ಅಧ್ವಾನದಲ್ಲಿ ಸಿಲುಕಿದ ಇಂಡಸ್ ಇಂಡ್ ಬ್ಯಾಂಕ್
ಇಂಡಸ್ ಇಂಡ್ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಬೇಕಾದಷ್ಟು ಅನುಭವಿಗಳು, ಹಣಕಾಸು ತಜ್ಞರು ಮತ್ತು ಸ್ವತಂತ್ರ ನಿರ್ದೇಶಕರು ಇದ್ದರು. ಇವರ್ಯಾರಿಗೂ ಬ್ಯಾಂಕಿನ ಪ್ರಶ್ನಾರ್ಹವಾದ ನಿರ್ಧಾರಗಳ ಕುರಿತು ಅರಿವು ಇರಲಿಲ್ಲವೇ? ಅಥವಾ ಅವರು ದಿವ್ಯ ಮೌನವನ್ನು ತಳೆದರೇ?;

ಬ್ಯಾಂಕಿನ ಶೇರುಗಳ ಕುಸಿತ:
ಇದೇ ಮಾರ್ಚ್ 10ನೇ ತಾರೀಕಿನಂದು ಹಿಂದುಜಾ ಸಮೂಹಕ್ಕೆ ಸೇರಿದ ಇಂಡಸ್ ಇಂಡ್ ಬ್ಯಾಂಕು ಶೇರು ಮಾರುಕಟ್ಟೆಗೆ ಹೇಳಿಕೆಯೊಂದನ್ನು ಸಲ್ಲಿಸಿತು. ತನ್ನ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡುವಾಗ ಹಣಕಾಸು ಉತ್ಪನ್ನಗಳ (Derivatives) ವಹಿವಾಟಿನ ಬಗ್ಗೆ ಮಾಡಿದ ಮುನ್ನೇರ್ಪಾಟು (Provision)ನಲ್ಲಿ ಎಡವಟ್ಟಾಗಿದೆ ಎಂದು ಕಂಡುಬಂದಿದೆ. ಈ ಕಾರಣದಿಂದಾಗಿ ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ ಅವಧಿಯಲ್ಲಿ) ಇನ್ನೂ ಹೆಚ್ಚು ಮುನ್ನೇರ್ಪಾಟು ಮಾಡಬೇಕಿದೆ. ಇದರಿಂದಾಗಿ ಈ ಅವಧಿಯ ಲಾಭದಲ್ಲಿ ಸುಮಾರು 2,400 ಕೋಟಿ ರೂ.ಗಳಷ್ಟು ಕಡಿತವಾಗಬಹುದು ಮತ್ತು ಬ್ಯಾಂಕಿನ ನಿವ್ವಳ ಸಂಪತ್ತಿನಲ್ಲಿ ಶೇ. 2.5ರಷ್ಟು ಖೋತ ಆಗಬಹುದು ಎಂದು ಹೇಳಿದೆ. ಈ ಹೇಳಿಕೆಯ ಪರಿಣಾಮವಾಗಿ ಬ್ಯಾಂಕಿನ ಶೇರುಗಳ ಬೆಲೆಯು ಹಿಂದೆಂದೂ ಕಾಣದಷ್ಟು ಕುಸಿಯಿತು. ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ಠೇವಣಿದಾರರು ಆತಂಕಪಡಬೇಕಾಗಿಲ್ಲ, ಬ್ಯಾಂಕು ಭದ್ರವಾಗಿದೆ ಎಂದು ಪತ್ರಿಕಾ ಹೇಳಿಕೆಯನ್ನು ನೀಡಿದೆ.
ಈ ಹೇಳಿಕೆಯ ಹಿನ್ನೆಲೆ ಏನು? ಮಾರ್ಚ್ 2024ರಲ್ಲಿ ರೂ. 2,347 ಕೋಟಿ ಇದ್ದ ಬ್ಯಾಂಕಿನ ನಿವ್ವಳ ಲಾಭವು ಡಿಸೆಂಬರ್ 2024ಕ್ಕೆ ರೂ. 1,401 ಕೋಟಿಗೆ ಇಳಿದಿತ್ತು. ಈ ಬೆಳವಣಿಗೆಯ ಜೊತೆಗೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸುಮಂತ ಕಥ್ಪಾಲಿಯಾ ಅವರ ಮರುನೇಮಕಾತಿಯನ್ನು ಮೂರು ವರ್ಷಕ್ಕೆ ಮಾಡಬೇಕೆಂದು ನಿರ್ದೇಶಕ ಮಂಡಳಿಯು 2024 ಸೆಪ್ಟಂಬರ್‌ನಲ್ಲಿ ಆರ್‌ಬಿಐಗೆ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸನ್ನು ಕಡೆಗಣಿಸಿ ಈ ಮಾರ್ಚ್ 24ರಿಂದ ಆರಂಭವಾಗುವಂತೆ ಕೇವಲ ಒಂದು ವರ್ಷದ ಅವಧಿಗೆ ನೇಮಿಸಲು ಅನುಮತಿಯನ್ನು ಮಾರ್ಚ್ ಆರಂಭದಲ್ಲಿ ಆರ್‌ಬಿಐಯು ನೀಡಿತ್ತು. ಈ ಅನುಮತಿ ಬರುವ ಮೊದಲೇ ಜನವರಿ 17ರಂದು ಬ್ಯಾಂಕಿನ ಮುಖ್ಯ ಹಣಕಾಸು ಅಧಿಕಾರಿ ಗೋವಿಂದ ಜೈನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬ್ಯಾಂಕಿನ ಕುಸಿಯುತ್ತಿರುವ ಲಾಭ, ಹಿರಿಯ ಅಧಿಕಾರಿಯ ನಿರ್ಗಮನ ಮತ್ತು ವ್ಯವಸ್ಥಾಪಕ ನಿರ್ದೇಶಕರ ಮರುನಿಯುಕ್ತಿಯ ಕುರಿತಾದ ಅನಿಶ್ಚಿತತೆಯು ಬ್ಯಾಂಕು ಹೇಳಿಕೆ ನೀಡಲು ಕಾರಣವಾಗಿರಬಹುದೆಂಬ ಶಂಕೆಯೂ ಬಲವಾಗಿದೆ.
1994ರಲ್ಲಿ ಉದ್ಯಮಿ ಎಸ್.ಪಿ. ಹಿಂದುಜಾರು ಸ್ಥಾಪಿಸಿದ ಹಣಕಾಸು ಸಂಸ್ಥೆ ಇಂಡಸ್ ಇಂಡ್ ಬ್ಯಾಂಕು. ಡಿಸೆಂಬರ್ 2024ಕ್ಕೆ ಬ್ಯಾಂಕಿಗೆ ಸುಮಾರು 3,060 ಶಾಖೆಗಳಿದ್ದವು; 4.2 ಕೋಟಿ ಗ್ರಾಹಕರಿದ್ದರು; ಠೇವಣಿ ಸುಮಾರು ರೂ. 4,09,400 ಕೋಟಿಯಷ್ಟಿದ್ದವು, ಅದರ ನಿವ್ವಳ ಸಂಪತ್ತು ರೂ. 65,102 ಕೋಟಿ ಇತ್ತು. ತನ್ನ ಸಾಧನೆಯಿಂದಾಗಿ ಖಾಸಗಿ ರಂಗದ ಬ್ಯಾಂಕುಗಳಲ್ಲಿ ಐದನೆಯ ದೊಡ್ಡ ಬ್ಯಾಂಕು ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿತ್ತು.
ಪ್ರಶ್ನಾರ್ಹ ವ್ಯವಹಾರ ಹೇಗೆ ನಡೆಯಿತು?
ಬ್ಯಾಂಕಿನ ವ್ಯವಹಾರದ ಕಚ್ಚಾವಸ್ತು ಗ್ರಾಹಕರು ನೀಡುವ ಠೇವಣಿಗಳು. ಆದರೆ ಆ ಠೇವಣಿಗಳನ್ನು ವಿನಿಯೋಗಿಸಿ ಸಾಲ ನೀಡುವಾಗ ಅವುಗಳು ಸಾವಧಿಯ ಠೇವಣಿಗಳಾಗಿದ್ದಲ್ಲಿ ಅವುಗಳನ್ನು ವಾಯಿದೆಯಂದು ಮರುಪಾವತಿ ಮಾಡುವ ಬಾಧ್ಯತೆ ಬ್ಯಾಂಕಿಗಿದೆ. ಸಾಲಗಳ ಮರುಪಾವತಿಯಲ್ಲಿ ಅನಿಶ್ಚಿತತೆ ಇದ್ದಾಗ ಬ್ಯಾಂಕು ತನ್ನ ಆಯದಿಂದ ವರ್ಷ ವರ್ಷವೂ ಸ್ವಲ್ಪಾಂಶವನ್ನು ಬದಿಗಿರಿಸಿ ಮುನ್ನೇರ್ಪಾಟು ಮಾಡುವುದು ರೂಢಿ. ಆ ಮುನ್ನೇರ್ಪಾಟು ಕಡಿಮೆಯಾದಲ್ಲಿ ಠೇವಣಿಯ ಮರುಪಾವತಿಗೆ ಅಗತ್ಯವಾದ ಧನರಾಶಿ ಬ್ಯಾಂಕಿನಲ್ಲಿ ಇರದೆ ಹೋಗಬಹುದು. ಈ ಸಂಭಾವ್ಯ ಅಪಾಯವನ್ನು ಎದುರಿಸಲು ಎಲ್ಲಾ ಬ್ಯಾಂಕುಗಳು ತಮ್ಮ ವಾರ್ಷಿಕ ಲೆಕ್ಕಪತ್ರವನ್ನು ಸಿದ್ಧಪಡಿಸುವಾಗ ಸಾಲದ ಬಡ್ಡಿ ಅಥವಾ ಕಂತು ಬಾರದೆ ಆಗಬಹುದಾದ ನಷ್ಟ ಮತ್ತು ಬೇರೆ ವ್ಯವಹಾರದಲ್ಲಿ ಆಗಬಹುದಾದ ನಷ್ಟಕ್ಕೆ ಸೂಕ್ತವಾದ ಆಪದ್ಧನವನ್ನು ಕಾಯ್ದಿರಿಸಿಕೊಳ್ಳುತ್ತವೆ-ಇದನ್ನೇ ಮುನ್ನೇರ್ಪಾಟು (Provision-ಪ್ರವಿಶನ್) ಎನ್ನಲಾಗುತ್ತದೆ.
ಉದಾಹರಣೆಗಾಗಿ ಅನಿವಾಸಿ ಭಾರತೀಯರ ವಿದೇಶೀ ಕರೆನ್ಸಿಯ ಠೇವಣಿಗಳನ್ನು ಒಂದು ಬ್ಯಾಂಕು ಡಾಲರು ಗಳಲ್ಲಿ ಸ್ವೀಕರಿಸುವಾಗ ಅದರ ಮೊತ್ತವನ್ನು ಆ ದಿನದ ಡಾಲರು-ರೂಪಾಯಿ ವಿನಿಮಯ ದರದಲ್ಲಿ ರೂಪಾಯಿಗೆ ಮಾರ್ಪಡಿಸಿ ತನ್ನ ಲೆಕ್ಕ ಪತ್ರದಲ್ಲಿ ನಮೂದಿಸುತ್ತದೆ. ಠೇವಣಿಯ ವಾಯಿದೆಯಂದು ಅದನ್ನು ಡಾಲರುಗಳಲ್ಲಿಯೇ ಮರುಪಾವತಿ ಮಾಡಬೇಕು. ಠೇವಣಿಯ ಅವಧಿಯಲ್ಲಿ ಡಾಲರಿನ ಮೌಲ್ಯ ಹೆಚ್ಚಾಗಿದ್ದರೆ ಅಷ್ಟೇ ಡಾಲರುಗಳನ್ನು ಬ್ಯಾಂಕು ಹೆಚ್ಚು ರೂಪಾಯಿಗಳನ್ನು ಕೊಟ್ಟು ಖರೀದಿಸಬೇಕಾಗುತ್ತದೆ. ಠೇವಣಿಯ ಅವಧಿಯಲ್ಲಿ ಡಾಲರಿನ ಮೌಲ್ಯದ ಹೆಚ್ಚಳವನ್ನು ಅಂದಾಜಿಸಿ ಹೆಚ್ಚಳಕ್ಕೆ ಸರಿಸಮವಾದ ಮುನ್ನೇರ್ಪಾಟನ್ನು ಬ್ಯಾಂಕು ಮಾಡಬೇಕಾಗುತ್ತದೆ.
ಒಂದು ಸರಳ ಉದಾಹರಣೆ: ಬ್ಯಾಂಕು ಒಂದು ಕೋಟಿ ಡಾಲರು ಮೌಲ್ಯದ ಎಫ್‌ಸಿಎನ್‌ಆರ್ ಠೇವಣಿಯನ್ನು ಐದು ವರ್ಷಗಳ ವಾಯಿದೆಗೆ ಪಡೆದಿದೆ ಎಂದು ಊಹಿಸಿಕೊಳ್ಳೋಣ. ಠೇವಣಿಯ ದಿನದಂದು ಡಾಲರು-ರೂಪಾಯಿ ವಿನಿಮಯ ದರ ಡಾ.1=ರೂ. 86 ಇದ್ದರೆ ಠೇವಣಿಯು ರೂಪಾಯಿಗಳಲ್ಲಿ 86 ಕೋಟಿ ಆಗುತ್ತದೆ. 5 ವರ್ಷದ ಬಳಿಕ ಠೇವಣಿಯನ್ನು ಮರುಪಾವತಿ ಮಾಡುವಾಗ ವಿನಿಮಯ ದರ ಡಾ. 1=ರೂ.100 ಆಗಿದೆ ಎಂದು ಊಹಿಸಿಕೊಳ್ಳೋಣ. 1 ಕೋಟಿ ಡಾಲರನ್ನು ಖರೀದಿಸಲು ಬ್ಯಾಂಕು ರೂ.100 ಕೋಟಿಗಳಷ್ಟು ಮೌಲ್ಯವನ್ನು ತೆರಬೇಕಾಗುತ್ತದೆ. ಬ್ಯಾಂಕು ಬೇರೆ ಸಂಸ್ಥೆಗಳಿಂದ ಈ ಡಾಲರುಗಳನ್ನು ಖರೀದಿಸಿ ಠೇವಣಿದಾರನಿಗೆ ಅವನ ಮೊತ್ತವನ್ನು ಹಿಂದಿರುಗಿಸಬೇಕಾಗುತ್ತದೆ. 86 ಕೋಟಿ ರೂ. ಠೇವಣಿಯನ್ನು ವಿನಿಯೋಗಿಸಿದ ಅವಧಿಯಲ್ಲಿ ಆ ಹೂಡಿಕೆಯಿಂದ ರೂ.14 ಕೋಟಿಗಿಂತ ಹೆಚ್ಚಿನ ಆದಾಯವು ಲಭಿಸಿದ್ದರೆ ಬ್ಯಾಂಕಿಗೆ ನಷ್ಟವಾಗುವುದಿಲ್ಲ.
ಈ ವ್ಯವಹಾರದಲ್ಲಿರುವ ಅನಿಶ್ಚಿತತೆ ಮತ್ತು ನಷ್ಟ ಸಂಭಾವ್ಯತೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಬ್ಯಾಂಕು ವಿದೇಶಿ ಕರೆನ್ಸಿಯನ್ನು ಅಥವಾ ಭದ್ರತಾ ಪತ್ರಗಳನ್ನು ಪೂರ್ವನಿರ್ಧಾರಿತ ಮೌಲ್ಯವನ್ನು ಕೊಟ್ಟು ಹಾಗೂ ನಿರ್ದಿಷ್ಟ ಅವಧಿಯ ಬಳಿಕ ಪಡಕೊಳ್ಳುವ ಅಥವಾ ಮಾರುವ ಕರಾರನ್ನು ಮಾರುಕಟ್ಟೆಯಲ್ಲಿ ಮಾಡಿಕೊಳ್ಳುತ್ತದೆ. ಈ ತರದ ಕರಾರುಗಳ ಮೂಲಕ ನಷ್ಟಸಂಭಾವ್ಯತೆಯಿಂದ ರಕ್ಷಿಸಿಕೊಳ್ಳುವ ವ್ಯವಹಾರವನ್ನು ಹಣಕಾಸುರಂಗದಲ್ಲಿ ‘ಹೆಜ್ಜಿಂಗ್’ (Hedging-ರಕ್ಷಾ ಖರೀದಿ/ಮಾರಾಟ) ಎನ್ನಲಾಗುತ್ತದೆ. ಈ ವ್ಯವಹಾರದಲ್ಲಿ ಬಳಕೆಯಾಗುವ ಭದ್ರತಾ ಪತ್ರಗಳಿಗೆ ವ್ಯತ್ಪನ್ನಗಳು (Derivatives-ಡೆರೈವೆಟಿವ್ಸ್) ಎನ್ನಲಾಗುತ್ತದೆ. ರಕ್ಷಾ ವ್ಯವಹಾರದಲ್ಲಿಯೂ ಅಂದಾಜಿಸಿದಷ್ಟು ರಕ್ಷಣೆ ಸಿಗದಾಗ ಬ್ಯಾಂಕಿಗೆ ನಷ್ಟವಾಗಬಹುದು. ಅದಕ್ಕಾಗಿಯೇ ಈ ವ್ಯವಹಾರದ ಕುರಿತಾಗಿಯೂ ಮುನ್ನೇರ್ಪಾಟು ಅಗತ್ಯವಿದೆ.
ಕೆಲವು ವರದಿಗಳ ಪ್ರಕಾರ ಇಂಡಸ್ ಇಂಡ್ ಬ್ಯಾಂಕು ರಕ್ಷಾ ವ್ಯವಹಾರಗಳ ಕುರಿತು ನಾಲ್ಕೈದು ವರ್ಷಗಳಿಂದ ಅಗತ್ಯವಾದ ಮುನ್ನೇರ್ಪಾಟು ಮಾಡಿರಲಿಲ್ಲ.
ಎಡವಟ್ಟು ಹೇಗೆ ಹೊರಬಂತು?
ಬ್ಯಾಂಕಿನ ಮುನ್ನೇರ್ಪಾಟಿನ ಕೊರತೆ ಹೇಗೆ ಬೆಳಕಿಗೆ ಬಂತು? 2023ರಲ್ಲಿ ಆರ್‌ಬಿಐಯು ಬ್ಯಾಂಕುಗಳು ತಮ್ಮ ಹೂಡಿಕೆಗಳ ವ್ಯವಹಾರ, ವಿಂಗಡಣೆ ಮತ್ತು ಅವುಗಳ ಮೌಲ್ಯಮಾಪನದ ವಿಧಾನದ ಬಗ್ಗೆ ಹೊಸ ಸುತ್ತೋಲೆಯನ್ನು ಎಪ್ರಿಲ್ 2024ರಿಂದ ಅನ್ವಯವಾಗುವಂತೆ ಜಾರಿಗೆ ತಂದಿತು. ಜೂನ್ ತ್ರೈಮಾಸಿಕದ ಒಳಗೆ ಬ್ಯಾಂಕುಗಳು ಹೊಸ ಪದ್ಧತಿಯನ್ನು ಕಾರ್ಯರೂಪಕ್ಕೆ ತಂದವು. ಆದರೆ ಇಂಡಸ್ ಇಂಡ್ ಇದನ್ನು ಮಾಡಿರಲಿಲ್ಲ. ಇದೇ ಕಾರಣಕ್ಕೆ ಬಹುಶಃ ವ್ಯವಸ್ಥಾಪಕ ನಿರ್ದೇಶಕರ ಮುಂದುವರಿಕೆಯ ಬಗ್ಗೆ ತನ್ನ ಒಪ್ಪಿಗೆಯನ್ನು ಆರ್‌ಬಿಐ ಮುಂದೆ ಹಾಕಿತು. ಗೋವಿಂದ ಜೈನರ ಪದತ್ಯಾಗಕ್ಕೂ ಇದೇ ಕಾರಣವಿರಬಹುದೆಂದು ವಿಶ್ಲೇ ಷಕರ ಅಭಿಪ್ರಾಯ. ಈ ಎಲ್ಲ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ನಿಗೂಢ ಕಾರಣಗಳಿಗಾಗಿ ಬ್ಯಾಂಕು ತನ್ನ ಆಂತರಿಕ ವ್ಯವಹಾರದಲ್ಲಿ ಆದ ಎಡವಟ್ಟುಗಳ ಬಗ್ಗೆ ಬಹಿರಂಗವಾಗಿ ಶೇರು ಮಾರುಕಟ್ಟೆಗೆ ಹೇಳಿಕೆ ನೀಡಿತು.
ವ್ಯವಸ್ಥೆಯ ಲೋಪಗಳು
ಗ್ರಾಹಕರ ಹಣವನ್ನು ಮೂಲವಸ್ತು ಆಗಿ ಬಳಸಿ ವ್ಯವಹಾರ ನಡೆಸುವಾಗ ಒಂದು ಬ್ಯಾಂಕು ಗ್ರಾಹಕರ ವಿಶ್ವಾಸವನ್ನು ಕಾಯ್ದಿರಿಸಿಕೊಳ್ಳಲು ಆರ್‌ಬಿಐ ನಿಯಮಗಳು, ಲೆಕ್ಕ ಪರಿಶೋಧನಾ ತತ್ವಗಳು, ದಕ್ಷ ಒಳಾಡಳಿತೆಯ ಸೂತ್ರಗಳು ಹೀಗೆ ಅನೇಕ ನಿಯಮಗಳಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕಿದೆ. ವ್ಯವಹಾರಗಳು ಈ ಚೌಕಟ್ಟಿನಲ್ಲಿ ನಡೆಯುತ್ತಿವೆಯೇ ಎಂಬುದರ ಕುರಿತು ಕಾಲಕಾಲಕ್ಕೆ ನಿರ್ದೇಶಕ ಮಂಡಳಿಯು ಗಮನ ಹರಿಸಬೇಕು. ಆಂತರಿಕ ಲೆಕ್ಕಪರಿಶೋಧಕರೂ ನಷ್ಟಸಂಭಾವ್ಯತೆಗೆ ಅಗತ್ಯದ ಮುನ್ನೇರ್ಪಾಟು ಮಾಡಲಾಗಿದೆಯೇ ಎಂದು ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆಂತರಿಕ ಕ್ರಮಗಳಲ್ಲದೆ, ಆರ್‌ಬಿಐಯು ನಿಯಂತ್ರಕನ ನೆಲೆಯಲ್ಲಿ ಬ್ಯಾಂಕಿನ ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಿ ತಪ್ಪಿದ್ದಲ್ಲಿ ಬ್ಯಾಂಕಿಗೆ ಸೂಕ್ತ ಸಲಹೆಯನ್ನು ನೀಡುವ ಬಾಧ್ಯತೆಯನ್ನು ಹೊಂದಿದೆ. ಇಷ್ಟೆಲ್ಲ ವ್ಯವಸ್ಥೆಯಿದ್ದೂ ಇಂಡಸ್ ಇಂಡ್ ಬ್ಯಾಂಕಿನ ಮುನ್ನೇರ್ಪಾಟಿನ ಕೊರತೆಗಳು ಯಾಕೆ ಗಮನಕ್ಕೆ ಬರಲಿಲ್ಲ ಎಂಬುದು ದೊಡ್ಡ ಪ್ರಶ್ನೆ.
(1995ರಲ್ಲಿ ಮುಳುಗಡೆಯಾದ 200 ವರ್ಷದ ಇತಿಹಾಸವಿದ್ದ ಇಂಗ್ಲೆಂಡಿನ ಬೇರಿಂಗ್ಸ್ ಬ್ಯಾಂಕಿನ ಪತನಕ್ಕೆ ಕಾರಣ ವ್ಯತ್ಪನ್ನಗಳ ವ್ಯವಹಾರದಲ್ಲಿ ತೊಡಗಿದ್ದ ಅದರ ಸಿಂಗಾಪುರ ಶಾಖೆಯ ಲೇವಾದೇವಿಗಾರನಾದ ನಿಕ್ ಲೀಸನ್. ತನ್ನ ವ್ಯವಹಾರಗಳ ಮೂಲಕ ಬೃಹತ್ ಮೊತ್ತದ ಆದಾಯವನ್ನು ಅವನು ಸಂಪಾದಿಸುತ್ತಿದ್ದಾಗ ಮೇಲಧಿಕಾರಿಗಳು ಕಣ್ಣು ಮುಚ್ಚಿದ್ದರು-ಲಾಭವೊಂದೇ ಅವರ ಗುರಿಯಾಗಿತ್ತು. ಅದರ ಸಂಪಾದನೆಯ ಮಾರ್ಗದ ಬಗ್ಗೆ ಪ್ರಶ್ನಿಸಲಿಲ್ಲ.)
ಇನ್ನೊಂದು ವಿಷಯವೂ ಮುನ್ನೆಲೆಗೆ ಬರುತ್ತದೆ. ಇಂಡಸ್ ಇಂಡ್ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಬೇಕಾದಷ್ಟು ಅನುಭವಿಗಳು, ಹಣಕಾಸು ತಜ್ಞರು ಮತ್ತು ಸ್ವತಂತ್ರ ನಿರ್ದೇಶಕರು ಇದ್ದರು. ಇವರ್ಯಾರಿಗೂ ಬ್ಯಾಂಕಿನ ಪ್ರಶ್ನಾರ್ಹವಾದ ನಿರ್ಧಾರಗಳ ಕುರಿತು ಅರಿವು ಇರಲಿಲ್ಲವೇ? ಅಥವಾ ಅವರು ದಿವ್ಯ ಮೌನವನ್ನು ತಳೆದರೇ?
ಮುಂದಿನ ದಾರಿ
ಈಗ ಈ ವ್ಯವಹಾರವನ್ನು ಆಪರಾಧಿಕ ದೃಷ್ಟಿಕೋನದಿಂದ ಪರಿಶೀಲಿಸಲು ಗ್ರಾಂಟ್ ಥಾರ್ನಟನ್ ಎಂಬ ಅಂತರ್‌ರಾಷ್ಟ್ರೀಯ ಸಂಸ್ಥೆಗೆ ಬ್ಯಾಂಕು ಕೇಳಿಕೊಂಡಿದೆ. ಎಷ್ಟರ ಮಟ್ಟಿಗೆ ಅದು ಯಶಸ್ವಿಯಾಗಬಹುದು ಮತ್ತು ಆ ಬಳಿಕ ತಪ್ಪಿತಸ್ಥರ ಮೇಲೆ ಬ್ಯಾಂಕು ಯಾವ ಕ್ರಮವನ್ನು ಕೈಗೊಳ್ಳಬಹುದು, ಆರ್‌ಬಿಐಯು ಇಂತಹ ವರ್ತನೆಗಳು ಮರುಕಳಿಸದಂತೆ ಏನು ಸುಧಾರಣೆಯನ್ನು ಮಾಡಲಿದೆ ಎಂಬುದು ಸದ್ಯಕ್ಕೆ ಊಹೆಗೆ ಸೀಮಿತ.
ಹಣಕಾಸು ರಂಗ ಬೆಳೆಯುತ್ತಾ ಹೋದಂತೆ ಅದರ ಮೇಲೆ ಹೆಚ್ಚು ನಿಗಾ ಇಡಬೇಕಾಗುತ್ತದೆ ಎಂಬುದು ಹೊಸ ಪಾಠವೇನಲ್ಲ. ಹೋದ ದಶಕದಲ್ಲಿಯೇ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳು ಆಂತರಿಕ ಮೇಲ್ವಿಚಾರಣೆ ಮತ್ತು ಲೆಕ್ಕಪರಿಶೋಧನೆಯ ವೈಫಲ್ಯಗಳಿಂದಾಗಿ ಸಂಕಷ್ಟಕ್ಕೆ ಈಡಾಗಿವೆ. ಇವುಗಳಲ್ಲಿ ಪ್ರಮುಖವಾದವು ಪೇಟಿಎಂ ಬ್ಯಾಂಕು (2024) ಧನಲಕ್ಷ್ಮಿ ಬ್ಯಾಂಕು (2020), ಲಕ್ಷ್ಮಿವಿಲಾಸ ಬ್ಯಾಂಕು (2020), ಯಸ್ ಬ್ಯಾಂಕು (2020) ಮತ್ತು ಪಂಜಾಬ್ ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕು (2019). ಆಂತರಿಕ ಮೇಲ್ವಿಚಾರಣೆ ಮತ್ತು ಲೆಕ್ಕ ಪರಿಶೋಧನೆಯು ಕಟ್ಟುನಿಟ್ಟಾಗಿದ್ದರೆ ಮತ್ತು ಆರ್‌ಬಿಐಯು ತನ್ನ ಶಾಸನಬದ್ಧ ಜವಾಬ್ದಾರಿಯನ್ನು ದಕ್ಷವಾಗಿ ನಿರ್ವಹಿಸಿದರೆ ಹಣಕಾಸು ಸಂಸ್ಥೆಗಳ ದಕ್ಷತೆಯು ಹೆಚ್ಚಿ ಗ್ರಾಹಕರ ವಿಶ್ವಾಸವನ್ನು ಭದ್ರಗೊಳಿಸುತ್ತವೆ.
ಶೇರುದಾರರ ಹೂಡಿಕೆಯ ಮೌಲ್ಯದ ಪತನದಿಂದಲೂ ಸಣ್ಣ ಹೂಡಿಕೆದಾರರಿಗೆ ನಷ್ಟವಾಗುತ್ತದೆ. ಬ್ಯಾಂಕಿನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದರ ಸಂಕೇತ ಅದು. ಆ ಸಂಕೇತದಿಂದ ಎಚ್ಚೆತ್ತುಕೊಂಡು ಇಂಡಸ್ ಇಂಡ್ ಬ್ಯಾಂಕು ಮತ್ತು ಆರ್‌ಬಿಐಯು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಈಗ ಇದೆ.