ಓದುಗರೊಂದಿಗೆ ಸಂವಾದದ ಗುಣ ಪ್ರಾಪ್ತವಾಗಿಸುವ ಮುಝಫರ್ ಅಸ್ಸಾದಿ ಬರಹಗಳು
‘ಇನ್ನೊಂದು ಮುಖ’ಕ್ಕೆ ಮುನ್ನುಡಿ
ತಮ್ಮ ಅಂಕಣಬರಹಗಳ ಸಂಕಲನ ‘ಇನ್ನೊಂದು ಮುಖ’ ಅನಾವರಣಗೊಳ್ಳುತ್ತಿರುವ ಸಂದರ್ಭದಲ್ಲಿ, ಅದರ ಸಮಗ್ರ ಓದಿನಿಂದ ನನಗೆ ದೊರೆತ ಸಂತೃಪ್ತಿ ಮತ್ತು ತಲ್ಲಣಗಳನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸಿದ ಗೆಳೆಯ ಪ್ರಾಧ್ಯಾಪಕ ಮುಝಫರ್ ಅಸ್ಸಾದಿ ಒಬ್ಬ ‘ಬಂಡಾಯ ಸಂತ’ನಂತೆ ಕಾಣಿಸುತ್ತಾರೆ. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಅಸ್ಸಾದಿ ಅಂಕಣಗಳನ್ನು ಬಹುಮಟ್ಟಿಗೆ ನಿರಂತರವಾಗಿ ಓದುತ್ತಾ ಬಂದ ನನಗೆ ಈ ಮೂವತ್ತೆರಡು ಲೇಖನಗಳ ಸಂಕಲನದ ಮರುಓದು ನಿಜವಾಗಿಯೂ ನಮ್ಮದೇ ಆದ ಇನ್ನೊಂದು ಮುಖವನ್ನು ಕಾಣಲು ಅವಕಾಶ ಕಲ್ಪಿಸಿತು.
ಸಮಕಾಲೀನ ರಾಜಕೀಯಕ್ಕೆ ಪ್ರತಿಕ್ರಿಯೆಯನ್ನು ಕೊಡುವುದು ಎಂದರೆ, ಪ್ರಶ್ನೆಗಳನ್ನು ಕೇಳುತ್ತಾ ಹೋಗುವುದು ಮತ್ತು ಸಂಬಂಧವಿಲ್ಲ ಎಂದು ಸಾಮಾನ್ಯ ನೋಟಕ್ಕೆ ಕಾಣಿಸುವ ಸಂಗತಿಗಳನ್ನು ಮುಖಾಮುಖಿಯಾಗಿಸುತ್ತಾ ಚರ್ಚಿಸುವುದು. ಈ ರೀತಿ ಒಳಹೊಕ್ಕು ಸಾಂದರ್ಭಿಕ ಸನ್ನಿವೇಶಗಳನ್ನು ಹಿಡಿದು ಜೋರಾಗಿ ಕುಲುಕಿದಾಗ ಚೆಲ್ಲಾಪಿಲ್ಲಿಯಾಗಿ ಉದುರುವ ಚಿಂತನೆಗಳನ್ನು ಒಂದುಕಡೆ ರಾಶಿಹಾಕಿ ಆಯ್ದುಕೊಳ್ಳುತ್ತಾ ಬಂದರೆ, ಅಲ್ಲಿ ಭೂತ, ವರ್ತಮಾನ, ಭವಿಷ್ಯತ್‌ಗಳು ಒಂದು ಇನ್ನೊಂದರೊಡನೆ ಕಲಸು ಮೇಲೊಗರವಾಗಿ ನಮ್ಮ ಆತ್ಮಸಾಕ್ಷಿಯನ್ನು ಕೆದಕುತ್ತಾ ಕೆಣಕುತ್ತಾ ಬರುತ್ತವೆ.
ಇಂತಹ ಬರಹಗಳ ಮುಷ್ಟಿಗೆ ಸದ್ಯದ ಯಾವುದೇ ಘಟನೆ ಸಿಕ್ಕಬಹುದು. ಸಿದ್ಧರಾಜು ಮತ್ತು ಮಂಜುನಾಥ ಎಂಬ ರೈತರ ಆತ್ಮಹತ್ಯೆ, ರಂಗಾಯಣದ ಬಹುರೂಪಿಯಲ್ಲಿ ಕಂಡ ನಾಟಕ- ಸಿನೆಮಾಗಳು. ಖಾಸಗಿ ಕಂಪೆನಿಗಳು ರೈತರ ಕೃಷಿಭೂಮಿಯನ್ನು ಖರೀದಿಸಿದ್ದು, ಜಗತ್ತಿನ ಶ್ರೀಮಂತರಲ್ಲಿ ಭಾರತೀಯರು ಸೇರ್ಪಡೆಯಾದದ್ದು, ಹೊಸದಾಗಿ ತಲೆ ಎತ್ತುತ್ತಿರುವ ಮಾಲ್‌ಗಳು, ಆಹಾರವನ್ನು ಪಡೆಯಲು ನಡೆಯುವ ದೊಂಬಿಗಳು, ವೆನೆಝುವೆಲಾದ ಅಧ್ಯಕ್ಷ ಶ್ಯಾವೇಜ್‌ನ ಸಮಾಜವಾದ, ಮೀಸಲಾತಿಯ ಪರವಿರೋಧದ ಚರ್ಚೆಗಳು, ಮಥುರಾದಲ್ಲಿ ದಲಿತ ಹುಡುಗಿಯೊಬ್ಬಳನ್ನು ಬೆಂಕಿಗೆ ದೂಡಿದ್ದು, ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ, ದಿಲ್ಲಿಯಲ್ಲಿ ದಾರುಲ್ ಉಲೇಮಾ ಹೊರಡಿಸಿದ ‘ಫತ್ವಾ’, ಭೂಕಂಪಪೀಡಿತ ಮ್ಯಾನ್ಮಾರ್ ಅಮೆರಿಕದ ಸಹಾಯಧನವನ್ನು ನಿರಾಕರಿಸಿದ್ದು, ಮುಸ್ಲಿಮ್ ಮಹಿಳಾ ಪರ್ಸನಲ್ ಲಾಬೋರ್ಡ್ ಸಿದ್ಧಪಡಿಸಿದ ‘ನಿಖಾನಾಮ’, ಜನಪ್ರತಿನಿಧಿಗಳನ್ನು ವಾಪಸ್ ಕರೆಸುವ ಸ್ಪೀಕರ್ ಸೋಮನಾಥ ಚಟರ್ಜಿ ಅವರ ಪ್ರಸ್ತಾವ, ಭಾರತ-ಅಮೆರಿಕಗಳ ನಡುವಿನ ಅಣುಒಪ್ಪಂದ, ಭಾರತಕ್ಕೆ ಬಂದ ಬಿ.ಟಿ. ಬದನೇಕಾಯಿ, ಬಾಟಲಿ ನೀರಿನ ರಾಜಕೀಯ, ಗಾಂಧಿ ಜಯಂತಿಯ ದಿನ ಗಾಂಧಿಗೊಂದು ಪತ್ರ, ದಕ್ಷಿಣ ಕನ್ನಡದಲ್ಲಿ ಚರ್ಚ್‌ಗಳ ಮೇಲೆ ದಾಳಿ, ಲಾ ವಿಯ ಸಂಘಟನೆಯ ಜಾಗತೀಕರಣ ವಿರೋಧಿ ಹೋರಾಟ, ಕಾರ್ಲ್ ಮಾರ್ಕ್ಸ್‌ನ ನೆನಪು, ಮುಂಬೈ ಭಯೋತ್ಪಾದನೆಯ ದಾಳಿ, ಹಿಂದುಳಿದ ಜಾತಿಗಳ ಜನಗಣತಿ, ಮುಸ್ಲಿಮ್ ಐಡೆಂಟಿಟಿಯ ತಾಕಲಾಟ, ಅಮೆರಿಕದ ಅಧ್ಯಕ್ಷ ಒಬಾಮಾಗೆ ಪತ್ರ, ಸ್ಲಂಡಾಗ್ ಸಿನೆಮಾ, ಮಂಗಳೂರಿನಲ್ಲಿ ಫ್ಯಾಶಿಸಂ ಸಂಸ್ಕೃತಿ, ಹೊಸ ಭೂಮಾಲಕರ ಪ್ರವೇಶ, ಮತಾಂಧತೆಗೆ ಆಧುನಿಕತೆಯ ಸಂಬಂಧ, ‘ಆವರಣ’ ಕಾದಂಬರಿಯ ಅನಾವರಣ, ಭಯೋತ್ಪಾದನೆಯ ಸಾರ್ವತ್ರಿಕತೆ - ಹೀಗೆ ಘಟನೆ ಮತ್ತು ಸನ್ನಿವೇಶಗಳ ಜಾಡು ಹಿಡಿದು ಅದರ ಸಂಬಂಧ ಸೂಕ್ಷ್ಮಗಳ ಚರ್ಚೆ ನಡೆದು ಒಂದು ಪ್ರಶ್ನೆಯಾಗಿ, ಆತಂಕವಾಗಿ, ನಿಲುವೂ ಆಗಿ ಇಲ್ಲಿನ ಲೇಖನಗಳು ನಮ್ಮ ಮೆದುಳನ್ನು ತೊಳಸುತ್ತವೆ.
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಬೌದ್ಧಿಕರು ತಮ್ಮ ಈ ರೀತಿಯ ಆಲೋಚನೆಗಳನ್ನು ವಿಚಾರಸಂಕಿರಣಗಳಲ್ಲಿ ಕಮ್ಮಟಗಳಲ್ಲಿ ಪ್ರಕಟಿಸುವ ಸಂದರ್ಭಗಳು ಅವಕಾಶಗಳು ಇರುತ್ತವೆ. ಆದರೆ ಹೆಚ್ಚಿನ ಜನಸಮುದಾಯ ಓದುವ, ಬಹುತೇಕ ಮಧ್ಯಮವರ್ಗ ತಮ್ಮ ಅನನ್ಯತೆಯನ್ನು ಗುರುತಿಸಿಕೊಳ್ಳುವ ಪತ್ರಿಕೆಯಂತಹ ಸಮೂಹ ಮಾಧ್ಯಮದಲ್ಲಿ ಈ ರೀತಿಯ ವಿಷಯಮಂಡನೆ ಮತ್ತು ಚರ್ಚೆ ನಡೆಯುವುದರಿಂದ ಬೌದ್ಧಿಕತೆಗೆ ಸಾಮಾಜಿಕ ಸಮುದಾಯದ ಆಯಾಮ ಪ್ರಾಪ್ತಿಯಾಗುತ್ತದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಅಪಾರವಾದ ಆಳವಾದ ಬೌದ್ಧಿಕ ಓದು ತರಗತಿಯ ಪ್ರವಚನಗಳಿಗೆ, ಸಂಪ್ರಬಂಧಗಳ ರಚನೆಗೆ, ಸಂಕಿರಣಗಳ ಮಂಡನೆಗೆ ಸೀಮಿತವಾದಾಗ, ಅದೊಂದು ಸಾಮಾಜಿಕ ಆಂದೋಲನದ ಸ್ವರೂಪವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಕನ್ನಡದಂತಹ ಒಂದು ಪ್ರಾದೇಶಿಕ ಭಾಷೆಯ ದಿನಪತ್ರಿಕೆಯಲ್ಲಿ ಈ ಎಲ್ಲ ವಿಶೇಷ ತಿಳುವಳಿಕೆಯ ಸಂಗತಿಗಳು ಸದ್ಯದ ವರ್ತಮಾನದ ಜೊತೆಗೆ ಮುಖಾಮುಖಿಯಾಗಿ ‘ಸ್ಥಾಪಿತ’ ಎಂದು ಭಾವಿಸಲಾದ ಅಂಶಗಳು ಸಮಸ್ಯಾತ್ಮಕವಾದುವು ಎಂದು ಮನವರಿಕೆ ಯಾದಾಗ, ಒಂದೇ ಬಗೆಯ ಆಲೋಚನಾಕ್ರಮವನ್ನು ಒಪ್ಪಿಕೊಂಡ ಬಹುಪಾಲು ಸಾಮಾಜಿಕರು ಸಮಸ್ಯೆಯ ಇನ್ನೊಂದು ಮುಖದ ಕಡೆಗೆ ತಮ್ಮ ಗಮನವನ್ನು ಹರಿಸಲು ಸಾಧ್ಯವಾಗುತ್ತದೆ. ಸಾಮಾಜಿಕ ಸಂವಹನದ ದೃಷ್ಟಿಯಿಂದ ಇವತ್ತಿನ ಮುಖ್ಯ ಸಮಸ್ಯೆಯೆಂದರೆ, ನಾವು ವಿಷಯಗಳನ್ನು ಕಪ್ಪು ಬಿಳುಪಿನ ಮಾದರಿಯಲ್ಲಿ ಮಾತ್ರ ಮಂಡಿಸುವುದು ಮತ್ತು ಸ್ವೀಕರಿಸುವುದು. ಆದರೆ ಇದಕ್ಕೆ ಭಿನ್ನವಾಗಿ ವೈರುಧ್ಯದ ಸಂಕೀರ್ಣ ಸಂಗತಿಗಳು ನಮ್ಮ ನಡುವೆ ಇವೆ ಎನ್ನುವುದು ಅರ್ಥವಾದಾಗ ಸಮಸ್ಯೆಗಳನ್ನು ಬಹುರೂಪಗಳಲ್ಲಿ ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರದ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಕೋಮುವಾದ, ಜಾಗತೀಕರಣ, ಬಹುರಾಷ್ಟ್ರೀಯತೆ, ಜಾತಿವಾದ, ಆರ್ಥಿಕ ಉದಾರೀಕರಣ, ಭಯೋತ್ಪಾದನೆ, ರಾಜಕೀಯ ಪಾಳೆಯಗಾರಿಕೆ -ಈ ಎಲ್ಲ ಸಂಗತಿಗಳು ಇವತ್ತು ಪರ ಮತ್ತು ವಿರೋಧದ ಬಾಲಿಶ ಜಗಳದಲ್ಲಿ ಸಿಕ್ಕಿಕೊಳ್ಳುವ ವಸ್ತುಗಳಾಗಿವೆ. ಆದರೆ ಈ ರೀತಿಯ ಮನೋಧರ್ಮ ರೂಪುಗೊಳ್ಳುವ ಬಗೆಗಳು, ಅವುಗಳ ಶಕ್ತಿ ಮತ್ತು ದೌರ್ಬಲ್ಯಗಳು, ಅವುಗಳನ್ನು ಎದುರಿಸಲು ನಾವು ಬಳಸಿಕೊಳ್ಳಬೇಕಾದ ಸಾಧನಗಳು ಮತ್ತು ಕಾರ್ಯತಂತ್ರಗಳು ಇವೆಲ್ಲವನ್ನು ನಮ್ಮ ದೈನಂದಿನ ವಾಸ್ತವದ ಬದುಕಿನ ಮೂಲಕವೇ ವಿವರಿಸಬೇಕು. ಅಂತಹ ವಿಶಿಷ್ಟ ಮಾದರಿಗಳು ಅಸ್ಸಾದಿ ಅವರ ಬರಹಗಳಲ್ಲಿ ದೊರೆಯುತ್ತವೆ. ಯಾವುದೇ ಲೇಖನವನ್ನು ಬರೆಯುವಾಗಲೂ ಅಸ್ಸಾದಿ ತಮ್ಮ ಅಪಾರ ಓದಿನ ನೆರವಿನಿಂದ ಮಾಹಿತಿಗಳನ್ನು ತರುವುದರ ಜೊತೆಗೆಯೇ ಅಂತಹ ಮಾಹಿತಿಗಳನ್ನು ತಳದಲ್ಲಿಟ್ಟುಕೊಂಡು, ಅವುಗಳ ಮೇಲೆ ಅಭಿಪ್ರಾಯಗಳ, ಚಿಂತನೆಗಳ ಚರ್ಚೆಯನ್ನು ನಡೆಸುತ್ತಾರೆ. ಹೀಗಾಗಿ ಮಾಹಿತಿ ಮತ್ತು ಒಳನೋಟದ ಚರ್ಚೆಗಳು ಒಂದು ಸಮಕಾಲೀನ ಸಂಗತಿಯ ಸುತ್ತ ರೂಪಿತವಾಗಿ ಇಲ್ಲಿನ ಒಂದೊಂದು ಲೇಖನದಲ್ಲೂ ಓದುಗರೊಂದಿಗೆ ಸಂವಾದದ ಗುಣ ಪ್ರಾಪ್ತವಾಗುತ್ತದೆ.
ಗಾಂಧಿ, ಒಬಾಮಾರಿಗೆ ಬರೆಯುವ ಪತ್ರಗಳ ಆತ್ಮೀಯತೆ, ಮತಧರ್ಮಗಳ ಕುರಿತು ನಡೆಸುವ ಚರ್ಚೆಯಲ್ಲಿ ಇರುವ ಧೈರ್ಯ, ಆರ್ಥಿಕ ಮತ್ತು ರಾಜಕೀಯ ಯಜಮಾನಿಕೆಯನ್ನು ಕುರಿತು ಪ್ರತಿಕ್ರಿಯಿಸುವ ವ್ಯಂಗ್ಯ, ಸಿನೆಮಾ ಕಲೆಯ ನಿದರ್ಶನಗಳ ಮೂಲಕ ತನ್ನ ನಿಲುವುಗಳಿಗೆ ಕೊಡುವ ಸಾಂಸ್ಕೃತಿಕ ಸ್ಪರ್ಶ, ತುಂಬಾ ಅಪೂರ್ವವಾದ ಜಾಗತಿಕ ವಿದ್ಯಮಾನಗಳನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವ ಸಂಭ್ರಮ -ಹೀಗೆ ಅಸ್ಸಾದಿ ಆಯ್ಕೆ ಮಾಡಿಕೊಂಡಿರುವ ಬರಹಗಳು, ಅವರ ವಸ್ತು ಮತ್ತು ಬರವಣಿಗೆಗೆ ಹೊಸ ಶಕ್ತಿ ಮತ್ತು ಸೊಗಸನ್ನು ತಂದುಕೊಟ್ಟಿವೆ. ಇಲ್ಲಿನ ಮೂವತ್ತೆರಡು ಲೇಖನಗಳು ಒಂದು ಇನ್ನೊಂದರ ಜೊತೆಗೆ ಪರಸ್ಪರ ಮಾತನಾಡಿಕೊಳ್ಳುವ ಗುಣವನ್ನು ಹೊಂದಿವೆ. ‘ಸಂಕಥನ’ ಎಂದು ಕರೆಯಲಾಗುವ ದೊಡ್ಡ ಪರಿಭಾಷೆಯ ಒಳಗೆ ಈ ಎಲ್ಲ ಲೇಖನಗಳು ಸ್ನೇಹಿತರಂತೆ, ಕೆಲವೊಮ್ಮೆ ಸ್ಪರ್ಧಿಗಳಂತೆ, ಸ್ನೇಹ ಮತ್ತು ಜಗಳವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ‘ಐಡೆಂಟಿಟಿ’ ಎನ್ನುವುದು ನಮ್ಮ ಸಮಾಜ ಮತ್ತು ದೇಶದಲ್ಲಿ ಯಾವ ಬಗೆಗಳಲ್ಲಿ ಹರಳುಗಟ್ಟಬೇಕು ಎನ್ನುವ ಸಂವಾದದಲ್ಲಿ ಮುಝಫರ್ ಆಸ್ಸಾದಿ ಅವರ ಲೇಖನಗಳು ಮುಖ್ಯ ಪರಿಮಾಣವಾಗುವ ಶಕ್ತಿಯನ್ನು ಹೊಂದಿವೆ.
ಸ್ನೇಹದ ಕಾರಣಕ್ಕಾಗಿ ಈ ಅವಕಾಶ ಕಲ್ಪಿಸಿದ ಗೆಳೆಯ, ಪ್ರಾಧ್ಯಾಪಕ ಮುಝಫರ್ ಅಸ್ಸಾದಿಗೆ ಅಭಿನಂದನೆ ಹೇಳುತ್ತಾ, ಕನ್ನಡದ ಎಲ್ಲ ವರ್ಗಗಳ ಓದುಗರು ಈ ಬರವಣಿಗೆಯಿಂದ ಪ್ರಭಾವಿತರಾಗಿ ಕರ್ನಾಟಕದಲ್ಲಿ ಹೊಸ ಸಮಾಜವಾದದ ಐಡೆಂಟಿಟಿಯನ್ನು ರೂಪಿಸಲು ಸಾಧ್ಯವಾಗಲಿ ಎಂದು ಬಯಸುತ್ತೇನೆ.