ಈಡೇರದ ಭರವಸೆಗಳು, ಹುಸಿಯಾದ ನಂಬಿಕೆ

ಸಾರ್ವಜನಿಕ ಜೀವನದಲ್ಲಿ ಮುಸ್ಲಿಮರ ಧ್ವನಿಗಳು ಅರ್ಥಪೂರ್ಣವಾಗಿ ಪ್ರತಿನಿಧಿಸಲ್ಪಡುತ್ತವೆ ಎನ್ನುವುದನ್ನು ಈ ಸರಕಾರವು ಖಚಿತಪಡಿಸಬೇಕು. ಚುನಾವಣಾ ಸುಧಾರಣೆಗಳು, ಮೀಸಲು ಸ್ಥಾನಗಳು ಮತ್ತು ಕರ್ನಾಟಕ ವಿಧಾನ ಪರಿಷತ್‌ನಂತಹ ಸಂಸ್ಥೆಗಳಿಗೆ ನ್ಯಾಯಯುತ ಸಂಖ್ಯೆಯ ನಾಮನಿರ್ದೇಶನಗಳಿಗೆ ಮುಂದಾಗಬೇಕು. ವಿವಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮುದಾಯದ ಸಮರ್ಥ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ವಿಜ್ಞಾನಿಗಳು ಮತ್ತು ಸಂಶೋಧಕರು ಸಾಕಷ್ಟು ಪ್ರಾತಿನಿಧ್ಯವನ್ನು ಪಡೆಯುವಂತೆಯೂ ಕಾಂಗ್ರೆಸ್ ಸರಕಾರವು ನೋಡಿಕೊಳ್ಳಬೇಕಿದೆ.;

Update: 2025-03-28 12:08 IST
ಈಡೇರದ ಭರವಸೆಗಳು, ಹುಸಿಯಾದ ನಂಬಿಕೆ
  • whatsapp icon

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದ ಅಗಾಧ ಬೆಂಬಲದಿಂದಾಗಿ ಕಾಂಗ್ರೆಸ್ ಅದ್ಭುತ ವಿಜಯವನ್ನು ಗಳಿಸಿತು. ರಾಜ್ಯಾದ್ಯಂತ ಸುಮಾರು ಶೇ.88ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ನೀಡಿದ್ದರು ಮತ್ತು ಸುಮಾರು 130 ಕ್ಷೇತ್ರಗಳಲ್ಲಿ ಮುಸ್ಲಿಮ್ ಸಮುದಾಯದ ಶೇ. 99 ಮತದಾರರು ಕಾಂಗ್ರೆಸನ್ನು ಬೆಂಬಲಿಸಿದ್ದರು ಎಂದು ವರದಿಗಳು ಸೂಚಿಸಿವೆ. ಈ ನಿರ್ಣಾಯಕ ಜನಾದೇಶವು ಈಗ ತನ್ನ ಅರ್ಥವನ್ನು ಕಳೆದುಕೊಂಡಿದೆ. ಮುಸ್ಲಿಮ್ ಸಮುದಾಯವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸವಾಲುಗಳನ್ನು ಬಗೆಹರಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಸಮುದಾಯಕ್ಕೆ ಸಂಪನ್ಮೂಲಗಳ ಹೆಚ್ಚಿನ ಲಭ್ಯತೆ ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯದ ಭರವಸೆಯನ್ನು ನೀಡಿತ್ತು.

2011ರ ಜನಗಣತಿಯ ದತ್ತಾಂಶಗಳ ಪ್ರಕಾರ ಮುಸ್ಲಿಮರು ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇ.13ರಷ್ಟಿದ್ದು, ಅನುಪಾತದ ಪ್ರಾತಿನಿಧ್ಯದ ಮೇರೆಗೆ ರಾಜ್ಯದ ಉಭಯ ಸದನಗಳಲ್ಲಿ ಆ ಸಮುದಾಯದ ಕನಿಷ್ಠ 39 ಶಾಸಕರಿರಬೇಕು. ಆದರೆ ಮಾರ್ಚ್ 2025ಕ್ಕೆ ಇದ್ದಂತೆ ವಿಧಾನಸಭೆಯಲ್ಲಿ 244 ಶಾಸಕರ ಪೈಕಿ ಕೇವಲ 10 (ಶೇ.4.46) ಮುಸ್ಲಿಮ್ ಶಾಸಕರಿದ್ದರೆ, ವಿಧಾನಪರಿಷತ್ತಿನಲ್ಲಿ 75 ಸದಸ್ಯರ ಪೈಕಿ ಕೇವಲ ನಾಲ್ವರು (ಶೇ.5.33) ಮುಸ್ಲಿಮರಾಗಿದ್ದಾರೆ. ಅಂದರೆ ಉಭಯ ಸದನಗಳಲ್ಲಿ ಮುಸ್ಲಿಮ್ ಶಾಸಕರ ಒಟ್ಟು ಸಂಖ್ಯೆ 14 (ಶೇ.4.68) ಮಾತ್ರ. ಇದು ಅಪೇಕ್ಷಿತ 39 ಸ್ಥಾನಗಳ ಪೈಕಿ 25 (ಶೇ.64) ಸ್ಥಾನಗಳ ಭಾರೀ ಕೊರತೆಯನ್ನು ತೋರಿಸುತ್ತದೆ.

ಇದಲ್ಲದೆಯೂ ಕರ್ನಾಟಕದ ಕಾಂಗ್ರೆಸ್ ಸರಕಾರವು ಮುಸ್ಲಿಮರಿಗೆ ನೀಡಿದ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದೆ. ಆದ್ದರಿಂದ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಭಾವನೆ ಸಮುದಾಯದ ಹಲವರಲ್ಲಿ ಮನೆ ಮಾಡಿದೆ. ವಿವಿಧ ಅಧಿಕಾರದ ಸ್ಥಾನಗಳಿಗೆ ಸಾಕಷ್ಟು ಮುಸ್ಲಿಮ್ ಜನ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲು ಅಥವಾ ಚುನಾಯಿಸಲು ಬೇಕಾದ ಪ್ರಯತ್ನಗಳೇ ಆಗಿಲ್ಲ, ಮುಸ್ಲಿಮರಿಗೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚಿಸುವಲ್ಲಿನ ಈ ವೈಫಲ್ಯ ಕಳವಳಕಾರಿಯಾಗಿದೆ. ಮುಸ್ಲಿಮರ ಕುರಿತ ಕಾಂಗ್ರೆಸ್‌ನ ಈ ನಿಷ್ಕ್ರಿಯತೆಯನ್ನು ನಿಜವಾದ ಬದ್ಧತೆಯಿಲ್ಲದ ಕೇವಲ ವೋಟ್ ಬ್ಯಾಂಕ್ ರಾಜಕೀಯವೆಂದು ಪರಿಗಣಿಸಲಾಗುತ್ತಿದೆ. ತನಗೆ ಅಭೂತಪೂರ್ವ ಬೆಂಬಲ ನೀಡಿ ಗೆಲ್ಲಿಸಿದ ಮುಸ್ಲಿಮ್ ಸಮುದಾಯದ ಕುರಿತು ಕಾಂಗ್ರೆಸ್ ಈಗ ಮಲತಾಯಿ ಧೋರಣೆ ತೋರಿಸುತ್ತಿದೆ ಎಂಬ ಭಾವನೆ ಆ ಸಮುದಾಯದವರಲ್ಲಿ ಬಂದಿದೆ.

ಈ ಸವಾಲುಗಳನ್ನು ಬಗೆಹರಿಸಲು ಬಹು ಆಯಾಮಗಳ ಕಾರ್ಯತಂತ್ರದ ಅಗತ್ಯವಿದೆ. ಮುಸ್ಲಿಮರಲ್ಲಿ ರಾಜಕೀಯ ಪಾಲುದಾರಿಕೆ, ಸಾಕ್ಷರತೆ ಮತ್ತು ನಾಯಕತ್ವ ಹೆಚ್ಚಿಸುವುದನ್ನು ಕೇಂದ್ರೀಕರಿಸಿ ಸಮಗ್ರ ಕಾರ್ಯಕ್ರಮಗಳನ್ನು ಆರಂಭಿಸಬೇಕಿದೆ. ಕಾಂಗ್ರೆಸ್ ಕೂಡ ತನ್ನ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಸಕ್ರಿಯವಾಗಿ ಬೆಂಬಲಿಸಬೇಕು, ಉತ್ತೇಜಿಸಬೇಕು ಮತ್ತು ಪ್ರೋತ್ಸಾಹಿಸಬೇಕು, ತನ್ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವರ ಒಳಗೊಳ್ಳುವಿಕೆಯನ್ನು ಖಚಿತಪಡಿಸ ಬೇಕು. ರಾಜ್ಯ ಶಾಸಕಾಂಗದಲ್ಲಿ ಹಾಗೂ ಜಿಲ್ಲಾ ಮಟ್ಟದ ಆಡಳಿತದಲ್ಲೂ ಮುಸ್ಲಿಮ್ ಸಮುದಾಯಕ್ಕೆ ಮೀಸಲು ಕ್ಷೇತ್ರಗಳನ್ನು ನಿಗದಿಪಡಿಸಿದರೆ ಪ್ರಾತಿನಿಧ್ಯ ಕೊರತೆಯನ್ನು ತಗ್ಗಿಸಲು ನೆರವಾಗುತ್ತವೆ ಮತ್ತು ನೀತಿ ನಿರೂಪಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳ ಧ್ವನಿಗೆ ಬಲ ಸಿಗುತ್ತದೆ. ಕಾಂಗ್ರೆಸ್ ಪ್ರಾಮಾಣಿಕವಾಗಿ ಮುಸ್ಲಿಮ್ ಸಮುದಾಯದಲ್ಲಿ ತಳಮಟ್ಟದ ನಾಯಕತ್ವವನ್ನು ಬೆಳೆಸಬೇಕು ಮತ್ತು ಮಹತ್ವದ ಪಾತ್ರಗಳನ್ನು ವಹಿಸಲು ಆ ಸಮುದಾಯದ ಬುದ್ಧಿಜೀವಿಗಳನ್ನು ಪ್ರೋತ್ಸಾಹಿಸಬೇಕು.

ಕಾಂಗ್ರೆಸ್ ಆಗಾಗ ದುರ್ಬಲ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಅವರ ಸೋಲನ್ನು ಖಾತರಿಪಡಿಸಿದೆ. ಸ್ಥಳೀಯ ವೈಮನಸ್ಸುಗಳು ಮತ್ತು ಪಕ್ಷದ ನಾಯಕರ ನಡುವೆ ಸಂಘರ್ಷಗಳಿಂದಾಗಿ ಪಕ್ಷದ ಕಾರ್ಯಕರ್ತರು ಸಹ ಈ ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ. ಹೆಚ್ಚುವರಿಯಾಗಿ ಪಕ್ಷವು ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮುಸ್ಲಿಮೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಮತ್ತು ಅವರಿಗೆ ಮತ ನೀಡುವಂತೆ ಸಮುದಾಯಕ್ಕೆ ಸೂಚಿಸುತ್ತದೆ. ಕಾಂಗ್ರೆಸ್ ಮುಸ್ಲಿಮ್ ಬಹುಸಂಖ್ಯಾಕ ಕ್ಷೇತ್ರಗಳಲ್ಲಿ ಮುಸ್ಲಿಮೇತರ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಮುಸ್ಲಿಮೇತರರು ಹೆಚ್ಚಿರುವ ಪ್ರದೇಶಗಳಲ್ಲಿ ಅದು ಎಂದಾದರೂ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೇ ಮತ್ತು ಅವರ ಪರ ಸ್ಥಳೀಯ ಬೆಂಬಲವನ್ನು ಕ್ರೋಡೀಕರಿಸುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ. ಕಾಂಗ್ರೆಸ್ ಈಗ ಅನುಸರಿಸುತ್ತಿರುವ ಮಾದರಿಯು ಸಮುದಾಯದಲ್ಲಿ ನಂಬಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಮುದಾಯವನ್ನು ಅಂಚಿಗೆ ತಳ್ಳುತ್ತದೆ, ತನ್ಮೂಲಕ ಕಾಂಗ್ರೆಸ್ ಮೇಲಿರುವ ಹುಸಿ ಜಾತ್ಯತೀತತೆಯ ಆರೋಪಗಳನ್ನು ಬಲಗೊಳಿಸುತ್ತದೆ.

ಅಧಿಕಾರ ಮತ್ತು ಪ್ರಾತಿನಿಧ್ಯವನ್ನು ಪಡೆಯಲು ಸಮುದಾಯ ಆಧರಿತ ಸಂಘಟನೆಗಳು ಮತ್ತು ಲಾಬಿ ಗುಂಪುಗಳು ರಾಜ್ಯ ಸರಕಾರವನ್ನು ಉತ್ತರದಾಯಿಯನ್ನಾಗಿಸಬೇಕು. ಈ ಸಂಸ್ಥೆಗಳು ಸರಕಾರದ ನೀತಿಯ ಪ್ರಗತಿ, ಬಜೆಟ್ ಹಂಚಿಕೆಗಳ ಮೇಲೆ ನಿಗಾ ಇರಿಸಬೇಕು. ಸಮುದಾಯಕ್ಕಾಗಿ ನ್ಯಾಯಯುತವಾಗಿ ಸಿಗಬೇಕಾದ ರಚನಾತ್ಮಕ ಸಾಮಾಜಿಕ, ಆರ್ಥಿಕ ಕಲ್ಯಾಣ ಯೋಜನೆಗಳಿಗಾಗಿ ಒತ್ತಡ ಹೇರಬೇಕು. ಅಧಿಕಾರದಲ್ಲಿರುವ ಪಕ್ಷ ನೀಡಿದ್ದ ಚುನಾವಣಾ ಭರವಸೆಗಳು ಸಾಕಾರಗೊಳ್ಳುವಂತೆ ಅವು ನೋಡಿಕೊಳ್ಳಬೇಕು. ಸ್ವಯಂಸೇವಕ ಸಂಘಗಳು, ಯುವ ವೇದಿಕೆ ಗಳು, ಮಹಿಳಾ ಸಮೂಹಗಳು ಮತ್ತು ವೃತ್ತಿಪರ ಸಂಘಗಳು ತಳಮಟ್ಟದ ಕ್ರಮವನ್ನು ಕ್ರೋಡೀಕರಿಸಬಹುದು, ರಾಜಕೀಯ ಜಾಗೃತಿಯನ್ನು ಬೆಳೆಸಬಹುದು ಮತ್ತು ಸಮುದಾಯದ ಸದಸ್ಯರಿಗೆ ಅವರ ಹಕ್ಕುಗಳ ಕುರಿತು ಶಿಕ್ಷಣ ನೀಡಬಹುದು.

ಸುಸಂಘಟಿತ ನಾಗರಿಕ ಸಮಾಜ ಜಾಲಗಳು ಸಮುದಾಯದ ರಾಜಕೀಯ ಚೌಕಾಶಿ ಶಕ್ತಿಯನ್ನು ಹೆಚ್ಚಿಸಬಲ್ಲವು. ಸರಕಾರವು ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲಗೊಂಡರೆ ಜಾಗೃತ ನಾಗರಿಕ ಸಮಾಜವು ಸಾರ್ವಜನಿಕರನ್ನು ಸಂಘಟಿಸುವ ಮೂಲಕ ಅಂಚಿನಲ್ಲಿರುವವರ ಪರವಾಗಿ ನೀತಿ ನಿರೂಪಣೆ ಮೇಲೆ ಪ್ರಭಾವ ಬೀರಬಹುದು.

ಮುಸ್ಲಿಮ್ ಸಮುದಾಯವು ದೀರ್ಘಕಾಲದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಸರಕಾರದ ವೈಫಲ್ಯವು ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಮೇಲೆ ಸಮುದಾಯದ ನಂಬಿಕೆ ದುರ್ಬಲವಾಗುವಂತೆ ಮಾಡಿದೆ. ಕಾಂಗ್ರೆಸ್ ಮುಸ್ಲಿಮ್ ಸಮುದಾಯದಿಂದ ಗಳಿಸಿರುವ ಭಾರೀ ಮತಗಳ ಪಾಲು ಆ ಪಕ್ಷ ನೀಡಿರುವ ರಚನಾತ್ಮಕ ನೀತಿಗಳು ಮತ್ತು ದೃಢವಾದ ಬೆಂಬಲ ವ್ಯವಸ್ಥೆಗಳ ಭರವಸೆಗಳನ್ನು ಆಧರಿಸಿತ್ತು. ಆದರೆ ಮುಸ್ಲಿಮ್ ಸಮುದಾಯದ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ-ಆರ್ಥಿಕ ಸ್ಥಿತಿಗಳು ಹಾಗೂ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಸಮಾನತೆಗಳಲ್ಲಿ ತೀರಾ ಅಲ್ಪ ಸುಧಾರಣೆ ಯಿಂದಾಗಿ ವಾಸ್ತವವು ಸಂಪೂರ್ಣ ಭಿನ್ನವಾಗಿಯೇ ಉಳಿದಿದೆ.

ಸಾರ್ವಜನಿಕ ಜೀವನದಲ್ಲಿ ಮುಸ್ಲಿಮರ ಧ್ವನಿಗಳು ಅರ್ಥಪೂರ್ಣವಾಗಿ ಪ್ರತಿನಿಧಿಸಲ್ಪಡುತ್ತವೆ ಎನ್ನುವುದನ್ನು ಈ ಸರಕಾರವು ಖಚಿತಪಡಿಸಬೇಕು. ಚುನಾವಣಾ ಸುಧಾರಣೆಗಳು, ಮೀಸಲು ಸ್ಥಾನಗಳು ಮತ್ತು ಕರ್ನಾಟಕ ವಿಧಾನ ಪರಿಷತ್‌ನಂತಹ ಸಂಸ್ಥೆಗಳಿಗೆ ನ್ಯಾಯಯುತ ಸಂಖ್ಯೆಯ ನಾಮನಿರ್ದೇಶನಗಳಿಗೆ ಮುಂದಾಗಬೇಕು. ವಿವಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮುದಾಯದ ಸಮರ್ಥ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ವಿಜ್ಞಾನಿಗಳು ಮತ್ತು ಸಂಶೋಧಕರು ಸಾಕಷ್ಟು ಪ್ರಾತಿನಿಧ್ಯವನ್ನು ಪಡೆಯುವಂತೆಯೂ ಕಾಂಗ್ರೆಸ್ ಸರಕಾರವು ನೋಡಿಕೊಳ್ಳಬೇಕಿದೆ.

ದೀರ್ಘಾವಧಿಯ ಬದಲಾವಣೆಗಾಗಿ ಅಲ್ಪಸಂಖ್ಯಾತರಲ್ಲಿ ರಾಜಕೀಯ ಸಾಕ್ಷರತೆ ಮತ್ತು ನಾಯಕತ್ವವನ್ನು ಬೆಳೆಸುವುದು ಅಗತ್ಯವಾಗಿದೆ. ಯುವಜನರು ಮತ್ತು ತಳಮಟ್ಟದ ನಾಯಕರಿಗೆ ಶಿಕ್ಷಣ ನೀಡುವ, ಸಬಲಗೊಳಿಸುವ ಮತ್ತು ಅವರನ್ನು ತೊಡಗಿಸಿಕೊಳ್ಳುವ ಕಾರ್ಯಕ್ರಮಗಳು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಮರ್ಥ ನಾಯಕರನ್ನು ಸೃಷ್ಟಿಸಬಲ್ಲವು.

ತನ್ನ ಪಕ್ಷದಲ್ಲಿರುವ ಮುಸ್ಲಿಮ್ ನಾಯಕತ್ವವನ್ನು ಸಮುದಾಯ ಆಧರಿತ ಖಾತೆಗಳು, ಆಯೋಗಗಳು ಮತ್ತು ಮಂಡಳಿಗಳಿಗೆ ಸೀಮಿತಗೊಳಿಸುವ ಕಾಂಗ್ರೆಸ್‌ನ ಧೋರಣೆಯು ಅದರ ಮುಸ್ಲಿಮ್ ನಾಯಕರು ಮಹತ್ವದ ಇತರ ರಾಜಕೀಯ ಹೊಣೆಗಾರಿಕೆ ನಿಭಾಯಿಸಲು ಸಿದ್ಧರಾಗಿಲ್ಲ ಎಂಬ ಸಂದೇಶ ರವಾನಿಸುತ್ತದೆ. ಕಾಂಗ್ರೆಸ್ ಪಕ್ಷವು ಜನತಾ ಪಕ್ಷದ ರೀತಿಯಲ್ಲಿ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ಒದಗಿಸಿದರೆ ಕರ್ನಾಟಕದಲ್ಲಿ ನೀರು ಅಬ್ದುಲ್ ನಝೀರ್ ಸಾಬ್ ಅವರಂತಹ ವ್ಯಾಪಕ ಜನಪ್ರಿಯತೆ ಗಳಿಸುವ ಪ್ರಭಾವಿ ಮುಸ್ಲಿಮ್ ನಾಯಕರು ರೂಪುಗೊಳ್ಳುವುದಕ್ಕೆ ದಾರಿಯಾಗಬಹುದು.

ಸಾಚಾರ್ ಸಮಿತಿ, ರಂಗನಾಥ ಮಿಶ್ರಾ ಆಯೋಗ ಮತ್ತು ಪ್ರೊ .ಅಬೂ ಸಾಲೇಹ್ ಷರೀಫ್, ಪ್ರೊ. ಅಬ್ದುಲ್ ಅಝೀಝ್ ಹಾಗೂ ಪ್ರೊ. ಮುಝಪ್ಫರ್ ಅಸ್ಸಾದಿ ಅವರಂತಹ ವಿದ್ವಾಂಸರ ಸ್ವತಂತ್ರ ಸಂಶೋಧನೆಗಳ ವರದಿಗಳನ್ನು ತೆರೆದು ನೋಡಿ. ಆ ವರದಿಗಳು ಬಡತನ, ನಿರುದ್ಯೋಗ, ಮೂಲಸೌಕರ್ಯ ಕೊರತೆ ಹಾಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಸೀಮಿತ ಲಭ್ಯತೆಯಂತಹ ಮುಸ್ಲಿಮರು ಎದುರಿಸುತ್ತಿರುವ ವ್ಯವಸ್ಥಿತ ಹಾಗೂ ಗಂಭೀರ ಸವಾಲುಗಳನ್ನು ಎತ್ತಿ ತೋರಿಸುತ್ತವೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು, ಆದರೆ ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಅದು ವಿಫಲಗೊಂಡಿದೆ. ಬದಲಿಗೆ ಅದರ ನೀತಿಗಳು ಸಾಂಕೇತಿಕವಾಗಿಯೇ ಉಳಿದುಕೊಂಡಿವೆ ಮತ್ತು ನಿಜವಾದ ಸಬಲೀಕರಣ ಕಂಡು ಬರುತ್ತಿಲ್ಲ.

ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಮುಸ್ಲಿಮರ ಕಡಿಮೆ ಪ್ರಾತಿನಿಧ್ಯ ಕಳವಳಕಾರಿಯಾಗಿದೆ. 75 ಸದಸ್ಯ ಬಲದ ಪರಿಷತ್‌ನಲ್ಲಿ ಕೇವಲ ನಾಲ್ವರು ಮುಸ್ಲಿಮ್ ಸದಸ್ಯರಿರುವುದು ಅವರ ಜನಸಂಖ್ಯಾ ಬಲಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಈ ಪ್ರಾತಿನಿಧ್ಯ ಕೊರತೆಯು ನೀತಿ ನಿರೂಪಣೆ ಪ್ರಕ್ರಿಯೆಯನ್ನು ವಿರೂಪಗೊಳಿಸುತ್ತದೆ ಮತ್ತು ಸಮುದಾಯದ ಅಗತ್ಯಗಳನ್ನು ಸಂಪೂರ್ಣವಾಗಿ ಬದಿಗೆ ತಳ್ಳುತ್ತದೆ. ಕಾಂಗ್ರೆಸ್ ಯಾವಾಗಲೂ ಪ್ರಮುಖ ನೇಮಕಾತಿಗಳಲ್ಲಿ ಮುಸ್ಲಿಮರನ್ನು ಕಡೆಗಣಿಸಿದೆ, ಪರಿಣಾಮವಾಗಿ ಅವರ ಸವಾಲುಗಳನ್ನು ಸಮರ್ಪಕವಾಗಿ ಬಗೆಹರಿಸಲು ಅಸ್ತಿತ್ವದಲ್ಲಿರುವ ನೀತಿಗಳು ನೆರವಾಗುತ್ತಿಲ್ಲ.

ಮುಸ್ಲಿಮ್ ಸಮುದಾಯಕ್ಕೆ ಆಗಿರುವ ಈ ಅನ್ಯಾಯವನ್ನು ತಕ್ಕಮಟ್ಟಿಗೆ ಸರಿದೂಗಿಸಲು ಮುಂಬರುವ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಆಯ್ಕೆಯಲ್ಲಿ ಕಾಂಗ್ರೆಸ್‌ಗೆ ಸುವರ್ಣಾವಕಾಶವಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದಂತಹ ಪ್ರಾತಿನಿಧ್ಯ ಕೊರತೆಯ ಪ್ರದೇಶದ ಮುಸ್ಲಿಮ್ ಸಮುದಾಯದ ಕನಿಷ್ಠ ಇಬ್ಬರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಮೂಲಕ ಕಾಂಗ್ರೆಸ್ ನ್ಯಾಯಯುತ ಪ್ರಾತಿನಿಧ್ಯದತ್ತ ಹೆಜ್ಜೆಯನ್ನಿರಿಸಬಹುದು. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಎಲ್ಲ ಐದೂ ಲೋಕಸಭಾ ಕ್ಷೇತ್ರಗಳನ್ನು ಗೆದ್ದಿರುವಲ್ಲಿ ಅಲ್ಲಿನ ಮುಸ್ಲಿಮರ ಅಗಾಧ ಬೆಂಬಲ ನಿರ್ಣಾಯಕ ಪಾತ್ರ ವಹಿಸಿದೆ. ಈಗ ಆ ಪ್ರದೇಶದ ಕನಿಷ್ಠ ಇಬ್ಬರು ಮುಸ್ಲಿಮರಿಗೆ ವಿಧಾನ ಪರಿಷತ್‌ನಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿ ಕಾಂಗ್ರೆಸ್ ಮುಸ್ಲಿಮ್ ಸಮುದಾಯಕ್ಕೆ ನ್ಯಾಯ ಒದಗಿಸಬೇಕಾಗಿದೆ.

ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಆಡಳಿತವು ಸಾಮಾಜಿಕ ಸಾಮರಸ್ಯವನ್ನು ಖಚಿತಪಡಿಸುತ್ತದೆ ಮತ್ತು ಸಮಸ್ಯೆಗಳಿಗೆ ವಿನೂತನ ಪರಿಹಾರಗಳನ್ನು ಸಾಧ್ಯವಾಗಿಸುತ್ತದೆ. ಸಾಕಷ್ಟು ಪ್ರಾತಿನಿಧ್ಯವನ್ನು ಕಡೆಗಣಿಸುವುದು ಸಮುದಾಯದಲ್ಲಿ ಪರಕೀಯತೆ ಮತ್ತು ಅಮಾನ್ಯೀಕರಣದ ಭಾವನೆಯನ್ನು ಬೆಳೆಸುತ್ತದೆ, ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ನಿಜವಾದ ಪ್ರಾತಿನಿಧ್ಯವು ಕೇವಲ ಸಾಂಕೇತಿಕವಲ್ಲ, ಸುಸ್ಥಿರ ಪ್ರಗತಿಗೆ ಅಡಿಪಾಯವಾಗಿದೆ ಎನ್ನುವುದನ್ನು ಕರ್ನಾಟಕದ ರಾಜಕೀಯ ನಾಯಕತ್ವವು ಗುರುತಿಸಬೇಕಿದೆ.

ಕಾಂಗ್ರೆಸ್‌ನ ಮುಸ್ಲಿಮ್ ಸಚಿವರು ಮತ್ತು ಶಾಸಕರು ಸಾಮಾನ್ಯವಾಗಿ ಸಮುದಾಯದ ಪರಿಣಾಮಕಾರಿ ಪ್ರತಿಪಾದಕರಾಗುವ ಬದಲು ಸಾಂಕೇತಿಕ ಪ್ರತಿನಿಧಿಗಳಂತೆ ಕಾರ್ಯ ನಿರ್ವಹಿಸುತ್ತಾರೆ. ರಾಜಕೀಯ ಚಾಣಾಕ್ಷತೆ, ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಅವರು ಸುಧಾರಣೆಗಳಿಗೆ ಒತ್ತಾಯಿಸಲು ಅಥವಾ ಸಾಕಷ್ಟು ಬಜೆಟ್ ಹಂಚಿಕೆಗಳನ್ನು ಖಚಿತಪಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಇದು ಸಾಂಕೇತಿಕ ನೇಮಕಾತಿಗಳಾಚೆ ಮುಸ್ಲಿಮ್ ನಾಯಕರ ಸಬಲೀಕರಣಕ್ಕೆ ಕಾಂಗ್ರೆಸ್‌ನ ಬದ್ಧತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆಡಳಿತದಲ್ಲಿ ಗಟ್ಟಿ ಧ್ವನಿಗಳಿಲ್ಲದೆ ಸಮುದಾಯವು ರಾಜಕೀಯವಾಗಿ ಜಡವಾಗಿಯೇ ಉಳಿದಿದೆ. ನಿಜವಾದ ಬದಲಾವಣೆ ತರಲು ಕಾಂಗ್ರೆಸ್, ಸಮುದಾಯದ ನ್ಯಾಯಬದ್ಧ ಹಿತಾಸಕ್ತಿಗಳಿಗಾಗಿ ಹೋರಾಡುವ, ಆಡಳಿತ ನೀತಿಗಳಿಗೆ ಒತ್ತಾಯಿಸುವ ಮತ್ತು ಅರ್ಥಪೂರ್ಣ ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ತರಬಲ್ಲ ಸಮರ್ಥ, ದೂರದೃಷ್ಟಿಯ ಮುಸ್ಲಿಮ್ ನಾಯಕರನ್ನು ಪ್ರಾಮಾಣಿಕವಾಗಿ ಪ್ರೋತ್ಸಾಹಿಸಬೇಕಿದೆ.

ಕರ್ನಾಟಕ ಈಗ ನಿರ್ಣಾಯಕ ಗಳಿಗೆಯಲ್ಲಿದೆ. ವಿಧಾನ ಪರಿಷತ್‌ನಲ್ಲಿ ರಾಜ್ಯದ ವೈವಿಧ್ಯಮಯ ಜನಸಂಖ್ಯಾ ಪ್ರಾತಿನಿಧ್ಯವನ್ನು ಖಚಿತ ಪಡಿಸುವ ಮೂಲಕ ಕಾಂಗ್ರೆಸ್ ನಾಯಕರು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಸೂಕ್ತ ಪ್ರಾತಿನಿಧ್ಯ ನೀಡುವುದು ಕೇವಲ ಕೆಲವು ಕೋಟಾಗಳನ್ನು ತುಂಬುವ ಕುರಿತಲ್ಲ, ಆದರೆ ಎಲ್ಲ ಸಮುದಾಯಗಳ ಕೊಡುಗೆಗಳನ್ನು ಒಪ್ಪಿಕೊಳ್ಳುವ ಮತ್ತು ಅವರಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಯಾಗಿದೆ. ಎಲ್ಲ ಸಮುದಾಯಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಇರುವ ವಿಧಾನ ಪರಿಷತ್ ರಾಜ್ಯದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಪ್ರತಿನಿಧಿಸಲ್ಪಟ್ಟಿದ್ದೇನೆ ಎಂಬ ಭಾವನೆಯನ್ನು ಮೂಡಿಸುತ್ತದೆ, ತನ್ಮೂಲಕ ಎಲ್ಲರನ್ನೂ ಒಳಗೊಂಡ ಆಡಳಿತಕ್ಕೆ ಅಡಿಪಾಯವನ್ನು ಹಾಕುತ್ತದೆ.

ಕರ್ನಾಟಕದ ಮುಸ್ಲಿಮ್ ಸಮುದಾಯಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್‌ನ ವೈಫಲ್ಯವು ಹೆಚ್ಚುತ್ತಿರುವ ಭ್ರಮನಿರಸನಕ್ಕೆ ಕಾರಣವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಮುಸ್ಲಿಮರ ಅಗಾಧ ಬೆಂಬಲವು ಈಗ ಈಡೇರದ ಭರವಸೆಗಳನ್ನು ನೆನಪಿಸುತ್ತಿದೆ. ರಾಜಕೀಯ ಪ್ರಾತಿನಿಧ್ಯವನ್ನು ಖಚಿತಪಡಿಸುವ ಮತ್ತು ಅಲ್ಪಸಂಖ್ಯಾತರ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಎತ್ತಿ ಹಿಡಿಯುವ ವಾತಾವರಣವನ್ನು ಬೆಳೆಸುವ ಮೂಲಕ ಕಾಂಗ್ರೆಸ್ ಈ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.

ಸಮುದಾಯದ ಕುರಿತ ದಶಕಗಳ ತನ್ನ ನಿರ್ಲಕ್ಷ್ಯವನ್ನು ತಿದ್ದಿಕೊಳ್ಳಲು ಸಮಗ್ರ ಕಾನೂನು ಮತ್ತು ಸಾಂಸ್ಥಿಕ ಸುಧಾರಣೆಗಳು, ದೃಢವಾದ ಕ್ರಮಗಳು ಮತ್ತು ತಳಮಟ್ಟದ ನಾಯಕತ್ವ ಅಭಿವೃದ್ಧಿ ಅಗತ್ಯವಾಗಿವೆ. ಡಾಟಾ ಕೇಂದ್ರಿತ ಉಪಕ್ರಮಗಳು ಮತ್ತು ಎಲ್ಲರನ್ನು ಒಳಗೊಳ್ಳುವ ನೀತಿಗಳ ಮೂಲಕ ಈ ಸಬಲೀಕರಣದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಲಾಭದಾಯಕವಲ್ಲ, ಬದಲಿಗೆ ಅದು ಪ್ರಜಾಪ್ರಭುತ್ವದ ಬುನಾದಿಗಳನ್ನೂ ಬಲಗೊಳಿಸುತ್ತದೆ.

ಸಾಂಕೇತಿಕ ಪ್ರಾತಿನಿಧ್ಯಗಳ ಕಾಲ ಈಗ ಮುಗಿದಿದೆ. ಕಾಂಗ್ರೆಸ್ ತನ್ನ ಭರವಸೆಗಳನ್ನು ನಿರ್ಣಾಯಕವಾಗಿ ವಾಸ್ತವಕ್ಕಿಳಿಸಬೇಕು, ತನ್ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು ಖಚಿತಪಡಿಸ ಬೇಕು. ಎಲ್ಲ ಸಮುದಾಯಗಳಿಗೂ ಸೂಕ್ತ ರಾಜಕೀಯ ಅಧಿಕಾರ ನೀಡುವುದರ ಮೂಲಕ ಮಾತ್ರವೇ ಕರ್ನಾಟಕವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನಿಜವಾದ ಪ್ರಜಾತಾಂತ್ರಿಕ ಪ್ರಾತಿನಿಧ್ಯದಿಂದ ಕೂಡಿದ ಭವಿಷ್ಯದತ್ತ ಮುನ್ನಡೆಯಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹಾರಿಸ್ ಸಿದ್ದೀಕಿ

contributor

Similar News