ಹನಿಟ್ರ್ಯಾಪ್ ವಿಕೃತಿ ಮತ್ತು ನೈತಿಕ ಹೊಣೆಗಾರಿಕೆ
ಹನಿಟ್ರ್ಯಾಪ್ ಕೃತ್ಯ ಒಂದು ಗಂಭೀರ ಸ್ವರೂಪದ ವಿಕೃತಿಯೇ ಸರಿ. ಎದುರಾಳಿಯನ್ನು ಅದರಲ್ಲೂ ರಾಜಕೀಯ ಶತ್ರುವನ್ನು ಹಣಿಯಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದಾಗ ಕೊನೆಯ ಅಸ್ತ್ರವಾಗಿ ಹನಿಟ್ರ್ಯಾಪ್ ಬಳಸಲಾಗುತ್ತದೆ. ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದವರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ತಿಕ್ಕಾಟ ವಿಕೃತ ಸ್ವರೂಪ ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ.;

ಕರ್ನಾಟಕ ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಸುದ್ದಿ ಮಾಡಿದೆ. ವಿಧಾನಸಭೆಯ ಅಧಿವೇಶನದಲ್ಲಿ ಸರಕಾರದ ಭಾಗವಾಗಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಲು ಒಂದು ತಂಡ ಪ್ರಯತ್ನಿಸಿತ್ತು, ರಾಜ್ಯದಲ್ಲಿ ನಲುವತ್ತೆಂಟಕ್ಕೂ ಹೆಚ್ಚು ಹನಿಟ್ರ್ಯಾಪ್ ಪ್ರಕರಣಗಳು ನಡೆದಿವೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ದಾಖಲೆ ಸಮೇತ ದೂರು ನೀಡುವುದಾಗಿ ಹೇಳಿದ್ದರು. ಸದನದಲ್ಲಿ ಹೇಳಿದಂತೆ ರಾಜಣ್ಣ ಅವರು ದೂರು ಸಲ್ಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಸಚಿವ ಸಂಪುಟದ ಇನ್ನೊಬ್ಬ ಸಚಿವ ಸತೀಶ್ ಜಾರಕಿಹೊಳಿಯವರು ಹನಿಟ್ರ್ಯಾಪ್ ಪ್ರಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯಲು ದಿಲ್ಲಿಗೆ ಹೋಗಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಸುದ್ದಿಯಾಗುತ್ತಲೇ ಆಳಂದ ಮತಕ್ಷೇತ್ರದ ಶಾಸಕರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ, ಹನಿಟ್ರ್ಯಾಪ್ ಪ್ರಕರಣವನ್ನು ಭಾರತೀಯ ಜನತಾ ಪಕ್ಷದ ಶಾಸಕರು ಗಂಭೀರವಾಗಿ ಪರಿಗಣಿಸಿ ಸದನದಲ್ಲಿ ಅತಿರೇಕದ ಗದ್ದಲ ಮಾಡಿ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಇದೇ ಮೊದಲ ಬಾರಿಗೆ ಹದಿನೆಂಟು ಜನ ಶಾಸಕರಿಗೆ ಕಠಿಣ ಶಿಕ್ಷೆ ನೀಡಿದ್ದಾರೆ. ಹನಿಟ್ರ್ಯಾಪ್‌ಗೆ ಒಳಗಾದವರು ಕಾಂಗ್ರೆಸ್ ಮಂತ್ರಿ, ಸತೀಶ್ ಜಾರಕಿಹೊಳಿಯವರೇ ಅನುಮಾನಿಸಿದಂತೆ, ಅವರನ್ನು ಮಂತ್ರಿಗಿರಿಯಿಂದ ರಾಜೀನಾಮೆ ಕೊಡಿಸಲು ಈ ಪಿತೂರಿ ನಡೆದಿದೆಯಂತೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್‌ನವರ ಒಳಜಗಳದ ಇನ್ನೊಂದು ರೂಪದಂತಿದೆ. ಬಿಜೆಪಿಯವರು ಈ ಪ್ರಕರಣವನ್ನು ಅನಗತ್ಯವಾಗಿ ಮೈ ಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿಯಲ್ಲೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಕಿನ ಧ್ವನಿ ಇರುವುದು ನಿಚ್ಚಳವಾಗಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಟೀಕಿಸಿದರೆ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಮುಂತಾದವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಟೀಕಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣ ರಾಜಕೀಯ ಅಧಃಪತನದ ಸಂಕೇತ ಎನ್ನುವಂತೆ ಕೆಲವರು ಭಾವಿಸಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಹನಿಟ್ರ್ಯಾಪ್ ಕೃತ್ಯ ಒಂದು ಗಂಭೀರ ಸ್ವರೂಪದ ವಿಕೃತಿಯೇ ಸರಿ. ಎದುರಾಳಿಯನ್ನು ಅದರಲ್ಲೂ ರಾಜಕೀಯ ಶತ್ರುವನ್ನು ಹಣಿಯಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದಾಗ ಕೊನೆಯ ಅಸ್ತ್ರವಾಗಿ ಹನಿಟ್ರ್ಯಾಪ್ ಬಳಸಲಾಗುತ್ತದೆ. ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದವರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ತಿಕ್ಕಾಟ ವಿಕೃತ ಸ್ವರೂಪ ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಸಚಿವ ಸತೀಶ್ ಜಾರಕಿಹೊಳಿಯವರು, ದಿಲ್ಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡನ್ನು ಮಾತ್ರ ಭೇಟಿ ಮಾಡಿಲ್ಲ. ಕೇಂದ್ರ ಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಅಧಿನಾಯಕ ಎಚ್.ಡಿ. ದೇವೇಗೌಡ ಅವರನ್ನೂ ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣ ಬಡಿದಾಟಕ್ಕೆ ಈ ಎಲ್ಲ ರಾಜಕೀಯ ಚಟುವಟಿಕೆಗಳು ಸಾಕ್ಷಿಯಾಗಿವೆ.
ಹಾಗೆ ನೋಡಿದರೆ, ಹನಿಟ್ರ್ಯಾಪ್ ಪ್ರಕರಣಗಳು ಭಾರತ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಡೆದಿವೆ. ಭಾರತದ ರಾಜಕಾರಣದಲ್ಲಿ ಶತ್ರುವನ್ನು ಸಂಹಾರ ಮಾಡಲು ಹನಿಟ್ರ್ಯಾಪ್ ಅಸ್ತ್ರ ಪ್ರಯೋಗಿಸಿದ ಹಲವು ಪ್ರಕರಣಗಳಿವೆ. ಅವುಗಳಲ್ಲಿ ಒಂದೆರಡು ನಿದರ್ಶನ ಗಮನಿಸಬಹುದು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಸಂಜಯ್ ಜೋಶಿ ಮತ್ತು ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡುವೆ ರಾಜಕೀಯ ವೈರತ್ವ ಇತ್ತು. ಜಾತಿ ಬಲ ಮತ್ತು ದಿಲ್ಲಿ ರಾಜಕಾರಣದ ಶಕ್ತಿ ಬಳಸಿ ನರೇಂದ್ರ ಮೋದಿಯವರನ್ನು ಹತ್ತಿಕ್ಕಲು ಸಂಜಯ್ ಜೋಶಿ ಎಲ್ಲ ಪ್ರಯತ್ನ ಮಾಡಿದ್ದರು. ಆನಂತರ ಸಂಜಯ್ ಜೋಶಿಯವರು ಹನಿಟ್ರ್ಯಾಪ್ ಬಲೆಗೆ ಸಿಲುಕಿ ಮತ್ತೆ ತಲೆ ಎತ್ತದಂತಾಯಿತು. ಇದರ ಹಿಂದೆ ನರೇಂದ್ರ ಮೋದಿ ಮತ್ತು ಆಮಿತ್ ಶಾ ಜೋಡಿ ಇತ್ತು ಎಂಬ ವದಂತಿಗಳಿದ್ದವು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ, ಕೇಂದ್ರದಲ್ಲಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದ ಎನ್.ಡಿ. ತಿವಾರಿಯವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಸಿ ರಾಜೀನಾಮೆ ಕೊಡುವಂತೆ ಮಾಡಲಾಗಿತ್ತು. ಆಗ ಅವರಿಗೆ ಎಂಭತ್ತಕ್ಕೂ ಹೆಚ್ಚು ವಯಸ್ಸಾಗಿದ್ದವು. ರಾಜಕಾರಣಿಗಳು, ಜಗದ್ಗುರುಗಳು, ಅಧಿಕಾರಿಗಳು ಮತ್ತು ಉದ್ಯಮಿಗಳನ್ನು ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಸಿದ ಸಾವಿರಾರು ಪ್ರಕರಣಗಳು ನಡೆದಿವೆ.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಹರತಾಳು ಹಾಲಪ್ಪ ಪ್ರಕರಣ ಅತ್ಯಾಚಾರ ಎಂದು ಸುದ್ದಿಯಾಯಿತು. ಆದರೆ ಹಾಲಪ್ಪ ಅವರನ್ನು ಖೆಡ್ಡಾಕ್ಕೆ ಬೀಳಿಸಲು ವ್ಯವಸ್ಥಿತ ಪಿತೂರಿ ನಡೆದಿತ್ತು. ಒಪ್ಪಿತ ಸಂಬಂಧಗಳು ನಂತರ ಅತ್ಯಾಚಾರ ಪ್ರಕರಣಗಳಾಗಿ ಬದಲಾದ ಹಲವು ನಿದರ್ಶನಗಳಿವೆ. ರಾಘವೇಶ್ವರ ಸ್ವಾಮೀಜಿ ಪ್ರಕರಣ ಸೇರಿ ಹಲವು ಪ್ರಕರಣಗಳು ಭಾರೀ ಸುದ್ದಿ ಮಾಡಿದವು. ಆದರೆ ತಾರ್ಕಿಕ ಅಂತ್ಯ ಕಾಣಲಿಲ್ಲ. ನಿಜವಾದ ಅತ್ಯಾಚಾರ ಪ್ರಕರಣಗಳು ಒಂದೋ ಮುಚ್ಚಿ ಹಾಕಲಾಗುತ್ತದೆ. ಇಲ್ಲ ಕಾನೂನು ಸುಳಿಯಲ್ಲಿ ಕಳೆದು ಹೋಗುತ್ತವೆ.
ಹನಿಟ್ರ್ಯಾಪ್ ಕೃತ್ಯಗಳನ್ನು ನಾಗರಿಕ ಸಮಾಜ ಯಾವತ್ತೂ ಒಪ್ಪುವುದಿಲ್ಲ. ರಾಜಕಾರಣ, ವ್ಯಾಪಾರ ಮತ್ತು ಇನ್ನಿತರ ಕ್ಷೇತ್ರಗಳ ಪೈಪೋಟಿಯನ್ನು ಅಲ್ಲೇ ಸಮರ್ಥವಾಗಿ ಎದುರಿಸಬೇಕು. ವಿಕೃತಿಯ ಮಾರ್ಗಗಳ ಮೂಲಕ ಶತ್ರುತ್ವ ಸಾಧಿಸಬಾರದು. ಹನಿಟ್ರ್ಯಾಪ್, ಸ್ಟ್ರಿಂಗ್ ಆಪರೇಷನ್ ಇತ್ಯಾದಿ ಪ್ರಯತ್ನಗಳು ಮುಖವಾಡ ಕಳಚುವ ಸಾಹಸಗಳಾಗಿ ಕೆಲವೊಮ್ಮೆ ಜನಸಾಮಾನ್ಯರ ಮೆಚ್ಚುಗೆಯೂ ಗಳಿಸುತ್ತವೆ. ರಾಜಕಾರಣಿಗಳು ಹನಿಟ್ರ್ಯಾಪ್ ಪ್ರಕರಣಗಳನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾ ಬಂದಿದ್ದರಿಂದಲೇ ಮತ್ತೆ ಮತ್ತೆ ಘಟಿಸುತ್ತಿವೆ. ಮಾಜಿ ಸಚಿವ ಎಚ್.ವೈ. ಮೇಟಿ ಪ್ರಕರಣದಲ್ಲಿ ರೆಕಾರ್ಡ್ ಮಾಡಿ, ಸೀಡಿ ಬಿತ್ತರಿಸಿದವರನ್ನು ಮಹಾ ಸಾಹಸಿಗಳು ಎಂಬಂತೆ ಬಿಂಬಿಸಲಾಯಿತು. ಮೇಟಿಯವರು ರಾಜೀನಾಮೆ ನೀಡಿದ ತಕ್ಷಣ ಎಲ್ಲವೂ ಅಂತ್ಯವಾಯಿತು. ಹನಿಟ್ರ್ಯಾಪ್ ಪ್ರಕರಣಗಳಿಗೆ ಬಲ ತುಂಬಿದವರು ರಾಜಕಾರಣಿಗಳು ಮತ್ತು ಮಾಧ್ಯಮದವರು. ಅದನ್ನು ಕೆಲವೊಮ್ಮೆ ನೈತಿಕತೆಯ ಪ್ರಶ್ನೆಯಾಗಿಯೂ, ಇನ್ನೂ ಕೆಲವು ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹರಣ, ಖಾಸಗಿ ಬದುಕಿನ ಹಕ್ಕಿನ ಮೇಲೆ ನಡೆಸಿದ ದಾಳಿ ಎಂಬಂತೆ ಬಿಂಬಿಸಲಾಗುತ್ತದೆ. ಅನುಕೂಲ ಸಿಂಧು ನಿಲುವುಗಳು ಇರುವುದರಿಂದಲೇ ಹನಿಟ್ರ್ಯಾಪ್ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತವೆ. ಬಿಜೆಪಿಯ ರಮೇಶ್ ಜಾರಕಿಹೊಳಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಅವರನ್ನು ಮಂತ್ರಿಗಿರಿಯಿಂದ ಕೆಳಗಿಳಿಸಲೆಂದೇ ಅವರ ರಾಜಕೀಯ ವಿರೋಧಿಗಳು ಹನಿಟ್ರ್ಯಾಪ್ ಬಲೆ ಬೀಸಿದರು. ಅಂದುಕೊಂಡಂತೆ ರೆಕಾರ್ಡ್ ಮಾಡಿದ ಸೀಡಿಯನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಯಿತು. ಅದೊಂದು ನೈತಿಕ ಪ್ರಶ್ನೆಯನ್ನಾಗಿ ಪರಿಗಣಿಸಿ ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಕೊಡಿಸಲಾಯಿತು. ಈ ತರಹದ ಸೀಡಿಗಳು ರಮೇಶ್ ಜಾರಕಿ ಹೊಳಿ ಮಾತ್ರವಲ್ಲ, ಆಪರೇಷನ್ ಕಮಲದ ಸಂದರ್ಭದಲ್ಲಿ ಬಾಂಬೆಗೆ ಹೋದ ಬಹುತೇಕ ಶಾಸಕರ ಸೀಡಿಗಳು ಇವೆಯೆಂದು ಹೇಳಲಾಗುತ್ತಿತ್ತು. ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡರು, ಬಸವರಾಜ ಬೊಮ್ಮಾಯಿಯವರ ಸೀಡಿಗಳು ಇವೆಯೆಂದು ಸುದ್ದಿಯಾಯಿತು. ಅವರಿಬ್ಬರೂ ನ್ಯಾಯಾಲಯದ ಮೊರೆ ಹೋಗಿ ಸುದ್ದಿ ಬಿತ್ತರವಾಗದಂತೆ ತಡೆಯಾಜ್ಞೆ ತಂದರು. ಅಂದರೆ ಅವರಿಬ್ಬರ ಸೀಡಿಗಳು ಇವೆ ಎಂಬುದನ್ನು ಅವರೇ ಖಾತ್ರಿ ಪಡಿಸಿದರು.
ಹನಿಟ್ರ್ಯಾಪ್ ಕೃತ್ಯ ತಪ್ಪು, ಖಂಡನೀಯ. ಎಲ್ಲ ಸರಿ. ಖಾಸಗಿ ಬದುಕಿನ ಒಪ್ಪಿತ ಸ್ನೇಹ, ಪ್ರೀತಿ ಪ್ರಣಯವನ್ನು ಯಾರೂ ಪ್ರಶ್ನೆ ಮಾಡಲಾಗದು. ಅಷ್ಟು ಮಾತ್ರವಲ್ಲ ಅದನ್ನು ರೆಕಾರ್ಡ್ ಮಾಡಿ ಪ್ರಸಾರ ಕೂಡಾ ಮಾಡಬಾರದು. ಅಂತಹ ನೀಚ ಕೃತ್ಯಗಳನ್ನು ತಡೆಯಲು ಅಗತ್ಯ ಬಿದ್ದರೆ ಕಠಿಣ ಕಾನೂನುಗಳನ್ನು ರೂಪಿಸಲಿ. ಒಪ್ಪಿತ ಸ್ನೇಹ, ಪ್ರೀತಿ, ಪ್ರಣಯ ಸಮಾನ ಮನಸ್ಕ ಮತ್ತು ಸಮಾನ ವಯಸ್ಕ ವ್ಯಕ್ತಿಗಳ ನಡುವೆ ನಡೆಯುತ್ತವೆ. ಪ್ರೀತಿ ಪ್ರೇಮ ಗಾಢವಾಗಿದ್ದರೆ ವಯಸ್ಸಿನ ಹಂಗು ಮೀರಿ ಸಂಬಂಧ ಏರ್ಪಡಬಹುದು.
57 ವರ್ಷ ವಯಸ್ಸಿನ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದಾಗಲೇ 22 ವರ್ಷ ವಯಸ್ಸಿನ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರನ್ನು ಪ್ರೀತಿಸಿದ್ದರು. ಅಷ್ಟು ಮಾತ್ರವಲ್ಲ ಅಧಿಕೃತವಾಗಿ ಮದುವೆಯೂ ಆದರು. ಯಾರೊಬ್ಬರೂ ಆ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ. ಅದು ಅವರ ವೈಯಕ್ತಿಕ ಬದುಕು ಎಂದು ಭಾವಿಸಿದ್ದರು. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ ಸಿಂಗ್ ಅವರು ಅತ್ಯಂತ ಕಿರಿಯ ವಯಸ್ಸಿನ ಗೆಳತಿಯನ್ನು ಪ್ರೀತಿಸಿ ಮದುವೆಯಾದರು. ಆ ಸಂಬಂಧವನ್ನು ಸಮಾಜ ಗೌರವಿಸಿತು.
ರಾಜಕೀಯ ಶತ್ರುತ್ವ ಸಾಧನೆಗಾಗಿ ನಡೆಯುವ ಹನಿಟ್ರ್ಯಾಪ್ ಪ್ರಕರಣಗಳನ್ನು ಉಗ್ರವಾಗಿ ಖಂಡಿಸುತ್ತಲೇ ಕೆಲವು ನೈತಿಕ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ.
ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅತ್ಯಂತ ಚಿಕ್ಕ ವಯಸ್ಸಿನ ಹುಡುಗಿಯರನ್ನು ಬಳಸಲಾಗುತ್ತದೆ. ಮೊಮ್ಮಕ್ಕಳ ವಯಸ್ಸಿನ ಹುಡುಗಿಯರು ಹಲೋ ಸರ್ ಎಂದಾಗ ಪ್ರತಿಯಾಗಿ ಸ್ಪಂದಿಸುವ ವಿಕೃತ ಮನಸ್ಸಿನ ಚಪಲವನ್ನು ಏನನ್ನಬೇಕು..? ಅವರನ್ನು ಅಮಾಯಕರು ಎಂದು ಕ್ಷಮಿಸಲಾಗದು. ಜನಸಾಮಾನ್ಯರ ವಿವೇಕ ಯಾವತ್ತೂ ವಕ್ತಿಗತ ಸಂಬಂಧಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ರಮೇಶ್ ಜಾರಕಿಹೊಳಿಗೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಲೆ ಬೀಸಿದವರು ಮಗಳ ವಯಸ್ಸಿನ ಹುಡುಗಿಯನ್ನು ಬಳಸಿದ್ದರು. ಮಗಳ ವಯಸ್ಸಿನ ಅಪರಿಚಿತ ಹುಡುಗಿಯ ಜೊತೆ ಹಾಸಿಗೆ ಹಂಚಿಕೊಳ್ಳಲು ಸಿದ್ಧವಿರುವ ರಮೇಶ್ ಜಾರಕಿಹೊಳಿಯ ವಿಕೃತ ಚಪಲವು ನೈತಿಕವಾಗಿ ಅಪರಾಧವೇ. ಅದು ರಮೇಶ್ ಜಾರಕಿಹೊಳಿಯವರ ಖಾಸಗಿ ಬದುಕು ಎನಿಸಿಕೊಳ್ಳುವುದಿಲ್ಲ. ರಮೇಶ್ ಜಾರಕಿಹೊಳಿಯವರ ಮನಸ್ಸಿನ ಚಪಲದ ಅರಿವಿದ್ದೇ ರಾಜಕೀಯ ಎದುರಾಳಿಗಳು ಹನಿಟ್ರ್ಯಾಪ್ ಬಲೆ ಬೀಸಿರುತ್ತಾರೆ.
ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ದೇವೇಗೌಡರು ಅರ್ಧ ಶತಕಕ್ಕೂ ಮೀರಿ ಸಾರ್ವಜನಿಕ ಬದುಕಿನಲ್ಲಿ ಇದ್ದಾರೆ. ಅಧಿಕಾರ ರಾಜಕಾರಣದ ಕ್ರಿಯಾಶೀಲ ಪಾಲುದಾರರಾಗಿದ್ದಾರೆ. ಅವರನ್ನು ಅವರ ರಾಜಕೀಯ ಎದುರಾಳಿಗಳು ಹನಿಟ್ರ್ಯಾಪ್ ಮೂಲಕ ಹಣಿಯಲು ಪ್ರಯತ್ನಿಸಲೇ ಇಲ್ಲ. ಯಾಕೆಂದರೆ ಅವರು ಮಕ್ಕಳು, ಮೊಮ್ಮಕ್ಕಳ ವಯಸ್ಸಿನ ಹುಡುಗಿಯರು ಹಲೋ ಎಂದಾಗ ಸಕಾರಾತ್ಮಕವಾಗಿ ಸ್ಪಂದಿಸಲಾರರು ಎಂಬುದು ಎದುರಾಳಿಗಳಿಗೆ ಗೊತ್ತಿತ್ತು. ಭಾರತದ ಹಿಂದಿನ ಪ್ರಧಾನಿಗಳಾದ ಜವಹಾರಲಾಲ್ ನೆಹರೂ, ಅಟಲ್ ಬಿಹಾರಿ ವಾಜಪೇಯಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ. ರಾಮರಾವ್, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾವ್ ಮುಂತಾದವರು ಸಮಾನ ಮನಸ್ಕ ಮತ್ತು ಸಮಾನ ವಯಸ್ಕ ಗೆಳತಿಯೊಂದಿಗೆ ಪ್ರೀತಿ ವಿಶ್ವಾಸದ ಸ್ನೇಹ ಹೊಂದಿದ್ದರು. ಅವರ ಖಾಸಗಿ ಬದುಕಿನ ಆವರಣದೊಳಗಿನ ಸಂಬಂಧಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಎಂ. ಕರುಣಾನಿಧಿಯವರು ಅಧಿಕೃತವಾಗಿಯೇ ಮೂರ್ನಾಲ್ಕು ಪತ್ನಿಯರನ್ನು ಹೊಂದಿದ್ದರು. ಅದ್ಯಾವುದೂ ಸಾರ್ವಜನಿಕ ಟೀಕೆಗೆ ವಸ್ತುವಾಗಿರಲಿಲ್ಲ.
ಈ ಹನಿಟ್ರ್ಯಾಪ್ ಪ್ರಕರಣದಲ್ಲಿ, ಹನಿಟ್ರ್ಯಾಪ್ ಬಲೆ ಬೀಸುವ ದುಷ್ಟರ ಪಡೆಯಷ್ಟೇ ಮೊಮ್ಮಕ್ಕಳ ವಯಸ್ಸಿನ ಹುಡುಗಿಯರ ಸವಿ ಮಾತಿಗೆ ಜೊಲ್ಲು ಸುರಿಸಿ ಸಂಬಂಧ ಹೊಂದಲು ಹಾತೊರೆಯುವ ಯಾರೇ ಆಗಿರಲಿ ಅವರು ಸಾರ್ವಜನಿಕ ಬದುಕಿನ ಭಾಗವಾಗಿರಲು ಅಯೋಗ್ಯರು.
ಹಾಗಾಗಿ ಹನಿಟ್ರ್ಯಾಪ್ ಜಾಲದ ಬಗ್ಗೆ ನೈತಿಕ ಎಚ್ಚರ ಇರುವ, ಮನುಷ್ಯ ಸಂಬಂಧಗಳ ಸೂಕ್ಷ್ಮತೆ ಅರಿತಿರುವ ಯಾರೊಬ್ಬರೂ ಹೆದರುವ ಅಗತ್ಯವಿಲ್ಲ. ಅಲ್ಲಮ ಪ್ರಭು ಒಂದು ವಚನದಲ್ಲಿ ಹೇಳುವಂತೆ: ‘‘ಹೆಣ್ಣು ಮಾಯೆ ಎನ್ನುವರು ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆ ಎನ್ನುವರು ಮಣ್ಣು ಮಾಯೆಯಲ್ಲ. ಹೊನ್ನು ಮಾಯೆ ಎನ್ನುವರು ಹೊನ್ನು ಮಾಯೆಯಲ್ಲ. ಮನದ ಮುಂದಣದ ಆಸೆಯೇ ಮಾಯೆ’’.
ರಾಜಕೀಯ ಎದುರಾಳಿಗಳು ಎಷ್ಟೇ ಪ್ರಬಲವಾಗಿರಲಿ, ಎಂತಹದೇ ಹನಿಟ್ರ್ಯಾಪ್ ಜಾಲ ಬೀಸಿ ಸುರಸುಂದರಿಯನ್ನೇ ಕಳಿಸಲಿ, ಈಕೆ ನನ್ನ ಮೊಮ್ಮಕ್ಕಳ ವಯಸ್ಸಿನ ಹುಡುಗಿ ಎಂದು ಗಟ್ಟಿ ಮನಸ್ಸಿನಿಂದ ನಿರಾಕರಿಸಿದರೆ ಅವರ ಪ್ರಯತ್ನ ವಿಫಲವಾಗುತ್ತದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ವಕೀಲೆಯ ವೇಷದಲ್ಲಿ ಬಲೆ ಬೀಸಲು ಬಂದಿದ್ದಳು. ರಮೇಶ್ ಜಾರಕಿಹೊಳಿಯ ಹಾಗೆ ರಾಜಣ್ಣನವರು ಯಾಮಾರಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ನೀಡಿ ಮನೆ ಸೇರಿರುತ್ತಿದ್ದರು. ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ ಮಾತ್ರಕ್ಕೆ ಹನಿಟ್ರ್ಯಾಪ್ ಪ್ರಕರಣ ಮರುಕಳಿಸುವುದಿಲ್ಲ ಎಂದು ನಂಬುವಂತಿಲ್ಲ. ರಾಜಕೀಯ ಮಹತ್ವಾಕಾಂಕ್ಷೆ ವ್ಯಕ್ತಿಯಲ್ಲಿ ಬಲವಾಗಿದ್ದಷ್ಟೂ ಅಡ್ಡ ಹಾದಿಗಳು ತೆರೆದುಕೊಳ್ಳುತ್ತವೆ. ಮೊದಲು ಸುಳ್ಳು ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸುವುದು, ಆನಂತರ ಅದಕ್ಷ ಅಂತ ಸಾಬೀತುಪಡಿಸಲು ಯತ್ನಿಸುವುದು. ಎಲ್ಲವೂ ಮೀರಿದ ಮೇಲೆ ಹನಿಟ್ರ್ಯಾಪ್ ಮೂಲಕ ಬಲೆ ಬೀಸಿ ಲಂಪಟ ಎಂದು ಬಿಂಬಿಸುವುದು. ಭ್ರಷ್ಟಾಚಾರ ಪ್ರಕರಣದಲ್ಲಿ ರಾಜೀನಾಮೆ ನೀಡದೆಯೂ ಮುಂದುವರಿಯಬಹುದು. ಇಲ್ಲಿಯವರೆಗೆ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿದ ಯಾರೂ ರಾಜೀನಾಮೆ ನೀಡದೆ ಬಚಾವ್ ಆದ ನಿದರ್ಶನಗಳಿಲ್ಲ. ಈ ಮಾದರಿಯ ರಾಜಕೀಯ ವ್ಯವಸ್ಥೆ ರೂಪಿಸಿದವರೇ ರಾಜಕಾರಣಿಗಳು. ಲೈಂಗಿಕ ಹಗರಣದಲ್ಲಿ ಎಲ್ಲ ಪಕ್ಷದವರು ಸಿಲುಕಿ ಅಧಿಕಾರ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಇರುವ ರಾಜಕಾರಣಿಗಳು ಆದರ್ಶದ ಬದುಕು ನಡೆಸಬೇಕು ಎಂದು ಅಪೇಕ್ಷಿಸುವುದು ಸಹಜ. ಅದೆಲ್ಲ ಬಿಟ್ಟು ಸ್ವೇಚ್ಛಾಚಾರದ ಬದುಕೇ ರಸಿಕತೆ ಎಂದು ಭಾವಿಸಿ ಹನಿಟ್ರ್ಯಾಪ್ ಬಲೆಗೆ ಬಿದ್ದು ಅಧಿಕಾರ ಕಳೆದುಕೊಳ್ಳುವುದಕ್ಕಿಂತ ನೈತಿಕ ಬದುಕು ಜೀವಿಸುವುದು ಉತ್ತಮ. ಡಾ. ರಾಮ ಮನೋಹರ್ ಲೋಹಿಯಾ ಅವರು ಮದುವೆಯಾಗಿರಲಿಲ್ಲ. ಆದರೆ ಅವರಿಗೆ ಒಬ್ಬ ಪ್ರೇಯಸಿ ಇದ್ದರು. ಆ ಪ್ರೇಯಸಿಗೆ ಬರೆದ ಪತ್ರಗಳನ್ನು ನಮ್ಮ ರಾಜಕಾರಣಿಗಳು ಅಗತ್ಯವಾಗಿ ಓದಬೇಕು. ಪ್ರೀತಿ ಮತ್ತು ಲಂಪಟತನದ ವ್ಯತ್ಯಾಸ ಮನವರಿಕೆಯಾಗುತ್ತದೆ.
ರಾಜಕಾರಣವನ್ನು ರಾಜಕೀಯ ಅಸ್ತ್ರಗಳಿಂದಲೇ ಎದುರಿಸಿ ಗೆಲ್ಲಬೇಕು. ಹಾಗೆಯೇ ಹನಿಟ್ರ್ಯಾಪ್ ಎಂಬ ವಿಕೃತಿಯನ್ನು ನೈತಿಕ ಬಲದ ಮೇಲೆಯೇ ಗೆಲ್ಲಬೇಕು. ಪ್ರಜ್ವಲ್ ರೇವಣ್ಣನ ವಿಕೃತಿಯೇ ಆತನ ಅಧಃಪತನಕ್ಕೆ ಕಾರಣವಾಯಿತು. ರಾಜಕೀಯ ಪರಮಾಧಿಕಾರ ತಂದು ಕೊಡುವ ರಾಜಕಾರಣ ಮಕ್ಕಳಾಟವಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಿ ಮೈ ತುಂಬಾ ಕಣ್ಣಾಗಿದ್ದಾಗ ಮಾತ್ರ ಗೆಲ್ಲಬಹುದು. ಹನಿಟ್ರ್ಯಾಪ್ ಬಲೆಗೆ ಬಿದ್ದು ಯಾರನ್ನೋ ದೂರುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಹಿರಿಯರು ಕಚ್ಚೆ, ಕೈ, ಬಾಯಿ ಶುದ್ಧವಾಗಿರಬೇಕು ಎಂದು ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಹೇಳುತ್ತಿದ್ದರು. ಯಡಿಯೂರಪ್ಪ ರಾಜಕೀಯ ಮತ್ತು ಸಾರ್ವಜನಿಕ ಬದುಕಿನಲ್ಲಿ ಕ್ರಿಯಾಶೀಲವಾಗಿರುವುದರಿಂದಲೇ ಪೊಕ್ಸೊ ಪ್ರಕರಣ ಮಹತ್ವ ಪಡೆದುಕೊಂಡಿದೆ. ರಾಜಕೀಯ ನಿವೃತ್ತಿ ಪಡೆದವರ ಬಗ್ಗೆ ಮಾಧ್ಯಮಗಳು ಗಮನ ಹರಿಸುವುದಿಲ್ಲ. ಸಾರ್ವಜನಿಕ ಬದುಕು ಅಕ್ಷರಶಃ ಅಗ್ನಿ ದಿವ್ಯ ಇದ್ದಂತೆ. ಅಲ್ಲಿ ನೈತಿಕ ಎಚ್ಚರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹನಿಟ್ರ್ಯಾಪ್‌ನಂತಹ ಕುಕೃತ್ಯಗಳಿಗೆ ಕಡಿವಾಣ ಹಾಕಲೇಬೇಕು. ಆದರೆ ಅದು ದಿನದಲ್ಲಿ ಆಗುವ ಕೆಲಸವಲ್ಲ. ರಾಜಕಾರಣಿಗಳು ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿ ಕ್ರಿಯಾಶೀಲವಾಗಿರುವವರು ಎಚ್ಚರದ ನೈತಿಕ ರಾಜಕಾರಣ ಮಾಡಬೇಕು. ಮನದ ಮುಂದಣ ವಿಕೃತ ಚಪಲವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.