ಬಾಬು ಜಗಜೀವನ್ ರಾಂ ನೆನಪಲ್ಲಿ ಎಡ-ರೈತ-ದಲಿತ ಕನ್ನಡ ಹೋರಾಟ

ಬೆಂಗಳೂರಿನ ತುಂಬೆಲ್ಲಾ ರಾರಾಜಿಸುತ್ತಿದ್ದ ಕನ್ನಡ ಬಾವುಟಗಳ ಜಾಗದಲ್ಲಿ ಕೇಸರಿ ಧ್ವಜಗಳು ವಕ್ಕರಿಸಿವೆ. ಕನ್ನಡ ಚಳವಳಿಯ ಜಾಗವನ್ನು ಹಿಂದುತ್ವ ಚಳವಳಿ ಆಕ್ರಮಿಸಿಕೊಳ್ಳುತ್ತಿದೆ. ಕೇವಲ ಹತ್ತು-ಐದು ವರ್ಷಗಳ ಹಿಂದೆ ಕೆಂಪು-ಹಳದಿಮಯವಾಗಿದ್ದ ಬೆಂಗಳೂರಿನ ಗಲ್ಲಿಗಳು, ಸ್ಲಂಗಳು ಕೇಸರಿಮಯವಾಗುತ್ತಿದೆ. ಇದಕ್ಕೆ ಕಾರಣ, ಕನ್ನಡ ಚಳವಳಿಯು ದಲಿತ, ಶೋಷಿತರು, ಅಲ್ಪಸಂಖ್ಯಾತರು, ಕಾರ್ಮಿಕರ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದು ಎಂಬುದು ಸ್ಪಷ್ಟ. ಕನ್ನಡ ಚಳವಳಿಗಳು ಎಡ, ರೈತ, ದಲಿತ ಚಳವಳಿಗಳ ಸಂಪರ್ಕ ಕಡಿದುಕೊಂಡಿರುವುದೇ ಬೆಂಗಳೂರಿನಲ್ಲಿ ಕನ್ನಡ ಚಳವಳಿಯ ಅಸ್ತಿತ್ವ ಕುಸಿಯಲು ಕಾರಣ!
ಅದು ಕನ್ನಡ ಚಳವಳಿ ಉತ್ತುಂಗದಲ್ಲಿದ್ದ ಕಾಲ. ಕನ್ನಡ ಚಳವಳಿಯ ವಾಟಾಳ್ ನಾಗರಾಜ್, ಎಡ ಚಳವಳಿಯ ಶ್ರೀರಾಮ ರೆಡ್ಡಿ, ರೈತ ಚಳವಳಿಯ ಪುಟ್ಟಣ್ಣಯ್ಯ ಮತ್ತು ದಲಿತ ಚಳವಳಿಯಿಂದಲೇ ಬಂದ ಹತ್ತಾರು ಶಾಸಕರು ವಿಧಾನಸಭೆಯಲ್ಲಿ ಇದ್ದರು. ವಿಧಾನಸಭೆಯ ದಾಖಲೆಗಳನ್ನು ತೆಗೆದು ನೋಡಿದರೆ, ಆ ಕಾಲದಲ್ಲಿ ಕರ್ನಾಟಕದಲ್ಲಿ ನಡೆದ ದಲಿತ ದೌರ್ಜನ್ಯಗಳ ಬಗ್ಗೆ ಚರ್ಚೆ ಆರಂಭಿಸಿರುವುದೇ ವಾಟಾಳ್ ನಾಗರಾಜ್, ಶ್ರೀರಾಮರೆಡ್ಡಿ ಮತ್ತು ಪುಟ್ಟಣ್ಣಯ್ಯ ಜೋಡಿ. ಆ ಬಳಿಕ ಚರ್ಚೆ ತಾರ್ಕಿಕ ಅಂತ್ಯ ತಲುಪಿ, ಸರಕಾರದ ಪ್ರತಿಕ್ರಿಯೆ ನೀಡುವವರೆಗೆ ಬಿಡುತ್ತಿರಲಿಲ್ಲ. ಸರಕಾರವೇನಾದರೂ ದಲಿತ ದೌರ್ಜನ್ಯ ಪ್ರಕರಣಗಳಿಗೆ ಸರಿಯಾದ ಕ್ರಮ ಕೈಗೊಳ್ಳುವ ಆದೇಶವನ್ನು ಸದನದಲ್ಲಿ ಪ್ರಕಟಿಸದೇ ಇದ್ದರೆ ಅಂತಹ ಘಟನೆಗಳು ಬೀದಿ ಹೋರಾಟವಾಗಿ ಮಾರ್ಪಾಡಾಗುತ್ತಿತ್ತು. ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಯಾವ ರಾಜ್ಯದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ನಡೆದರೂ ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಯಾಗಿ ಕರ್ನಾಟಕ ಸರಕಾರ ನಿಲುವು ಕೈಗೊಳ್ಳುವಂತೆ ಕನ್ನಡ-ದಲಿತ-ಎಡ-ರೈತ ಚಳವಳಿಯಿಂದ ಬಂದ ಶಾಸಕರ ತಂಡ ಮಾಡುತ್ತಿತ್ತು.
1991 ಸೆಪ್ಟಂಬರ್ 3ರ ವಿಧಾನಸಭೆ ಅಧಿವೇಶನದಲ್ಲಿ ವಾಟಾಳ್ ನಾಗರಾಜ್ ಅವರು ‘ಆಂಧ್ರಪ್ರದೇಶದಲ್ಲಿ ನಡೆದಿರುವ ಭೀಕರ ದಲಿತ ದೌರ್ಜನ್ಯ ವಿಷಯ’ವನ್ನು ಪ್ರಸ್ತಾಪಿಸುತ್ತಾರೆ. ವಿಧಾನಸಭೆಯ ಅಧ್ಯಕ್ಷರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘‘ವಾಟಾಳ್ ನಾಗರಾಜ್ ಅವರೇ, ಇದು ಕರ್ನಾಟಕ ವಿಧಾನಸಭೆ. ನಮ್ಮ ದೇಶದಲ್ಲಿ ಫೆಡರಲ್ ಸಿಸ್ಟಮ್ ಇದೆ. ಆಂಧ್ರದಲ್ಲಿ ಆಗಿರುವ ದಲಿತ ದೌರ್ಜನ್ಯಕ್ಕೆ ಕರ್ನಾಟಕ ಗೃಹ ಸಚಿವರು ಏನು ಮಾಡಬೇಕು?’’ ಎಂದು ಪ್ರಶ್ನಿಸುತ್ತಾರೆ. ಆಂಧ್ರದ ಘಟನೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಬಗ್ಗೆಯೇ ಗದ್ದಲ ಶುರುವಾಗುತ್ತದೆ. ವಾಟಾಳ್ ನಾಗರಾಜರು ಬಹಳ ದೃಢವಾಗಿ ‘‘ಆಂಧ್ರ ನಮ್ಮ ನೆರೆಯ ರಾಜ್ಯ. ಆಂಧ್ರದಲ್ಲಿ ನಡೆದಿರುವ ದಲಿತ ದೌರ್ಜನ್ಯ ಆಂಧ್ರಕ್ಕೆ ಮಾತ್ರ ಸೀಮಿತ ಅಲ್ಲ. ನಾಳೆ ಆಂಧ್ರದ ದೌರ್ಜನ್ಯ ಪ್ರವೃತ್ತಿ ಕೋಲಾರ ಸೇರಿದಂತೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲೂ ಶುರುವಾಗಬಹುದು. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯು ಆಂಧ್ರದ ದಲಿತ ದೌರ್ಜನ್ಯ ಪ್ರಕರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ನಮ್ಮ ಸರಕಾರ ದಲಿತ ಸಂಘರ್ಷ ಸಮಿತಿಗೆ ಉತ್ತರ ಕೊಡಬೇಕು. ಆಂಧ್ರದಲ್ಲಿ ನಡೆದಿರುವ ಘಟನೆಗಳು ಕರ್ನಾಟಕದಲ್ಲಿ ನಡೆಯಲು ಬಿಡಲ್ಲ ಎಂದು ಸರಕಾರ ಸದನದಲ್ಲಿ ಉತ್ತರ ಕೊಡಬೇಕು’’ ಎಂದು ಒತ್ತಾಯಿಸುತ್ತಾರೆ. ಸದನದಲ್ಲಿ ಗದ್ದಲ ಏರ್ಪಟ್ಟರೂ ಕೊನೆಗೂ ಎಡ, ಕನ್ನಡ, ದಲಿತ, ರೈತ ಪ್ರತಿನಿಧಿ ಶಾಸಕರ ಧ್ವನಿಯೇ ಮೇಲುಗೈಯಾಗಿ ಕರ್ನಾಟಕದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅಂತಹ ಘಟನೆ ನಡೆಯದಂತೆ ಎಚ್ಚರ ವಹಿಸುವುದಾಗಿ ಉತ್ತರ ನೀಡುತ್ತಾರೆ.
ರಾಜ್ಯದ ಯಾವುದೋ ಹಳ್ಳಿಯಲ್ಲಿ ನಡೆಯುವ ಸುದ್ದಿಯಾಗದ ದಲಿತ, ರೈತ ದೌರ್ಜನ್ಯ ಪ್ರಕರಣಗಳನ್ನೂ ಎಡ, ಕನ್ನಡ, ದಲಿತ, ರೈತ ಶಾಸಕರು ಬಿಡುತ್ತಿರಲಿಲ್ಲ. 2007 ಜುಲೈ 19ರಂದು ಕಲಬುರಗಿ ಜಿಲ್ಲೆಯ ಸುರಪುರದಲ್ಲಿ ಒಬ್ಬ ದಲಿತ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅನುಮಾನಾಸ್ಪದ ಸಾವು. ಇದರ ಹಿಂದೆ ದಲಿತರ ಮೇಲೆ ಫ್ಯೂಡಲ್‌ಗಳು ನಡೆಸುವ ದೌರ್ಜನ್ಯ ಇದೆ. ಯಾಕೆ ಉಸ್ತುವಾರಿ ಸಚಿವರು ದಲಿತ ರೈತನ ಮನೆಗೆ ಭೇಟಿ ಕೊಟ್ಟಿಲ್ಲ, ಯಾಕೆ ಈ ಆತ್ಮಹತ್ಯೆಯನ್ನು ಕೊಲೆ ಎಂದು ತನಿಖೆ ನಡೆಸಿಲ್ಲ ಎಂದು ಎಡ ಚಳವಳಿಯಿಂದ ಬಂದ ಶ್ರೀರಾಮರೆಡ್ಡಿಯವರು ಚರ್ಚೆ ಆರಂಭಿಸುತ್ತಾರೆ. ವಾಟಾಳ್ ನಾಗರಾಜ್ ಅದನ್ನು ಮುಂದುವರಿಸಿದಾಗ ಇಡೀ ಸದನ ಚರ್ಚೆಯಲ್ಲಿ ಭಾಗಿಯಾಗುತ್ತದೆ. ಅಂತಿಮವಾಗಿ ಕಲಬುರಗಿ ಜಿಲ್ಲೆಯ ದಲಿತ ದೌರ್ಜನ್ಯ ಪ್ರಕರಣಗಳು, ಮೇಲ್ವರ್ಗಗಳು ನಲ್ಲಿ ನೀರು ತೆಗೆಯಲು ಅವಕಾಶ ಕೊಡದೇ ಇರುವುದು, ದೇವಸ್ಥಾನ ಪ್ರವೇಶ ವಿಚಾರಗಳೆಲ್ಲವೂ ಚರ್ಚೆಯಾಗಿ, ರಾಜ್ಯ ಗೃಹ ಸಚಿವರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸದನದಿಂದಲೇ ಆದೇಶ ನೀಡುತ್ತಾರೆ. ಇಂತಹ ನೂರಾರು ಪ್ರಕರಣಗಳನ್ನು ಎಡ-ದಲಿತ-ರೈತ-ಕನ್ನಡ ಚಳವಳಿಯ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಗೆದ್ದ ಉದಾಹರಣೆ ವಿಧಾನಸಭೆಯ ದಾಖಲೆಗಳಲ್ಲಿ ಸಿಗುತ್ತದೆ.
ವಿಧಾನಸೌಧದಲ್ಲಿ ಬಾಬು ಜಗಜೀವನ್ ರಾಂ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಸದನದಲ್ಲಿ ಹೋರಾಟ ಮಾಡಿದ್ದು ಕೂಡಾ ಕನ್ನಡ ಚಳವಳಿಯ ವಾಟಾಳ್ ನಾಗರಾಜ್ ಅವರು. ಪ್ರತಿಮೆಯನ್ನು ಸ್ಥಾಪನೆ ಮಾಡುವ ಬಗ್ಗೆ ಸ್ಪಷ್ಟ ಉತ್ತರ ಬರದೇ ಇದ್ದಾಗ ವಾಟಾಳ್ ನಾಗರಾಜ್ ಏಕಾಂಗಿಯಾಗಿ ಸದನವನ್ನು ಬಹಿಷ್ಕರಿಸುತ್ತಾರೆ. ಬಾಬು ಜಗಜೀವನ್ ರಾಂ ಜನ್ಮದಿನ ಸಂದರ್ಭದಲ್ಲಿ ಆ ವಿಚಾರ ಪ್ರಸ್ತುತ ಎನ್ನುವ ಕಾರಣಕ್ಕಾಗಿ 05.04.2006ರಂದು ನಡೆದ ಈ ಬಗೆಗಿನ ವಿಧಾನಸಭೆ ಕಲಾಪದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.
ವಿಧಾನಸೌಧದಲ್ಲಿ ಬಾಬು ಜಗಜೀವನ್ ರಾಂ ಪ್ರತಿಮೆ ಸ್ಥಾಪಿಸಿ, ಜನ್ಮದಿನಾಚರಣೆಗೆ ರಜೆ ನೀಡಿ
05.04.2006
ಅಧ್ಯಕ್ಷರು: ಕೃಷ್ಣ
ಮುಖ್ಯಮಂತ್ರಿ: ಎಚ್.ಡಿ. ಕುಮಾರಸ್ವಾಮಿ
ಉಪಮುಖ್ಯಮಂತ್ರಿ: ಬಿ.ಎಸ್. ಯಡಿಯೂರಪ್ಪ
ವಾಟಾಳ್ ನಾಗರಾಜ್: ಬಾಬು ಜಗಜೀವನ್ ರಾಂರವರ 99ನೇ ಜನ್ಮದಿನಾಚರಣೆ ಇವತ್ತು ಇದೆ. ಜನ್ಮದಿನಾಚರಣೆಯ ಸಂದರ್ಭದಲ್ಲಿ ತಾವು ರಜೆ ಕೊಡಬೇಕು. ಇಂದು ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಇದು ಬಹಳ ಪ್ರಾಮುಖ್ಯವಾದದ್ದು. ಬಾಬು ಜನ್ಮದಿನಾಚರಣೆಯ ದಿನ ಸದನ ನಡೆಸುವುದು ಸರಿಯಲ್ಲ. ರಾಜ್ಯ ಸರಕಾರ ರಜೆ ಘೋಷಣೆ ಮಾಡಬೇಕು ಮತ್ತು ಬಾಬು ಜಗಜೀವನ್ ರಾಂರವರ ಪ್ರತಿಮೆ ಅನಾವರಣ ಆಗಬೇಕು.
ಶಾಸಕರಾದ ಡಾ. ಆರ್.ಬಿ. ಶಿರಿಯಣ್ಣನವರು ಹಾಗೂ ಸಿ.ಸಿ. ಪಾಟೀಲ್‌ರವರು ಕಳಸಾ-ಬಂಡೂರಿ ಬಗ್ಗೆ ಮಾತನಾಡಲು ಅವಕಾಶ ಕೊಡಿ ಎಂದು ಸದನದ ಬಾವಿ ಹತ್ತಿರ ಬಂದು ವಾಪಸ್ ಹೋದರು.
ಸದನದಲ್ಲಿ ಗೊಂದಲ ಗದ್ದಲ ಉಂಟಾಯಿತು.
ವಾಟಾಳ್ ನಾಗರಾಜ್: ಬಾಬು ಜಗಜೀವನ್ ರಾಂ ಜನ್ಮದಿನಾಚರಣೆಗೆ ರಜೆ ಕೊಡಬೇಕು. ಸದನವನ್ನು ಮುಂದಕ್ಕೆ ಹಾಕಬೇಕು. ಜೊತೆಗೆ ಅನಾವರಣ ಮಾಡದೆ ಉಳಿದಿರುವ ಪ್ರತಿಮೆಯನ್ನು ಅನಾವರಣ ಮಾಡಬೇಕು. ಈ ಬಗ್ಗೆ ವಿಧಾನಸಭೆಗೆ ಸರಕಾರದ ನಿಲುವು ಏನು ಎನ್ನುವುದನ್ನು ಹೇಳಬೇಕು.
ಅಧ್ಯಕ್ಷರು: ಬಿಡಿ, ಬಹಳ ಮುಂದಕ್ಕೆ ಹೊರಟು ಹೋಗಿದ್ದೇವೆ. ವಿರೋಧ ಪಕ್ಷದ ನಾಯಕರು ಕಳಸಾ-ಬಂಡೂರಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ಬಂದ ಮೇಲೆ ನಾನು ಹೇಳಿಕೆ ಕೊಡುತ್ತೇನೆ. ನಂತರ ಯಾರಾದರೂ ಮಾತನಾಡುವವರು ಇದ್ದರೆ ಮಾತನಾಡಬಹುದು.
ಅಧ್ಯಕ್ಷರು: ಡಿ.ಎಚ್. ಶಂಕರಮೂರ್ತಿಯವರೇ, ನೀವು ವಿದೇಯಕ (ಕಾಯ್ದೆ )(ಬಿಲ್) ಮಂಡನೆ ಮಾಡಿ
ಡಿ.ಎಚ್. ಶಂಕರಮೂರ್ತಿ (ಉನ್ನತ ಶಿಕ್ಷಣ ಸಚಿವರು): ನಾನು ಬಾಬು ಜಗಜೀವನ್‌ರಾಂರವರ ಬಗ್ಗೆ ಹೇಳುತ್ತೇನೆ. ಭಾರತದ ಹಿಂದಿನ ಉಪ ಪ್ರಧಾನ ಮಂತ್ರಿಗಳು, ಭಾರತದ ಗೌರವಾನ್ವಿತ ನಾಯಕರು ಆಗಿದ್ದ ಬಾಬು ಜಗಜೀವನ್ ರಾಂರವರ 99ನೇ ಜನ್ಮದಿನದ ದಿನವಾದ ಇಂದು ಅವರನ್ನು ನೆನಪು ಮಾಡಿಕೊಳ್ಳುತ್ತಾ ನಾನು ಸಣ್ಣ ವಿಧೇಯಕವನ್ನು ಮಂಡಿಸುವುದಕ್ಕೆ ತಮ್ಮ ಅಪ್ಪಣೆಯನ್ನು ಕೇಳುತ್ತಿದ್ದೇನೆ.
ವಾಟಾಳ್ ನಾಗರಾಜ್: ಸಚಿವರು ಯಾವುದಕ್ಕೆ ಯಾವುದನ್ನೋ ಹೇಳುತ್ತಿದ್ದಾರೆ. ಬಾಬು ಜಗಜೀವನ್ ರಾಂ ಬಗ್ಗೆ ಹೇಳುತ್ತೇನೆ ಎಂದು ಬೇರೆ ವಿಧೇಯಕವನ್ನು ಮಂಡಿಸಿದ್ದಾರೆ. ಬಾಬು ಜಗಜೀವನ್ ರಾಂರವರ ಬಗ್ಗೆ ನಿಮ್ಮ ಸರಕಾರದ ನಿಲುವು ಏನು ಹೇಳುತ್ತದೆ? ಯಡಿಯೂರಪ್ಪನವರು ಬಂದಿದ್ದಾರೆ. ಇವತ್ತು 99ನೇ ಜನ್ಮದಿನಾಚರಣೆ. ನೀವು ಸದನಕ್ಕೆ ರಜೆ ಕೊಡುತ್ತೀರಾ ಇಲ್ವಾ? ವಿಧಾನಸೌಧದ ಹೊರಗೆ ಅವರ ಪ್ರತಿಮೆ ಅನಾವರಣವಾಗಿಲ್ಲ, ಸರಕಾರದ ನಿಲುವು ಏನು?
(ಸಭೆಯಲ್ಲಿ ಗದ್ದಲ-ಗೊಂದಲ)
ಅಧ್ಯಕ್ಷರು: ವಾಟಾಳ್ ನಾಗರಾಜ್‌ರವರೇ, ದಯಮಾಡಿ ತಾವು ಸಹಕರಿಸಿ. ಏಕೆಂದರೆ, ಇದರ ಬಗ್ಗೆ ಈಗಾಗಲೇ ಬಿಎಸಿ (ಕಲಾಪ) ಸಲಹಾ ಸಮಿತಿ)ಯಲ್ಲಿ ಚರ್ಚೆಯಾಗಿದೆ. ನಿಮ್ಮನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಲಾಪ ನಡೆಯಲಿ ಎಂದು ಬಿಎಸಿ ಸಭೆಯಲ್ಲಿ ತೀರ್ಮಾನಕ್ಕೆ ಬಂದಿದ್ದಾರೆ.
ಎಚ್. ಆಂಜನೇಯ(ಭರಮಸಾಗರ ಶಾಸಕರು): ಸರಕಾರಿ ವೆಚ್ಚದಲ್ಲಿ ರಾಜ್ಯಾದ್ಯಂತ ಬಾಬು ಜಗಜೀವನ್‌ರಾಂರವರ ಜನ್ಮದಿನೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿರಬೇಕಾಗಿತ್ತು. ಅದಕ್ಕಾಗಿ ಇವತ್ತು ಸದನಕ್ಕೆ ರಜೆ ನೀಡಬೇಕಾಗಿತ್ತು. ಕನಿಷ್ಠ ಪಕ್ಷ ಸದನವನ್ನಾದರೂ ಕೂಡ ಮುಂದೂಡಬೇಕಾಗಿತ್ತು. ಅದಾಗಲ್ಲ ಅಂದರೆ ಸಾರ್ವತ್ರಿಕ ರಜೆಯನ್ನಾದರೂ ಕೊಡಬೇಕಿತ್ತು. ಸರಕಾರಿ ವೆಚ್ಚದಲ್ಲಿ ಸಮಾರಂಭವನ್ನು ಮಾಡುತ್ತಿದ್ದಾರೆ. ಯಾವ ಒಬ್ಬ ಮಂತ್ರಿಯೂ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇಲ್ಲದಿದ್ದರೆ ಎಷ್ಟು ಸರಿ?
ಅಧ್ಯಕ್ಷರು: ದಯಮಾಡಿ ಕುಳಿತುಕೊಳ್ಳಿ ಮತ್ತು ಸಹಕರಿಸಿ, ನಿಮ್ಮ ಅಭಿಪ್ರಾಯವನ್ನು ಸರಕಾರದ ಗಮನಕ್ಕೆ ತರೋಣ. ಈಗಾಗಲೇ ಸದನದ ಗಮನಕ್ಕೂ ಕೂಡ ತಂದಿದ್ದೀರಿ.
ವಾಟಾಳ್ ನಾಗರಾಜ್: ವಿಧಾನಸೌಧದಲ್ಲಿ ಬಾಬು ಪ್ರತಿಮೆ ಅನಾವರಣ ಮಾಡಬೇಕಾಗಿತ್ತು. 5 ಗಂಟೆಗೆ ಜನ್ಮದಿನ ಸಮಾರಂಭವನ್ನು ಇಟ್ಟುಕೊಂಡಿದ್ದಾರೆ. ಇಲ್ಲಿ ಸದನವನ್ನು ನಡೆಸುತ್ತಿದ್ದಾರೆ. ಎಲ್ಲಾ ಶಾಸಕರು ಮತ್ತು ಮಂತ್ರಿಗಳು ಇಲ್ಲಿದ್ದಾರೆ. ಆ ಕ್ಷೇತ್ರದ ಸಚಿವರು ಮತ್ತು ಜಿಲ್ಲಾ ಮಂತ್ರಿಗಳು ಎಲ್ಲರೂ ಜಿಲ್ಲಾ ಮಟ್ಟದ ಜನ್ಮದಿನಾಚರಣೆಯಲ್ಲಿ ಭಾಗವಹಿಸಬೇಕಿತ್ತು. ಇಂತಹದ್ದರಲ್ಲಿ ಈ ಶುಭದಿನವನ್ನು ರಜಾದಿನವೆಂದು ಘೋಷಣೆ ಮಾಡಿದ್ದರೆ ಚೆನ್ನಾಗಿತ್ತು. ಇದರ ಬಗ್ಗೆ ಸರಕಾರದ ನಿರ್ಧಾರವನ್ನು ಹೇಳಿ.
ಬಿ.ಎಸ್. ಯಡಿಯೂರಪ್ಪ (ಉಪಮುಖ್ಯಮಂತ್ರಿಗಳು ಹಾಗೂ ಹಣಕಾಸಿನ ಸಚಿವರು): ಡಾ. ಜಗಜೀವನ್‌ರಾಂರವರ ಜನ್ಮದಿನವನ್ನು ರಾಜ್ಯಾದ್ಯಂತ ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿದೆ. 5 ಗಂಟೆಗೆ ಈ ನಾಡಿನ ಎಲ್ಲಾ ಪ್ರಮುಖರನ್ನು ಕರೆಸಿ, ಪ್ರತಿಪಕ್ಷದ ನಾಯಕರನ್ನು ಕರೆದು ವಿಶೇಷವಾದ ಸಮಾರಂಭವನ್ನು ಮಾಡಿ ಅವರ ಜೀವನವನ್ನು ನೆನಪಿಸಿಕೊಂಡು, ಅವರು ಏತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂಬ ಬಗ್ಗೆ ನೆನಪು ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದೇವೆ. ವಾಟಾಳ್ ನಾಗರಾಜ್‌ರವರು ಬಾಬು ಜಗಜೀವನ್ ರಾಂ ಪ್ರತಿಮೆ ವಿಧಾನಸೌಧದಲ್ಲಿ ಅನಾವರಣವಾಗಬೇಕೆಂದು ಹೇಳಿದ್ದಾರೆ. ಪ್ರತಿಮೆ ಅನಾವರಣ ಮಾಡಬೇಕಿರುವುದರ ಬಗ್ಗೆ ನಮಗೆ ಸೂಕ್ತವಾದಂತಹ ಸಲಹೆಯನ್ನು ಕೊಟ್ಟಿದ್ದೀರಿ. ಆದಷ್ಟು ಬೇಗ ಸರಕಾರ ಆ ಕಡೆಗೆ ಗಮನ ಕೊಡುತ್ತದೆ. ಅವರ ನೂರನೇ ವರ್ಷದ ಜನ್ಮದಿನವನ್ನು ಅದ್ಭುತವಾದ ರೀತಿಯಲ್ಲಿ ದೇಶಾದ್ಯಂತ ಮತ್ತು ರಾಜ್ಯಾದ್ಯಂತ ಆಚರಣೆಯನ್ನು ಮಾಡೋಣ. ಈಗ ಶಾಸಕ ಮಿತ್ರರಲ್ಲಿ ವಿನಂತಿ ಮಾಡುವುದೇನೆಂದರೆ, ಇಂತಹ ದೊಡ್ಡವರ ಜನ್ಮದಿನಾಚರಣೆಯನ್ನು ಹಗಲು ರಾತ್ರಿ ಕೆಲಸ ಮಾಡುವುದರ ಮೂಲಕ ಶ್ರದ್ಧಾಂಜಲಿ ಅಥವಾ ಅವರ ಸ್ಮರಣೆಯನ್ನು ಮಾಡಬೇಕೇ ಹೊರತು ರಜೆಯನ್ನು ಘೋಷಿಸಿ ಮಜಾ ಮಾಡುವುದರ ಮೂಲಕ ಅಲ್ಲ. ರಜೆ ಎಂದು ಹೇಳುವಂತಹ ಶಬ್ದವು ಅವರಿಗೆ ಗೌರವ ಕೊಡುವಂತಹ ಗೌರವ ಸೂಚಕ ಎಂದು ನಾನು ಭಾವಿಸುವುದಿಲ್ಲ. ನಾವು ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುವ ಮೂಲಕ ಅವರು ಯಾವ ವಿಚಾರಧಾರೆಯನ್ನು ಈ ದೇಶದ ಜನರ ಮುಂದೆ ಇಟ್ಟರೋ, ತುಳಿತಕ್ಕೆ ಒಳಗಾದ ಆ ಜನರ ಬಗ್ಗೆ ಅವರು ಇಟ್ಟಿರುವ ಆಶಯಗಳನ್ನು ಸಾಕಾರಗೊಳಿಸುವ ಬಗ್ಗೆ ಯೋಚಿಸೋಣ. ಬಿಎಸಿ ಸಭೆಯಲ್ಲಿ ಪ್ರತಿಪಕ್ಷದ ಎಲ್ಲರೂ ಒಕ್ಕೊರಲಿನಿಂದ, ಇವತ್ತು ಸದನ ಮುಂದೂಡೋಣ ಎಂದು ಹೇಳಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ಶಾಸಕರು ಸದನದ ಕಾರ್ಯಕಲಾಪಗಳು ನಡೆಯಬೇಕು ಎಂದು ತೀರ್ಮಾನಿಸಿದ್ದಾರೆ. ವಾಟಾಳ್ ನಾಗರಾಜ್‌ರವರು, ಬಿಎಸಿ ಸಭೆಯಲ್ಲಿ ಏನು ನಡೆಯಿತು ಎಂದು ಹೇಳದೆ ಅವರೊಬ್ಬರೇ ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆಗೆ ರಜೆ ಕೊಡಬೇಕು ಮತ್ತು ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಹೇಳಿದರೆ ಕಷ್ಟ. ಸಂಜೆ ನಡೆಯುವ ಬಾಬು ಜನ್ಮದಿನದ ಕಾರ್ಯಕ್ರಮಕ್ಕಾಗಿ ಸಂಜೆ 4:30 ಗಂಟೆಗೆ ಸದನ ಕಲಾಪ ಮುಗಿಸೋಣ
ವಾಟಾಳ್ ನಾಗರಾಜ್: ಬಾಬು ಜಗಜೀವನ್ ರಾಂ ಜನ್ಮದಿನಾಚರಣೆಗೆ ಸಾರ್ವತ್ರಿಕ ರಜೆ ಕೊಡಬೇಕಿತ್ತು. ಕನಿಷ್ಠ ವಿಧಾನಸಭೆ ಕಲಾಪಕ್ಕಾದರೂ ರಜೆ ಕೊಡಬೇಕಿತ್ತು. ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಜಿಲ್ಲೆಗಳಲ್ಲಿ ಬಾಬು ಜಗಜೀವನ್ ರಾಂ ಜನ್ಮದಿನಾಚರಣೆಯಲ್ಲಿ ಭಾಗವಹಿಸಬೇಕು. ವಿಧಾನಸೌಧದ ಮುಂದೆ ಬಾಬು ಪ್ರತಿಮೆ ಸ್ಥಾಪನೆ ಆಗಬೇಕು. ಸರಕಾರದ ಈ ನಡೆ ಸರಿಯಲ್ಲ. ಹಾಗಾಗಿ ತಮಗೆ ವಂದನೆ ಸಲ್ಲಿಸಿ ನಾನು ಸಭಾತ್ಯಾಗ ಮಾಡುತ್ತೇನೆ.
ವಾಟಾಳ್ ನಾಗರಾಜ್‌ರವರು ಸಭಾತ್ಯಾಗ ಮಾಡಿದರು
(ಸದನದಲ್ಲಿ ಗದ್ದಲ ಗೊಂದಲ)
ಜೆ.ಸಿ. ಮಾಧುಸ್ವಾಮಿ: ನೀವು ರಜೆ ಕೊಡಬೇಕಾಗಿಲ್ಲ. ವಾಟಾಳ್ ನಾಗರಾಜ್‌ರವರೇ ರಜೆ ತೆಗೆದುಕೊಳ್ಳುತ್ತಾರೆ.
ಬಿ.ಎಸ್. ಯಡಿಯೂರಪ್ಪ: ಅವರು ವಾಟಾಳ್ ನಾಗರಾಜ್ ಅಲ್ಲ, ಇನ್ಮುಂದೆ ಇವರು ವಾಕೌಟ್ ನಾಗರಾಜ್
ಇದೊಂದು ಉದಾಹರಣೆ ಮಾತ್ರ. ಈ ರೀತಿ ಇತ್ತೀಚೆಗೆ ದಲಿತ ದೌರ್ಜನ್ಯ, ಅಸ್ಪಶ್ಯತೆ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಶೋಷಿತ ಸಮುದಾಯಗಳ ನಾಯಕರ ಕುರಿತಾಗಿ ಕನ್ನಡ ಚಳವಳಿಗಳು ಬೀದಿಗಿಳಿದ ಉದಾಹರಣೆಯೇ ಇಲ್ಲ. ಸಂಸದೀಯ ಹೋರಾಟ ಮತ್ತು ಚಳವಳಿಯಲ್ಲಿ ಎಡ, ರೈತ, ದಲಿತ, ಕನ್ನಡ ಹೋರಾಟ ಒಟ್ಟೊಟ್ಟಾಗಿ ಸಾಗುತ್ತಿದ್ದಾಗ ಅದರ ಪರಿಣಾಮವೇ ಬೇರೆ ಇರುತ್ತಿತ್ತು. ಈಗ ಪ್ರತ್ಯೇಕಗೊಂಡ ದಿನಗಳಲ್ಲಿ ಫ್ಯಾಶಿಸಂ ಆ ಸ್ಥಳವನ್ನು ಆಕ್ರಮಿಸಿಕೊಂಡಿದೆ.
ದಲಿತ ಚಳವಳಿ ಎಂದರೆ ಶೋಷಿತ ವರ್ಗಗಳ ಮೇಲೆ ನಡೆಯುವ ಶೋಷಣೆ, ಅಸಮಾನತೆಯ ವಿರುದ್ಧ ಮತ್ತು ಜಾತ್ಯತೀತ ಸಮಾಜದ ಪ್ರತಿಪಾದನೆಗೆ ನಿಗದಿಯಾಗಿರುವ ಹೋರಾಟ. ಮುಖ್ಯವಾಗಿ ಸಾಮಾಜಿಕ ನ್ಯಾಯ, ಹಕ್ಕು, ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ರಾಜಕೀಯ ಸಬಲತೆಯ ಮೇಲೆ ದಲಿತ ಚಳವಳಿ ಒತ್ತು ನೀಡಿದೆ. ಅಸ್ಪಶ್ಯತೆ ವಿರೋಧ ಮತ್ತು ಸಮಾನ ಹಕ್ಕುಗಳಿಗಾಗಿ ಹೋರಾಟ, ಭೂಸ್ವಾಮ್ಯ, ಆರ್ಥಿಕ ಶೋಷಣೆಗೆ ವಿರುದ್ಧದ ಹೋರಾಟ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೋಷಿತ ವರ್ಗಗಳಿಗೆ ಮೀಸಲಾತಿ, ಸಂವಿಧಾನಬದ್ಧ ಹಕ್ಕುಗಳ ಅನುಷ್ಠಾನವೇ ದಲಿತ ಚಳವಳಿಯ ಮುಖ್ಯ ಅಂಶಗಳು.
ಎಡ ಚಳವಳಿ ಮುಖ್ಯವಾಗಿ ಕಾರ್ಮಿಕ ವರ್ಗದ ಹಕ್ಕುಗಳು, ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪಡೆಯುವ ರಾಜಕೀಯ ಚಳವಳಿ. ಭಾರತದಲ್ಲಿ ನಡೆದ ಎಡಪಂಥೀಯ ಚಳವಳಿಗಳ ಭೂಸುಧಾರಣೆ, ಕಾರ್ಮಿಕ ಹಕ್ಕು, ಆರ್ಥಿಕ ಸಮಾನತೆ, ಜಾತ್ಯತೀತ ಹೋರಾಟದ ಫಲಾನುಭವಿ ಸಮುದಾಯ ಯಾವುದೆಂದರೆ ಶೋಷಿತ ವರ್ಗವೇ ಆಗಿದೆ.
ಹಾಗಾಗಿ ಇವೆರಡೂ ಚಳವಳಿಗಳು ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಡುವ ಚಳವಳಿಗಳು ಎಂಬುದರಲ್ಲಿ ತಕರಾರಿಲ್ಲ. ಅಂಬೇಡ್ಕರ್ ವಾದ ಮತ್ತು ಮಾರ್ಕ್ಸಿಸಮ್ ನಡುವೆ ಕೆಲ ತಾತ್ವಿಕ ಭಿನ್ನತೆಗಳಿದ್ದರೂ ಎರಡರ ಉದ್ದೇಶ ಒಂದೇ ಆಗಿದೆ. ಇವೆರಡೂ ಚಳವಳಿಗಳು ಕನ್ನಡ ಹೋರಾಟಕ್ಕೆ ಸೈದ್ಧಾಂತಿಕ ಮಾರ್ಗದರ್ಶನ ಮಾಡುತ್ತಿದ್ದ ದಿನಗಳಲ್ಲಿ ಎಲ್ಲವೂ ಸರಿಯಿತ್ತು. ತಮಿಳು ಭಾಷಾ ಚಳವಳಿಗೆ ಪೆರಿಯಾರ್-ಎಡ-ದಲಿತ ಸ್ಪಷ್ಟತೆ ಇರುವುದರಿಂದ ಇಂದಿಗೂ ತಮಿಳುನಾಡು ಇಡೀ ದೇಶದಲ್ಲೇ ಪ್ರತ್ಯೇಕ ರಾಜಕೀಯ ಅಸ್ಮಿತೆಯನ್ನು ಹೊಂದಿದೆ. ಕರ್ನಾಟಕದ ಈ ಕೊರತೆ ಬಗೆಗಿನ ಅವಲೋಕನಕ್ಕೆ ಬಾಬು ಜಗಜೀವನ್ ರಾಂ ಜಯಂತಿ ನೆಪದ ‘ಅಪೂರ್ಣ’ ಮಾಹಿತಿಯ ಲೇಖನವಿದು.