ಸಾಮಾಜಿಕ ನ್ಯಾಯದ ವಿರುದ್ಧ ಸಂಚು
ಮನುಷ್ಯರ ನಡುವೆ ದ್ವೇಷದ ಅಡ್ಡಗೋಡೆಯಾಗಿ ನಿಂತು ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಅಂತರ್ಜಾತಿ ವಿವಾಹ ಮದ್ದು ಎಂದು ಹೇಳಿದ ಬಾಬಾ ಸಾಹೇಬ ಅಂಬೇಡ್ಕರ್ 125ನೆ ಜಯಂತಿಯನ್ನು ಇಡೀ ದೇಶ ಆಚರಿಸುತ್ತಿದೆ. ಒಂದೆಡೆ ಬಾಬಾ ಸಾಹೇಬರ ಪ್ರತಿಮೆ ಮೇಲೆ ಕ್ಷೀರಾಭಿಷೇಕ ಮಾಡಿ, ತೊಟ್ಟಿಲಲ್ಲಿ ತೂಗಿ ಜಯಂತಿ ಆಚರಣೆ ನಡೆದಿದ್ದರೆ ಇನ್ನೊಂದೆಡೆ ಅವರ ವಿಚಾರಗಳ ಬಗ್ಗೆ ಚಿಂತನಮಂಥನ ವಿಚಾರಗೋಷ್ಠಿಗಳು ನಡೆದಿವೆ.
ತಾನು ಬಾಬಾ ಸಾಹೇಬರ ಭಕ್ತ ಎಂದು ಹೇಳಿ ದಮನಿತ ಸಮುದಾಯಗಳಿಗೆ ತಿರುಪತಿ ನಾಮ ಹಾಕಲು ಹೊರಟ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಸಾಮಾಜಿಕ ಸಾಮರಸ್ಯದ ಪ್ರತಿಪಾದಕರಾಗಿದ್ದರು ಎಂದು ಹೇಳಿದರು. ಈ ‘ಸಾಮಾಜಿಕ ಸಾಮರಸ್ಯ’ ಎಂಬುದು ಆರೆಸ್ಸೆಸ್ ಸೃಷ್ಟಿಸಿದ ಸಿದ್ಧಾಂತ. ಅಂಬೇಡ್ಕರ್ ಪ್ರತಿಪಾದಿಸಿದ್ದು ಸಾಮಾಜಿಕ ನ್ಯಾಯ. ಈ ಪುರೋಹಿತಶಾಹಿಗಳ ಚೇಲಾಗಳು ಹೇಳುತ್ತಿರುವುದು ಸಾಮರಸ್ಯ ಎಂಬ ವಂಚನೆಯನ್ನು.
ಈ ಸಾಮಾಜಿಕ ಸಾಮರಸ್ಯ ಎಂಬುದು ವಂಚನೆಯ ಶಬ್ದಜಾಲ, ಇದು ಸಮಾನತೆಯನ್ನು ಧ್ವನಿಸುವುದಿಲ್ಲ. ನ್ಯಾಯವನ್ನು ಪ್ರತಿಪಾದಿಸುವುದಿಲ್ಲ. ಹಿಂದೂ ಸಮಾಜದಲ್ಲಿ ಬ್ರಾಹ್ಮಣ ಬ್ರಾಹ್ಮಣನಾಗಿ, ದಲಿತ ದಲಿತನಾಗಿ ಸಾಮರಸ್ಯದಿಂದ ಇರಬೇಕೆಂಬುದು ಗೋಳ್ವಲ್ಕರ್ ಸಿದ್ಧಾಂತ. ಯಾವುದೇ ಕಾರಣಕ್ಕೂ ಸಾಮಾಜಿಕ ನ್ಯಾಯದ ಹಕ್ಕು ಪ್ರತಿಪಾದನೆ ಮಾಡಬಾರದು, ಸಮಾನತೆಯ ಮಾತನಾಡಕೂಡದು, ತುಳಿಯುವ ಮೇಲ್ವರ್ಗಗಳೊಂದಿಗೆ ಸಾಮರಸ್ಯದಿಂದ ಇರಬೇಕೆಂಬ ಸಂದೇಶವನ್ನು ಇದು ನೀಡುತ್ತದೆ. ಜಾತಿ ವ್ಯವಸ್ಥೆಯ ಮೇಲ್ಜಾತಿಯ, ಮೇಲ್ವರ್ಗದ ತುಳಿಯುವ ಕಾಲುಗಳನ್ನು ತಲೆ ಮೇಲೆ ಇಟ್ಟುಕೊಂಡು ದಲಿತರು ಸಂತೋಷವಾಗಿ, ಸಾಮರಸ್ಯದಿಂದ ಇರಬೇಕೆಂದು, ಶೋಷಣೆಯ ವಿರುದ್ಧ ದನಿಯೆತ್ತಬಾರದೆಂದು ಪ್ರತಿಪಾದಿಸುವ ಈ ಸಿದ್ಧಾಂತವನ್ನು ಅಂಬೇಡ್ಕರ್ ಪ್ರಬಲವಾಗಿ ವಿರೋಧಿಸಿದ್ದರು. ಆದರೆ ಸಂಘಪರಿವಾರದ ಶಾಖೆಯಲ್ಲಿ ಬೆಳೆದ ಮೋದಿ ಅಂಬೇಡ್ಕರ್ ಸಾಮರಸ್ಯ ಪ್ರತಿಪಾದಿಸಿದ್ದರು ಎಂದು ಸುಳ್ಳು ಹೇಳಿದರು.
ಜಾತಿ ಪ್ರಶ್ನೆ ಬಂದಾಗ ಪುರೋಹಿತಶಾಹಿಯನ್ನು ರಕ್ಷಿಸಲು ಈ ಸಂಘಿಗಳು ಸಾಮರಸ್ಯ ಮಂತ್ರ ಪಠಿಸುತ್ತಾರೆ. ಹಿಂದೂ ಸಮಾಜದ ದಮನಿತ ವರ್ಗಗಳಿಗೆ ಮೇಲ್ಜಾತಿಗಳೊಂದಿಗೆ ಸಮಾನತೆಯಿಂದ ಇರಬೇಕೆಂದು ಇವರು ಹೇಳುವುದಿಲ್ಲ. ಬದಲಿಗೆ ಸಾಮರಸ್ಯದಿಂದ ಇರುವಂತೆ ಆಗ್ರಹಿಸುತ್ತಾರೆ. ಆದರೆ ಹಿಂದು ಮುಸ್ಲಿಂ ಪ್ರಶ್ನೆ ಬಂದಾಗ ಇವರು ಸಾಮರಸ್ಯ ಎನ್ನುವುದಿಲ್ಲ. ಮುಸ್ಲಿಂ ವಿರೋಧಿ ದ್ವೇಷ ಕೆರಳಿಸುತ್ತಾರೆ. ದೇಶವೆಲ್ಲ ಬಾಬಾ ಸಾಹೇಬರ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಆತಂಕಕಾರಿಯಾಗಿವೆ. ಮಹಿಳೆಯರನ್ನು ಕಟ್ಟಿಕೊಂಡು ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯ ಪ್ರವೇಶಿಸಿದ ಪುಣೆಯ ಹೋರಾಟಗಾತಿ ತೃಪ್ತಿ ದೇಸಾಯಿ ಮೇಲೆ ಕೋಮು ವ್ಯಾದಿಗಳು ಹಲ್ಲೆ ಮಾಡಿ ಎಳೆದಾಡಿದರು. ಮಹಿಳೆಯರು ದೇವಾಲಯ ಪ್ರವೇಶಿಸುವುದು ಹಿಂದೂ ಧರ್ಮಕ್ಕೆ ವಿರೋಧ ಎಂಬುದು ಇವರ ವಾದ. ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆದ ಎರಡು ಘಟನೆಗಳು ಕಳವಳಕಾರಿಯಾಗಿವೆ. ಈ ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಸವರ್ಣೀಯ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ಹೆತ್ತ ಮಗಳನ್ನೇ ಕೊಂದು ಹಾಕಿದ್ದಾನೆ. ಇದನ್ನು ಮರ್ಯಾದೆಗೇಡು ಹತ್ಯೆ ಎಂದು ಮಾಧ್ಯಮಗಳು ವರ್ಣಿಸಿವೆ. ಇದೊಂದೇಘಟನೆಯಲ್ಲ. ಕಳೆದ ಒಂದು ವರ್ಷದಲ್ಲಿ ಇಂಥ ಹತ್ತು ಕೊಲೆಗಳು ಇಲ್ಲಿ ನಡೆದಿವೆ. ಮಂಡ್ಯ ಜಿಲ್ಲೆಯ ಇನ್ನೊಂದು ಘಟನೆ ಆತಂಕಕಾರಿಯಾಗಿದೆ. ಹಿಂದೂ ಯುವತಿಯೊಬ್ಬಳು ಮುಸ್ಲಿಮ್ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗಲು ಹೊರಟರೆ ಅದಕ್ಕೆ ಲವ್ ಜಿಹಾದ್ ಕತೆ ಕಟ್ಟಿ ಸಂಘಪರಿವಾರದ ಬಜರಂಗಿಗಳು ವಿರೋಧಿಸುತ್ತಿದ್ದಾರೆ. ರವಿವಾರ ಮದುವೆಯಾದ ಹಿಂದೂ ಒಕ್ಕಲಿಗ ಸಮುದಾಯದ ಆಶಿತಾ ಮತ್ತು ಶಕೀಲ್‌ರ ಪ್ರೀತಿಯನ್ನು ಸಹಿಸಲು ಈ ರೋಗಿಸ್ಟ ಮನಸುಗಳಿಗೆ ಆಗಲಿಲ್ಲ. ಆಶಿತಾ-ಶಕೀಲ್ ಮದುವೆಗೆ ಎರಡೂ ಮನೆಗಳ ಹಿರಿಯರ ಒಪ್ಪಿಗೆ ಇದೆ. ಹುಡುಗಿಯ ತಂದೆ ಡಾ. ಎಚ್.ವಿ. ನರೇಂದ್ರ ಬಾಬು ಮಂಡ್ಯದ ಹೆಸರಾಂತ ವೈದ್ಯರು. ಅವರು ಮಳವಳ್ಳಿಯ ಮಾಜಿ ಶಾಸಕ ಎಚ್‌ಪಿ ವೀರೇಗೌಡರ ಪುತ್ರ. ಶಕೀಲ್ ತಂದೆ ಮುಖ್ತಾರ್ ಅಹ್ಮದ್ ವ್ಯಾಪಾರಸ್ಥರು ಇವರಿಬ್ಬರು ಸ್ನೇಹಿತರು. ತಮ್ಮ ಮಕ್ಕಳ ಮದುವೆಯನ್ನು ಇವರು ಮಾಡಲು ಮುಂದಾದಾಗ ಈ ಬಜರಂಗಿಗಳಿಗೆ ಸಹಿಸಲು ಆಗಲಿಲ್ಲ. ಪ್ರತಿಭಟನೆಗಿಳಿದು ಅಪಹಾಸ್ಯಕ್ಕೆ ಒಳಗಾದರು. ಈ ಲವ್ ಜಿಹಾದ್ ಎಂಬುದು ಸಂಘಪರಿವಾರದ ಸೃಷ್ಟಿ. ಇದು ಆರೆಸ್ಸೆಸ್‌ನ ರಾಜಕೀಯ ಸಿದ್ಧಾಂತ. ಹಿಂದುಗಳನ್ನು ಒಂದುಗೂಡಿಸಿ ಇಡೀ ಸಮುದಾಯದ ಮೇಲೆ ಪುರೋಹಿತಶಾಹಿ ನಿಯಂತ್ರಣ ಇಟ್ಟುಕೊಂಡು ಚಾತುರ್‌ವರ್ಣ ಪದ್ಧತಿ ತಂದು ಅಂಬೇಡ್ಕರ್ ಸಂವಿಧಾನವನ್ನು ನಾಶ ಮಾಡುವುದು ಇವರ ಹುನ್ನಾರ. ಕರ್ನಾಟಕದಲ್ಲಿ ಮಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಸಂಘಿಗಳು ಸೃಷ್ಟಿಸಿದ ಈ ರೋಗ ಈಗ ಮಂಡ್ಯಕ್ಕೂ ಕಾಲಿರಿಸಿದೆ. ಅಲ್ಲಿ ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಗೋಡ್ಸೆವಾದಿಗಳ ಯತ್ನ ವಿಫಲಗೊಂಡಿದೆ. ಮಂಡ್ಯದ ಪ್ರಗತಿಪರ ಶಕ್ತಿಗಳು ಒಂದಾಗಿ ಈ ನೀಚರನ್ನು ಸದೆ ಬಡಿದಿದ್ದಾರೆ. ಅಂತರ್ಜಾತಿ ಮದುವೆಗಳನ್ನು ಅಂಬೇಡ್ಕರ್ ಮಾತ್ರ ಪ್ರತಿಪಾದಿಸಲಿಲ್ಲ. ಗಾಂಧೀಜಿಯೂ ತಮ್ಮ ಕೊನೆಯ ದಿನಗಳಲ್ಲಿ ಇಂಥ ಮದುವೆಗಳನ್ನು ಬೆಂಬಲಿಸಿದರು. ಸ್ವಜಾತಿ ಮದುವೆಗಳಿಗೆ ಅವರು ಹೋಗುತ್ತಿರಲಿಲ್ಲ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣದಲ್ಲಿ ಅಂತರ್ಜಾತಿ ಮದುವೆ ಮಾಡಿಸಿದಾಗ ಅಲ್ಲೋಲ ಕಲ್ಲೋಲ ಉಂಟಾಯಿತು.
ಅಷ್ಟು ದೂರವೇಕೆ ನಮ್ಮ ರಾಷ್ಟ್ರಕವಿ ಕುವೆಂಪು ಅವರು ಅಂತರ್ಜಾತಿ, ಅಂತರ್‌ಧರ್ಮೀಯ ವಿವಾಹಗಳ ಪ್ರತಿಪಾದಕರಾಗಿದ್ದರು. ಇಂಥ ಮದುವೆಗಳಿಗಾಗಿ ಮಾತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ಜಾರಿಗೆ ತಂದರು. ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ವಿವಾಹವನ್ನು ಮಂತ್ರ ಮಾಂಗಲ್ಯ ಪದ್ಧತಿಯಂತೆ ಮಾಡಿದರು. ಇಂಥ ಪ್ರೀತಿಯ ಸಾಮರಸ್ಯ ಪರಂಪರೆ ಇರುವ ಈ ನೆಲದಲ್ಲಿ ಗಾಂಧಿ ಹಂಕತ ಪಡೆ ಅಂತರ್ಜಾತಿ ಮದುವೆಗಳನ್ನು ವಿರೋಧಿಸುತ್ತಿದೆ. ಮಳೆಯಾಗದೆ ಸಾಲದ ಬಲೆಗೆ ಸಿಲುಕಿ ಮಂಡ್ಯದ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅದನ್ನು ಪ್ರತಿಭಟಿಸಿ ಹೋರಾಟ ಮಾಡದ ಚಡ್ಡಿಗಳು, ಆಶಿತಾ-ಶಕೀಲ್ ಮದುವೆ ತಡೆಯಲು ಹೊರಟಿದ್ದಾರೆ. ಸವರ್ಣೀಯ ಹಿಂದೂ ಯುವತಿ ದಲಿತನನ್ನು ಪ್ರೀತಿಸಿ ವಿವಾಹ ಮಾಡಿಕೊಳ್ಳಲು ಮುಂದಾದಾಗ ತಂದೆಯಿಂದಲೇ ಹತ್ಯೆಗೊಳಗಾಗಬೇಕಾಯಿತು. ‘ಹಿಂದು ಬಂಧು ಒಂದು’ ಎನ್ನುವ ಚಡ್ಡಿಗಳು ಈ ಹತ್ಯೆಯನ್ನು ಯಾಕೆ ವಿರೋಧಿಸಲಿಲ್ಲ. ಆಕೆ ಮದುವೆಯಾಗಲು ಹೊರಟಿದ್ದು ಹಿಂದೂ ತರುಣನನ್ನೇ ಅಲ್ಲವೇ? ಈ ಘಟನೆಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಈ ದೇಶದಲ್ಲಿ ಆರೆಸ್ಸೆಸ್ ಎಂಬ ಹಿಂಸಾಪ್ರಚೋದಕ ಸಂಘಟನೆಯನ್ನು ಬೆಳೆಯಲು ಬಿಟ್ಟಿದ್ದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ. ಯಾವುದೇ ಹಳ್ಳಿಯಲ್ಲಿ, ಪಟ್ಟಣದಲ್ಲಿ ಆರೆಸ್ಸೆಸ್ ಶಾಖೆ ಆರಂಭಗೊಂಡರೆ ಆ ಊರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಒಂದು ಊರು ನೆಮ್ಮದಿಯಾಗಿರಬೇಕಾದರೆ ಆ ಊರಿನಲ್ಲಿ ಸಾರಾಯಿ ಅಂಗಡಿ, ಜೂಜಾಟದ ಕೇಂದ್ರ, ನಕಲಿ ಸನ್ಯಾಸಿಗಳು, ಮಾಟ ಮಂತ್ರ ಮಾಡುವವರು ಇರಬಾರದು ಎಂದು ಹೇಳುತ್ತೇವೆ. ಅದೇ ರೀತಿ ಒಂದು ನಗರದ ಇಲ್ಲವೇ ಹಳ್ಳಿ ನೆಮ್ಮದಿಯಾಗಿರಬೇಕಾದರೆ ಅಲ್ಲಿ ಆರೆಸ್ಸೆಸ್ ಶಾಖೆ ಎಂಬ ಗಲಭೆಕೋರ ಗುಂಪು ಇರಬಾರದು.
ತಮ್ಮ ಮಕ್ಕಳು ಯಾವ ಬಟ್ಟೆ ಧರಿಸಬೇಕು, ಯಾರನ್ನು ಮದುವೆಯಾಗಬೇಕು ಎಂಬುದನ್ನು ಅವರ ತಂದೆ ತಾಯಿ ನಿರ್ಧರಿಸುವ ಪದ್ಧತಿ ನಮ್ಮಲ್ಲಿದೆ. ಆರೆಸ್ಸೆಸ್ ಶಾಖೆ ಆರಂಭಗೊಂಡರೆ ಇತರ ಮನೆಗಳ ಯುವಕ ಯುವತಿಯರ ಮದುವೆ ಉಡುಪುಗಳಲ್ಲಿ ಇವರು ಕೈಹಾಕುತ್ತಾರೆ, ಅಶಾಂತಿ ಉಂಟು ಮಾಡುತ್ತಾರೆ. ಆರ್ಯರಿಂದ ಆರೆಸ್ಸೆಸ್ ಮುಕ್ತ ಭಾರತಕ್ಕೆ ಈಗ ಗಂಭೀರ ಚಿಂತನೆ ನಡೆಯಬೇಕಾಗಿದೆ. ಹಿಟ್ಲರ್‌ನಿಂದ ಮುಕ್ತವಾದ ನಂತರವೇ ಜರ್ಮನಿ ನೆಮ್ಮದಿಯಿಂದ ಉಸಿರಾಡಿತು. ಮುಸಲೋನಿ ಕತೆ ಮುಗಿದ ನಂತರ ಇಟಲಿ ನಿಟ್ಟುಸಿರು ಬಿಟ್ಟಿತು. ಭಾರತವನ್ನೂ ಈಗ ಈ ಸಂಘಿ ಫ್ಯಾಶಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸಬೇಕಾಗಿದೆ.
ಆರೆಸ್ಸೆಸ್ ಮುಕ್ತ ಭಾರತಕ್ಕೆ ಈಗ ಗಂಭೀರ ಚಿಂತನೆ ನಡೆಯಬೇಕಾಗಿದೆ. ಹಿಟ್ಲರ್‌ನಿಂದ ಮುಕ್ತವಾದ ನಂತರವೇ ಜರ್ಮನಿ ನೆಮ್ಮದಿಯಿಂದ ಉಸಿರಾಡಿತು. ಮುಸಲೋನಿ ಕತೆ ಮುಗಿದ ನಂತರ ಇಟಲಿ ನಿಟ್ಟುಸಿರು ಬಿಟ್ಟಿತು. ಭಾರತವನ್ನೂ ಈಗ ಈ ಸಂಘಿ ಫ್ಯಾಶಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸಬೇಕಾಗಿದೆ.