ಜನಾಂಗ ದ್ವೇಷದಿಂದ ಅಡ್ಡಹಾದಿ ಹಿಡಿದ ಯುವಕರು

Update: 2016-06-19 17:27 GMT

ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಕಣ್ಣಾಡಿಸಿದಾಗ, ಆತಂಕ ಉಂಟಾಗುತ್ತದೆ. ನವಭಾರತದ ನಿರ್ಮಾಪಕರೆಂದು ಕರೆಯಲ್ಪಡುವ ಯುವಕರು ಕೋಮು ಉನ್ಮಾದವನ್ನು ನೆತ್ತಿಗೇರಿಸಿಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡು ಕ್ರಮೇಣ ಮನೋರೋಗಿ ಆಗುತ್ತಿದ್ದಾರೇನೋ ಎಂಬ ಸಂದೇಹ ಮೂಡುತ್ತದೆ. ನಮ್ಮ ಸಾಮಾಜಿಕ ಬದುಕಿನಲ್ಲಿ ಇದೇ ಪ್ರವೃತ್ತಿ ಮುಂದುವರಿದರೆ ಖಂಡಿತ ಇವರಿಗೆ ಮನೋರೋಗ ನಿವಾರಣೆಗಾಗಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಆದರೆ ಇವರನ್ನು ಈ ಸ್ಥಿತಿಗೆ ತಂದವರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿದ್ದಾರೆ. ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಚಪಲ ಇವರದ್ದು.

ಈ ಯುವಕರು ಸ್ವಭಾವತಃ ದುಷ್ಟರಲ್ಲ. ದೇಶದ ಬಗ್ಗೆ ವಿಪರೀತ ಅಭಿಮಾನ ಹೊಂದಿರುತ್ತಾರೆ. ಆದರೆ ದೇಶವೆಂದರೆ ಕಲ್ಲು, ಕಬ್ಬಿಣ ಅಥವಾ ಕಟ್ಟಿಗೆಯಲ್ಲ. ಮಣ್ಣು ಕೂಡ ಅಲ್ಲ. ದೇಶವೆಂದರೆ ಜನ. ಒಂದು ದೇಶದಲ್ಲಿ ವಾಸಿಸುವ ಜನ, ಬಡತನ, ನಿರುದ್ಯೋಗ, ಅಸಮಾನತೆ ಇತ್ಯಾದಿ ತಾಪತ್ರಯಗಳಿಂದ ನರಳುತ್ತಿದ್ದರೆ, ಆ ದೇಶ ನೆಮ್ಮದಿಯಾಗಿ ಇರುವುದಿಲ್ಲ. ದೇಶದ ಸಂಪತ್ತು 110 ಕೋಟಿ ಜನರಿಗೆ ಸೇರಿದ್ದು. ಇಷ್ಟು ಜನರ ಬದುಕನ್ನು ಬೆಳಗಬೇಕಾದ ಸಂಪತ್ತು ಅಂಬಾನಿ, ಅದಾನಿಗಳಂತಹ ಬಂಡವಾಳಗಾರರ ತಿಜೋರಿ ಸೇರಿದರೆ ಅದು ನ್ಯಾಯಸಮ್ಮತ ಅನ್ನಿಸುವುದಿಲ್ಲ. ಸಾಮಾಜಿಕ ಜಾಲತಾಣದ ಫೇಸ್‌ಬುಕ್‌ಗಳಲ್ಲಿ ಕೇಸರಿತನದ ಮತ್ತೇರಿಸಿಕೊಂಡು ಕಿರುಚಾಡುವ ಈ ಯುವಕರಿಗೆ ತಾವು ಏನನ್ನೂ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಅರಿವಿಲ್ಲ. ಮಹಾತ್ಮ ಗಾಂಧೀಜಿಯವರನ್ನು ಷಂಡ ಎಂದು ಕರೆಯುತ್ತಾರೆ. ದೇಶದ ಮೊದಲ ಪ್ರಧಾನಿ ನೆಹರೂ ಅವರನ್ನು ಕಾಮಪಿಶಾಚಿಯೆಂದು ಹೀಯಾಳಿಸುತ್ತಾರೆ. ಈ ಯುವಕರಲ್ಲಿ ಗಾಂಧೀಜಿ ಮತ್ತು ನೆಹರೂ ಕುರಿತು ವಿಷ ತುಂಬಿದವರು ಯಾರೆಂದು ಎಲ್ಲಿಯೂ ಗೊತ್ತಾಗುವುದಿಲ್ಲ. ಯಾಕೆಂದರೆ, ಅವರು ಬಹಿರಂಗವಾಗಿ ಎಲ್ಲಿಯೂ ಬರುವುದಿಲ್ಲ. 

ಈ ಯುವಕರು ಗಾಂಧಿ, ನೆಹರೂ ಅವರ ಪುಸ್ತಕ ಓದಿಲ್ಲ. ಸುಮ್ಮನೆ ಗಾಂಧಿ, ನೆಹರೂ ದೇಶ ಹಾಳು ಮಾಡಿದರೆಂದು ಹೇಳುತ್ತಾರೆ. 60 ವರ್ಷಗಳಲ್ಲಿ ಯಾರೂ ಮಾಡದ್ದನ್ನು ಮೋದಿ ಎರಡು ವರ್ಷಗಳಲ್ಲಿ ಮಾಡಿದರೆಂದು ಅಬ್ಬರಿಸುತ್ತಾರೆ. ಮೋದಿ ಕೈಯಲ್ಲಿ ಈ ದೇಶ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇವರಿಗಿಲ್ಲ. ಅಧಿಕೃತ ಅಂಕಿ ಅಂಶಗಳನ್ನು ಗಮನಿಸುವುದಿಲ್ಲ. ಆರೆಸೆಸ್ಸ್ ನಾಯಕರು ಬಹಿರಂಗವಾಗಿ ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ ಬಗ್ಗೆ ಬೇರೆ ರೀತಿ ಮಾತನಾಡುತ್ತಾರೆ. ಅಂತರಂಗದಲ್ಲಿ ತಮ್ಮ ಕಾರ್ಯಕರ್ತರಿಗೆ ಇನ್ನೊಂದು ರೀತಿ ತರಬೇತಿ ನೀಡುತ್ತಾರೆ. ಬಹಿರಂಗವಾಗಿ ತಾವು ಗಾಂಧಿ ವಿರೋಧಿಗಳಲ್ಲವೆಂದು ಹೇಳುತ್ತಾರೆ. ಗಾಂಧಿ ತಮ್ಮ ಶಾಖೆಗೆ ಭೇಟಿ ನೀಡಿದರೆಂದು ನಕಲಿ ಸರ್ಟಿಫಿಕೇಟ್ ನೀಡುತ್ತಾರೆ. ಇನ್ನೊಂದು ಕಡೆ ಈ ಅಮಾಯಕ ಯುವಕರಿಂದ ತೇಜೋವಧೆ ಮಾಡಿಸುತ್ತಾರೆ.

 ಈ ಯುವಕರಿಗೆ ತಾವು ಏನನ್ನು ಮಾಡುತ್ತಿದ್ದೇವೆ ಮತ್ತು ಬರೆಯುತ್ತಿದ್ದೇವೆ ಎಂಬುದರ ಬಗ್ಗೆ ಪ್ರಜ್ಞೆಯಿಲ್ಲ. ಭಾಷೆಯಲ್ಲಿ ಸಭ್ಯತೆಯಿಲ್ಲ. ಸೋನಿಯಾ ಗಾಂಧಿ ಅವರನ್ನು ಟೀಕಿಸಲು ಬಳಸಿದ ಭಾಷೆಯನ್ನು ಇಲ್ಲಿ ಬರೆಯಲು ಸಂಕೋಚ ಆಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ತಮ್ಮ ಪಕ್ಕದ ಸಂಸದರು ಪ್ರತಿಪಕ್ಷದ ಸದಸ್ಯರನ್ನು ಏಕವಚನದಿಂದ ಹೀಯಾಳಿಸಿದರೆ ಆ ರೀತಿ ಮಾತನಾಡದಂತೆ ಸೂಚಿಸುತ್ತಿದ್ದರು. ಈಗ ಆ ವಾಜಪೇಯಿಯವರನ್ನು ಸಂಘ ಪರಿವಾರ ಮೂಲೆಗುಂಪು ಮಾಡಿದೆ. ಹೀಗಾಗಿ ಗಾಂಧಿ, ನೆಹರೂರವರ ತೇಜೋವಧೆ ಅವ್ಯಾಹತವಾಗಿ ನಡೆದಿದೆ. ಇಡೀ ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಾಶವಾಗುತ್ತಿರುವಾಗ ಮತ್ತು ನೈತಿಕವಾಗಿ ದಿವಾಳಿಯಾಗುತ್ತಿರುವಾಗ ಅದರ ಬಗ್ಗೆ ಯುವಕರು ಮಾತನಾಡುವುದಿಲ್ಲ. ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ ವಿರೋಧಿಸಲು ಸ್ಪಂದಿಸುವುದಿಲ್ಲ. ಹೊಟ್ಟೆಪಾಡಿಗಾಗಿ ಮೈಮಾರಿಕೊಂಡು ಜೀವಿಸುವ ಸೋದರಿಯರ ಆಕ್ರಂದನ ಇವರಿಗೆ ಕೇಳಿಸುವುದಿಲ್ಲ. ಬಡತನ, ಅಸಮಾನತೆ, ನಿರುದ್ಯೋಗ ನಿವಾರಣೆಗೆ ಇವರು ಬೆಲೆ ಕೊಡುವುದಿಲ್ಲ. ಇವರದ್ದು ಏನಿದ್ದರೂ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರ ಮೇಲೆ ನಿರಂತರವಾದ ಅಪಪ್ರಚಾರ. ಈ ದೇಶದಲ್ಲಿ ಅಸಮಾನತೆ ಯಾಕೆ ಇದೆ? ಹಸಿವು ಯಾಕೆ ತಾಂಡವವಾಡುತ್ತಿದೆ ಎಂಬ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿಲ್ಲ. ಆದರೆ ಸುಳ್ಳು ವದಂತಿಗಳಿಗೆ ಬಹುಬೇಗನೇ ಸ್ಪಂದಿಸುತ್ತಾರೆ. ಇತ್ತೀಚೆಗೆ ಉತ್ತರಪ್ರದೇಶದ ಹಳ್ಳಿಯೊಂದರಿಂದ ಮುಸ್ಲಿಮರ ದಬ್ಬಾಳಿಕೆಗೆ ಬೇಸತ್ತು ಹಿಂದೂಗಳು ಪಲಾಯನ ಮಾಡಿದ್ದಾರೆಂದು ಬಿಜೆಪಿ ನಾಯಕರು ಕತೆ ಕಟ್ಟಿದರು. ಆದರೆ ಈ ಬಗ್ಗೆ ಉತ್ತರ ಪ್ರದೇಶ ಸರಕಾರ ತನಿಖೆ ನಡೆಸಿದಾಗ, ಆ ಹಳ್ಳಿಯಿಂದ ಯಾರೂ ಪಲಾಯನ ಮಾಡಿಲ್ಲ ಎಂಬ ವಿಷಯ ಬೆಳಕಿಗೆ ಬಂತು. ಪಲಾಯನ ಮಾಡಿದ್ದಾರೆಂದು ಸಂಘ ಪರಿವಾರದವರು ಸೃಷ್ಟಿಸಿದ ಪಟ್ಟಿಯನ್ನು ಪರಿಶೀಲಿಸಿದಾಗ, ಅವರು ಎಲ್ಲಿಯೂ ಹೋಗದೇ ಅದೇ ಹಳ್ಳಿಯಲ್ಲಿ ವಾಸವಿದ್ದರು.

  ಇವರಲ್ಲಿ ಕೆಲವರು ಫೆೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಕೋಮು-ದ್ವೇಷದ ವಿಷ ಹರಡುತ್ತಲೇ ಇರುತ್ತಾರೆ. ಹಿಂದೂ ರಾಷ್ಟ್ರ ನಿರ್ಮಾಣವಾಗಲಿ-ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆಯೆಂದು ಯಾರೋ ಹೇಳಿಕೊಟ್ಟ ಮಾತನ್ನು ಉಲ್ಲೇಖಿಸುತ್ತಾರೆ. ಆದರೆ ಹಿಂದೂ ರಾಷ್ಟ್ರ ಸ್ಥಾಪನೆಯಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಈ ದೇಶದಲ್ಲಿ ಇರುವುದಿಲ್ಲ. ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಯುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶ ಒಂದಾಗಿ ಉಳಿಯುವುದಿಲ್ಲ ಎಂಬ ಕಹಿ ಸತ್ಯ ಇವರಿಗೆ ಗೊತ್ತಿಲ್ಲ.

ಹೈದರಾಬಾದ್ ವಿಶ್ವವಿದ್ಯಾನಿಲಯ, ಹೊಸದಿಲ್ಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪ್ರಭುತ್ವ ಪ್ರೇರಿತ ಕುಕೃತ್ಯಗಳ ಬಗ್ಗೆ ಇವರಿಗೆ ಗೊತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂದು ಇವರಿಗೆ ಅನ್ನಿಸುವುದಿಲ್ಲ. ತಮಗೆ ರಾಷ್ಟ್ರೀಯತೆ ಬಗ್ಗೆ ಅಲ್ಲಸಲ್ಲದ್ದನ್ನು ತಲೆಯಲ್ಲಿ ತುಂಬಿದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ. ಇವರಿಗೆ ಐಕಾನ್‌ಗಳೇ ಇಲ್ಲ. ಅಂತಲೇ ತಮ್ಮ ಪರಂಪರೆಗೆ ಸೇರಿಲ್ಲದ ಸ್ವಾಮಿ ವಿವೇಕಾನಂದ, ಸುಭಾಶ್ಚಂದ್ರ ಬೋಸ್, ಭಗತ್‌ಸಿಂಗ್, ಅಂಬೇಡ್ಕರ್ ಮುಂತಾದವರ ಭಾವಚಿತ್ರಗಳನ್ನು ಮುಂದಿಟ್ಟುಕೊಂಡು ಪ್ರಭಾವ ಬೀರಲು ಯತ್ನಿಸುತ್ತಾರೆ. ಭಗತ್‌ಸಿಂಗ್ ಯಾರೆಂದು ಎಲ್ಲರಿಗೂ ಗೊತ್ತಿದೆ. ಭಗತ್ ಸಿಂಗ್ ಪ್ರಖರ ಎಡಪಂಥೀಯ ಎಂದು ಹೇಳಿಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರು ಬದುಕಿನುದ್ದಕ್ಕೂ ಪುರೋಹಿತಶಾಹಿ ವಿರುದ್ಧ ಹೋರಾಡಿದರು. ಸುಭಾಶ್ಚಂದ್ರ ಬೋಸ್ ಅವರು ಹಿಂದೂ, ಮುಸಲ್ಮಾನ ಮತ್ತು ಕ್ರೈಸ್ತರನ್ನು ಕಟ್ಟಿಕೊಂಡು ಆಝಾದ್ ಹಿಂದ್ ಫೌಝ್ ಕಟ್ಟಿದರು. ಇವರೆಲ್ಲ ಹಿಂದೂ ರಾಷ್ಟ್ರ ನಿರ್ಮಾಣದ ವಿರೋಧಿಗಳು.

ಈ ಯುವಕರು ಈ ರೀತಿ ಅಡ್ಡಹಾದಿ ಹಿಡಿಯಬೇಕು ಎಂಬುದೇ ಅಂಬಾನಿ, ಅದಾನಿಯವರಂತಹ ಕಾರ್ಪೊರೇಟ್ ಬಂಡವಾಳದಾರರ ಹುನ್ನಾರವಾಗಿದೆ. ಅಸಮಾನತೆಯಿಂದ ಕುದಿಯುತ್ತಿರುವ ಜನರ ಆಕ್ರೋಶ ಜಾತಿ-ಧರ್ಮದ ಜಗಳದಲ್ಲಿ ಮುಳುಗಿ ಹೋಗಿ ತಾವು ಸುರಕ್ಷಿತವಾಗಿ ಇರಬೇಕು ಎಂಬುದು ಇವರ ಉದ್ದೇಶವಾಗಿದೆ.

ನವ ಉದಾರವಾದ ಮತ್ತು ಫ್ಯಾಶಿಸ್ಟ್ ಹಿಂದೂತ್ವ ಒಂದುಗೂಡಿ ಈ ದೇಶವನ್ನು ನಾಶ ಮಾಡಲು ಸಂಚು ರೂಪಿಸಿವೆ. ಅದರ ಅರಿವು ಈ ಯುವಕರಿಗೆ ಇಲ್ಲ. ವಿಪರೀತ ಜನಾಂಗ ದ್ವೇಷ ಇವರನ್ನು ಮನೋರೋಗಿಗಳನ್ನಾಗಿ ಮಾಡಿದೆ. ಇಂತಹವರನ್ನು ಮಾತನಾಡಿಸಿ, ಸರಿಯಾದ ದಾರಿಗೆ ತರುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News