ಕಿಡ್ನಿಯೊಳಗಿದೆ ಒಂದು ಗಡಿಯಾರ!
ಜಿನೀವಾ: ಕಿಡ್ನಿಯೊಳಗೆ ಒಂದು ಗಡಿಯಾರ ಇದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಇದು ದೇಹದೊಳಗಿನ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ.
ದೇಹದ ದೈನಂದಿನ ಪ್ರಕ್ರಿಯೆಗಳು ಒಂದು ಸಹಜ ಲಯವನ್ನು ಹೊಂದಿರುತ್ತದೆ ಅಥವಾ ಈ ಆವೃತ್ತ ಗಡಿಯಾರ ದೈನಂದಿನ ಬೆಳಕು- ಕತ್ತಲು ಚಕ್ರವನ್ನು ಅವಲಂಬಿಸಿರುತ್ತದೆ. ಭೂಮಿಯ ಪರಿಭ್ರಮಣದಂತೆ ಇದು ಕೂಡಾ ಕಾರ್ಯ ನಿರ್ವಹಿಸುತ್ತಿರುತ್ತದೆ.
ಮನುಷ್ಯನ ಕಿಡ್ನಿಯಲ್ಲಿ ಇಂಥ ಅಂತರ್ಗತ ಆವರ್ತನೀಯ ಗಡಿಯಾರವು ದೇಹದ ವಿವಿಧ ಅಂಗಾಂಗಗಳ ವೈವಿಧ್ಯಮಯ ಚಟುವಟಿಕೆ ಹಾಗೂ ಕಾರ್ಯಗಳನ್ನು ಸಮನ್ವಯಗೊಳಿಸುತ್ತದೆ ಎಂದು ಸಂಶೋಧಕರು ಇದೀಗ ಖಚಿತಪಡಿಸಿದ್ದಾರೆ.
ಮೂತ್ರಪಿಂಡದಲ್ಲಿ ಮೂತ್ರ ಉತ್ಪತ್ತಿ ಹಾಗೂ ವಿಸರ್ಜನೆ ಒಂದು ಸುಲಭವಾಗಿ ಪತ್ತೆ ಮಾಡಬಹುದಾದ ಲಯಬದ್ಧ ಪ್ರಕ್ರಿಯೆ. ಇದು ಈ ಆವರ್ತನೀಯ ಗಡಿಯಾರವನ್ನು ಅವಲಂಬಿಸಿದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಸ್ವಿಡ್ಜರ್‌ಲೆಂಡ್‌ನ ಲೌಸೆನ್ ವಿವಿಯ ನಾತ್ಸುಕೊ ಟೊಕೊನಮಿ ವಿವರಿಸುತ್ತಾರೆ.
ಕಿಡ್ನಿ ಕಾರ್ಯನಿರ್ವಹಣೆಗೆ ಈ ಗಡಿಯಾರವೇ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಸಂಶೋಧಕರು ದೃಢಪಡಿಸಿದ್ದಾರೆ. ಬೆಳಕು- ಕತ್ತಲ ಸಂಯೋಜನೆಯಲ್ಲಿ ಮೂತ್ರಪಿಂಡವನ್ನು ಸಕ್ರಿಯವಾಗುವಂತೆ ಹಾಗೂ ವಿಶ್ರಾಂತಿ ಪಡೆಯುವಂತೆ ಮಾಡುತ್ತದೆ.
ಇದು ದೇಹದಲ್ಲಿ ವಿವಿಧ ಅಮಿನೊ ಆಮ್ಲಗಳು, ಲಿಪಿಡ್ ಹಾಗೂ ದೇಹದ ರಕ್ತದ ಇತರ ಅಂಶಗಳ ಮಟ್ಟವನ್ನು ವ್ಯತ್ಯಯಗೊಳಿಸುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. ಜತೆಗೆ ಚಿಕಿತ್ಸೆಯ ವೇಳೆ ಕೂಡಾ ಅಗತ್ಯ ಪ್ರಮಾಣದ ಔಷಧಿಯನ್ನು ಬಿಡುಗಡೆ ಮಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸಂಶೋಧನೆಯಿಂದ ಖಚಿತವಾಗಿದೆ.