ಕೇಂದ್ರ ಸರಕಾರದ ರಿಮೋಟ್ ಕಂಟ್ರೋಲ್ ನಾಗಪುರದಲ್ಲಿದೆ
ಈ ದೇಶದಲ್ಲಿ ಏನು ನಡೆಯುತ್ತಿದೆ? ಸರಕಾರವನ್ನು ಯಾರು ನಡೆಸುತ್ತಿದ್ದಾರೆ? ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.31ರಷ್ಟು ಮತ ಗಳಿಸಿದ ಪಕ್ಷದ ಪ್ರಧಾನಿ ದೇಶವನ್ನು ಆಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲ ತಾಣಗಳ ಜನಪ್ರಿಯತೆಯ ಅಲೆಯಿಂದ ಅಕಾರಕ್ಕೆ ಬಂದ ನರೇಂದ್ರ ಮೋದಿ ಅವರೂ ಸರಕಾರದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ಇತ್ತೀಚೆಗೆ ರಾಜಸ್ಥಾನಕ್ಕೆ ಹೋದಾಗ ತಮ್ಮ ಹೆಸರಿಗೆ ಕಳಂಕ ತರುವ ಹುನ್ನಾರ ನಡೆದಿದೆ ಎಂದು ಮೋದಿ ಹೇಳಿದರು. ಯಾರು ತಮ್ಮ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಅವರು ಹೇಳಲಿಲ್ಲ. ಆದರೆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಈ ದೇಶವನ್ನು ಮೋದಿ ಆಳುತ್ತಿಲ್ಲ. ನಾಗಪುರದ ಸಂವಿಧಾನೇತರ ಅಕಾರ ಕೇಂದ್ರ ಪ್ರಭುತ್ವವನ್ನು ಮೋದಿ ಮೂಲಕ ನಿಯಂತ್ರಿಸುತ್ತಿದೆ. ಅಂತಲೇ ಪ್ರಜಾಪ್ರಭುತ್ವದಲ್ಲಿ ನಡೆಯ ಬಾರದ ಘಟನೆಗಳು ದೇಶದಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಪ್ರಧಾನಿ ಮೋದಿ ಸೂಫಿ ಸಮಾವೇಶದಲ್ಲಿ ಮಾತಾಡುತ್ತ ಭಾರತದ ವೈವಿಧ್ಯತೆ ಬಗ್ಗೆ ವಿಶ್ಲೇಷಿಸಿದರು. ಇಸ್ಲಾಂನ ಕೊಡುಗೆಯ ಬಗ್ಗೆ ಶ್ಲಾಸಿದರು. ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಹರಡುವ ಜನರನ್ನು ಕಟುವಾಗಿ ಟೀಕಿಸಿದರು. ಆದರೆ, ಕೇವಲ ಎರಡು ವಾರದ ಹಿಂದೆ ಮೋದಿ ಅವರ ಪಕ್ಷಕ್ಕೆ ಸೇರಿದ ಸಂಸದ ಅನಂತಕುಮಾರ ಹೆಗಡೆ ಇಸ್ಲಾಮ್ ವಿರುದ್ಧ ವಿಷಕಾರಿದ್ದರು. ಪ್ರಧಾನಿ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಿದ್ದರೆ ಅವರ ಪರಿವಾರಕ್ಕೆ ಸೇರಿದವರು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ. ಮಾತ್ರವಲ್ಲ ನೇರ ಗೂಂಡಾಗಿರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ದಾದ್ರಿಯಲ್ಲಿ ಮನೆಯ ಫ್ರಿಡ್ಜ್‌ನಲ್ಲಿ ಗೋಮಾಂಸವಿದೆ ಎಂದು ಮುಹಮ್ಮದ್ ಅಖ್ಲಾಕ್‌ರನ್ನು ಕೊಂದು 170 ದಿನಗಳೂ ಗತಿಸಿಲ್ಲ ಆಗಲೇ ರಾಜಸ್ಥಾನದಲ್ಲಿ ಅಂಥದ್ದೇ ಘಟನೆ ಮರುಕಳಿಸಿದೆ.
ರಾಜಸ್ಥಾನದ ಮೇವಾಡ ಜಿಲ್ಲೆಯ ವಿಶ್ವವಿದ್ಯಾನಿಲಯವೊಂದರ ವಸತಿಗೃಹದ ಕೊಠಡಿಯಲ್ಲಿ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ದನದ ಮಾಂಸ ಬೇಯಿಸುತ್ತಿ ದ್ದಾರೆಂದು ಅವರ ಮೇಲೆ ಹಲ್ಲೆ ನಡೆಯಿತು. ಅಲ್ಲಿನ ಬಿಜೆಪಿ ಸರಕಾರ ಈ ನಾಲ್ವರು ವಿದ್ಯಾರ್ಥಿಗಳನ್ನು ಬಂಸಿತು. ಆದರೆ, ಆ ವಿದ್ಯಾರ್ಥಿಗಳು ಬೇಯಿಸುತ್ತಿದ್ದುದು ಗೋಮಾಂಸವಲ್ಲ ಎಂದು ವಿವಿಜ್ಞಾನ ಪ್ರಯೋಗಶಾಲೆ ಖಚಿತಪಡಿಸಿದ ನಂತರ ಈ ವಿದ್ಯಾರ್ಥಿಗಳ ಬಿಡುಗಡೆ ಆಯಿತು. ಸದಾ ರಾಷ್ಟ್ರದ ಬಗ್ಗೆ ಮಾತಾಡುವ ಸಂಘಪರಿವಾರದ ಸ್ವಯಂ ಸೇವಕರಿಗೆ ಈಗ ಕಂಡಕಂಡವರ ಅಡಿಗೆ ಮನೆ ಸುತ್ತುವುದೇ ಏಕೈಕ ಕೆಲಸವಾಗಿದೆ. ಯಾರ ಮನೆಯಲ್ಲಿ ದನದ ಮಾಂಸದ ವಾಸನೆ ಬರುತ್ತದೆ ಎಂದು ಮೂಗಿನ ಹೊರಳೆಗಳನ್ನು ಉಬ್ಬಿಸುತ್ತ ತಿರುಗುವ ಇವರು ಕ್ಷಣಾರ್ಧದಲ್ಲಿ ಜನರನ್ನು ಸೇರಿಸಿ ಗೂಂಡಾಗಿರಿಗೆ ಇಳಿಯುತ್ತಾರೆ. ಈ ರಾಷ್ಟ್ರ ಭಕ್ತರ ಆರೋಪ ದನದ ಮಾಂಸದ ಬಗ್ಗೆ ಮಾತ್ರ. ಈ ದೇಶದಲ್ಲಿ ಮಾರಾಟ ವಾಗುವ ಶೇ.68ರಷ್ಟು ಹಾಲು ಪರಿಶುದ್ಧವಾಗಿಲ್ಲ. ಈ ಹಾಲಿನಲ್ಲಿ ಯೂರಿಯಾ ಮುಂತಾದ ಪ್ರಾಣಘಾತುಕ ರಾಸಾಯನಿಕ ಬಳಸುತ್ತಾರೆ ಎಂದು ಇವರದೇ ಪಕ್ಷದ ಆರೋಗ್ಯ ಸಚಿವರು ಸಂಸತ್ತಿನಲ್ಲಿ ಹೇಳಿಕೆ ನೀಡಿದರು. ಈ ಅಪಾಯಕಾರಿ ಹಾಲಿನ ಬಗ್ಗೆ ವಿಶ್ವಹಿಂದೂಪರಿಷತ್ತಿನ ಶೂರರು ಪ್ರತಿಭಟಿಸುವುದಿಲ್ಲ.
ಹಾಲು ಮಾತ್ರವಲ್ಲ ನಾವು ತಿನ್ನುವ ಆಹಾರ, ಔಷ, ಕುಡಿಯುವ ನೀರು ಯಾವುದೇ ಪರಿಶುದ್ಧವಾಗಿಲ್ಲ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ಹಾಲನ್ನು ಆಹಾರವನ್ನು ಹಿಂದೂಗಳು ಸೇವಿಸುತ್ತಾರೆ. ಅವರಿಗೂ ತೊಂದರೆ ಆಗುತ್ತದೆ ಆದರೂ ಈ ‘ರಾಷ್ಟ್ರಭಕ್ತ’ರು ವಿರೋಸುವುದಿಲ್ಲ. ಯಾಕೆಂದರೆ ಹಾಲಿನಲ್ಲಿ, ಆಹಾರದಲ್ಲಿ, ಎಣ್ಣೆಯಲ್ಲಿ ದುರ್ಮಿಶ್ರಣ ಮಾಡಿ ಜನರನ್ನು ಕೊಲ್ಲುವ ಲಾಭಕೋರರೇ ಈ ಪರಿವಾರಕ್ಕೆ ಗುರುದಕ್ಷಿಣೆ ಸಲ್ಲಿಸುತ್ತಾರೆ. ದೇಶದಲ್ಲಿ ಈಗ ಅಘೋಷಿತ ತುರ್ತುಪರಿಸ್ಥಿತಿ ಹೇರಲ್ಪಟ್ಟಿದೆಯೇನೋ ಎಂಬ ಆತಂಕ ಉಂಟಾಗುತ್ತಿದೆ. ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ವಾತಾವರಣ ಮಾಯ ವಾಗುತ್ತಿದೆ. ಯಾರು ಯಾವ ಆಹಾರ ಸೇವಿಸಬೇಕು, ಯಾವ ಬಟ್ಟೆ ತೊಡಬೇಕು, ಯಾರನ್ನು ಮದುವೆಯಾಗಬೇಕು ಎಂಬುದನ್ನು ಧರ್ಮದ ಸೋಗು ಹಾಕಿದ ಗೂಂಡಾ ಗ್ಯಾಂಗುಗಳು ತೀರ್ಮಾನಿಸತೊಡಗಿದೆ.
ದನದ ಮಾಂಸವನ್ನೇ ತಮ್ಮ ಅಜೆಂಡಾದ ಭಾಗ ಮಾಡಿಕೊಂಡಿರುವ ಈ ದುಷ್ಟ ಶಕ್ತಿಗಳು ಬರೀ ಪ್ರತಿಭಟನೆಗೆ ಮಾತ್ರ ಈ ವಿರೋಧವನ್ನು ಸೀಮಿತಗೊಳಿಸಿಲ್ಲ. ಕಾನೂನನ್ನು ಕೈಗೆತ್ತಿಕೊಂಡು ನೇರವಾಗಿ ಹಿಂಸಾಚಾರಕ್ಕೆ ಇಳಿಯುತ್ತಿವೆ. ಹೀಗಾಗಿ ಬಿಜೆಪಿ ಅಕಾರದಲ್ಲಿರುವ ರಾಜ್ಯಗಳಲ್ಲಿ ತೀವ್ರಸ್ವರೂಪದ ಕಾನೂನು ಮತ್ತು ಶಿಸ್ತಿನ ಸಮಸ್ಯೆ ಉಂಟಾಗುತ್ತಿದೆ. ಬಿಜೆಪಿ ಸಂಸದರಾದ ಯೋಗಿ ಆದಿತ್ಯನಾಥ, ಸಾಕ್ಷಿ ಮಹಾ ರಾಜ್, ನಿರಂಜನ ಜ್ಯೋತಿ, ಗಿರಿರಾಜ್ ಸಿಂಗ್, ಮಹೇಶ್ ಶರ್ಮಾ, ಸಾ್ವ ಪ್ರಾಚಿ ಇವರೆಲ್ಲ ಆಡುತ್ತಿರುವ ಮಾತುಗಳನ್ನು ಕೇಳಿದರೆ ಈ ದೇಶದ ಜನತಂತ್ರದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತಿದೆ. ತನ್ನ ಹೆಸರನ್ನು ಕೆಡಿಸುವ ಹುನ್ನಾರ ನಡೆದಿದೆ ಎಂದು ಪ್ರಧಾನಿ ಇಂಥವರನ್ನು ಉದ್ದೇಶಿಸಿಯೇ ಹೇಳಿರಬಹುದೇನೋ.
ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಆರೆಸ್ಸೆಸ್ ತನ್ನ ಕೆಲ ಸ್ವಯಂ ಸೇವಕರ ಮೂಲಕ ಇಂಥ ಕುಚೇಷ್ಟೆ ನಡೆಸುತ್ತಿತ್ತು. ಆದರೆ ಮುಂದೆ ಹೋಗಲು ಅಟಲ್ ಬಿಡುತ್ತಿರಲಿಲ್ಲ. ಕೇಂದ್ರದ ಆಡಳಿತದ ಅನುಭವವಿಲ್ಲದ ಮೋದಿ ಸಂಘಪರಿವಾರದ ಮೋಹನ್ ಭಾಗವತ್ ಹಾಕಿದ ಲಕ್ಷ್ಮಣರೇಖೆ ದಾಟಿ ಮುಂದೆ ಹೋಗಲು ಆಗುತ್ತಿಲ್ಲ.ಗುಜರಾತ್‌ನಲ್ಲಿ ಹತ್ಯಾಕಾಂಡ ಮಾಡಿ ದಕ್ಕಿಸಿಕೊಂಡಂತೆ ದೇಶದಲ್ಲಿ ಮಾಡಲು ಆಗು ವುದಿಲ್ಲ ಎಂಬುದು ಜೆಎನ್‌ಯು ವಿದ್ಯಾಮಾನಗಳಿಂದ ಪ್ರಧಾನಿಗೆ ಗೊತ್ತಾಗಿದೆ. ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಮುಂತಾದವರನ್ನು ದೇಶದ್ರೋಹಿ ಗಳೆಂದು ಜೈಲಿಗೆ ತಳ್ಳಿ ಗೃಹಸಚಿವ ರಾಜನಾಥ್ ಸಿಂಗ್ ಈಗಾಗಲೇ ಮುಖಭಂಗಕ್ಕೆ ಒಳಗಾಗಿದ್ದಾರೆ.
ಈ ನಡುವೆ ‘ಭಾರತ್ ಮಾತಾ ಕಿ ಜೈ’ ಅನ್ನಲಿಲ್ಲ ಎಂದು ಮಹಾರಾಷ್ಟ್ರ ವಿಧಾನ ಸಭೆಯ ಎಐಎಂಐಎಂ ಸದಸ್ಯ ವಾರಿಸ್ ಪಠಾಣ್‌ರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಮುಸಲ್ಮಾನರ ದೇಶಭಕ್ತಿಯನ್ನು ಪ್ರಶ್ನಿಸುವ ಹುನ್ನಾರ ನಡೆದಿದೆ. ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲು ಅಲ್ಪಸಂಖ್ಯಾತರು ಭಾರತ್ ಮಾತಾ ಕಿ ಜೈ ಎಂದು ಹೇಳಬೇಕಾಗಿದೆ. ಇದಕ್ಕಾಗಿ ಸದಸ್ಯತ್ವ ರದ್ದುಗೊಳಿಸುವುದು ಸರಿಯೇ? ‘ಹಿಂದು ಬಂಧು ಒಂದು ಎಂದು’ ಇವರು ಪದೇ ಪದೇ ಅರಚಾಡುತ್ತಾರೆ. ಆದರೆ ತಮಿಳುನಾಡಿನ ಕೊಯಮತ್ತೂರಿನ ಸಮೀಪ ಮೇಲ್ಜಾತಿಯ ಹುಡುಗಿಯೊಬ್ಬಳನ್ನು ಮದುವೆಯಾದುದಕ್ಕಾಗಿ ದಲಿತ ತರುಣನನ್ನು ಥಳಿಸಿ ಕೊಂದು ಹಾಕಿದ ವರದಿ ಬಂದಿದೆ. ಇವರೇಕೆ ಈ ದಲಿತ ಯುವಕನ ಹತ್ಯೆಯನ್ನು ಖಂಡಿಸಲಿಲ್ಲ. ಯಾರದೋ ಅಡುಗೆ ಮನೆಯಲ್ಲಿ ದನದ ಮಾಂಸದ ವಾಸನೆ ಹಿಡಿದು ಹೋಗುವ ಈ ಹಿಂದೂ ರಕ್ಷಕರು ಕೊಯಮತ್ತೂರಿನ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾದ 21ರ ಹರೆಯದ ದಲಿತ ಇಂಜಿನಿಯರಿಂಗ್ ವಿದ್ಯಾರ್ಥಿಯ ಕೊಲೆಯನ್ನು ಯಾಕೆ ತಪ್ಪಿಸಲಿಲ್ಲ. ವಿಶ್ವಹಿಂದೂ ಪರಿಷತ್ ಯಾಕೆ ಖಂಡಿಸಲಿಲ್ಲ. ಇದು ಯಾರ ಹಿತ ರಕ್ಷಿಸುವ ಹಿಂದುತ್ವ?
ಇವರ ಹಿಂದುತ್ವದ ಬಗ್ಗೆ ಈಗ ಬಯಲಾಗಿದೆ. ಇದು ಯಾರ ಹಿತ ರಕ್ಷಣೆಗಾಗಿ ಯಾರು ಕಟ್ಟಿಕೊಂಡ ಸಂಘಟನೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಆದರೂ ಭಾವನೆಗಳನ್ನು ಕೆರಳಿಸಿ ಬಡವರ ಬದುಕಿಗೆ ಕೊಳ್ಳಿ ಇಡುವ ಹುನ್ನಾರವನ್ನು ಇವರು ನಡೆಸುತ್ತಲೇ ಇದ್ದಾರೆ ಅದನ್ನೀಗ ವಿಲಗೊಳಿಸಬೇಕಾಗಿದೆ.
ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಆರೆಸ್ಸೆಸ್ ತನ್ನ ಕೆಲ ಸ್ವಯಂ ಸೇವಕರ ಮೂಲಕ ಇಂಥ ಕುಚೇಷ್ಟೆ ನಡೆಸುತ್ತಿತ್ತು. ಆದರೆ ಮುಂದೆ ಹೋಗಲು ಅಟಲ್ ಬಿಡುತ್ತಿರಲಿಲ್ಲ. ಕೇಂದ್ರದ ಆಡಳಿತದ ಅನುಭವವಿಲ್ಲದ ಮೋದಿ ಸಂಘಪರಿವಾರದ ಮೋಹನ್ ಭಾಗವತ್ ಹಾಕಿದ ಲಕ್ಷ್ಮಣರೇಖೆ ದಾಟಿ ಮುಂದೆ ಹೋಗಲು ಆಗುತ್ತಿಲ್ಲ.
ಅದಕ್ಕಾಗಿಯೇ ತಾನೆ ಆ ಪರಂಪರೆಯನ್ನು ನಾಶ ಮಾಡಲು ಆರೆಸ್ಸೆಸ್ ಅತ್ಯಾತುರವನ್ನು ತೋರಿಸುತ್ತಿರುವುದು.