ಕಳಸ | ಖಾಸಗಿ ಹಿಡುವಳಿಯಲ್ಲಿ ದಲಿತ ಕುಟುಂಬಗಳ ಅತಂತ್ರ ಬದುಕು

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿರುವ ಕಳಸ ಪಟ್ಟಣದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಪರಿಶಿಷ್ಟರ ಕಾಲನಿ ನಿವಾಸಿಗಳು ಹಕ್ಕುಪತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಇಲ್ಲಿನ ನಿವಾಸಿಗಳು 90 ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದರೂ ಹಕ್ಕುಪತ್ರದ ಸೌಲಭ್ಯ ಕೊಡಿಸುವಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳಸ ಪಟ್ಟಣದ ಹೃದಯ ಭಾಗದಲ್ಲಿರುವ ಅಂಬೇಡ್ಕರ್‌ನಗರ(ಕೆಮ್ಮಣ್ಣುಗುಂಡಿ)ದಲ್ಲಿ 18 ಪರಿಶಿಷ್ಟ ಜಾತಿ ಜನಾಂಗದ ಕುಟುಂಬಗಳು ವಾಸವಾಗಿವೆ. ಕಳಸ ಪಟ್ಟಣದ ಸ.ನಂ.2ರಲ್ಲಿರುವ ಬಹುತೇಕ ಕುಟುಂಬಗಳ ಸದಸ್ಯರು ಕೂಲಿ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಸದ್ಯ ಈ ದಲಿತ ಕಾಲನಿಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಮೂರನೇ ತಲೆಮಾರಿನ ಜನರಾಗಿದ್ದು, ಸುಮಾರು 90 ವರ್ಷಗಳ ಹಿಂದೆ ನಿವಾಸಿಗಳ ಪೂರ್ವಜರು ಕಳಸ ಸಮೀಪದ ಗ್ರಾಮಗಳಿಂದ ಇಲ್ಲಿಗೆ ಬಂದು ನೆಲೆ ಕಂಡುಕೊಂಡಿದ್ದರು. ಸದ್ಯ ನಿವಾಸಿಗಳು ಈ ಜಾಗದಲ್ಲಿ ಮನೆ ಕಟ್ಟಿಕೊಂಡು ಬದುಕುತ್ತಿದ್ದು, ಸ್ಥಳೀಯ ಗ್ರಾಮಪಂಚಾಯತ್‌ಗೆ ಕಂದಾಯವನ್ನೂ ಕಟ್ಟುತ್ತಿದ್ದಾರೆ. ಸರಕಾರದ ವತಿಯಿಂದ ಈ ಕಾಲನಿಗೆ ಕುಡಿಯುವ ನೀರು, ಕಾಂಕ್ರೀಟ್ ರಸ್ತೆ, ವಿದ್ಯುತ್ ಸೌಲಭ್ಯಗಳನ್ನೂ ನೀಡಲಾಗಿದೆಯಾದರೂ ಕಳೆದ 90 ವರ್ಷಗಳಿಂದ ಇಲ್ಲಿರುವ 18 ಮನೆಗಳಿಗೆ ಹಕ್ಕುಪತ್ರದ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ.
ಇಲ್ಲಿನ ನಿವಾಸಿಗಳು ಹಕ್ಕುಪತ್ರಕ್ಕಾಗಿ ಸ್ಥಳೀಯ ಕಂದಾಯಾಧಿಕಾರಿ, ಗ್ರಾಪಂ ಅಧಿಕಾರಿಗಳಿಂದ ಹಿಡಿದು, ಕ್ಷೇತ್ರದ ಹಿಂದಿನ ಹಾಗೂ ಹಾಲಿ ಶಾಸಕರು ಸೇರಿದಂತೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗೂ ಪತ್ರ ಬರೆದು ಸೌಲಭ್ಯಕ್ಕಾಗಿ ಅಂಗಲಾಚಿದ್ದಾರೆ. ಆದರೆ ಹಕ್ಕುಪತ್ರ ಮಾತ್ರ ಇಂದಿಗೂ ದಕ್ಕಿಲ್ಲ. ಕಾರಣ, ಇಲ್ಲಿನ 18 ಕುಟುಂಬಗಳು ಕಳಸ ಪಟ್ಟಣದ ಸ.ನಂ.2ರಲ್ಲಿರುವ ಸುಮಾರು 1.20 ಎಕರೆ ಜಾಗದಲ್ಲಿ ಮನೆಕಟ್ಟಿಕೊಂಡು ವಾಸವಾಗಿದ್ದು, ನಿವಾಸಿಗಳು ವಾಸವಿರುವ ಜಾಗ ಸ್ಥಳೀಯರಾದ ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದಾಗಿದೆ ಎಂಬ ಕಾರಣಕ್ಕೆ ಇದುವರೆಗೂ ಹಕ್ಕುಪತ್ರ ದಕ್ಕದಂತಾಗಿದೆ. ಖಾಸಗಿ ಹಿಡುವಳಿ ಜಾಗದಲ್ಲಿ ದಲಿತರು ಮನೆ ಕಟ್ಟಿಕೊಂಡಿರುವುದರಿಂದ ಜಮೀನು ಮಾಲಕರ ಸಮ್ಮತಿ ಇಲ್ಲದೆ ದಲಿತರ ಹೆಸರಿಗೆ ಜಾಗ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸಂಬಂಧಿಸಿದ ಇಲಾಖಾಧಿಕಾರಿಗಳು ಹೇಳುತ್ತಿರುವುದರಿಂದ ಹಕ್ಕುಪತ್ರ ಹೊಂದುವ ನಿವಾಸಿಗಳ ಕನಸು ಇಂದಿಗೂ ಸಾಕಾರವಾಗಿಲ್ಲ ಎಂದು ಹೇಳಲಾಗುತ್ತಿದೆ.
ನಿವಾಸಿಗಳು ಮನೆ ಕಟ್ಟಿಕೊಂಡಿರುವ ಜಾಗದ ಸಮಸ್ಯೆಯನ್ನು ಈ ಹಿಂದೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದ ಸಂದರ್ಭ ಅವರು ಜಾಗದ ಸರ್ವೇ ನಡೆಸಿ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರಾದರೂ ಕಾರಣಾಂತರಗಳಿಂದಾಗಿಯೋ ಅಥವಾ ಪ್ರಭಾವಿಗಳ ಒತ್ತಡದಿಂದಲೋ ಇಂದಿಗೂ ಹಕ್ಕುಪತ್ರ ಮಾತ್ರ ನಿವಾಸಿಗಳಿಗೆ ಸಿಕ್ಕಿಲ್ಲ. ಈ ಸಂಬಂಧ ಹಿಂದಿನ ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅವರಿಂದ ಕೇವಲ ಭರವಸೆ ಸಿಗುತ್ತಿದೆಯೇ ಹೊರತು ಹಕ್ಕುಪತ್ರ ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದ್ದು, ಜಮೀನು ಮಾಲಕರು ಪರಿಶಿಷ್ಟರ ಹೆಸರಿಗೆ ಜಮೀನು ದಾನ ನೀಡಲು ಮುಂದಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಿ ದಲಿತರಿಗೆ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.
ಸದ್ಯ ವಾಸವಿರುವ ನಿವಾಸಿಗಳ ಪೈಕಿ ಕೆಲ ಸರಕಾರಿ ನೌಕರರು, ನಿವೃತ್ತ ನೌಕರರು ಲಕ್ಷಾಂತರ ಹಣ ಖರ್ಚು ಮಾಡಿ ಉತ್ತಮವಾದ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ, ಆರ್ಥಿಕವಾಗಿ ಹಿಂದುಳಿದ ಕುಟುಂಬದವರು ಸರಕಾರದ ವಸತಿ ಯೋಜನೆಯ ಸೌಲಭ್ಯದಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮನೆಯ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಸೇರಿದಂತೆ ಇತರ ಸೌಲಭ್ಯ ಪಡೆಯಲು ಹಕ್ಕುಪತ್ರ ಕೇಳುತ್ತಿರುವುದರಿಂದ ನಿವಾಸಿಗಳು ಕಳೆದ ಹಲವಾರು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹಕ್ಕುಪತ್ರಕ್ಕಾಗಿ ಇಲ್ಲಿನ ನಿವಾಸಿಗಳು ಸಿಎಂ ಸೇರಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಸಂಬಂಧ ಸಂಬಂಧಿಸಿದ ಇಲಾಖಾಧಿಕಾರಿಗಳು, ಜಿಲ್ಲಾ ಮಂತ್ರಿಗಳು ಹಾಗೂ ಕ್ಷೇತ್ರದ ಹಾಲಿ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಸಮಸ್ಯೆಗೆ ಸ್ಪಂದಿಸಬೇಕು, ತಪ್ಪಿದಲ್ಲಿ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ.
ನನ್ನ ತಂದೆ, ತಾಯಿ ಈ ಜಾಗಕ್ಕೆ ಬಂದು ಮನೆ ಕಟ್ಟಿಕೊಂಡು ನೆಲೆಸಿದ್ದರು. ಅವರ ನಿಧನದ ಬಳಿಕ ಈ ಜಾಗ ನಮ್ಮದಲ್ಲ ಎಂಬುದು ತಿಳಿದು ಬಂದಿದ್ದು, ಸುಮಿತ್ರಮ್ಮ ಹಾಗೂ ಹರ್ಷ ಎಂಬವರ ಜಾಗದಲ್ಲಿ ನಾವು ಮನೆ ಕಟ್ಟಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಜಾಗ ಸರಕಾರದ್ದೋ, ಖಾಸಗಿ ವ್ಯಕ್ತಿಗಳದ್ದೋ ಎಂಬ ಬಗ್ಗೆ ಸ್ಪಷ್ಟತೆಯೂ ಇಲ್ಲ. ನಮ್ಮ ಮನೆಗಳಿಗೆ ಹಕ್ಕುಪತ್ರ ಬೇಕು, ನಿವೃತ್ತಿ ಬಳಿಕ ಲಕ್ಷಾಂತರ ರೂ. ವ್ಯಯಿಸಿ ಮನೆ ಕಟ್ಟಿಕೊಂಡಿದ್ದೇನೆ. ಆದರೆ ಮನೆಗೆ ಹಕ್ಕುಪತ್ರ ಇಲ್ಲದೇ ಜಾಗ ನಮ್ಮ ಸ್ವಂತದ್ದೆನ್ನುವಂತೆಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಕ್ಕುಪತ್ರಕ್ಕಾಗಿ ಅಲೆದಾಡಿದ್ದೇವೆ, ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇವೆ. ಆದರೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ನಮ್ಮ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ನಮ್ಮದೇ ಜಾತಿಯವರು ಶಾಸಕರಾಗಿದ್ದರೂ ಅವರೂ ಪ್ರತೀ 5 ವರ್ಷಗಳಿಗೊಮ್ಮೆ ನಮ್ಮ ಮನೆ ಬಾಗಿಲಿಗೆ ಬಂದು ಭರವಸೆ ನೀಡಿ ಹೋಗುತ್ತಿದ್ದಾರೆಯೆ ಹೊರತು ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ. ಮುಂದಿನ ಬಾರಿ ಚುನಾವಣೆಯನ್ನೇ ಬಹಿಷ್ಕರಿಸುವ ಬಗ್ಗೆ ನಿವಾಸಿಗಳೆಲ್ಲರೂ ಚಿಂತಿಸುತ್ತಿದ್ದೇವೆ.
-ಲೋಕೇಶ್, ನಿವೃತ್ತ ಸರಕಾರಿ ನೌಕರ, ಅಂಬೇಡ್ಕರ್ ನಗರದ ನಿವಾಸಿ, ಕಳಸ