ಸಂವಿಧಾನಕ್ಕೆ ಸವಾಲಾದ ಜಾತಿ ವ್ಯವಸ್ಥೆ

Update: 2016-01-17 17:36 GMT

‘ಜಾತಿಗೊಂದು ಮಠವಿದ್ದರೆ ತಪ್ಪೇನಿಲ್ಲ’ ಎಂದು ಪೇಜಾವರ ಮಠಾಧಿಪತಿಗಳು ನೀಡಿದ ಹೇಳಿಕೆ ಈಗ ಇಪ್ಪತ್ತು ವರ್ಷಗಳ ಹಿಂದೆ ನೀಡಿದ್ದರೆ ದೊಡ್ಡ ವಿವಾದವೇ ಸೃಷ್ಟಿಯಾಗುತ್ತಿತ್ತು. ಆದೇರೀತಿ ‘‘ಕೀಳು ಜಾತಿಯ ಜನರಿಂದ ಲಿಂಗಾಯಿತ ಹುಡುಗಿಯರ ಮೇಲೆ ಅತ್ಯಾಚಾರ ದೌರ್ಜನ್ಯ ನಡೆಯುತ್ತಿದೆ’’ ಎಂಬ ವಾಕ್ಯ ವೀರಶೈವ ಮಹಾಸಭೆಯ ವಾರ್ಷಿಕ ವರದಿಯಲ್ಲಿ ಮುದ್ರಿತವಾಗಿದ್ದು ಈಗ ಲೀಲಾವತಿ ಪ್ರಸಾದರನ್ನು ಹೊರತು ಪಡಿಸಿದರೆ ಯಾರಿಂದಲೂ ಅಂಥ ಪ್ರತಿರೋಧ ಬರಲಿಲ್ಲ. ಇದೇ ವಾಕ್ಯ ಎಪ್ಪತ್ತು ಎಂಬತ್ತರ ದಶಕದಲ್ಲಿ ಮುದ್ರಿತವಾಗಿದ್ದರೆ ಕೋಲಾಹಲ ಉಂಟಾಗುತ್ತಿತ್ತು.

ಈಗ ಕಾಲ ಬದಲಾಗಿದೆ. ಜಾತಿಗಳನ್ನು ಗಟ್ಟಿಗೊಳಿಸಿ ವರ್ಗ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಹುನ್ನಾರ ನಡೆದಿದೆ. ಈ ಜಾತಿ ಧ್ರುವೀಕರಣ ಮೇಲ್ಜಾತಿಗಳಲ್ಲಿ ತೀವ್ರವಾಗಿ ನಡೆದಿದೆ. ಅದರೆ ದಮನಿತ ಜಾತಿಗಳು ಹಿಂದುತ್ವದ ಹುಚ್ಚು ಹೊಳೆಯಲ್ಲಿ ತೇಲಿ ಹೋಗುತ್ತಿವೆ. ಅಂತಲೆ ಪೇಜಾವರರ ಆರ್ಭಟ ಹೆಚ್ಚಾಗಿದೆ. ರಾಜ್ಯದಲ್ಲಿ ಇಂಥ ಸನ್ನಿವೇಶ ನಿಧಾನವಾಗಿ ಇಂತಹ ಹೇಳಿಕೆಗಳು ಬರುತ್ತಿರುವಾಗಲೇ ಹೊಸಪೇಟೆ ಸಮೀಪದ ಮುನಿರಾಬಾದ್ ಅಣೆಕಟ್ಟು ಸಮೀಪದ ರಮ್ಯತಾಣದಲ್ಲಿ ನಾವೆಲ್ಲ-ಜಾತಿಯನ್ನು ವಿರೋಧಿಸುವವರು ಸೇರಿದ್ದೆವು. ದಲಿತ ಸಂಘರ್ಷ ಸಮೀತಿಯ ಗೆಳೆಯ ಲಕ್ಷ್ಮಿನಾರಾಯಣ ನಾಗವಾರ ನಮ್ಮನ್ನು ಅಲ್ಲಿ ಸೇರಿಸಿದ್ದರು. ಜಿ.ಕೆ. ಗೋವಿಂದರಾವ್, ಸಚಿವ ಸತೀಶ್ ಜಾರಕಿಹೊಳಿ, ದಿನೇಶ್ ಅಮೀನ್ ಮಟ್ಟು, ಮಲ್ಲಿಕಾ ಘಂಟಿ, ಮಂಗ್ಳೂರ ವಿಜಯ, ಲೊಹಿಯಾ ಪ್ರಕಾಶನದ ಚೆನ್ನಬಸಮ್ಮ, ಮಾನವ ಬಂಧುತ್ವ ವೇದಿಕೆಯ ವಿಲ್‌ಫ್ರೆಡ್ ಡಿಸೋಜ, ಅಲ್ಲಮಪ್ರಭು ಬೆಟ್ಟದೂರು, ಇಂದಿರಾ ಕೃಷ್ಣಪ್ಪ, ಶ್ರೀಪಾದಭಟ್, ಅಲಿಬಾಬಾ, ಎನ್.ವಿ. ನರಸಿಂಹಯ್ಯ ಹಾಗೆ ಸಮಾನ ಮನಸ್ಕರೆಲ್ಲ ಅಲ್ಲಿದ್ದೆವು.
 
ಲಕ್ಷ್ಮಿ ನಾರಾಯನ ನಾಗವಾರ ತಮ್ಮ ಕಾರ್ಯಕರ್ತರಿಗಾಗಿ ಪ್ರತಿವರ್ಷ ನಡೆಸುವ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡ ನಾವೆಲ್ಲ ಹೊಸನಾಡು ಕಟ್ಟುವ ಕನಸನ್ನು ಹಂಚಿಕೊಳ್ಳುತ್ತಿದ್ದೆವು. ನಾಗವಾರರು ಪ್ರತಿವರ್ಷ ಇಂಥ ಅಧ್ಯಯನ ಶಿಬಿರಗಳನ್ನು ನಡೆಸಿ ತಮ್ಮ ಕಾರ್ಯಕರ್ತರಿಗೆ ಸೈದ್ದಾಂತಿಕ ಅರಿವು ಮೂಡಿಸುತ್ತಾರೆ. ಅವರು ನಡೆಸುವ ಶಿಬಿರ ಪೇಟೆ ಪಟ್ಟಣಗಳಿಂದ ದೂರವಿರುತ್ತದೆ. ಹುಡುಕಿದರಲ್ಲಿ ಒಂದ ಹೊಟೇಲ್ ಕೂಡ ಸಿಗುವುದಿಲ್ಲ. ಈ ಬಾರಿ ಮುನಿರಾಬಾದದ ಎತ್ತರದ ಪ್ರದೇಶದ ಮೇಲೆ ಇಂಥ ಶಿಬಿರವನ್ನು ಅವರು ನಡೆಸಿದರು. 2013ರಲ್ಲಿ ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗದಲ್ಲಿ ಇಂಥದೊಂದು ಶಿಬಿರವನ್ನು ನಾಗವಾರ ಏರ್ಪಡಿಸಿದ ನಂತರ ಮೈಸೂರಲ್ಲಿ ಒಂದು ಶಿಬಿರ ನಡೆಯಿತು. ಪ್ರತಿಬಾರಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ತರುಣರು ಈ ಶಿಬಿರಕ್ಕೆ ಬರುತ್ತಾರೆ. ನಾಗವಾರ ಅವರೊಟ್ಟಿಗೆ ಸಮಾಜವಾದಿ ಚಿಂತಕ ಮಂಗ್ಳೂವಿಜಯ ತೆರೆಮರೆಯಲ್ಲಿ ನಿಂತು ಶಿಬಿರದ ರೂಪು ರೇಷೆ ಸರಿಪಡಿಸುತ್ತಾರೆ. ಇನ್ನೊಬ್ಬ ಲೊಹಿಯವಾದಿ ಗೆಳೆಯ ಅಲ್ಲಿ ಕೈಯಲ್ಲಿ ಬೆತ್ತ ಹಿಡಿದು ಶಿಬಿರದಲ್ಲಿ ಶಿಸ್ತಿಗೆ ಭಂಗ ಬಾರದಂತೆ ನೋಡಿಕೊಳ್ಳುತ್ತಾರೆ.
 


ಈ ಬಾರಿ ನಮ್ಮ ನಾಡಿನ ಹಿರಿಯ ಚೇತನ ಜಿ.ಕೆ. ಗೋವಿಂದರಾವ್ ಶಿಬಿರವನ್ನು ಉದ್ಘಾಟಿಸಿ ಅನೇಕ ದಶಮಾನಗಳಿಂದ ಬೇರುಬಿಟ್ಟ ಜಾತಿ ಪದ್ಧತಿಯ ವಿನಾಶ ಮೇಲ್ಜಾತಿಯವರಿಂದ ಮಾತ್ರ ಸಾಧ್ಯ. ಪೇಜಾವರರು ಹಿಂದೂ ನಡತೆ ಬಗ್ಗೆ ಮಾತಾಡುತ್ತಾರೆ. ಆದರೆ, ವಿಷ್ಣುವನ್ನು ಪೂಜಿಸುವ ಮಾಧ್ವರು, ಶಿವನ ದೇವಾಲಯಕ್ಕೆ ಹೋಗುವುದಿಲ್ಲ. ಶಿವನನ್ನು ಆರಾಧಿಸುವ ಸ್ಮಾತ್ವರು ವಿಷ್ಣು ದೇವಾಲಯಕ್ಕೆ ಹೋಗುವುದಿಲ್ಲ ಎಂದು ಗೋವಿಂದರಾವ್ ಹೇಳಿದರು. ಈ ಶಿಬಿರದ ಕೊನೆಯ ದಿನ ಹಂಪಿ, ವಿಶ್ವವಿದ್ಯಾನಿಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಮಾತನಾಡಿ ‘‘ಸಂವಿಧಾನದಿಂದಲೂ ಜಾತಿ ನಾಶವಾಗಲಿಲ್ಲ’’ ಎಂದು ವಿಷಾದಿಸಿದರು. ‘‘ಆರೆಸ್ಸೆಸ್‌ನವರು ನಮ್ಮ ಹುಡುಗರನ್ನೇ ನಮ್ಮ ವಿರುದ್ಧ ಎತ್ತಿಕಟ್ಟಿ ಅವರ ಕೈಗೆ ಬಂದೂಕು ಕೊಟ್ಟು ಕೊಲ್ಲಿಸುತ್ತಾರೆ’’ ಎಂದು ಆಡಿದ ಮಾತು ನಾವೆದುರಿಸುತ್ತಿರುವ ಕಟುಸತ್ವವನ್ನು ನಮ್ಮೆದುರು ಅನಾವರಣಗೊಳಿಸಿತು. ಮಲ್ಲಿಕಾ ಘಂಟಿ ನಮ್ಮ ಬಿಜಾಪುರ ಜಿಲ್ಲೆಯವರು. ಕಳೆದ ನಾಲ್ಕು ದಶಕಗಳಿಂದ ನಮ್ಮ ಕುಟುಂಬದ ಜೊತೆಗೆ ಆತ್ಮಿಯ ಬಾಂಧವ್ಯ ಹೊಂದಿರುವವರು. ಎಪ್ಪತ್ತರ ದಶಕದ ಕೊನೆಯಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಮಲ್ಲಿಕಾ ವ್ಯಾಸಂಗ ಮಾಡುವಾಗ ಹುಬ್ಬಳ್ಳಿಯ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಆಗ ಹಗಲೂ ರಾತ್ರಿ ಕ್ರಾಂತಿಯ ಚಿಂತೆ ಮಾಡುತ್ತಿದ್ದ ನಾವೆಲ್ಲ ಮುಂಜಾನೆಯೇ ಕ್ರಾಂತಿಯಾಗುತ್ತದೆ ಎಂದು ಅದನ್ನು ಕಾಣಲು ರಾತ್ರಿ ನಿದ್ರಿಸುತ್ತಲೇ ಇರಲಿಲ್ಲ. ಇಂಥ ಘಂಟಿ ನಂತರ ಕಲಬುರ್ಗಿ ಹಾಗೂ ಸಂಡೂರಲ್ಲಿ ವಿಶ್ವವಿದ್ಯಾನಿಲಗಳ ಉಪನ್ಯಾಸಕಿಯಾಗಿ ಅಲ್ಲಿ ಜಾತಿವಾದಿಗಳಿಂದ ನಾನಾ ಚಿತ್ರಹಿಂಸೆ ಅನುಭವಿಸಿದರು. ಸಂಡೂರಿನಲ್ಲಿದ್ದಾಗ ಅಲ್ಲಿನ ಕುಮಾರಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಕಟ್ಟುಪಾಡನ್ನು ಧಿಕ್ಕರಿಸಿ ಹೆಣ್ಣುಮಕ್ಕಳನ್ನು ಕಟ್ಟಿಕೊಂಡು ದೇವಾಲಯದೊಳಗೆ ನುಗ್ಗಿದರು. ಹೀಗೆ ನಾನಾ ಕ್ರಾಂತಿಗಳನ್ನು ಮಾಡಿ ಅವರೀಗ ಹಂಪಿ ವಿ.ವಿ. ಕುಲಪತಿಯಾಗಿದ್ದಾರೆ.


ಈ ಮೂರು ದಿನಗಳ ಅಧ್ಯಯನ ಶಿಬಿರದಲ್ಲಿ ನಮ್ಮೆಲ್ಲರ ಹೆಮ್ಮೆಯ ದಿನೇಶ್ ಅಮೀನ್ ಮಟ್ಟು ಬಂದಿದ್ದರು. ಜಾತಿ ವ್ಯವಸ್ಥೆಯ ಕರಾಳ ಸ್ವರೂಪವನ್ನು ಬಿಚ್ಚಿಟ್ಟರು. ಇಂಥ ಕಾರ್ಯಕ್ರಮಗಳನ್ನು ಎಂದೂ ತಪ್ಪಿಸಿಕೊಳ್ಳದ ಸಚಿವ ಸತೀಶ್ ಜಾರಕಿಹೊಳಿ ಬುದ್ಧ, ಅಂಬೇಡ್ಕರ್, ಫುಲೆ ನೀಡಿದ ಬೆಳಕಿನಲ್ಲಿ ಸಾಗಬೇಕಾದ ದಲಿತರು ತಿರುಪತಿಗೆ ಹೋಗುವುದನ್ನು, ಸತ್ಯ ನಾರಾಯಣ ಪೂಜೆ ಮಾಡಿಸುವುದನ್ನು ಕಟುವಾಗಿ ಟೀಕಿಸಿದರು. ಬಸವಣ್ಣ, ತುಕಾರಾಮ, ದಾಬೋಳ್ಕರ್, ಪನ್ಸಾರೆ, ಕಲಬುರ್ಗಿ ಹೀಗೆ ಜಾತಿವಾದಿಗಳಿಂದ ಹತ್ಯೆಗೊಳಗಾದವರ ಪಟ್ಟಿಯನ್ನೇ ನೀಡಿದ ಜಾರಕಿಹೊಳಿ, ಜ್ಯೋತಿಷ್ಯ ಕಂದಾಚಾರಗಳ ವಂಚನೆಗೆ ಬೀಳಬಾರದು ಎಂದರು. ಬೌದ್ಧ ಧರ್ಮ ಸೇರಿದ್ದಾಗಿ ಹೇಳಿದ ಪರಮೇಶ್ವರರಿಂದ ಹಿಡಿದು ರಾಜ್ಯ ಸಂಪುಟದ ಸಚಿವರೆಲ್ಲ ಹೋಮ ಮಾಡಿ ಜ್ಯೋತಿಷಿಗಳನ್ನು ಕೇಳಿ ಅಧಿಕಾರ ಸ್ವೀಕರಿಸುತ್ತಿರುವ ಈ ದಿನಗಳಲ್ಲಿ ಜಾರಕಿಹೊಳಿ ಉಳಿದವರಿಗಿಂತ ಭಿನ್ನವೆನಿಸುತ್ತಾರೆ. ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ಇನ್ನೊಬ್ಬ ಗೆಳೆಯ ಮಾನವ ಬಂಧುತ್ವ ವೇದಿಕೆಯ ವಿಲ್‌ಫ್ರೆಡ್ ಡಿಸೋಜ ನಾವ ಚಳವಳಿಗೆ ಬಂದ ದಿನಗಳನ್ನು ನೆನಪಿಸಿಕೊಂಡರು. ಎಪ್ಪತ್ತರ ದಶಕದಲ್ಲಿ ಬೆಳ್ತಂಗಡಿಯಲ್ಲಿ ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದ ಕಮ್ಯೂನಿಸ್ಟ್ ನಾಯಕ ಕೆ.ವಿ. ಯಶಚಿತ್ತಾಯರ ಪ್ರಭಾವದಿಂದ ಎಡಪಂಥಿಯ ಚಳವಳಿಗೆ ಬಂದುದಾಗಿ ಹೇಳಿದ ಅವರು ಮತ್ತೆ ಹೋರಾಟಗಳನ್ನು ಕಟ್ಟಿ ಹೊಸನಾಡಿನ ಕನಸನ್ನು ನನಸಾಗಿಸಿಕೊಳ್ಳಬೇಕಾಗಿದೆ ಎಂದರು. ಈ ಅಧ್ಯಯನ ಶಿಬಿರದಲ್ಲಿ ಮಾತಾಡಿದ ಇನ್ನೊಬ್ಬ ಯುವ ಮಿತ್ರ ಗೋಕಾಕದ ರವಿ ನಾಯಕ ಮೀಸಲಾತಿಯ ವಂಚನೆ ಬಗ್ಗೆ ಪ್ರಸ್ತಾಪಿಸಿ ‘‘ಈ ದೇಶದಲ್ಲಿ ಕೆಲವರಿಗೆ ಐದು ಸಾವಿರ ವರ್ಷದಿಂದ ಮೀಸಲಾತಿ ಇದೆ. ಅಂಥವರು ಈಗ ಹಿಂದುಳಿದವರ ಮೀಸಲಾತಿ ವಿರುದ್ಧ ಅಪಸ್ವರ ಎತ್ತುತ್ತಿದ್ದಾರೆ. ಬ್ರಾಹ್ಮಣರ ಮೀಸಲು ವ್ಯವಸ್ಥೆಯಲ್ಲಿ ದನ ಮೇಯಿಸುವುದು ನಮ್ಮ ಕೆಲಸವಾಗಿದ್ದರೆ, ಹಾಲು, ಬೆಣ್ಣೆ, ತುಪ್ಪ ತಿನ್ನುವುದು ಅವರ ಮೀಸಲಾತಿಯಾಗಿತ್ತು ಎಂದರು. ಉಳಿದಂತೆ ಆರೆಸ್ಸೆಸ್‌ನ ಫ್ಯಾಸಿಸ್ಟ್ ಹುನ್ನಾರದ ಬಗ್ಗೆ ಡಿ.ಶ್ರೀಪಾದಭಟ್, ಮಹಿಳಾ ಸಬಲೀಕರಣದ ಬಗ್ಗೆ ಇಂದಿರಾ ಕೃಷ್ಣಪ್ಪ, ದಲಿತ ಚಳವಳಿಯ ಒಗ್ಗೂಡುವಿಕೆಯ ಬಗ್ಗೆ ಮಂಗ್ಳೂರ ವಿಜಯ, ರಾಜಕಾರಣದಲ್ಲಿ ದಲಿತರ ಪಾತ್ರದ ಬಗ್ಗೆ ಅಲ್ಲಮಪ್ರಭು ಬೆಟ್ಟದುರು ಹೀಗೆ ಅನೇಕ ಗೆಳೆಯರು ಮಾತಾಡಿದರು. ನಾಡಿನೆಲ್ಲೆಡೆಯಿಂದ ಬಂದ ಯುವಕರು ಉತ್ಸಾಹವನ್ನು ಮೈತುಂಬ ತುಂಬಿಕೊಂಡು ಹೋದರು. ಆದರೆ ಪರಿಸ್ಥಿತಿ ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ಪೇಜಾವರರು ಸುಮ್ಮನೆ ಕುಳಿತಿಲ್ಲ. ಅವರು ಬರೀ ಉಡುಪಿ ಮಠಾಧಿಪತಿಗಳು ಮಾತ್ರವಲ್ಲ ಪೇಜಾವರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾ ಬೆಂಬಲಿಗ. ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೃಷ್ಣಾರ್ಪಣ ಮಾಡಿ ಮನುವಾದಿ ಹಿಂದೂರಾಷ್ಟ್ರ ನಿರ್ಮಾಣ ಮಾಡುವುದು ಅವರ ಗುರಿಯಾಗಿದೆ. ಈ ಗುರಿ ಸಾಧನೆಗಾಗಿ ಈ ಇಳಿ ವಯಸ್ಸಿನಲ್ಲೂ ಅವರ ದೇಶಾದ್ಯಂತ ಓಡಾಡುತ್ತಿದ್ದಾರೆ. ಇನ್ನು ಸಂಘಪರಿವಾರದ ಬೆಂಬಲಿಗರು ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನಲ್ಲೇ ಇದ್ದಾರೆ. ಆರೆಸ್ಸೆಸ್‌ನ ಪತ್ರಿಕೆ ಸಾಹಿತ್ಯ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರೇ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ. ಎಲ್ಲ ಬಲಪಂಥೀಯ ಪಕ್ಷಗಳಲ್ಲಿ ರಿಯಲ್ ಎಸ್ಟೇಟ್, ಮೈನಿಂಗ್ ಮಾಫಿಯಾಗಳು ತುಂಬಿಕೊಂಡಿವೆ. ಇವರಿಗೆಲ್ಲ ಬಡವರು, ದಲಿತರು ಅಲ್ಪಸಂಖ್ಯಾತರು ಒಂದಾಗವುದು ಬೇಕಾಗಿಲ್ಲ. ಅಂತಲೇ ವಿಭಜಕ ಶಕ್ತಿಗಳಿಗೆ ಇವರು ಬೆಂಬಲ ನೀಡುತ್ತಾರೆ.

ಒಂದು ಕಾಲದಲ್ಲಿ ಜಾತಿ ವಿನಾಶ ನಮ್ಮೆಲ್ಲರ ಗುರಿಯಾಗಿತ್ತು. ಡಾ.ಅಂಬೇಡ್ಕರ್, ಲೋಹಿಯಾ ಅದನ್ನೇ ಹೇಳಿದ್ದರು. ಆದರೆ ಈಗ ಜಾತಿ ಸಮಾನತೆಯ ಮಾತನ್ನು ಕೇಳುತ್ತಿದ್ದೇವೆ. ಜಾತಿ ಇಲ್ಲದ, ಭೀತಿ ಇಲ್ಲದ ಹೊಸ ನಾಡನ್ನು ಕಟ್ಟುವ ಕವಿ ಸತೀಶ ಕುಲಕಟ ಅವರ ಆಶಯ ಬರೀ ಹೋರಾಟದ ಹಾಡಾಗಿ ಮಾತ್ರ ಉಳಿದುಕೊಂಡಿದೆ. ಬಸವಣ್ಣ ನಮ್ಮವನು, ಭಗತ್ ಸಿಂಗ್ ಎಡಪಂಥೀಯರು, ವಿವೇಕಾನಂದರು ಮಾನವತಾವಾದಿ ಎಂದು ನಾವು ನಮ್ಮ ಪರಂಪರೆಯನ್ನು ಹೇಳುವ ಮುನ್ನವೇ ಸಂಘಪರಿವಾರದವರು ಡಾ. ಅಂಬೇಡ್ಕರ್ ಸಹಿತ ಇವರನ್ನೆಲ್ಲ ಹೈಜಾಕ್ ಮಾಡಿ ತಮಗಿಲ್ಲದ ಸಾತ್ವಿಕ ಪರಂಪರೆಯನ್ನು ಹೊಸದಾಗಿ ಕಟ್ಟಿಕೊಳ್ಳಲು ಹೊರಟ್ಟಿದ್ದಾರೆ. ನಮ್ಮಿಂದ ಅಪಹರಿಸಲ್ಪಟ್ಟ ಈ ಐಕಾನ್‌ಗಳನ್ನು ನಾವು ಮೊದಲು ಬಿಡಿಸಿಕೊಳ್ಳಬೇಕಾಗಿದೆ. ಈ ನಡುವೆ ಬ್ರಾಹ್ಮಣರು-ದಲಿತರು ಒಂದಾಗುವುದು ಬೇಕಾಗಿಲ್ಲ ಎಂದು ಪೇಜಾವರ ಯತಿಗಳು ಹೇಳಿದ್ದಾರೆ. ಆದರೆ ಈ ಯತಿಗಳು ಹಾಗೂ ಅವರ ಪರಿವಾರದವರಿಗೆ ಮನುಷ್ಯೆಲ್ಲ ಒಂದಾಗುವುದು ಬೇಕಾಗಿಲ್ಲ. ಹಿಂದೂ ಏಕತೆ ಬಗ್ಗೆ ಮಾತ್ರ ಮಾತಾಡುವ ಪೇಜಾವರರು ಹಿಂದೂ-ಮುಸ್ಲಿಂ-ಕ್ರೈಸ್ತ ಏಕತೆ ಬಗ್ಗೆ ಯಾಕೆ ಮಾತಾಡುವುದಿಲ್ಲ? ಹೀಗೆ ಸವಾಲುಗಳ ಸಾಗರವೇ ನಮ್ಮ ಮುಂದಿದೆ. ಪ್ರಗತಿಪರರಾದ ನಮ್ಮ ನಡುವೆ ಗೋಡೆ ಕಟ್ಟಿಕೊಂಡು ಕುಬ್ಜರಾಗುತ್ತಿದ್ದೇವೆ. ಈ ಗೋಡೆಗಳನ್ನು ಒಡೆಯುವ ನಿಟ್ಟಿನಲ್ಲಿ ಲಕ್ಷ್ಮಿನಾರಾಯಣ ನಾಗವಾರರ ಪ್ರಯತ್ನ ಶ್ಲಾಘನೀಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News