ಗ್ಲಕೋಮಾ ಮತ್ತು ದೃಷ್ಟಿ ಮಾಂದ್ಯತೆ

Update: 2016-04-22 18:34 GMT

ಕಣ್ಣಗುಡ್ಡೆಯ ಮೇಲೆ ಬೀಳುವ ಒತ್ತಡದಿಂದಾಗಿ ದೃಷ್ಟಿನರಗಳು ಹಾನಿಗೀಡಾಗಿ, ದೃಷ್ಟಿ ಶಾಶ್ವತವಾಗಿ ನಾಶವಾಗುವುದು ಗ್ಲಕೋಮಾ ರೋಗದ ಲಕ್ಷಣ.
ಕಣ್ಣಿನಪೊರೆ (Cataract) ಮತ್ತು ಮಧುಮೇಹ ರೋಗಿಗಳ ರೆಟಿನೊಪತಿ (Diabetic retinotherapy) ಗಳಿಂದ ಉಂಟಾಗುವ ದೃಷ್ಟಿ ಮಾಂದ್ಯತೆ ಹೊರತುಪಡಿಸಿದರೆ ಜಗತ್ತಿನಲ್ಲಿ ಗ್ಲಕೋಮಾದಿಂದ ದೃಷ್ಟಿ ಕಳೆದುಕೊಳ್ಳುವವರ ಸಂಖ್ಯೆ ಅತೀ ಹೆಚ್ಚು ಕಣ್ಣಿನ ಪೊರೆಯಲ್ಲಾದರೆ ರೋಗಿಗೆ ರೋಗ ಚಿಹ್ನೆಗಳು ಅರಿವಾಗ ತೊಡಗುತ್ತವೆ. ಆದರೆ ಗ್ಲಕೋಮಾಕ್ಕೆ ರೋಗ ಚಿಹ್ನೆಗಳೇನಿಲ್ಲ, ಇದ್ದರೂ ಅತ್ಯಲ್ಪ, ಈ ಸಮಸ್ಯೆ ಕಣ್ಣಿನಲ್ಲಿ ಬೆಳೆಯುವುದೂ ನಿಧಾನಕ್ಕೆ. ಹಾಗಾಗಿ ವೈದ್ಯರನ್ನು ಸಂಪರ್ಕಿಸುವಾಗ ವಿಳಂಬವಾಗಿರುವ ಸಾಧ್ಯತೆಗಳೇ ಹೆಚ್ಚು.
ಕಣ್ಣಿನ ಪೊರೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ದುರಸ್ತಿಪಡಿಸಬಹುದು. ಆದರೆ ಗ್ಲಕೋಮದಿಂದ ಉಂಟಾಗುವ ದೃಷ್ಟಿನಾಶ ಶಾಶ್ವತ. ಕಣ್ಣುಗಳು ನಮ್ಮ ದೇಹಕ್ಕೆ ಹೊರಗಿನ ಪ್ರಪಂಚವನ್ನು ತೋರಿಸುವ ಕ್ಯಾಮರಾಗಳು. ಈ ಚಿಕ್ಕ ಅದ್ಭುತಗಳು ಇಂದು ಲಭ್ಯವಿರುವ ಅತ್ಯಾಧುನಿಕ ಇಲೆಕ್ಟ್ರಾನಿಕ್ ಕ್ಯಾಮರಾಗಳಿಗಿಂತ ನೂರಾರು ಪಾಲು ಉನ್ನತ ತಂತ್ರಜ್ಞಾನ ಉಳ್ಳವು. ದೇಹದ ಬಹುತೇಕ ಅಂಗಗಳು ದೇಹದಾದ್ಯಂತ ಹರಡಿರುವ ರಕ್ತನಾಳಗಳ ಮೂಲಕ ತಮ್ಮ ಚಟುವಟಿಕೆಗಳಿಗೆ ಅಗತ್ಯವಿರುವ ಶಕ್ತಿಯನ್ನು ಪಡೆಯುತ್ತವಾದರೆ, ಕಣ್ಣಿನ ಕಾರ್ಯಶೈಲಿ ಸ್ವಲ್ಪ ಭಿನ್ನ ಈ Avascular (ರಕ್ತನಾಳ ರಹಿತ) ಅಂಗ ವಾತಾವರಣದ ಆಮ್ಲಜನಕ ಹಾಗೂ ತನ್ನಲ್ಲೇ ಉತ್ಪತ್ತಿ ಆಗುವ ಕೆಲವು ವಿಶಿಷ್ಟ ದ್ರವಗಳ ಮೂಲಕ ಈ ಶಕ್ತಿ ಪಡೆಯುತ್ತದೆ.
ಕಣ್ಣಿನಗುಡ್ಡೆಗೆ ಹೊರಭಾಗದಲ್ಲಿ ಮೂರು ಪದರಗಳಿರುತ್ತವೆ. ಮೊದಲ ದಪ್ಪಪದರ ಸ್ಕ್ಲೀರಾ (Sclera) ಕಣ್ಣನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಮಧ್ಯದ ಕೊರಾಯಿಡ್ (Choroid) ಪದರ ಕಣ್ಣಿಗೆ ರಕ್ತ ಸರಬರಾಜು ಮಾಡುತ್ತದೆ. ಒಳಭಾಗದ ರೆಟಿನಾ (Retina) ದೃಷ್ಟಿಯನ್ನು ರೂಪಿಸುವ ಮಹತ್ವದ ಪದರ.
ಕಣ್ಣಿನ ಮುಂಭಾಗ (Anterior) ಹಾಗೂ ಹಿಂಭಾಗ (Posterior) ಎಂದು ವಿಂಗಡಿಸಿ ಅದರ ಕಾರ್ಯವಿಧಾನಗಳನ್ನು ವಿಶ್ಲೇಷಿಸಬಹುದು. ಕಣ್ಣಿನ ಮುಂಭಾಗ ಕಾಣಲು ಸಿಗುತ್ತದೆ. ಕಾರ್ನಿಯಾ (Cornea) ಕಣ್ಣಿನ ಅತ್ಯಂತ ಹೊರಭಾಗ. ಅದರ ಹಿಂದೆ ದಪ್ಪವಾದ ಬೂದು ಪೊರೆ ಐರಿಸ್ (Iris) ಇದೆ. ಈ ಐರಿಸ್‌ನ ಮಧ್ಯದಲ್ಲಿ ಪ್ಯೂಪಿಲ್ (Pupil) ಎಂಬ ಚಿಕ್ಕ ತೂತು ಇದ್ದು, ಈ ತೂತು ಕಣ್ಣಿನೊಳಗೆ ತೆರಳಬೇಕಾದ ಬೆಳಕಿನ ಅಂಶವನ್ನು ನಿಯಂತ್ರಿಸುತ್ತದೆ. ಈ ಪ್ಯೂಪಿಲ್‌ನ ಹಿಂದೆ ಕಣ್ಣಿನ ಮಸೂರ (Lens) ಇರುತ್ತದೆ. ಕಾರ್ನಿಯಾ ಹಾಗೂ ಐರಿಸ್ ನಡುವಿನ ಜಾಗವನ್ನು ಮುಂಭಾಗದ ಚೇಂಬರ್ (Anterior Chamber) ಎನ್ನುತ್ತಾರೆ. ಈ ಚೇಂಬರಿನಲ್ಲಿ aqeous humour ಎಂಬ ದ್ರವ ಇರುತ್ತದೆ. ಈ ದ್ರವ ಕಣ್ಣಿನ ಸ್ನಾಯುಗಳಿಗೆ ಬೇಕಾದ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ದ್ರವವು ಕಣ್ಣಿನಲ್ಲಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ ಟ್ರಾಬೆಕುಲಾ (Trabecula) ಜಾಲದ ಮೂಲಕ ವಿಸರ್ಜಿಸುತ್ತದೆ. ಕಣ್ಣುಗುಡ್ಡೆಯಲ್ಲಿನ ಈ ದ್ರವದ ಬಿಡುಗಡೆ ಮತ್ತು ಉತ್ಪಾದನೆಗಳಲ್ಲಿ ಸಂತುಲನ ಇರಬೇಕಾಗುತ್ತದೆ.
ಗ್ಲಕೋಮಾದಲ್ಲಿ ಎರಡು ವಿಧಗಳು. ಪ್ರಾಥಮಿಕ ಗ್ಲಕೋಮಾ ಪ್ರಕರಣಗಳಲ್ಲಿ ಕಣ್ಣು ಗುಡ್ಡೆಯ ಒತ್ತಡ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಏರುತ್ತದೆ. ಸೆಕೆಂಡರಿ ಗ್ಲಕೋಮಾದಲ್ಲಿ ಕಣ್ಣಿನ ರೋಗಗಳಿಂದಾಗಿ ಈ ಸಂತುಲನ ತಪ್ಪಿ ಹೋಗುತ್ತದೆ. ಉದಾ: ಅತೀ ಬೆಳೆದ ಕಣ್ಣಿನಪೊರೆ, ಅಕ್ಷಿಪಟಲದ ನರಗಳ ಕಾಯಿಲೆ ಇತ್ಯಾದಿ.
ಅತೀ ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಪ್ರಾಥಮಿಕ ಗ್ಲಕೋಮಾದಲ್ಲಿ ಆ್ಯಂಗಲ್ ಕ್ಲೋಸರ್ ಗ್ಲಕೋಮಾ (Angle Closure Glaucoma) ಮತ್ತು ಓಪನ್ ಆ್ಯಂಗಲ್ ಗ್ಲಕೋಮಾ (Open Angle Glaucoma) ಎಂಬೆರೆಡು ವಿಧಗಳಿವೆ. ಕಣ್ಣಿನ ಪಾಪೆ (Pupil) ಹಾಗೂ ಮಸೂರಗಳು ಪರಸ್ಪರ ಸ್ಪರ್ಷಿಸುವ ಸ್ಥಿತಿಯಲ್ಲಿ ಬಂದಾಗ ಐರಿಸ್‌ನ ಹೊರಭಾಗ ಕಾರ್ನಿಯಾಕ್ಕೆ ತಗಲುತ್ತದೆ. ಇದರಿಂದಾಗಿ ಕಣ್ಣಿನ ದ್ರವಕ್ಕೆ ಟ್ರಾಬೆಕುಲಾ ಜೊತೆ ಸಂಪರ್ಕ ತಪ್ಪಿಹೋಗಿ ಒತ್ತಡ ಹೆಚ್ಚುತ್ತದೆ. ಇದನ್ನು ಆ್ಯಂಗಲ್ ಕ್ಲೋಸರ್ ಗ್ಲಕೋಮ ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿ ಹಠಾತ್ ಆಗಿ ಕಣ್ಣಿನ ನೋವು, ತಲೆನೋವು, ವಾಂತಿ ಉಂಟಾಗಿ ಕಣ್ಣಿನ ದೃಷ್ಟಿ ಹಠಾತ್ ನಾಶ ಹೊಂದುತ್ತದೆ. ಹೆಚ್ಚಾಗಿ ಆತಂಕ, ಒತ್ತಡಗಳಲ್ಲಿರುವ ಮಹಿಳೆಯರಲ್ಲಿ ಈ ಸ್ಥಿತಿ ಕಂಡುಬರುತ್ತದೆ. ಈ ಸಮಸ್ಯೆ ಎದುರಾದವರು ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸುತ್ತಾರೆ ಮತ್ತು ರೋಗದ ತಪಾಸಣೆಯೂ ಸುಲಭ.

ಕಣ್ಣಿನಗುಡ್ಡೆಗೆ ಹೊರಭಾಗದಲ್ಲಿ ಮೂರು ಪದರಗಳಿರುತ್ತವೆ. ಮೊದಲ ದಪ್ಪಪದರ ಸ್ಕ್ಲೀರಾ (Sclera) ಕಣ್ಣನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಮಧ್ಯದ ಕೊರಾಯಿಡ್ (Choroid) ಪದರ ಕಣ್ಣಿಗೆ ರಕ್ತ ಸರಬರಾಜು ಮಾಡುತ್ತದೆ. ಒಳಭಾಗದ ರೆಟಿನಾ (Retina) ದೃಷ್ಟಿಯನ್ನು ರೂಪಿಸುವ ಮಹತ್ವದ ಪದರ.

Similar News