ಅಸ್ಪೃಶ್ಯತೆ: ಕೊನೆಯಿಲ್ಲದ ನೋವು

ಭಾರತೀಯ ಸಾಮಾಜಿಕ ವ್ಯವಸ್ಥೆಯು ಶುದ್ಧತೆ ಮತ್ತು ಮಾಲಿನ್ಯದ ಚೌಕಟ್ಟಿನಲ್ಲಿ ರಚನೆಯಾಗಿದೆ. ಅಶುದ್ಧ ಜಾತಿಯ ಭವಿಷ್ಯವನ್ನು ಯಾವುದೇ ಸಂದರ್ಭದಲ್ಲಿ ಬದಲಾಯಿಸಲಾಗುವುದಿಲ್ಲ. ನಂತರ ಅವನು ತನ್ನ ಜಾತಿಯ ವಲಯದೊಳಗೆ ಶುದ್ಧತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ತನ್ನನ್ನು ತಾನು ನಿರ್ಬಂಧಿಸಿಕೊಳ್ಳುತ್ತಾನೆ. ಅಂತಹ ಜಾತಿಗಳ ಉದ್ದನೆಯ ಏಣಿಯೇ ಇದೆ.

Update: 2025-01-05 06:09 GMT

ಭಾರತದ ಜನಸಂಖ್ಯೆಯ ಶೇ. 80ರಷ್ಟಿರುವ ಹಿಂದೂ ಧರ್ಮ, ಅದರ ಕಠಿಣ ಸಾಮಾಜಿಕ ಕಟ್ಟು ಕಟ್ಟಳೆಗಳೊಂದಿಗೆ ದೈನಂದಿನ ಜೀವನವನ್ನು ನಿಯಂತ್ರಿಸುತ್ತದೆ. ಅದರ ಕಟ್ಟು ನಿಟ್ಟಿನಲ್ಲಿ ಅಸ್ಪಶ್ಯ ಪೋಷಕರು ಅಶುದ್ಧ ಎಂದು ಹೇಳುವ ಅಸ್ಪಶ್ಯ ಮಗುವಿಗೆ ಜನ್ಮ ನೀಡುತ್ತಾರೆ.

ಅಸ್ಪಶ್ಯರು ಸಮಾಜದ ಅಶುಚಿಯಾದ ಕೆಲಸವನ್ನು ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತದೆ. ಅದು ಹಿಂದೂ ಕಾನೂನಿನಲ್ಲಿ ನಿರೂಪಿಸಿರುವಂತೆ ರಕ್ತ, ಮಲವಿಸರ್ಜನೆ ಮತ್ತು ಇತರ ದೈಹಿಕ ಅಶುದ್ಧತೆಗಳನ್ನು ಒಳಗೊಂಡಿರುತ್ತದೆ. ಅಸ್ಪಶ್ಯರು ಶವಸಂಸ್ಕಾರ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಮೃತ ಪ್ರಾಣಿಗಳನ್ನು ರಸ್ತೆಗಳಿಂದ ತೆರವು ಮಾಡುವುದು ಮತ್ತು ಗಟಾರಗಳನ್ನು ಸ್ವಚ್ಛಗೊಳಿಸುವುದು. ಈ ಉದ್ಯೋಗಗಳು ಅಸ್ಪಶ್ಯತೆ ಸ್ಥಿತಿಯ ತಲೆಮಾರುಗಳಿಂದ ಮುಂದುವರಿದು ಬರುತ್ತಿವೆ. ಹೆಚ್ಚಿನ ಸಂಖ್ಯೆಯ ಅಸ್ಪಶ್ಯರು ಸ್ವಚ್ಛ ಕೆಲಸ ಎಂದು ಹೇಳಲಾಗುವ ಭೂ ಮಾಲಕರಲ್ಲಿ ಕಡಿಮೆ ವೇತನದ ಕೃಷಿ ಕೆಲಸಗಳನ್ನು ಮಾಡುತ್ತಾರೆ. ಅದೂ ಸಹ ಅಶುದ್ಧ ವೆಂದು ಪರಿಗಣಿಸಲಾಗುತ್ತದೆ. ಬಹಿರಂಗವಾಗಿ ಮುಕ್ತ ಸಮಾಜದಲ್ಲಿ ಅಸ್ಪಶ್ಯರು ಯಾವ ತಾರತಮ್ಯವಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗದ ರೀತಿಯಲ್ಲಿ ತೊಳಲಾಡುತ್ತಿದ್ದಾರೆ.

ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರ ಸುಧಾರಣಾ ಚಳವಳಿಗಳ ಪರಿಣಾಮವಾಗಿ ತಾರತಮ್ಯದ ಅತ್ಯಂತ ಸಹಜ ಸ್ಥಿತಿಯ ಮತ್ತು ಕಣ್ಣಿಗೆ ಕಾಣುವಂತಿರುವ ಸಂಪ್ರದಾಯಗಳು ಕಣ್ಮರೆಯಾಗಿವೆ ಎಂದು ಅನೇಕ ಜನರು ದೃಢ ಪಡಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇದು ನಿಜ. ಅಸ್ಪಶ್ಯರು ತಮ್ಮ ನೆರಳು ಮೇಲ್ಜಾತಿಯ ವ್ಯಕ್ತಿಯನ್ನು ಸ್ಪರ್ಶಿಸಬಹುದೆಂದು ಅವರು ಬರುತ್ತಿರುವ ಮಾರ್ಗದ ಬಗ್ಗೆ ಎಚ್ಚರಿಸಲು ಗಂಟೆಗಳನ್ನು ಕಟ್ಟಿಕೊಳ್ಳುವುದು ಮತ್ತು ಅವರ ಉಗುಳು ನೆಲವನ್ನು ಕಲುಷಿತಗೊಳಿಸದಂತೆ ಬಕೆಟ್ ಅನ್ನು ಹಿಡಿದು ಹೋಗಬೇಕಾಗಿತ್ತು. ಅಸ್ಪಶ್ಯರು ಶಾಲೆಗಳನ್ನು ಪ್ರವೇಶಿಸಲು ಅಥವಾ ಮೇಲ್ಜಾತಿಯ ವ್ಯಕ್ತಿಯ ಬಳಿ ಬೆಂಚ್ ಮೇಲೆ ಕುಳಿತುಕೊಳ್ಳಲೂ ಸಾಧ್ಯವಿಲ್ಲವಾಗಿತ್ತು. ಈ ಅನಿಷ್ಟಗಳೆಲ್ಲ ಬಹುತೇಕ ಸುಧಾರಿಸಿವೆ.

ಆದರೆ ಪುಸ್ತಕಗಳ ಮೇಲೆ ಎಲ್ಲಾ ಕಾನೂನುಗಳು ಮತ್ತು ನಿಬಂಧನೆಗಳು ಉಳಿದಿವೆ. ಜಾತೀಯ ಕಠಿಣ ಹೃದಯ ಮಾತ್ರ ಅಚಲವಾಗಿ ಉಳಿದಿದೆ.

ಭಾರತದಲ್ಲಿ ಅಜಮಾಸು ಇನ್ನೂರು ದಶಲಕ್ಷ ಅಸ್ಪಶ್ಯರಿದ್ದಾರೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಪ್ರಜಾಪ್ರಭುತ್ವವನ್ನು ಪೊರೆಯುವ ದೇಶ, ಸಾಫ್ಟ್‌ವೇರ್ ಉದ್ಯಮಗಳು, ಸಂವಹನ ಉಪಗ್ರಹಗಳು ಪರಮಾಣು ಶಕ್ತಿ ಮತ್ತು ಪರಮಾಣು ಬಾಂಬ್‌ಗಳನ್ನು ತಯಾರಿಸುವ ಯೋಜನೆಗಳಿಂದ ಸಜ್ಜು ಗೊಂಡಿರುವ ಆಧುನಿಕ ಶಕ್ತಿಯನ್ನು ಹೊಂದಿದೆ.

ಜಾತಿ-ಸಮುದಾಯಗಳ ಕೆಳಗೆ ಅತೀ ಕೆಳವರ್ಗದ ಇತರ ಜಾತಿಗಳು ಅಸ್ತಿತ್ವದಲ್ಲಿವೆ. ಪ್ರದೇಶಗಳನ್ನು ಅವಲಂಬಿಸಿ ಭಂಗಿಗಳು, ಸಿಕ್ಕಲಿಗರು ಎಂದು ಅವರನ್ನು ಕರೆಯಲಾಗುತ್ತದೆ. ಅವರು ಕೈಯಿಂದ ಕಸ ಗುಡಿಸುವರು. ಹಳ್ಳಿ ಮತ್ತು ನಗರಗಳಲ್ಲಿ ಅವರು ಸಾರ್ವಜನಿಕ ಶೌಚಾಲಯಗಳಿಂದ ಮಲವನ್ನು ಕೈಗಾಡಿಯಲ್ಲಿ ಹೊರ ಸಾಗಿಸುತ್ತಾರೆ. ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಖಾಸಗಿ ಮನೆಗಳು ಮತ್ತು ಬೀದಿಗಳಿಂದ ಪ್ರಾಣಿಗಳ ಪಿಚಿಕೆ ಗುಡಿಸುವುದನ್ನು ಬಹುತೇಕ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಆದರೆ ಕಾನೂನನ್ನು ಜಾರಿಗೊಳಿಸುವಲ್ಲಿ ಮಾತ್ರ ರಾಜ್ಯಗಳು ವಿಫಲವಾಗಿವೆ. ಪುರಸಭೆಗಳು ಬಹಿರಂಗವಾಗಿ ಜಲಗಾರರನ್ನು ನೇಮಿಸಿ ಕೊಳ್ಳುತ್ತವೆ. ಬಹುತೇಕ ಅವರು ಮಹಿಳೆಯರಾಗಿರುತ್ತಾರೆ. ಸಾಮಾನ್ಯವಾಗಿ ದಿನವೊಂದಕ್ಕೆ ಒಂದು ಡಾಲರ್‌ನಷ್ಟೂ ಪಗಾರ ಕೊಡುವುದಿಲ್ಲ. ಇನ್ನಿತರ ಅಸ್ಪಶ್ಯರು ದೈಹಿಕವಾಗಿ ಕೆಲಸ ಮಾಡುವ ಜಲಗಾರರಿಂದ ಆಹಾರ ಅಥವಾ ನೀರನ್ನೂ ಸ್ವೀಕರಿಸುವುದಿಲ್ಲ.

ಭಾರತೀಯ ಸಾಮಾಜಿಕ ವ್ಯವಸ್ಥೆಯು ಶುದ್ಧತೆ ಮತ್ತು ಮಾಲಿನ್ಯದ ಚೌಕಟ್ಟಿನಲ್ಲಿ ರಚನೆಯಾಗಿದೆ. ಅಶುದ್ಧ ಜಾತಿಯ ಭವಿಷ್ಯವನ್ನು ಯಾವುದೇ ಸಂದರ್ಭದಲ್ಲಿ ಬದಲಾಯಿಸಲಾಗುವುದಿಲ್ಲ. ನಂತರ ಅವನು ತನ್ನ ಜಾತಿಯ ವಲಯದೊಳಗೆ ಶುದ್ಧತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ತನ್ನನ್ನು ತಾನು ನಿರ್ಬಂಧಿಸಿಕೊಳ್ಳುತ್ತಾನೆ. ಅಂತಹ ಜಾತಿಗಳ ಉದ್ದನೆಯ ಏಣಿಯೇ ಇದೆ. ಇದಲ್ಲದೆ ಜಾತಿ ವಿಭಾಗದ ಒಳಗೆ ವಿವಿಧ ಪದರಗಳಿವೆ. ಶುದ್ಧತೆ ಮತ್ತು ಮಾಲಿನ್ಯಕ್ಕೆ ಸಂಬಂಧಿಸಿದ ಮಾನದಂಡಗಳು ಮೇಲ್ಮುಖವಾದ ಜಾತಿಗಳಿಂದ ಕೆಳಕ್ಕೆ ಇಳಿಮುಖವಾಗುತ್ತವೆ. ಅಂತಹ ಪ್ರತಿಯೊಂದು ಜಾತಿಯೂ ತಮ್ಮ ತುಲನಾತ್ಮಕ ಉನ್ನತ ಸಾಮಾಜಿಕ ಸ್ಥಾನಮಾನವನ್ನು ಸಾಬೀತುಪಡಿಸಲು ಕೆಲವು ಇತರ ಜಾತಿಗಳು ಅಂದರೆ ತಮ್ಮ ಕೆಳಗೆ ಇರುವ ಜಾತಿಗಳು ಇವೆ ಎಂದು ಎದುರು ನೋಡುತ್ತವೆ.

ಪ್ರಸಿದ್ಧ ಚಿಂತಕ ಮತ್ತು ಬರಹಗಾರ ಖುಶ್ವಂತ್ ಸಿಂಗ್ ಗಮನಿಸಿದಂತೆ ಹಿಂದೂ ಎಲ್ಲ ಧರ್ಮಗಳಿಗಿಂತ ಅತ್ಯಂತ ಸೈರಣೆ ಉಳ್ಳದ್ದಾಗಿದೆ ಎಂಬುದು ಅಸತ್ಯ. ಅಸತ್ಯ ಏಕೆ ಅಂದರೆ ಆ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯು ಹರಿಜನರನ್ನು ಸಾಮಾಜಿಕ ಲೆಕ್ಕಾಚಾರದಿಂದ ಕೆಳಮಟ್ಟಕ್ಕೆ ಇಳಿಸುತ್ತದೆ. ಶತಮಾನಗಳಿಂದಲೂ ವರ್ಣಭೇದ ನೀತಿಯ ಈ ಕೆಟ್ಟ ರೂಪವು ನಮ್ಮ ಸಾಮಾಜಿಕ ಪ್ರಜ್ಞೆಯ ಪ್ರಮುಖ ಅಂಶಗಳಲ್ಲಿ ತನ್ನನ್ನು ತಾನು ಆಳವಾಗಿ ಅಳವಡಿಸಿಕೊಂಡಿದೆ. ಅವರು ಮತ್ತೊಂದು ಧಾರ್ಮಿಕ ನಂಬಿಕೆಗೆ ಮತಾಂತರಗೊಳ್ಳುವ ಮೂಲಕ ಅದರ ಸಂಕೋಲೆಗಳಿಂದ ತಪ್ಪಿಸಿಕೊಳ್ಳುತ್ತದೆಯಾದರೂ ಅದು ಕೂಡ ನಿರರ್ಥಕ ಗೊಳ್ಳುವುದು. ಬೌದ್ಧ ಧರ್ಮವು ಜಾತಿ ವ್ಯವಸ್ಥೆಯನ್ನು ಗುರುತಿಸುವುದಿಲ್ಲ. ಆದರೆ ಬೌದ್ಧರಲ್ಲಿ ಜಾತಿ ತಾರತಮ್ಯ ಅಸ್ತಿತ್ವದಲ್ಲಿದೆ. ಇಸ್ಲಾಮ್ ಧರ್ಮವು ಜಾತಿ ರಹಿತ ಭ್ರಾತೃತ್ವ ಎಂದು ಪ್ರತಿಪಾದಿಸುತ್ತದೆ. ಇಸ್ಲಾಮ್‌ಗೆ ಮತಾಂತರಗೊಂಡರೆ ಕೆಲವೆಡೆ ಅವರನ್ನು ‘ಪೆರಿಯ’ ಎಂದು ಪರಿಗಣಿಸಲಾಗುತ್ತಿದೆ. ತಮ್ಮದೇ ಆದ ಗುರುದ್ವಾರಗಳೊಂದಿಗೆ ಸಿಖ್ ಹರಿಜನರ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾರೆ. ಬೌದ್ಧರು, ಮುಸ್ಲಿಮರು ಮತ್ತು ಸಿಖ್ಖರು ಉನ್ನತ ಜಾತಿ ಮತ್ತು ಕೆಳಜಾತಿಗಳ ನಡುವಿನ ಅಂತರ್ ವಿವಾಹಗಳ ಬಗೆಗೆ ಬಹುತೇಕ ತಿಳಿದಿಲ್ಲ.

ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ‘‘ನಾವು ಒಂದು ರಾಷ್ಟ್ರವೆಂದು ನಂಬುವಾಗ ನಾವು ಒಂದು ದೊಡ್ಡ ಭ್ರಮೆಯಲ್ಲಿದ್ದೇವೆ ಎಂದು ನಾನು ಅಭಿಪ್ರಾಯ ಪಟ್ಟಿದ್ದೇನೆ, ಹಲವಾರು ಸಾವಿರ ಜಾತಿಗಳಾಗಿ ವಿಭಜಿಸಲ್ಪಟ್ಟ ಜನರಿರುವ ಅದು ಹೇಗೆ ರಾಷ್ಟ್ರವಾಗುತ್ತದೆ? ಜಾತಿಗಳು ರಾಷ್ಟ್ರ ವಿರೋಧಿಗಳು. ಮೊದಲಿಗೆ, ಅವರು ಸಾಮಾಜಿಕ ಜೀವನದಲ್ಲಿ ಪ್ರತ್ಯೇಕತೆಯನ್ನು ತರುತ್ತಾರೆ, ಏಕೆಂದರೆ ಅವರು ಜಾತಿ ಮತ್ತು ಜಾತಿಗಳ ನಡುವೆ ಅಸೂಯೆ ಮತ್ತು ವಿರೋಧವನ್ನು ಉಂಟು ಮಾಡುತ್ತಾರೆ. ನಾವು ವಾಸ್ತವದಲ್ಲಿ ರಾಷ್ಟ್ರವಾಗಲೂ ಬಯಸಿದರೆ ಈ ತೊಂದರೆಗಳನ್ನು ನಾವು ಮೊದಲು ನಿವಾರಿಸಿಕೊಳ್ಳಬೇಕು.’’ ಎಂದಿದ್ದರು.

ಜಾತಿ ಪ್ರಜ್ಞೆ ಎಷ್ಟು ಆಕ್ರಮಣಶೀಲ ಮತ್ತು ಆಳವಾಗಿ ಬೇರೂರಿದೆ ಎಂದರೆ ಅದು ಭಾರತೀಯ ಸಾಮಾಜಿಕ ಜೀವನದ ಪ್ರತಿಯೊಂದು ಹಂತದಲ್ಲೂ ಕಂಡು ಬರುತ್ತದೆ. ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಡಾ. ಐ.ಜಿ. ಪಟೇಲ್ ಒಮ್ಮೆ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ಅವರು ಗುಜರಾತಿನ ಸಣ್ಣ ಹಳ್ಳಿ ಒಂದರಲ್ಲಿ ಯಾವುದೋ ಬ್ರಾಹ್ಮಣರ ಮನೆಗೆ ಭೇಟಿ ನೀಡಿದಾಗ, ಅವರ ಜಾತಿಯ ಹಿನ್ನೆಲೆಯ ಕಾರಣ ಅವರಿಗೆ ಬೇರೊಂದು ಲೋಟದಲ್ಲಿ ಚಹ ನೀಡಲಾಯಿತು ಎಂದು ಬೇಸರಿಸಿಕೊಂಡಿದ್ದರು.

ಅಂದರೆ ಸಾಮಾಜಿಕ ಕ್ರಮದಲ್ಲಿ ಬ್ರಾಹ್ಮಣರಿಗಿಂತ ಅವರು ಕಡಿಮೆ ಎಂದು ಪರಿಗಣಿಸಲಾಗಿದೆ. ಇದು ಪಟೇಲರ ಅನುಭವವಾಗಿದ್ದು, ಇದು ಸಾಮಾಜಿಕ ಶ್ರೇಣಿಯಲ್ಲಿ ಮೇಲಿನ ಸ್ಥಾನ ಪಡೆದಿದೆ. ಆದರೆ ಇಡೀ ರಾಷ್ಟ್ರ ಹೆಮ್ಮೆ ಪಡುವಂತಹ ವಿಶ್ವ ಪ್ರಸಿದ್ಧ ವ್ಯಕ್ತಿತ್ವವನ್ನು ಹೊಂದಿದ್ದವರಿಗೂ ಜಾತೀಯತೆಯ ಕಹಿ ಅನುಭವ ಎಂಬುದು ಭಾರತೀಯ ಸಾಮಾಜಿಕ ಕ್ರೂರ ವ್ಯವಸ್ಥೆಗೆ ಹಿಡಿದ ಕನ್ನಡಿ.

ಇತ್ತೀಚೆಗೆ ನಿಧನರಾದ ಚಿಂತಕ ವಿ.ಟಿ. ರಾಜಶೇಖರ್ ಅವರು ತಮ್ಮ ‘ಮೆರಿಟ್ಸ್ ಮೈ ಫೂಟ್’ ಪುಸ್ತಕದಲ್ಲಿ ‘ಮನುಷ್ಯನ ಅಮಾನವೀಯತೆಯನ್ನು ಅತ್ಯಂತ ನಗ್ನ ರೂಪದಲ್ಲಿ ನೋಡಬೇಕೆಂದರೆ ವರ್ಣಭೇದ ನೀತಿ ಮತ್ತು ಅಸಮಾನತೆಯ ಮೂಲ ನೆಲೆಯಾದ ಭಾರತಕ್ಕೆ ಬರಬೇಕು’ ಎಂದು ಬರೆದಿದ್ದಾರೆ.

ರಾಣೆ ಆಯೋಗದ ಸದಸ್ಯ ಡಾ. ಐ.ಪಿ. ದೇಸಾಯಿ ತಮ್ಮ ಹಿಂದುಳಿದ ವರ್ಗಗಳ ಟಿಪ್ಪಣಿಯೊಂದರಲ್ಲಿ ದಾಖಲಿಸಿರುವಂತೆ- ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ತನ್ನ ಹಿಂದಿನ ಎಲ್ಲಾ ಪರೀಕ್ಷೆಯಲ್ಲಿ ಸ್ಥಿರವಾದ ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದರೂ ತನ್ನ ಮೊದಲ ವರ್ಷದ ಎಂಬಿಬಿಎಸ್‌ನಲ್ಲಿ ಪದೇ ಪದೇ ಅನುತ್ತೀರ್ಣನಾದ ಮೇಲೆ, ತನ್ನ ಉಪನಾಮವನ್ನು ಬದಲಾಯಿಸಿಕೊಂಡು ಪರೀಕ್ಷೆಗೆ ಹಾಜರಾಗಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ತೇರ್ಗಡೆ ಹೊಂದುತ್ತಾನೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅದೇ ಹುಡುಗ ಅಂತಿಮ ಎಂಬಿಬಿಎಸ್ ಪರೀಕ್ಷೆಯ ಶಸ್ತ್ರ ಚಿಕಿತ್ಸೆಯ ಪತ್ರಿಕೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದನು! ವೈದ್ಯಕೀಯದಂಥ ಉದಾತ್ತ ವೃತ್ತಿಗಳಿಗೆ ಸಂಬಂಧಿಸಿದ ವಿದ್ಯಾವಂತ ಜನರಲ್ಲಿ ಜಾತಿ ದ್ವೇಷವನ್ನು ತುಂಬಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಇಂತಹ ಅನೇಕ ನಿದರ್ಶನಗಳನ್ನು ಪಟ್ಟಿ ಮಾಡಬಹುದು.

ಜಾತಿ ವ್ಯವಸ್ಥೆಯ ನಿಮಿತ್ತ, ಭಾರತದಲ್ಲಿ ಅಸ್ಪಶ್ಯರು ಮತ್ತು ತಳ ಸಮುದಾಯದವರನ್ನು ಮನುವಾದಿ ಮೇಲ್ಜಾತಿ ವರ್ಗದವರು ಎಲ್ಲಾ ವಿಧದಲ್ಲೂ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಆಶ್ಚರ್ಯ ನೀಡುವುದು. ಏಕೆಂದರೆ, ಅಂಥವರನ್ನು ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿರುವುದು ಐತಿಹಾಸಿಕ ಸತ್ಯ. ಮೇಲೆ ನೀಡಿರುವ ಪ್ರಸಂಗಗಳು ಕೆಲವು ಉದಾಹರಣೆಗಳಷ್ಟೇ. ಇಂದಿಗೂ ಭಾರತದಲ್ಲಿ ಅದರಲ್ಲೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಅಸ್ಪಶ್ಯ ಮತ್ತು ತಳ ಸಮುದಾಯಗಳ ಮೇಲೆ ನಡೆಯುತ್ತಿರುವ ಜಾತಿ ದೌರ್ಜನ್ಯ, ಲೈಂಗಿಕ ಕಿರುಕುಳ, ಪ್ರಾಣ ಹತ್ಯೆ ಮಡಿಲ ಮೀಡಿಯಾದ ಕಾರಣ ಎಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ.

ಕಳೆದ ಹತ್ತು ವರ್ಷಗಳಲ್ಲಿ ವರದಿಯಾಗಿರುವ ಇಂಥ ದುಷ್ಕೃತ್ಯಗಳು ಸಾವಿರ ಸಾವಿರ ಇವೆ. ಬದುಕೇ ಬೇಡ ಎನ್ನುವಷ್ಟು ಮೇಲ್ಜಾತಿ ಕಿರುಕುಳದಿಂದ, ಅಸ್ಪಶ್ಯರು ತಮ್ಮ ಮೇಲೆ ಆಗಿರುವ ದೈಹಿಕ ದೌರ್ಜನ್ಯಗಳನ್ನು ಭಯದಿಂದ ಹೇಳಿಕೊಳ್ಳಲು ಹಿಂಜರಿಯುವರು. ಇಂಥ ಪ್ರಕರಣಗಳ ಬಗ್ಗೆ ಸಾಕಷ್ಟು ಉದಾಹರಣೆಗಳನ್ನು ಇಂದಿಗೂ ಕೊಡಬಹುದು. ಇಂಥ ದುಷ್ಕೃತ್ಯಗಳ ಬಗ್ಗೆ ವರದಿಯಾದರೂ ಸರಕಾರಗಳಿಂದ ನ್ಯಾಯ ಸಿಗುವುದು ಅಷ್ಟು ಸುಲಭವಲ್ಲ. ಏಕೆಂದರೆ ಸರಕಾರ ಮೇಲ್ಜಾತಿಗಳ ಹಿಡಿತದಲ್ಲೇ ಇರುವುದರಿಂದ, ಅಸ್ಪಶ್ಯರು ಮತ್ತು ತಳ ಸಮುದಾಯಗಳ ಮೇಲೆ ನಡೆಯುವ ಇಂತಹ ಹೀನ ಕೃತ್ಯಗಳನ್ನು ಮುಚ್ಚಿ ಹಾಕುವುದೇ ಹೆಚ್ಚು. ಎಲ್ಲಾ ರೀತಿಯ ದೌರ್ಜನ್ಯಗಳಿಗೆ ಗುರಿಯಾದವರನ್ನು ಪೊಲೀಸ್ ಮೆಟ್ಟಿಲು ಹತ್ತುವುದಕ್ಕೆ ಬಿಡುವುದಿಲ್ಲ. ಇನ್ನು ನ್ಯಾಯ ಸಿಗುವುದಾದರೂ ಎಲ್ಲಿಂದ? ಇದೆಲ್ಲಾ ನಮ್ಮ ಪೂರ್ವಜನ್ಮದ ಕರ್ಮದ ಫಲ ಎಂದು ಕೊಂಡು, ಬರುವ ಕಷ್ಟವನ್ನೆಲ್ಲಾ ನುಂಗಿಕೊಂಡು ಜೀವ ತೇಯುವ ಈ ಜನ ಯಾವ ಸರಕಾರಕ್ಕೂ ಬೇಡವಾಗಿದ್ದಾರೆ. ಇದಕ್ಕೆ ಸ್ಪಷ್ಟ ಒಂದು ಉದಾಹರಣೆ ಎಂದರೆ ಕೆಲವು ವರ್ಷಗಳ ಹಿಂದೆ ಕರ್ನಾಟಕ ನೆಲದ್ದೇ ಆಗಿರುವ ಚಿಂತಾಮಣಿಯ ಕಂಬಾಲ ಪಲ್ಲಿಯಲ್ಲಿ ಸುಟ್ಟು ಭಸ್ಮವಾದ, ನ್ಯಾಯವೂ ಸಿಗದ ಅಸ್ಪಶ್ಯರ ಕಣ್ಣೀರಿನ ಕಥೆ. ಅದಿನ್ನೂ ಜನ ಸಾಮಾನ್ಯರ ಮನಸ್ಸಿನಿಂದ ಮಾಸಿಲ್ಲ!

ಬೆಂಗಳೂರು ನಗರದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ದಲಿತ ಸಮುದಾಯದ ಸಹ ಪ್ರಾಧ್ಯಾಪಕರೊಬ್ಬರಿಗೆ ಜಾತಿನಿಂದನೆ ಮಾಡಿರುವ ಪ್ರಸಂಗ ಇತ್ತೀಚೆಗೆ ನಡೆದಿದೆ. ಸಹ ಪ್ರಾಧ್ಯಾಪಕ ಗೋಪಾಲ್ ದಾಸ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯಿಂದ ಆಯ್ಕೆ ಆದ ಯಾವುದೇ ಪ್ರಾಧ್ಯಾಪಕರ ದಿನನಿತ್ಯದ ಗೋಳಾಟ ತಪ್ಪಿದ್ದಲ್ಲ. ಇದಕ್ಕೆಲ್ಲ ಮೇಲ್ಜಾತಿ ವ್ಯಕ್ತಿಗಳ ಅಸಹನೆ-ಅಸಹಿಷ್ಣುತೆಯೇ ಕಾರಣ.

ಇವು ಕೆಲವು ನಿದರ್ಶನಗಳಷ್ಟೇ. ಇವಕ್ಕೆ ಕೊನೆ ಎಂಬುದು ಇಲ್ಲವೇ ಇಲ್ಲ. ಕಾನೂನಿನಿಂದ ಬಗ್ಗಿಸಲಾಗದ ಇವುಗಳನ್ನು, ಸಾಮಾಜಿಕ ಸಮಾನತೆಯ ಸಹಬಾಳ್ವೆಯಿಂದ ಮಾತ್ರ ಸಾಧ್ಯ. ಅದು ನನಸಾಗುವ ಸಾಧ್ಯತೆ ಸನಿಹದಲ್ಲಿರುವಂತೆ ಕಾಣುತ್ತಿಲ್ಲ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News