ವಕ್ಫ್ ಬೋರ್ಡ್ ಜನಸ್ನೇಹಿಯಾಗಿಸಲು ಆದ್ಯತೆ: ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ

ಬೆಂಗಳೂರು, ಮಾ.27: ರಾಜ್ಯ ವಕ್ಫ್ ಬೋರ್ಡ್‌ಗೆ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಗುಲ್ಬರ್ಗಾದ ಖ್ವಾಜಾ ಬಂದೇ ನವಾಝ್ ದರ್ಗಾದ ಸಜ್ಜಾದ ನಶೀನ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ(ಅಲಿ ಬಾಬಾ), ವಕ್ಫ್ ಬೋರ್ಡ್ ನಲ್ಲಿ ಭವಿಷ್ಯದಲ್ಲಿ ಕೈಗೊಳ್ಳಲಿರುವ ಸುಧಾರಣೆಗಳು ಹಾಗೂ ತಮ್ಮ ದೂರದೃಷ್ಟಿಯ ಯೋಜನೆಗಳ ಕುರಿತು ‘ವಾರ್ತಾಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಾ.ಭಾ: ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ತಮ್ಮ ಮುಂದಿರುವ ಸವಾಲುಗಳೇನು?.
ಮುಹಮ್ಮದ್ ಅಲಿ ಅಲ್ ಹುಸೈನಿ: ಇತ್ತೀಚೆಗಷ್ಟೇ ವಕ್ಫ್ ಬೋರ್ಡ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಬೋರ್ಡ್‌ನ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಎರಡು ಸುತ್ತಿನ ಸಭೆ ನಡೆಸಿ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗಿದೆ. ಹಿಂದಿನ ಬೋರ್ಡ್‌ನ ಮುಂದೆ ಇದ್ದಂತಹ ಪ್ರಮುಖ ವಿಷಯಗಳ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದೇನೆ.
ವಾ.ಭಾ: ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯನ್ನು ಬಹಿಷ್ಕರಿಸಿದ್ದ ಸದಸ್ಯರ ಸಹಕಾರ ನಿಮಗೆ ಸಿಗುವ ವಿಶ್ವಾಸವಿದೆಯೇ?
ಮುಹಮ್ಮದ್ ಅಲಿ ಅಲ್ ಹುಸೈನಿ: ಚುನಾ ವಣೆಯಲ್ಲಿ ಭಾಗವಹಿಸದ ಹಲವು ಸದಸ್ಯರ ಜೊತೆ ನಾನು ಮಾತುಕತೆ ನಡೆಸಿದ್ದೇನೆ. ಇನ್ನೂ ಕೆಲವರ ಜೊತೆ ಮಾತನಾಡಬೇಕಿದೆ. ಎಲ್ಲ ಸದಸ್ಯರ ಸಹಕಾರ ಪಡೆದು ವಕ್ಫ್ ಬೋರ್ಡ್ ಅನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಕ್ಫ್ ಸಚಿವರು ಹೀಗೆ ಎಲ್ಲರ ಸಹಕಾರವು ನನಗೆ ಸಿಗುವ ವಿಶ್ವಾಸವಿದೆ.
ವಾ.ಭಾ: ತಾವು ಅಧ್ಯಕ್ಷರಾದ ಬಳಿಕ ಇನ್ನೂ ಬೋರ್ಡ್‌ನ ಸಭೆಯನ್ನು ಯಾಕೆ ಕರೆದಿಲ್ಲ?
ಹುಸೈನಿ: ಈಗಾಗಲೇ ತಮಗೆ ತಿಳಿಸಿರುವಂತೆ ನಾನು ವಕ್ಫ್ ಬೋರ್ಡ್‌ನ ಮುಂದಿರುವ ವಿಷಯಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇನೆ. ಬೋರ್ಡ್‌ನ ಮೊದಲ ಸಭೆಯಲ್ಲಿ ಯಾವೆಲ್ಲ ವಿಷಯಗಳನ್ನು ಚರ್ಚೆ ಮಾಡಬೇಕು ಎಂದು ಪಟ್ಟಿ ಮಾಡಲಾಗುತ್ತಿದೆ. ಬಹುಶಃ ಎಪ್ರಿಲ್ ಅಂತ್ಯಕ್ಕೆ ಬೋರ್ಡ್ ಸಭೆಯನ್ನು ಕರೆಯುವ ಉದ್ದೇಶವಿದೆ.
ವಾ.ಭಾ: ವಕ್ಫ್ ಬೋರ್ಡ್ ನ ಕಾರ್ಯವೈಖರಿ ಕುರಿತು ನಿಮ್ಮ ಅನಿಸಿಕೆ ಏನು?
ಹುಸೈನಿ: ವಕ್ಫ್ ಬೋರ್ಡ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಸಭೆ ನಡೆಸಿದಾಗ ಹಲವಾರು ವಿಷಯಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಅವುಗಳನ್ನೆಲ್ಲ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಸಮುದಾಯ ಹಾಗೂ ಬೋರ್ಡ್‌ನ ಹಿತದೃಷ್ಟಿಯಿಂದ ಯಾವುದು ಉತ್ತಮವೋ ಅದಕ್ಕೆ ಆದ್ಯತೆ ನೀಡಲಾಗುವುದು. ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.
ವಾ.ಭಾ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಸಾರ್ವಜನಿಕರಿಗೆ ವಕ್ಫ್ ಬೋರ್ಡ್ ನಲ್ಲಿ ಸೂಕ್ತ ಸ್ಪಂದನೆ ಸಿಗುವುದಿಲ್ಲ ಎಂಬ ಆಪಾದನೆ ಇದೆಯಲ್ಲ?
ಹುಸೈನಿ: ಸಮುದಾಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ರಾಜ್ಯ ವಕ್ಫ್ ಬೋರ್ಡ್ ಅನ್ನು ಜನಸ್ನೇಹಿಯಾಗಿಸಲು ಆದ್ಯತೆ ನೀಡಲಾಗುವುದು. ದೂರದ ಪ್ರದೇಶಗಳಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವಂತಹ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡಬೇಕು. ನಮ್ಮ ನಡೆ, ನುಡಿಗಳಿಂದ ಯಾರಿಗೂ ನೋವುಂಟು ಆಗಬಾರದು ಎಂದು ಎಲ್ಲರಿಗೂ ಮೌಖಿಕವಾಗಿ ನಿರ್ದೇಶನಗಳನ್ನು ನೀಡಲಾಗಿದೆ.
ವಾ.ಭಾ: ಅಧ್ಯಕ್ಷರಾದ ಬಳಿಕ ಬೆಂಗಳೂರಿನ ಯಾವುದಾದರೂ ಪ್ರಮುಖ ವಕ್ಫ್ ಸಂಸ್ಥೆಗೆ ಭೇಟಿ ನೀಡಿದ್ದೀರಾ?
ಹುಸೈನಿ: ವಕ್ಫ್ ಬೋರ್ಡ್‌ನ ಮೊದಲ ಸಭೆಯ ಬಳಿಕ ರಾಜ್ಯದ ಎಲ್ಲ ಪ್ರಮುಖ ವಕ್ಫ್ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಸಮಸ್ಯೆಗಳ ಪರಿಶೀಲನೆ ನಡೆಸಲಾಗುವುದು. ವಕ್ಫ್ ಸಂಸ್ಥೆಗಳ ಪ್ರಮುಖರೊಂದಿಗೂ ಚರ್ಚೆಗಳನ್ನು ನಡೆಸಿ, ವಕ್ಫ್ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು.
ವಾ.ಭಾ: ಡಾ.ಮುಹಮ್ಮದ್ ಯೂಸುಫ್ ಅಧ್ಯಕ್ಷರಾಗಿದ್ದಾಗ ವಕ್ಫ್ ಆಸ್ತಿಗಳ ಡಿಜಿಟಲ್ ಸರ್ವೇ ಮಾಡಿಸುವ ಯೋಜನೆ ರೂಪಿಸಿದ್ದರು. ನೀವು ಏನಾದರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತೀರಾ?
ಹುಸೈನಿ: ವಕ್ಫ್ ಆಸ್ತಿಗಳ ಡಿಜಿಟಲ್ ಸರ್ವೇ ಮಾಡಿಸುವ ಕುರಿತು ನನ್ನ ಆಲೋಚನೆಯೂ ಇದೆ. ಈ ಸಂಬಂಧ ಬೋರ್ಡ್ ಸಭೆಯಲ್ಲಿ ಚರ್ಚೆ ಮಾಡಿ ಯಾವ ರೀತಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ತೀರ್ಮಾನ ಮಾಡುತ್ತೇವೆ.
ವಾ.ಭಾ: ಹೊಸದಿಲ್ಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ ಉದ್ದೇಶವೇನು?
ಹುಸೈನಿ: ವಕ್ಫ್ ಬೋರ್ಡ್ ಅಧ್ಯಕ್ಷನಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೆ. ಆನಂತರ, ಹೊಸದಿಲ್ಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಹಾಗೂ ಗುಲ್ಬರ್ಗಾದ ಸಂಸದ ರಾಧಾಕೃಷ್ಣ ಹೊಸಮನಿ ಅವರನ್ನು ಭೇಟಿ ಮಾಡಿ ಕೃತಜ್ಞತೆಗಳನ್ನು ಸಲ್ಲಿಸಿ ಬಂದಿದ್ದೇನೆ. ಇದೊಂದು ಸೌಹಾರ್ದ ಭೇಟಿಯಾಗಿತ್ತೇ ಹೊರತು, ಬೇರೆ ಯಾವುದೇ ಉದ್ದೇಶವಿರಲಿಲ್ಲ.
ವಾ.ಭಾ: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ವಿಧೇಯಕದ ಕುರಿತು ವಕ್ಫ್ ಬೋರ್ಡ್ ನಿಲುವು ಏನು?
ಹುಸೈನಿ: ರಾಜ್ಯ ಸರಕಾರ ಈ ವಿಚಾರದಲ್ಲಿ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಬೇಕು ಎಂದು ನಿರ್ಣಯ ಅಂಗೀಕರಿಸಲಾಗಿದೆ. ಇದೇ ರೀತಿಯ ನಿರ್ಣಯಗಳು ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಕೈಗೊಳ್ಳುವ ಸಾಧ್ಯತೆಗಳಿವೆ.
ಈ ವಿಧೇಯಕದ ವಿರುದ್ಧ ಒಂದು ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ, ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯೂ ದೇಶಾದ್ಯಂತ ಪ್ರತಿಭಟನಾ ಸಭೆಗಳನ್ನು ನಡೆಸುತ್ತಿದೆ. ಕೇಂದ್ರ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಇತ್ತೀಚೆಗೆ ಹೇಳಿಕೆಯನ್ನು ನೀಡಿ ವಕ್ಫ್ ತಿದ್ದುಪಡಿ ವಿಧೇಯಕದ ಕುರಿತು ನಾವು ಇನ್ನೂ ಆಲೋಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕೇಂದ್ರದ ವಕ್ಫ್ ತಿದ್ದುಪಡಿ ವಿಧೇಯಕದ ವಿರುದ್ಧ ರಾಜ್ಯ ಸರಕಾರ ನಿರ್ಣಯ ಕೈಗೊಂಡಿದ್ದು ಸ್ವಾಗತಾರ್ಹ.