ವಲಸೆ ಹಕ್ಕಿಗಳ ಏರಿಕೆ-ಇಳಿಕೆ!, ಅಪಾಯಕಾರಿ ಸಮುದ್ರ ತೀರಗಳು

Update: 2016-01-11 17:39 GMT

1ಸಮುದ್ರ ತೀರದಲ್ಲಿ ಗುಲಾಬಿ ಹಕ್ಕಿಗಳ ಮೇಳ


ಮುಂಬೈಯ ಆಕಾಶ ಮತ್ತು ಸಮುದ್ರತೀರ (ಖಾಡಿ ಪ್ರದೇಶಗಳು) ಈ ದಿನಗಳಲ್ಲಿ ಗುಲಾಬಿ ಸಮುದ್ರಪಕ್ಷಿಗಳ ಕಾರಣ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ. ಈ ವರ್ಷ ವಲಸೆ ಹಕ್ಕಿ ಫ್ಲೆಮಿಂಗೋ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ 25 ಪ್ರತಿಶತ ಹೆಚ್ಚು ಕಂಡು ಬಂದಿದೆ ಎಂದಿದ್ದಾರೆ ಪಕ್ಷಿ ತಜ್ಞರು. ಆದರೆ ಇದು ಸಂತೋಷ ಪಡುವ ಸಂಗತಿಯೇನೂ ಆಗಿಲ್ಲ. ಯಾಕೆಂದರೆ ಈ ಸಂಖ್ಯೆ ಹೆಚ್ಚಲು ಒಂದು ಕಾರಣವೂ ಇದೆ. ಪಕ್ಕದ ನವಿಮುಂಬೈ - ಥಾಣೆಯ ಸಮುದ್ರ ತೀರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಫ್ಲೆಮಿಂಗೋ ಪಕ್ಷಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದ್ದು ಅವು ಮುಂಬೈ ತೀರಗಳತ್ತ ಮುಖಮಾಡಿವೆ. ಸಮುದ್ರ (ಖಾಡಿ ಕ್ಷೇತ್ರ) ತೀರಗಳಲ್ಲಿ ಅತಿಕ್ರಮಣ ಪ್ರಕ್ರಿಯೆ ಜೋರಾಗಿವೆ. ಅನಿಯಮಿತ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಮತ್ತು ವನಕ್ಷೇತ್ರಗಳು ನಗರೀಕರಣಕ್ಕೆ ಒಳಗಾಗುತ್ತಿವೆ. ಮ್ಯಾಂಗ್ರೋವ್ಸ್ ಗಿಡಗಳ ಭಾರೀ ನಾಶ, ಪಕ್ಷಿಗಳಿಗೆ ಬೇಕಾದ ಆಹಾರ, ಮರಗಿಡಗಳ ಕೊರತೆ, ಸಮುದ್ರಕ್ಕೆ ರಾಸಾಯನಿಕ ಪದಾರ್ಥಗಳು ಹರಿದು ಬರುತ್ತಿರುವುದು, ಜೋಪಡಿ ಪಟ್ಟಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು, ಪ್ರಸ್ತಾವಿತ ನವ್ಹಾ - ಶೇವಾ ಟ್ರಾನ್ಸ್‌ಹಾರ್ಬರ್ ಲಿಂಕ್, ಕೋಸ್ಟಲ್ ರೋಡ್‌ಗೆ ಅಂತಿಮ ಮಂಜೂರಿ.....ಇತ್ಯಾದಿಗಳಿಂದ ತೀರಕ್ಷೇತ್ರದಲ್ಲಿ ಫ್ಲೆಮಿಂಗೋ ಹಕ್ಕಿಗಳು ಬರುವುದು ಕಡಿಮೆಯಾಗಿವೆ. ಉರಣ್ ರಿಕ್ಲಮೇಶನ್‌ನಿಂದ ಸಮುದ್ರ ತೀರದ ತನಕ ಹರಡಿರುವ ನೂರಾರು ಎಕರೆ ಪ್ರದೇಶಗಳಲ್ಲಿದ್ದ ಮ್ಯಾಂಗ್ರೋವ್ ಗಿಡಗಳು ಸಂಪೂರ್ಣ ಕಣ್ಮರೆಯಾಗಿವೆ. ಇವುಗಳು ಶತಮಾನಗಳಿಂದ ವಲಸೆ ಹಕ್ಕಿಗಳಿಗೆ ಮುಖ್ಯ ಸ್ಥಳವಾಗಿ ಗುರುತಿಸಲ್ಪಟ್ಟಿತ್ತು. ಈ ಪಕ್ಷಿಗಳಿಗೆ ಈಗ ಕೂರಲು ಪರ್ಯಾಯ ಸ್ಥಳವಿಲ್ಲದೆ ಮುಂಬೈ ತೀರಗಳತ್ತ ಬಂದಿವೆ ಅಷ್ಟೇ. ಮುಂಬೈಯ ಶಿವಡಿ, ನವಿಮುಂಬೈಯ ಐರೋಲಿ, ಭಾಂಡುಪ್, ವಾಶಿ.... ಇಂತಹ ಸ್ಥಳಗಳ ಆಕಾಶ ಮತ್ತು ಖಾಡಿ ತೀರಗಳಲ್ಲಿ ಸುಂದರ ಗುಲಾಬಿ ಸಮುದ್ರ ಪಕ್ಷಿಗಳು ಪ್ರವಾಸಿಗರ ಮುಖ್ಯ ಆಕರ್ಷಣೆ ಆಗಿದೆ.
ಉರಣ್‌ನಲ್ಲಿ ಕಳೆದ ವರ್ಷ ಜೆ.ಎನ್.ಪಿ.ಟಿ, ಸಿಡ್ಕೋ, ಓ.ಎನ್.ಜಿ.ಸಿ., ರಿಲಯನ್ಸ್‌ನ ಎಸ್.ಇ.ಝಡ್ ವಸತಿ ಮತ್ತು ಬಂದರು ಕ್ಷೇತ್ರದ ವಿಸ್ತರಣೆ..... ಮುಂತಾದವುಗಳಿಂದಾಗಿ ಸಮುದ್ರ ತೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ರಮಣಗಳಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರವಾಸಿ ಪಕ್ಷಿಗಳ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಸುವ ‘ಏಕ್‌ವೀರಾ ಆಯಿ ಪ್ರತಿಷ್ಠಾನ’ದ ನಿರ್ದೇಶಕ ನಂದಕುಮಾರ್ ಪವಾರ್ ಹೇಳುತ್ತಾರೆ -ಇದು ಮುಂಬೈಗೆ ಉತ್ತಮ ಸಂಕೇತವೇನೂ ಅಲ್ಲ. ಎಸ್.ಇ.ಝಡ್.ಗಾಗಿ ನೂರಾರು ಎಕರೆ ಜಮೀನು ಹೋಗುತ್ತಿದೆ. ಖಾಡಿ ಕ್ಷೇತ್ರ, ಸಮುದ್ರ ತೀರಗಳ ಕ್ಷೇತ್ರವನ್ನು ಗಮನಿಸಿದರೆ ಮುಂದೊಂದು ದಿನ ಮುಂಬೈ ತೀರಗಳಿಗೂ ಈ ಸ್ಥಿತಿ ಬರುವ ಸಾಧ್ಯತೆಗಳೂ ಇರಬಹುದು.

* * * 2ಮನಪಾ ಚುನಾವಣೆ : ನಗರಸೇವಕರಿಗೆ ಮಹತ್ವವಾದ 2016
ಮುಂಬೈ ಮಹಾನಗರ ಪಾಲಿಕೆಯಲ್ಲಿ ಮುಂದಿನ 2017ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ 2016ರ ವರ್ಷ ನಗರ ಸೇವಕರಿಗೆ ಬಹಳ ಮಹತ್ವಪೂರ್ಣವಾಗಿದೆ. ಮುಂದಿನ ಬಾರಿಯೂ ಸ್ಪರ್ಧಿಸುವ ಇಚ್ಛೆಯುಳ್ಳ ನಗರ ಸೇವಕರು ಈಗಿಂದೀಗಲೇ ಅದಕ್ಕೆ ತಯಾರಾಗುತ್ತಿದ್ದಾರೆ.
ಮುಂಬೈಯ ವಿಕಾಸಕ್ಕಾಗಿ ತಯಾರಿಸಲಾದ ಡೆವೆಲಪ್‌ಮೆಂಟ್ ಪ್ಲ್ಯಾನ್ ಈ ವರ್ಷ ಜಾರಿಗೆ ಬರಬಹುದಾಗಿದೆ. ಇದರಿಂದ ನಗರದ ವಿಕಾಸ ಸರಿಯಾಗಿ ಗೋಚರಿಸಲಿದೆ. ಇವುಗಳಲ್ಲಿ ನೀರು ಮತ್ತು ರಸ್ತೆ ಮುಖ್ಯವಾಗಿ ಗಮನಿಸಲಾಗಿದೆ. ವಾಟರ್ ಬಿಲ್‌ನಲ್ಲಿ ಶೇಕಡಾ 8 ಹೆಚ್ಚುವರಿ ಹೇರಲಾಗುವುದು. ನೀರು ಶುದ್ಧೀಕರಣ ಸಹಿತ ಮಹಾನಗರಕ್ಕೆ ಮನೆ-ಮನೆಗೆ ನೀರು ಪೂರೈಸುವುದಕ್ಕೆ ಮನಪಾಕ್ಕೆ ಒಂದು ಸಾವಿರ ಲೀಟರ್ ನೀರಿನ ಹಿಂದೆ 12 ರೂಪಾಯಿ ಖರ್ಚು ಬರುತ್ತದೆ. ಆದರೆ ಮನಪಾ ಮುಂಬೈಕರ್‌ಗೆ 4 ರಿಂದ 5 ರೂಪಾಯಿ ದರದಲ್ಲಿ ಒಂದು ಸಾವಿರ ಲೀಟರ್ ನೀರು ಪೂರೈಸುತ್ತಿದೆ. ಹೀಗಾಗಿ 2016ರಲ್ಲಿ ವಾಟರ್ ಬಿಲ್‌ನಲ್ಲಿ ಶೇಕಡಾ 8 ರಷ್ಟು ವೃದ್ಧಿಯಾಗಲಿದೆ. ಮಹಾನಗರಕ್ಕೆ ನೀರು ಪೂರೈಸುವ ಸರೋವರಗಳಲ್ಲಿ ಈ ಬಾರಿ ಕಡಿಮೆ ಮಳೆ ಬಿದ್ದಿದೆ. ಹೀಗಾಗಿ ಈ ವರ್ಷ ನೀರಿನ ಕಡಿತವನ್ನು ಎದುರಿಸಬೇಕಾಗಿದೆ. ಸದ್ಯಕ್ಕೆ ಜೂನ್ 2016 ರ ತನಕ 15 ಶೇಕಡಾ ನೀರಿನ ಕಡಿತ ಜಾರಿ ಇರುವುದು. ಅಲ್ಲದೆ ಮುಂಬೈ ರಸ್ತೆಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣದ ತಯಾರಿ ನಡೆಯುತ್ತಿದೆ.
ಮಹಾನಗರ ಪಾಲಿಕೆಯು ತಯಾರಿಸಿದ ತಿದ್ದುಪಡಿ ಮಾಡಲಾದ ಡೆವೆಲಪ್‌ಮೆಂಟ್ ಪ್ಲ್ಯಾನ್ ಈ ವರ್ಷ ಫೆಬ್ರವರಿ 16, 2016ರೊಳಗೆ ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಾಗುತ್ತದೆ.
* * *
3ಅಪಾಯಕಾರಿಯಾಗುತ್ತಿರುವ ಮುಂಬೈ ಬೀಚ್
ಪ್ರವಾಸಿಗರ ಅಚ್ಚುಮೆಚ್ಚಿನ ಮುಂಬೈಯ ಸಮುದ್ರ ತೀರಗಳು ಎಷ್ಟು ಸುರಕ್ಷಿತವಾಗಿವೆ ಪ್ರವಾಸಿಗರಿಗೆ? ಕಳೆದ ಐದು ವರ್ಷಗಳಲ್ಲಿ ಒಟ್ಟು 159 ಜನರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆರ್‌ಟಿಐ ಕಾರ್ಯಕರ್ತ ಶರದ್ ಯಾದವ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿವರ ಪಡೆದಿದ್ದಾರೆ.

ಸಮುದ್ರ ತೀರಗಳಲ್ಲಿ ಮಕ್ಕಳು, ಯುವಕರು ಮತ್ತು ವಿದೇಶಿಯರು ತಿರುಗಾಡಲು ಹೆಚ್ಚು ಇಷ್ಟಪಡುತ್ತಾರೆ. ದೇಶ ವಿದೇಶಗಳ ಪ್ರವಾಸಿಗರು ಮುಂಬೈಗೆ ಬಂದರೆ ಸಮುದ್ರ ತೀರ ಸುತ್ತಾಡದೆ ಹಿಂದಿರುಗಲಾರರು. ಆದರೆ. ಮಹಾನಗರಪಾಲಿಕೆ ಇಲ್ಲಿನ ಸೌಲಭ್ಯಗಳ ಬಗ್ಗೆ ವಿಶೇಷ ಗಮನ ನೀಡುತ್ತಿಲ್ಲ. ಮುಂಬೈ ಮಹಾನಗರ ಪಾಲಿಕೆ ಮೂಲಗಳು ಹೇಳುವಂತೆ 2013ರಲ್ಲಿ ಸಮುದ್ರ ತೀರದಲ್ಲಿ ಮುಳುಗಿ ಯಾರೂ ಸಾವನ್ನಪ್ಪಿಲ್ಲ! ಆದರೆ ಆರ್.ಟಿ.ಐ. ಅಂಕಿ ಅಂಶಗಳು ಬೇರೆಯೇ ಹೇಳುತ್ತಿವೆ. ಕಳೆದ ಐದು ವರ್ಷಗಳ ಅಂಕಿ ಅಂಶಗಳು ಹೀಗಿವೆ : 2011ರಲ್ಲಿ 40, 2012ರಲ್ಲಿ 27, 2013ರಲ್ಲಿ 28 ಮತ್ತು 2014ರಲ್ಲಿ 35 ಮೃತರಾಗಿದ್ದಾರೆ. ಜನವರಿಯಿಂದ ಆಗಸ್ಟ್ 2015ರ ತನಕ 29 ಜನ ಮೃತರಾಗಿದ್ದಾರೆಂದು ಆರ್.ಟಿ.ಐ.ಗೆ ನೀಡಿದ ಮಾಹಿತಿ ತಿಳಿಸಿದೆ.
          ಆದರೆ ಮುಖ್ಯ ಫೈರ್ ಅಧಿಕಾರಿ ಪಿ.ಎಸ್. ರಹಾಂದಲೆ ಹೇಳುತ್ತಾರೆ ‘‘ಮುಂಬೈ ಬೀಚುಗಳಲ್ಲಿ ಜನರ ಸುರಕ್ಷೆಗೆ ಲೈಫ್‌ಗಾರ್ಡ್‌ಗಳನ್ನು ನೇಮಿಸಲಾಗಿದೆ. ಆದರೆ ಜನರು ಸೂಚನೆಗಳನ್ನು ನಿರ್ಲಕ್ಷಿಸಿ ಅವಘಡಗಳಿಗೆ ಬಲಿಯಾಗುತ್ತಿದ್ದಾರೆ.’’ ಮನಪಾದ ವಿಪಕ್ಷ ನಾಯಕ ದೇವೇಂದ್ರ ಆಂಬೇಕರ್ ಹೇಳುತ್ತಾರೆ ‘‘ಮುಂಬೈ ಬೀಚುಗಳ ಸ್ಥಿತಿ ತೀರಾ ಕೆಟ್ಟದಾಗಿದೆ. ಲೈಫ್‌ಗಾರ್ಡ್‌ಗಳಿಗೆ ರಕ್ಷಣೆ ಸಂದರ್ಭದಲ್ಲಿ ನೀಡಿದ ಸೌಲಭ್ಯಗಳು ತೀರಾ ಕಳಪೆ ಮಟ್ಟದ್ದಾಗಿದೆ’’ ಎಂದು.
* * *
4‘ನಿರೂಪಮ್ ಹಟಾವೋ’ ಅಭಿಯಾನ
ಕಾಂಗ್ರೆಸ್‌ನ ಮುಖವಾಣಿ ‘ಕಾಂಗ್ರೆಸ್ ದರ್ಶನ್’ದಲ್ಲಿ ಬಂದ ಲೇಖನದ ವಿವಾದ ನಿಲ್ಲುವಂತೆ ಕಾಣುತ್ತಿಲ್ಲ. ಈ ವಿವಾದವನ್ನು ಮುಂದಿಟ್ಟು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರೂಪಮ್‌ರನ್ನು ಆ ಸ್ಥಾನದಿಂದ ಎಬ್ಬಿಸುವ ಅಭಿಯಾನ ಮುಂದುವರಿದಿದೆ. ಕಾಂಗ್ರೆಸ್‌ನ ಎರಡೂ ಬಣಗಳು ಈ ವಿಷಯದಲ್ಲಿ ಒಟ್ಟಾಗಿವೆ. ಕೇಂದ್ರ ಮಹಾಕಾರ್ಯದರ್ಶಿ ಗುರುದಾಸ್ ಕಾಮತ್ ಬಣ ಮತ್ತು ಪಾರ್ಟಿಯ ಒಳಗೆ ಅವರ ಪ್ರತಿಸ್ಪರ್ಧಿ ಬಣ ಇಬ್ಬರೂ ಈ ವಿಷಯದಲ್ಲಿ ಒಟ್ಟಾಗಿದ್ದು ‘ನಿರುಪಮ್ ಹಟಾವೋ’ ಅಭಿಯಾನ ನಡೆಸುತ್ತಿದ್ದಾರೆ.
ಮುಂಬೈ ಕಾಂಗ್ರೆಸ್‌ನ ಮುಖವಾಣಿ ಕಾಂಗ್ರೆಸ್ ದರ್ಶನ್‌ನ ಡಿಸೆಂಬರ್ ಸಂಚಿಕೆಯಲ್ಲಿ ಸೋನಿಯಾರ ತಂದೆಯವರನ್ನು ಫ್ಯಾಶಿಸ್ಟ್ ಎನ್ನಲಾಗಿದೆ. ಪಕ್ಷದಲ್ಲಿ ಸೇರಿದ 62 ದಿನಗಳೊಳಗೆ ರಾಷ್ಟ್ರೀಯ ಅದ್ಯಕ್ಷರಾದ ಬಗ್ಗೆಯೂ ಉಲ್ಲೇಖವಿದೆ. ಜವಾಹರ್‌ಲಾಲ್ ನೆಹರೂ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಮಾತು ಕೇಳಿದ್ದರೆ ಕಾಶ್ಮೀರದಂತಹ ಸಮಸ್ಯೆ ಇರುತ್ತಿರಲಿಲ್ಲ.....ಇಂತಹ ಮಾತುಗಳು ಭಾರೀ ಚರ್ಚೆ ಎಬ್ಬಿಸಿವೆ.
ಮುಂಬೈ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕಾರಣ ಪತ್ರಿಕೆಯಲ್ಲಿ ಸಂಪಾದಕರ ಹೆಸರು ನಿರೂಪಮ್ ಅವರದ್ದೇ ಇದೆ. ನಿರೂಪಮ್ ಈಗಾಗಲೇ ಕ್ಷಮೆ ಕೇಳಿದ್ದಾರೆ. ತಾನು ಪತ್ರಿಕೆಯ ಪ್ರತೀದಿನದ ವಿಷಯವನ್ನು ಗಮನಿಸುವುದಿಲ್ಲ ಎಂದೂ ತಿಳಿಸಿದ್ದಾರೆ. ಇದೀಗ ಗುರುದಾಸ್ ಕಾಮತ್ ಬಣ ಮತ್ತು ವಿರೋಧಿ ದೇವ್ರಾ -ಕೃಪಾಶಂಕರ್ ಸಿಂಗ್ ಮತ್ತು ನಸೀಮ್ ಖಾನ್ ಬಣ ಎಲ್ಲರೂ ನಿರೂಪಮ್‌ರನ್ನು ಆ ಸ್ಥಾನದಿಂದ ಕಿತ್ತೆಸೆಯಲು ನೋಡುತ್ತಿದ್ದಾರೆ. ಹೊಸತಾಗಿ ಎಂ.ಎಲ್.ಸಿ. ಆಗಿ ಚುನಾಯಿತರಾದ ಭಾಯಿ ಜಗ್‌ತಾಪ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಈ ಎರಡೂ ಬಣಗಳು ‘ನಿರೂಪಮ್ ಹಟಾವೋ’ ಎಂಬ ಅಭಿಯಾನಕ್ಕೆ ಒತ್ತು ನೀಡಿವೆ.
ಇತ್ತ ನಿರೂಪಮ್ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪ್ರಭಾರಿ ಮೋಹನ್ ಪ್ರಕಾಶ್ ಸ್ಪಷ್ಟೀಕರಣ ಸ್ವೀಕರಿಸಲಾಗಿದೆ ಎಂದು ನಿರೂಪಮ್‌ಗೆ ಕೆಲಸ ಮುಂದುವರಿಸಲು ಹೇಳಿದ್ದಾರೆ.

* * * 5 ನವಿಮುಂಬೈಯಲ್ಲಿ ಹೈಬ್ರೀಡ್ ಬಸ್ಸು
ಡೀಸೆಲ್ ಮತ್ತು ವಿದ್ಯುತ್ ಬ್ಯಾಟರಿಯಲ್ಲಿ ಓಡುವ ಬಸ್ಸು ದಕ್ಷಿಣ ಏಶ್ಯಾ ದೇಶಗಳ ನಂತರ ಈಗ ಭಾರತದ ನವಿಮುಂಬೈ ನಗರದ ರಸ್ತೆಗಳಲ್ಲಿ ಓಡುವ ತಯಾರಿ ನಡೆಸಿದೆ. ಹೈಬ್ರೀಡ್ ಪ್ರವಾಸಿ ಬಸ್ಸು ನವಿಮುಂಬೈ ಮನಪಾ ಸಾರಿಗೆ ಇಲಾಖೆಯಲ್ಲಿ ಜನವರಿ ತಿಂಗಳಲ್ಲಿ ಸೇರಿಕೊಳ್ಳುತ್ತಿದೆ.
ವೋಲ್ವೋ ಕಂಪೆನಿ ನಿರ್ಮಿಸಿದ್ದ ಈ ಆರಾಮದಾಯಕ ಬಸ್‌ನ ಬೆಲೆ 2 ಕೋಟಿ 30 ಲಕ್ಷ ರೂಪಾಯಿ ಎನ್ನಲಾಗಿದೆ. ಎನ್.ಎಂ.ಎಂ.ಟಿಯಲ್ಲಿ ಈ ಬಸ್ಸು ಸೇರಿಕೊಂಡ ನಂತರ ನವಿಮುಂಬೈ ದೇಶದ ಹೈಬ್ರೀಡ್ ಬಸ್ಸು ಓಡುವ ನಗರ ಎಂಬ ಕೀರ್ತಿ ಪಡೆಯಲಿದೆ. ಕೆಲವು ದಿನಗಳ ಮೊದಲು ಹೊಸದಿಲ್ಲಿ ಯಲ್ಲಿ ಪ್ರಧಾನಿ ಹಸ್ತದಿಂದ ಈ ಮೊದಲ ಬಸ್‌ನ ಲೋಕಾರ್ಪಣೆ ಆಗಿತ್ತು.
ಎನ್.ಎಂ.ಎಂ.ಟಿ.ಯಲ್ಲಿ ಈಗ 360 ಬಸ್ಸುಗಳಿವೆ. 51 ಮಾರ್ಗಗಳಲ್ಲಿ ಅವು ಓಡಾಡುತ್ತಿವೆ. ಇದೀಗ 2 ಹೈಬ್ರೀಡ್ ಬಸ್ಸುಗಳನ್ನು ಖರೀದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News