ಜೆಎನ್‌ಯು ನಾಶಕ್ಕೆ ಹುನ್ನಾರ

Update: 2016-02-14 18:21 GMT

ಇದು ಅನಿರೀಕ್ಷಿತವಾಗಿರಲಿಲ್ಲ. ಹಿಟ್ಲರ್, ಮುಸಲೋನಿಯನ್ನು ಆರಾಧಿಸುವ ಗೋಡ್ಸೆವಾದಿ ಪಕ್ಷವೊಂದು ಅಧಿಕಾರಕ್ಕೆ ಬಂದರೆ, ಏನು ಸಂಭವಿಸಬೇಕಿತ್ತೋ ಅದು ಸಂಭವಿಸುತ್ತಿದೆ. ಆದರೆ ಯಾರೂ ಊಹಿಸಲಾಗದ ರೀತಿಯಲ್ಲಿ ಕಲ್ಪನೆ ಮಾಡಿಕೊಳ್ಳಲಾಗದ ದಿಕ್ಕಿನಿಂದ ದಾಳಿ ಬಂದೆರಗುತ್ತಿದೆ. ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆಯ ಗಾಯ ಮಾಯುವ ಮುನ್ನವೇ ಹೈದರಾಬಾದಿನಲ್ಲಿ ರೋಹಿತ್ ಸಾವು ಸಂಭವಿಸಿ ಇನ್ನೂ ಎರಡು ತಿಂಗಳಾಗಿಲ್ಲ. ಆಗಲೇ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಾಝಿ ದುರಾಕ್ರಮಣ ಆರಂಭವಾಗಿದೆ.

ಕಳೆದ ಶುಕ್ರವಾರ ಬೆಳಗಿನ ಜಾವ ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿದ ಪೊಲೀಸರು ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಕುಮಾರ್ ಸೇರಿದಂತೆ 7 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿ ದೇಶದ್ರೋಹದ ಆರೋಪ ಹೊರಿಸಿದ್ದಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಪುರುಷ ಪೊಲೀಸರು ನುಗ್ಗಿ ಯುವತಿಯರನ್ನು ಎಳೆದುಕೊಂಡು ಹೋಗಿದ್ದಾರೆ. ತುರ್ತು ಪರಿಸ್ಥಿತಿಯ ದಿನಗಿಂತಲೂ ಘೋರವಾದ ಈ ಕೃತ್ಯವನ್ನು ದೇಶದ ಪ್ರಜಾಪ್ರಭುತ್ವವಾದಿಗಳೆಲ್ಲ ಖಂಡಿಸಿದ್ದಾರೆ. ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೈ ಮಾಡಿ ತೋರಿಸಿದವರನ್ನೆಲ್ಲ ಬಂಧಿಸಿದ್ದಾರೆ. ೆಎನ್‌ಯು ಎಂದೇ ಹೆಸರಾದ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಈ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆ ರೋಮಿಲಾ ಥಾಪರ್, ಮುಶ್ರಿಲ್ ಹುಸೈನ್, ಕೆ.ಎನ್.ಪಣಿಕ್ಕರ್, ಕಮಲಮಿತ್ರ ಚಿನಾಯ್ ಇಂತಹ ಉಪನ್ಯಾಸಕರು ಸೇವೆ ಸಲ್ಲಿಸಿದ ಈ ವಿಶ್ವವಿದ್ಯಾನಿಲಯ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ದೇಶದ ಉಳಿದ ವಿಶ್ವವಿದ್ಯಾನಿಲಯಗಳಿಗಿಂತ ಭಿನ್ನವಾಗಿದೆ. ಸಮಾಜದ ಜಾತಿ-ಕೋಮು ಜಾಢ್ಯ ಅಂಟಿಸಿಕೊಂಡು ಬರುವ ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಲಯದಲ್ಲಿ ಓದಿದ ನಂತರ ಹೊಸ ಮನುಷ್ಯರಾಗಿ ಹೊರಬರುತ್ತಾರೆ. ಈಗ ದೇಶದ ಹೆಸರಾಂತ ಚಿಂತಕರೆಂದು ಗಮನ ಸೆಳೆದ ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್, ಎನ್.ರಾಮ್, ಅಶುತೋಷ್ ಕುಮಾರ್, ಎಂ.ಜೆ.ಅಕ್ಬರ್, ನಮ್ಮ ಕರ್ನಾಟಕದ ಕೆ.ಎನ್.ಹರಿಕುಮಾರ್, ನಾಗೇಶ್ ಹೆಗಡೆ ಇವರೆಲ್ಲ ಇದೇ ವಿಶ್ವವಿದ್ಯಾಲಯದಲ್ಲಿ ಓದಿ ಬಂದವರು. ಸಾಕೇತ್ ರಾಜನ್ ವ್ಯಾಸಂಗ ಮಾಡಿದ್ದು ಕೂಡ ಇದೇ ವಿಶ್ವವಿದ್ಯಾನಿಲಯದಲ್ಲಿ.ಾತ್ಯತೀತ ಸಮಾಜ ಕಟ್ಟುವ ಹೊಸ ಪೀಳಿಗೆಯನ್ನು ಸೃಷ್ಟಿಸುವ ಜೆಎನ್‌ಯು ಕಂಡರೆ ಕೋಮುವಾದಿಗಳಿಗೆ ಆಗುವುದಿಲ್ಲ. ತಮ್ಮ ಹಿಂದೂರಾಷ್ಟ್ರ ಕಟ್ಟುವ ಹುನ್ನಾರಕ್ಕೆ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳುವ ಅದರ ಯತ್ನಕ್ಕೆ ಜೆಎನ್‌ಯು ಪ್ರಮುಖ ಅಡ್ಡಿಯಾಗಿದೆ. ಅದಕ್ಕಾಗಿ ಈ ವಿಶ್ವವಿದ್ಯಾನಿಲಯವನ್ನೇ ಮುಚ್ಚಬೇಕೆಂಬ ಕುತಂತ್ರ ತುಂಬಾ ಹಿಂದಿನಿಂದ ನಡೆದುಕೊಂಡು ಬಂದಿದೆ. ರಡು ದಶಕಗಳ ಹಿಂದಿನ ಮಾತು. ಒಮ್ಮೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ, ಉತ್ತರ ಭಾರತದಲ್ಲಿ ಪ್ರಚಾರಕರಾಗಿರುವ ಆರೆಸ್ಸೆಸ್ ಕಾರ್ಯಕರ್ತ ಒಬ್ಬ ನಾನಿದ್ದ ಬೋಗಿಯಲ್ಲಿದ್ದ. ಅದು-ಇದು ಮಾತನಾಡುತ್ತ, ಜೆಎನ್‌ಯು ಪ್ರಸ್ತಾಪ ಬಂತು. ಆಗ ಒಮ್ಮೆಲೇ ತಾಳ್ಮೆ ಕಳೆದುಕೊಂಡ ಈ ಪ್ರಚಾರಕ ಈ ವಿಶ್ವವಿದ್ಯಾನಿಲಯವನ್ನು ಮುಚ್ಚಿದರೆ ತಮ್ಮ ಹಿಂದೂರಾಷ್ಟ್ರ ನಿರ್ಮಾಣದ ದಾರಿ ಸುಗಮವಾಗುತ್ತದೆ ಎಂದು ಹೇಳಿದ. ಯಾಕೆ ಎಂದು ಕೇಳಿದರೆ, ಕಮ್ಯುನಿಸ್ಟರ ಉಳಿದ ಸಂಘಟನೆಗಳ ಬಗ್ಗೆ ನಮಗೆ ಹೆದರಿಕೆಯಿಲ್ಲ. ಕಾರ್ಮಿಕರನ್ನು ನಮ್ಮ ಬಲೆಗೆ ಹಾಕಿಕೊಳ್ಳುವುದು ನಮಗೆ ಗೊತ್ತಿದೆ. ಅವರನ್ನು ಆರ್ಥಿಕ ಹೋರಾಟಗಳಲ್ಲಿ ಮುಳುಗಿಸಿ ದಾರಿ ತಪ್ಪಿಸಿದ್ದೇವೆ. ಆದರೆ ಜೆಎನ್‌ಯು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವುದು ಅಷ್ಟು ಸುಲಭವಲ್ಲ. ಅಲ್ಲಿ ತಯಾರಾಗಿ ಬರುವ ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ದೊಡ್ಡ ಚಳವಳಿಯ ನೇತೃತ್ವ ವಹಿಸುವ ಸಾಮರ್ಥ್ಯ ಪಡೆದಿರುತ್ತಾರೆ ಎಂದು ಹೇಳಿದರು. ಹೀಗೆ ಮುಂಚಿನಿಂದ ಈ ವಿಶ್ವವಿದ್ಯಾಲಯದ ಮೇಲೆ ಕಣ್ಣಿರಿಸಿದ್ದ ಸಂಘ ಪರಿವಾರ ಅಲ್ಲಿನ ವಿದ್ಯಾರ್ಥಿ ಸಂಘದ ಚುನಾವಣೆ ಮೂಲಕ ಹಿಡಿತ ಸಾಧಿಸಲು ಯತ್ನಿಸಿತು. ಆದರೆ ಪ್ರತಿ ಬಾರಿ ಮುಖಭಂಗ ಅನುಭವಿಸಿತು. ಈ ಬಾರಿ ನಡೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೋದಿ ಸರಕಾರವಿದ್ದರೂ ಜೆಎನ್‌ಯುನಲ್ಲಿ ಎಬಿವಿಪಿ ಗೆಲ್ಲಲಿಲ್ಲ. ಅಲ್ಲಿನ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಸ್ಥಾನಕ್ಕೆ ಎಐಎಸ್‌ಎಫ್‌ನ ಕನ್ಹಯ್ಯಕುಮಾರ್ ಭಾರೀ ಮತಗಳನ್ನು ಪಡೆದು ಗೆದ್ದು ಬಂದರು. ಆಗಿನಿಂದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಎಬಿವಿಪಿಗೆ ಈಗೊಂದು ನೆಪ ಸಿಕ್ಕಿದೆ.ಇತ್ತೀಚೆಗೆ ಅಲ್ಲಿ, ಅಫ್ಝಲ್ ಗುರು ಗಲ್ಲಿಗೇರಿದ ಪ್ರಕರಣದ ಹಿನ್ನೆಲೆಯಲ್ಲಿ ಮರಣ ದಂಡನೆ ಶಿಕ್ಷೆಯ ಔಚಿತ್ಯದ ಬಗ್ಗೆ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು. ಅಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಲಾಯಿತೆಂದು ಸುಳ್ಳು ಆರೋಪ ಹೊರೆಸಿ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಲಾಗಿದೆ. ಘೋಷಣೆಯನ್ನು ಯಾರು ಕೂಗಿದರು ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆ ಇಲ್ಲ. 75 ವರ್ಷಗಳ ಹಿಂದೆ ಜರ್ಮನ್ ಪಾರ್ಲಿಮೆಂಟ್‌ಗೆ ತಾನೇ ಬೆಂಕಿ ಹಚ್ಚಿ ಅದನ್ನು ಕಮ್ಯುನಿಸ್ಟ್ ನಾಯಕ ಡಿಮಿಟ್ರೋವಾ ತಲೆಗೆ ಕಟ್ಟಿದ ಹಿಟ್ಲರ್‌ನಂತೆ ಆತನ ಮರಿಗಳು ಈಗ ಕನ್ಹಯ್ಯ ಕುಮಾರ್ ತಲೆಗೆ ಈ ಆರೋಪ ಕಟ್ಟಿ ರಾಷ್ಟ್ರದ್ರೋಹಿಯೆಂದು ಹೇಳುತ್ತಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಅಗ್ನಿಕುಂಡದಲ್ಲಿ ಹುಟ್ಟಿದ ಅಖಿಲ ಭಾರತೀಯ ವಿದ್ಯಾರ್ಥಿ ಫೆಡರೇಷನ್‌ಗೆ ಸೇರಿದ ಕನ್ಹಯ್ಯ ಕುಮಾರ್ ಗಾಂಧಿ ಹಂತಕರ ಕಣ್ಣಲ್ಲಿ ದೇಶದ್ರೋಹಿಯಾಗಿ ನಿಂತಿದ್ದಾರೆ. ಎಐಎಸ್‌ಎಫ್‌ನಂತಹ ಸಂಘಟನೆ ಮೇಲೆ ಆರೋಪ ಹೊರಿಸುವ ಮುನ್ನ ಪೊಲೀಸರು ಯೋಚಿಸಬೇಕಿತ್ತು. ಕಳೆದ ಶತಮಾನದ 30ರ ದಶಕದಲ್ಲಿ ಜನ್ಮತಾಳಿದ ಎಐಎಸ್‌ಎಫ್‌ನ ಮೊದಲ ಸಮ್ಮೇಳನದಲ್ಲಿ ಜವಾಹರಲಾಲ್ ನೆಹರೂ ಪಾಲ್ಗೊಂಡಿದ್ದರು. ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಈ ಸಂಘಟನೆಗೆ ಸ್ಫೂರ್ತಿಯ ಸೆಲೆಯಾಗಿದ್ದವರು. ಜ್ಯೋತಿ ಬಸು, ಭೂಪೇಶ್ ಗುಪ್ತಾ, ಪ್ರೊ. ಹಿರೇನ್ ಮುಖರ್ಜಿ, ಎ.ಬಿ.ಬರ್ದನ್‌ರಂತಹ ನಾಯಕರು ಈ ಸಂಘಟನೆಯಿಂದ ಬಂದವರು. ಚರಿತ್ರೆಯ ಈ ತಿಳಿವಳಿಕೆ ಇಲ್ಲದಿದ್ದರೆ, ಇಂತಹ ಅಪಚಾರ ನಡೆಯುತ್ತದೆ.ವರ ಬಂಧನ ನಡೆದ ದಿನವೇ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅಂತ್ಯಕ್ರಿಯೆ ನಡೆಯಿತು. ಇದನ್ನೇ ನೆಪವಾಗಿಟ್ಟುಕೊಂಡು ಮೆದುಳಿಲ್ಲದ ಕೆಲ ಟಿವಿ ವಾಹಿನಿಗಳ ಆಂಕರ್‌ಗಳು ಬಜರಂಗದಳ ಮತ್ತು ಶ್ರೀರಾಮಸೇನೆಯಂತಹ ನಾಯಕರನ್ನು ಎದುರಿಗೆ ಕೂರಿಸಿಕೊಂಡು ಇಲ್ಲಿ ಹುತಾತ್ಮನ ಅಂತ್ಯಕ್ರಿಯೆ ನಡೆದಿದೆ, ಅಲ್ಲಿ ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ದೇಶದ್ರೋಹ ನಡೆದಿದೆ ಎಂಬಂತೆ ಮಾತನಾಡಿದರು. ಜ್ಯೋತಿಷಿಗಳ ತಟ್ಟೆ ಕಾಸಿನಿಂದ ಚಾನೆಲ್ ನಡೆಸುವ ಅವರು ಎಡಪಂಥೀಯ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿದರು.  ಜೆಎನ್‌ಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆಯ ಪಾಠ ಕಲಿಸಲು ಹೊರಟಿರುವ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಿತ್ತು? ಗಾಂಧೀಜಿ ನೇತೃತ್ವದ ಅಸಹಕಾರ ಚಳವಳಿಯಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ದ್ರೋಹವನ್ನು ಯಾಕೆ ಎಸೆಗಿತು. ಸ್ವಾತಂತ್ರ್ಯಾ ನಂತರ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ ಇದನ್ನು ಬಿಟ್ಟರೆ ಇನ್ನ್ಯಾವ ಸಾಧನೆ ಅದು ಮಾಡಿದೆ. ತನ್ನದೇ ಆದ ಪರಂಪರೆಯಿಲ್ಲದ ಅದಕ್ಕೆ ಭಗತ್‌ಸಿಂಗ್, ಅಂಬೇಡ್ಕರ್ ಫೋಟೊ ಬಳಸಲು ನಾಚಿಕೆಯಾಗಬೇಕು.

ಹನುಮಂತಪ್ಪ ಕೊಪ್ಪದ ಅವರ ಉದಾಹರಣೆ ಕೊಡುತ್ತ ಸದಾ ದೇಶ ಭಕ್ತಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಏಕೆ ಸೈನ್ಯಕ್ಕೆ ಕಳುಹಿಸುವುದಿಲ್ಲ. ಹನುಮಂತಪ್ಪನಂತಹ ಬಡವರ ಮಕ್ಕಳು ಏಕೆ ಸಿಯಾಚಿನ್‌ನಲ್ಲಿ ಹೋಗಿ ಸಾಯಬೇಕು? ಈ ರಾಷ್ಟ್ರದ ರಕ್ಷಣೆಗಾಗಿ ಅಂಬಾನಿ, ಅದಾನಿ ಮಕ್ಕಳೇಕೆ ಸೇನೆಗೆ ಸೇರುವುದಿಲ್ಲ? ಬರೀ ಉಪದೇಶ ಮಾಡಲು ಮಾಡಲು ಮಾತ್ರ ದೇಶಭಕ್ತಿ ಎಂಬ ಶಬ್ದವನ್ನು ಇವರು ಬಳಸಿಕೊಳ್ಳುತ್ತಾರೆ. ನಮಸ್ತೆ ಸದಾ ವತ್ಸಲೇ ಎಂದು ಹೇಳುವ ಪ್ರಹ್ಲಾದ ಜೋಷಿ ಲೋಕಸಭೆಗೆ ಹೋಗುವ ಬದಲು ಸೇನೆಗೆ ಹೋಗಬೇಕಿತ್ತು. ಹನುಮಂತಪ್ಪರ ಜೊತೆಗೆ ನಿಂತು ಗಡಿರಕ್ಷಣೆ ಮಾಡಬೇಕಿತ್ತು. ಜಗದೀಶ ಶೆಟ್ಟರ್ ತಮ್ಮ ತಮ್ಮನನ್ನು ವಿಧಾನ ಪರಿಷತ್ತಿಗೆ ಕಳುಹಿಸುವ ಬದಲು ಗಡಿ ರಕ್ಷಣೆ ಕಳುಹಿಸಬೇಕಿತ್ತು. ಈಶ್ವರಪ್ಪ ತಮ್ಮ ಮಗನನ್ನು ಜಿಲ್ಲಾ ಪಂಚಾಯತ್ ಚುನಾವಣೆಗೆ ನಿಲ್ಲಿಸುವ ಬದಲು ಕಾಶ್ಮೀರಕ್ಕೆ ಕಳುಹಿಸಬೇಕಿತ್ತು. ತಮ್ಮ ಮಕ್ಕಳನ್ನು ಶಾಸನಸಭೆಗೆ ಕಳುಹಿಸಿ, ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಟ್ಟು ಬಡವರ ಮಕ್ಕಳನ್ನು ಸೇನೆಗೆ ಕಳುಹಿಸಿ ಅವರು ಸತ್ತರೆ ಮೊಸಳೆ ಕಣ್ಣೀರು ಹಾಕುವ ಇವರ ದೇಶಭಕ್ತಿ ಎಂತಹದ್ದು ಎಂಬುದು ಜನರಿಗೆ ಗೊತ್ತಿದೆ. ನ್ನೊಬ್ಬರ ದೇಶಭಕ್ತಿಯ ಬಗ್ಗೆ ಪ್ರಶ್ನಿಸುವ ಯಾವ ಹಕ್ಕು ಇವರಿಗೆ ಇಲ್ಲ. ಹನುಮಂತಪ್ಪ, ಕನ್ಹಯ್ಯ ಕುಮಾರ್‌ರಂತಹ ಬಡವರ ಮಕ್ಕಳು ಕಟ್ಟಿದ, ರಕ್ಷಿಸಿದ ದೇಶವಿದು. ಈ ದೇಶದ ನಿಜವಾದ ವಾರಸುದಾರರು ಈ ದೇಶದ ದುಡಿಯುವ ದಲಿತ ಸಮುದಾಯದ ಜನ. ಅವರನ್ನು ದೇಶದ್ರೋಹಿಗಳೆಂದು ಕರೆಯುವ ಇವರು ಚರಿತ್ರೆಯಲ್ಲಿ ತಾವು ನಡೆದು ಬಂದ ದ್ರೋಹದ ದಾರಿಯನ್ನು ಹೊರಳಿ ನೋಡಲಿ. ಈ ದೇಶದ ನಿಜವಾದ ವಾರಸುದಾರರಾದ ದುಡಿಯುವ ಜನರಿಗೆ ಜಾತಿ, ಮತ, ಭೇದವಿಲ್ಲ. ಅವರು ಕಟ್ಟಲು ಹೊರಟಿರುವುದು ಸಮಾನತೆಯ ಜಾತ್ಯತೀತ ಭಾರತವನ್ನು. ಜಾತ್ಯತೀತ ಭಾರತ ಹಿಂದೂ ರಾಷ್ಟ್ರವಾಗಲು ಎಂದಿಗೂ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ತುಂಬಾ ಹಿಂದೆಯೇ ಹೇಳಿದ್ದಾರೆ. ಆದರೂ ಈ ಮನುವಾದಿ ಶಕ್ತಿಗಳು ಸಮಾನತೆಗಾಗಿ ಹೋರಾಡುವವರಿಗೆ ನಿರಂತರ ಕಾಟ ಕೊಡುತ್ತಲೇ ಬಂದಿದೆ. ಬಸವಣ್ಣ, ಸಂತ ತುಕಾರಾಮ್ ಅಂತಹವರನ್ನು ಬಲಿ ತೆಗೆದುಕೊಂಡ ಈ ಕರಾಳ ಶಕ್ತಿಗಳ ವಿರುದ್ಧ ಸೈದ್ಧಾಂತಿಕ ಸಂಘರ್ಷ ಈಗ ಆರಂಭವಾಗಿದೆ. ಜೆಎನ್‌ಯು ಈ ಸಂಘರ್ಷದ ರಣರಂಗ ಎಂಬುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News