ಮಾಂಸಕ್ಕಿರುವ ನಿಷೇಧ ಮದ್ಯಕ್ಕೆ ಏಕಿಲ್ಲ?

Update: 2025-04-04 11:36 IST
Editor : Thouheed | Byline : ವಿನಯ್ ಕೆ.
ಮಾಂಸಕ್ಕಿರುವ ನಿಷೇಧ ಮದ್ಯಕ್ಕೆ ಏಕಿಲ್ಲ?
  • whatsapp icon

ನವರಾತ್ರಿಯ ಸಮಯದಲ್ಲಿ ಯಾವುದೇ ಹಿಂದೂ ದೇವಾಲಯದಿಂದ 500 ಮೀಟರ್ ಒಳಗೆ ಮಾಂಸ ಮಾರಾಟವನ್ನು ಉತ್ತರ ಪ್ರದೇಶ ಸರಕಾರ ನಿಷೇಧಿಸಿದೆ.

ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಇದನ್ನು ಘೋಷಿಸಿದ ಬೆನ್ನಲ್ಲೇ ದಿಲ್ಲಿಯಲ್ಲಿ ಹೊಸದಾಗಿ ರಚನೆಯಾದ ಬಿಜೆಪಿ ಸರಕಾರ ಕೂಡ ಅದನ್ನೇ ಮಾಡಿತು. ದಿಲ್ಲಿಯಲ್ಲಿ ದೇವಾಲಯದ 150 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾಂಸದ ಅಂಗಡಿ ಇದ್ದರೆ ಅದನ್ನು ಮುಚ್ಚಬೇಕೆಂದು ನಿರ್ಬಂಧ ವಿಧಿಸಲಾಗಿದೆ.

ಮಧ್ಯಪ್ರದೇಶ ಸರಕಾರ ಒಂದು ಜಿಲ್ಲೆಯಲ್ಲಿ ಮಾಂಸ ಮಾರಾಟ ನಿಷೇಧ ಜಾರಿಗೆ ನಿರ್ಧರಿಸಿತು. ಅಲ್ಲಿ ಮಹಿಯಾರ್ ನಗರದಲ್ಲಿ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾಂಸದ ಅಂಗಡಿ ತೆರೆಯುವಂತಿಲ್ಲ. ಆದರೆ ಮದ್ಯ ಮಾರಾಟದ ಮೇಲೆ ಮಾತ್ರ ಯಾವುದೇ ನಿಷೇಧವಿಲ್ಲ.

ಇದು ಏನು ಹಾಗಾದರೆ? ಇದು ಸಂಘ ಪರಿವಾರ ಬಯಸುವ ಹಿಂದೂ ರಾಷ್ಟ್ರ ಎಂದರೆ ಹೀಗಿರಲಿದೆ ಎಂದು ತೋರಿಸುವ ಉದ್ದೇಶದ ಕ್ರಮವೇ ಎಂದು ಕೇಳಿದ್ದಾರೆ ಉತ್ತರ ಪ್ರದೇಶದ ಹಿರಿಯ ಪತ್ರಕರ್ತ ಶರತ್ ಪ್ರಧಾನ್.

ಈ ಬಿಜೆಪಿ ಸರಕಾರಗಳ ನಡೆ ನೋಡಿದರೆ, ಮಾಂಸಕ್ಕಿಂತ ಮದ್ಯ ಉತ್ತಮ ಎಂದಾಯಿತು. ಇದನ್ನು ಯಾವುದಾದರೂ ಧರ್ಮದಲ್ಲಿ ಬರೆಯಲಾಗಿದೆಯೇ?

2017ರಲ್ಲಿ ಯುಪಿಯಲ್ಲಿ ಆದಿತ್ಯನಾಥ್ ಅಧಿಕಾರಕ್ಕೆ ಬಂದಾಗ, ಅವರು ಅಕ್ರಮ ಕಸಾಯಿಖಾನೆಗಳನ್ನು ನಿಷೇಧಿಸುವುದಾಗಿ ಹೇಳಿದ್ದರು. ಆದರೆ ಅಕ್ರಮ ಕಸಾಯಿಖಾನೆಗಳು ನಡೆಯುತ್ತಿದ್ದರೆ, ಅವು ಯಾರ ಕಾರಣದಿಂದಾಗಿ ನಡೆಯುತ್ತಿವೆ?

ಅವು ಸರಕಾರದ ರಕ್ಷಣೆಯಲ್ಲಿಯೇ ನಡೆಯುತ್ತವೆ. ಈ ಇಲಾಖೆಗಳಲ್ಲಿ ಲಂಚ ನಡೆಯುತ್ತದೆ ಮತ್ತು ಹಣ ಪಡೆದು ಅಕ್ರಮ ಕಸಾಯಿಖಾನೆಗಳು ಸೇರಿದಂತೆ ಎಲ್ಲ ಕಾನೂನುಬಾಹಿರ ಕೆಲಸಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಈ ಇಲಾಖೆಗಳ ಯಾವುದೇ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಅಕ್ರಮ ಕಸಾಯಿಖಾನೆಗಳ ವಿಷಯ, ಮಾಂಸದಂಗಡಿಯ ವಿಷಯ ಬೇರೆ.

ಈಗ ದೇವಾಲಯದಿಂದ 500 ಮೀಟರ್ ಒಳಗಿದ್ದರೆ ಅಂತಹ ಯಾವುದೇ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಲಾಗುತ್ತದೆ. ಆದರೆ ಇದರ ಹಿಂದೆ ಮುಸ್ಲಿಮರನ್ನು ಆರ್ಥಿಕವಾಗಿ ಹೇಗೆ ನಿಗ್ರಹಿಸುವುದು ಎಂಬುದು ಉದ್ದೇಶವಾಗಿದೆ ಎಂಬಂತೆ ಕಾಣಿಸುತ್ತದೆ ಎಂದು ಹೇಳಿದ್ದಾರೆ ಶರತ್ ಪ್ರಧಾನ್.

ಏಕೆಂದರೆ ಹೆಚ್ಚಿನ ಮಾಂಸದ ಅಂಗಡಿಗಳನ್ನು ಮುಸ್ಲಿಮರು ನಡೆಸುತ್ತಾರೆ. ಆದರೆ ಅಂಗಡಿಗಳಿಂದ ಮಾಂಸವನ್ನು ಖರೀದಿಸುವ ಹೆಚ್ಚಿನ ಜನರು ಹಿಂದೂಗಳು ಎಂಬುದು ಬೇರೆ ವಿಷಯ.

ನವರಾತ್ರಿ ನೆಪದಲ್ಲಿ ಈಗ ಮಾಂಸದಂಗಡಿಗಳನ್ನು ಮುಚ್ಚಿಸಲಾಗಿದೆ.

ನವರಾತ್ರಿಗೆ ಮಾಂಸದ ಅಂಗಡಿಯವರು ತಾವಾಗಿಯೇ ಮುಚ್ಚಿದ್ದಾರೆ ಎಂದೇ ಗೊತ್ತಿರದವರು ಭಾವಿಸುತ್ತಾರೆ. ಆದರೆ, ಅದರಿಂದ ತಮ್ಮ ಜೀವನೋಪಾಯಕ್ಕೇ ತೊಡಕು ಉಂಟಾಗುವಾಗ ಅವರು ಯಾಕಾದರೂ ಸ್ವತಃ ಅಂಗಡಿ ಮುಚ್ಚಿಯಾರು? ಆದರೆ ಮುಚ್ಚಿದ್ದಾರೆ. ಯಾಕೆಂದರೆ, ಹೀಗೆ ನಿರ್ಬಂಧಗಳನ್ನು ಹೇರಲಾಗಿದೆ.

ಇಲ್ಲಿ ನಿರ್ಬಂಧ 500 ಮೀಟರ್ ವ್ಯಾಪ್ತಿಗೆ ಸೀಮಿತ ಎಂಬಂತೆ ತೋರುತ್ತದೆ. ಆದರೆ ದೇವಸ್ಥಾನ ಒಂದೇ ಕಡೆ ಇರುವುದಿಲ್ಲ. ಸುತ್ತ ಹಲವು ಕಡೆ ಇರುತ್ತವೆ. ಹಾಗಾಗಿ ಎಲ್ಲ ಸ್ಥಳಗಳೂ 500 ಮೀಟರ್ ವ್ಯಾಪ್ತಿ ಒಳಗೆ ಎನ್ನುವಂತಾಗಿ, ಕಡೆಗೆ ಎಲ್ಲೂ ಮಾಂಸದಂಗಡಿ ನಡೆಯದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತದೆ.

ಯಾರೂ 500 ಮೀಟರ್ ವ್ಯಾಪ್ತಿ ಎಲ್ಲಿಯವರೆಗೆ ಎಂದು ಅಳೆಯಲು ಹೋಗುವುದಿಲ್ಲ. ವ್ಯಾಪ್ತಿ ಎಂಬುದೇನಿದ್ದರೂ ಪೊಲೀಸರ ಮತ್ತು ಪುರಸಭೆಯ ಮೇಲೆ ಅವಲಂಬಿತವಾಗಿದೆ.ಅವರಿಗೆ ಮಾಂಸದಂಗಡಿ ಮುಚ್ಚಿಸುವುದು ಈಗ ಒಂದು ಆಟದಂತೆ ಆಗಿಬಿಟ್ಟಿದೆ.

ನವರಾತ್ರಿ ಆಚರಿಸುವ ಹೆಚ್ಚಿನ ಹಿಂದೂ ಜನರು ಮದ್ಯವನ್ನು ಸಹ ತೆಗೆದುಕೊಳ್ಳುವುದಿಲ್ಲ. ಆದರೂ ಮದ್ಯ ಮಾರಾಟದ ಮೇಲೆ ನಿಷೇಧ ಹೇರಿಲ್ಲ. ಮದ್ಯದ ಅಂಗಡಿಗಳು ಮುಚ್ಚುವುದಿಲ್ಲ.

ಮಾಂಸ ಮಾರಾಟಕ್ಕೆ ತಡೆಯೊಡ್ಡುವುದರ ಹಿಂದೆ ಯಾವುದೋ ಒಂದು ಮನಸ್ಥಿತಿ ಇದೆ ಎಂಬುದು ನಿಜ. ಹೆಚ್ಚಿನ ಮಾರಾಟಗಾರರು ಮುಸ್ಲಿಮರೇ ಆಗಿರುವುದರಿಂದ ಅವರನ್ನು ಆರ್ಥಿಕವಾಗಿ ದುರ್ಬಲಗೊಳಿಸಬಹುದು. ಹಾಗಾದರೆ ಇದು ಯಾವ ರೀತಿಯ ನಿರ್ಬಂಧ?

ದಿನನಿತ್ಯ ಏನೋ ಒಂದನ್ನು ಮಾರಾಟ ಮಾಡಿ ಸಂಪಾದಿಸುವ, ಅದರಿಂದಲೇ ಬದುಕುವ ಅನೇಕರಿದ್ದಾರೆ ಮತ್ತು ಇನ್ನೂ ಅನೇಕ ಜನರು ಅವರ ಮೇಲೆ ಅವಲಂಬಿತರಾಗಿದ್ದಾರೆ.

ಒಂದು ಅಂಗಡಿ ಮುಚ್ಚಿತೆಂದರೆ, ಅದನ್ನು ಅವಲಂಬಿಸಿದ್ದ ಉದ್ಯೋಗಿಗಳು, ದಿನಗೂಲಿಗಳು ಎಲ್ಲರೂ ಅವತ್ತಿನ ಊಟಕ್ಕೆ ಪರದಾಡಬೇಕಾದ ಸ್ಥಿತಿಯಿದೆ. ಆದರೆ, ಯಾರಾದರೂ ಇದರ ಬಗ್ಗೆ ಯೋಚಿಸುತ್ತಾರೆಯೇ?

ಮಾಂಸಾಹಾರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ ಎಂದಾದರೆ, ಮದ್ಯ ಧಾರ್ಮಿಕ ಭಾವನೆಗಳ ವಿಷಯದಲ್ಲಿ ಉತ್ತಮವೆ? ಅದರ ಬಗ್ಗೆಯೂ ಯೋಚಿಸಬೇಕಿತ್ತಲ್ಲವೆ?

ಆದರೆ ಅದರಿಂದ ಸರಕಾರಕ್ಕೆ ಸಾಕಷ್ಟು ಆದಾಯ ಬರುತ್ತದೆ. ಬಹುಶಃ ಅದಕ್ಕಾಗಿಯೇ ಮದ್ಯವನ್ನು ನಿಷೇಧಿಸಿಲ್ಲ.

ಮಾಂಸ ಮಾರಾಟ ಮಾಡುವ ಹೆಚ್ಚಿನ ಅಂಗಡಿಯವರು ಹೇಳುವಂತೆ, ಮಾಂಸ ತಿನ್ನುವವರಲ್ಲಿ ಹೆಚ್ಚಿನವರು ಮುಸ್ಲಿಮರಲ್ಲ, ಅವರು ಹಿಂದೂಗಳು. ಈಗ ಈ ನಿಷೇಧದಿಂದ ಅವರು ಮಾಂಸ ತಿನ್ನದಂತಾಗಿದೆ.

ಈ ನಿಷೇಧದಿಂದ ಏನನ್ನು ಸಾಧಿಸಲಾಗುತ್ತಿದೆ?

ಇತ್ತೀಚಿನ ದಿನಗಳಲ್ಲಿ ದ್ವೇಷದ ರಾಜಕೀಯದ ಮೂಲಕ ಮುಸ್ಲಿಮರನ್ನು ಹೇಗೆಲ್ಲ ನೋಯಿಸಲಾಗುತ್ತಿದೆ ಎಂಬುದು ಗೊತ್ತಿರುವ ವಿಚಾರ.

ಮತ್ತವರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ತೋರಿಸುವುದು ಕೂಡ ಒಂದು ರಾಜಕೀಯವೇ ಆಗಿದೆ. ಆ ಮೂಲಕ, ಹಿಂದೂಗಳನ್ನು ಮೆಚ್ಚಿಸುವ, ಅವರ ಮತಗಳನ್ನು ಪಡೆಯುವ ರಾಜಕೀಯ ಅದು.

ಇಲ್ಲಿ ಧ್ರುವೀಕರಣ ನಡೆಯುತ್ತಿದೆ.

ಇದೆಲ್ಲವೂ ಮತಗಳನ್ನು ಗಳಿಸುವ ಏಕೈಕ ಉದ್ದೇಶದಿಂದ ನಡೆಯುತ್ತದೆ.

ಹಿಂದೂಗಳನ್ನು ಮತ್ತಷ್ಟು ಬಲಪಡಿಸಲು, ಮುಸ್ಲಿಮರ ವಿರುದ್ಧ ಎಷ್ಟು ಕಟ್ಟುನಿಟ್ಟಾಗಿದ್ದೇವೆ ನೋಡಿ ಎಂದು ತೋರಿಸಿಕೊಳ್ಳಲು ಇವೆಲ್ಲವೂ ನಡೆಯುತ್ತಿದೆ.

ಮಾರಾಟಗಾರರಲ್ಲಿಯೂ ಅನೇಕರು ಹಿಂದೂಗಳು ಇದ್ದಾರೆ. ಅಂದರೆ, ಹೆಚ್ಚಿನ ರೆಸ್ಟೋರೆಂಟ್ ಮಾಲಕರು ಮುಸ್ಲಿಮರಲ್ಲ. ಅವರು ಹಿಂದೂಗಳು.

ಅಲ್ಲದೆ ದೊಡ್ಡ ಪ್ರಮಾಣದ ಮಾಂಸ ರಫ್ತುದಾರರಲ್ಲಿ ಅನೇಕರು ಹಿಂದೂಗಳೇ ಇದ್ದಾರೆ.

ಭಾರತ ವಿಶ್ವದಲ್ಲೇ ಗೋಮಾಂಸದ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ ಮತ್ತು ಆ ಗೋಮಾಂಸವನ್ನು ರಫ್ತು ಮಾಡುವ ಅತಿ ದೊಡ್ಡ ವ್ಯಾಪಾರಿಗಳು ಅಂದರೆ ಎಮ್ಮೆ ಮಾಂಸ ಮಾರುವವರು, ಕಸಾಯಿಖಾನೆಗಳನ್ನು ಹೊಂದಿರುವವರಲ್ಲಿ ಅನೇಕರು ಹಿಂದೂಗಳೇ ಇದ್ದಾರೆ.

ಒಂದು ಕಡೆ ಜೈನರೂ ಇರುವ ಉದಾಹರಣೆ ಬಗ್ಗೆ ಹೇಳಲಾಗುತ್ತದೆ ಎಂದು ನೆನಪಿಸಿದ್ದಾರೆ ಶರತ್ ಪ್ರಧಾನ್.

ಮುಸ್ಲಿಮರ ಆದಾಯಕ್ಕೆ ಮಾತ್ರವಲ್ಲ, ಈ ನಿಷೇಧದಿಂದ ಸರಕಾರಗಳು ಮಾಂಸ ತಿನ್ನುವವರ ಹೊಟ್ಟೆ ಮೇಲೂ ಹೊಡೆದಿವೆ. ಆದರೆ ಮುಸ್ಲಿಮರ ವಿರುದ್ಧ ಇದನ್ನು ಮಾಡುತ್ತಿದ್ದೇವೆ ಎಂದು ಇತರ ಮತದಾರರ ಎದುರು ತೋರಿಸಿಕೊಳ್ಳಲಾಗುತ್ತಿದೆ.

ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್ ದಂಧೆ, ಹತ್ತಾರು ರೀತಿಯ ಜೂಜು, ಡ್ರಗ್ಸ್, ಮಕ್ಕಳ ಮಹಿಳೆಯರ ಅಕ್ರಮ ಸಾಗಾಟ, ಗೂಂಡಾಗಿರಿ-ಇವುಗಳ ಮೇಲೆ ಹೆಸರಿಗೆ ಮಾತ್ರ ಇರುವ ನಿರ್ಬಂಧವನ್ನು ನಿಜಾರ್ಥದಲ್ಲಿ ಜಾರಿಗೆ ತರುವುದು ಯಾವ ಸರಕಾರಕ್ಕೂ ಬೇಡವಾಗಿದೆ. ಆದರೆ ಜನರು ಹೊಟ್ಟೆಗೆ ತಿನ್ನುವ ಆಹಾರವನ್ನು ಮಾರದಂತೆ ನಿಷೇಧಿಸುವುದರಲ್ಲಿ ಇವರಿಗೆ ಬಹಳ ಮುತುವರ್ಜಿ ಇದೆ.

ದುರದೃಷ್ಟವಶಾತ್, ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಫ್ಯಾಶಿಸ್ಟ್ ಆಡಳಿತದಲ್ಲಿ ಇದ್ದೇವೆ ಎಂಬ ಅನುಮಾನ ಮೂಡುವಂತಹ ಬೆಳವಣಿಗೆಗಳು ನಡೆಯುತ್ತಿವೆ ಎನ್ನುತ್ತಾರೆ ಶರತ್ ಪ್ರಧಾನ್

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News