ಸುಖನಿದ್ರೆಗೆ ಆರು ಸೂತ್ರಗಳು
ಮಲಗುವ ಮುನ್ನ ಬಿಸಿ ಹಾಲು ಕುಡಿದು, ಬಿಸಿ ನೀರಲ್ಲಿ ಸ್ನಾನ ಮಾಡಿದರೆ ಆರಾಮದಾಯಕ ನಿದ್ದೆಗೆ ಜಾರಬಹುದು ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಬಹುತೇಕ ಮಂದಿಗೆ ಸರಿ ನಿದ್ದೆ ಬರುವುದಿಲ್ಲ. ಮುಂದಿನ ಬಾರಿ ಅರ್ಧ ನಿದ್ದೆಯಿಂದ ಎಚ್ಚರವಾದರೆ ಈ ಸಹಜ ಟಿಪ್ಸ್ ಬಳಸಿ ನೋಡಿ..
* ಮೂಗಿನ ಎಡಹೊಳ್ಳೆ ಮೂಲಕ ಉಸಿರೆಳೆದುಕೊಳ್ಳಿ
ಈ ಯೋಗ ವಿಧಾನವನ್ನು ರಕ್ತದ ಅಧಿಕ ಒತ್ತಡ ನಿಯಂತ್ರಣ ಹಾಗೂ ನಿಮ್ಮನ್ನು ಪ್ರಶಾಂತವಾಗಿಸಲು ಕಲಿಸಲಾಗುತ್ತದೆ ಎಂದು ಸಮಗ್ರ ನಿದ್ರೆ ಥೆರಪಿ ತಜ್ಞ ಪೀಟರ್ ಸ್ಮಿತ್ ಹೇಳುತ್ತಾರೆ.
"ಎಡ ಪಾರ್ಶ್ವದಲ್ಲಿ ಮಲಗಿ. ಮೂಗಿನ ಬಲಹೊಳ್ಳೆಯನ್ನು ಬೆರಳಿನಿಂದ ಅದುಮಿ. ನಿಧಾನವಾಗಿ ಆಳವಾದ ಉಸಿರನ್ನು ಎಡ ಮೂಗಿನ ಹೊಳ್ಳೆಯಿಂದ ಎಳೆದುಕೊಳ್ಳಿ" ಅಧಿಕ ಉಷ್ಣದಿಂದಾಗಿ ನಿದ್ದೆ ಬಾರದಿದ್ದರೆ ಇದು ರಾಮಬಾಣ.
ಮಾಂಸಖಂಡ ಬಿಗಿಯಾಗಿಸಿ..
ಎಲ್ಲ ಮಾಂಸಖಂಡಗಳನ್ನು ಹಾಯಾಗಿರುವಂತೆ ಮಾಡಿದಲ್ಲಿ ಸುಖನಿದ್ರೆಗೆ ನಿಮ್ಮ ದೇಹವನ್ನು ಸಜ್ಜುಗೊಳಿಬಹುದು. ಆತಂಕ ರೋಗದ ತಜ್ಞ ಚಾರ್ಲ್ಸ್ ಲಿಂಡೆನ್ ಹೇಳುವಂತೆ, "ಅಂಗಾತ ಮಲಗಿ. ಆಳ, ನಿಧಾನ ಉಸಿರನ್ನೆಳೆದುಕೊಳ್ಳಿ. ಇದೇ ವೇಳೆ ನಿಮ್ಮ ಕಾಲಬೆರಳುಗಳನ್ನು ಗಟ್ಟಿಯಾಗಿ ಅದುಮಿ. ಮೊಣಕಾಲಿಗೆ ನಿಧಾನವಾಗಿ ಪಾದವನ್ನು ಮಡಚಿ. ಬಳಿಕ ಬೆರಳುಗಳನ್ನು ಆರಾಮಗಲು ಬಿಡಿ. ಮತ್ತೆ ಉಸಿರಾಡಿ. ಹೀಗೆ ಒಂದೊಂದೇ ಮಾಂಸಖಂಡಗಳನ್ನು ಬಿಗಿಯಾಗಿಸುವುದರಿಂದ ಸುಖನಿದ್ರೆ ನಿಮ್ಮದಾಗುತ್ತದೆ.
ಎಚ್ಚರವಾಗಿರಲು ಪ್ರಯತ್ನಿಸಿ
ಎಚ್ಚರದಿಂದಲೇ ಇರುವಂತೆ ನಿಮಗೆ ನೀವೇ ಸವಾಲು ಹಾಕಿಕೊಳ್ಳಿ. ನಿಮ್ಮ ಮನಸ್ಸು ಖಂಡಿತವಾಗಿಯೂ ಇದರ ವಿರುದ್ಧ ಸಿಡಿದೇಳುತ್ತದೆ. ಇದನ್ನು ನಿದ್ದೆ ವೈರುದ್ಧ್ಯ ಎನ್ನುತ್ತೇವೆ ಎಂದು ಮನಃಶಾಸ್ತ್ರಜ್ಞೆ ಜ್ಯೂಲಿ ಹಿರ್‌ಸ್ಟ್ ಹೇಳುತ್ತಾರೆ.
ಕಣ್ಣುಗಳನ್ನು ದೊಡ್ಡದಾಗಿ ತೆರೆಯಿರಿ. ನಾನು ನಿದ್ದೆ ಮಾಡುವುದಿಲ್ಲ ಎಂದು ಪದೇ ಪದೇ ಅಂದುಕೊಳ್ಳಿ. ಇಂಥ ಋಣಾತ್ಮಕತೆಗೆ ಮೆದುಳು ಸಹಕರಿಸುವುದಿಲ್ಲ. ಕಣ್ಣಿನ ಮಾಂಸಖಂಡಗಳು ದಣಿದು ನಿದ್ದೆಗೆ ಜಾರುತ್ತೀರಿ.
ಮೆಲುಕು ಹಾಕಿ
ಇಡೀ ದಿನದ ಘಟನಾವಳಿಗಳನ್ನು ಹಿಮ್ಮುಖವಾಗಿ ಮೆಲುಕು ಹಾಕುವುದರಿಂದ ನಿಮ್ಮ ಮನಸ್ಸಿನ ಚಿಂತೆಯಿಂದ ದೂರವಾಗಬಹುದು ಎನ್ನುವುದು ಸಾಮ್ಮಿ ಮಾರ್ಗೊ ಸಲಹೆ. ಈ ಮನೋಸ್ಥಿತಿ ನಿಮ್ಮನ್ನು ನಿದ್ದೆಗೆ ಸಜ್ಜುಗೊಳಿಸುತ್ತದೆ ಎನ್ನುವುದು ಅವರ ವಿವರಣೆ.
ಕಣ್ಣು ಹೊರಳಿಸಿ
ಕಣ್ಣು ಮುಚ್ಚಿಕೊಂಡು, ಕಣ್ಣಗುಡ್ಡೆಗಳನ್ನು ಮೂರು ಬಾರಿ ಹೊರಳಿಸಿದರೆ ಕೆಲಸ ಮುಗಿಯಿತು. ನಿಮಗೇ ಅರಿವಿಲ್ಲದಂತೆ ನಿದ್ರೆಗೆ ಜಾರುತ್ತೀರಿ ಎಂದು ಸಮ್ಮಿ ಹೇಳುತ್ತಾರೆ. ಇದು ನಿದ್ದೆಗೆ ಪೂರಕವಾದ ಹಾರ್ಮೋನ್‌ಗಳನ್ನು ಪ್ರಚೋದಿಸುತ್ತದೆ ಎನ್ನುವುದು ಅವರ ವಿವರಣೆ.
ಕಲ್ಪನೆ ಮಾಡಿಕೊಳ್ಳಿ
"ದೃಶ್ಯಾವಳಿಯನ್ನು ಕಲ್ಪಿಸಿಕೊಳ್ಳುವುದು ಇನ್ನೊಂದು ಸರಳ ವಿಧಾನ. ಕನಿಷ್ಠ ಮೂರು ದೃಶ್ಯಗಳನ್ನು ನೀವು ಕಲ್ಪಿಸಿಕೊಳ್ಳಬೇಕು. ಭೌಗೋಳಿಕ ಸ್ವರ್ಗದಲ್ಲಿ ಆರಾಮದಾಯಕವಾಗಿ ನೀರಿನಲ್ಲಿ ತೇಲುತ್ತಾ ಅಥವಾ ಹೂಹಾಸಿನ ಬಯಲಲ್ಲಿ ನಡೆಯುವುದನ್ನು ಕಲ್ಪಿಸಿಕೊಳ್ಳಿ. ಆ ಹೂವುಗಳ ಸುಗಂಧ ಆಘ್ರಾಣಿಸಿದಂತೆ ಕಲ್ಪಿಸಿಕೊಳ್ಳಿ. ನಿಮ್ಮ ಪಾದದ ಕೆಳಗೆ ಮರಳು ಅಥವಾ ಹುಲ್ಲು ಇದ್ದು, ನೀರ ನಿನಾದ ಅನುರಣಿಸುವುದನ್ನು ಕಲ್ಪಿಸಿಕೊಳ್ಳಿ. ನೀವು ನಿದ್ದೆಗೆ ಜಾರುತ್ತೀರಿ" ಎಂದು ಸಮ್ಮಿ ಹೇಳುತ್ತಾರೆ.