ಈ ದೇಶ ಯಾರದು?ದ್ರೋಹಿಗಳು ಯಾರು?

Update: 2016-01-24 17:39 GMT

ಹೈದರಾಬಾದ್‌ನ ರೋಹಿತ್ ವೇಮುಲಾ ನಮ್ಮನ್ನಗಲಿ ಎಂಟು ದಿನಗಳಾದವು.ಎಂಬತ್ತು ವರ್ಷಗಳ ಹಿಂದೆ ಬಾಬಾ ಸಾಹೇಬರಿಗೆ ಯಾರು ಚಿತ್ರ ಹಿಂಸೆ ನೀಡಿದರೋ ಅವರೇ ಈ ರೋಹಿತನನ್ನು ಕೊಂದರು.ಆಗ ಅಂಬೇಡ್ಕರ್ ನೆರವಿಗೆ ಬರೋಡಾ ಮಹಾರಾಜರು, ಶಾಹು ಮಹಾರಾಜರು ಬಂದಿದ್ದರು. ಈಗ ರೋಹಿತ್ ಸಾವನ್ನು ತಪ್ಪಿಸಲು ಯಾರೂ ಬರಲಿಲ್ಲ.ಆದರೆ ಸಾವಿನ ನಂತರ ಪ್ರತಿಭಟನೆಯ ಅಲೆಯೇ ಎದ್ದಿದೆ.

ರೋಹಿತ್ ನೇಣು ಬಿಗಿದುಕೊಂಡು ಅಸುನೀಗಿದ ಒಂದು ವಾರದ ನಂತರ ಮೊಸಳೆ ಕಣ್ಣೀರು ಸುರಿಸಿದ ಪ್ರಧಾನಿ ನರೇಂದ್ರ ಮೋದಿ ‘ಆತನ ತಾಯಿಯ ಸಂಕಟ ತನಗೆ ಅರ್ಥವಾಗುತ್ತದೆ’ ಎಂಬ ನಾಟಕದ ಮಾತನ್ನಾಡಿದರು.ಆದರೆ ಈ ಸಾವಿಗೆ ಕಾರಣರಾದ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮತಿ ಇರಾಣಿ ಮೇಲೆ ಕ್ರಮ ಕೈಗೊಳ್ಳುವ, ರಾಜೀನಾಮೆ ಕೊಡಿಸುವ ಬಗ್ಗೆ ಅವರು ಮಾತಾಡಲಿಲ್ಲ. ರೋಹಿತ್ ಮೇಲೆ ಕೈಗೊಂಡ ಕ್ರಮವನ್ನು ಸ್ಮತಿ ಇರಾಣಿ ಸಮರ್ಥಿಸುತ್ತಾರೆ.ಪ್ರಧಾನಿ ಹಾಗಾಗಬಾರದಿತ್ತು ಎನ್ನುತ್ತಾರೆ ಯಾವುದು ನಿಜ?

ರೋಹಿತ್ ಸಾವಿನ ಒಂದು ವಾರದ ನಂತರವೂ ಈತನನ್ನು ಮತ್ತು ಈತನ ಗೆಳೆಯರನ್ನು ದೇಶದ್ರೋಹಿ ಎಂದು ಬಿಂಬಿಸಲು ಗೋಳ್ವಲ್ಕರ್‌ವಾದಿ ಮಾನವ ವಿರೋಧಿ ಶಕ್ತಿಗಳು ಯತ್ನಿಸುತ್ತಲೇ ಇವೆ. ಬಂಡಾರು ದತ್ತಾತ್ರೇಯ ಸ್ಮತಿ ಇರಾಣಿ, ಮುರಳೀಧರರಾವ್ (ಬಿಜೆಪಿ ಕಾರ್ಯದರ್ಶಿ) ಇವರೆಲ್ಲರ ದೃಷ್ಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ದೇಶದ್ರೋಹಿ.ಯಾಕೆಂದರೆ ಆತ ಚಡ್ಡಿ ಧರಿಸಿ ಸಂಘದ ಶಾಖೆಗೆ ಹೋಗಲಿಲ್ಲ.ಪುರೋಹಿತಶಾಹಿಗೆ ಅಡ್ಡ ಬೀಳಲಿಲ್ಲ.

ರೋಹಿತ್ ‘ರಾಷ್ಟ್ರದ್ರೋಹಿ’ ಎನ್ನಲು ಇವರಿಗೆ ನಾಚಿಕೆಯಾಗಬೇಕಿತ್ತು.ಇವರಂತೆ ರೋಹಿತ್ ಯಾವುದೇ ಧರ್ಮದ ಪ್ರಾರ್ಥನಾ ಮಂದಿರವನ್ನು ಕೆಡವಿರಲಿಲ್ಲ.ಯಾವ ಮಹಾತ್ಮನ ಎದೆಗೂ ಗುಂಡಿಕ್ಕಿರಲಿಲ್ಲ.ಪರಸ್ಪರ ಪ್ರೀತಿಸಿದ ಯಾವ ಯುವ ಜೋಡಿಯ ಮೇಲೂ ಹಲ್ಲೆ ಮಾಡಿರಲಿಲ್ಲ. ಹಾಗೆ ಮಾಡಲಿಲ್ಲ ಎಂದೇ ಆತ ರಾಷ್ಟ್ರದ್ರೋಹಿಯಾಗಿದ್ದಾನೆ. ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ಕಟ್ಟುವುದನ್ನು ಬಿಟ್ಟು ಆರೆಸ್ಸೆಸ್ ಶಾಖೆಗೆ ಹೋಗಿದ್ದರೆ ಆತ ರಾಷ್ಟ್ರಭಕ್ತನಾಗುತ್ತಿದ್ದ.

ದಲಿತರನ್ನು, ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಿ ಜನಾಂಗ ದ್ವೇಷದ ದಳ್ಳುರಿ ಎಬ್ಬಿಸಲು ಹೊರಟ ಸಂಘಪರಿವಾರದ ಮನುವಾದಿ ಫ್ಯಾಶಿಸ್ಟ್ ಹುನ್ನಾರಗಳಿಗೆ ರೋಹಿತ್‌ನಂಥ ದಲಿತ ಯುವಕರು ಬಲಿಯಾಗಲಿಲ್ಲ. ಹೀಗಾಗಿ ಹತಾಶಗೊಂಡ ಸಮಾಜ ವಿರೋಧಿ, ದೇಶದ್ರೋಹಿ ಸಂಘಟನೆಗಳು ರೋಹಿತ್ ಮತ್ತು ಆತನ ಗೆಳೆಯರು ದೇಶ ವಿರೋಧಿ, ಉಗ್ರಗಾಮಿ, ನಕ್ಸಲೀಯ ಎಂದು ಅಪಪ್ರಚಾರ ಆರಂಭಿಸಿದವು. ಇದರಿಂದ ಮೊದಲೇ ಹತಾಶೆಗೊಂಡ ರೋಹಿತ್ ಕುಗ್ಗಿಹೋದ.

ಆದರೂ ಅಂಬೇಡ್ಕರ್, ಫುಲೆ, ಕಾರ್ಲ್‌ಮಾರ್ಕ್ಸ್‌ರನ್ನು ಓದಿಕೊಂಡಿದ್ದ ತಲೆಯಲ್ಲಿ ಮೆದುಳಿದ್ದ ರೋಹಿತ್ ವೇಮುಲಾ ಈ ಪುರೋಹಿತ ಶಾಹಿಗಳ ಮಾತು ಕೇಳಿ ಬಕರಾ ಆಗಲಿಲ್ಲ.ಸಾವರ್ಕರ್, ಗೋಳ್ವಲ್ಕರ್ ಪ್ರಪಾತಕ್ಕೆ ಕೊಂಡೊಯ್ಯುವ ಅಪಾಯಕಾರಿ ಹಾದಿ ಎಂದು ಆತ ತಿಳಿದುಕೊಂಡಿದ್ದ. ಅಂತಲೇ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದವರ, ಶಂಭೂಕನ ವಧೆ ಮಾಡಿದ ಶನಿ ಸಂತಾನಕ್ಕೆ ಸೇರಿದವರ ವಂಚನೆಯ ಬಲೆಗೆ ಆತ ಸಿಗಲಿಲ್ಲ. ಈ ರೋಹಿತ್‌ನನ್ನು ಎಬಿವಿಪಿಗೆ ಸೇರಿಸಿಕೊಂಡು ದಾರಿ ತಪ್ಪಿಸುವ ಮಸಲತ್ತು ನಡೆಯಿತು. ಆದರೆ ಈತ ಓದಿಕೊಂಡಿದ್ದ ಅಂಬೇಡ್ಕರ್ ಸಾಹಿತ್ಯ ಆ ಪ್ರಪಾತದತ್ತ ಈತನನ್ನು ಹೋಗಗೊಡಲಿಲ್ಲ.ಹಾಗಾಗಿ ಮನುವಾದಿಗಳಿಗೆ ಈತನ ಮೇಲೆ ಕೆಂಡದಂಥ ಕೋಪ ಬಂತು. ಅಂತಲೇ ವಿಶ್ವವಿದ್ಯಾನಿಲಯದ ಚಡ್ಡಿ ಕುಲಪತಿ ಅಪ್ಪಾರಾವ್ ಕಿವಿಯೂದಿ ಈ ದುಷ್ಕೃತ್ಯ ಎಸಗಿದರು.

ಅಂಬೇಡ್ಕರ್, ಫುಲೆ, ಕಾರ್ಲ್‌ಮಾರ್ಕ್ಸ್ ವೈಚಾರಿಕ ಸಾಹಿತ್ಯ ಓದಿಕೊಂಡಿದ್ದ ರೋಹಿತ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಅಂಬೇಡ್ಕರ್ ಅಸೋಸಿಯೇಶನ್ ಕಟ್ಟಿಕೊಂಡು ನಿರಂತರವಾದ ವೈಚಾರಿಕ ಜಾಗೃತಿ ಚಟುವಟಿಕೆಗಳಲ್ಲಿ ತೊಡಗಿದ್ದರು.ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಕೋಮುವಾದಿ, ಜಾತಿವಾದಿ ಶಕ್ತಿಗಳ ಹುನ್ನಾರಗಳ ಬಗ್ಗೆ ವಿಚಾರಗೋಷ್ಠಿ ಚರ್ಚೆಗಳನ್ನು ನಡೆಸುತ್ತಿದ್ದರು.ಇವೇ ಸಂಘಪರಿವಾರದ ದೃಷ್ಟಿಯಲ್ಲಿ ದೇಶದ್ರೋಹವಾಯಿತು.

 ರೋಹಿತ್ ಆತ್ಮಹತ್ಯೆಗೂ ಮುನ್ನ ಅನುಭವಿಸಿದ ಯಾತನೆ, ಚಿತ್ರಹಿಂಸೆಗಳ ಬಗ್ಗೆ ಕೇಳಿದಾಗ ಒಂಬತ್ತು ದಶಕಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಅನುಭವಿಸಿದ ಸಂಕಟ ನೆನಪಿಗೆ ಬಂತು.ಅಂದಿಗೂ, ಇಂದಿಗೂ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ.ಅಂದು ಅಂಬೇಡ್ಕರ್‌ರಿಗೆ ಚಿತ್ರ ಹಿಂಸೆ ನೀಡಿದವರೇ ಈಗ ರೋಹಿತ್ ನೇಣಿಗೆ ಏರಲು ಕಾರಣರಾಗಿದ್ದಾರೆ.

ಆಗ ಡಾ. ಅಂಬೇಡ್ಕರ್ ವಿದೇಶದಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ಬಂದಾಗ ಬರೋಡಾ ಮಹಾರಾಜರ ಆಹ್ವಾನವನ್ನು ಮನ್ನಿಸಿ ಬರೋಡಾಕ್ಕೆ ಹೋದರು.ಅಲ್ಲಿ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ.ಬರೋಡಾ ಮಹಾರಾಜರು ರೈಲು ನಿಲ್ದಾಣಕ್ಕೆ ಕಳಿಸಿಕೊಟ್ಟಿದ್ದ ಅಸಾಮಿ, ಅಂಬೇಡ್ಕರ್ ದಲಿತರು ಎಂದಾಕ್ಷಣ ರೈಲು ನಿಲ್ದಾಣಕ್ಕೆ ಬರಲಿಲ್ಲ. ಈ ಊರಲ್ಲಿ ತಂಗಲು ಹೊಟೇಲ್ ಹುಡುಕಿ ಹೊರಟರೆ ಎಲ್ಲ ಕಡೆಯೂ ಜಾತಿಯನ್ನು ಕೇಳಿದರು.ಕೆಲಸ ಮಾಡುವ ಕಚೇರಿಯಲ್ಲೂ ಕುಡಿಯಲು ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿದರು.

ಕೊನೆಗೂ ಅಂಬೇಡ್ಕರ್ ಪಾರ್ಸಿ ಹೊಟೇಲ್ ಒಂದರಲ್ಲಿ ಆಶ್ರಯ ಪಡೆದರು.ಅಲ್ಲೂ ನಡುರಾತ್ರಿ ಬಂದ ಜಾತಿವಾದಿಗಳ ಗುಂಪು ‘‘ನೀನು ಯಾರು?’’ಎಂದು ಕೇಳಿದರು.ತಾವೊಬ್ಬ ಹಿಂದೂ ಎಂದು ಹೇಳಿದರೂ ಒಪ್ಪದ ಗುಂಪು ‘‘ನಿನ್ನ ಜಾತಿ ಯಾವುದು?’’ ಎಂದು ಕೇಳಿತು - ನೀನು ದಲಿತ ಎಂದು ಹೇಳಿ ಹೊಟೇಲ್‌ನಿಂದ ಹೊರದಬ್ಬಿತು.ಕೊನೆಗೆ ದಾರಿ ಕಾಣದೆ ಬಾಬಾ ಸಾಹೇಬರು ತಮ್ಮ ಲಗೇಜು ಹೊತ್ತುಕೊಂಡು ರೈಲು ನಿಲ್ದಾಣಕ್ಕೆ ಬಂದರು.

ಎಂಬತ್ತು ವರ್ಷಗಳ ನಂತರವೂ ಈ ಪರಿಸ್ಥಿತಿ ಬದಲಾಗಿಲ್ಲ. ಅಂಬೇಡ್ಕರ್‌ವಾದಿಯಾದ ರೋಹಿತ್‌ನನ್ನು ಹೈದರಾಬಾದ್ ವಿ.ವಿ. ಹಾಸ್ಟೆಲ್‌ನಿಂದ ಹೊರ ಹಾಕಿತ್ತು. ಆಡಳಿತ ಸೌಧ, ಲೈಬ್ರರಿ, ಮೆಸ್ ಹಾಗೂ ಕ್ಯಾಂಪಸ್ ಪ್ರವೇಶವನ್ನು ನಿಷೇಧಿಸಿತ್ತು. ಹೀಗಾಗಿ ತನ್ನ ಐವರು ಗೆಳೆಯರೊಂದಿಗೆ ವಿ.ವಿ. ದ್ವಾರದ ಹೊರಗೆ ಬಟಾಬಯಲಲ್ಲಿ ಕುಳಿತ ರೋಹಿತ್ ಕೊರೆಯುವ ಚಳಿಯಲ್ಲಿ ಯಮ ಯಾತನಗೆ ಅನುಭವಿಸಿದ. ವಿಜ್ಞಾನ ಬರೆಯ ಬೇಕಾದವನು ಆತ್ಮಹತ್ಯೆ ಮಾಡಿಕೊಂಡ.

ಈಗಂತೂ ಈ ದೇಶದಲ್ಲಿ ಡಾ. ಅಂಬೇಡ್ಕರ್ ಹೆಸರು ಹೇಳುವುದು ಬಾಬಾ ಸಾಹೇಬರ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಳ್ಳುವುದು, ಸಮಾನತೆಗಾಗಿ ದನಿಯೆತ್ತುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಇದು ಅಂತಿಂಥ ಅಪರಾಧವಲ್ಲ ರಾಷ್ಟ್ರದ್ರೋಹಕ್ಕೆ ಸಮಾನವಾದ ಅಪರಾಧವಾಗಿದೆ. ವಿಶ್ವ ವಿದ್ಯಾನಿಲಯವೊಂದರಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಅಸೋಸಿಯೇಶನ್ ಕಟ್ಟಿಕೊಂಡರೆ ಜಾತಿವಾದವಾಗುತ್ತದೆ. ಕೋಮುವಾದ ವಿರೋಧಿಸಿದರೆ ಉಗ್ರಗಾಮಿ ಚಟುವಟಿಕೆಯಾಗುತ್ತದೆ.

ಅಂಬೇಡ್ಕರ್ ಮೂರ್ತಿಯನ್ನು ಮಾಡಿ ಈ ಕ್ರಾಂತಿ ವೀರನನ್ನು ಅವತಾರ ಪುರುಷರ ಸಾಲಿಗೆ ಸೇರಿಸಿ ಆತನ ವಿಚಾರಗಳನ್ನು ಸಮಾಧಿ ಮಾಡುವುದು ಮನುವಾದಿಗಳ ಹುನ್ನಾರ. ಮೂರ್ತಿ ಪೂಜೆ ಬಿಟ್ಟು ಅಂಬೇಡ್ಕರ್ ಸಾಹಿತ್ಯ ಓದಿಕೊಂಡು ಬೆಳಕಿನ ದಾರಿಯಲ್ಲಿ ನಡೆದರೆ ರಾಷ್ಟ್ರದ್ರೋಹ - ಇದು ಕೋಮುವಾದಿಗಳ ವಾದ.

ಈ ದೇಶದಲ್ಲಿ ಈಗ ಡಾ. ಅಂಬೇಡ್ಕರ್ ಹೆಸರು ಹೇಳುವುದು. ಬಾಬಾ ಸಾಹೇಬರ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಳ್ಳುವುದು, ಸಮಾನತೆಗಾಗಿ ದನಿಯೆತ್ತುವುದು ಮೋದಿ ಸರಕಾರದ ದೃಷ್ಟಿಯಲ್ಲಿ ದೇಶದ್ರೋಹವಾಗುತ್ತದೆ. ದಲಿತ ವಿದ್ಯಾರ್ಥಿಗಳು ಅಂಬೇಡ್ಕರ್ ವಿದ್ಯಾರ್ಥಿ ಅಸೋಸಿಯೇಶನ್ ಕಟ್ಟಿಕೊಂಡರೆ ಜಾತೀಯತೆಯಾಗುತ್ತದೆ. ಇದೇ ಕಾರಣಕ್ಕೆ ರೋಹಿತ್ ವೇಮುಲಾರಂಥ ಪ್ರತಿಭಾವಂತ ಯುವಕನ ಸಾವು ಸಂಭವಿಸುತ್ತದೆ.

ರೋಹಿತ್ ವೇಮುಲಾ ಸಾವು ಆಕಸ್ಮಿಕವಲ್ಲ. ಇದು ಹಿಂದು ರಾಷ್ಟ್ರ ನಿರ್ಮಾಣದ ಸಂಘಪರಿವಾರದ ಬೃಹತ್ ಮಸಲತ್ತಿನ ಒಂದು ಭಾಗ.ಹಿಂದೂ ರಾಷ್ಟ್ರದಲ್ಲಿ ಮುಸಲ್ಮಾನರು, ಕ್ರೈಸ್ತರು, ಕಮ್ಯೂನಿಸ್ಟರು ಮಾತ್ರವಲ್ಲ, ಅಂಬೇಡ್ಕರ್‌ವಾದಿ ದಲಿತರಿಗೂ ಜಾಗವಿಲ್ಲ ಎಂಬುದರ ಸೂಚನೆ ಇದು. ಮೀಸಲಾತಿ ರದ್ದು ಪಡಿಸಬೇಕೆಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದಾಗಲೇ ಪರಿವಾರದ ಲಾಠಿ ದಲಿತರತ್ತ ತಿರುಗಿದೆ ಎಂಬ ಸುಳಿವು ದೊರಕಿತ್ತು.

ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದಲೇ ಈ ದೇಶದಲ್ಲಿ ಸಾಮಾಜಿಕ ನ್ಯಾಯದ ಅವಸಾನ ಆರಂಭವಾಯಿತು. ಮೋದಿ ಅಧಿಕಾರ ವಹಿಸಿಕೊಂಡಾಗ ವಿಶ್ವ ಹಿಂದೂ ಪರಿಷತ್ತಿನ ನಾಯಕ ಅಶೋಕ್ ಸಿಂಘಾಲ್ ಎಷ್ಟು ಸಂಭ್ರಮಿಸಿದ್ದರೆಂದರೆ 800 ವರ್ಷಗಳ ನಂತರ ದಿಲ್ಲಿ ಆಡಳಿತ ಹಿಂದೂಗಳ ಕೈಗೆ ಬಂದಿದೆ ಎಂದಿದ್ದರು. ಇದರರ್ಥ ಬ್ರಿಟಿಷರನ್ನು ತೊಲಗಿಸಿ ಸ್ವತಂತ್ರ ಭಾರತ ಹೊಮ್ಮಿದ್ದನ್ನು ಈ ಸಿಂಘಾಲ್ ಕಂಡಿರಲಿಲ್ಲ.

ಅಶೋಕ ಸಿಂಘಾಲ್ ಸೇರಿದಂತೆ ಆರೆಸ್ಸೆಸ್ ಗ್ಯಾಂಗ್‌ನವರು ಬಯಸಿದ ಹಿಂದೂರಾಷ್ಟ್ರವೆಂದರೆ ಮನುವಾದಿ ಹಿಂದುರಾಷ್ಟ್ರ ಬ್ರಾಹ್ಮಣ್ಯವನ್ನು ತಲೆ ಮೇಲೆ ಹೊತ್ತುಕೊಂಡ ಶೂದ್ರರನ್ನು ಕಾಲ ಕೆಳಗೆ ಹಾಕಿದ ಹಿಂದೂ ರಾಷ್ಟ್ರ. ಈ ಹಿಂದೂ ರಾಷ್ಟ್ರವನ್ನು ಒಪ್ಪಿಕೊಳ್ಳದ ರೋಹಿತ್ ವೇಮುಲಾರಂಥವರು ರಾಷ್ಟ್ರದ್ರೋಹಿಯಾಗುತ್ತಾರೆ.

ಪದೇ ಪದೇ ರಾಷ್ಟ್ರದ್ರೋಹದ ಬಗ್ಗೆ ಮಾತಾಡುವ ಇವರಿಗೆ ನಾನೊಂದು ಪ್ರಶ್ನೆ ಕೇಳಬೇಕಾಗಿದೆ. ಈ ರಾಷ್ಟ್ರ ಯಾರದು?ರಾಷ್ಟ್ರದ್ರೋಹಿಗಳು ಯಾರು?ಶತಮಾನಗಳಿಂದ ಈ ದೇಶವನ್ನು ಕಟ್ಟಿದವರು ಈ ನೆಲದ ದುಡಿಯುವ ಜನ, ದಲಿತರು, ಹಿಂದುಳಿದವರು, ಆದಿವಾಸಿಗಳು, ಅಲ್ಪಸಂಖ್ಯಾತರು ಎಲ್ಲರೂ ಸೇರಿ ಕಟ್ಟಿದ ರಾಷ್ಟ್ರವಿದು.ಇದು ಮೋಹನ ಭಾಗವತರ, ಬಂಡಾರು ದತ್ತಾತ್ರೇಯರ, ಸ್ಮತಿ ಇರಾಣಿ ಅವರ ಖಾಸಗಿ ಸೊತ್ತಲ್ಲ.

ಇಲ್ಲಿ ರಾಷ್ಟ್ರದ್ರೋಹಿಗಳು ಯಾರಾದರೂ ಇದ್ದರೆ ಅವರು ಬೇರಾರೂ ಅಲ್ಲ. ಮಹಾತ್ಮಾ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದವರು, ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದವರು, ಗುಜರಾತ್‌ನಲ್ಲಿ ಗರ್ಭಿಣಿಯರ ಹೊಟ್ಟೆ ಸೀಳಿದವರು, ದಾದ್ರಿಯಲ್ಲಿ ಅಮಾಯಕ ಮುಸಲ್ಮಾನನನ್ನು ಕೊಂದವರು, ಹರ್ಯಾಣದಲ್ಲಿ ದಲಿತ ಮಕ್ಕಳನ್ನು ಸುಟ್ಟು ಹಾಕಿದವರು - ಅವರೇ ರಾಷ್ಟ್ರದ್ರೋಹಿಗಳು.

ಈ ರಾಷ್ಟ್ರದ್ರೋಹಿಗಳ, ಜನದ್ರೋಹಿಗಳ ಕರಾಳ ಕೃತ್ಯಗಳ ಪಟ್ಟಿ ದೊಡ್ಡದಿದೆ. ಬಸವಣ್ಣನವರನ್ನು ಕೊಂದು ಕೂಡಲ ಸಂಗಮದಲ್ಲಿ ನದಿಗೆ ಹಾಕಿದವರು. ಸಂತ ತುಕಾರಾಮರನ್ನು ಕೊಂದು ಆಕಾಶ ನೌಕೆಯಲ್ಲಿ ಹೋದರೆಂದು ಕತೆ ಕಟ್ಟಿದವರು, ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಅವರನ್ನು ಹಾಡಹಗಲೇ ಕೊಂದವರು ಇವರೇ ಈಗ ರೋಹಿತ್ ಸಾವಿಗೆ ಕಾರಣವಾಗಿ ಅಪಪ್ರಚಾರ ನಡೆಸಿದ್ದಾರೆ.

ಈ ಹಿಟ್ಲರ್‌ವಾದಿ, ಗೋಳ್ವಲ್ಕರ್‌ವಾದಿ, ಗೋಡ್ಸೆವಾದಿ ಕರಾಳ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್ ನೀಡಿದ ಸ್ವತಂತ್ರ, ಜನತಂತ್ರ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News