ಜ್ಞಾನದಾತೆ ಸಾವಿತ್ರಿಬಾಯಿ ಫುಲೆ

ಅಂದಿನ ಕಾಲದಲ್ಲಿ ಬ್ರಾಹ್ಮಣಶಾಹಿಯನ್ನು ಮತ್ತು ಸವರ್ಣೀಯರನ್ನು ಎದುರಿಸಿ ನಿಲ್ಲುವುದು ಸುಲಭದ ಮಾತಾಗಿರಲಿಲ್ಲ. ಆ ದಾರಿಯನ್ನು ಅವರು ಅತ್ಯಂತ ನಿಂದನೆ, ನೋವು, ಅವಮಾನದಿಂದಲೇ ಕ್ರಮಿಸಿದ್ದರು. ಪಾಠ ಕಲಿಸಲು ಹೋಗುವ ದಾರಿಯ ಮಧ್ಯೆ ಅವರ ಮೇಲೆ ಕಲ್ಲು, ಮಣ್ಣು, ಸೆಗಣಿ ಇವುಗಳಿಂದ ಹಿಮ್ಮೆಟ್ಟಿಸಲು ಪ್ರಯತ್ನಿಸಿದ ಪಟ್ಟಭದ್ರ ಮನಸ್ಸುಗಳನ್ನೇ ಸಾವಿತ್ರಿಬಾಯಿ ತನ್ನ ಅಚಲವಾದ ಶ್ರದ್ಧೆ ಮತ್ತು ಇಚ್ಛಾಶಕ್ತಿಯಿಂದ ಹಿಮ್ಮೆಟ್ಟಿಸಿದರು. ಬಂಡೆಯಂತೆ ನಿಂತು ಅಕ್ಷರಾಭ್ಯಾಸದ ಕಾರ್ಯವನ್ನು ಮುಂದುವರಿಸಿದರು.

Update: 2025-01-03 06:46 GMT

ಸ್ವಾತಂತ್ರ್ಯ ಪೂರ್ವ ಭಾರತದ ಸಮಾನತವಾದಿ, ಸ್ತ್ರೀವಾದಿ ಮತ್ತು ಸಾಮಾಜಿಕ ಸುಧಾರಣೆಗಳ ಮೊದಲ ಚಾರಿತ್ರಿಕ ಹೆಜ್ಜೆ ಎಂದು ಗುರುತಿಸುವುದಾದರೆ ಅದು ಜ್ಯೋತಿ ರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿ. ಜ್ಯೋತಿ ರಾವ್ ಫುಲೆಯವರನ್ನು ಭಾರತದ ಸಾಮಾಜಿಕ ಹೋರಾಟಗಳ ತಂದೆ ಎಂದೇ ಇತಿಹಾಸವು ನೆನಪಿಸಿಕೊಳ್ಳುವುದು. ಇಂತಹ ಮಹಾನ್ ಚೇತನದ ಮಡದಿಯಾಗಿ ತನ್ನ ಬಾಳಸಂಗಾತಿಯ ಆಶಯಗಳ ಮಹತ್ವವನ್ನು ಅರಿತುಕೊಂಡು ಅವುಗಳನ್ನು ತನ್ನ ಜೀವನದ ಮುಖ್ಯ ಗುರಿಯನ್ನಾಗಿಸಿಕೊಂಡು ಬದುಕಿನ ಕೊನೆಯವರೆಗೂ ಮುನ್ನಡೆಸಿದ ಮಹಾನ್ ಚೇತನ ಸಾವಿತ್ರಿಬಾಯಿ ಫುಲೆ. ಭಾರತದ ಪುರೋಹಿತಶಾಹಿ ಮತ್ತು ಊಳಿಗಮಾನ್ಯ ವ್ಯವಸ್ಥೆ ಶೂದ್ರರು ಮತ್ತು ಅಸ್ಪಶ್ಯರು ಸವರ್ಣೀಯರ ಸೇವೆಗೆಂದು ಮಾತ್ರ. ಅಕ್ಷರ, ಸ್ವತಂತ್ರ, ಸಮಾನತೆ, ಸ್ವಾಭಿಮಾನಗಳೆಲ್ಲ ತಳಸಮುದಾಯಗಳಿಗೆ ನಿಷಿದ್ಧ ಎಂಬ ನಿಯಮವನ್ನು ವಿಧಿಸಿದ್ದ ಕಾಲದಲ್ಲಿ, ಅಂಥ ಜಾತಿಮನಸ್ಥಿತಿಗಳ ವಿರುದ್ಧ ದೃಢವಾಗಿ ನಿಂತು ಶೂದ್ರಾತಿ ಶೂದ್ರರಿಗೆ ಅಕ್ಷರಾಭ್ಯಾಸ ಮಾಡಿಸಿ ಶಿಕ್ಷಣದ ಹಕ್ಕನ್ನು ಕಲ್ಪಿಸಿಕೊಟ್ಟು, ಸ್ವಾಭಿಮಾನದ ಜ್ಯೋತಿಯನ್ನು ಅಕ್ಷರಗಳ ಮೂಲಕ ನಮ್ಮೆಲ್ಲರೆದೆಗಳಲ್ಲಿ ಬೆಳಗಿಸಿದವರು ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ತಾಯಿ ಸಾವಿತ್ರಿಬಾಯಿ ಫುಲೆ.

1831 ಜನವರಿ 3ರಂದು ಸಾವಿತ್ರಿಬಾಯಿ ಕಂಡೋಜಿ ನವ್ಸೆ ಪಾಟೀಲ್, ಲಕ್ಷ್ಮೀಬಾಯಿ ದಂಪತಿಯ ಮಗಳಾಗಿ ಜನಿಸಿದರು. ತನ್ನ 9ನೇ ವಯಸ್ಸಿನಲ್ಲೇ ಜ್ಯೋತಿಬಾ ಅವರೊಡನೆ ವಿವಾಹವಾದರು. ಮಹಿಳೆಯರಿಗೆ ಶಿಕ್ಷಣವನ್ನು ನೀಡಬೇಕೆಂಬ ಅಗಾಧವಾದ ಆಸೆ ಹೊಂದಿದ್ದ ಜ್ಯೋತಿಬಾ ಮೊದಲು ತನ್ನ ಮಡದಿ ಸಾವಿತ್ರಿಬಾಯಿಗೆ ಅಕ್ಷರಾಭ್ಯಾಸ ಮಾಡಿಸಿ ಅವರ ಮೊದಲ ಗುರುವಾದರು. ಬಾಳಸಂಗಾತಿಯ ಘನ ಉದ್ದೇಶವನ್ನು ಅರಿತ ಸಾವಿತ್ರಿಬಾಯಿ ಅಷ್ಟೇ ಆಸ್ಥೆ ಮತ್ತು ಶ್ರದ್ಧೆಯಿಂದ ಕಲಿತರು. ಕಲಿಕೆಯ ಆಸಕ್ತಿ ಅವರನ್ನು ಭಾರತದ ಶೋಷಿತ ಸಮುದಾಯಗಳ ವಿಮೋಚಕಿಯನ್ನಾಗಿ ಬೆಳೆಸಿತು. ಸಾವಿತ್ರಿಬಾಯಿ ಪತಿಯ ಮೊದಲ ಅನುಯಾಯಿ. ಅವರ ಎಲ್ಲಾ ಪ್ರಯೋಗಗಳ ಮೊದಲ ಫಲಿತಾಂಶ. ತನ್ನ ಸಂಗಾತಿಯ ಸಾಮಾಜಿಕ ಬದಲಾವಣೆಯ ಮೊದಲ ಬೆಂಬಲಿಗರು. ಅವರ ಎಲ್ಲಾ ಕಾರ್ಯದಲ್ಲಿ ಒತ್ತಾಸೆಯಾಗಿ ನಿಂತು, ಅದು ತನ್ನದೇ ಕರ್ತವ್ಯ ಎನ್ನುವಷ್ಟರ ಮಟ್ಟಿಗಿನ ಅಪಾರವಾದ ಸಹಕಾರವನ್ನು ನೀಡಿದ ಕಾರ್ಯಕರ್ತೆ. ಜ್ಯೋತಿಬಾ ಹೊತ್ತ ಎಲ್ಲಾ ಸಾಮಾಜಿಕ ಹೊಣೆಗಳನ್ನು ತನ್ನ ಹೆಗಲಿಗೇರಿಸಿಕೊಂಡು ಮುನ್ನಡೆಸಿದ ಕಟ್ಟಾಳು.

ಸಾವಿತ್ರಿಬಾಯಿ ಮತ್ತು ಅವರ ಸ್ನೇಹಿತೆ ಫಾತಿಮಾ ಶೇಕ್ 1846-47ರಲ್ಲಿ ಅಹ್ಮದ್‌ನಗರದ ಶಾಲೆಯಲ್ಲಿ ಕಲಿತರು. 1849ರಲ್ಲಿ ಪುಣೆಯ ಮನೆಯೊಂದರಲ್ಲಿ ಭಾರತದ ಮೊದಲ ಬಾಲಕಿಯರ ಪಾಠಶಾಲೆಯನ್ನು ಈ ದಂಪತಿ ಪ್ರಾರಂಭಿಸಿದರು. ಒಂಭತ್ತು ವಿದ್ಯಾರ್ಥಿನಿಯರು ಇಲ್ಲಿ ದಾಖಲಾತಿಯನ್ನು ಪಡೆದು ಓದತೊಡಗಿದರು. ಈ ಶಾಲೆಗಳಲ್ಲಿ ಶೂದ್ರ ಮತ್ತು ಅಸ್ಪಶ್ಯ ಮಕ್ಕಳೊಂದಿಗೆ ಮುಸಲ್ಮಾನ ಮಕ್ಕಳು ಇದ್ದರು ಎನ್ನುವುದು ಮತ್ತೊಂದು ವಿಶೇಷ. ಸಾವಿತ್ರಿಬಾಯಿಯೇ ಶಾಲೆಗೆ ಮುಖ್ಯ ಶಿಕ್ಷಕಿಯಾಗುವ ಮೂಲಕ ಭಾರತ ದೇಶದ ಮೊತ್ತಮೊದಲ ಶಿಕ್ಷಕಿ ಮತ್ತು ಹೆಣ್ಣು ಮಕ್ಕಳ ಪಾಲಿನ ವಿದ್ಯಾದೇವತೆಯಾದರು. ಅಂದಿನ ಕಾಲದಲ್ಲಿ ಬ್ರಾಹ್ಮಣಶಾಹಿಯನ್ನು ಮತ್ತು ಸವರ್ಣೀಯರನ್ನು ಎದುರಿಸಿ ನಿಲ್ಲುವುದು ಸುಲಭದ ಮಾತಾಗಿರಲಿಲ್ಲ. ಆ ದಾರಿಯನ್ನು ಅವರು ಅತ್ಯಂತ ನಿಂದನೆ, ನೋವು, ಅವಮಾನದಿಂದಲೇ ಕ್ರಮಿಸಿದ್ದರು. ಪಾಠ ಕಲಿಸಲು ಹೋಗುವ ದಾರಿಯ ಮಧ್ಯೆ ಅವರ ಮೇಲೆ ಕಲ್ಲು, ಮಣ್ಣು, ಸೆಗಣಿ ಇವುಗಳಿಂದ ಹಿಮ್ಮೆಟ್ಟಿಸಲು ಪ್ರಯತ್ನಿಸಿದ ಪಟ್ಟಭದ್ರ ಮನಸ್ಸುಗಳನ್ನೇ ಸಾವಿತ್ರಿಬಾಯಿ ತನ್ನ ಅಚಲವಾದ ಶ್ರದ್ಧೆ ಮತ್ತು ಇಚ್ಛಾಶಕ್ತಿಯಿಂದ ಹಿಮ್ಮೆಟ್ಟಿಸಿದರು. ಬಂಡೆಯಂತೆ ನಿಂತು ಅಕ್ಷರಾಭ್ಯಾಸದ ಕಾರ್ಯವನ್ನು ಮುಂದುವರಿಸಿದರು.

ಸಾವಿತ್ರಿಬಾಯಿ ತಾವು ಕಲಿತ ವಿದ್ಯೆಯನ್ನು ಸಮಾಜದ ಬದಲಾವಣೆಗಲ್ಲದೇ ಮತ್ಯಾವುದಕ್ಕೂ ಬಳಸಲಿಲ್ಲ ಎನ್ನುವುದಕ್ಕೆ ಅವರು ರಚಿಸಿದ ಕವನಗಳು ಸಾಕ್ಷಿಯಾಗಿವೆ. ಅವರ ಕವನ, ಕಾವ್ಯ, ಲೇಖನಗಳ ವಸ್ತು ಅಥವಾ ಕೇಂದ್ರ ಶೋಷಣೆ, ತಾರತಮ್ಯ, ಅನ್ಯಾಯ. ಅವರ ಮೊದಲ ಕವನ ಸಂಕಲನ ‘ಕಾವ್ಯಫುಲೆ’ಯನ್ನು 1854ರಲ್ಲಿ ಪ್ರಕಟಿಸಿದರು. ನಂತರ ‘ಪಾವನ್ ಕಾಶಿ ಸುಬೋಧ್ ರತ್ನಾಕರ್’ ಎಂಬ ಮತ್ತೊಂದು ಕವನ ಸಂಕಲನ 1891ರಲ್ಲಿ ಪ್ರಕಟವಾಯಿತು. ಇದು ಫುಲೆ ಜೀವನ ಕುರಿತದ್ದಾಗಿತ್ತು. ಇಂದಿಗೂ ಫುಲೆ ಅವರ ಜೀವನವನ್ನು ಗೊತ್ತುಪಡಿಸುವ ಅಧಿಕೃತ ಗ್ರಂಥಗಳಲ್ಲಿ ಇದಕ್ಕೆ ಅಗ್ರಸ್ಥಾನ. ಅವರ ‘ಸಾಲ’ ಎಂಬ ಲೇಖನ ಜನರ ದುಂದುವೆಚ್ಚದ ಬದುಕನ್ನು ಸಾರುತ್ತಿತ್ತು. ‘‘ಕಷ್ಟಪಟ್ಟು ಕೆಲಸ ಮಾಡಿ, ಶ್ರದ್ಧೆಯಿಂದ ಅಧ್ಯಯನ ಮಾಡಿ, ಒಳ್ಳೆಯ ಮಾರ್ಗದಲ್ಲಿ ನಡೆಯಿರಿ’’ ಎಂಬುದು ಅವರ ಘೋಷವಾಕ್ಯವಾಗಿತ್ತು. ಮಹಿಳೆಯರು ಶಿಕ್ಷಣವನ್ನು ಪಡೆದು ಗುಲಾಮಿ ಬದುಕಿನಿಂದ ಮುಕ್ತವಾಗಿ ಸಬಲರಾಗಲು ಈ ಶಿಕ್ಷಣವು ಅತ್ಯಂತ ಅಗತ್ಯವೆಂಬುದು ಅವರ ಬಲವಾದ ನಂಬಿಕೆ ಮತ್ತು ವಾದವಾಗಿತ್ತು.

ಸಾವಿತ್ರಿಬಾಯಿ ತನ್ನ ಸಂಗಾತಿಯೊಂದಿಗೆ ಕೈಗೊಂಡ ಪ್ರತಿಯೊಂದು ಕೆಲಸವನ್ನು ಅಂದಿನ ಸಮಾಜವು ನಿಷೇಧಿಸಿತ್ತು. ಅಂದರೆ ಶ್ರೇಣೀಕೃತ ಜಾತಿ ವ್ಯವಸ್ಥೆ ಬಹಿಷ್ಕರಿಸಿದ, ಪಾಪ, ಅಪವಿತ್ರ, ಅನೈತಿಕವೆಂದು ಪರಿಗಣಿಸಿದ್ದ ಎಲ್ಲಾ ಸಂದರ್ಭಗಳನ್ನು, ವ್ಯಕ್ತಿಗಳನ್ನು ಮತ್ತು ಕೆಲಸಗಳನ್ನು ಅತ್ಯಂತ ಮುಖ್ಯವೆಂದು, ಇವುಗಳನ್ನು ಮಾಡುವುದೇ ತಮ್ಮ ಜೀವನದ ಪರಮೋಚ್ಚಗುರಿ ಎಂದುಕೊಂಡಿದ್ದರು. ಮತ್ತು ಅವರೆಲ್ಲರಿಗೂ ಬದುಕುವ ಧೈರ್ಯ, ಸ್ಥೈರ್ಯವನ್ನು ತುಂಬಿ ಬದುಕುವ ಭರವಸೆಯನ್ನು ಮೂಡಿಸುವಂತಹ ಮಾರ್ಗಗಳನ್ನು ಸೂಚಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, 1863ರಲ್ಲಿ ಅನಾಥಾಲಯವನ್ನು ಆರಂಭಿಸಿದ ಸಾವಿತ್ರಿಬಾಯಿಯ ಮಾತೃಹೃದಯ ಆ ಮಕ್ಕಳ ಬಗ್ಗೆ ಅಪಾರವಾದ ಪ್ರೀತಿಯಿಂದ ವರ್ತಿಸುತ್ತಿತ್ತು. ಅನಾಥಾಲಯಕ್ಕೆ ಸಮಾಜದಿಂದ ನಿಂದನೆಗೆ ಮತ್ತು ಟೀಕೆಗೆ ಗುರಿಯಾದ, ಅನೈತಿಕರು ಎನಿಸಿದ ಎಲ್ಲಾ ಮಹಿಳೆಯರು ಮತ್ತು ಮಕ್ಕಳು ಸೇರುವ ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಇಂತಹ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಇಲ್ಲಿ ಆಶ್ರಯವನ್ನು ಪಡೆದುಕೊಳ್ಳುವಂತೆ ಪುಣೆ ನಗರದ ತುಂಬಾ ಪ್ರಚಾರ ಮಾಡಿದರು. ಫುಲೆ ದಂಪತಿಯ ಆಶ್ರಯದ ಕಾರಣದಿಂದಾಗಿ ಆತ್ಮಹತ್ಯೆಗಳು ಕಡಿಮೆಯಾಗುತ್ತಾ ಬಂದವು. ವಿಧವೆಯರು, ಗಂಡನಿಂದ ಹೊರದೂಡಲ್ಪಟ್ಟವರು, ಅನಾಥಮಕ್ಕಳು, ಬೇಡವೆಂದು ಬಿಸಾಡಿದ ಹೆಣ್ಣು ಹಸುಗೂಸುಗಳು ಎಲ್ಲರಿಗೂ ಈ ದಂಪತಿ ಆಶ್ರಯದಾತರಾದರು. ಮಹಿಳೆಯರ ಮೇಲೆ ಈ ಪಟ್ಟಭದ್ರ ವ್ಯವಸ್ಥೆಯು ವಿಧಿಸುತ್ತಿದ್ದ ಕ್ರೂರ ಸಂಪ್ರದಾಯ, ಶಾಸ್ತ್ರಗಳ ವಿರುದ್ಧವೂ ತಾಯಿ ಸಾವಿತ್ರಿಬಾಯಿ ಹೋರಾಡಿದರು.

ಸಾವಿತ್ರಿಬಾಯಿ ಅವರು ಕ್ಷೌರಿಕರು ವಿಧವೆಯರ ಕೂದಲನ್ನು ತೆಗೆಯುವುದಿಲ್ಲವೆಂದು ಪ್ರತಿಭಟಿಸುವಂತೆ ಅವರಲ್ಲಿ ಅರಿವನ್ನು ಮೂಡಿಸಿ, 1860ರಲ್ಲಿ ಒಂದು ಹೋರಾಟವನ್ನೇ ತನ್ನ ನೇತೃತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಿದರು. 1863ರಲ್ಲಿ ವಿಧವೆಯರು ಮತ್ತವರ ಮಕ್ಕಳಿಗಾಗಿ ಪ್ರಸೂತಿಗೃಹ ಮತ್ತು ಆಶ್ರಮ ತೆರೆದರು. 1868ರಲ್ಲಿ ಫುಲೆ ದಂಪತಿ ಎಲ್ಲಾ ಜಾತಿಯ ಜನರು ಬಳಸಲು ನೀರಿನತೊಟ್ಟಿ ಕಟ್ಟಿದರು. ಅಂದರೆ ಒಂದು ರಾಜಪ್ರಭುತ್ವ, ರಾಜ್ಯಾಂಗ, ಸರಕಾರ ಮಾಡುವಂತಹ ಬಹುದೊಡ್ಡ ಸಾಮಾಜಿಕ ಜನಮುಖಿ ಕಾರ್ಯಗಳನ್ನು ಕೇವಲ ಫುಲೆ ದಂಪತಿಯೇ ತಮ್ಮ ಜೀವಿತಾವಧಿಯಲ್ಲಿ ಮಾಡಿ ಮಾದರಿಯಾಗಿ ಹೋಗಿದ್ದಾರೆ. ಹಾಗೆ ನೋಡಿದರೆ ಬಹುಷಃ ಕೊಲ್ಲಾಪುರದ ಶಾಹು ಮಹಾರಾಜ, ಬರೋಡಾದ ಸಯ್ಯಾಜಿರಾವ್ ಗಾಯಕ್‌ವಾಡ್ ಮತ್ತು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಮೂರು ರಾಜ ಸಂಸ್ಥಾನಗಳು ಮಾಡಿದ ದಲಿತೋದ್ಧಾರದ ಮತ್ತು ಪ್ರಗತಿಪರಕೆಲಸಗಳ ಸ್ಫೂರ್ತಿ ಇಲ್ಲಿಂದ ಪಡೆದಿರಬಹುದು ಎಂದೆನಿಸುತ್ತದೆ.

ಅಲ್ಲಿಗೆ ನಿಲ್ಲಿಸದೆ 1873 ಸೆಪ್ಟಂಬರ್ 24ರಂದು ‘ಸತ್ಯಶೋಧಕ ಸಮಾಜ’ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮುಖಾಂತರ ಹಲವಾರು ಸಮಾಜ ಸುಧಾರಣ ಕೆಲಸಗಳನ್ನು ಮಾಡಿದರು. ಈ ಸಂಸ್ಥೆಯ ಅಡಿಯಲ್ಲಿ ಅನೇಕ ಅಂತರ್ಜಾತಿ ವಿವಾಹಗಳನ್ನು ಮಾಡಿಸುವುದು ಮತ್ತು ಮಹಿಳೆಯರ ಸಮಸ್ಯೆಗಳನ್ನು ಪ್ರಧಾನವಾಗಿ ತೆಗೆದುಕೊಂಡು ಹೋರಾಡುವುದು, ಜಾತಿವಿನಾಶ, ಸಮಾನತೆ, ಸಮಹಬಾಳ್ವೆ ಇವೇ ಮೊದಲಾದ ವಿಚಾರಗಳು ಸತ್ಯಶೋಧಕ ಸಮಾಜದಲ್ಲಿ ಪ್ರತಿನಿತ್ಯವು ಪ್ರತಿಧ್ವನಿಸುತ್ತಿತ್ತು.

ತಳಸಮುದಾಯಕ್ಕೆ ಶಿಕ್ಷಣ ನೀಡುವ ಕಾರ್ಯವು ನಿರಂತರವಾಗಿ ನಡೆಯುತ್ತಿತ್ತು. ಬಾಲ್ಯವಿವಾಹ ನಿಷೇಧ, ವಿಧವಾವಿವಾಹಕ್ಕೆ ಪ್ರೋತ್ಸಾಹ, ಅನಾಥಮಕ್ಕಳ, ಮಹಿಳೆಯರ ರಕ್ಷಣೆ ಇವು ಸತ್ಯಶೋಧಕ ಸಮಾಜದ ಕೆಲಸಗಳಾಗಿದ್ದವು. ಸಾಮಾಜಿಕ ವ್ಯವಸ್ಥೆಗೆ ವಿರುದ್ಧವಾಗಿ ಬ್ರಾಹ್ಮಣ ವಿಧವೆಗೆ ಹುಟ್ಟಿದ್ದು ಎಂದು ಜರಿದಿದ್ದ ಮಗುವನ್ನೇ 1874ಲ್ಲಿ ದತ್ತು ಸ್ವೀಕರಿಸಿದರು. ಯಶವಂತ (ಇದೇ ಹೆಸರನ್ನು ಡಾ.ಬಿ.ಆರ್. ಅಂಬೇಡ್ಕರ್ ತಮ್ಮ ಮಗನಿಗೆ ಇಟ್ಟಿದ್ದರು)ಎಂದು ನಾಮಕರಣಗೊಂಡ ಆ ಮಗು ಮುಂದೆ ಬೆಳೆದು ವೈದ್ಯನಾಗಿ ಪುಣೆ ನಗರಕ್ಕೆ ಪ್ಲೇಗ್ ಬಂದಾಗ ತಾಯಿ ಸಾವಿತ್ರಿ ಬಾಯಿಯವರೊಂದಿಗೆ ಜನಸಾಮಾನ್ಯರ ಸೇವೆ ಮಾಡಿದರು.

1890 ನವೆಂಬರ್ 28ರಂದು ಮಹಾತ್ಮಾ ಫುಲೆ ಸಾವನ್ನಪ್ಪಿದರು. ತನ್ನ ಬಾಳಸಂಗಾತಿಯ ಚಿತೆಗೆ ಸಾವಿತ್ರಿಬಾಯಿ ಅಗ್ನಿಸ್ಪರ್ಶ ಮಾಡುವ ಮೂಲಕ ಭಾರತದ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆದರು. ಫುಲೆಯ ಮರಣದ ನಂತರ ಎಲ್ಲಾ ಜವಾಬ್ದಾರಿ ಮತ್ತು ಸವಾಲುಗಳು ಆಕೆಯ ಮೇಲೆ ಬಿದ್ದವು. ಅವುಗಳನ್ನು ಅಚ್ಚುಕಟ್ಟಾಗಿ, ದಿಟ್ಟತನದಿಂದ ಎದುರಿಸಿ, ಸಂಗಾತಿಯ ಆಶಯಗಳನ್ನು ಮುಂದುವರಿಸುವಲ್ಲಿ ಯಶಸ್ವಿಯಾದರು. ಸಾವಿತ್ರಿಬಾಯಿ ತನ್ನ 66ನೇ ವಯಸ್ಸಿನಲ್ಲಿದ್ದಾಗ ಅಂದರೆ 1897ರಲ್ಲಿ ಪುಣೆಯಲ್ಲಿ ಪ್ಲೇಗ್ ಹರಡಿತು. ರೋಗಿಗಳಿಗೆ ಔಷದೋಪಚಾರ ಮಾಡುವಲ್ಲಿ ಸಾವಿತ್ರಿಬಾಯಿ ಹಗಲಿರುಳು ವ್ಯಸ್ತರಾದರು. ಪ್ಲೇಗ್ ಅಂಟುರೋಗ, ಅದು ತನಗೂ ಬರಬಹುದೆಂದು ತಿಳಿದಿದ್ದರೂ ಸದಾ ಕಾಲ ರೋಗಿಗಳ ಮಧ್ಯೆಯೇ ಇದ್ದು ಅವರನ್ನು ಶುಶ್ರೂಷೆ ಮಾಡುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ. ಇದು ಅವರ ಸಾಮಾಜಿಕ ಬದ್ಧತೆಯ ಜೊತೆಗೆ ರಾಜಿಯಾಗದಿರುವ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಪ್ಲೇಗ್ ಕಾಯಿಲೆಯಿಂದ ಹುಳಗಳಂತೆ ಸಾಯುತ್ತಿದ್ದವರನ್ನು ಮುಟ್ಟಲು, ಸಂಸ್ಕಾರ ಮಾಡಲು ಯಾವ ಸರಕಾರ, ಆಡಳಿತವೂ ಮುಂದೆ ಬರದಿದ್ದಾಗ, 66 ವರ್ಷದ ಸಾವಿತ್ರಿಬಾಯಿ ಫುಲೆ ತಾವೇ ಹೆಣಗಳನ್ನು ಸ್ಮಶಾಣಕ್ಕೆ ಹೊತ್ತೊಯ್ದು ಸಂಸ್ಕಾರ ಮಾಡಿದರು. ಹಾಗೆ ನೂರಾರು ಮೃತದೇಹಗಳನ್ನು ಸಂಸ್ಕಾರ ಮಾಡಿದ ಆ ತಾಯಿಗೂ ಪ್ಲೇಗ್ ಸೋಂಕು ತಗಲಿತು. 1897 ಮಾರ್ಚ್ 10ರಂದು ಅವರು ಪ್ಲೇಗ್ ಕಾಯಿಲೆಯಿಂದ ಕಣ್ಣು ಮುಚ್ಚಿದರು. ಆ ತಾಯಿಯ ಬಿಡುವಿಲ್ಲದ ಹೋರಾಟದ ಬದುಕು ಬಸವಳಿದು ಕೊನೆಯ ಕ್ಷಣದ ವರೆಗೂ ಸೇವೆ ಮಾಡುತ್ತಲೇ ಸಾರ್ಥಕ್ಯವನ್ನು ಕಂಡಿತು. ಹೀಗೆ ಸಾವಿತ್ರಿಬಾಯಿ ಫುಲೆ ಅವರ ಬಾಳ ಸಂಗಾತಿಯ ಆದರ್ಶಗಳನ್ನು ತನ್ನದಾಗಿಸಿಕೊಂಡು ಮಹಿಳೆಯರು, ಅಸ್ಪಶ್ಯರು, ಶೂದ್ರರ ಏಳಿಗೆಗಾಗಿ ದುಡಿದರು. ಅವರ ಜೀವನವನ್ನು ವಿವರಿಸುವಾಗ ದಂಪತಿಯನ್ನು ಬೇರ್ಪಡಿಸಿ ಹೇಳಲು ಸಾಧ್ಯವೇ ಇಲ್ಲ. ಪರಸ್ಪರ ಸಹಕಾರ ಮತ್ತು ಪ್ರೀತಿ ವಿಶ್ವಾಸದಿಂದಲೇ ಬದುಕಿತ್ತು ಈ ಜೋಡಿ.

ಸಾವಿತ್ರಿಬಾಯಿ ಅನಾಥಮಕ್ಕಳ ಮತ್ತು ಬಹಿಷ್ಕಾರಕ್ಕೊಳಪಟ್ಟ ಮಹಿಳೆಯರ ತಾಯಿಯಾಗಿ ಹಾಗೂ ಮಾದರಿ ಮಡದಿಯಾದರಲ್ಲದೆ, ಶಿಕ್ಷಕಿಯಾಗಿ, ಚಿಂತಕಿಯಾಗಿ, ಲೇಖಕಿಯಾಗಿ ಮತ್ತು ಕವಯಿತ್ರಿಯಾಗಿ ಹೊರಹೊಮ್ಮಿದ್ದು ರೋಮಾಂಚಕವಾದದ್ದು. ಅನಕ್ಷರಕುಕ್ಷಿ ಮಹಿಳೆಯೊಬ್ಬಳು ಮದುವೆಯ ನಂತರ ಗಂಡನಿಂದ ಅಕ್ಷರ ಕಲಿತು, ಬ್ರಿಟಿಷ್ ಅಧಿಕಾರಿಯನ್ನು ತನ್ನ ಇಂಗ್ಲಿಷ್ ಪಾಂಡಿತ್ಯದಿಂದ ಮಣಿಸಿದ್ದು ನಿಜಕ್ಕೂ ಅವಿಸ್ಮರಣೀಯವಾದ ಘಟನೆ. ಇಂತಹ ಅನೇಕ ಅಸಾಧಾರಣ ಘಟನೆಗಳನ್ನು ನಾವು ಕಥೆಗಳಲ್ಲಿ ಮಾತ್ರವೇ ಕೇಳಲು ಸಾಧ್ಯವಿತ್ತು. ಆದರೆ ಅದನ್ನು ವಾಸ್ತವಕ್ಕಿಳಿಸಿದ ಮಹಾನ್ ವ್ಯಕ್ತಿತ್ವವೊಂದು ನಮ್ಮ ದೇಶದಲ್ಲಿ ಜೀವಿಸಿತ್ತು ಎನ್ನುವುದೇ ಪರಮಾಶ್ಚರ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಪದ್ಮಶ್ರೀ ಟಿ.

contributor

ಉಪನ್ಯಾಸಕರು, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ, ಮೈವಿವಿ

Similar News