ಸಿದ್ದು-ಡಿಕೆಶಿ ನಡುವಿನ ಅಧಿಕಾರ ಹಂಚಿಕೆಯ ಗುಟ್ಟೇನು ಗೊತ್ತಾ?

Update: 2025-01-06 05:07 GMT

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವ ರೀತಿ ಅಧಿಕಾರ ಹಂಚಿಕೆಯಾಗಿದೆ ಎಂಬ ಪ್ರಶ್ನೆಗೆ ಒಂದೂವರೆ ವರ್ಷದಿಂದ ಉತ್ತರ ಸಿಕ್ಕಿರಲಿಲ್ಲ. ಈಗ ಸಣ್ಣ ಸುಳಿವು ಸಿಕ್ಕಿದೆ. ಕಳೆದ ವಾರ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಸ್ವತಃ ಸಿದ್ದರಾಮಯ್ಯ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಯಶಸ್ಸಿನ ಗುಟ್ಟೇ ಅದು- ಗುಟ್ಟು ಬಿಟ್ಟುಕೊಡದಿರುವುದು. ಯಾವಾಗ, ಎಷ್ಟು ಬೇಕೋ ಅಷ್ಟನ್ನು, ಯಾರಿಗೆ ಬೇಕೋ ಅವರಿಗೆ ಮಾತ್ರ ಹೇಳುವುದು.

ಸಿದ್ದರಾಮಯ್ಯ ಬಗ್ಗೆ ಇನ್ನೊಂದು ಮಾತಿದೆ, ಅವರು ಸೀದಾಸಾದಾ ನಾಯಕ ಅಂತಾ. ಅವರ ಬಗ್ಗೆ ಅದಕ್ಕಿಂತ ತಪ್ಪು ಗ್ರಹಿಕೆ ಮತ್ತೊಂದಿಲ್ಲ. ಅವರು ಅಬ್ಬರಿಸುವುದು ಸಭೆ-ಸಮಾರಂಭ-ವಿಧಾನಸಭೆಗಳಲ್ಲಿ ಮಾತ್ರ. ಇಂಥ ವೇದಿಕೆಗಳ ಮೂಲಕ ಜನಕ್ಕೆ, ವಿಪಕ್ಷಗಳಿಗೆ, ಸ್ವಪಕ್ಷ ನಾಯಕರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಲವು ಸಂದೇಶ ರವಾನಿಸುತ್ತಾರಾದರೂ, ರಾಜಕಾರಣವೆಂದರೆ ಅಷ್ಟೇಯಾಗಿರುವುದಿಲ್ಲ. ಅವರು ಮಾತ್ರವಲ್ಲ, ನಾಲ್ಕು ಗೋಡೆಗಳ ಮಧ್ಯೆ, ನಿರ್ಣಾಯಕ ವ್ಯಕ್ತಿಗಳೆದುರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ರಾಜಕಾರಣಿಯೊಬ್ಬನ ಜಯಾಪಜಯಗಳನ್ನು ನಿರ್ಧರಿಸುತ್ತದೆ.

ಸಿದ್ದರಾಮಯ್ಯ ಕಾಂಗ್ರೆಸಿಗೆ ಸೇರುವ ವಿಷಯ ಚರ್ಚೆಗೆ ಬಂದಾಗ ಎಲ್ಲವನ್ನು ಕೇಳಿಸಿಕೊಂಡ ಎಸ್.ಎಂ. ಕೃಷ್ಣ ‘ಪಿಕ್ ಅಂಡ್ ಪಾರ್ಕ್’ ಎಂದಷ್ಟೇ ಹೇಳಿ ಎದ್ದೋದರಂತೆ. ಅಂದರೆ ಜೆಡಿಎಸ್ ಮತ್ತು ದೇವೇಗೌಡರಿಗೆ ಹೊಡೆತ ನೀಡಲು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸಿಗೆ ಕರೆತನ್ನಿ, ಆಟ ಕೆಡಸಿದ ನಂತರ ಮೂಲೆಗೆ ತಳ್ಳಿ ಎನ್ನುವ ಅರ್ಥದಲ್ಲಿ. ಅವು ಮೂರೇ ಮೂರು ಪದಗಳಾದರು ಹೊಮ್ಮಿಸಿದ ಅರ್ಥಗಳು ನೂರಾರು. ಸಿದ್ದರಾಮಯ್ಯ ಮಾತುಗಳೂ ಹಾಗೆ…

ದೇವೇಗೌಡ ಮತ್ತು ಯಡಿಯೂರಪ್ಪ ಅವರಂತಲ್ಲ ಸಿದ್ದರಾಮಯ್ಯ. ಅವರು ಓದು, ಕ್ರಿಕೆಟ್, ಸಿನಿಮಾ, ಸ್ನೇಹಿತರ ಜೊತೆ ಊಟ-ಆಟ-ಹರಟೆಯ ರುಚಿ ಬಲ್ಲ ಮಲ್ಲ. ಹಾಗಾಗಿ, ಆಗಾಗ ಸತೀಶ್ ಜಾರಕಿಹೊಳಿ ಮನೆಯಲ್ಲಿ ಗೋಷ್ಠಿಗಳು ಗರಿಗೆದರುತ್ತಿರುತ್ತವೆ. ರಾಜಕಾರಣಿಗಳು ಒಂದೆಡೆ ಸೇರಿ ರಾಜಕಾರಣ ಮಾತನಾಡದೆ ಇರುತ್ತಾರಾ? ಖಂಡಿತಾ ಮಾತನಾಡುತ್ತಾರೆ. ಆದರೆ ಮೊನ್ನೆಯ ಔತಣಕೂಟದ ವಿಶೇಷ ಏನೆಂದರೆ ಅಲ್ಲಿ ಸೇರಿದ್ದ ಸತೀಶ್ ಜಾರಕಿಹೊಳಿ ಮತ್ತು ಜಿ. ಪರಮೇಶ್ವರ್, ಮಾತಿನ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗಿಂತಲೂ ಹೆಚ್ಚು ಮೌನಮೂರ್ತಿಗಳು. ಈ ಮೂವರು ಅಲ್ಲಿದ್ದ ಪ್ರಮುಖರು, ಮೂವರದೂ ಎದುರಿನವರು ವಾದ ಮಂಡಿಸಲಿ ಎಂಬ ಒಂದೇ ವರಸೆಯಾಗಿದ್ದರಿಂದ ಸಭೆ ಘನಗಾಂಭೀರ್ಯವಾಗಿತ್ತು ಎನ್ನುತ್ತಾರೆ ಬಲ್ಲವರು.

ತಕ್ಷಣಕ್ಕೆ ಅಲ್ಲದಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಷಯ ಬಂದಾಗ ಏನು ಮಾಡಬೇಕು ಎನ್ನುವುದರ ಜೊತೆಗೆ ಇನ್ನೆರಡು ವಿಷಯಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿಟಿ ರವಿ ನಡುವಿನ ವಾಗ್ಯುದ್ಧದ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ಸತೀಶ್ ಜಾರಕಿಹೊಳಿ ಆಕ್ಷೇಪ. ಪೊಲೀಸ್ ಅಧಿಕಾರಿಗಳಿಗೆ ನೇರವಾಗಿ ಅವರೇ ನಿರ್ದೇಶನ ನೀಡುವುದಾದರೆ ನಾನೇಕೆ ಗೃಹಮಂತ್ರಿಯಾಗಿರಬೇಕು ಎನ್ನುವುದು ಪರಮೇಶ್ವರ್ ಅಳಲು. ಇಬ್ಬರ ಗುರಿ ಡಿಕೆ ಶಿವಕುಮಾರ್. ಕಡೆಗೆ ಚರ್ಚೆ ಬಂದು ನಿಂತಿದ್ದು ‘ಒಂದೊಮ್ಮೆ ಡಿಕೆಶಿ ಸಿಎಂ ಆಗಿಬಿಟ್ಟರೆ ಬೇರೆಯವರಿಗೆ ಉಳಿಗಾಲವಿಲ್ಲ’ ಎನ್ನುವಲ್ಲಿಗೆ. ‘ನಿಜಕ್ಕೂ ಅಧಿಕಾರ ಹಂಚಿಕೆ ಆಗಿದೆಯಾ?’ ಎಂಬಲ್ಲಿಗೆ.

ಅಷ್ಟೊತ್ತು ಎಲ್ಲರ ಮಾತು-ಮೌನಗಳಿಗೆ ಕಿವಿ-ಕಣ್ಣಾಗಿ ತಲೆದೂಗುತ್ತಿದ್ದ, ಬೆಂಬಲಿಗರ ನಿಷ್ಠೆಯ ಪರಾಕಾಷ್ಠೆಯನ್ನು ಪರಮಾರ್ಶಿಸುತ್ತಿದ್ದ ಸಿದ್ದರಾಮಯ್ಯ ಅನಿವಾರ್ಯವಾಗಿ ಅಧಿಕಾರ ಹಂಚಿಕೆ ಬಗ್ಗೆ ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ‘ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದಷ್ಟೇ ಹೇಳಿದ್ದೇನೆ’ ಎಂಬ ಆರು ಪದಗಳ ಉತ್ತರವನ್ನಷ್ಟೇ ನೀಡಿದ್ದಾರೆ. ನಿಜಕ್ಕೂ ಅಧಿಕಾರದ ಹಂಚಿಕೆಯ ಬಗ್ಗೆ ಚರ್ಚೆಯಾಗಿದೆಯಾ? ಎಷ್ಟು ವರ್ಷಕ್ಕೆ ಸಿಎಂ ಸ್ಥಾನ ಬಿಟ್ಟುಕೊಡಬೇಕು? ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕಾಗುತ್ತಾ ಅಥವಾ ಬೇರೆಯವರಿಗೂ ಅವಕಾಶ ಇದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಈಗಲೂ ಉತ್ತರ ಕಾಣದೆ ಪರಿತಪಿಸುತ್ತಿವೆ. ಆದರೂ ಅಲ್ಲಿದ್ದವರು ತೃಪ್ತರಾಗಿದ್ದಾರೆ. ಏಕೆಂದರೆ ಸಿದ್ದರಾಮಯ್ಯ ‘ಇವತ್ತಲ್ಲ, ನಾಳೆ ಡಿಕೆಶಿಗೆ ಅಧಿಕಾರ ಬಿಟ್ಟುಕೊಡಬೇಕು’ ಎಂದು ಹೇಳಲಿಲ್ಲ ಎನ್ನುವುದೇ ಅವರಿಗೆ ಸಮಾಧಾನಕರ ವಿಷಯವಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಏನನ್ನೂ ಹೇಳದೆ, ಯಾವ ಸಂದೇಶವನ್ನು ರವಾನೆ ಮಾಡಬೇಕಿತ್ತೋ ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಅಧಿಕಾರ ಹಂಚಿಕೆ ಬಗ್ಗೆ ಹೇಳಬೇಕಾದ್ದು ಯಾರು?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಸ್ಥಾನವನ್ನು ಯಾರಿಗೆ ಕೊಡಬೇಕು? ಯಾವೆಲ್ಲಾ ಷರತ್ತುಗಳನ್ನು ಹಾಕಿ ಕೊಡಬೇಕು ಎಂದು ನಿರ್ಧರಿಸುವ ಸಭೆಯಲ್ಲಿ ಇದ್ದವರು ರಾಹುಲ್ ಗಾಂಧಿ, ಮಲ್ಲಿಕಾರ್ಜನ ಖರ್ಗೆ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್. ನಿಜವಾಗಿಯೂ ಅಧಿಕಾರ ಹಂಚಿಕೆ ಸೂತ್ರ ಯಾವ ಸ್ವರೂಪದಲ್ಲಿದೆ ಎನ್ನುವುದು ಈ ಅರ್ಧ ಡಜನ್ ನಾಯಕರಿಗೆ ಮಾತ್ರ ಗೊತ್ತು. ಇವರ ಪೈಕಿ ಯಾರೊಬ್ಬರೂ ಈವರೆಗೆ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿಲ್ಲ. ಸಿದ್ದರಾಮಯ್ಯ ‘ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತೇನೆ’ ಎಂದಿದ್ದಾರೆಯೇ ಹೊರತು, ‘ಹೈಕಮಾಂಡ್ ನನಗೆ ಐದು ವರ್ಷ ಮುಖ್ಯಮಂತಿಯಾಗಿ ಮುಂದುವರೆಯಲು ಸೂಚಿಸಿದೆ’ ಎಂದು ಹೇಳಿಲ್ಲ. ಈಗಲೂ ಇವರೊಳಗೊಬ್ಬರು ಹೇಳದ ಹೊರತು ಇದು ಬಗೆಹರಿಯುವ ವಿಷಯವಲ್ಲ. ಮಾಧ್ಯಮಗಳು ಲಂಗು-ಲಗಾಮಿಲ್ಲದೆ ವರದಿ ಮಾಡಿ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಬಹುದೇ ಹೊರತು ತಣಿಸಲು ಸಾಧ್ಯವಿಲ್ಲ. ಮೇಲಾಗಿ ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆ ಸೋಲನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಯಾವ ಪ್ರಯೋಗವನ್ನೂ ಮಾಡುವ ಸ್ಥಿತಿಯಲ್ಲಿಲ್ಲ.

ಕೆಪಿಸಿಸಿ ಅಧ್ಯಕ್ಷಗಾದಿ ಲೆಕ್ಕಾಚಾರ!

ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡಿಗೆ ಬೇಡದ ವಿಷಯ. ಹೈಕಮಾಂಡಿಗೆ ಬೇಡವಾದದ್ದೆಲ್ಲಾ ರಾಜ್ಯ ನಾಯಕರಿಗೂ ಬೇಡ ಎಂದೇನಲ್ಲ. ಅವರು ಕೆಪಿಸಿಸಿ ಅಧ್ಯಕ್ಷಗಾದಿ ಮೂಲಕ ಸಾಗಿ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಲು ತಯಾರಿ ನಡೆಸುತ್ತಿದ್ದಾರೆ. ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳೆಂದರೆ ಸತೀಶ್ ಜಾರಕಿಹೊಳಿ ಮತ್ತು ಎಂಬಿ ಪಾಟೀಲ್.

ಕಳೆದ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಅಹಿಂದ ವರ್ಗಗಳು ಕಾಂಗ್ರೆಸ್ ಪಕ್ಷದ ಕೈ ಹಿಡಿದಿವೆ. ಅಹಿಂದ ವರ್ಗಗಳ ವಿಶ್ವಾಸ ಗಳಿಸಿದರೆ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೈಕಮಾಂಡಿಗೂ ಈ ವಿಷಯ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿ ತಾನು ಅಧ್ಯಕ್ಷಗಾದಿಗೆ ಹಕ್ಕು ಚಲಾಯಿಸಲು ಇದೇ ಸಕಾಲ ಎನ್ನುವುದು ಸತೀಶ್ ಜಾರಕಿಹೊಳಿ ಲೆಕ್ಕಾಚಾರ. ಅದೇ ಕಾರಣಕ್ಕೆ ಅವರು ಬೆಂಗಳೂರು-ದೆಹಲಿ ವಿಮಾನದಿಂದ ಕೆಳಗಡೆ ಇಳಿಯುತ್ತಲೇ ಇಲ್ಲ.

ಎಂಬಿ ಪಾಟೀಲ್ ಪ್ರಕಾರ ಮುಂದಿನದು ಲಿಂಗಾಯತರ ಸರದಿ. ಈಗ ಒಕ್ಕಲಿಗ ಡಿಕೆ ಶಿವಕುಮಾರ್, ಇವರ ಹಿಂದೆ ಬ್ರಾಹ್ಮಣ ದಿನೇಶ್ ಗುಂಡೂರಾವ್, ಅವರಿಗೂ ಮುನ್ನ ಪರಿಶಿಷ್ಟ ಜಾತಿಯ ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅಲ್ಲಂ ವೀರಭದ್ರಪ್ಪ ನಂತರ ಅಂದರೆ 21 ವರ್ಷಗಳಿಂದ ಮತ್ತೆ ಲಿಂಗಾಯತರಿಗೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಕೊಡಬೇಕೆನ್ನುವುದು ಅವರ ಪ್ರತಿಪಾದನೆ. ಇದೇ ವಾದ ಇಟ್ಟುಕೊಂಡು ಈಶ್ವರ ಖಂಡ್ರೆ ಕೂಡ ಕನಸು ಕಾಣುತ್ತಿದ್ದಾರಂತೆ.

ಹೈಕಮಾಂಡ್ ಲಿಂಗಾಯರ ಹೆಗಲಿಗೆ ಕೆಪಿಸಿಸಿ ಅಧ್ಯಕ್ಷಗಾದಿ ನೊಗ ಕಟ್ಟಬೇಕು ಎಂಬ ನಿರ್ಧಾರಕ್ಕೆ ಬಂದರೆ ಇನ್ನೊಂದು ಸಮಸ್ಯೆ ಉದ್ಭವಿಸುತ್ತದೆ. ಸಿದ್ದರಾಮಯ್ಯ ತಮ್ಮ ಆಪ್ತ ಎಂಬಿ ಪಾಟೀಲ್ ಪರ ಇದ್ದರೆ ಕಲ್ಯಾಣ ಕರ್ನಾಟಕದ ಲಿಂಗಾಯತ ಮತಬುಟ್ಟಿಯ ಲೆಕ್ಕಾಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಈಶ್ವರ ಖಂಡ್ರೆ ಕಡೆ ನಿಲ್ಲುತ್ತಾರೆ. ಶತಾಯಗತಾಯ ಸಿದ್ದರಾಮಯ್ಯ ಅವರ ಪ್ರತಿನಿಧಿ ಬೇಡ ಎನ್ನುವ ಕಾರಣಕ್ಕೆ ಡಿಕೆ ಶಿವಕುಮಾರ್ ಕೂಡ ಈಶ್ವರ ಖಂಡ್ರೆಗೆ ಜೈ ಎನ್ನುತ್ತಾರೆ. ಸಮಸ್ಯೆ ಬಗೆಹರಿಸಲು ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಮಧ್ಯಸ್ಥಿಕೆ ವಹಿಸಬೇಕಾಗಬಹುದು.

ಮಂತ್ರಿಗಿರಿನೂ ಬೇಕು, ಅಧ್ಯಕ್ಷಗಿರಿನೂ ಬೇಕು

ಇವೆಲ್ಲವನ್ನೂ ಬಿಟ್ಟು ಇನ್ನೊಂದು ಸಮಸ್ಯೆ ಇದೆ. ಕೆಪಿಸಿಸಿ ಕುರ್ಚಿ ಕೇಳುತ್ತಿರುವವರು ಮಂತ್ರಿ ಕುರ್ಚಿ ಬಿಡಲು ಸಿದ್ದರಿಲ್ಲ. ಸ್ವಲ್ಪ ದಿನ ಇರಲಿ, ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾವು ಮಂತ್ರಿ ಸ್ಥಾನದಿಂದ ದೂರವಾಗುತ್ತೇವೆ ಎನ್ನುತ್ತಿದ್ದಾರೆ. ಈ ವಿಷಯದಲ್ಲಿ ಸ್ವಲ್ಪ ಉದಾರವಾಗಿ ಕಾಣುತ್ತಿರುವವರೆಂದರೆ ಸತೀಶ್ ಜಾರಕಿಹೊಳಿ. ಅದೂ, ಯಾವ ಕಾರಣಕ್ಕೂ ವಿಧಾನಸಭಾ ಚುನಾವಣೆಗೂ ಮುನ್ನ ಮತ್ತೆ ಕೆಪಿಸಿಸಿ ಅಧ್ಯಕ್ಷಗಾದಿ ಬದಲಾಯಿಸಬಾರದು. ಮುಂದಿನ ಚುನಾವಣೆಗೆ ನಾನೇ ಟಿಕೆಟ್ ಕೊಡಬೇಕು ಎಂಬ ಷರತ್ತುಗಳ ಮೇಲೆ. ಈ ಮೂವರನ್ನು ಬಿಟ್ಟು ಮತ್ತೊಬ್ಬರಿಗೆ ಅವಕಾಶಗಳು ಸಿಗುವ ಸಾಧ್ಯತೆಗಳು ಕ್ಷೀಣವಾಗಿವೆ. ಜೊತೆಗೆ ಈ ಮೂವರ ಪೈಪೋಟಿಯಿಂದ ಡಿಕೆಶಿ ಸ್ಥಾನ ಸದ್ಯಕ್ಕೆ ಅಭಾದಿತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಧರಣೀಶ್ ಬೂಕನಕೆರೆ

contributor

Similar News