ಸುರಕ್ಷಿತವಾಗಿ ಮರಳಲಿ ಭುವಿಗೆ...
ಗಗನಯಾತ್ರಿ ಭಾರತ ಸಂಜಾತೆ ಅಮೆರಿಕವಾಸಿ ಸುನೀತಾ ವಿಲಿಯಮ್ಸ್ ವಿಶ್ವಕ್ಕೆ ಮೆಚ್ಚು. ಅದರಲ್ಲೂ ಭಾರತಕ್ಕೆ ಸುನೀತಾ ನಮ್ಮವರೇ ಎಂಬ ಭಾವನಾತ್ಮಕ ಸಂಬಂಧವಿದೆ. ತರಗತಿಗಳಲ್ಲಿ ಎಷ್ಟೋ ವಿದ್ಯಾರ್ಥಿಗಳಿಗೆ ಮಾದರಿಯಾಗ ಬಲ್ಲ ಸಾಧಕ ಮಹಿಳೆ ಎಂದು ಜಗದಗಲ ಸಾವಿರಾರು ಶಿಕ್ಷಕರು ಉದಾಹರಿಸುತ್ತಿದ್ದಾರೆ. ಅಂತಹ ಸುನೀತಾ ವಿಲಿಯಮ್ಸ್ ಮತ್ತು ಇನ್ನೊಬ್ಬ ನಾಸಾ ಗಗನಯಾತ್ರಿ ಬುಚ್ ವಿಲ್ಮೋರ್ ಜೂನ್ 5, 2024ರಂದು ಬೋಯಿಂಗ್ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಇವರು 8 ದಿನಗಳ ನಂತರ ಹಿಂದಿರುಗಿ ಬರಬೇಕಿತ್ತು. ಆದರೆ ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಥ್ರಸ್ಟರ್ ವೈಫಲ್ಯಗಳು ಮತ್ತು ಹೀಲಿಯಮ್ ಸೋರಿಕೆಯಿಂದಾಗಿ ಅವರು ಭೂಮಿಗೆ ಹಿಂದಿರುಗುವುದು ವಿಳಂಬವಾಗುತ್ತಿದೆ.
ಬೋಯಿಂಗ್ ಸ್ಟಾರ್‌ಲೈನರ್:
ಇದು ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆ (ಸ್ಪೇಸ್‌ಕ್ರಾಫ್ಟ್), ಅದು ಕ್ರಿವ್ ಮತ್ತು ಕಾರ್ಗೊಗಳನ್ನು (ಇಲ್ಲಿ ಕ್ರಿವ್ ಎಂದರೆ ಗಗನಯಾತ್ರಿಗಳ ಗುಂಪು ಮತ್ತು ಕಾರ್ಗೊ ಎಂದರೆ ಅವರ ಜೊತೆಗಿರುವ ವಸ್ತುಗಳು) ಭೂಮಿಯಿಂದ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಅದೇ ರೀತಿ ಅಲ್ಲಿಂದ ಭೂಮಿಗೆ ಸಾಗಿಸಲು ಸಹಕರಿಸುತ್ತದೆ. ಇದರಲ್ಲಿ 7 ಜನ ಸಿಬ್ಬಂದಿಗೆ ಪಯಣಿಸಲು ಅವಕಾಶವಿದೆ, ಆದರೆ ನಾಸಾ 4 ಜನರಿಗೆ ಮಾತ್ರ ಪಯಣಿಸಲು ಅವಕಾಶ ಮಾಡಿಕೊಡುತ್ತದೆ, ಇದು ಅಂತರ್‌ರಾಷ್ಟ್ರೀಯ ಬಹ್ಯಾಕಾಶದೊಂದಿಗೆ 7 ತಿಂಗಳ ಕಾಲ ಡಾಕ್ (ರ್ಯಾಡಾರ್ ವ್ಯವಸ್ಥೆಯ ಮೂಲಕ ಬಾಹ್ಯಾಕಾಶ ಕೇಂದ್ರದೊಂದಿಗೆ ನೌಕೆ ಸಂಪರ್ಕ ಹೊಂದಿರುತ್ತದೆ ಎಂದು ಅರ್ಥ) ಆಗಿರುತ್ತದೆ.
ಹೀಲಿಯಂ ಸೋರಿಕೆ: ಜೂನ್ 5ರಂದು ಟೇಕ್‌ಆಫ್ ಆಗಿದ್ದ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ 8 ದಿನಗಳ ನಂತರ ಹಿಂದಿರುಗಿ ಬರಲು ಯತ್ನಿಸಿತು ಆದರೆ ಆ ನೌಕೆಯು ಹೀಲಿಯಂ ಸೋರಿಕೆ ಮತ್ತು ಬಹು ಥ್ರಸ್ಟರ್ ವೈಫಲ್ಯಗಳ ಕಾರಣ ಆ ಇಬ್ಬರು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ 6ರಂದು ಇವರು ಸ್ಪೇಸ್ ಎಕ್ಸ್ ಕ್ರ್ಯೂ ಡ್ರ್ಯಾಗನ್‌ನಲ್ಲಿ ಹಿಂದಿರುಗುತ್ತಾರೆ ಎಂದು ನಾಸಾ ಹೇಳಿತ್ತು, ಆದರೂ ಅದು ಸಾಧ್ಯವಾಗಲಿಲ್ಲ. ನೌಕೆಯಲ್ಲಿ ಹೀಲಿಯಂ ಇಂಧನವನ್ನು ಥ್ರಸ್ಟರ್‌ಗಳಿಗೆ ತಳ್ಳಲು ಸಹಕರಿಸುತ್ತದೆ ಮಾತ್ರವಲ್ಲ ಭೂಮಿಯ ವಾತಾವರಣಕ್ಕೆ ಹಿಂದಿರುಗುವಲ್ಲಿ ಬಹು ಮುಖ್ಯಪಾತ್ರವಹಿಸುತ್ತದೆ. ಇದಲ್ಲದೆ ಹೀಲಿಯಂ ನೌಕೆಯಲ್ಲಿ ಬೇರೆ ಬೇರೆ ಸೂಕ್ಷ್ಮ ಸೋರಿಕೆಗಳನ್ನು ಕಂಡುಹಿಡಿಯಲು ಸಹಕರಿಸುತ್ತದೆ. ಒಂದು ವೇಳೆ ಅತಿಯಾಗಿ ಹೀಲಿಯಂ ಸೋರಿಕೆಯಾದರೆ ಥ್ರಸ್ಟರ್‌ಗಳು ಸರಿಯಾಗಿ ಕೆಲಸ ನಿರ್ವಹಿಸಲಾರವು. ಹೀಲಿಯಂ ರಾಕೆಟ್‌ಗೆ ಇಂಧನವನ್ನು ಅವಿರತವಾಗಿ ಹರಿಯುವಂತೆ ಮಾಡುತ್ತದೆ. ಇಂಧನದ ಟ್ಯಾಂಕಿನಲ್ಲಿ ಇಂಧನ ಖಾಲಿಯಾದಂತೆಲ್ಲಾ ಉಂಟಾಗುವ ನಿರ್ವಾತ ಪ್ರದೇಶವನ್ನು ಹೀಲಿಯಂ ತುಂಬಿಕೊಂಡು ಒತ್ತಡ ಉಂಟುಮಾಡುವಲ್ಲಿ ಯಶಸ್ವಿಯಾಗುತ್ತದೆ. ಹೀಲಿಯಂ ಸೋರಿಕೆಯ ಹಿನ್ನೆಲೆಯಲ್ಲಿ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವುದು ವಿಳಂಬವಾಗುತ್ತಿದೆ.
ಆರೋಗ್ಯ ಪರಿಸ್ಥಿತಿ:
ಮೈಕ್ರೋ ಗ್ರಾವಿಟಿ, ವಿಕಿರಣ ಸೂಸುವಿಕೆ, ನಿಗದಿಪಡಿಸಿದ ಜೀವನ ವಿಧಾನ ಮತ್ತು ಐಸೋಲೇಶನ್ ಒಳಗೊಂಡ ಅನನ್ಯ ಪರಿಸರದಲ್ಲಿ ಸಮಯ ಕಳೆಯುವುದು ಎಂದರೆ ಕಷ್ಟದಾಯಕ, ಇಂತಹ ಪರಿಸ್ಥಿತಿಯು ಗಗನಯಾತ್ರಿಗಳ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಮಾನವನ ದೇಹದ ಪ್ರತಿಯೊಂದು ವ್ಯವಸ್ಥೆಯು ಹಾನಿಗೊಳಗಾಗ ಬಹುದು. ಅಲ್ಪಕಾಲಿಕ ಬದಲಾವಣೆ ದೇಹದಲ್ಲಿ ಉಂಟಾಗುವಿಕೆಯ ಜೊತೆಗೆ ದೀರ್ಘಾವಧಿಯ ಅನಾರೋಗ್ಯ ಪರಿಣಾಮಗಳು ಏರ್ಪಡುತ್ತವೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಜೀರೋ ಅಥವಾ ಅತೀ ಕಡಿಮೆ ಇರೋದರಿಂದ ನಿರಂತರವಾದ ಎಳೆತವಿಲ್ಲದೆ ದೇಹದಲ್ಲಿನ ದ್ರವಗಳ ಮೇಲೆ ಅದರಲ್ಲೂ ರಕ್ತದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ರಕ್ತದ ಒತ್ತಡದಲ್ಲಿ ಬದಲಾವಣೆಗಳುಂಟಾಗಬಹುದು. ಈ ಮೈಕ್ರೋಗ್ರಾವಿಟಿಯು ಸ್ನಾಯು ಕ್ಷೀಣತೆ ಮತ್ತು ಮೂಳೆಯ ನಷ್ಟವನ್ನು ಉಂಟುಮಾಡುತ್ತದೆ. ದ್ರವದ ವಿತರಣೆಯು ದೇಹದ ಎಲ್ಲಭಾಗಗಳಿಗೆ ಸರಿಯಾಗಿ ಹರಿದು ಹೋಗದ ಕಾರಣ ಮೂತ್ರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ತಿಳಿಸುತ್ತಾರೆ. ಮಾತ್ರವಲ್ಲ ದೃಷ್ಟಿ ದೋಷವೂ ಉಂಟಾಗಬಹುದು.
ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ಸುನೀತಾ ವಿಲಿಯಮ್ಸ್ ‘‘ನನ್ನ ದೇಹವು ಸ್ವಲ್ಪ ಬದಲಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಅದೇ ತೂಕವನ್ನು ಹೊಂದಿದ್ದೇನೆ’’ ಎಂದಿದ್ದಾರೆ. ಆದರೂ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್‌ರವರ ಆರೋಗ್ಯದ ಬಗ್ಗೆ ವಿಶ್ವದಾದ್ಯಂತ ಕಾಳಜಿ ಹೆಚ್ಚುತ್ತಿದೆ.
ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್‌ರವರು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಈ ಫೆಬ್ರವರಿ ತಿಂಗಳಲ್ಲಿ ಸ್ಪೇಸ್ ಎಕ್ಸ್ ಡ್ರ್ಯಾಗನ್ ಸ್ಪೇಸ್ ಕ್ರಾಫ್ಟ್ ಮುಖಾಂತರ ಭೂಮಿಗೆ ಹಿಂದಿರುಗಲಿದ್ದಾರೆ ಎಂದು ನಾಸಾ ವರದಿ ಮಾಡಿದೆ. ಕಾದು ನೋಡಬೇಕಿದೆ. ಏನೇ ಆಗಲಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಅದಷ್ಟು ಬೇಗ ಬರಲಿ ಎಂಬುದೇ ಎಲ್ಲರ ಆಶಯ.
ಗಗನಯಾತ್ರಿಗಳ ಸಂಶೋಧನೆ
ನಾಸಾ ಬಿಡುಗಡೆ ಮಾಡಿದ ವರದಿಯ ಪ್ರಕಾರ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಭಾರವಿಲ್ಲದ (ಗುರುತ್ವಾಕರ್ಷಣೆ ಇಲ್ಲದ, ಬಾಹ್ಯಾಕಾಶದಲ್ಲಿ) ಪರಿಸರದಲ್ಲಿ ಸಸ್ಯಗಳಿಗೆ ಪರಿಣಾಮಕಾರಿಯಾಗಿ ನೀರುಣಿಸುವ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅತೀ ಸ್ವಲ್ಪ ಗುರುತ್ವ (ಮೈಕ್ರೋಗ್ರಾವಿಟಿ) ಇರುವ ಸ್ಥಳದಲ್ಲಿ ವಿವಿಧ ಗಾತ್ರದ ಸಸ್ಯಗಳು ನೀರನ್ನು ಹೇಗೆ ಹೀರಿಕೊಳ್ಳುತ್ತವೆ ಎಂಬುದನ್ನು ಪರೀಕ್ಷಿಸುತ್ತಿದ್ದಾರೆ. ಅಲ್ಲಿ ಈ ಇಬ್ಬರು ಗಗನಯಾತ್ರಿಗಳು ತಮ್ಮ ಹೆಚ್ಚಿನ ಸಮಯವನ್ನು ಮೈಕ್ರೋಗ್ರಾವಿಟಿಯ ತೂಕವಿಲ್ಲದ ಪರಿಸರದಲ್ಲಿ ಮಣ್ಣಿಲ್ಲದೆ ಸಸ್ಯಗಳನ್ನು ನೀರುಣಿಸಿ ಬೆಳೆಸಬಹುದೇ?, ಹೈಡ್ರೋಫೋನಿಕ್ಸ್ ಮತ್ತು ವಾಯುಪರಿಚಲನೆ ತಂತ್ರಗಳನ್ನು ಬಳಸಿಕೊಂಡು ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ಆವಾಸಸ್ಥಾನಗಳಲ್ಲಿ ವಿವಿಧ ಸಸ್ಯಗಳನ್ನು ಪರಿಣಾಮಕಾರಿಯಾಗಿ ಪೋಷಿಸುವುದು ಹೇಗೆ ಎಂಬುದನ್ನು ತಿಳಿಯಲು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ದ್ರವ ಭೌತಶಾಸ್ತ್ರವನ್ನು ಬಳಸಿಕೊಂಡಿದ್ದಾರೆ. ಜೊತೆಗೆ ಬಾಹ್ಯಾಕಾಶದಲ್ಲಿ ಮಾನವ ದೇಹವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಮುಂದಿನ ಯೋಜನೆಗಳಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ದೀರ್ಘಾವಧಿಯ ಕಾಲ ತೂಕವಿಲ್ಲದ (ಜೀರೋಗ್ರಾವಿಟಿ) ಕಾರಣ ಗಗನಯಾತ್ರಿಗಳ ಮೇಲೆ ಬೀರುವ ಪರಿಣಾಮವನ್ನು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.