ಮನುವಾದಿ ಕತ್ತಲನ್ನು ಸೀಳಿ ಬೆಳಕಿನ ಕಿರಣಗಳು ಬರುತ್ತಿವೆ
ಸ್ವತಂತ್ರ ಭಾರತದ ಇತಿಹಾಸದಲ್ಲೇ ನಿಜವಾದ ಸಂಘರ್ಷ ಈಗ ಆರಂಭವಾಗಿದೆ. ಇದು ಸಮಸ್ತ ಭಾರತೀಯರು ಮತ್ತು ದೇಶ ವಿರೋಧಿ ಮನುವಾದಿಗಳ ನಡುವಿನ ಮಹಾಸಮರ. ಅಮಾಯಕರಲ್ಲಿ ಹಿಂದುತ್ವದ ಮತ್ತೇರಿಸಿ ಈವರೆಗೆ ರಕ್ತಪಾತ ಮಾಡುತ್ತ ಬಂದವರ ಮುಖವಾಡ ಜೆಎನ್‌ಯುನಲ್ಲಿ ಕಳಚಿ ಬಿದ್ದಿದೆ. ಇವರು, ಈ ಚಡ್ಡಿಗಳು ಮುಸ್ಲಿಮ್ ವಿರೋಧಿಗಳು ಮಾತ್ರವಲ್ಲ ದಲಿತ ಶತ್ರುಗಳು, ಹಿಂದುಳಿದವರ ಹಿತಶತ್ರುಗಳು ಎಂಬುದು ಸಾಬೀತಾಗಿದೆ. ಇದು ಚಾರಿತ್ರಿಕ ಸಂಘರ್ಷ ಯಾಕೆಂದರೆ ಬಸವಣ್ಣ, ಬುದ್ಧ, ಜ್ಯೋತಿಬಾಫುಲೆ, ಶಾಹು ಮಹಾರಾಜ್, ಅಂಬೇಡ್ಕರ್, ಗಾಂಧಿ, ನೆಹರೂ, ವೌಲಾನಾ ಆಝಾದ್ ಅಪಾರ ತ್ಯಾಗ ಬಲಿದಾನದಿಂದ ಕಟ್ಟಿದ ಈ ದೇಶವನ್ನು ಮತ್ತೆ ಮನುವಾದಿ ಕತ್ತಲ ಯುಗದತ್ತ ಕೊಂಡೊಯ್ಯುವ ಆರೆಸ್ಸೆಸ್‌ನ ಅಸಲಿ ಅಜೆಂಡಾ ಈಗ ಮತ್ತೊಮ್ಮೆ ಬಯಲಾಗಿದೆ. ರೋಹಿತ್ ವೇಮುಲಾರನ್ನು ಕೊಂದವರು, ಕನ್ಹಯ್ಯೆ ಕುಮಾರ್‌ರನ್ನು ಜೈಲಿಗೆ ಅಟ್ಟಿದವರು ಬೇರಾರೂ ಅಲ್ಲ.
ಅದೇ ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಹಂತಕರು ಎಂಬುದು ಸಾಬೀತಾಗಿದೆ. ಆರೆಸ್ಸೆಸ್ ಕಟ್ಟಲು ಹೊರಟ ಹಿಂದೂರಾಷ್ಟ್ರ ಎಂಥ ಹಿಂದೂ ರಾಷ್ಟ್ರ ಎಂಬುದು ಗುಟ್ಟಾಗಿ ಉಳಿದಿಲ್ಲ. ಜ್ಯೋತಿಬಾಫುಲೆ, ಅಂಬೇಡ್ಕರ್ ಕಟ್ಟಿದ ಜಾತ್ಯತೀತ ಭಾರತವನ್ನು ನಾಶಮಾಡಿ ನಾಲ್ಕು ವರ್ಣಗಳ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಮತ್ತೆ ದೇಶದ ಮೇಲೆ ಹೇರುವುದು ಅದರ ಉದ್ದೇಶ. ಇದನ್ನು ಆರೆಸ್ಸೆಸ್‌ನ ಎರಡನೆ ಸರಸಂಘಚಾಲಕ ಗೋಲ್ವಾಳ್ಕರ್ ನೇರವಾಗಿ ಹೇಳಿದ್ದಾರೆ. ‘‘ಬ್ರಿಟೀಶ್ ಆಳ್ವಿಕೆಗಿಂತ ಮುಂಚಿನ ಸಮಾಜ ವ್ಯವಸ್ಥೆ ಸ್ಥಾಪನೆಯಾಗಬೇಕೆಂದು ಅವರು ಹೇಳುತ್ತಾರೆ. ಆರೆಸ್ಸೆಸ್ ಜನ್ಮ ತಾಳಿದ ಕಾಲಘಟ್ಟವನ್ನು ಅವಲೋಕಿಸಿದರೆ ಅದರ ನಿಜಸ್ವರೂಪ ಗೊತ್ತಾಗುತ್ತದೆ. 1920ರ ದಶಕದ ಕೊನೆಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಮಹಾರಾಷ್ಟ್ರದಲ್ಲಿ ಅದು ಜನ್ಮ ತಾಳಿತು. ಆಗ ಕೋಮುಗಲಭೆಗಳೂ ಅಲ್ಲಿರಲಿಲ್ಲ. ಆದರೆ 1870ರಲ್ಲಿ ಪುಣೆಯ ಜ್ಯೋತಿಬಾಫುಲೆ ಕಟ್ಟಿದ ಸತ್ಯಶೋಧಕ ಸಮಾಜದ ಪರಿಣಾಮವಾಗಿ ಅಲ್ಲಿ ಬಲಿಷ್ಠವಾದ ಬ್ರಾಹ್ಮಣ ವಿರೋಧಿ ಆಂದೋಲನ ಆರಂಭವಾಗಿತ್ತು.
1920ರಲ್ಲಿ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ದಲಿತರು ಕೂಡ ಸಂಘಟಿತ ರಾಗಿದ್ದರು. ಇದರಿಂದ ಗಾಬರಿಗೊಂಡ ಚಿತ್ಪಾವನ ಬ್ರಾಹ್ಮಣ ಸಮಾಜದ ಮೇಲ್ವರ್ಗಗಳ ಕೆಲವರು ಕಳೆದು ಹೋಗುತ್ತಿದ್ದ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹಿಂದುತ್ವ ಸಿದ್ಧಾಂತವನ್ನು ಸೃಷ್ಟಿಸಿದರು. ನೀವೆಲ್ಲ ಹಿಂದುಗಳು ಎಂದು ಶೂದ್ರರನ್ನು ದಾರಿ ತಪ್ಪಿಸಿ ತಮ್ಮ ಪ್ರಾಬಲ್ಯ ಸಾಧಿಸಿದರು. ಆಗ ಮುಂಬೈ ಮುಂತಾದ ಕಡೆ ಕಮ್ಯೂನಿಸ್ಟರ ನೇತೃತ್ವದಲ್ಲಿ ಆರಂಭವಾದ ಕಾರ್ಮಿಕ ಚಳವಳಿಯನ್ನು ಹತ್ತಿಕ್ಕಲು ಮಿಲ್ ಮಾಲಕರಿಗೆ ಆರೆಸ್ಸೆಸ್‌ನಂಥ ಒಂದು ಫ್ಯಾಶಿಸ್ಟ್ ಸಂಘಟನೆ ಬೇಕಾಗಿತ್ತು. ಅವರೂ ಕೂಡ ಈ ಸಂಘಟನೆಗೆ ನೆರವು ನೀಡಿದರು. ಇದು ಈ ಸಂಘಪರಿವಾರದ ಚರಿತ್ರೆ. ಅದರ ರಾಷ್ಟ್ರೀಯವಾದ ಬೋಗಸ್ ಎಂಬುದು ಚರಿತ್ರೆಯಲ್ಲಿ ಸಾಬೀತಾಗಿದೆ. ಈ ಸಂಘ ನಡೆದು ಬಂದ ದಾರಿ ವಿದ್ರೋಹದ ದಾರಿ. ರಾಷ್ಟ್ರದ ಮೇಲೆ ಬ್ರಾಹ್ಮಣ್ಯವನ್ನು ಶ್ರೇಣೀಕೃತ ಸಮಾಜವನ್ನು ಹೇರುವುದು ಅದರ ಉದ್ದೇಶ. ಈ ಗೋಡ್ಸೆವಾದಿಗಳು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲ. ಸ್ವಾತಂತ್ರಾ ನಂತರ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಲಿಲ್ಲ. ಇವರ ಸಾಧನೆಗಳ ಪಟ್ಟಿ ಮಾಡುತ್ತ ಹೋದರೆ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇವರ ಮುಖವಾಡ ಕಳಚಿದ ಏಕೈಕ ಕಾರಣಕ್ಕಾಗಿ ಕನ್ಹಯ್ಯಾ ಕುಮಾರ್ ಜೈಲು ಪಾಲಾಗಿದ್ದಾನೆ.
ಕನ್ಹಯ್ಯರನ್ನು ಜೈಲಿಗೆ ಹಾಕಲು ಇವರು ಸೃಷ್ಟಿಸಿದ ನಕಲಿ ವೀಡಿಯೊ ಹಗರಣವೂ ಈಗ ಬಯಲಾಗಿದೆ. ಫೆ.9ರಂದು ನಡೆದ ಸಭೆಯ ಆಡಿಯೊದಲ್ಲಿ ಘೋಷಣೆಗಳನ್ನು ಫೆ.11ರಂದು ನಡೆದ ಕನ್ಹಯ್ಯಿ ಸಭೆಯ ವೀಡಿಯೊ ಸಿಡಿಗೆ ಸೇರಿಸಿ ಈ ನೀಚರು ಎಸಗಿದ ದುಷ್ಕೃತ್ಯ ಬಯಲಿಗೆ ಬಂದಿದೆ. ಈ ದೇಶವನ್ನೇ ಶೇ.30ರಷ್ಟು ಮತ ಪಡೆದ ರಾಷ್ಟ್ರದ್ರೋಹಿ ಸರಕಾರವೊಂದು ಆಳುತ್ತಿರುವಾಗ ಈ ದಿನಗಳಲ್ಲಿ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ ಪಡೆಯುವ ಬಿಹಾರದ ಬೇಗುಸದಾಯದ ಅಂಗನವಾಡಿ ಕಾರ್ಯಕರ್ತೆಯ ಮಗ ಕನ್ಹಯ್ಯಿ ಕುಮಾರ್, ಗಾಂಧಿ ಹಂತಕರಿಂದ ದೇಶ ವಿರೋಧಿ ಎಂದು ಕರೆಯಲ್ಪಡುತ್ತಿದ್ದಾನೆ. ಯಾಕೆಂದರೆ ಆತ ತನ್ನ ಭಾಷಣದಲ್ಲಿ ಸಾವರ್ಕರ್ ಮತ್ತು ಸಂಘಪರಿವಾರದ ಬಣ್ಣ ಬಯಲಿಗೆಳೆದಿದ್ದ. ಎಂದಿನಂತೆ ಪ್ರಧಾನಿ ಮೋದಿ ವೌನವಾಗಿದ್ದಾರೆ. ಈ ವೌನ ಕಂಡು ಅನೇಕರು ಏನೇನೊ ಅಂದುಕೊಂಡಿದ್ದಾರೆ. ‘‘ಮೋದಿಗೆ ಆಡಳಿತ ನಡೆಸಲು ಸಂಘಪರಿವಾರ ಬಿಡುತ್ತಿಲ್ಲ. ಹಸ್ತಕ್ಷೇಪ ಮಾಡುತ್ತಿದೆ.’’ ಎಂದು ಹೇಳುತ್ತಾರೆ. ಆದರೆ ವಾಸ್ತವ ಸಂಗತಿ ಅದಲ್ಲ. ಆರೆಸ್ಸೆಸ್ ಆದೇಶದಂತೆ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೆಎನ್‌ಯು ವಿವಾದ ಕೂಡ ಮೋದಿಗೆ ಗೊತ್ತಿಲ್ಲದೆ ನಡೆದಿಲ್ಲ.
ಗುಜರಾತ್‌ನ ನಕಲಿ ಎನ್‌ಕೌಂಟರ್ ರೂವಾರಿ ಮೋದಿ ಮುಸ್ಲಿಮರ ಮಾರಣಹೋಮ ನಡೆಸಿ ದಕ್ಕಿಸಿಕೊಂಡ ಮಹಾ ಪ್ರಚಂಡ. ಈ ‘ಸಾಹಸ’ಕ್ಕಾಗಿ ಆತನನ್ನು ಮೆಚ್ಚಿಗೊಳ್ಳುವ ಆರೆಸ್ಸೆಸ್, ಪ್ರಧಾನಿ ಸ್ಥಾನದಲ್ಲಿ ಮೋದಿಯನ್ನು ಕೂರಿಸಿ ಗುಜರಾತ್ ಪ್ರಯೋಗ ಮಾಡಲು ಆರಂಭಿಸಿದೆ. ಆದರೆ ಭಾರತ ಗುಜರಾತ್ ಅಲ್ಲ ಎಂಬುದನ್ನು ಜೆಎನ್‌ಯು ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಮೋದಿಯ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಎರಡು ವರ್ಷ ಕಳೆದು ಹೋಗಿದೆ. ಇನ್ನು ಮೂರು ವರ್ಷ ಬಾಕಿ ಉಳಿದಿದೆ. ಕಳೆದ ಎರಡು ವರ್ಷಗಳಲ್ಲಿ ಏನನ್ನು ಸಾಧಿಸಲಾಗದೆ, ತಮ್ಮನ್ನು ಅಧಿಕಾರಕ್ಕೆ ತಂದ ಕಾರ್ಪೊರೇಟ್ ಧಣಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುತ್ತ ಬಂದ ಮೋದಿಗೆ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಜೆಎನ್‌ಯುದಂಥ ವಿವಾದಗಳು ಬೇಕಾಗಿತ್ತು.
ಮೋದಿ ಮತ್ತು ಸಂಘ ಪರಿವಾರದ ರಾಷ್ಟ್ರವಾದದ ಬಗ್ಗೆ ಮಾತಾಡುವವರು ‘ರಾಷ್ಟ್ರ’ ಅಂದರೆ ಏನೆಂದು ಮೊದಲು ತಿಳಿದುಕೊಳ್ಳಲಿ. ವಿಜಯ ಮಲ್ಯನಂಥ ಬಂಡವಾಳಗಾರರಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದು ರಾಷ್ಟ್ರವಾದವಲ್ಲ, ಮೋದಿ ಅಧಿಕಾರಕ್ಕೆ ಬಂದಾಗಿನಿಂದ 2013ರಿಂದ 2015ರವರೆಗೆ 29 ಸರಕಾರಿ ಒಡೆತನದ ಬ್ಯಾಂಕ್‌ಗಳು ಕಾರ್ಪೊರೇಟ್ ಕಂಪೆನಿಗಳ 1.14 ಲಕ್ಷ ಕೋಟಿ ರೂ. ಸಾಲ ಮನ್ನ ಮಾಡಲಾಗಿದೆ. ಇನ್ನು ಮೂರು ವರ್ಷಗಳಲ್ಲಿ ತನ್ನ ಹಿಂದೂ ರಾಷ್ಟ್ರ ನಿರ್ಮಾಣದ ಅಜೆಂಡಾ ಜಾರಿಗೆ ತರಲು ಹೊರಟಿರುವ ಆರೆಸ್ಸೆಸ್ ಮೋದಿ ಸರಕಾರದ ಮೂಲಕ ಕುಚೇಷ್ಠೆ ಆರಂಭಿಸಿದೆ. ಮೊದಲು ಚೆನ್ನೈನ ಐಐಟಿಯ ಅಂಬೇಡ್ಕರ್, ಫುಲೆ ಅಧ್ಯಯನ ಕೇಂದ್ರ ರದ್ದುಗೊಳಿಸಿ ಮುಖಕ್ಕೆ ಇಕ್ಕಿಸಿಕೊಂಡಿತು. ನಂತರ ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಗೆ ಗಜೇಂದ್ರ ಚೌಹಾಣ್ ಎಂಬ ಚಡ್ಡಿಯನ್ನು ನೇಮಿಸಿ ಮುಖಭಂಗಕ್ಕೆ ಒಳಗಾಯಿತು. ಇವೆರಡು ಮುಖಭಂಗದ ನಂತರವೂ ಸಂಘಪರಿವಾರ ಪಾಟ ಕಲಿಯಲಿಲ್ಲ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ಸಾವಿನ ಕಲಂಕ ಅಂಟಿಸಿಕೊಂಡಿತು. ಈಗ ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕೈಹಾಕಿ ತನ್ನ ಅವಲಕ್ಷಣ ತೋರಿಸಿಕೊಂಡಿದೆ. ಇದು ಇಲ್ಲಿಗೆ ನಿಲ್ಲುವ ಸಂಘರ್ಷವಲ್ಲ. ಡಾ. ಅಂಬೇಡ್ಕರ್ ತಂದು ನಿಲ್ಲಿಸಿದ ಸಮಾನತೆ ರಥವನ್ನು ಮತ್ತೆ ಶತಮಾನಗಳ ಹಿಂದಕ್ಕೆ ಒಯ್ಯುವ ಮನುವಾದಿ ಶಕ್ತಿಗಳ ವಿರುದ್ಧ ಆರಂಭವಾದ ಸಂಘರ್ಷವಿದು. ಎಬಿವಿಪಿ, ಬಿಎಂಎಸ್, ವಿಶ್ವ ಹಿಂದೂ ಪರಿಷತ್, ರಾಷ್ಟ್ರಸೇವಿಕಾ ಹೀಗೆ ನಾನಾ ಹೆಸರಿನಲ್ಲಿ ದುಷ್ಕೃತ್ಯ ನಡೆಸಿರುವ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ. ಇದು ಆರೆಸ್ಸೆಸ್ ಮತ್ತು ಕಮ್ಯೂನಿಸ್ಟರ ನಡುವಿನ ಸಂಘರ್ಷ ಮಾತ್ರವಲ್ಲ. ಬಸವಣ್ಣ, ಅಂಬೇಡ್ಕರ್, ಭಗತ್‌ಸಿಂಗ್, ಸುಭಾಶ್ಚಂದ್ರ ಬೋಸ್, ಜ್ಯೋತಿ ಬಾಫುಲೆ ತಮ್ಮ ವಿಚಾರಗಳ ಮೂಲಕ ಮತ್ತೆ ಈ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಕ್ಕಿಳಿದಿದ್ದಾರೆ. ರೋಹಿತ್ ವೇಮುಲಾ, ಕನ್ಹಯ್ಯಾ ಕುಮಾರ್ ರೂಪದಲ್ಲಿ ಬಂಡಾ ಯದ ಬಾವುಟ ಹಿಡಿದು ನಿಂತಿದ್ದಾರೆ. ನಾವು ಸಮಾನತೆಯಲ್ಲಿ ನಂಬಿಕೆ ಹೊಂದಿದ ವರು ನಿರಾಶರಾಗಬೇಕಿಲ್ಲ. ಹೈದರಾಬಾದ್ ವಿವಿ, ಜೆಎನ್‌ಯುನಂಥಲ್ಲಿ ಬೆಳಕಿನ ಕಿರಣಗಳು ಗೋಚರಿಸುತ್ತಿವೆ. ಈ ಬೆಳಕು ಮನುವಾದಿ, ಸಾವರ್ಕರ್‌ವಾದಿ, ಗೋಲ್ವಾಳ್ಕರ್‌ವಾದಿ ಕತ್ತಲನ್ನು ಭೇದಿಸಿ ಮುನ್ನಡೆಯುತ್ತದೆ.