ಅಸ್ಥಿರಂಧ್ರತೆ ವೃದ್ಧ್ದಾಪ್ಯದ ಶಾಪವಲ್ಲ
ಭಾಗ-೧
ಅಸ್ಥಿರಂಧ್ರತೆ ಎಂದರೆ ಟೊಳ್ಳು ಮೂಳೆ ರೋಗ ಅಥವಾ ಆಸ್ಟಿಯೋ ಪೊರೋಸಿಸ್ ಎಂಬ ರೋಗವಾಗಿದ್ದು ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಮತ್ತು ನಡುವಯಸ್ಕರಲ್ಲಿ ಕಂಡು ಬರುತ್ತದೆ. ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಮೂಳೆ ಟೊಳ್ಳಾಗುವುದು ಅಥವಾ ಮೂಳೆಗಳು ದುರ್ಬಲಗೊಳ್ಳುವುದು ಎನ್ನುತ್ತಾರೆ. ಎಲುಬು ನಮ್ಮ ದೇಹದ ಅತ್ಯಂತ ಶಕ್ತಿಯುತವಾದ ಅಂಗವಾಗಿದ್ದು ದೇಹಕ್ಕೆ ಸ್ಥಿರತೆ ಮತ್ತು ಶಕ್ತಿಯನ್ನು ನೀಡುತ್ತದೆ. ಈ ಎಲುಬಿನ ಹೊರಭಾಗ ಅತ್ಯಂತ ಗಡುಸಾಗಿದ್ದು ಒಳಭಾಗದಲ್ಲಿ ಅಸ್ಥಿಮಜ್ಜೆ (Bare Marrow) ಇರುತ್ತದೆ. ವಯಸ್ಸಾದಂತೆ ಮೂಳೆಯ ಒಳಗಿರುವ ಅಸ್ಥಿ ಮಜ್ಜೆಯಲ್ಲಿರುವ ಕೊಲಾಜನ್ ಎಂಬ ಪ್ರೊಟೀನ್ ಸಾಂದ್ರತೆ ಕಡಮೆಯಾಗುತ್ತದೆ ಮತ್ತು ಖನಿಜಾಂಶಗಳ ಸಾಂದ್ರತೆಯೂ ಕಡಿಮೆಯಾಗುತ್ತದೆ ಇದರಿಂದ ಮೂಳೆ ತನ್ನ ಗಡಸುತನ ಮತ್ತು ಶಕ್ತಿಯನ್ನು ಕಳೆದುಕೊಂಡು ಟೊಳ್ಳಾಗುತ್ತದೆ. ಈ ಹಂತದಲ್ಲಿ ಸ್ವಲ್ಪ ಗಾಯವಾದರೂ ಮೂಳೆ ಮುರಿತವಾಗುವ ಸಂಭವವಿರುತ್ತದೆ. ಮೂಳೆಯ ಒಳಗಿನ ಖನಿಜದ ಸಾಂದ್ರತೆ ಕಡಿಮೆಯಾದಾಗ ಮೂಳೆಗಳು ತನ್ನಿಂತಾನೇ ಮುರಿತವಾಗುವ ಸಾಧ್ಯತೆ ಇರುತ್ತದೆ. ಈ ಹಂತದಲ್ಲಿ ವಯಸ್ಸಾದವರು ಅತಿಯಾದ ಭಾರ ಎತ್ತಿದರೆ ಅಥವಾ ಎಲ್ಲ್ಲಾದರೂ ಮನೆಯೊಳಗೆ ಬಿದ್ದಲ್ಲಿ ಬೇಗನೆ ಮೂಳೆ ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಮೂಳೆಯು ಮುರಿಯುವ ಸಾಧ್ಯತೆಯೂ ಇರುತ್ತದೆ. ಈ ಕಾರಣದಿಂದಲೇ ಈ ರೋಗವನ್ನು ಮೌನ ಮಾರಿ ಅಥವಾ ಮೌನ ರೋಗ ಎಂದು ಕರೆಯುತ್ತಾರೆ. ಏಕೆಂದರೆ ಮೂಳೆ ಮುರಿಯುವ ತನಕ, ಇತರ ಯಾವುದೇ ರೋಗದ ಲಕ್ಷಣಗಳು ಮತ್ತು ಚಿಹ್ನೆಗಳು ಗೋಚರಿಸುವುದಿಲ್ಲ. ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಾಣುವ ಈ ರೋಗ, ಸೊಂಟ, ಹಿಂಭಾಗ, ಮುಂಗೈ ಮತ್ತು ಬೆನ್ನುಹುರಿ ಮೂಳೆಗಳಲ್ಲಿ ಹೆಚ್ಚಾಗಿ ಮುರಿತ ಕಂಡುಬರುತ್ತದೆ. ಸದ್ದಿಲ್ಲದೇ ಯಾವುದೇ ಮುನ್ಸೂಚನೆ ಇಲ್ಲದೆ ಕಾಣಿಸಿಕೊಳ್ಳುವ ಈ ಅಸ್ಥಿರಂಧ್ರತೆ, ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಖುತುಚಕ್ರ ಕೊನೆಗೊಳ್ಳುವ ಪ್ರಕ್ರಿಯೆಯ ನಂತರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ರೋಗಕ್ಕೆ ಕಾರಣಗಳು ಏನು?
1. ಅತಿಯಾದ ಸ್ಟಿರಾಯ್ಡುಗಳ ಸೇವನೆ.
2. ಅತಿಯಾದ ಗರ್ಭನಿರೋಧಕ ಔಷಧಿಗಳ ಬಳಕೆ.
3. ಧೂಮಪಾನ, ತಂಬಾಕು ಮತ್ತು ಅತಿಯಾದ ಅಲ್ಕೋಹಾಲ್ ಬಳಕೆಗಳಿಂದ ಕೂಡಿದ ಐಷಾರಾಮಿ ಜೀವನ ಶೈಲಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿರುವುದು.
4. ಥೈರಾಯ್ಡು ಸಮಸ್ಯೆ.
5. ರಸದೂತಗಳ ವೈಪರೀತ್ಯ (ಆಂಡ್ರೋಜೆನ್ ಮತ್ತು ಇಸ್ಟ್ರೋಜೆನ್)
6. ಕಡಿಮೆ ಲವಣಯುಕ್ತ ಆಹಾರ, ಆಹಾರ ಸೇವನೆಯ ದೋಷಗಳು, ಕಾಲ್ಸಿಯಂಯುಕ್ತ ಆಹಾರ ಸೇವನೆ ಮಾಡದಿರುವುದು.
7. ಬಿಸಿಲಿನಲ್ಲಿ ಹೋದರೆ ಚರ್ಮದ ಕಾಂತಿ ಹಾಳಾಗುತ್ತದೆಂದು ಹೆದರಿ ಮನೆಯಲ್ಲಿಯೇ ಉಳಿದು, ಹೊರ ಹೋಗದಿರುವುದು. ಹೊರಗಡೆ ಹೋದರೂ ಸನ್ ಕ್ರೀಮ್ ಹಚ್ಚಿ, ಸೂರ್ಯನ ಶಾಖ ಮತ್ತು ಕಿರಣಗಳು ಕೊಂಚವೂ ತ್ವಚ್ಛೆಗೆ ತಾಗದಂತೆ ಎಚ್ಚರ ವಹಿಸುವುದು, ಪೂರ್ತಿ ಮೈ ಮುಚ್ಚುವ ಬಟ್ಟೆ ಧರಿಸಿ, ಚರ್ಮಕ್ಕೆ ಬಿಸಿಲು ತಾಗದಂತೆ ಮಾಡುವುದು, ಸೂರ್ಯನ ಕಿರಣ, ವಿಟಮಿನ್ ಡಿ ಉತ್ಪಾದನೆ ದೇಹಕ್ಕೆ ಅತೀ ಆವಶ್ಯಕ, ಈ ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂನ್ನು ಸೆಳೆದುಕೊಳ್ಳಲು ಅತೀ ಅಗತ್ಯ.
ರೋಗದ ಲಕ್ಷಣಗಳು ಏನು?
1. ಮೂಳೆಗಳಲ್ಲಿ ನೋವು ಮತ್ತು ಊತ.
2. ಮಾಂಸ ಖಂಡದ ದುರ್ಬಲತೆ ಮತ್ತು ವಿಪರೀತ ಸ್ನಾಯು ನೋವು.
3. ಹಠಾತ್ ಬೆನ್ನು ನೋವು ಮತ್ತು ಬೆನ್ನು ಹುರಿಯ ಮೇಲೆ ವಿಪರೀತ ಒತ್ತಡ ಮತ್ತು ಉರಿತ ಬಂದಲ್ಲಿ ಬೆನ್ನು ಹುರಿಯ ಎಲುಬು ಮುರಿದಿದೆ ಎಂದರ್ಥ.
4. ಉದ್ದದ ಮೂಳೆ ಮುರಿತದಿಂದ ರೋಗಿಯ ಚಲನವಲನಕ್ಕೆ ತೊಂದರೆಯಾಗಬಹುದು.
5. ಯಾವುದೇ ಕಾರಣವಿಲ್ಲದೆ ವ್ಯಕ್ತಿ ಚಲನೆ ಮಾಡಲು ಹಿಂಜರಿದಲ್ಲಿ ಮೂಳೆ ಮುರಿತವನ್ನು ಸಂಶಯಿಸಬಹುದು. ಸಾಮಾನ್ಯವಾಗಿ ಈ ಹಠಾತ್ ಮೂಳೆ ಮುರಿತ ಮತ್ತು ಸೊಂಟದ ಸುತ್ತ ನೋವು ವಯಸ್ಸಾದವರಲ್ಲಿ ಕಂಡು ಬರುತ್ತದೆ. ತಕ್ಷಣವೇ ವೈದ್ಯರ ಬಳಿ ತೋರಿಸಿ ಕ್ಷ ಕಿರಣ ಮಾಡಿಸಿದಲ್ಲಿ ಮುರಿತವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ನೀಡಬೇಕು.