ಪರಿಸ್ಥಿತಿ ಹೀಗಿರುವಾಗ ದೇಶದ ನ್ಯಾಯ ವ್ಯವಸ್ಥೆ ಸುಧಾರಿಸಲು ಸಾಧ್ಯವೇ?

ಈ ವರ್ಷದ ಫೆಬ್ರವರಿ ವೇಳೆಗೆ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 5,292 ನ್ಯಾಯಾಂಗ ಹುದ್ದೆಗಳು ಖಾಲಿ ಇದ್ದವು. ಹಾಗೆಯೇ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ 369 ಹುದ್ದೆಗಳು ಖಾಲಿ ಇದ್ದವು.
ಇದು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ಹೆಚ್ಚಿಸುತ್ತದೆ.
ಇಂಡಿಯಾ ಜಸ್ಟಿಸ್ ರಿಪೋರ್ಟ್‌ನ (ಐಜೆಆರ್) ಹೊಸ ವರದಿ ಪ್ರಕಟವಾಗಿದೆ. ಭಾರತದ 11 ಶ್ರೀಮಂತ ರಾಜ್ಯಗಳು 2024-25ರಲ್ಲಿ ತಮ್ಮ ನ್ಯಾಯ ವ್ಯವಸ್ಥೆಗಳ ನಿರ್ವಹಣೆಗಾಗಿ 1.97 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಿರುವುದನ್ನು ಅದು ಹೇಳಿದೆ. ಇದು 2022-23ರಲ್ಲಿನ ವೆಚ್ಚಕ್ಕಿಂತ ಶೇ. 36ರಷ್ಟು ಹೆಚ್ಚಾಗಿದೆ ಎಂದು ಐಜೆಆರ್ ವರದಿ ಹೇಳಿದೆ. ಪೊಲೀಸ್, ನ್ಯಾಯಾಂಗ, ಕಾರಾಗೃಹ ಮತ್ತು ಕಾನೂನು ನೆರವು ಇಲ್ಲಿ ಬರುತ್ತವೆ.
2021-22ರಿಂದ ಕನಿಷ್ಠ 1ಕೋಟಿ ಜನಸಂಖ್ಯೆಯನ್ನು ಮತ್ತು ಅತ್ಯಧಿಕ ಜಿಎಸ್‌ಡಿಪಿ ಹೊಂದಿರುವ 11 ರಾಜ್ಯಗಳ ಬಜೆಟ್‌ಗಳನ್ನು ಈ ವರದಿ ವಿಶ್ಲೇಷಿಸಿದೆ.
ಈ ರಾಜ್ಯಗಳೆಂದರೆ, ಆಂಧ್ರಪ್ರದೇಶ, ಗುಜರಾತ್, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.
2022ರ ಐಜೆಆರ್ ವರದಿಯ ಪ್ರಕಾರ, ದಕ್ಷಿಣದ 4 ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ಅಗ್ರಸ್ಥಾನದಲ್ಲಿವೆ.
ನ್ಯಾಯ ವ್ಯವಸ್ಥೆಯ ನಿಧಿಯನ್ನು ವರದಿ ವಿಶ್ಲೇಷಿಸಿದೆ -
ನಾಲ್ಕು ಸ್ತಂಭಗಳು ಮತ್ತು ವಿಧಿವಿಜ್ಞಾನ, ಪ್ರಾಸಿಕ್ಯೂಷನ್ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ - ಇವು ಪ್ರಾಥಮಿಕವಾಗಿ ಗೃಹ, ನ್ಯಾಯ ಮತ್ತು ಕಾನೂನು ಇಲಾಖೆಗಳ ಅಡಿಯಲ್ಲಿ ಬರುತ್ತವೆ.
ಪೊಲೀಸರನ್ನು ಹೊರತುಪಡಿಸಿ, ಈ 11 ರಾಜ್ಯಗಳು ನ್ಯಾಯ ವ್ಯವಸ್ಥೆಗೆ ರೂ. 41,092 ಕೋಟಿ ಖರ್ಚು ಮಾಡಿವೆ. ಇದು ಅವುಗಳ ಒಟ್ಟು ಜಿಎಸ್‌ಡಿಪಿಯ ಶೇ. 0.32 ಎಂದು ವರದಿ ಹೇಳುತ್ತದೆ.
ವಿವಿಧ ರಾಜ್ಯಗಳಲ್ಲಿ ನ್ಯಾಯ ನಿಧಿಯ ಹಂಚಿಕೆಗಳಲ್ಲಿ ವ್ಯತ್ಯಾಸಗಳಿದ್ದರೂ, ತಲಾ ಖರ್ಚು ಕಡಿಮೆಯಾಗಿದೆ.
ಪೊಲೀಸ್, ನ್ಯಾಯಾಂಗ ಮತ್ತು ಕಾರಾಗೃಹಗಳಲ್ಲಿ ತರಬೇತಿಗಾಗಿ ಮೀಸಲಿಡುವ ನಿಧಿಯ ಮೊತ್ತವೂ ಕಡಿಮೆಯಾಗಿದೆ.
2024-25ರಲ್ಲಿ ನ್ಯಾಯಕ್ಕಾಗಿ ರಾಜ್ಯಗಳ ಬಜೆಟ್ ನಿಧಿಯಲ್ಲಿ ಸರಾಸರಿ ಶೇ. 4.3ರಷ್ಟನ್ನು ಹಂಚಿಕೆ ಮಾಡಲಾಗಿದೆ.
ರಾಜಸ್ಥಾನದಲ್ಲಿ ಶೇ. 2.6 ಅಂದರೆ, 12,782 ಕೋಟಿ ರೂ. ಇದ್ದರೆ, ಉತ್ತರ ಪ್ರದೇಶದಲ್ಲಿ ಶೇ. 7.3 ಅಂದರೆ, 51,005 ಕೋಟಿ ರೂ. ವರೆಗೆ ಇದೆ,
ಆದರೆ ಅತಿ ಹೆಚ್ಚು ಜಿಎಸ್‌ಡಿಪಿ ಹೊಂದಿರುವ ಮಹಾರಾಷ್ಟ್ರ ತನ್ನ ಬಜೆಟ್‌ನ ಶೇ. 5.3ರಷ್ಟನ್ನು ಹಂಚಿಕೆ ಮಾಡಿದೆ.
ಪೊಲೀಸರನ್ನು ಹೊರತುಪಡಿಸಿ ನ್ಯಾಯ ವ್ಯವಸ್ಥೆಗೆ
ರಾಜ್ಯಗಳು ಪ್ರತೀ ವ್ಯಕ್ತಿಗೆ ವರ್ಷಕ್ಕೆ 389 ರೂ. ಖರ್ಚು ಮಾಡುತ್ತವೆ. ಇತ್ತೀಚಿನ ಬಳಕೆ ವೆಚ್ಚ ಸಮೀಕ್ಷೆಯ ಪ್ರಕಾರ, ಸರಾಸರಿ ಭಾರತೀಯರು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಪ್ರತೀ ತಿಂಗಳು ಇದಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಪೊಲೀಸರ ಮೇಲಿನ ವೆಚ್ಚ ಸೇರಿಸಿದರೆ, ತಲಾ ಖರ್ಚು ವರ್ಷಕ್ಕೆ 2,056 ರೂ. ಆಗುತ್ತದೆ.
ಅತಿ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶ, 2024-25ರಲ್ಲಿ ನ್ಯಾಯಕ್ಕಾಗಿ ಅತಿ ಹೆಚ್ಚು ಅಂದರೆ, 51,005 ಕೋಟಿ ರೂ. ಹಂಚಿಕೆ ಮಾಡಿದ್ದರೂ, ತಲಾ ಖರ್ಚು ತೆಲಂಗಾಣ, ಮಹಾರಾಷ್ಟ್ರ ಮತ್ತು ಹರ್ಯಾಣಕ್ಕಿಂತ ಕಡಿಮೆ ಇದೆ.
ಪೊಲೀಸರು ಹೆಚ್ಚಿನ ಆರ್ಥಿಕ ಸಂಪನ್ಮೂಲಗಳನ್ನು ಪಡೆಯುತ್ತಾರೆ.
ಪರಿಣಿತರು ಹೇಳುವ ಪ್ರಕಾರ, ಪೊಲೀಸರ ಮೇಲೆ ಹೂಡಿಕೆ ಮಾಡುವುದು ಮುಖ್ಯವಾದರೂ, ನ್ಯಾಯಾಂಗದಲ್ಲಿ ಸಾಕಷ್ಟು ಹೂಡಿಕೆ ಮಾಡದಿರುವುದು ನ್ಯಾಯಾಧೀಶರ ಕೆಲಸದ ಹೊರೆಗೆ ಮತ್ತು ಪ್ರಕರಣಗಳು ಬಾಕಿಯಾಗುವುದಕ್ಕೆ ಕಾರಣವಾಗುತ್ತದೆ.
ನ್ಯಾಯಾಲಯದ ಮೂಲಸೌಕರ್ಯ ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಸಾಕಷ್ಟು ಹಣ ಇರಬೇಕು.
ಕಾರಾಗೃಹಗಳಲ್ಲಿಯೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ಹೂಡಿಕೆ ಅಗತ್ಯ.
ಪೊಲೀಸ್, ಜೈಲುಗಳು, ಕಾನೂನು ನೆರವು ಮತ್ತು ಜಾಮೀನು ಸಮಸ್ಯೆಗಳ ಕುರಿತು ‘ಇಂಡಿಯಾಸ್ಪೆಂಡ್’ ವರದಿ ಮಾಡಿದ್ದು, ನ್ಯಾಯ ವ್ಯವಸ್ಥೆಯಲ್ಲಿ ಜನರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
ಭಾರತದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಶೇ. 21ರಷ್ಟು ಹೆಚ್ಚು ಕೈದಿಗಳನ್ನು ತುಂಬಲಾಗಿದೆ. ಬಿಡುಗಡೆಯಾಗಬೇಕಿದ್ದವರಲ್ಲಿ ಅರ್ಧಕ್ಕಿಂತ ಕಡಿಮೆ ಕೈದಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.
ಬಡ ಕೈದಿಗಳನ್ನು ಬೆಂಬಲಿಸಲು ಕೇಂದ್ರ ಸರಕಾರ 2023ರಲ್ಲಿ ಘೋಷಿಸಿದ ನಗದು ಜಾಮೀನು ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ.
2024-25ರಲ್ಲಿ 11 ರಾಜ್ಯಗಳ ಪೊಲೀಸ್ ಬಜೆಟ್‌ನಲ್ಲಿ ಶೇ. 1.4ನ್ನು ತರಬೇತಿಗೆ ಮೀಸಲಿಡಲಾಗಿದೆ, ಹಾಗೆಯೇ ಜೈಲು ಬಜೆಟ್‌ನಲ್ಲಿ ಶೇ.0.6 ಮತ್ತು ನ್ಯಾಯಾಂಗ ಬಜೆಟ್‌ನಲ್ಲಿ ಶೇ. 0.5ರಷ್ಟನ್ನು ಮೀಸಲಿಡಲಾಗಿದೆ.
ವರ್ಷಗಳಿಂದ ಒಟ್ಟಾರೆ ಬಜೆಟ್‌ನ ಶೇಕಡಾವಾರು ಪ್ರಮಾಣದಲ್ಲಿ ಪೊಲೀಸ್ ತರಬೇತಿಗಾಗಿ ಹಣ ಹೆಚ್ಚಿದ್ದರೂ, ನ್ಯಾಯಾಂಗ ಮತ್ತು ಕಾರಾಗೃಹಗಳ ಹಂಚಿಕೆ ನಿಂತಲ್ಲೇ ನಿಂತಿದೆ.
ಒಟ್ಟಾರೆಯಾಗಿ, 11 ರಾಜ್ಯಗಳಲ್ಲಿ 2024-25ರಲ್ಲಿ ಪೊಲೀಸ್ ತರಬೇತಿಗೆ 2,208 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು ಹಿಂದಿನ ವರ್ಷದ ಪರಿಷ್ಕೃತ ಅಂದಾಜುಗಳಿಗಿಂತ ಶೇ. 39ರಷ್ಟು ಹೆಚ್ಚಾಗಿದೆ.
ಉತ್ತರ ಪ್ರದೇಶದಲ್ಲಿ 2,69,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಅತಿದೊಡ್ಡ ಪೊಲೀಸ್ ಪಡೆಯಿದೆ.
2021-22ರಲ್ಲಿ ವಾಸ್ತವಿಕ ವೆಚ್ಚ ಮತ್ತು ಬಜೆಟ್ ಹಂಚಿಕೆಯ ನಡುವಿನ ಹೆಚ್ಚಳ ಶೇ. 91ರಷ್ಟಿದ್ದರೂ, 2022-23ರವರೆಗೆ ವಾಸ್ತವಿಕ ವೆಚ್ಚ ಕೇವಲ ಶೇ. 10 ರಷ್ಟು ಹೆಚ್ಚಾಗಿದೆ.
ವರದಿಯ ಪ್ರಕಾರ, ಯುಪಿಯ ನಿಜವಾದ ಪೊಲೀಸ್ ಬಲ ಶೇ. 5ರಷ್ಟು ಹೆಚ್ಚಾಗಿದೆ. ಆದರೂ, ತರಬೇತಿ ಸಂಸ್ಥೆಗಳ ಸಂಖ್ಯೆ ಮತ್ತು ಸಿಬ್ಬಂದಿಗೆ ತರಬೇತಿ ನೀಡುವ ಸಾಮರ್ಥ್ಯದಲ್ಲಿ ಏರಿಕೆಯಾಗಿಲ್ಲ.
ಹರ್ಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಪೊಲೀಸ್ ತರಬೇತಿಗಾಗಿ ಶೇಕಡಾ ಒಂದಕ್ಕಿಂತ ಕಡಿಮೆ ಹಣ ಹಂಚಿಕೆ ಮಾಡಿದ್ದರೆ, ಮಧ್ಯಪ್ರದೇಶ ಅತಿ ಹೆಚ್ಚು, ಅಂದರೆ ಶೇ. 2.4ರಷ್ಟನ್ನು ಹಂಚಿಕೆ ಮಾಡಿದೆ.
2021-22 ಮತ್ತು 2024-25ರ ಅವಧಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಂಗ ಸಿಬ್ಬಂದಿಯ ತರಬೇತಿಗಾಗಿ ಹಂಚಿಕೆ ಶೇ.0.4ರಿಂದ ಶೇ.0.6ರವರೆಗೆ ಇತ್ತು.
ಉತ್ತರ ಪ್ರದೇಶ ಮಾತ್ರ ತನ್ನ ನ್ಯಾಯಾಂಗ ಬಜೆಟ್‌ನ ಶೇ.1ಕ್ಕಿಂತ ಹೆಚ್ಚನ್ನು ತರಬೇತಿಗಾಗಿ ಹೂಡಿಕೆ ಮಾಡಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಕನಿಷ್ಠ ಆರು ರಾಜ್ಯಗಳು ಈ ಪಾಲನ್ನು ಕಡಿಮೆ ಮಾಡಿವೆ.
10 ಲಕ್ಷ ಭಾರತೀಯರಿಗೆ 21 ನ್ಯಾಯಾಧೀಶರಿದ್ದಾರೆ ಎಂದು ಸರಕಾರಿ ಡೇಟಾಗಳು ಹೇಳುತ್ತವೆ.
ಈ ವರ್ಷದ ಫೆಬ್ರವರಿ ವೇಳೆಗೆ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 5,292 ನ್ಯಾಯಾಂಗ ಹುದ್ದೆಗಳು ಖಾಲಿ ಇದ್ದವು. ಹಾಗೆಯೇ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ 369 ಹುದ್ದೆಗಳು ಖಾಲಿ ಇದ್ದವು.
ಇದು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ಹೆಚ್ಚಿಸುತ್ತದೆ.
ಜಿಲ್ಲಾ ನ್ಯಾಯಾಲಯಗಳಲ್ಲಿ 4.5 ಕೋಟಿಗೂ ಹೆಚ್ಚು ಪ್ರಕರಣಗಳಿವೆ. ಅವುಗಳಲ್ಲಿ ಶೇ. 73 ಪ್ರಕರಣಗಳು ಒಂದು ವರ್ಷಕ್ಕಿಂತ ಹಳೆಯವು.
ಜಿಲ್ಲಾ ಮಟ್ಟದಲ್ಲಿ 66 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ಬಾಕಿಯಿದ್ದು, ವಕೀಲರು ಲಭ್ಯವಿಲ್ಲದಿರುವುದನ್ನು ಅದಕ್ಕೆ ಕಾರಣವೆಂದು ಹೇಳಲಾಗಿದೆ.
ಹೈಕೋರ್ಟ್‌ಗಳ ಮಟ್ಟದಲ್ಲಿ, 62 ಲಕ್ಷ ಪ್ರಕರಣಗಳಲ್ಲಿ ಶೇ. 80ರಷ್ಟು ಪ್ರಕರಣಗಳು ಒಂದು ವರ್ಷಕ್ಕಿಂತ ಹಳೆಯವು.
ಆಂಧ್ರಪ್ರದೇಶ 2022-23ರಲ್ಲಿ ನ್ಯಾಯಾಂಗಕ್ಕಾಗಿ ತನ್ನ ತರಬೇತಿ ಬಜೆಟ್‌ನ ಶೇ.100ಕ್ಕಿಂತ ಹೆಚ್ಚು ಬಳಕೆ ಮಾಡಿದೆ.
ಕರ್ನಾಟಕ ಶೇ. 98ರಷ್ಟನ್ನು ಬಳಸಿದೆ.
ರಾಜಸ್ಥಾನ ಮತ್ತು ತಮಿಳುನಾಡು ತಲಾ ಶೇ.94 ರಷ್ಟನ್ನು ವೆಚ್ಚ ಮಾಡಿವೆ.
2022-23ರಲ್ಲಿ ಉತ್ತರ ಪ್ರದೇಶ ತನ್ನ ತರಬೇತಿ ಬಜೆಟ್‌ನ ಕೇವಲ ಶೇ. 41ರಷ್ಟನ್ನು ಬಳಸಿದೆ.
ಇನ್ನು 2024-25ರಲ್ಲಿ ಜೈಲುಗಳಿಗೆ ಖರ್ಚು ಮಾಡಿದ ಪ್ರತೀ 100 ರೂ.ನಲ್ಲಿ 11 ರಾಜ್ಯಗಳು ತರಬೇತಿಗಾಗಿ ಕೇವಲ 0.23 ರೂ. ಖರ್ಚು ಮಾಡುತ್ತವೆ ಎಂದು ವರದಿ ಹೇಳಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣವು ಜೈಲು ತರಬೇತಿಗಾಗಿ ಬಜೆಟ್ ಪಾಲಿನ ಶೇಕಡಾ ಒಂದಕ್ಕಿಂತ ಹೆಚ್ಚು ಹಣವನ್ನು ಹೊಂದಿದ್ದವು.
2022-23ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ 2024-25ರಲ್ಲಿ ಜೈಲುಗಳಿಗೆ ತರಬೇತಿ ಹಂಚಿಕೆ ಶೇ.32 ರಷ್ಟು ಹೆಚ್ಚಾಗಿದೆ. ಆದರೂ, ಬಳಕೆ ಶೇಕಡಾ 95ರಷ್ಟಿದೆ ಎಂದು ಐಜೆಆರ್ ಡೇಟಾ ತೋರಿಸುತ್ತದೆ.
ತರಬೇತಿ ಪಡೆದ ಜೈಲು ಸಿಬ್ಬಂದಿಯಲ್ಲಿ ಕರ್ನಾಟಕ ಶೇ. 66ರಷ್ಟು ಪ್ರಮಾಣದೊಂದಿಗೆ ಮುಂದಿದ್ದರೆ, ತಮಿಳುನಾಡು ಶೇ.7ರಷ್ಟು ಪ್ರಮಾಣದೊಂದಿಗೆ ಹಿಂದಿದೆ.
ಕರ್ನಾಟಕ ಅತ್ಯುನ್ನತ ತರಬೇತಿ ಪಡೆದ ಜೈಲು ಸಿಬ್ಬಂದಿಯನ್ನು ಹೊಂದಿದ್ದರೂ, 2022-23 ಮತ್ತು 2024-25ರ ನಡುವೆ ತರಬೇತಿ ಬಜೆಟ್‌ನಲ್ಲಿ ಶೇ. 4ರಷ್ಟು ಕುಸಿತ ಆಗಿರುವುದನ್ನು ವರದಿ ಹೇಳಿದೆ.
ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಪ್ರಕಾರ, ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಿಗೆ ವಿಧಿವಿಜ್ಞಾನ ತಜ್ಞರು ಅಪರಾಧ ಸ್ಥಳದಲ್ಲಿ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಕಡ್ಡಾಯ.
ವಿಧಿವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳು ಇನ್ನೂ ಇವೆ ಎಂದು ಹೇಳಲಾಗುತ್ತದೆ.
ರಾಜ್ಯ ಸರಕಾರಗಳು ಹೆಚ್ಚಿನ ಹಣವನ್ನು ಹಂಚಿಕೆ ಮಾಡದೆ ಹೋದರೆ, ಹೊಸ ಕ್ರಿಮಿನಲ್ ಕಾನೂನು ವ್ಯವಸ್ಥೆ ಕುಸಿಯುತ್ತಲೇ ಇರುತ್ತದೆ ಎಂಬುದು ಪರಿಣಿತರ ಅಭಿಪ್ರಾಯ.
2024-25 ರವರೆಗಿನ ಮೂರು ವರ್ಷಗಳಲ್ಲಿ, ಪೊಲೀಸ್ ಬಜೆಟ್‌ನ ಶೇಕಡಾ ಒಂದಕ್ಕಿಂತ ಕಡಿಮೆ ಭಾಗವನ್ನು ವಿಧಿವಿಜ್ಞಾನಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಐಜೆಆರ್ ವಿಶ್ಲೇಷಣೆ ಹೇಳುತ್ತದೆ.
2023-24ರ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ, 11 ರಾಜ್ಯಗಳಲ್ಲಿ ವಿಧಿವಿಜ್ಞಾನಕ್ಕೆ ಹಂಚಿಕೆ ಮಾಡಲಾಗಿರುವ ಮೊತ್ತ ಇಳಿಕೆಯಾಗಿದೆ.
ಸರಕಾರಿ ಡೇಟಾ ಪ್ರಕಾರ, ಒಟ್ಟು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಗಳು (ಎಸ್‌ಎಫ್‌ಎಸ್‌ಎಲ್) 32 ಮತ್ತು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಗಳು (ಆರ್‌ಎಫ್‌ಎಸ್‌ಎಲ್) 97.
26 ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಮಂಜೂರಾದ 3,211 ಹುದ್ದೆಗಳಲ್ಲಿ, ಶೇ. 40ರಷ್ಟು ಹುದ್ದೆಗಳು ಖಾಲಿ ಇವೆ. 1,294 ಖಾಲಿ ಹುದ್ದೆಗಳಲ್ಲಿ, ಮೂರರಲ್ಲಿ ಎರಡಕ್ಕಿಂತ ಹೆಚ್ಚು ಹುದ್ದೆಗಳು ವೈಜ್ಞಾನಿಕ ಹುದ್ದೆಗಳಾಗಿವೆ.
ನಿರ್ದೇಶಕರು, ವೈಜ್ಞಾನಿಕ ಅಧಿಕಾರಿ, ಪ್ರಯೋಗಾಲಯ ಸಹಾಯಕರು ಅಥವಾ ಡಿಜಿಟಲ್ ವಿಶ್ಲೇಷಕರ ಹುದ್ದೆಗಳೇ ಖಾಲಿಯಿವೆ.
2022-23ರಲ್ಲಿ ರಾಜ್ಯಗಳು ತಮ್ಮ ವಿಧಿವಿಜ್ಞಾನ ಬಜೆಟ್‌ನ ಸರಾಸರಿ ಶೇ. 90ರಷ್ಟನ್ನು ಬಳಸಿಕೊಂಡಿದ್ದರೂ, ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳು ಶೇ. 100 ಕ್ಕಿಂತ ಹೆಚ್ಚು ಬಳಕೆಯನ್ನು ತೋರಿಸಿವೆ ಎಂದು ಐಜೆಆರ್ ವರದಿ ಹೇಳಿದೆ.
ಅದೇ ವರ್ಷದಲ್ಲಿ ಗುಜರಾತ್‌ನಲ್ಲಿ ಶೇ. 54ರಷ್ಟು ಬಳಕೆಯಾಗಿದೆ.
ಆದಾಗ್ಯೂ, 2022-23ರಿಂದ ವಿಧಿವಿಜ್ಞಾನ ಪ್ರಯೋಗಾಲಯದ ಆಧುನೀಕರಣಕ್ಕೆ ಬಜೆಟ್ ಒದಗಿಸಲಾಗಿಲ್ಲ ಎಂದು ವರದಿ ಹೇಳುತ್ತದೆ.
2025-26ರ ಕೇಂದ್ರ ಬಜೆಟ್‌ನಲ್ಲಿ, ಸರಕಾರ ಪೊಲೀಸ್ ಪಡೆಗಳ ಆಧುನೀಕರಣ ಯೋಜನೆಗೆ ಹಿಂದಿನ ವರ್ಷದ 3,720 ಕೋಟಿ ರೂ.ಗಿಂತ ಶೇ.9 ಹೆಚ್ಚು ಹಂಚಿಕೆ ಮಾಡಿತ್ತು. ಆದರೆ ಪರಿಷ್ಕೃತ ಅಂದಾಜು ನಿಗದಿಪಡಿಸಿದ ಬಜೆಟ್‌ಗಿಂತ ಶೇ.30 ಕಡಿಮೆಯಾಗಿದೆ.