದೀಗ ರಾಜಮನೆತನದ ಮುಂದಾಗಿರುವ ಕ್ರಮದಿಂದ ನೆಮ್ಮದಿ ಕಳೆದುಕೊಂಡು ಬದುಕು ದೂಡುವವರಾಗಿದ್ದಾರೆ.
ರಾಜ್ಯ ಸರಕಾರದಲ್ಲಿ ಬಿ.ರಾಚಯ್ಯರವರು ಅರಣ್ಯ ಮತ್ತು ಕಂದಾಯ ಸಚಿವರಾಗಿದ್ದ ವೇಳೆ ಚಾಮರಾಜನಗರ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಮಸಮುದ್ರದ ಪರಿಶಿಷ್ಟ ಜಾತಿಯವರಿಗೆ ಸಾಗುವಳಿ ಭೂಮಿ ನೀಡುವುದಲ್ಲದೆ, ಅಲ್ಲೇ ವಾಸ ಮಾಡಲು ಗ್ರಾಮವೊಂದನ್ನು ನಿರ್ಮಾಣ ಮಾಡಲು ಮುಂದಾದರು. ಅದುವೇ ಸಿದ್ದಯ್ಯನಪುರ ಗ್ರಾಮ.
ರಾಜ್ಯ ಸರಕಾರದಿಂದ ಭೂಮಿ ಪಡೆದುಕೊಂಡ ಪರಿಶಿಷ್ಟ ಜಾತಿ ಸಮುದಾಯದವರು ಬದುಕು ಕಟ್ಟಿಕೊಳ್ಳಲು ಅರಣ್ಯ ಮತ್ತು ಕಂದಾಯ ಭೂಮಿಗಳಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲವರ ಜಮೀನಿನಲ್ಲಿ ಕರಿಕಲ್ಲು ಕಾಣಿಸಿಕೊಂಡು ಗಣಿಗಾರಿಕೆಯೂ ನಡೆಯುತ್ತಿತ್ತು. ಪ್ರಸ್ತುತ ಅವು ಸ್ಥಗಿತಗೊಂಡಿದೆ.
ಗ್ರಾಮಸ್ಥರು ಹೇಳುವಂತೆ, ಮೈಸೂರು ಸಂಸ್ಥಾನದ ಮಹಾರಾಜರು ಸಿದ್ದಯ್ಯನಪುರ ಗ್ರಾಮಸ್ಥರಿಗೆ 1,035 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಅದರ ದಾನಪತ್ರದ ಮೂಲಕ ನೋಂದಣಿಯಾಗಿದ್ದು, ಬದುಕು ಸಾಗಿಸುತ್ತಿದ್ದಾರೆ. ಮಹಾರಾಜರಿಂದಲೇ ಜಮೀನು ದಾನವಾಗಿ ಕೊಟ್ಟ ಮೇಲೆ ಇದೀಗ ಜಮೀನು ಮರಳಿ ಪಡೆಯಲು ಮೈಸೂರು ಸಂಸ್ಥಾನದ ಪ್ರಮೋದಾ ದೇವಿ ಒಡೆಯರ್ ಮುಂದಾಗಿರುವುದು ಸಿದ್ದಯ್ಯನಪುರ ಗ್ರಾಮಸ್ಥರಲ್ಲಿ ನಿದ್ದೆ ಗೆಡಿಸಿದೆ.
ಮಾ.21ರಂದು ಪ್ರಮೋದಾದೇವಿಯವರು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದು, ಹಾಲಿ ಚಾಮರಾಜನಗರ ತಾಲೂಕಿನಲ್ಲಿ ರಾಜಮನೆತಕ್ಕೆ ಸೇರಿದ ಐದು ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ರಾಜಮನೆತನಕ್ಕೆ ಮರಳಿ ಪಡೆಯಲು ನೋಂದಣಿ ಮಾಡಿಕೊಡುವಂತೆ ತಿಳಿಸಿದ್ದಾರೆ.
ಪ್ರಮೋದಾ ದೇವಿಯವರು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ದಾಖಲಾತಿಗಳನ್ನು ಲಗತ್ತಿಸಿಲ್ಲ ಎನ್ನಲಾಗುತ್ತಿದೆ. ಮಹಾರಾಣಿಯವರ ಪತ್ರದ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಮಹಾರಾಜರು ನೀಡಿರುವ ದಾನಪತ್ರ, ರಾಜ್ಯ ಸರಕಾರದಿಂದ ಮಂಜೂರಾತಿ ಪತ್ರ, ಪಹಣಿ, ಎಲ್ಲವನ್ನೂ ನೀಡಿ ಗ್ರಾಮಸ್ಥರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಒಕ್ಕೊರಲಿನಿಂದ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತಕ್ಕೆ ನೀಡಿರುವ ಮನವಿ ಪತ್ರದಲ್ಲಿ ಗ್ರಾಮಸ್ಥರು ನಿವೇದನೆ ಮಾಡಿಕೊಂಡಿರುವಂತೆ, ರಾಜಮನೆತನದಿಂದ ಸಿದ್ದಯ್ಯನಪುರ ಗ್ರಾಮಸ್ಥರ ಒಕ್ಕಲೇರಿಸುವ ಕೆಲಸಕ್ಕೆ ಮುಂದಾದರೆ ಹಾಗೂ ಜಿಲ್ಲಾಡಳಿತ ಸ್ಪಂದಿಸದಿದ್ದರೆ, ಮೈಸೂರು ಅರಮನೆಗೆ ತೆರಳಿ ಮಾತುಕತೆ ನಡೆಸಿದಾಗಿಯೂ ನ್ಯಾಯ ಸಿಗದೇ ಇದ್ದರೆ ಅಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗ್ರಾಮಸ್ಥರು ತಮ್ಮ ಅಳಲನ್ನು ಮನವಿ ಪತ್ರದಲ್ಲಿ ತೋಡಿಕೊಂಡಿದ್ದಾರೆ.
ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿಯವರಿಂದ ಪತ್ರ ಬಂದಿದೆ. ಪತ್ರದಲ್ಲಿ ನಮೂದಿಸಿರುವ ಬಗ್ಗೆ ಯಾವುದೇ ಪೂರಕವಾದ ದಾಖಲೆಗಳು ಲಗತ್ತಿಸಿಲ್ಲ. ಪತ್ರದ ಸಾರಾಂಶದ ಬಗ್ಗೆ ವಾಸ್ತಾಂಶದ ಬಗ್ಗೆ ವರದಿ ನೀಡುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಹಾಗೂ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಲು ಸರಕಾರಕ್ಕೆ ಜಿಲ್ಲಾಡಳಿತದಿಂದ ಸೂಕ್ತ ವರದಿಯನ್ನು ಕಳುಹಿಸಲಾಗಿದ್ದು, ಸರಕಾರದ ಮಟ್ಟದ ಅಂಕಿತವಾಗಬೇಕಾಗಿದೆ.
-ಶಿಲ್ಪಾ ನಾಗ್, ಚಾಮರಾಜನಗರ ಜಿಲ್ಲಾಧಿಕಾರಿ
ಮೈಸೂರು ಸಂಸ್ಥಾನವು ಎಂದಿಗೂ ಜನರಿಗೆ ತೊಂದರೆ ಕೊಡುವುದಿಲ್ಲ. 1950 ರಲ್ಲಿ ಭಾರತ ಸರಕಾರ ಮತ್ತು ಮಹಾರಾಜನರ ನಡುವಿನ ಒಪ್ಪಂದದಲ್ಲಿ ನಮೂದಿಸಿರುವ ಆಸ್ತಿಗಳ ಬಗ್ಗೆ ಪ್ರಮೋದಾ ದೇವಿಯವರು ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಸಿದ್ದಯ್ಯನಪುರ ಗ್ರಾಮಸ್ಥರಿಗೆ ಅನ್ಯಾಯವಾಗುವುದಿಲ್ಲ. ಸಮಸ್ಯೆ ಏನೆ ಇದ್ದರೂ ಅರಮನೆಯ ಕಾರ್ಯಾಲಯದಲ್ಲಿ ಚರ್ಚಿಸಬಹುದಾಗಿದೆ.
-ಯದುವೀರ್ ಶ್ರೀಕಂಠದತ್ತ ಒಡೆಯರ್, ಸಂಸದ
ಸಿದ್ದಯ್ಯನಪುರ ಗ್ರಾಮಸ್ಥರು ನಾಲ್ಕು ದಶಕಗಳಿಂದ ಗ್ರಾಮದಲ್ಲೇ ವಾಸವಾಗಿದ್ದು, ಕೃಷಿಕರಾಗಿ ಬದುಕು ಕಟ್ಟಿಕೊಂಡಿದ್ದೇವೆ. ಮೈಸೂರು ಮನೆತನದವರು ಇಡೀ ಗ್ರಾಮವನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡರೆ ನಾವು ಎಲ್ಲಿಗೆ ಹೋಗಬೇಕು. ಗ್ರಾಮದಲ್ಲಿ ಬದಕು ಸಾಗಿಸಲು ನಮಗೆ ಹಕ್ಕಿದೆ. ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಲಿ.
-ಚನ್ನಂಜಯ್ಯ, ಸಿದ್ದಯ್ಯನಪುರ ಗ್ರಾಮಸ್ಥ