ಫ್ರಿಡ್ಜಲ್ಲಿ ಆಹಾರ ಇಡುವುದೆಲ್ಲಾ ಹೌದು, ಆದರೆ!

Update: 2016-02-11 13:55 GMT

ಕಡೆದಿಟ್ಟ ಹಿಟ್ಟಲ್ಲಿ ದೋಸೆ ಮಾಡಿ ಸ್ವಲ್ಪ ಹಿಟ್ಟು ಹಾಗೇ ಇದೆ, ತಂದ ಹಾಲಲ್ಲಿ ಚಹಾ ಮಾಡಿ ಅರ್ಧ ಪಾಕೆಟ್ ಹಾಲು ಇನ್ನೂ ಉಳಿದಿದೆ, ಖರೀದಿಸಿದ ಮೀನು, ಮಾಂಸ ಹೆಚ್ಚಾಗಿ ಸ್ವಲ್ಪವನ್ನು ನಾಳೆಗೆ ಇಡಬಹುದಿತ್ತು, ರಾತ್ರಿ ಉಳಿದ ಆಹಾರ ಪದಾರ್ಥ ಬೆಳಗ್ಗೆ ಹುಳಿ ಬರುತ್ತದೋ ಏನೋ...ಹೀಗೆಲ್ಲಾ ಚಿಂತಿಸುವ, ಚಿಂತಿಸಿ ಆಲೋಚಿಸಿ ತಲೆ ಹುಣ್ಣಾಗಿಸುವ ಗೃಹಿಣಿಯರಿಗೆ ಫ್ರಿಡ್ಜ್ ಅಥವಾ ರೆಫ್ರಿಜರೇಟರ್ ಒಂದು ವರದಾನವೆಂದೇ ಹೇಳಬಹುದು.

ಫ್ರಿಡ್ಜ್‌ಗಳು ಒಂದು ನಿರ್ದಿಷ್ಟ ಉಷ್ಣಾಂಶದಲ್ಲಿ ಆಹಾರವನ್ನು ತಂಪಾಗಿರಿಸಿ ಸಂರಕ್ಷಿಸುವ ಕೆಲಸವನ್ನು ಮಾಡುತ್ತವೆ. ಸಾಮಾನ್ಯವಾಗಿ ಫ್ರಿಡ್ಜ್‌ನೊಳಗೆ ಒಂದು ಡಿಗ್ರಿ ಸೆಲ್ಸಿಯಸ್‌ನಿಂದ ಐದು ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವಿರುತ್ತದೆ. ಆದರೆ ಐದು ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಬ್ಯಾಕ್ಟೀರಿಯಗಳು, ಸೂಕ್ಷ್ಮಾಣು ಜೀವಿಗಳು ಹೆಚ್ಚಾಗಿ ಫ್ರಿಡ್ಜ್‌ನೊಳಗಿರುವ ಆಹಾರ ಪದಾರ್ಥ ಹಾಳಾಗುವ ಸಾಧ್ಯತೆಯಿದೆ. ಆದ್ದರಿಂದ ಸರಿಯಾದ ತಾಪಮಾನದೊಂದಿಗೆ ಫ್ರಿಡ್ಜನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಷ್ಟೇ ಅಗತ್ಯ.

ಆಹಾರ ಪದಾರ್ಥಗಳ ಜೋಡಣೆ

ಫ್ರಿಡ್ಜ್‌ನೊಳಗೆ ಅತ್ಯಂತ ಹೆಚ್ಚು ತಂಪಾದ ಜಾಗ ಫ್ರೀಝರ್‌ನ ನೇರ ಕೆಳಭಾಗದಲ್ಲಿರುತ್ತದೆ. ಹಾಗೆಯೇ ತಳಭಾಗ ಹಾಗೂ ಬಾಗಿಲ ಕೋಣೆಗಳಲ್ಲಿ ಅತ್ಯಂತ ಕಡಿಮೆ ತಂಪಿರುತ್ತದೆ. ಈ ತಾಪ ವ್ಯತ್ಯಾಸವನ್ನು ಅರಿತು ಪ್ರತಿಯೊಂದು ಸಾಮಗ್ರಿಯನ್ನು ಜೋಡಿಸಬೇಕು. ಒಂದೇ ರೀತಿಯ ಆಹಾರಪದಾರ್ಥಗಳನ್ನು ಒಂದೇ ಶೆಲ್ಫಲ್ಲಿ ಇಡಬೇಕು. ಎಣ್ಣೆ, ಮೊಸರು, ಡೆಸ್ಸರ್ಟ್ ಗಳಂತಹ ಪದಾರ್ಥಗಳನ್ನು ಬಾಗಿಲ ಅತ್ಯಂತ ಮೇಲಿನ ಶೆಲ್ಫಲ್ಲಿ ಇಡಬಹುದು. ಬೇಯಿಸಿದ ಹಾಗೂ ಉಳಿದ ಪದಾರ್ಥಗಳನ್ನು ಮಧ್ಯದ ಶೆಲ್ಫಲ್ಲಿ ಇಡಬಹುದು. ಹಸಿಮಾಂಸ, ಕೋಳಿಮಾಂಸ, ಮೀನು ಮುಂತಾದವುಗಳನ್ನು ಅತ್ಯಂತ ಕೆಳಭಾಗದಲ್ಲಿ ಇಡಬೇಕು. ಇದರಿಂದಾಗಿ ಮಾಂಸಗಳಿಂದ ಹರಿದ ನೀರು ಇತರ ಶೆಲ್ಫ್‌ಗೆ ಬಿದ್ದು ಆಹಾರ ವಸ್ತುಗಳು ಮಲಿನವಾಗುವುದನ್ನು ತಡೆಯಬಹುದು. ಮಾಂಸವನ್ನು ಒಂದೆರಡು ದಿನಗಳ ಬಳಿಕ ಬಳಸುವುದಾದರೆ ಫ್ರೀಝರ್‌ನಲ್ಲಿಡುವುದು ಒಳ್ಳೆಯದು. ಇದು ಮಾಂಸ ಹಾಳಾಗದಿರಲು ಉತ್ತಮ. ಮೊಟ್ಟೆಯ ಟ್ರೇಗಳನ್ನು ಬಾಗಿಲೊಳಗೆ ಇಡಬಾರದು, ಬದಲಾಗಿ ಮಧ್ಯದ ಶೆಲ್ಫಲ್ಲಿ ಅಥವಾ ಇತರೆಡೆ ಇಡಬಹುದು. ತರಕಾರಿಗಳನ್ನು ಅತ್ಯಂತ ಕೆಳಗಿರುವ ವೆಜಿಟೆಬಲ್ ಟ್ರೇಗಳಲ್ಲಿ ಸಂರಕ್ಷಿಸಿಡಬಹುದು. ತಂಪಾದ ಪಾನೀಯ ಮತ್ತಿತರ ಬೇಗನೆ ಬಳಸಿ ಮುಗಿಸಬಹುದಾದಂಥವುಗಳನ್ನು ಫ್ರಿಡ್ಜ್‌ನಬಾಗಿಲೊಳಗಿರುವ ಕೋಣೆಗಳಲ್ಲಿ ಜೋಡಿಸಬಹುದು. ಒಮ್ಮೆ ತೆರೆದ ಕ್ಯಾನ್‌ನಿಂದ ಉಳಿದ ಪದಾರ್ಥ ಅಥವಾ ಪಾನೀಯಗಳನ್ನು ಅದೇ ರೀತಿ ಫ್ರಿಡ್ಜಲ್ಲಿಡಬಾರದು. ಇದರಿಂದ ಕ್ಯಾನ್‌ಗಳ ಮೆಟಲ್ ಆಹಾರ ಪಾನೀಯಗಳಿಗೆ ಬೆರೆಯಬಹುದು. ಇದರ ಬದಲಾಗಿ ಕ್ಯಾನ್‌ನ ಪದಾರ್ಥಗಳನ್ನು ಬೇರೊಂದು ಪಾತ್ರೆಗೆ ಹಾಕಿಡಬಹುದು. ಫ್ರಿಡ್ಜ್‌ನಲ್ಲಿ ಆಹಾರ ಪದಾರ್ಥಗಳನ್ನು ಬೇಕಾಬಿಟ್ಟಿಯಾಗಿ ತುಂಬಿದರೆ ತಂಪುಗಾಳಿಯ ಸಂಚಾರಕ್ಕೆ ತಡೆಯುಂಟಾಗಿ ಬ್ಯಾಕ್ಟೀರಿಯಗಳು ಹೆಚ್ಚಾಗುವ ಸಾಧ್ಯತೆಯಿದೆ.

ಫ್ರಿಡ್ಜ್‌ನಲ್ಲಿ ಸಿದ್ಧಪಡಿಸಿದ ಆಹಾರ ಇಡುವಾಗ ಪ್ರತಿ ಹೊತ್ತಿನ ಆಹಾರವನ್ನು ವಿಂಗಡಿಸಿ ಸಣ್ಣ ಪಾತ್ರೆಗಳಲ್ಲಿ ಇಡಬೇಕು. ಅದು ಬೇಗನೆ ತಂಪಾಗುತ್ತದೆ ಕೂಡ. ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚಿನದನ್ನು ಎಸೆಯುವುದು ತಪ್ಪುತ್ತದೆ. ಸಿದ್ಧಪಡಿಸಿದ ಆಹಾರ ಬಿಸಿ ಆರಿದ ಮೇಲೆ ಇಡಬೇಕು. ಇಲ್ಲದಿದ್ದರೆ ಆಹಾರದ ಬಿಸಿ ಹರಡಿ ಫ್ರಿಡ್ಜಲ್ಲಿರುವ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ. ಮತ್ತೊಂದು ವಿಷಯ ಗಮನದಲ್ಲಿರಬೇಕು, ಆಹಾರ ಹಾಳಾಗದಿರಲು ಫ್ರಿಡ್ಜ್ ನೊಳಗಿನ ಉಷ್ಣಾಂಶ ಯಾವಾಗಲೂ ಐದು ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿರಬೇಕು. ಎಂದು ಹೇಳಿ ಬೆಳಗ್ಗೆ ತಯಾರಿಸಿದ ಪದಾರ್ಥವನ್ನು ಫ್ರಿಡ್ಜಲ್ಲಿಡಲು ರಾತ್ರಿಯವರೆಗೆ ಕಾಯಬಾರದು.

ಫ್ರೀಝರಲ್ಲಿಡುವಾಗ
ಹಸಿ ಮೀನು, ಮಾಂಸ ಮುಂತಾದವುಗಳನ್ನು ಫ್ರೀಝರಲ್ಲಿಡುವಾಗ ಚೆನ್ನಾಗಿ ಪ್ಯಾಕ್ ಮಾಡಬೇಕು. ಇಲ್ಲದಿದ್ದರೆ ಇವು ತುಂಬಾ ಒರಟಾಗಿ ಬೇಯಿಸಲು ಸಾಧ್ಯವಾಗದಿರಬಹುದು. ಇದನ್ನು ಫ್ರೀಝರ್ ಬರ್ನ್ ಎನ್ನುತ್ತಾರೆ.

ಹಸಿ ಮಾಂಸ, ಮೀನಿನೊಂದಿಗೆ ಬೇಯಿಸಿದ ಆಹಾರವನ್ನು ಇಡಬಾರದು. ಮೂರು ನಾಲ್ಕು ದಿನಗಳ ಕಾಲ ಫ್ರೀಝರ್‌ನಲ್ಲಿದ್ದ ಆಹಾರ (ಮುಖ್ಯವಾಗಿ ಹಸಿ ಮೀನು ಮತ್ತು ಮಾಂಸ) ವನ್ನು ಫ್ರಿಡ್ಜ್‌ನಲ್ಲಿಟ್ಟು ಡಿಫ್ರೋಸ್ಟ್ ಮಾಡುವುದು (ಹಿಮ ಕರಗಿಸುವುದು) ಅತ್ಯಂತ ಸುರಕ್ಷಿತವಾದ ಕ್ರಮ. ಸುಮಾರು 24 ಗಂಟೆಗಳೊಳಗೆ ಅದು ಡಿಫ್ರೋಸ್ಟ್ ಆಗುತ್ತದೆ. ಬಿಸಿನೀರಿನಲ್ಲಿ ಹಾಕಿಡುವುದು, ಹೊರಗಿಟ್ಟು ತಂಪು ಕಳೆಯುವುದು ಸುರಕ್ಷಿತವಲ್ಲ. ಒಮ್ಮೆ ಡೀಫ್ರೋಸ್ಟ್ ಮಾಡಿದ ಆಹಾರ ಪದಾರ್ಥಗಳನ್ನು ಸಾಧ್ಯವಾದಷ್ಟು 24 ಗಂಟೆಗಳೊಳಗೆ ಬಳಸಿ ಮುಗಿಸಬೇಕು. ಮೈಕ್ರೋವೇವಿನಲ್ಲಿಟ್ಟು ಡೀಫ್ರೋಸ್ಟ್ ಮಾಡಿದ ಆಹಾರ ಆದಷ್ಟು ಬೇಗ ಬಳಸಬೇಕು. ಆದ್ದರಿಂದ ಮಾಂಸ, ಮೀನು ಮುಂತಾದವು ಫ್ರೀಝರಲ್ಲಿಡುವಾಗ ಅವುಗಳ ಪ್ರಮಾಣ ಹೆಚ್ಚಿದ್ದರೆ ಸಣ್ಣ ಸಣ್ಣ ಭಾಗಗಳಾಗಿ ಮಾಡಿ ಪ್ರತಿಯೊಂದನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಬೇಕು.

ಒಮ್ಮೆ ಬೇಯಿಸಿದ ಆಹಾರವನ್ನು ಹೆಚ್ಚು ಬಾರಿ ತಂಪು ಅಥವಾ ಬಿಸಿ ಮಾಡಿದರೆ ವಿಷಬಾಧೆಯುಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ತಂಪಾದ ಆಹಾರವನ್ನು ಚೆನ್ನಾಗಿ ಬಿಸಿ ಮಾಡಿದ ಬಳಿಕವೇ ಉಪಯೋಗಿಸಬೇಕು. 70 ಡಿಗ್ರಿ ಉಷ್ಣಾಂಶದಲ್ಲಿ ಎರಡು ನಿಮಿಷ ಬಿಸಿ ಮಾಡಿದರೂ ಅಣುಬಾಧೆಯನ್ನು ನಿವಾರಿಸಬಹುದು. ಆವಿ ಏಳುವಷ್ಟು ಬಿಸಿ ಮಾಡಬೇಕು ಎಂಬುದು ಇದರರ್ಥ.
ಒಂದೆರಡು ದಿನಗಳ ಮಟ್ಟಿಗೆ ಪ್ರಯಾಣ ಹೋಗುವುದಾದರೆ ಫ್ರಿಡ್ಜ್ ಆಫ್ ಮಾಡಬೇಕೆಂದೇನಿಲ್ಲ. ಪವರ್‌ಕಟ್ ಸಂದರ್ಭಗಳಲ್ಲಿ ಫ್ರಿಡ್ಜ್‌ನ್ನು ದಿನವಿಡೀ ತೆರೆಯಬಾರದು.

ಪದೇ ಪದೇ ಬಾಗಿಲು ತೆರೆಯದಿರಿ
ಫ್ರಿಡ್ಜ್ ಅಂದರೆ ಯಾರಿಗಿಷ್ಟವಿಲ್ಲ ಹೇಳಿ? ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯನ್ನು ಪ್ರವೇಶಿಸಿದ ಕೂಡಲೇ ಮಾಡುವ ಮೊದಲ ಕೆಲಸವೆಂದರೆ ಫ್ರಿಡ್ಜ್‌ನ ಬಾಗಿಲನ್ನು ತೆರೆದು ನೋಡುವುದು. ಇನ್ನು ಸೆಕೆಯ ಸಂದರ್ಭದಲ್ಲಂತೂ ಕೇಳುವುದೇ ಬೇಡ. ಬಾಟಲುಗಟ್ಟಲೆ ನೀರು ಫ್ರಿಡ್ಜಲ್ಲಿರಲೇ ಬೇಕು. ಎಷ್ಟು ತುಂಬಿಸಿಟ್ಟರೂ ಸಾಲದು.
ಫ್ರಿಡ್ಜ್‌ನಲ್ಲಿ ಸಾಮಾನ್ಯ ತಾಪಮಾನ ಐದು ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಬಾರದು ಎಂದು ಹೇಳಿದ್ದು ಸರಿಯಷ್ಟೆ. ಆದ್ದರಿಂದ ಇದಕ್ಕಾಗಿ ಕೆಲವು ವಿಷಯಗಳನ್ನು ಗಮನದಲ್ಲಿಡಬೇಕಾದದ್ದು ಅತ್ಯಗತ್ಯ. ಸಣ್ಣ ಸಣ್ಣ ವಿಷಯಗಳಿಗೂ ಫ್ರಿಡ್ಜನ್ನು ಪದೇ ಪದೇ ತೆರೆಯುವುದರಿಂದ ಹೊರಗಿನ ಬಿಸಿ ಒಳಗೆ ಹೋಗಿ ಫ್ರಿಡ್ಜ್‌ನ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಸಮಸ್ಯೆಯ ನಿವಾರಣೆಗೆ ಫ್ರಿಡ್ಜ್‌ನಿಂದ ಅಗತ್ಯವಿರುವ ವಸ್ತುಗಳನ್ನೆಲ್ಲ ಒಮ್ಮೆಲೆ ತೆಗೆಯುವ ಹಾಗೆ ನೋಡಿಕೊಳ್ಳಬೇಕು. ಫ್ರಿಡ್ಜ್‌ನೊಳಗೆ ಆಹಾರ ಪದಾರ್ಥಗಳನ್ನು ಕ್ರಮ ಪ್ರಕಾರವಾಗಿ ಜೋಡಿಸಿಟ್ಟರೆ, ಫ್ರಿಡ್ಜನ್ನು ತುಂಬಾ ಹೊತ್ತು ತೆರೆದಿಟ್ಟು ಹುಡುಕುವ ಕೆಲಸ ತಪ್ಪುತ್ತದೆ.

ಹೇಗೆ ಸ್ವಚ್ಛ ಮಾಡಬಹುದು?
ಫ್ರಿಡ್ಜ್ ಇದೆ ಎಂದು ಹೇಳಿ ಅದರೊಳಗೆ ಸಿಕ್ಕಿಸಿಕ್ಕಿದ್ದೆಲ್ಲ ತುರುಕುವುದು ಸುಲಭ. ಆದರೆ ಹೇಗಪ್ಪಾ ಇದನ್ನು ಸ್ವಚ್ಛ ಮಾಡುವುದು ಎನ್ನುವುದೇ ಎಲ್ಲರ ಚಿಂತೆ. ಇಲ್ಲಿದೆ ಸುಲಭ ಮಾರ್ಗ. ಫ್ರಿಡ್ಜ್ ಸಾಮಾನ್ಯವಾಗಿ ಖಾಲಿಯಿರುವ ಸಂದರ್ಭಗಳಲ್ಲಿ ಸ್ವಚ್ಛ ಮಾಡುವುದು ಸುಲಭ. ಉಳಿದದ್ದು, ಅನಗತ್ಯವಾದದ್ದನ್ನೆಲ್ಲ ಮೊದಲು ಎಸೆಯಬೇಕು. ಫ್ರಿಡ್ಜ್‌ನ್ನು ಆಫ್ ಮಾಡಿದ ಬಳಿಕವೇ ಸ್ವಚ್ಛ ಮಾಡಬೇಕು. ಒಂದು ಸಿಂಕಲ್ಲಿ ಉಗುರು ಬೆಚ್ಚಗಿನ ಸೋಪ್ ನೀರನ್ನು ತುಂಬಿ ಎಲ್ಲ ಟ್ರೇಗಳನ್ನು ಅದರಲ್ಲಿ ತೊಳೆದು ಒಣಗಿಸಬೇಕು. ಅದೇ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಫ್ರಿಡ್ಜ್‌ನ ಒಳಭಾಗ ಒರೆಸಬೇಕು. ಗೋಡೆಗಳು, ಶೆಲ್ಫ್‌ಗಳು ಹಾಗೂ ಫ್ರಿಡ್ಜ್ ನೊಳಗಿಡುವ ಪಾತ್ರೆಗಳನ್ನೂ ತೊಳೆದು ಸ್ವಚ್ಛ ಮಾಡಬೇಕು.

                                                                                ಕೃಪೆ: ಮನೋರಮಾ ಆನ್‌ಲೈನ್

Writer - ರಲಿಯಾ ಸಿದ್ದೀಕ್, ಪರ್ಲಿಯ

contributor

Editor - ರಲಿಯಾ ಸಿದ್ದೀಕ್, ಪರ್ಲಿಯ

contributor

Similar News