ಪ್ರಗತಿಗೆ ಅಡ್ಡಗಾಲು ಹಾಕುವ ಕರಾಳ ಶಕ್ತಿಗಳು

Update: 2016-04-03 17:53 GMT

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದು ಆರು ದಶಕಗಳು ಗತಿಸಿದವು. ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ನಾವು ಒಪ್ಪಿಕೊಂಡಿದ್ದೇವೆ. ಆದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಮೂಢನಂಬಿಕೆ, ಕಂದಾಚಾರಗಳು ಈ ದೇಶದಲ್ಲಿ ಈಗಲೂ ವಿಜೃಂಭಿಸುತ್ತಿವೆ. ಈಗಂತೂ ಧಾರ್ಮಿಕ ಅಮಲು ರಾಜಕಾರಣದ ಕೇಂದ್ರ ಸ್ಥಾನಕ್ಕೆ ಬಂದು ಕುಳಿತಿದೆ. ರಾಜ್ಯಾಂಗಕ್ಕೆ ನಿಷ್ಠರಾಗಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿ ನಿತ್ಯವೂ ಅದನ್ನು ನಾಶ ಮಾಡುವ ಹುನ್ನಾರ ನಡೆಸುವವರು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. 

ಜನತೆಯಿಂದ ಚುನಾಯಿತವಾದ ಸಂಸತ್ತಿಗಿಂತ ಪ್ರಭಾವಶಾಲಿಯಾದ ಸಂವಿಧಾನೇತರ ಧಾರ್ಮಿಕ ಅಧಿಕಾರ ಕೇಂದ್ರಗಳು ಈ ದೇಶದಲ್ಲಿವೆ. ಅತ್ಯಾಚಾರ, ಅನಾಚಾರ ಮಾಡಿಯೂ ದಕ್ಕಿಸಿಕೊಳ್ಳುವ ತಾಕತ್ತಿರುವ ಈ ಅಧಿಕಾರ ಕೇಂದ್ರಗಳು ಅನೇಕ ಬಾರಿ ನಮ್ಮ ಸಂವಿಧಾನದ ಮೇಲೆ ಸವಾರಿ ಮಾಡಲು ಯತ್ನಿಸುತ್ತವೆ. ಸಂವಿಧಾನ ರಕ್ಷಿಸುವ ಹೊಣೆ ಹೊತ್ತವರೇ ಈ ಸಂವಿಧಾನ ವಿರೋಧಿ ಕರಾಳ ಶಕ್ತಿಗಳಿಗೆ ಅನೇಕ ಬಾರಿ ಶರಣಾಗತರಾಗುತ್ತಾರೆ. 

ಚುನಾವಣೆಯಲ್ಲಿ ಗೆದ್ದ ಯಾರಾದರೂ ಸಂವಿಧಾನಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸಲು ಮುಂದಾದರೆ ಈ ಸಂವಿಧಾನೇತರ ಅಗೋಚರ ಅಧಿಕಾರ ಕೇಂದ್ರಗಳು ಇಂಥವರಿಗೆ ಅಡ್ಡಿಯುಂಟು ಮಾಡುತ್ತಿವೆ. ಉದಾಹರಣೆಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರಕಾರ ವೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿಗೆ ತರಲು ಮುಂದಾದಾಗ ಈ ನಿಗೂಢ ಕೇಂದ್ರಗಳ ಚೇಲಾಗಳು ಆಕಾಶ ಹರಿದು ಬೀಳುವಂತೆ ಕೂಗಾಡಿ ಸರಕಾರವನ್ನು ಹೆದರಿಸಿದರು.

 ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಮೂಢನಂಬಿಕೆಗಳ ಸಾರ್ವಜನಿಕ ಆಚರಣೆ ಮತ್ತು ಅವುಗಳ ಪ್ರಸಾರ ಮಾಡುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಪರಿಗಣಿಸುವ ವಿಧೇಯಕವೊಂದನ್ನು ತರಲು ಸರಕಾರ ಉದ್ದೇಶಿಸಿತ್ತು. ರಾಷ್ಟ್ರೀಯ ಕಾನೂನು ಶಾಲೆ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಗಳು ಈ ವಿಧೇಯಕದ ಕರಡನ್ನು ಸಿದ್ಧಪಡಿಸಿದ್ದವು. ಆದರೆ ಚುನಾಯಿತ ಸರಕಾರಕ್ಕೆ ಇದನ್ನು ಕಾನೂನನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. 

ಈ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಹಿಂದೂ ವಿರೋಧಿಯಾಗಿದೆ. ಇದು ಜಾರಿಗೆ ಬಂದರೆ ಪೂಜೆ ಮಾಡುವಂತಿಲ್ಲ, ತೇರು ಎಳೆಯುವಂತಿಲ್ಲ, ಹಣೆಗೆ ಗಂಧ ಹಚ್ಚುವಂತಿಲ್ಲ, ಗುಡಿಗೆ ಹೋಗುವಂತಿಲ್ಲ ಎಂಬೆಲ್ಲ ಅಪಪ್ರಚಾರ ಆರಂಭವಾಯಿತು. ಅತ್ಯಂತ ನೋವಿನ ಸಂಗತಿ ಅಂದರೆ ಮಠಾಧೀಶರಿಗಿಂತ ಕೆಲ ಮಾಧ್ಯಮಗಳೇ ಈ ವಿಧೇಯಕದ ವಿರುದ್ಧ ಅದನ್ನು ಅಧ್ಯಯನ ಮಾಡದೇ ಅಪಪ್ರಚಾರ ಆರಂಭಿಸಿದವು. ಇದು ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.

 ಕಳೆದ ಒಂದೂವರೆ ದಶಕದಿಂದ ಮಾಧ್ಯಮಗಳ ಆಯಕಟ್ಟಿನ ಜಾಗಗಳನ್ನು ಹಿಡಿದು ಕೂತಿರುವ ಮನುವಾದಿ ಕೋಮುವಾದಿ ಶಕ್ತಿಗಳು ವೌಢ್ಯಾಚರಣೆ ಪ್ರತಿಬಂಧಕ ಮಸೂದೆ ವಿರುದ್ಧ ಅಪಪ್ರಚಾರ ಆರಂಭಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಮಠಾಧೀಶರು, ಟಿವಿ ಜ್ಯೋತಿಷಿಗಳು ನೇರವಾಗಿ ರಣರಂಗಕ್ಕೆ ಇಳಿಯುವುದರ ಜೊತೆ ತಮ್ಮ ಆಪ್ತ ಶಾಸಕರ ಮೂಲಕ ಅಡ್ಡಗಾಲು ಹಾಕಿದರು. 

ಜನಸಾಮಾನ್ಯರ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ತಮ್ಮ ಖಜಾನೆ ತುಂಬಿಕೊಳ್ಳುತ್ತಾರೆ. ಆ ಮೂಲಕ ಸಮಾಜದ ಸ್ವಾಸ್ಥವನ್ನು ಹಾಳುಮಾಡುವ ಚಟುವಟಿಕೆಗಳಿಗೆ ಈ ಕಾನೂನಿನಿಂದ ಲಗಾಮು ಹಾಕಬಹುದಿತ್ತು. ಮಹಾರಾಷ್ಟ್ರದಲ್ಲಿ ನರೇಂದ್ರ ದಾಭೋಲ್ಕರ್ ಹತ್ಯೆಯ ನಂತರ ಅಲ್ಲಿನ ಸರಕಾರ ಈ ಶಾಸನವನ್ನು ಜಾರಿಗೆ ತಂದಿತು. 

ಈ ವಿಧೇಯಕದಲ್ಲಿ ಯಾವುದು ವೌಢ್ಯ ಎಂಬ ಬಗ್ಗೆ ಉಲ್ಲೇಖವಿದೆ. ದೇವರಿಗೆ ಕೈ ಮುಗಿಯುವುದು, ಪ್ರಾರ್ಥನೆ ಮಾಡುವುದು, ಜನಿವಾರ ಹಾಕುವುದು, ಗಂಧ ವಿಭೂತಿ ಹಚ್ಚುವುದು ವೌಢ್ಯ ಎಂದು ಇದರಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಇವೆಲ್ಲ ಅವರವರ ವೈಯಕ್ತಿಕ ನಂಬಿಕೆಗಳಾಗಿವೆ. ಆದರೆ ಪಂಕ್ತಿಭೇದ, ಮಡೆಸ್ನಾನ, ಭಾನಾಮತಿ, ಮಾಟಮಂತ್ರ, ವಾಮಾಚಾರ, ಜಾತಕ ಫಲದ ಹೆಸರಲ್ಲಿ ವಂಚನೆ, ಮಣಿಸರ ಹರಳುಗಳ ಮಾರಾಟ, ಟಿವಿ ಜ್ಯೋತಿಷ್ಯ ಇವೆಲ್ಲ ವೌಢ್ಯಗಳ ಪಟ್ಟಿಗೆ ಸೇರಿವೆ. 

ಸಮಾಜದಲ್ಲಿ ಬದಲಾವಣೆ ತರಲು ಹೊರಟಾಗ ಕೊಳೆಯನ್ನು ತೊಳೆಯಲು ಮುಂದಾದಾಗ ಅದಕ್ಕೆ ಅಡ್ಡಿ ಆತಂಕಗಳು ಬರುವುದು ಸಹಜ. ಶತಮಾನಗಳಿಂದ ಕಂದಾಚಾರದ ಕತ್ತಲಲ್ಲಿ ಮುಳುಗಿದ ಭಾರತೀಯ ಸಮಾಜ ಬೆಳಕಿನತ್ತ ಸಾಗಲು ತವಕಿಸುತ್ತಿರುವಾಗ ಅದಕ್ಕೆ ಅಡ್ಡಗಾಲು ಹಾಕಲೆಂದೇ ಕೆಲ ಸಂಘಟನೆಗಳು ಹುಟ್ಟಿಕೊಂಡಿವೆ. ಅವುಗಳಿಗೆ ಮಠಾಧೀಶರಿಂದ ಕಾರ್ಪೊರೇಟ್ ಕಂಪೆನಿಗಳಿಂದ ಧಾರಾಳವಾಗಿ ಹಣ ಹರಿದು ಬರುತ್ತದೆ. ಜನರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಸುಲಿಗೆ ಮಾಡುವ ದಂಧೆಯಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ಇದೆ. ಇದರಲ್ಲಿ ಹಣಕಾಸಿನ ವ್ಯವಹಾರವೂ ಅಡಗಿರುವುದರಿಂದ ಧಾರ್ಮಿಕ ವ್ಯಾಪಾರಿಗಳು ವೌಢ್ಯಾಚರಣೆ ಪ್ರತಿಬಂಧಕ ಮಸೂದೆ ಬರಲು ಬಿಡುತ್ತಿಲ್ಲ.

ದೇವರು ಧರ್ಮಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ದಗಾಕೋರರು, ಕಾವಿವೇಷ ಧರಿಸಿದ ಕಪಟ ವೈರಾಗಿಗಳು ಸಹಜವಾಗಿ ವಿರೋಧಿಸುತ್ತಾರೆ. ಕಂದಾಚಾರದ ವಿರುದ್ಧ ಹೋರಾಟಕ್ಕೆ ಶತಮಾನಗಳ ಇತಿಹಾಸವಿದೆ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಇಂಥ ವೌಢ್ಯವನ್ನು ಧಿಕ್ಕರಿಸಿ ಹೋರಾಡಿದರು. ಸತಿ ಪದ್ಧತಿ ವಿರುದ್ಧ ರಾಜಾರಾಮ ಮೋಹನ್ ರಾವ್ ಹೋರಾಟಕ್ಕಿಳಿದಾಗ ಈ ಕಂದಾಚಾರಿ ಶಕ್ತಿಗಳು ಅವರನ್ನು ವಿರೋಧಿಸಿದ್ದವು.

 ಆಗ ಸತಿ ಸಹಗಮನ ಪದ್ಧತಿಯನ್ನು ಬೆಂಬಲಿಸಿ ರಾಜಾರಾಮ ಮೋಹನರಾಯರಿಗೆ ಕಿರುಕುಳ ನೀಡಿದವರೇ ಈಗ ಧಾರ್ಮಿಕ ನಂಬಿಕೆ ಹೆಸರಿನಲ್ಲಿ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಸಾವಿತ್ರಿಬಾಯಿ ಫುಲೆ ಮಹಿಳೆಯರಿಗೆ ಅಕ್ಷರ ಕಲಿಸಲು ಹೊರಟಾಗ ಅವರ ಮೇಲೆ ಕಲ್ಲೆಸದವರೇ ಈಗ ಅಂಧಶ್ರದ್ಧೆ ನಿರ್ಮೂಲನಾ ಕಾನೂನನ್ನು ವಿರೋಧಿಸುತ್ತಿದ್ದಾರೆ.

ಮದರ್ ತೆರೆಸಾ ಕುಷ್ಠರೋಗಿಗಳ ಸೇವೆ ಮಾಡಲು ಹೊರಟಾಗಲು ಈ ಶಕ್ತಿಗಳು ಚಿತ್ರಹಿಂಸೆ ನೀಡಿದ್ದವು. ಬಾಬಾ ಸಾಹೇಬ ಅಂಬೇಡ್ಕರ್ ಚೌದಾರ ಕೆರೆ ನೀರು ತೆಗೆದುಕೊಳ್ಳಲು ಹೋದಾಗ, ನಾಸಿಕ್ ದೇವಸ್ಥಾನ ಪ್ರವೇಶಿಸಿದಾಗ ಈ ಮನುವಾದಿ ಶಕ್ತಿಗಳು ಅವರ ಮೇಲೆ ಹಲ್ಲೆ ಮಾಡಿದ್ದವು. ಈಗ ಅದೇ ಶಕ್ತಿಗಳು ಮೂಢನಂಬಿಕೆ ನಿಷೇಧ ಶಾಸನವನ್ನು ವಿರೋಧಿಸುತ್ತಿವೆ.

ಇಂದಿಗೂ ಈ ದೇಶದಲ್ಲಿ ನಿಧಿಗಾಗಿ ನರಬಲಿಕೊಡುವ ಘಟನೆಗಳು ಜರಗುತ್ತಿವೆ. ಈ ಗುಪ್ತ ನಿಧಿಗಾಗಿ ಎಳೆ ಕಂದಮ್ಮಗಳನ್ನು ಬಲಿಕೊಡಲಾಗುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಗ್ರಾಮದಲ್ಲಿರುವ ಲಕ್ಷ್ಮೀದೇವಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದಲ್ಲಿ ಹಸುಗೂಸುಗಳನ್ನು ದೇವಾಲಯದ ಮೇಲಿಂದ ಎಸೆದು ಹಿಡಿಯಲಾಗುತ್ತದೆ. ಹೀಗೆ ಎಸೆಯುವುದರಿಂದ ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಬಳ್ಳಾರಿ ಜಿಲ್ಲೆಯ ಮದಿರೆ ಗ್ರಾಮದಲ್ಲಿ ನಡೆಯುವ ಕೆಂಚ ಮಾಳೇಶ್ವರ ಜಾತ್ರೆಯಲ್ಲಿ ದೇವರಿಗೆ ಪ್ರಾಣಿಗಳನ್ನು ಬಲಿಕೊಟ್ಟು ಅದರ ರಕ್ತದಲ್ಲಿ ಮಕ್ಕಳನ್ನು ಉರುಳಾಡಿಸುವ ವೌಢ್ಯಾಚರಣೆ ಅಸ್ತಿತ್ವದಲ್ಲಿದೆ. ಕೆಲ ದೇವಾಲಯಗಳಲ್ಲಿ ರಥೋತ್ಸವ ವೇಳೆ ಮಕ್ಕಳನ್ನು ರಥದ ಕೆಳಗೆ ಮಲಗಿಸಲಾಗುತ್ತದೆ. ಇದಷ್ಟೇ ಅಲ್ಲ. ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿಸುವುದು, ಮೇಲ್ವರ್ಗದವರು ಭೋಜನ ಸ್ವೀಕರಿಸಿದ ಮೇಲೆ ಅದರ ಎಂಜಲೆಲೆ ಮೇಲೆ ಉರುಳಾಡುವ ಮಡೆಸ್ನಾನ ಹೀಗೆ ನೂರಾರು ಅಮಾನವೀಯ ಆಚರಣೆಗಳು ಈ ದೇಶದಲ್ಲಿವೆ. ಆರೆಸ್ಸೆಸ್ ಆಗಲಿ ಅದರ ಪರಿವಾರಕ್ಕೆ ಸೇರಿದ ಸಂಘಟನೆಗಳಾಗಲಿ ಎಂದೂ ನರ ಬಲಿಯಂಥ ಅಮಾನವೀಯ ಆಚರಣೆ ವಿರುದ್ಧ ದನಿಯೆತ್ತಿಲ್ಲ. ಕರ್ನಾಟಕದಲ್ಲಿ ವೌಢ್ಯ ಪ್ರತಿಬಂಧಕ ಕಾಯ್ದೆಯನ್ನು ವಿರೋಧಿಸುವ ಶಕ್ತಿಗಳೇ ಮಹಾರಾಷ್ಟ್ರದಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹಾಡುಹಗಲೇ ಹತ್ಯೆ ಮಾಡಿದವು. ಮಾಟ ಮಂತ್ರದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಲಫಂಗರ ವಿರುದ್ಧ ದಾಭೋಲ್ಕರ್ ಬೇತಾಳರಂತೆ ಬೆನ್ನು ಹತ್ತಿದ್ದರು. ಇದಕ್ಕಾಗಿ ಅಂಧಃಶ್ರದ್ಧೆ ನಿರ್ಮೂಲನಾ ಸಂಘಟನೆ ಕಟ್ಟಿಕೊಂಡಿದ್ದರು. 

ಕೊನೆಗೆ ಇದಕ್ಕಾಗಿ ಬಲಿದಾನ ಮಾಡಿದರು. ಕರ್ನಾಟಕದಲ್ಲಿ ನರೇಂದ್ರ ದಾಭೋಲ್ಕರ್ ಮಾದರಿಯಲ್ಲಿ ವೈಚಾರಿಕ ಜಾಗೃತಿ ಆಂದೋಲನ ನಡೆಯಬೇಕಾಗಿದೆ. ಈಗ ಮಂಗಳೂರಿನ ನರೇಂದ್ರ ನಾಯಕ್, ಉಡುಪಿಯ ಗೋಪಾಲ ಶೆಟ್ಟರು, ಬೆಂಗಳೂರಿನ ನಟರಾಜ್ ಹುಲಿಕಲ್, ನಟರಾಜ್, ನಿಡುಮಾಮಿಡಿ ಸ್ವಾಮೀಜಿ ಮುಂತಾದವರು ತಮ್ಮ ಶಕ್ತಿಮೀರಿ ಜನ ಜಾಗೃತಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೂ ಈ ವೈಚಾರಿಕ ಆಂದೋಲನಕ್ಕೆ ಇನ್ನಷ್ಟು ಬೆಂಬಲ ಬೇಕಾಗಿದೆ. ಹಳ್ಳಿಹಳ್ಳಿಗೆ ಹೋಗಾಬೇಕಾಗಿದೆ. ಮೂಢ ನಂಬಿಕೆ ವಿರುದ್ಧ ಜನಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿವರ್ಷ ಸ್ಮಶಾನದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುತ್ತಾರೆ. ವಿಲ್ಫ್ರೆಡ್ ಡಿಸೋಜಾರಂಥವರು ಇದಕ್ಕಾಗಿ ಸಂಘಟನೆಯೊಂದನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಇನ್ನು ಎಡಪಂಥೀಯರ ಸಂಘಟನೆಗಳು ನಿರಂತರ ಚಳವಳಿ ನಡೆಸಿವೆ. ಆದರೂ ಈ ಕಾನೂನು ಜಾರಿಗೆ ತರಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ವೌಢ್ಯಾಚರಣೆ ಪ್ರತಿಬಂಧಕ ಕಾನೂನು ತರುವ ಬಗ್ಗೆ ಬದ್ಧತೆ ಇದೆ. ಇತ್ತೀಚೆಗೆ ಮತ್ತೆ ಅವರು ಅದರನ್ನು ಪುನರುಚ್ಚರಿಸಿದ್ದಾರೆ. ಆದರೆ ಪ್ರತಿಗಾಮಿ ಕರಾಳ ಶಕ್ತಿಗಳಿಂದ ಮಾತ್ರವಲ್ಲ, ಸ್ವಪಕ್ಷದಲ್ಲೂ ಕೆಲವರಿಂದ ಅವರಿಗೆ ವಿರೋಧವಿದೆ. ಈ ವಿರೋಧಕ್ಕೆಲ್ಲ ಮುಖ್ಯಮಂತ್ರಿಗಳು ಸೊಪ್ಪು ಹಾಕದೇ ಗಟ್ಟಿಯಾಗಿ ನಿಂತರೆ ಇಡೀ ಕರ್ನಾಟಕವೇ ಅವರಿಗೆ ಬೆಂಬಲವಾಗಿ ನಿಲ್ಲುತ್ತದೆ. ಸಿದ್ದರಾಮಯ್ಯನವರ ಅಧಿಕಾರಾವಧಿ ಇನ್ನು ಎರಡು ವರ್ಷ ಮಾತ್ರ ಉಳಿದಿದೆ. ಉಳಿದುದೇನನ್ನೂ ಮಾಡಲಾಗದಿದ್ದರೂ ಈ ವೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿಗೆ ಅವರು ಸಂಕಲ್ಪ ಮಾಡಬೇಕು. ಈ ದಿಟ್ಟ ಕ್ರಮ ಕೈಗೊಂಡರೆ ಕರ್ನಾಟಕದ ಜನತೆ ಅವರನ್ನೆಂದೂ ಮರೆಯುವುದಿಲ್ಲ.

ಸತಿ ಸಹಗಮನ ಪದ್ಧತಿಯನ್ನು ಬೆಂಬಲಿಸಿ ರಾಜಾರಾಮ ಮೋಹನರಾಯರಿಗೆ ಕಿರುಕುಳ ನೀಡಿದವರೇ ಈಗ ಧಾರ್ಮಿಕ ನಂಬಿಕೆ ಹೆಸರಿನಲ್ಲಿ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಸಾವಿತ್ರಿಬಾಯಿ ಫುಲೆ ಮಹಿಳೆಯರಿಗೆ ಅಕ್ಷರ ಕಲಿಸಲು ಹೊರಟಾಗ ಅವರ ಮೇಲೆ ಕಲ್ಲೆಸದವರೇ ಈಗ ಅಂಧಶ್ರದ್ಧೆ ನಿರ್ಮೂಲನಾ ಕಾನೂನನ್ನು ವಿರೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News