ಕಾಯಕಲ್ಪಕ್ಕಾಗಿ ಕಾಯುತ್ತಿರುವ ವಿಶ್ವವಿದ್ಯಾನಿಲಯಗಳು

ಉನ್ನತ ಶಿಕ್ಷಣದ ‘ಗಂಗೋತ್ರಿ’ಗಳಾಗಿರುವ ರಾಜ್ಯದ ಸರಕಾರಿ ವಿಶ್ವವಿದ್ಯಾನಿಲಯಗಳು ಸುದ್ದಿಯಲ್ಲಿವೆ. ಇಂತಹ ಸುದ್ದಿಗೆ ಕಾರಣವಾಗಿರುವುದು ಸಾಧನೆಗಳಾವುದೂ ಅಲ್ಲ. ಬದಲಾಗಿ ಅದಕ್ಕೆ ಕಾರಣವಾಗಿರುವುದು ಅವುಗಳ ಆರ್ಥಿಕ ಪರಿಸ್ಥಿತಿ ಹದಗೆಡುತ್ತಾ ಸಾಗಿರುವಂತಹ ವಿದ್ಯಮಾನ. ಇಂತಹ ಒಂದು ಪರಿಸ್ಥಿತಿಯನ್ನು ನಾಡಿನ ಶಿಕ್ಷಣ ತಜ್ಞರು, ಚಿಂತಕರು ಸಾಕಷ್ಟು ಹಿಂದೆನೇ ಅಂದಾಜು ಮಾಡಿದ್ದರು. ಯಾಕೆಂದರೆ ಸರಕಾರದ ನೀತಿಗಳು, ರಾಜಕೀಯ ಹಸ್ತಕ್ಷೇಪ, ಉನ್ನತ ಶಿಕ್ಷಣದ ಕುರಿತಾದ ಅವಜ್ಞೆ, ಶಿಕ್ಷಣ ವಲಯದ ವ್ಯಾಪಾರೀಕರಣ ಇತ್ಯಾದಿ ಭವಿಷ್ಯದಲ್ಲಿ ಪರಿಸ್ಥಿತಿಯನ್ನು ಈ ಹಂತಕ್ಕೆ ಕೊಂಡೊಯ್ಯಬಹುದಾದ ಸೂಚನೆ ಆಗಲೇ ಸ್ಪಷ್ಟವಾಗ ತೊಡಗಿದ್ದವು.
ಇತ್ತೀಚೆಗೆ ಒಂದು ಕಡೆ ಸರಕಾರದ ಹಂತದಲ್ಲಿ ಒಂಭತ್ತು ಹೊಸ ವಿಶ್ವವಿದ್ಯಾನಿಲಯಗಳನ್ನು ಸುಸ್ಥಿರತೆಯ ಕೊರತೆ ಕಾರಣಕ್ಕಾಗಿ ಮುಚ್ಚುವ ಅಥವಾ ವಿಲೀನಗೊಳಿಸುವಂತಹ ಪ್ರಸ್ತಾವ ಪ್ರಕಟವಾಗಿದ್ದರೆ, ಇನ್ನೊಂದೆಡೆ ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಗಳನ್ನು ಹೊರತು ಪಡಿಸಿದರೆ ಉಳಿದ ವಿಶ್ವವಿದ್ಯಾನಿಲಯಗಳ ಆರ್ಥಿಕ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ ಎಂಬ ಸುದ್ದಿಯೂ ಹೊರ ಬಿದ್ದಿದೆ. ಈ ಪೈಕಿ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ನಿವೃತ್ತರಿಗೆ ಪಿಂಚಣಿ ಸೌಲಭ್ಯ ಪಾವತಿಸಲೂ ಹಣದ ಕೊರತೆ ಎದುರಾಗಿದೆ ಎನ್ನಲಾಗುತ್ತಿದೆ.
ವಾಸ್ತವದಲ್ಲಿ ವಿಶ್ವವಿದ್ಯಾನಿಲಯಗಳು ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯನ್ನು ಮಾತ್ರ ಎದುರಿಸುತ್ತಿಲ್ಲ. ಅಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳೂ ಇವೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾಯಕಲ್ಪ ಕಲ್ಪಿಸುವಂತಹ ಕಾರ್ಯ ಆದ್ಯತೆಯ ನೆಲೆಯಲ್ಲಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ತಡವಾದಷ್ಟೂ ಪರಿಸ್ಥಿತಿ ಕೈ ಮೀರಿ ಉನ್ನತ ಶಿಕ್ಷಣದ ಭವಿಷ್ಯ ‘ಬಿರುಗಾಳಿಗೆ ಸಿಕ್ಕ ನಾವೆ’ಯಂತೆ ದಿಕ್ಕು ತಪ್ಪುವ ಸಾಧ್ಯತೆಗಳಿವೆ. ಇದಕ್ಕಾಗಿ ಸಮಸ್ಯೆಗಳ ಆಮೂಲಾಗ್ರವಾದ ಅಧ್ಯಯನ ಅಗತ್ಯ. ಹಾಗೆ ನೋಡಿದರೆ ಈ ಮೂರು ಸಮಸ್ಯೆಗಳು ಒಂದಕ್ಕೊಂದು ತಳುಕು ಹಾಕಿ ಕೊಂಡು ಪರಸ್ಪರ ಪ್ರಭಾವಿಸುವಂಥವುಗಳಾಗಿವೆ. ಉದಾಹರಣೆಗಾಗಿ ಶೈಕ್ಷಣಿಕ ಗುಣಮಟ್ಟದ ಕುಸಿತವೆನ್ನುವುದು ವಿಶ್ವವಿದ್ಯಾನಿಲಯದ ಆರ್ಥಿಕತೆ ಕುಸಿಯಲು ಕಾರಣವಾಗುವುದನ್ನು ಕಾಣಬಹುದು.
ಮೊದಲಿಗೆ ವಿಶ್ವವಿದ್ಯಾನಿಲಯಗಳಲ್ಲಿ ಶೈಕ್ಷಣಿಕ ಗುಣಮಟ್ಟ ಯಾಕೆ ಕುಸಿತ ಕಾಣತೊಡಗಿದೆ ಎಂಬ ಪ್ರಶ್ನೆಯನ್ನೆತ್ತಿ ಕೊಂಡರೆ ಅದು ಎಲ್ಲಾ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಎದ್ದು ಕಾಣುವಂತಹ ಸಮಾನ ಅಂಶವಾಗಿ ಕಂಡು ಬರುತ್ತದೆ. ಮುಖ್ಯವಾಗಿ ಖಾಯಂ ಅಧ್ಯಾಪಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದೇ ಈ ಸಮಸ್ಯೆಯ ಮೂಲ ಕಾರಣಗಳಲ್ಲೊಂದಾಗಿ ಎದ್ದು ಕಾಣುವಂತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಹತ್ತಾರು ವರ್ಷಗಳಿಂದ ಖಾಲಿ ಬೀಳುತ್ತಾ ಹೋಗುತ್ತಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ. ಯಾಕೆಂದರೆ ಈ ಖಾಲಿ ಹುದ್ದೆಗಳನ್ನು ತುಂಬಲು ಸರಕಾರ ಅನುಮತಿಯನ್ನೇ ನೀಡುತ್ತಿಲ್ಲ, ಈ ವಿಚಾರದಲ್ಲಿ ಸರಕಾರ ಇಂದು ಅಪರಾಧಿ ಸ್ಥಾನದಲ್ಲಿ ನಿಂತಿದೆ ಎಂದರೆ ತಪ್ಪಾಗಲಾರದು. ಇದರಿಂದಾಗಿ ವಿಶ್ವವಿದ್ಯಾನಿಲಯಗಳು ಪಾಠ, ಪ್ರವಚನಗಳಿಗೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸ ಬೇಕಾಗಿ ಬಂದಿದೆ. ಆಡಳಿತ ವಿಭಾಗದಲ್ಲಿ ಬೋಧಕೇತರ ಸಿಬ್ಬಂದಿಯನ್ನೂ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿ ಕೊಂಡು ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಇಂತಹ ವ್ಯವಸ್ಥೆಯಲ್ಲಿ ದಕ್ಷತೆ, ಗುಣ ಮಟ್ಟವನ್ನು ಯಾವ ರೀತಿಯಲ್ಲಿ ಕಾಯ್ದು ಕೊಳ್ಳಬಹುದು?
ಪರೀಕ್ಷಾ ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟನೆಗಳಲ್ಲಿನ ದೂರುಗಳು ಪುನರಾವರ್ತನೆಯಾಗುತ್ತಿದೆ. ಬೋಧನೆ ಮತ್ತು ಸಂಶೋಧನೆಗೆ ಸಂಬಂಧಿಸಿದ ದೂರುಗಳು ಒಳಗಿಂದ ಒಳಗೆ ಪ್ರಸರಣವಾಗಿ ಬಿಡುತ್ತವೆ. ಇದು ವಿಶ್ವವಿದ್ಯಾನಿಲಯಗಳ ಘನತೆ, ಗೌರವಗಳಿಗೆ ಧಕ್ಕೆ ಉಂಟು ಮಾಡುತ್ತಿರುವುದು ಮೊದ ಮೊದಲು ಅರಿವಿಗೆ ಬರುವಂತಿರುವುದಿಲ್ಲ. ಆದರೆ ಇಂತಹ ಬೆಳವಣಿಗೆಗಳು ನಿಧಾನವಾಗಿ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯಗಳಿಂದ ವಿಮುಖರನ್ನಾಗಿಸುತ್ತವೆ. ಇದಕ್ಕೆ ದಕ್ಷತೆ, ಬದ್ಧತೆ, ಗಾಢ ನೈತಿಕ ಪ್ರಜ್ಞೆಯುಳ್ಳಂತಹ ಅಧ್ಯಾಪಕರು ಮತ್ತು ಅಧಿಕಾರಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದೂ ಒಂದು ಕಾರಣವಾಗಿದೆ.
ಇನ್ನು ವಿಶ್ವವಿದ್ಯಾನಿಲಯಗಳ ಆಡಳಿತಾತ್ಮಕ ವಿಷಯಗಳ ಬಗ್ಗೆ ಗಮನ ಹರಿಸಿದರೆ ಪರಿಸ್ಥಿತಿ ಏನೇನೂ ಆಶಾದಾಯಕವಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಕುಲಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಒಳ ಗೊಂಡಿರುವ ಅನೈತಿಕ ಹಾಗೂ ಅನಾಹುತಕಾರಿ ಬೆಳವಣಿಗೆಗಳು ಉನ್ನತ ಶಿಕ್ಷಣ ಸಂಸ್ಥೆಯೊಂದನ್ನು ಅವನತಿಯೆಡೆ ಒಯ್ಯಲು ಭಾಷ್ಯ ಬರೆಯುವಂತಿದೆ. ಹಣ, ಪ್ರಭಾವ, ವಶೀಲಿಬಾಜಿ, ರಾಜಕೀಯ ಇತ್ಯಾದಿ ಕುಲಪತಿ ಹುದ್ದೆಯ ನೇಮಕಾತಿಯಲ್ಲಿ ನಿರ್ಣಾಯಕವಾಗಿರುವುದರಿಂದ ಸದ್ಯ ವಿಶ್ವವಿದ್ಯಾನಿಲಯದ ಉದ್ಧಾರವೇನಾದರೂ ಆಗುವುದಿದ್ದರೆ ಅದು ಬಹುತೇಕ ಪವಾಡ ಅಥವಾ ಅದೃಷ್ಟವೇ ಸರಿ! ಈ ರೀತಿ ನೇಮಕ ಗೊಳ್ಳುವ ಕುಲಪತಿಗಳು ತಮ್ಮ ಅಧಿಕಾರಾವಧಿ ಮುಗಿಸಿ ತೆರಳುವಾಗ ಸಾಧನೆಯ ಪಟ್ಟಿಯ ಬದಲು ಹಗರಣಗಳ ಪಟ್ಟಿಯೊಂದಿಗೆ ತೆರಳುವುದು ಈಗೀಗ ಸಾಮಾನ್ಯವೆಂಬತಾಗಿದೆ.
ಕುಲಪತಿ ಹುದ್ದೆಯ ನಂತರದ ಸ್ಥಾನದಲ್ಲಿ ಕುಲಸಚಿವ(ಆಡಳಿತ), ಕುಲಸಚಿವ(ಪರೀಕ್ಷಾಂಗ) ಮತ್ತು ಹಣಕಾಸು ಅಧಿಕಾರಿಗಳು ಆಡಳಿತ ಹೊಣೆಗಾರಿಕೆ ಹೊತ್ತವರಾಗಿರುತ್ತಾರೆ. ಕುಲಸಚಿವ(ಆಡಳಿತ) ಹುದ್ದೆಗೆ ಸರಕಾರ ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸುತ್ತಾದರೂ ಅವರಿಗೆ ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆಯೊಳಗೆ ಬಿಗಿತನ, ದಕ್ಷತೆ ತರಲು ಅಂತಹ ಅವಕಾಶ, ಸ್ವಾತಂತ್ರ್ಯ ದೊರೆಯುವುದು ಕಡಿಮೆ. ಕರ್ನಾಟಕ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ಹಣಕಾಸು ಅಧಿಕಾರಿ ಹುದ್ದೆಗೆ ಸರಕಾರದ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಯನ್ನು ನಿಯೋಜಿಸ ಬೇಕು. ಇಂತಹವರಿಗೆ ಹಣಕಾಸು ವಿಷಯಗಳಲ್ಲಿ ಹೆಚ್ಚಿನ ಜ್ಞಾನ, ತಿಳುವಳಿಕೆ, ಅನುಭವವಿರುವುದರಿಂದ ಸಮರ್ಥ ಕಾರ್ಯನಿರ್ವಹಣೆ ಸಾಧ್ಯ. ಆದರೆ ಪ್ರಸಕ್ತ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಈ ರೀತಿಯ ನಿಯೋಜನೆಯಿಲ್ಲದೆ ಹಿರಿಯ ಪ್ರಾಧ್ಯಾಪಕರಾದವರು ಹಣಕಾಸು ಅಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ. ಇವರಿಗೆ ತಿಳುವಳಿಕೆಯಿದ್ದರೂ ರಾಜ್ಯಮಟ್ಟದ ಅಧಿಕಾರಿಗೆ ಇರುವಂತಹ ನಿಯಮ ನಿಷ್ಠುರತೆ-ನಿರ್ದಾಕ್ಷಿಣ್ಯತೆ ವಾಸ್ತವದಲ್ಲಿ ಕಷ್ಟ ಸಾಧ್ಯ.
ವಿಶ್ವವಿದ್ಯಾನಿಲಯಗಳಲ್ಲಿ ಪ್ರಮುಖ ನೀತಿ-ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರವಿರುವ ಪ್ರಾಧಿಕಾರವಾಗಿರುವ ಸಿಂಡಿಕೇಟ್‌ನಲ್ಲಿ ಸಾರ್ವಜನಿಕ ವಲಯದ ವ್ಯಕ್ತಿಗಳು, ಪ್ರಾಂಶುಪಾಲರು, ಪ್ರಾಧ್ಯಾಪಕರು ಸದಸ್ಯರುಗಳಾಗಿ ಇರುತ್ತಾರೆ. ಸರಕಾರ ಮತ್ತು ರಾಜ್ಯಪಾಲರು ಸಿಂಡಿಕೇಟ್‌ಗೆ ಅರ್ಹರನ್ನು ಸದಸ್ಯರನ್ನಾಗಿ ನೇಮಕ ಮಾಡುವಂತಹ ವ್ಯವಸ್ಥೆಯಿದೆ. ಒಂದು ಕಾಲದಲ್ಲಿ ಪ್ರಾಮಾಣಿಕರು, ವಿವಿಧ ವಿಷಯ ತಜ್ಞರು ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದರೆ ಇಂದು ಅಂತಹ ಮಾದರಿ ತೀರಾ ವಿರಳವಾಗುತ್ತಿದೆ. ಇಲ್ಲಿಯೂ ಆಯ್ಕೆಗೆ ಲಾಬಿ ನಡೆಯುವುದರಿಂದ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಹೆಚ್ಚಿನ ಅನುಕೂಲವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ಈ ಎಲ್ಲಾ ಕಾರಣಗಳಿಂದ ವಿಶ್ವವಿದ್ಯಾನಿಲಯದ ಆಡಳಿತವು ಸುಧಾರಣೆ ಕಾಣುವಂತಹ ಪೂರಕ ವಾತಾವರಣದಿಂದ ದೂರ ಸರಿಯುವಂತಿದೆ.
ಕೊನೆಯದಾಗಿ ಬಹುಚರ್ಚಿತ ಆರ್ಥಿಕ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳುವುದು ಅಂತಹ ಕಷ್ಟದ ವಿಚಾರವೇನಲ್ಲ. ಮೇಲೆ ಚರ್ಚಿಸಲಾದಂತೆ ಗುಣ ಮಟ್ಟದ ಶಿಕ್ಷಣ ಮತ್ತು ಆಡಳಿತಾತ್ಮಕ ಸಮಸ್ಯೆಗಳು ವಿಶ್ವವಿದ್ಯಾನಿಲಯಗಳ ಆರ್ಥಿಕ ಆರೋಗ್ಯವನ್ನು ಹದಗೆಡಿಸಿರುವುದು ಸ್ಪಷ್ಟ. ಗುಣಮಟ್ಟದ ಶಿಕ್ಷಣ ಮತ್ತು ದಕ್ಷ ಆಡಳಿತ ವ್ಯವಸ್ಥೆಯಿಲ್ಲದಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುವುದು ಸಹಜ ತಾನೇ? ಇಂದು ವಿದ್ಯಾರ್ಥಿಗಳಿಗೆ ಆಯ್ಕೆಗಳು ಸಾಕಷ್ಟಿವೆ. ಅವರು ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಕಲಿಕೆಗೆ ಅಗತ್ಯ ವಾತಾವರಣವಿಲ್ಲದಿದ್ದರೆ ಖಾಸಗಿ ವಿಶ್ವವಿದ್ಯಾನಿಲಯಗಳು, ಪರಿಗಣಿತ ವಿಶ್ವವಿದ್ಯಾನಿಲಯಗಳು, ಸ್ವಾಯತ್ತ ಕಾಲೇಜುಗಳತ್ತ ಮುಖ ಮಾಡುವುದೇ ಹೆಚ್ಚು. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಸರಕಾರಿ ವ್ಯವಸ್ಥೆಯು ಖಾಸಗಿಯವರೊಡನೆ ಸ್ಪರ್ಧಿಸಲು ವಿಫಲಗೊಂಡರೆ ಪರಿಸ್ಥಿತಿ ಇದೇ ರೀತಿ ಆಗುವುದು ಸ್ವಾಭಾವಿಕವೇ. ಆದ್ದರಿಂದ ಸರಕಾರ ಮತ್ತು ವಿಶ್ವವಿದ್ಯಾನಿಲಯಗಳು ಈ ಬೆಳವಣಿಗೆಯನ್ನು ಅರಿತು ಕೊಂಡು ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಅಗತ್ಯ.
ವಿದ್ಯಾರ್ಥಿಗಳ ಪ್ರವೇಶಾತಿ ಕುಸಿದಿರುವುದರಿಂದ ಸಂಗ್ರಹವಾಗುತ್ತಿದ್ದ ವಿವಿಧ ಶುಲ್ಕಗಳ ಪ್ರಮಾಣವೂ ಕಡಿಮೆಯಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಇದರೊಂದಿಗೆ ಸರಕಾರ ಒದಗಿಸುತ್ತಿದ್ದ ವಿವಿಧ ಅನುದಾನಗಳ ಪ್ರಮಾಣವೂ ಕಡಿಮೆಯಾಗುತ್ತಾ ಸಾಗಿದೆ. ಹಿಂದೆ ಒಂದು ಕಾಲದಲ್ಲಿ ಆಂತರಿಕ ಸಂಪನ್ಮೂಲ ಚೆನ್ನಾಗಿದ್ದ ಸಂದರ್ಭದಲ್ಲಿ ಅದನ್ನು ಬೃಹತ್ ಯೋಜನೆ, ಕಾಮಗಾರಿಗಳಿಗೆ ಬಳಸಿದ ಕಾರಣದಿಂದಲೂ ಇಂದು ಅದರ ಪರಿಣಾಮವನ್ನು ಎದುರಿಸ ಬೇಕಾಗಿ ಬಂದಿದೆ.
ಇಂತಹ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಸರಕಾರ ಮತ್ತು ವಿಶ್ವವಿದ್ಯಾನಿಲಯಗಳೆರಡರ ಹಂತದಲ್ಲಿಯೂ ಕೈಗೊಳ್ಳ ಬೇಕಾಗಿದೆ. ಸರಕಾರ ಮುಖ್ಯವಾಗಿ ಖಾಲಿ ಬಿದ್ದಿರುವ ಶಿಕ್ಷಕ ಮತ್ತು ಶಿಕ್ಷಕೇತರ ಹುದ್ದೆಗಳನ್ನು ಭರ್ತಿ ಮಾಡಲು ವಿಶ್ವವಿದ್ಯಾನಿಲಯಗಳಿಗೆ ಅನುಮತಿ ನೀಡುವುದು ಅತ್ಯವಶ್ಯ. ಪ್ರಸಕ್ತ ಖಾಯಂ ಸಿಬ್ಬಂದಿಯ ವೇತನಕ್ಕಾಗಿ ಸರಕಾರ ಪೂರ್ತಿ ಅನುದಾನ ನೀಡುತ್ತಿದ್ದು ನಿವೃತ್ತರ ಪಿಂಚಣಿಗಾಗಿ ಅಲ್ಪ ಪ್ರಮಾಣದ ಅನುದಾನವನ್ನು ಮಾತ್ರ ನೀಡುತ್ತಿದೆ. ಈಗ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಬೆಳಕಿಗೆ ಬಂದಿರುವ ಪಿಂಚಣಿ ಪಾವತಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ಪೂರ್ತಿ ಪಿಂಚಣಿ ವೆಚ್ಚವನ್ನು ಭರಿಸಲು ಮುಂದಾಗುವುದು ಅತ್ಯಂತ ಅಪೇಕ್ಷಣೀಯ. ಈ ವೆಚ್ಚವನ್ನು ಸರಕಾರ ವಹಿಸಿಕೊಂಡರೆ ವಿಶ್ವವಿದ್ಯಾನಿಲಯಗಳು ಆರ್ಥಿಕವಾಗಿ ಚೇತರಿಸಿ ಕೊಳ್ಳಬಹುದು. ಇದರೊಂದಿಗೆ ಕುಲಪತಿಗಳ ಆಯ್ಕೆ, ಸಿಂಡಿಕೇಟ್‌ಸದಸ್ಯರ ನೇಮಕಾತಿಯಲ್ಲಿ ಅರ್ಹತೆ,ಯೋಗ್ಯತೆಗಳಿಗೆ ಪ್ರಾಶಸ್ತ್ಯ ದೊರೆಯುವಂತೆ ಕ್ರಮ ಜರುಗಿಸುವುದೂ ಅಗತ್ಯ.
ವಿಶ್ವವಿದ್ಯಾನಿಲಯದ ಹಂತದಲ್ಲಿಯೂ ಆಡಳಿತವನ್ನು ಬಿಗಿ ಗೊಳಿಸುವುದು, ಆರ್ಥಿಕ ಶಿಸ್ತು ರೂಢಿಸುವುದು, ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಮುಖ್ಯ. ಜೊತೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೇಡಿಕೆಯ ಹೊಸ ಕೋರ್ಸುಗಳನ್ನು ಪ್ರಾರಂಭಿಸುವ ಕುರಿತು ಕ್ರಮ ಅಗತ್ಯ. ಹಾಗೆಯೇ ಇತರ ಆದಾಯ ಮೂಲಗಳನ್ನು ಸಜೀವಗೊಳಿಸುವ ದಿಕ್ಕಿನಲ್ಲಿ ಚಿಂತಿಸುವುದು ಒಳಿತು.
ಸರಕಾರ ಮತ್ತು ವಿಶ್ವವಿದ್ಯಾನಿಲಯಗಳ ಜಂಟಿ ಪ್ರಯತ್ನ ಸಾಗಿದರೆ ಈ ನಿಟ್ಟಿನಲ್ಲಿ ಯಶಸ್ಸನ್ನು ನಿರೀಕ್ಷಿಸ ಬಹುದು. ಒಟ್ಟಿನಲ್ಲಿ ರಾಜ್ಯದ ಸರಕಾರಿ ವಿಶ್ವವಿದ್ಯಾನಿಲಯಗಳು ಮತ್ತೆ ವೈಭವದ ದಿನಗಳನ್ನು ಕಾಣಲಿ ಎಂಬುದೇ ನಾಡಿನ ಜನತೆಯ ಆಶಯ ಮತ್ತು ಅಪೇಕ್ಷೆ.