ಮನಮೋಹನ್‌ಸಿಂಗ್ ಸ್ಮರಣೆಯೆಂದರೆ ಶಿಕ್ಷಣ ಹಕ್ಕು ಕಾಯ್ದೆಯ ಪೂರ್ಣ ಜಾರಿ
ಭಾಗ- 2
ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಶಾಲೆ ಮತ್ತು ಶಿಕ್ಷಕರ ಜವಾಬ್ದಾರಿಗಳನ್ನು ತಿಳಿಸಲಾಗಿದೆ. ಇದರ ಅನ್ವಯ ಸರಕಾರಿ ಮತ್ತು ಸ್ಥಳೀಯ ಪ್ರಾಧಿಕಾರದ ಶಾಲೆಗಳು ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸಲು ಬದ್ಧವಾಗಿರಬೇಕು. ಸರಕಾರಿ ಅನುದಾನಿತ ಶಾಲೆಯು, ಶೇ. ಇಪ್ಪತ್ತೈದಕ್ಕೆ ಒಳಪಟ್ಟು ತಾನು ಪಡೆಯುವ ವಾರ್ಷಿಕ ಆವರ್ತಕ ನೆರವು ಅಥವಾ ಅನುದಾನಗಳ ಆವರ್ತಕ ವೆಚ್ಚಗಳ ಶೇಕಡಾವಾರು ಅನುಪಾತಕ್ಕೆ ಸರಿಸಮಾನವಾಗಿ ಮಕ್ಕಳಿಗೆ ತನ್ನಲ್ಲಿ ಪ್ರವೇಶ ನೀಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸತಕ್ಕದ್ದು.
ಯಾವುದೇ ಶಾಲೆ ಅಥವಾ ಯಾರೇ ವ್ಯಕ್ತಿಯು, ಒಂದು ಮಗುವಿಗೆ ಪ್ರವೇಶ ನೀಡುವಾಗ, ಯಾವುದೇ ಕ್ಯಾಪಿಟೇಷನ್ ಶುಲ್ಕವನ್ನು ವಸೂಲು ಮಾಡುವಂತಿಲ್ಲ ಮತ್ತು ಮಗುವನ್ನು ಅಥವಾ ಅವನ/ಅವಳ ತಂದೆ-ತಾಯಿ ಅಥವಾ ಪೋಷಕರನ್ನು ಯಾವುದೇ ಪರಿಶೋಧನೆಗೆ ಒಳಪಡಿಸತಕ್ಕದ್ದಲ್ಲ.
ಪ್ರಾಥಮಿಕ ಶಿಕ್ಷಣಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಮಗುವಿನ ವಯಸ್ಸನ್ನು ಜನನ ಪ್ರಮಾಣಪತ್ರದ ಆಧಾರದ ಮೇಲೆ ಅಥವಾ ಸರಕಾರ ತೀರ್ಮಾನಿಸಬಹುದಾದ ಇನ್ನಿತರ ದಸ್ತಾವೇಜಿನ ಆಧಾರದ ಮೇಲೆ ನಿರ್ಧರಿಸತಕ್ಕದ್ದು. ವಯಸ್ಸಿನ ರುಜುವಾತು ಇಲ್ಲದಿರುವ ಒಂದೇ ಕಾರಣಕ್ಕೆ ಯಾವ ಮಗುವಿಗೂ ಶಾಲೆಗೆ ಪ್ರವೇಶವನ್ನು ನಿರಾಕರಿಸತಕ್ಕದ್ದಲ್ಲ.
ಪ್ರಾಥಮಿಕ ಶಿಕ್ಷಣಕ್ಕಾಗಿ ಶಾಲೆಗೆ ಪ್ರವೇಶ ಪಡೆದ ಯಾವುದೇ ಮಗುವನ್ನು ಯಾವುದೇ ತರಗತಿಯಲ್ಲೇ ತಡೆಹಿಡಿಯತಕ್ಕದ್ದಲ್ಲ ಅಥವಾ ಪ್ರಾಥಮಿಕ ಶಿಕ್ಷಣವು ಪೂರ್ಣಗೊಳ್ಳುವವರೆಗೆ ಶಾಲೆಯಿಂದ ಹೊರಹಾಕತಕ್ಕದ್ದಲ್ಲ. ಪ್ರಾಥಮಿಕ ಶಿಕ್ಷಣಕ್ಕಾಗಿ ಶಾಲೆಯಲ್ಲಿ ಕಲಿಯುತ್ತಿರುವ ಯಾವ ಮಗುವನ್ನೂ ದೈಹಿಕ ದಂಡನೆಗೆ ಅಥವಾ ಮಾನಸಿಕ ಕಿರುಕುಳಕ್ಕೆ ಗುರಿಪಡಿಸತಕ್ಕದ್ದಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಅಂಥ ವ್ಯಕ್ತಿಯನ್ನು ಶಿಸ್ತು ಕ್ರಮಕ್ಕೆ ಗುರಿಪಡಿಸಬಹುದಾಗಿದೆ.
ಪ್ರಾಥಮಿಕ ಶಿಕ್ಷಣವನ್ನು ಒದಗಿಸಲು ಸ್ಥಾಪನೆಯಾಗಿರುವ ಪ್ರತಿಯೊಂದು ಸರಕಾರಿ, ಸ್ಥಳೀಯ ಪ್ರಾಧಿಕಾರ ಮತ್ತು ಅನುದಾನಿತ ಶಾಲೆಗಳಲ್ಲಿ ಶಾಲಾ ನಿರ್ವಹಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸ ತಕ್ಕದ್ದು. ಅಂಥ ಸಮಿತಿಯ ಸದಸ್ಯರಲ್ಲಿ ಕನಿಷ್ಠ ಮುಕ್ಕಾಲು ಮಂದಿ ಸದಸ್ಯರು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ-ತಾಯಿ ಅಥವಾ ಪೋಷಕರಾಗಿರತಕ್ಕದ್ದು. ಅನುಕೂಲಸ್ಥರಲ್ಲದ ಗುಂಪು ಹಾಗೂ ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳ ಪೋಷಕರಿಗೆ ಪ್ರಾತಿನಿಧ್ಯ ಇರುವುದರ ಜೊತೆಗೆ ಸಮಿತಿಯ ಸದಸ್ಯರ ಪೈಕಿ ಶೇ. ಐವತ್ತರಷ್ಟು ಸದಸ್ಯರು ಮಹಿಳೆಯರಾಗಿರಬೇಕು: ಈ ರೀತಿ ರಚಿತಗೊಂಡ ಪ್ರತಿಯೊಂದು ಶಾಲಾ ನಿರ್ವಹಣಾ ಸಮಿತಿಯು ತನ್ನ ಶಾಲೆಯ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕು.
ಪ್ರಾಥಮಿಕ ಶಿಕ್ಷಣ ಒದಗಿಸಲು ಈ ಕಾಯ್ದೆಯ ಅನ್ವಯ ನೇಮಕಗೊಂಡ ಶಿಕ್ಷಕರು, ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸಬೇಕು.
1. ಶಾಲೆಯಲ್ಲಿ ಸೇವೆ ಸಲ್ಲಿಸುವಾಗ ಕ್ರಮಬದ್ಧತೆ ಹಾಗೂ ಸಮಯ ಪಾಲನೆ;
2. ಕಾಯ್ದೆಯಲ್ಲಿ ತಿಳಿಸಿರುವಂತೆ ಪಠ್ಯ ವಿಷಯವನ್ನು ಬೋಧಿಸುವುದು ಮತ್ತು ಪಠ್ಯ ವಿಷಯದ ಬೋಧನೆಯನ್ನು ಪೂರ್ಣಗೊಳಿಸುವುದು;
3. ಗೊತ್ತುಪಡಿಸಿದ ವೇಳೆಯೊಳಗೆ ಸಮಗ್ರ ಪಠ್ಯ ವಿಷಯದ ಬೋಧನೆಯನ್ನು ಪೂರ್ಣಗೊಳಿಸುವ;
4. ಪ್ರತಿಯೊಂದು ಮಗುವಿನ ಕಲಿಕಾ ಸಾಮರ್ಥ್ಯವನ್ನು ನಿರ್ಧರಿಸಿ ಅದಕ್ಕನುನುಸಾರವಾಗಿ, ಹೆಚ್ಚುವರಿ ಬೋಧನೆಯೇನಾದರೂ ಅಗತ್ಯವಿದ್ದರೆ ಅದನ್ನು ಕೈಗೊಳ್ಳುವುದು.
5. ತಂದೆ-ತಾಯಿಗಳೊಂದಿಗೆ ಮತ್ತು ಪಾಲಕರೊಂದಿಗೆ ನಿಯತವಾಗಿ ಸಭೆಗಳನ್ನು ನಡೆಸುವ ಮತ್ತು ಮಕ್ಕಳು ಕ್ರಮಬದ್ಧವಾಗಿ ಶಾಲೆಗೆ ಬರುತ್ತಿರುವ ಬಗ್ಗೆ, ಅದರ ಕಲಿಕಾ ಸಾಮರ್ಥ್ಯದ ಬಗ್ಗೆ, ಕಲಿಕೆಯಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಮತ್ತು ಯಾವುದೇ ಇತರ ಸಂಬಂಧಪಟ್ಟ ಮಾಹಿತಿಯ ಬಗ್ಗೆ ಅವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದು.
ಮುಂದುವರಿದು, ಪ್ರಾಥಮಿಕ ಶಿಕ್ಷಣಕ್ಕಾಗಿ ನೇಮಕಗೊಂಡ ಶಿಕ್ಷಕರನ್ನು ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು, ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ವಿಧಾನ ಮಂಡಲ ಅಥವಾ ಸಂಸತ್ತು ಚುನಾವಣೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಯಾವುದೇ ಶಿಕ್ಷಣೇತರ ಕೆಲಸ -ಕಾರ್ಯಗಳಿಗೆ ನಿಯೋಜಿಸುವಂತಿಲ್ಲ.
ಪ್ರಾಥಮಿಕ ಶಿಕ್ಷಣಕ್ಕಾಗಿ ಪಠ್ಯ ವಿಷಯವನ್ನು ಮತ್ತು ಪರೀಕ್ಷಾ ಪ್ರಕ್ರಿಯೆಯನ್ನು ಶೈಕ್ಷಣಿಕ ಪ್ರಾಧಿಕಾರವು ನಿಗದಿಪಡಿಸಬೇಕು. ಅಂತಹ ಪ್ರಾಧಿಕಾರವು ಪಠ್ಯ ವಿಷಯದ ಮತ್ತು ಪರೀಕ್ಷಾ ಪ್ರಕ್ರಿಯೆಗಳನ್ನು ನಿಗದಿಪಡಿಸುವಾಗ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪರಿಗಣಿಸತಕ್ಕದ್ದು.
1. ಸಂವಿಧಾನದಲ್ಲಿನ ಮೌಲ್ಯಗಳ ಅನುಸರಣೆ;
2. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ.
3. ಮಕ್ಕಳ ಜ್ಞಾನ, ಸಾಮರ್ಥ್ಯ ಮತ್ತು ಪ್ರತಿಭೆಯ ವರ್ಧನೆ;
4. ಪೂರ್ಣ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ವಿಕಸನ;
5. ಶಿಶು ಸ್ನೇಹಿ ಮತ್ತು ಶಿಶು ಕೇಂದ್ರೀಕೃತ ವಾತಾವರಣದಲ್ಲಿ ಚಟುವಟಿಕೆಗಳು ಮತ್ತು ಕಲಿಕೆ;
6. ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಶಿಕ್ಷಣ ಮಾಧ್ಯಮವು ಮಕ್ಕಳ ಮಾತೃಭಾಷೆಯಲ್ಲಿರತಕ್ಕದ್ದು;
7. ಮಗುವಿನ ಭಯ, ಆಘಾತ ಹಾಗೂ ಆತಂಕ ಹೋಗಲಾಡಿಸುವುದು ಮತ್ತು ಮಗು ಮುಕ್ತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನೆರವಾಗುವುದು;
8. ಜ್ಞಾನದ ಗ್ರಹಿಕೆ ಮತ್ತು ಅದನ್ನು ಅನ್ವಯಿಸುವ ಆತನ ಅಥವಾ ಆಕೆಯ ಸಾಮರ್ಥ್ಯದ ಬಗ್ಗೆ ಮಕ್ಕಳ ಸಮಗ್ರ ಹಾಗೂ ನಿರಂತರ ಮೌಲ್ಯ ನಿರ್ಧರಣೆ.
ಗುಣಾತ್ಮಕ ಶಿಕ್ಷಣಕ್ಕೆ ಈ ಕಾಯ್ದೆಯಲ್ಲಿ ಒದಗಿಸಿರುವ ಎಲ್ಲಾ ಅವಕಾಶಗಳ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಅಧಿನಿಯಮ, 2005 ಅಡಿಯಲ್ಲಿ ರಚಿತವಾದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಥವಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವಹಿಸಲಾಗಿದೆ.
ಈ ಕಾಯ್ದೆಯಲ್ಲಿ ಅವಕಾಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಸಲಹೆ ನೀಡಲು ರಾಜ್ಯ ಸಲಹಾ ಮಂಡಳಿಯನ್ನು ರಾಜ್ಯ ಸರಕಾರ ರಚಿಸಬೇಕಿದೆ. ಈ ಸಲಹಾ ಮಂಡಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ತಜ್ಞರಾದ ಮತ್ತು ಪ್ರಾಯೋಗಿಕ ಅನುಭವವನ್ನು ಹೊಂದಿರುವ ವ್ಯಕ್ತಿಗಳನ್ನು ನೇಮಿಸಬೇಕು. ಸಮಿತಿಯಲ್ಲಿನ ಸದಸ್ಯರ ಸಂಖ್ಯೆ ಹದಿನೈದಕ್ಕೆ ಮೀರಬಾರದು.
ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಂದರೆ ರಾಜ್ಯ ಸರಕಾರಗಳು ನಿಯಮಗಳನ್ನು ರಚಿಸಿಕೊಳ್ಳಬಹುದು. ನಿಯಮಗಳನ್ನು ರಚಿಸಿಕೊಳ್ಳುವಾಗ ಈ ಕಾಯ್ದೆಯಲ್ಲಿ ತಿಳಿಸಿರುವ ಮೂಲಾಂಶಗಳಿಗೆ ಬಾಧಕವಾಗದಂತೆ ರಚಿಸಿಕೊಳ್ಳಬೇಕು. ಈ ಕಾಯ್ದೆಯ ಮೇರೆಗೆ ರಾಜ್ಯ ಸರಕಾರ ರಚಿಸಿದ ಯಾವುದೇ ನಿಯಮ ಅಥವಾ ಅಧಿಸೂಚನೆಯನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲಗಳ ಮುಂದೆ ಮಂಡಿಸಿ ಅಂಗೀಕರಿಸ ತಕ್ಕದ್ದು.
ನಮ್ಮ ದುರಾದೃಷ್ಟವೆಂದರೆ, ಕಾಯ್ದೆ ಜಾರಿಯಾಗಿ ಹದಿನಾಲ್ಕು ವರ್ಷಗಳು ಮುಗಿದರೂ ಈ ಮಹತ್ವದ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೂರ್ಣವಾಗಿ ಸೋತಿವೆ.
ಇಂತಹ ವಿಷಮ ಕಾಲಘಟ್ಟದಲ್ಲಿ, ಈ ಕಾಯ್ದೆಯನ್ನು ರೂಪಿಸಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದೇಶದ ಮುಂದೆ ಕಾಯ್ದೆ ಜಾರಿಯಾದಾಗ ಪ್ರತಿಜ್ಞೆಗೈದಿದ್ದ ಮಹಾ ಮುತ್ಸದ್ದಿ, ಸಜ್ಜನ ರಾಜಕಾರಣಿ ಹಾಗೂ ರಾಜ್ಯ ನೀತಿಜ್ಞ ಡಾ. ಮನಮೋಹನ ಸಿಂಗ್‌ನಮ್ಮನ್ನು ಅಗಲಿದ್ದಾರೆ. ಅವರನ್ನು ಗುಣಗಾನ ಮಾಡುವ ಕೆಲಸಗಳು ಪ್ರಾರಂಭವಾಗಿವೆ. ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ಅವರ ಕಾಲಾವಧಿಯಲ್ಲಿ ಮಾಡಿದ ಕೆಲಸಗಳು ಹಲವಾರು ಗ್ರಂಥಗಳನ್ನು ರಚಿಸುವಷ್ಟು ಸತ್ವ ಹೊಂದಿವೆ. ಈ ಮಹಾನ್‌ಚೇತನಕ್ಕೆ ನಿಜವಾದ ಗೌರವ ಸಮರ್ಪಣೆಯೆಂದರೆ, ಅವರ ಅವಧಿಯಲ್ಲಿ ರೂಪಿಸಿ ಜಾರಿಗೊಳಿಸಲಾದ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒಂದು ಉನ್ನತ ಮಟ್ಟದ ಆಯೋಗವನ್ನು ರಚಿಸಿ ಇತರ ರಾಜ್ಯಗಳಿಗೆ ಮಾದರಿಯಾಗುವಂತೆ ಅನುಷ್ಠಾನಗೊಳಿಸುವುದು. ಕರ್ನಾಟಕದ ಕಾಂಗ್ರೆಸ್ ಸರಕಾರ ಇದನ್ನು ಮಾಡುವುದೇ ಎಂದು ಕಾದು ನೋಡಬೇಕಿದೆ!