ಅನೀಶ್‌ರ ಬೆಟ್ಟದ ಮೇಲಿನ ಗದ್ದೆಯೂ ಕೃಷಿಕನ ಕೈ ಹಿಡಿಯುವ ಹುಡುಗಿಯೂ...

ದೇವರಾಯರ ಪುಸ್ತಕವನ್ನು ಎಷ್ಟು ಜನ ಓದಿದ್ದಾರೋ ನನಗೆ ಗೊತ್ತಿಲ್ಲ, ಶಿವಪ್ರಸಾದರ ವೀಡಿಯೊವನ್ನು ಎಷ್ಟು ಸಾವಿರ ಜನ ನೋಡಿದ್ದಾರೋ ಗೊತ್ತಿಲ್ಲ. ಹಾಗಂತ ಅನೀಶ್ ಬೆಳ್ತಂಗಡಿಗೆ ಹೋಗಿ ದೇವರಾಯರ ಮಿತ್ತಮಜಲಿನ ಗದ್ದೆಗಳನ್ನು ನೋಡಿಲ್ಲ. ಅವರೊಟ್ಟಿಗೆ ಜಗಲಿಯಲ್ಲಿಯೋ ಗದ್ದೆಯ ಕಟ್ಟಪುಣಿಯಲ್ಲಿಯೋ ಕೂತು ಮಾತಾಡಿ ಅನುಭವವನ್ನು ಪಡೆದಿಲ್ಲ. ಸಾಗುವಳಿಯ ಲಾಭ-ನಷ್ಟ, ಸೋಲು -ಗೆಲುವುಗಳ ಬಗ್ಗೆ ಚರ್ಚಿಸಿಲ್ಲ. ಮಾಡಬೇಕೆಂಬ ಹಠವೊಂದಿದ್ದರೆ ಏನೂ ಸಾಧಿಸಬಹುದು ಎಂಬುದಕ್ಕೆ ಈ ಯಶೋಗಾಥೆ ನಮ್ಮ ಯುವಕರಿಗೊಂದು ಮಾದರಿ.;

Update: 2025-03-30 14:18 IST
ಅನೀಶ್‌ರ ಬೆಟ್ಟದ ಮೇಲಿನ ಗದ್ದೆಯೂ ಕೃಷಿಕನ ಕೈ ಹಿಡಿಯುವ ಹುಡುಗಿಯೂ...
  • whatsapp icon

ಕೃಷಿರಂಗಕ್ಕೆ ಆಧುನಿಕ ತಂತ್ರಜ್ಞಾನಗಳು ಹರಿದು ಬರುವ ಹಾಗೆಯೇ ನವಮಾಧ್ಯಮದ ಒಳಸುರಿಗಳ ಪ್ರಯೋಜನಾಂಶಗಳು ಕೂಡ ದಾಖಲಾರ್ಹವೇ. ಇದೊಂದು ಕಥೆ ಕೇಳಿ. ಕಳೆದ ವರ್ಷ ‘ಬಿ.ಕೆ ದೇವರಾವ್ ಅನ್ನ ದಾರಿಯ ಅನಂತ ಹೆಜ್ಜೆ’ಎಂಬ ಪುಸ್ತಕವೊಂದನ್ನು ಬರೆದಿದ್ದೆ. ಕರ್ನಾಟಕ ಕೃಷಿ ಕಥನ ಮಾಲಿಕೆಯಲ್ಲಿ ಐದನೆಯ ಕಥೆಯಾಗಿ ಅದು ಪ್ರಕಟವಾಗಿತ್ತು.

ಬೆಳ್ತಂಗಡಿಯ ಆ ತುದಿಯಂಚಿನ ಪಶ್ಚಿಮ ಘಟ್ಟದ ಕಾಡುಭಾಗದ ಒಂದು ತುಂಡು ಭೂಮಿಯಲ್ಲಿ ಕಳೆದ 40 -50 ವರ್ಷಗಳಿಂದ ಸತತ ನೂರಾರು ಭತ್ತದ ತಳಿಗಳನ್ನು ಬೆಳೆಸಿ ಅನ್ನಮೂಲವನ್ನು ನಿರಂತರ ಕಾಪಿಟ್ಟವರು ಈ ದೇವರಾಯರು. ಅನ್ನಲೋಕದ ಈ ಸಾಧಕನ ಕೃತಿಯನ್ನು ಆಧರಿಸಿ ಅದೇ ಬೆಳ್ತಂಗಡಿಯ ಶಿವಪ್ರಸಾದ್ ಎಂಬ ಯೂಟ್ಯೂಬರ್ ಗೆಳೆಯ ಒಂದು ಚಂದದ ವೀಡಿಯೊ ಮಾಡಿ ಯೂಟ್ಯೂಬಲ್ಲಿ ಹರಿಯ ಬಿಟ್ಟಿದ್ದರು. ಬರಿ ಇಷ್ಟನ್ನೇ ನೋಡಿದ, ಕೇಳಿದ ಯುವಕನೊಬ್ಬ ತನ್ನ ಕೃಷಿ ಆವರಣದ ಒಳಗಡೆ ಗದ್ದೆಮಾಡಿ ಭತ್ತ ಬೆಳೆಸಿದ ಕಥೆಯೇ ಇದು.

ಅನೀಶ್ ಭಟ್ ಪುತ್ತೂರು ತಾಲೂಕಿನ ಇರ್ದೆ ಸಮೀಪದ ದರ್ಬೆಯವರು. ಕೃಷಿ ಕುಟುಂಬ. ಹಾಗಂತ ಇವರಿಗೆ ಬುದ್ಧಿ ಬರುವ ಹೊತ್ತಿಗೆ ಊರು ತುಂಬಾ ಇದ್ದ ಗದ್ದೆಗಳಲ್ಲೆಲ್ಲ ದುಡ್ಡಿನ ಅಡಿಕೆ ಗಿಡ ತುಂಬಿಕೊಂಡು ದರ್ಬೆಯ ಚಹರೆಯೇ ಬದಲಾಗಿತ್ತು. ಅನ್ನದ ದಾರಿಯಲ್ಲಿದ್ದ ಕೃಷಿಕರು ಹಣದ ದಾರಿಗೆ ಹೊರಳಿ ಬಹಳ ದಿನಗಳೇ ಕಳೆದಿತ್ತು. ಅದರಲ್ಲೂ ಅಲ್ಪಾವಧಿ ಭತ್ತದ ಕೃಷಿ ಸೂಕ್ಷ್ಮ ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ಮೂವತ್ತರ ಹರೆಯದ ಅನೀಶ್ ‘ದೇವರಾಯರ ಹಾಗೆ ನಾನು ಭತ್ತ ಬೆಳೆಸಬೇಕು, ನನ್ನ ಅನ್ನವನ್ನು ನಾನೇ ಬೆಳೆಸಿ ಉಣ್ಣಬೇಕು’ ಎಂದು ಕನಸು ಕಂಡದ್ದು ಒಂದು ಹುಚ್ಚೇ ಸರಿ.

ಭತ್ತ ಸಾಗುವಳಿಯ ಕಷ್ಟ ನಷ್ಟಗಳೆಲ್ಲ ಅವರಪ್ಪ ಮಹೇಶ್ ಭಟ್ಟರಿಗೆ ಚೆನ್ನಾಗಿಯೇ ಗೊತ್ತಿತ್ತು. ಇವರ ತಂದೆ ಇಂದಿಗೆ 50 ವರ್ಷಗಳ ಹಿಂದೆ ಭತ್ತ ಬೆಳೆಸಿದ್ದರು. ಆದರೆ ಮಗ ಬಿಡಬೇಕಲ್ಲ, ಭೂಮಿ ಮಟ್ಟಸ ಮಾಡಲು ಹಿಟಾಚಿ ಅಂಗಳಕ್ಕೆ ಬರುವವರೆಗೆ ಮುಂದೆ ಹೀಗೆಲ್ಲ ಘಟಿಸಬಹುದಾದ ಯಶೋಗಾಥೆಯ ಮುನ್ನುಡಿಯನ್ನು ಮಗ ಮನೆಯವರಿಗೆ ಹೇಳಿಯೇ ಇರಲಿಲ್ಲ.!

ಸಾಮಾನ್ಯವಾಗಿ ಓದಿದ ನಗರ ಕೇಂದ್ರಿತ ಟೆಕ್ಕಿಗಳು ಬದುಕು ಬಚ್ಚಿ ಹುಟ್ಟುಮಣ್ಣಿಗೆ ವಾಪಸಾಗಿ ಕೃಷಿಗೆ ಇಳಿಯುವುದಿದೆ. ಹಾಗಂತ ಅವರಲ್ಲಿ ಭತ್ತವನ್ನು ಆಯ್ಕೆ ಮಾಡಿಕೊಳ್ಳುವವರು ಬಹಳ ಕಡಿಮೆ. ಕಿಸೆ ತುಂಬಿಸುವ ವಾಣಿಜ್ಯವೇ ಹೆಚ್ಚು . ಹಾಗೆ ನೋಡಿದರೆ ಅನೀಶ್ ಕೃಷಿಗೆ ಇಳಿದದ್ದಲ್ಲ ಹತ್ತಿದ್ದು! ಮನೆಯಿಂದ ನೂರು ಇನ್ನೂರು ಅಡಿ ಎತ್ತರದ ಗುಡ್ಡಕ್ಕೇರಿ ಸುಮಾರು 300 ಗಂಟೆಗಳಷ್ಟು ಹಿಟಾಚಿನಲ್ಲಿ ಕೆಲಸ ಮಾಡಿಸಿ ಮುಕ್ಕಾಲು ಎಕರೆ ಗದ್ದೆ ಮಾಡಿದ್ದಾರೆ.

ಸಾಮಾನ್ಯವಾಗಿ ಕರಾವಳಿ ಮಲೆನಾಡಿನಲ್ಲಿ ಮನೆಯ ಅಂಗಳದಲ್ಲಿ ನಿಂತು ಮುಮ್ಮುಖದ ವಿಶಾಲ ಗದ್ದೆ ತೋಟಗಳನ್ನು ನೋಡುವ ಕ್ರಮ, ಉದ್ದೇಶ, ಸಂಭ್ರಮ, ಪೌರುಷ ಬೇರೆಯೇ. ಆದರೆ ಇಲ್ಲಿ ಗದ್ದೆಯಲ್ಲಿ ನಿಂತು ಮನೆ ತೋಟವನ್ನು ನೋಡುವ ವಿಪರ್ಯಾಸ ಕ್ರಮ. ಇವತ್ತಿಗೆ ಅದೂ ಒಂದು ಚಂದವೇ.

ಗದ್ದೆ ಮಾಡೋದಕ್ಕೆ ಯೋಗ್ಯ ಜಾಗ ಕೆಳಗಡೆ ಇರಲಿಲ್ಲವೇ?. ಒಂದೋ ಅಡಿಕೆಯನ್ನು ಎಬ್ಬಿಸಬೇಕಾಗಿತ್ತು. ಅದಕ್ಕಾಗಿ ಅನೀಶ್ ಯಾವುದಕ್ಕೂ ಬೇಡದ ಆಯಪಾಯವಿಲ್ಲದ ಮನೆಯ ಹಿಂದಿನ ಗುಡ್ಡದ ನೆತ್ತಿಯನ್ನೇ ಅಡ್ಡಡ್ಡ ಕಡಿದು ಮಟ್ಟಸ ಮಾಡಿ ಗದ್ದೆ ನಿರ್ಮಿಸಿದರು. ಹೊಸ ಗದ್ದೆ ಎಂದರೆ ನಿಮಗೆ ಗೊತ್ತಲ್ಲ? ಗದ್ದೆಯ ಮಣ್ಣನ್ನು ಹದ ಮಾಡುವುದೇ ಬಹಳ ಪರಿಶ್ರಮದ ನೆಲವಿಜ್ಞಾನ. ಭೂಮಿಯೊಳಗಡೆ ಸತತ ಹಟ್ಟಿ, ಹಸುರೆಲೆ ಗೊಬ್ಬರ ಕೊಡಬೇಕು. ಬೂದಿ ಸುಡು ಮಣ್ಣು ಹರಡಬೇಕು. ಪಾದ ಹಿಂಡುವ ಕಲ್ಲು ಕೊಸರುಗಳನ್ನು ಎತ್ತಿ ತೆಗೆಯಬೇಕು. ಮಟ್ಟಸ ನೆಲದಲ್ಲಿ ಸಮಾನಾಂತರ ನೀರು ನಿಲ್ಲಬೇಕು. ಹರ ಹಾಕಿದ ಬೀಜ ಚಲಿಸದಷ್ಟು ಕೆಸರು ನಿಲ್ಲಬೇಕು. ಹಾಗಂತ ಓದಿದ ಅನೀಶರದ್ದು ಬೇರೆಯೇ ಲೆಕ್ಕಾಚಾರ. ಅವರು ಹೊಸ ಗದ್ದೆಯಲ್ಲಿ ನೀರು ನಿಲ್ಲಿಸಲಿಲ್ಲ. ಸಸಿಯ ಬುಡ ಒಣಗದ ಹಾಗೆ ತುಂತುರು ಹನಿ ನೀರಾವರಿ, ಜೊತೆಗೆ ಶುದ್ಧ ಸಾವಯವ ಗೊಬ್ಬರ, ಜೈವಿಕ ನಿಯಂತ್ರಣ. ಮನೆಯ ಹಟ್ಟಿಯ ಸ್ಲರಿ ನೀರು, ಮಜ್ಜಿಗೆ, ಗಂಜಲ ಇವೆಲ್ಲವನ್ನು ಯಥೇಚ್ಛವಾಗಿ ಬಳಸಿದರು. ಭತ್ತದ ಬುಡ ಒಣಗದಷ್ಟು ನಿರಂತರ ನೀರು ಕೊಟ್ಟರು. ಅದು ಕೂಡ ಗದ್ದೆಗಿಂತಲೂ ಎತ್ತರದಲ್ಲಿ ಗುಡ್ಡದ ತುತ್ತ ತುದಿಯಲ್ಲಿ ಲಕ್ಷಾಂತರ ಲೀಟರು ನೀರು ತುಂಬುವ ಟಾಂಕಿಯಿಂದ.

ಅನೀಶ್ ಕುಟುಂಬದ ಜಲ ಸಂಗ್ರಹ- ಹಂಚಿಕೆ ಸಾಹಸ ಕೂಡ ಬೇರೆ ಕೃಷಿಕರಿಗೆ ಎಷ್ಟು ಅನುಕೂಲಕರ ಎಂಬುದನ್ನು ನಾನು ಇಲ್ಲೇ ಹೇಳಿಬಿಡಬೇಕು. ಹೊಳೆಯ ನೀರನ್ನು ಮತ್ತು ಮಳೆನೀರನ್ನು ತನ್ನ ಕೃಷಿ ಜಮೀನಿನ ಎತ್ತರದ ಏರಿ ಮೇಲೆ ಸಂಗ್ರಹಿಸಿಟ್ಟುಕೊಳ್ಳುವ ಎರಡು ಭೀಮ ಗಾತ್ರದ ಕೃತಕ ಕೆರೆಗಳಿವೆ. ಬರೀ ಎರಡು ಕೆರೆಯಲ್ಲಿ ಹತ್ತಿಪ್ಪತ್ತು ಲಕ್ಷ ಲೀಟರ್ ನೀರು ಹಿಡಿದಿಡಲಾಗುತ್ತದೆ. ಅಲ್ಲಿಂದಲೇ ಕೃಷಿ ಆವರಣದ ಮೂಲೆ ಮೂಲೆಗೆ ನೀರನ್ನು ತಲುಪಿಸುವ ಪೈಪು ಜಾಲಗಳಿವೆ. ಕೃಷಿಕರಿಗೆ ಮಾದರಿಯಾಗಬಹುದಾದ ಇನ್ನೊಂದು ಸಂಗತಿ ಸೂರ್ಯ ಶಕ್ತಿಯ ಸಂಗ್ರಹಗಾರ. ತೋಟದ ಒಳಗಡೆ ಇರುವ ನೀರೆತ್ತುವ ಪಂಪುಗಳಿಗಾಗಲೀ ಮನೆಯ ಇನ್ನಿತರ ವಿದ್ಯುತ್ ಯಂತ್ರಗಳಿಗಾಗಲೀ ಮನೆಯ ಬೆಳಕಿಗಾಗಲೀ ಪೂರ್ಣ ಶಕ್ತಿ ಸಂಚಯಗೊಳ್ಳುವಷ್ಟು ಸೋಲಾರ್ ವ್ಯವಸ್ಥೆ ಇವರಲ್ಲಿದೆ. ನೂರಕ್ಕೆ ನೂರರಷ್ಟು ಈ ವಿಷಯದಲ್ಲಿ ತಾನು ಸ್ವಾವಲಂಬಿ ಎನ್ನುವ ಅನೀಶರ ಈ ತಂತ್ರ ಬೇರೆ ಕೃಷಿಕರಿಗೂ ಅನುಕೂಲಕರವೇ. ಆರಂಭದಲ್ಲಿ ಸ್ವಲ್ಪ ದುಬಾರಿ ಅನಿಸಿದರೂ ಮುಂದೆ ಇದು ಪರಿಣಾಮಕಾರಿ.

ಮತ್ತೆ ಭತ್ತದ ಕೃಷಿಗೆ ಬರುವೆ. ಕೇವಲ 3 ಕೆಜಿಯಷ್ಟು ಭತ್ತವನ್ನು ಭೂಮಿಯ ಮೇಲೆ ಗೆರೆ ಹಾಕಿ ಸಾಲಾಗಿ ಹರಹಾಕಿ ಅದರ ಮೇಲೆ ಮಣ್ಣು ಮುಚ್ಚಿದ್ದು. ಇಂಥ ಸಂದರ್ಭದಲ್ಲಿ ಮನೆಯ ಹಿರಿಯರ, ಕೆಲಸದಾಳುಗಳ ಮಾರ್ಗದರ್ಶನ ಪಡೆದದ್ದೂ ಇದೆ.

ನಾನೂ ಭತ್ತದ ಕೃಷಿಯ ಒಡನಾಟ ಇದ್ದವನೇ. ನನ್ನ ತಂದೆಯವರು ಹೊಸ ಗದ್ದೆ ಮಾಡಿದವರು. ಹಾಗಂತ ಹೊಲಗದ್ದೆಗಳು ಹೊಸತರಲ್ಲಿ ರೈತನ ಪರವಾಗಿರುವುದೇ ಇಲ್ಲ. ಎಷ್ಟೇ ಗೊಬ್ಬರ ಸುರಿದರೂ ಮೊದಲ ಒಂದೆರಡು ಬೆಳೆಯಲ್ಲಿ ಕಾಳಿಗಿಂತ ಜಳ್ಳೇ ಜಾಸ್ತಿ. ಕಾಡು ಮೃಗಗಳ ಉಪದ್ರ ಬೇರೆ. ಹೇಳಿ ಕೇಳಿ ಅನೀಶರ ಗದ್ದೆ ಇರುವುದೇ ಬೆಟ್ಟದ ಮೇಲೆ. ಹಂದಿ, ಮೊಲ, ನವಿಲು ಹೀಗೆ ಕಾಡು ಕಂಠಕಗಳು ಸಾಲು ಸಾಲಾಗಿ ಗದ್ದೆಗಿಳಿಯಬೇಕಾಗಿತ್ತು. ಆದರೆ ಅನೀಶ್ ಗದ್ದೆಯೂ ಸೇರಿ ತನ್ನ ಕೃಷಿ ಆವರಣದ ಸುತ್ತ ಐಬೆಕ್ಸ್ ಬೇಲಿ ಹಾಕಿದ್ದಾರೆ. ಕೀಟ ನಿಯಂತ್ರಿಸಲು ಭಕ್ಷಕಮೋಹಿಗಳನ್ನು ಅಲ್ಲಲ್ಲಿ ನಿಲ್ಲಿಸಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಮೊದಲ ಫಸಲು ನಂಬಲಸಾಧ್ಯ ರೀತಿಯಲ್ಲಿ ಕಾಳು ಕಟ್ಟಿದೆ. ಈಗಾಗಲೇ ಕೊಯ್ಲು ಆರಂಭವಾಗಿದೆ. ಮೊದಲ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಹುಡುಗನನ್ನು ಗದ್ದೆಯ ನಡುವೆ ನಿಲ್ಲಿಸಿ ಮಾತನಾಡಿಸುವುದೆಂದರೇ ಅದೆಷ್ಟು ಸುಖ.

ದೇವರಾಯರ ಪುಸ್ತಕವನ್ನು ಎಷ್ಟು ಜನ ಓದಿದ್ದಾರೋ ನನಗೆ ಗೊತ್ತಿಲ್ಲ, ಶಿವಪ್ರಸಾದರ ವೀಡಿಯೊವನ್ನು ಎಷ್ಟು ಸಾವಿರ ಜನ ನೋಡಿದ್ದಾರೋ ಗೊತ್ತಿಲ್ಲ. ಹಾಗಂತ ಅನೀಶ್ ಬೆಳ್ತಂಗಡಿಗೆ ಹೋಗಿ ದೇವರಾಯರ ಮಿತ್ತಮಜಲಿನ ಗದ್ದೆಗಳನ್ನು ನೋಡಿಲ್ಲ. ಅವರೊಟ್ಟಿಗೆ ಜಗಲಿಯಲ್ಲಿಯೋ ಗದ್ದೆಯ ಕಟ್ಟಪುಣಿಯಲ್ಲಿಯೋ ಕೂತು ಮಾತಾಡಿ ಅನುಭವವನ್ನು ಪಡೆದಿಲ್ಲ. ಸಾಗುವಳಿಯ ಲಾಭ-ನಷ್ಟ, ಸೋಲು -ಗೆಲುವುಗಳ ಬಗ್ಗೆ ಚರ್ಚಿಸಿಲ್ಲ. ಮಾಡಬೇಕೆಂಬ ಹಠವೊಂದಿದ್ದರೆ ಏನೂ ಸಾಧಿಸಬಹುದು ಎಂಬುದಕ್ಕೆ ಈ ಯಶೋಗಾಥೆ ನಮ್ಮ ಯುವಕರಿಗೊಂದು ಮಾದರಿ.

ಇದಕ್ಕೆ ವೆಚ್ಚವಾದ ಶ್ರಮ, ಖರ್ಚಾದ ಹಣ, ಪಡೆಯಬಹುದಾದ ಭತ್ತ-ಅಕ್ಕಿ ಈ ಲಾಭ ನಷ್ಟಗಳ ನಡುವೆ ಅಂತರಗಳನ್ನು ಗಮನಿಸಿ ಇದೆಲ್ಲ ಬೇಕೋ ಎನ್ನುವ ಪ್ರಶ್ನೆಗಳು ಕೇಳಲಾಗದಿದ್ದರೂ ಆ ಕ್ಷಣಕ್ಕೆ ಸಹಜವಾಗಿ ಹುಟ್ಟಿಕೊಳ್ಳುವುದು ಸತ್ಯ. ಇಂತಹ ತಕರಾರನ್ನು ಅನೀಶ್ ಅಲ್ಲಗಳೆಯುವುದು ಹೀಗೆ.

‘‘ಹೌದು ಪುಸ್ತಕ-ವೀಡಿಯೊ ಓದಿ, ನೋಡಿ ಅದನ್ನು ಕಾರ್ಯರೂಪಕ್ಕೆ ತಂದವ ನಾನೊಬ್ಬನೇ ಇರಬಹುದು. ಹೊಸ ಗದ್ದೆಯ ನಿರ್ಮಾಣಕ್ಕೆ ಮತ್ತು ಅದಕ್ಕೆ ಸುರಿದ ಸಾವಯವ ಜೈವಿಕ ಒಳಸುರಿಗಳಿಗೆ ಖರ್ಚಾದ ವೆಚ್ಚವನ್ನು ನಾನೀಗ ಲೆಕ್ಕ ಹಾಕಲಾರೆ. ಇವತ್ತಿನ ಮನಸ್ಥಿತಿಯ ಜನರ ಪ್ರಕಾರ ಅದು ದುಬಾರಿಯೇ. ಆದರೆ ನನಗೆ ಇದೊಂದು ಸುಖ. ಕೆಲವರು ಕೋಟಿ ಕೋಟಿ ಬೆಲೆಯ ಮನೆ ಕಟ್ಟಿಸುತ್ತಾರೆ. ಅಷ್ಟೇ ದುಬಾರಿಯ ಕಾರು ಕೊಳ್ಳುತ್ತಾರೆ. ಹಾಗೆ ನನಗೆ ಇದೊಂದು ಹುಚ್ಚು ಎಂದು ತಿಳಿಯಿರಿ...’’

‘‘ಒಂದು ಸುಖವನ್ನು ನೀವು ಮೌಲ್ಯದಲ್ಲಿ ಅಥವಾ ಬೆಲೆಯಲ್ಲಿ ಲೆಕ್ಕ ಹಾಕಬಹುದು. ಯಾವಾಗ ಬೆಲೆಯಲ್ಲಿ ಲೆಕ್ಕಹಾಕಿ ಸುಖ ಸಂಬಂಧವನ್ನು ಮೌಲ್ಯಮಾಪನ ಮಾಡುತ್ತಿರೋ ಆಗ ನಿಮ್ಮೊಳಗಡೆ ನಾನು ಸೋಲುತ್ತೇನೆ. ಒಂದು ಹಿಡಿ ಶುದ್ಧ ಅನ್ನ, ಒಂದು ಗ್ಲಾಸು ಶುದ್ಧ ನೀರು, ಒಂದು ತಂಬಿಗೆ ಹಳ್ಳಿಮಜ್ಜಿಗೆ, ನೀವೇ ಕೈಯಾರೆ ಬೆಳೆಸಿದ ನಿಮ್ಮ ಗದ್ದೆಯ ಭತ್ತದ ಅಕ್ಕಿಯ ಒಂದು ಬಟ್ಟಲು ಅನ್ನ ಇವೆಲ್ಲವನ್ನು ನಾವು ಹಣದ ಮೂಲಕ ಮೌಲ್ಯಮಾಪನ ಮಾಡುವುದಾದರೆ ನೋಡುವವರಿಗೆ ನನ್ನ ಈ ಪ್ರಯತ್ನ ವ್ಯರ್ಥವಾಗಿ ಕಾಣಿಸಬಹುದು. ಹಣ ಈ ಜಗತ್ತಿನ ಬಹುದೊಡ್ಡ ವೈರಸ್. ನಮ್ಮ ಹಿರಿಯರು ಇದರ ಆಚೆ ಬದುಕಿದವರು. ಸಹವಾಸ ಸಂಬಂಧದ ಕೂಡು ಬಂಧವನ್ನು ಬೆಸೆದುಕೊಂಡಿದ್ದರು. ಆಹಾರ ವಸ್ತುಗಳನ್ನು ಪರಸ್ಪರ ವಿನಿಮಯ ಮಾಡುವ ಕಾಲದಲ್ಲಿ ನಾವು ತಿನ್ನುವ, ಬಳಸುವ ಎಲ್ಲ ವಸ್ತುಗಳನ್ನು ಶ್ರಮಮೌಲ್ಯದಿಂದ ಪರಿಗಣಿಸುವ ಮ ನಸ್ಥಿತಿಯಿತ್ತು. ಯಾವಾಗ ಇವೆಲ್ಲವನ್ನು ಹಣದಿಂದ ಖರೀದಿಸಲಾರಂಭಿಸಿದೆವೋ ಅನ್ನದಂತಹ ಜೀವದ್ರವ್ಯವು ಅಪ್ರಸ್ತುತವಾಗತೊಡಗಿತು’’ ಎನ್ನುವ ಅನೀಶ್ ಎಸೆಸೆಲ್ಸಿಯಲ್ಲಿ 92 ಅಂಕ, ಪಿಯುಸಿಯಲ್ಲಿ 84 ಅಂಕವನ್ನು ಪಡೆದು ಇಂಜಿನಿಯರಿಂಗ್ ಕೋರ್ಸಿಗೆ ಸೇರಿದ್ದರು. ಎರಡೇ ವರ್ಷದಲ್ಲಿ ಅದು ಬೊಡಿದು ಕೃಷಿಗೆ ವಾಪಸ್ ಆಗುವಾಗ ಆ ಶಿಕ್ಷಣ ಸಂಸ್ಥೆ ನಿಮ್ಮ ಅಂಕಪಟ್ಟಿಯನ್ನು ಅರ್ಧದಲ್ಲಿ ಕೊಡಲಾಗುವುದಿಲ್ಲ ಎಂದಿತು. ‘ಬೇಕಾದರೆ ಅದರಲ್ಲಿ ಚರ್ಮುರಿ ಕಟ್ಟಿ’ ಎಂದು ಕಠೋರವಾಗಿ ನುಡಿದು ಕಲಿಕೆ, ನಗರ, ಬಣ್ಣಕ್ಕೆ ಬೆನ್ನು ಹಾಕಿ ಕೃಷಿಗೆ ಬಂದವರು ಈ ಅನೀಶ್.

‘‘ಸರ್ ನಮ್ಮ ಕೈಯಲ್ಲಿ ಒಂದು ಪ್ರಮಾಣ ಪತ್ರವೋ ಅಂಕಪಟ್ಟಿಯೋ ಇದ್ದಾಗ ಅದು ಪರ್ಯಾಯದ ಬಗ್ಗೆ, ಕೃಷಿ, ಊರು ಬಿಡುವ ಹಾಗೆ ಯೋಚನೆ ಮಾಡಲು ಇಂಬು ಕೊಡುತ್ತದೆ. ಮನೆ ಬಿಡುವ ದಾರಿ ತೋರಿಸುತ್ತದೆ. ನನಗೀಗ ಪದವೀಧರ ಎನ್ನುವ ಯಾವ ಹಂಗೂ ಇಲ್ಲ. ನನ್ನ ಕೈಯಲ್ಲಿ ಈಗ ಯಾವ ಅಂಕಪಟ್ಟಿಗಳು ಉಳಿದಿಲ್ಲ. ಆದರೆ ಅವರೆಲ್ಲರಿಗಿಂತ ಚೆನ್ನಾಗಿ ಹಂಗಿಲ್ಲದೆ ಸ್ವಾಭಿಮಾನದಿಂದ ಬದುಕಬಲ್ಲೆ ಅನ್ನುವ ಛಲವಿದೆ. ಅಂತಹ ಬದುಕನ್ನು ನಾನು ಸೃಷ್ಟಿಸಿಕೊಂಡಿದ್ದೇನೆ’’.

ಎಲ್ಲರಿಗೂ ಗೊತ್ತಿರುವ ಸತ್ಯವಿದು. ಇತ್ತೀಚೆಗೆ ಕೃಷಿ ಯುವಕರನ್ನು ಪ್ರೀತಿಸುವ ಹುಡುಗಿಯರು ತುಂಬಾ ಕಡಿಮೆ. ಚಿಲ್ಲರೆ ವೇತನವಾದರೂ ನಗರದ ಗಂಡನೇ ಬೇಕು. ಹೆಣ್ಮಕ್ಕಳಲ್ಲಿ ಇಂತಹ ಮನೋಬೀಜ ಬಿತ್ತುವ ಕೃಷಿಕ ಪೋಷಕರೇ ಇರುವ ಜಗತ್ತಿನಲ್ಲಿ ಹವ್ಯಕ ಸಮುದಾಯದ್ದು ಮತ್ತೂ ಗಂಭೀರವಾದ ಸಮಸ್ಯೆಯೇ. ಇದೆಲ್ಲಾ ಅನೀಶರಿಗೆ ಗೊತ್ತಿರದಿರಲಿಲ್ಲ. ಇಂತಹ ಪರಿಣಾಮದ ಬಗ್ಗೆ ವಿಷಾದ, ಆಕ್ರೋಶವೂ ಇತ್ತು. ಆದರೆ ಈಗ ಅವರ ಹಸಿರು ಬೇರುಮೂಲ ಮನೋಭೂಮಿಕೆಯನ್ನು ಚೆನ್ನಾಗಿ ಅರಿತ ಬೆಳ್ತಂಗಡಿ ಮೂಲದ ಅರ್ಪಿತ ಎಂಬ ಓದಿದ ಹುಡುಗಿ ಸದ್ಯದಲ್ಲೇ ಮದುಮಗಳಾಗಿ ದರ್ಬೆಯ ಕೃಷಿ ಮನೆಗೆ ಬರಲು ಸಿದ್ಧವಾಗಿದ್ದಾಳೆ.

‘‘ನನಗೆ ಇದೇ ಸುಖ, ಕೆಲವೇ ದಿನಗಳಲ್ಲಿ ನನಗೆ ಮದುವೆ ಇದೆ, ಅದರ ಪೂರ್ವದಲ್ಲಿ ಎಂಗೇಜ್ಮೆಂಟ್ ಇದೆ. ನಮ್ಮ ಹವ್ಯಕರಲ್ಲಿ ಕೃಷಿ ಹುಡುಗರನ್ನು ಮೆಚ್ಚಿ ಮದುವೆಯಾಗುವ ಹುಡುಗಿಯರು ತುಂಬಾ ಕಮ್ಮಿ. ನನಗೆ ಸಂತೋಷವೆಂದರೆ ನನ್ನ ಆಸಕ್ತಿಗನುಗುಣವಾಗಿ ಮೆಚ್ಚಿಕೊಂಡ ಹುಡುಗಿಯೊಬ್ಬಳು ಬಾಳಸಂಗಾತಿಯಾಗಲಿಕ್ಕಿದ್ದಾಳೆ. ಮುಂದಿನ ಈ ಎರಡು ಕಾರ್ಯಕ್ರಮಗಳಲ್ಲೂ ಬಂದವರಿಗೆಲ್ಲ ನನ್ನದೇ ಗದ್ದೆಯ ಒಂದೊಂದು ಬೊಗಸೆ ಭತ್ತ ಕೊಡಬೇಕೆಂದಿದ್ದೇನೆ. ಇನ್ನೇನು ಕೊಯ್ಲು ಆರಂಭಿಸಬೇಕು’’ ಎನ್ನುವ ಅನೀಶ್ ಮುಖದಲ್ಲಿ ನಗು, ನೆಮ್ಮದಿಯನ್ನು ಕಂಡು ತುಂಬಾ ಸಂತೋಷವಾಯಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನರೇಂದ್ರ ರೈ ದೇರ್ಲ

contributor

Similar News