ಆರೆಸ್ಸೆಸ್ ಕೇಂದ್ರ ಕಚೇರಿಗೆ ಮೋದಿ ಭೇಟಿ ಏನನ್ನು ಸೂಚಿಸುತ್ತದೆ?

Update: 2025-04-03 10:24 IST
ಆರೆಸ್ಸೆಸ್ ಕೇಂದ್ರ ಕಚೇರಿಗೆ ಮೋದಿ ಭೇಟಿ ಏನನ್ನು ಸೂಚಿಸುತ್ತದೆ?
  • whatsapp icon

ರವಿವಾರ ಪ್ರಧಾನಿ ಮೋದಿ ನಾಗಪುರದ ಆರೆಸ್ಸೆಸ್ ಪ್ರಧಾನ ಕಚೇರಿಗೆ ಭೇಟಿ ನೀಡಿ ಮೋಹನ್ ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಆರೆಸ್ಸೆಸ್ 100 ವರ್ಷಗಳನ್ನು ಪೂರೈಸುತ್ತಿರುವ ಹೊತ್ತಲ್ಲಿ ಪ್ರಧಾನಿಯಾಗಿ ಆರೆಸ್ಸೆಸ್ ಪ್ರಧಾನ ಕಚೇರಿಗೆ ಮೋದಿ ಅವರ ಮೊದಲ ಭೇಟಿ ಇದೆಂಬುದು ಗಮನಿಸಬೇಕಾದ ಸಂಗತಿ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಮುಟ್ಟಲಾರದೇ ನಿಂತ ಬಳಿಕ ಬಹಳಷ್ಟು ಬದಲಾವಣೆಗಳಾದಂತೆ ಕಾಣುತ್ತಿದೆ. ಈ ನಡುವೆ, ಬಿಜೆಪಿ ತನ್ನ ಮುಂದಿನ ಅಧ್ಯಕ್ಷರು ಯಾರೆಂದು ಇನ್ನೂ ಬಹಿರಂಗಪಡಿಸಿಲ್ಲ. ಆ ನಿರ್ಧಾರದಲ್ಲಿ ಆರೆಸ್ಸೆಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದೇ ಹೇಳಲಾಗುತ್ತಿದೆ.

ಮೋದಿ ಮತ್ತು ಶಾ ಕೂತು ನಿರ್ಧಾರ ಮಾಡಿ ಅದನ್ನು ಆರೆಸ್ಸೆಸ್ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯಿದ್ದ ಕಾಲ ಈಗಿಲ್ಲ. ಆರೆಸ್ಸೆಸ್ ಅನ್ನು ದೂರ ಮಾಡಿದರೆ ಬಿಜೆಪಿ ತೆರಬೇಕಾದ ಬೆಲೆ ಏನು ಎಂಬುದು ಕಳೆದ ಲೋಕಸಭಾ ಚುನಾವಣೆ ಸಾಬೀತುಪಡಿಸಿದೆ. ಆರೆಸ್ಸೆಸ್ ಜೊತೆಗಿದ್ದರೆ ಬಿಜೆಪಿಗೆ ಎಷ್ಟು ಲಾಭವಿದೆ ಎಂಬುದು ಹರ್ಯಾಣ, ಮಹಾರಾಷ್ಟ್ರ ಹಾಗೂ ದಿಲ್ಲಿಯಲ್ಲಿ ಸಾಬೀತಾಗಿದೆ.

ಇಷ್ಟವಿದ್ದರೂ ಇಲ್ಲದಿದ್ದರೂ ಮೋದಿ, ಬಿಜೆಪಿ, ಅಮಿತ್ ಶಾಗೆ ಆರೆಸ್ಸೆಸ್ ಅನ್ನು ದೂರ ಮಾಡುವ ಹಾಗಿಲ್ಲ. ಹೀಗಿರುವಾಗಲೇ ಮೋದಿ ನಾಗಪುರಕ್ಕೆ ಹೋದದ್ದು ಕುತೂಹಲಕ್ಕೆ ಕಾರಣವಾಯಿತು.

ಮೋದಿ ತಮ್ಮನ್ನು ತಾವು ಸ್ವಯಂಸೇವಕ ಎಂದು ಹೇಳಿಕೊಂಡರು.

ವಾಜಪೇಯಿ ಕೂಡ ಹಾಗೆಯೇ ಬಣ್ಣಿಸಿಕೊಂಡಿದ್ದರು. ಅದು ವಾಜಪೇಯಿ ವೈಖರಿ ಬಗ್ಗೆ ಆರೆಸ್ಸೆಸ್ ತೀವ್ರ ಅಸಮಧಾನ ಹೊಂದಿದ್ದ ಹೊತ್ತಾಗಿತ್ತು. ಆದರೆ ಅವರು ನಾಗಪುರ ಭೇಟಿಯ ನಂತರವೂ ಆರೆಸ್ಸೆಸ್ ಜೊತೆಗಿನ ತಮ್ಮ ಹಳಸಿದ ಸಂಬಂಧವನ್ನು ಸರಿಪಡಿಸಿಕೊಳ್ಳಲು ಆಗಿರಲಿಲ್ಲ.

ಕೆ. ಸುದರ್ಶನ್ ಆರೆಸ್ಸೆಸ್ ಸರಸಂಘಚಾಲಕರಾಗಿದ್ದಾಗ ಆಗಸ್ಟ್ 2000ದಲ್ಲಿ ಆಗ ಪ್ರಧಾನಿಯಾಗಿದ್ದ ವಾಜಪೇಯಿ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿದ್ದರು.

ಈಗ ಮೋದಿ ಅಧಿಕಾರದಲ್ಲಿ ಇದ್ದಾಗಲೇ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿದ ಎರಡನೇ ಪ್ರಧಾನಿಯಾಗಿದ್ದಾರೆ.

ವಾಜಪೇಯಿ ಪ್ರಧಾನಿಯಾದಾಗ, ಹಲವು ವಿಷಯಗಳಲ್ಲಿ ಅವರ ಪ್ರಮುಖ ನಿರ್ಧಾರಗಳನ್ನು ಆರೆಸ್ಸೆಸ್ ರದ್ದುಗೊಳಿಸಿತ್ತು. ಅವರು ಹಣಕಾಸು ಸಚಿವರಾಗಿ ಜಸ್ವಂತ್ ಸಿಂಗ್ ಅವರನ್ನು ಬಯಸಿದ್ದರು. ಆದರೆ ಅಂತಿಮವಾಗಿ ಯಶವಂತ್ ಸಿನ್ಹಾ ಅವರನ್ನು ಒಪ್ಪಿಕೊಳ್ಳಬೇಕಾಯಿತು.

ಮೋದಿ ಈಚಿನ ಕೆಲ ಸಮಯದಿಂದ, ಅದರಲ್ಲೂ ಕಳೆದ ಚುನಾವಣೆ ವೇಳೆ ಬಿಜೆಪಿಗೆ ಆರೆಸ್ಸೆಸ್ ಅಗತ್ಯವಿಲ್ಲ ಎಂದು ನಡ್ಡಾ ಬಹಿರಂಗ ಹೇಳಿಕೆ ನೀಡಿದಾಗಿನಿಂದ ಆರೆಸ್ಸೆಸ್ ಜೊತೆ ಉತ್ತಮ ಸಂಬಂಧ ಹೊಂದಿಲ್ಲ. ಲೋಕಸಭಾ ಚುನಾವಣಾ ಪ್ರಚಾರದಿಂದಲೂ ಆರೆಸ್ಸೆಸ್ ದೂರ ಉಳಿದಿತ್ತು ಮತ್ತು ಬಿಜೆಪಿಯ ದೊಡ್ಡ ಹಿನ್ನಡೆಗೆ ಇದ್ದ ಕಾರಣಗಳಲ್ಲಿ ಅದೂ ಒಂದಾಗಿತ್ತು.

ಮೋದಿ ಸರಕಾರದ ಕಾರ್ಯವೈಖರಿಯ ಬಗ್ಗೆ ಆರೆಸ್ಸೆಸ್ ಅತೃಪ್ತಿ ಹೊಂದಿದೆ ಮತ್ತು ಸಾಮೂಹಿಕ ನಿರ್ಧಾರವನ್ನು ತೆಗೆದುಕೊಳ್ಳಬೇಕಿರುವುದರ ಅಗತ್ಯವನ್ನು ಅದು ಒತ್ತಿಹೇಳುತ್ತಿದೆ. ಆದರೂ ಕಳೆದ ಲೋಕಸಭೆ ಚುನಾವಣೆಯ ನಂತರ ಅನೇಕ ಮಾತುಕತೆಗಳು ನಡೆದಿವೆ.

ಹರ್ಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಗಾಗಿ ಆರೆಸ್ಸೆಸ್ ಕೆಲಸ ಮಾಡಿತು. ಅದರ ಫಲಿತಾಂಶ ಏನೆಂಬುದು ಕಣ್ಣೆದುರೇ ಇದೆ. ಆ ಮೂಲಕ ತನ್ನ ಶಕ್ತಿಯೇನು ಮತ್ತು ತಾನು ಏನು ಎಂಬುದನ್ನು ಬಿಜೆಪಿ ನಾಯಕತ್ವಕ್ಕೆ ಆರೆಸ್ಸೆಸ್ ತೋರಿಸಿದೆ.

ಇದನ್ನೆಲ್ಲ ಗಮನಿಸಿದರೆ, ಪ್ರಧಾನಿ ಮೋದಿಯ ನಾಗಪುರ ಭೇಟಿ ಆರೆಸ್ಸೆಸ್ ಜೊತೆ ಸಂಬಂಧ ಸರಿಪಡಿಸಿಕೊಳ್ಳುವುದಕ್ಕಾಗಿ ಆಗಿರಲಿಲ್ಲ. ಯಾಕೆಂದರೆ ಅವರು ಮೊದಲು ಸಂಬಂಧ ಸರಿಪಡಿಸಿಕೊಂಡು, ಆನಂತರವೇ ನಾಗಪುರಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಸ್ಯೆಗಳ ಹೊರತಾಗಿಯೂ ಮೋದಿ ಆರೆಸ್ಸೆಸ್ ಜೊತೆ ಸಾಮರಸ್ಯ ಸಾಧಿಸಿದ್ದರಿಂದ ಈ ಭೇಟಿ ಸಾಧ್ಯವಾಯಿತು ಎನ್ನಲಾಗುತ್ತಿದೆ.

ಆರೆಸ್ಸೆಸ್‌ನ ಸಾಕಷ್ಟು ಅಜೆಂಡಾಗಳನ್ನು ಮೋದಿ ಸರಕಾರ ಪೂರೈಸಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತೆ ನೀರಜಾ ಚೌಧರಿ. ಆದರೆ ವಾಜಪೇಯಿ ಅವರಿಂದ ಹಾಗೆ ಮಾಡಲಾಗಿರಲಿಲ್ಲ ಎಂಬುದು ಅವರ ಅಭಿಪ್ರಾಯ.

ಮೋದಿ ಆಡಳಿತದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಯಿತು, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಯಿತು.

ಮುಂಬರುವ ದಿನಗಳಲ್ಲಿ ಪಕ್ಷದ ಅಧ್ಯಕ್ಷರ ಘೋಷಣೆ ಕೂಡ ಆಗಬಹುದು. ಈ ವಿಚಾರವಾಗಿ ಆರೆಸ್ಸೆಸ್ ಒಲವಿನ ಬಗ್ಗೆ ಬಿಜೆಪಿಯ ಅಸಮ್ಮತಿಯಿದೆ. ಬಿಜೆಪಿ ಸೂಚಿಸುವ ಹೆಸರನ್ನು ಆರೆಸ್ಸೆಸ್ ಒಪ್ಪಿಲ್ಲ ಎಂಬ ಮಾತುಗಳಿವೆ.

ಇದು ಆರೆಸ್ಸೆಸ್ 100 ವರ್ಷಗಳನ್ನು ಪೂರೈಸುತ್ತಿರುವ ವರ್ಷ. ಅದರ ಆಚರಣೆಯ ಭಾಗವಾಗಿ ಈ ಅಕ್ಟೋಬರ್‌ನಿಂದ ಮುಂದಿನ ವರ್ಷದ ಸೆಪ್ಟಂಬರ್‌ವರೆಗೆ ಸಾವಿರಾರು ದೊಡ್ಡ ಕಾರ್ಯಕ್ರಮಗಳು ನಡೆಯಬಹುದು ಮತ್ತು ಆ ಕಾರ್ಯಕ್ರಮಗಳು ಆರೆಸ್ಸೆಸ್‌ನ ಸೈದ್ಧಾಂತಿಕ ಸಂದೇಶದ ವಿಸ್ತರಣೆಯಂತಿರಬಹುದು ಎಂದು ಹೇಳಲಾಗಿದೆ. ಎಐ, ಕಾರ್ಪೊರೇಟ್‌ಗಳು, ಶೈಕ್ಷಣಿಕ ವಲಯ ಇಂಥದ್ದರ ಕಡೆ ಹೆಚ್ಚು ತಲುಪುವುದು ಅದರ ಗುರಿಯಾಗಲಿದೆ.

ಪ್ರಧಾನಿ ಆರೆಸ್ಸೆಸ್ ಅನ್ನು ದೊಡ್ಡ ಶಬ್ದಗಳಲ್ಲಿ ಹೊಗಳಿದ್ದಾರೆ. ಆರೆಸ್ಸೆಸ್ ಅನ್ನು ಅವರು ‘ಅಮರ ಸಂಸ್ಕೃತಿಯ ಆಲದ ಮರ’ ಎಂದು ಬಣ್ಣನೆ ಮಾಡಿದ್ದಾರೆ. ಸಂಘದ ಸಂಸ್ಥಾಪಕರಾದ ಹೆಡ್ಗೇವಾರ್, ಗೋಳ್ವಾಲ್ಕರ್ ಕನಸಿನಂತೆ ಸರಕಾರ ವಿಕಸಿತ ಭಾರತ ಪರಿಕಲ್ಪನೆಯನ್ನು ಪೂರ್ಣಗೊಳಿಸಲು ಬದ್ಧವಾಗಿದೆ ಎಂದು ಕೂಡ ಮೋದಿ ಹೇಳಿದ್ದಾರೆ.

ಅಂಬೇಡ್ಕರ್ ಅವರು ಅನುಯಾಯಿಗಳ ಜತೆ ಬೌದ್ಧ ಧರ್ಮ ಸ್ವೀಕರಿಸಿದ ನಾಗಪುರದ ದೀಕ್ಷಾ ಭೂಮಿಗೂ ಮೋದಿ ಭೇಟಿ ನೀಡಿ, ನಮನ ಸಲ್ಲಿಸಿದ್ದನ್ನು ಇಲ್ಲಿ ಗಮನಿಸಬೇಕು.

ಕಾಂಗ್ರೆಸ್ ಸಿದ್ಧಾಂತ ದಶಕಗಳಿಂದ ಪ್ರಬಲ ಸಿದ್ಧಾಂತವಾಗಿತ್ತು. ಆದರೆ ಆರೆಸ್ಸೆಸ್ ಈಗ ಅದನ್ನು ಹೂತುಹಾಕಲು ಮತ್ತು ತಮ್ಮ ಪ್ರತಿಪಾದನೆಯನ್ನು ಭಾರತದ ಜನರು ಸ್ವೀಕರಿಸಿದ ಪ್ರಬಲ ಸಿದ್ಧಾಂತವಾಗಿ ತರಲು ಬಯಸುತ್ತಾರೆ. ಇದು ಬಹಳ ಮಹತ್ವಾಕಾಂಕ್ಷೆಯ ರೀತಿಯದ್ದಾಗಿದೆ.

ದೇಶದಲ್ಲಿ ಆರೆಸ್ಸೆಸ್ ಬಗ್ಗೆ ಒಲವುಳ್ಳ ಸಾಕಷ್ಟು ದೊಡ್ಡ ವಿಭಾಗಗಳಿವೆ. ಶೈಕ್ಷಣಿಕ ವಲಯ, ಕಾರ್ಪೊರೇಟ್ ಜಗತ್ತು, ಶ್ರೀಮಂತರು, ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಜನರು ಈ ಎಲ್ಲ ವಿಭಾಗಗಳನ್ನು ತಲುಪಲು ಆರೆಸ್ಸೆಸ್ ಬಯಸುತ್ತದೆ. ಇದಕ್ಕಾಗಿ ಅದು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತದೆ. ಅಕ್ಟೋಬರ್‌ನಿಂದ ಪ್ರಾರಂಭವಾಗುವ 100ನೇ ವರ್ಷದ ಆಚರಣೆಯಲ್ಲಿ ಅವರು ಈ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆ ಹೆಚ್ಚು.

ಒಂದು ವೇಳೆ ಅದು ಮೋದಿ ನಾಯಕತ್ವವನ್ನೇ ಒಪ್ಪಿಕೊಂಡಿದ್ದರೆ ಅವರನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ, ಅವರು 2029ರವರೆಗೆ ಸಹ ಇರಬಹುದು.

2027ರ ಉತ್ತರ ಪ್ರದೇಶ ಚುನಾವಣೆ ಬಹಳ ನಿರ್ಣಾಯಕವಾಗಿರುತ್ತದೆ.

ಭಿನ್ನಮತಗಳನ್ನೆಲ್ಲ ಸರಿಪಡಿಸುವುದರ ನಡುವೆ, ವಿಪಕ್ಷಗಳೇ ಇಲ್ಲವಾಗಿಬಿಡಬಹುದಾದ ಅಪಾಯವಿದೆಯೇ ಎಂತಲೂ ಅನ್ನಿಸುತ್ತದೆ.

ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿದ ಮೋದಿ ನಡೆಯ ಹಿಂದೆ ಉತ್ತರಾಧಿಕಾರಿ ಆಯ್ಕೆಯ ಕಾರಣವಿದೆ ಎಂದೂ ಹೇಳಲಾಗುತ್ತಿದೆ. ಉದ್ಧವ್ ಬಣದ ಶಿವಸೇನೆ ನಾಯಕ ಸಂಜಯ್ ರಾವುತ್ ಅವರು ಹೀಗೆ ಹೇಳುವ ಮೂಲಕ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ.

ಸೆಪ್ಟಂಬರ್ ತಿಂಗಳಲ್ಲಿ ಮೋದಿ ಅವರಿಗೆ 75 ವರ್ಷ ತುಂಬಲಿದೆ. ಬಳಿಕ ಅವರು ಪದತ್ಯಾಗ ಮಾಡಲಿದ್ದು, ತಮ್ಮ ಉತ್ತರಾಧಿಕಾರಿ ಕುರಿತು ಚರ್ಚಿಸಲು ಸಂಘದ ಕಚೇರಿಗೆ ಭೇಟಿ ನೀಡಿರಬಹುದು ಎಂದಿದ್ದಾರೆ.

ಆರೆಸ್ಸೆಸ್ ಸಹ ಬಿಜೆಪಿ ನಾಯಕತ್ವ ಬದಲಾವಣೆಗೆ ಚಿಂತನೆ ನಡೆಸಿರಬಹುದು ಎಂದು ರಾವುತ್ ವಿಶ್ಲೇಷಿಸಿದ್ದಾರೆ.

ಖಂಡಿತ ಆರೆಸ್ಸೆಸ್ ಮುಂದಿನ 50 ವರ್ಷಗಳ ಬಗ್ಗೆ ಯೋಚಿಸುತ್ತದೆ ಹಾಗಾಗಿ ಖಂಡಿತವಾಗಿಯೂ ಮೋದಿ ಉತ್ತರಾಧಿಕಾರಿಯ ಬಗ್ಗೆಯೂ ಸಂಘದವರು ಯೋಚಿಸಿರುತ್ತಾರೆ ಮತ್ತು ಅವರು ಆ ರಾಷ್ಟ್ರೀಯ ಪಾತ್ರಕ್ಕಾಗಿ ತಾವು ತಯಾರು ಮಾಡಿದವರನ್ನು ಆರಿಸಿಕೊಳ್ಳುತ್ತಾರೆ.

ಮಹಾರಾಷ್ಟ್ರ ನಾಯಕರಾಗಿರುವ ಗಡ್ಕರಿ ಮತ್ತು ಫಡ್ನವೀಸ್ ಇಬ್ಬರು ಮೋದಿ ನಾಗಪುರ ಭೇಟಿ ಕಾರ್ಯಕ್ರಮದಲ್ಲಿ ಇದ್ದರು ಎಂಬುದನ್ನು ಗಮನಿಸಬೇಕು. ಫಡ್ನವೀಸ್ ಅಂತೂ ಆರೆಸ್ಸೆಸ್‌ನ ಅತ್ಯಂತ ನೆಚ್ಚಿನ ಮನುಷ್ಯ.

ಬಹಳಷ್ಟು ಜನರು ಆದಿತ್ಯನಾಥ್ ಬಗ್ಗೆ ಮಾತನಾಡುತ್ತಾರೆ. ಆದರೆ ಆದಿತ್ಯನಾಥ್ ಎಂದಿಗೂ ಆರೆಸ್ಸೆಸ್‌ಗೆ ನೆಚ್ಚಿನವರಾಗಿರಲಿಲ್ಲ ಎನ್ನಲಾಗುತ್ತದೆ.

ಆದರೂ ಆದಿತ್ಯನಾಥ್ ಬಿಜೆಪಿ ಹೊರತಾಗಿಯೂ, ಆರೆಸ್ಸೆಸ್ ಹೊರತಾಗಿಯೂ ತಮ್ಮದೇ ಅನುಯಾಯಿಗಳನ್ನು ಹೊಂದಿದ್ದಾರೆ ಎಂಬುದರ ಬಗ್ಗೆಯೂ ಆರೆಸ್ಸೆಸ್‌ಗೆ ತಿಳಿದಿದೆ.

ಆದಿತ್ಯನಾಥ್ ಅವರು ವಾಜಪೇಯಿ, ಮೋದಿ, ಅಮಿತ್ ಶಾ, ಫಡ್ನವೀಸ್‌ರಂತೆ ಆರೆಸ್ಸೆಸ್‌ನಿಂದ ಬೆಳೆದು ಬಂದ ನಾಯಕ ಅಲ್ಲ. ಆರೆಸ್ಸೆಸ್‌ನಲ್ಲಿ ಒಂದು ಗುಂಪಿನ ಚಿಂತೆ ಏನೆಂದರೆ, ಅವರು ಆರೆಸ್ಸೆಸ್ ಮತ್ತು ಬಿಜೆಪಿಯ ಶಿಸ್ತಿಗೆ ವಿಧೇಯರಾಗುತ್ತಾರೆಯೇ ಅಥವಾ ಬೇರೆ ದಿಕ್ಕಿನಲ್ಲಿ ಹೋಗುತ್ತಾರೆಯೇ ಎಂಬುದು. ಆದರೂ ಆದಿತ್ಯನಾಥ್ ಖಂಡಿತ ಮೋದಿ ಉತ್ತರಾಧಿಕಾರಿಯಾಗಬಲ್ಲವರ ಸಾಲಿನಲ್ಲಿ ಇರುತ್ತಾರೆ.

ಇನ್ನು ಫಡ್ನವೀಸ್ ಕೂಡ ಹೇಗೆ ಮುನ್ನೆಲೆಗೆ ಬರಬಹುದು ಎಂಬುದನ್ನು ಆರೆಸ್ಸೆಸ್ ನೋಡಲಿದೆ. ಶಿವರಾಜ್ ಚೌಹಾಣ್ ಕೂಡ ಆರೆಸ್ಸೆಸ್ ದೃಷ್ಟಿಯಲ್ಲಿದ್ದಾರೆ. ಆದರೆ ಅಮಿತ್ ಶಾ ಇರುತ್ತಾರೆಯೇ ಎಂಬುದು ಮುಖ್ಯ ಪ್ರಶ್ನೆ. ಈಗಾಗಲೇ ಅವರು ಮೋದಿಯ ನಂತರದ ಸ್ಥಾನದಲ್ಲಿದ್ದಾರೆ. ಜೊತೆಗೆ ಹಿಮಂಡ ಬಿಸ್ವಾ ಶರ್ಮಾ ಕೂಡ ಇದ್ದಾರೆ.

ಇದೆಲ್ಲದರ ನಡುವೆ, ಮುಂದಿನ ಬಿಜೆಪಿಯ ಅಧ್ಯಕ್ಷರು ಯಾರಾಗಿರಬಹುದು ಎಂಬುದು ಕೂಡ ದೊಡ್ಡ ಕುತೂಹಲ.

ಸಂಘಟನೆಗೆ ಸಂಪೂರ್ಣ ಗಮನ ನೀಡುವ ವ್ಯಕ್ತಿಯನ್ನು ಅವರು ಬಯಸುತ್ತಾರೆ. ಆದರೆ ಆ ವ್ಯಕ್ತಿ ಪ್ರಧಾನಿ ಮತ್ತು ಗೃಹ ಸಚಿವರು ಒಪ್ಪಿಕೊಳ್ಳುವ ವ್ಯಕ್ತಿಯಾಗಬೇಕು. ಬಹುಶಃ ಮೋದಿ ನಾಗಪುರ ಭೇಟಿ ಸಂದರ್ಭದಲ್ಲಿ ಇದಕ್ಕೊಂದು ಪರಿಹಾರ ಸಿಕ್ಕಿದ್ದರೂ ಸಿಕ್ಕಿರಬಹುದು.

ನರೇಂದ್ರ ಮೋದಿಯವರಿಗೆ ಸವಾಲು ಎಡ ಮತ್ತು ಮಧ್ಯಮ ಪಂಥೀಯರಿಂದ ಅಲ್ಲ, ತೀವ್ರ ಬಲಪಂಥೀಯರಿಂದ ಎನ್ನಲಾಗುತ್ತದೆ. ಆದಿತ್ಯನಾಥ್ ಆ ತೀವ್ರ ಬಲಪಂಥೀಯತೆಯನ್ನು ಸಂಕೇತಿಸುತ್ತಾರೆಯೇ? ಆದ್ದರಿಂದ ಪ್ರಶ್ನೆ, ದೊಡ್ಡ ಕುಟುಂಬದಲ್ಲಿ ಏನು ನಡೆಯುತ್ತಿದೆ ಎಂಬುದು.

ಒಂದು ಪ್ರಮುಖ ವಿಷಯವೆಂದರೆ, ಸದ್ಯಕ್ಕೆ ಬಿಹಾರದಲ್ಲಿನ ಒಂದೇ ಒಂದು ಚುನಾವಣೆ. ನಂತರದ ದೊಡ್ಡ ವಿಷಯ ಉತ್ತರ ಪ್ರದೇಶ, ಆದರೆ ಅದು ಇನ್ನೂ ದೂರದಲ್ಲಿದೆ.

ವಾಸ್ತವವಾಗಿ ಸುಮಾರು ಒಂದು ವರ್ಷದವರೆಗೆ ಮೋದಿ ಸರಕಾರ ಚುನಾವಣೆಗಳನ್ನು ಗೆಲ್ಲುವ ಸವಾಲುಗಳಿಂದ ವಿಚಲಿತವಾಗುವುದಿಲ್ಲ ಮತ್ತು ಅದು ಸ್ವತಃ ತಯಾರಾಗಲು ಅದಕ್ಕೆ ಸಿಗುತ್ತಿರುವ ಸಮಯವಾಗಬಹುದು ಅಥವಾ ಮೋದಿಗೆ ಸಿಗುತ್ತಿರುವ ಸಮಯವಿರಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News