ಒತ್ತಾಯದ ಊಟ - ಧಾರಾವಾಹಿ-3

Update: 2016-06-25 17:38 GMT

‘‘ನೀವಾದರೂ ನನ್ನ ಜೊತೆ ಊಟ ಮಾಡಿ ಮಾಮಿ’’

‘‘ನನ್ನದು ಇನ್ನೂ ತಡ ಇದೆಯಮ್ಮಾ... ನಿನ್ನದಾಗಲಿ’’ ಎನ್ನುತ್ತಾ ಬಡಿಸಿ, ಅವಳು ಊಟ ಮಾಡುತ್ತಿದ್ದಂತೆಯೇ ಮತ್ತೊಂದು ತಟ್ಟೆಗೆ ಬಡಿಸಿ ಅದನ್ನು ಎತ್ತಿಕೊಂಡು ಅಜ್ಜಿಯ ಕೋಣೆಗೆ ನಡೆದಳು. ಮೊಣಕಾಲು ನೋವಿದ್ದುದರಿಂದ ಅಜ್ಜಿ ಕುರ್ಚಿಯಲ್ಲಿ ಕುಳಿತು ನಮಾಝ್ ಮಾಡುತ್ತಿದ್ದರು. ನಮಾಝ್ ಕೊನೆಯ ಹಂತದಲ್ಲಿದ್ದುದರಿಂದ ಅವಳು ತಟ್ಟೆಯನ್ನು ಅಲ್ಲೇ ಮೇಜಿನ ಮೇಲಿಟ್ಟು ಮಂಚದ ಬದಿಯಲ್ಲಿ ಕಾದು ಕುಳಿತಳು.
ನಮಾಝ್ ಮುಗಿಸಿದ ಅಜ್ಜಿ, ನಮಾಝ್‌ನ ವಸ್ತ್ರಗಳನ್ನು ಕಳಚಿ, ಅದನ್ನು ಮುಸಲ್ಲಾದಲ್ಲಿ ಸುರುಳಿಯಂತೆ ಮಡಚಿಟ್ಟು, ಅಲ್ಲೇ ಪಾತ್ರೆಯಲ್ಲಿಟ್ಟಿದ್ದ ನೀರನ್ನೆತ್ತಿ ಕುಡಿದರು.
‘‘ಅಜ್ಜಿ ಊಟ ತಂದಿದ್ದೇನೆ’’
ಅಜ್ಜಿ ಮಾತನಾಡಲಿಲ್ಲ.
‘‘ಬೆಳಿಗ್ಗೆನೂ ಏನೂ ತಿಂದಿಲ್ಲ ನೀವು, ಊಟ ಮಾಡಿ’’
‘‘................’’
‘‘ಯಾರ ಮೇಲೆ ಕೋಪ ನಿಮಗೆ, ನನ್ನ ಮೇಲೆನಾ ಅಲ್ಲ ಏನೂ ತಿಳಿಯದ ಆ ಹುಡುಗಿ ಮೇಲೆನಾ?’’
‘‘................’’
‘‘ನಾನು ಮಾಡಿದ್ದು ತಪ್ಪೂಂತಾದರೆ ಹೇಳಿ, ಈಗಲೇ ಆ ಹುಡುಗಿಯನ್ನು ಕಳಿಸಿಬಿಡ್ತೇನೆ. ನೀವಿಲ್ಲಿ ಅನ್ನ-ನೀರು ಬಿಟ್ಟು ಕುಳಿತು ಏನಾದರೂ ಹೆಚ್ಚು ಕಡಿಮೆಯಾದರೆ ಮತ್ತೆ ನಾಳೆ ನಿಮ್ಮ ಮಕ್ಕಳಿಗೆ ನಾನು ಏನೂಂತ ಉತ್ತರ ಹೇಳುವುದು’’
‘‘................’’
‘‘ಆ ಹುಡುಗಿ, ನಿಮ್ಮ ಮೊಮ್ಮಗಳು ಇದ್ದಾಳಲ್ಲ ಅವಳು ಎಷ್ಟೊಂದು ಒಳ್ಳೆಯ ಹುಡುಗಿ ಗೊತ್ತುಂಟಾ ನಿಮಗೆ. ನಿಮ್ಮ ಜೊತೆಗೇ ಊಟ ಮಾಡಬೇಕೂಂತ ಹಠ ಹಿಡಿದಳು. ನಾನೇ ಒತ್ತಾಯ ಮಾಡಿ ಬಡಿಸಿ ಬಂದೆ... ನಿಮ್ಮ ಕರುಳಬಳ್ಳಿ ಅದು. ಒಂದು ಸ್ವಲ್ಪ ಪ್ರೀತಿ ಇಲ್ಲ ನಿಮಗೆ...’’
ಕೈಯೆರಡನ್ನೂ ಬೆನ್ನ ಹಿಂದೆ ಆಧಾರವಾಗಿಟ್ಟುಕೊಂಡು ಮಂಚದ ಮೇಲೆ ಕುಳಿತಿದ್ದ ಅಜ್ಜಿ ಒಮ್ಮೆಲೆ ತಲೆ ಎತ್ತಿ ಅವಳನ್ನು ದುರುಗುಟ್ಟಿ ನೋಡಿ, ‘‘ಊಟ ತಂದಿದ್ದಿಯಲ್ಲಾ, ಮತ್ತೇಕೆ ಇಲ್ಲಿ ಕುಳಿತಿದ್ದೀ. ನಡಿ, ಹೋಗು ಇಲ್ಲಿಂದ...’’ ಎನ್ನುತ್ತಾ ಬಾಗಿಲ ಕಡೆ ಕೈ ತೋರಿಸಿದರು. ಅವರೀಗ ಕೋಪದಿಂದ ನಡುಗುತ್ತಿದ್ದರು. ಅವರು ಇಷ್ಟೊಂದು ಕೋಪದಿಂದ್ದಾರೆ ಎಂದು ಅವಳು ಭಾವಿಸಿರಲಿಲ್ಲ.
‘‘ಅಜ್ಜಿ ಊಟ ಮಾಡಿದರಾ ಮಾಮಿ...’’ ಅಜ್ಜೀ ಕೋಣೆಯಿಂದ ಬಂದ ಐಸುಳಲ್ಲಿ ತಾಹಿರಾ ಕೇಳಿದಳು.
‘‘ಇಟ್ಟು ಹೋಗು ಎಂದರು. ಮಾಡಬಹುದು’’
‘‘ಮಾಮಿ ನಿಮ್ಮ ಮನೆ ಎಲ್ಲಿ’’ ಊಟ ಮಾಡುತ್ತಲೇ ಕೇಳಿದಳು ತಾಹಿರಾ
‘‘ಮನೆ...?’’ ಮುಗುಳು ನಕ್ಕಳು ಐಸು
‘‘ಯಾಕೆ ಮಾಮಿ ನಗ್ತಾ ಇದ್ದೀರಾ...?’’
‘‘ನಿನ್ನ ಪ್ರಶ್ನೆಗೆ ನಗು ಬಂತು’’
‘‘ಯಾಕೆ, ನಿಮಗೆ ಮನೆ ಇಲ್ಲವಾ...?’’
‘‘ಇದೇ ನನ್ನ ಮನೆ... ನಾನು ಹುಟ್ಟಿದ್ದೇ ಈ ಮನೆಯಲ್ಲಿ’’
‘‘ಅಂದರೆ ನೀವು ಅಜ್ಜಿಗೆ ಏನಾಗಬೇಕು?’’
‘‘ಅದೆಲ್ಲ ಒಂದು ದೊಡ್ಡ ಕತೆ. ಇನ್ನೊಮ್ಮೆ ಹೇಳ್ತೇನೆ. ನೀನೀಗ ಊಟ ಮಾಡು’’
ಊಟ ಮುಗಿಸಿದ ತಾಹಿರಾ ಜಗಲಿಯಲ್ಲಿ ಬಂದು ಕುಳಿತುಕೊಂಡಳು. ಅವಳಿಗೆ ಅಲ್ಲಿಯ ಇಡೀ ವಾತಾವರಣ ಬಹಳ ಖುಷಿ ಕೊಟ್ಟಿತ್ತು. ನೆರೆಯ ಹೆಂಗಸರು, ಕೂಲಿಯವರು, ಒಬ್ಬೊಬ್ಬರಾಗಿ ಬಂದು ಅವಳನ್ನು ಮಾತನಾಡಿಸತೊಡಗಿದರು.
ಐಸು ತಾನು ಊಟ ಮುಗಿಸಿ, ಪಾತ್ರೆಗಳನ್ನೆಲ್ಲ ತೊಳೆದಿಟ್ಟು ಮತ್ತೆ ಅಜ್ಜಿಯ ಕೋಣೆಗೆ ಹೋದಳು. ಅಜ್ಜಿ ಊಟ ಮಾಡುತ್ತಿದ್ದರು. ಮುಖದಲ್ಲಿನ ದುಗುಡ ಸ್ವಲ್ಪಕಡಿಮೆಯಾದಂತೆ ಕಾಣಿಸಿತು.
‘‘ಸ್ವಲ್ಪಅನ್ನ ತರಲಾ ಅಜ್ಜಿ, ನೀವು ಬೆಳಿಗ್ಗೆನೂ ಏನೂ ತಿಂದಿಲ್ಲ’’
ಅಜ್ಜಿ ಊಟ ಮಾಡುತ್ತಲೇ ಇದ್ದರು. ಮಾತನಾ ಡಲಿಲ್ಲ.
ಐಸುಗೆ ನಗು ಬಂತು. ‘‘ಇದೊಂದು ಮಗು ನನಗೆ’’ ಎನ್ನುತ್ತಾ ಅಡುಗೆ ಕೋಣೆಗೆ ಹೋಗಿ ಬಟ್ಟಲಲ್ಲಿ ಒಂದಿಷ್ಟು ಅನ್ನ-ಸಾರು ತಂದು ಮತ್ತೆ ಬಡಿಸಿದಳು. ಬಡಿಸಿದ್ದೆಲ್ಲವನ್ನೂ ತಿಂದ ಅಜ್ಜಿ ನೀರು ಕುಡಿದು ತೇಗು ಬಿಟ್ಟರು. ಅವರು ತಿಂದ ಬಟ್ಟಲನ್ನು ತಂದು ತೊಳೆದಿಟ್ಟು ಬರುವಾಗ ಅಜ್ಜಿ ಎಲೆ-ಅಡಿಕೆ ಹಾಕುತ್ತಿದ್ದರು. ಮೊಮ್ಮಗಳ ಬಗ್ಗೆ ಅಜ್ಜಿ ಏನಾದರೂ ಕೇಳಬಹುದೂಂತ ಸ್ವಲ್ಪ ಹೊತ್ತು ಆಸೆಯಿಂದ ಕಾದಳು ಐಸು. ಅಜ್ಜಿ ಬಾಯಿಗೆ ಬೀಗ ಹಾಕಿ ಕುಳಿತಿದ್ದರು.
‘‘ನೀರು ಬಿಸಿ ಇದೆ, ಸ್ನಾನ ಮಾಡ್ತೀರಾ...?’’
‘‘................’’
ಐಸು ಮತ್ತೆ ಅಲ್ಲಿ ನಿಲ್ಲಲಿಲ್ಲ. ಸೀದಾ ಬಂದವಳೇ ತನ್ನ ಮಂಚದಲ್ಲಿ ಬಿದ್ದುಕೊಂಡಳು. ಮಧ್ಯಾಹ್ನದ ಊಟವಾದ ಮೇಲೆ ಒಂದರ್ಧ ಗಂಟೆ ಮಲಗುವುದು ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಎದ್ದಾಗ ಅಜ್ಜಿ ಸ್ನಾನದ ಮನೆಯತ್ತ ಹೋಗುವುದು ಕಾಣಿಸಿತು. ಅವರ ಹಿಂದಿನಿಂದಲೇ ಹೋಗಿ ನೀರು ಹದ ಮಾಡಿಕೊಟ್ಟು, ‘‘ಬೆನ್ನುಜ್ಜಲಿಕ್ಕೆ ಕರೆಯಿರಿ’’ ಎಂದು ಹೇಳಿ ಬಂದಳು.
ಸ್ವಲ್ಪಹೊತ್ತಿನಲ್ಲಿ ಅಜ್ಜಿ ಸ್ನಾನ ಮಾಡಿ ಬರುವುದು ಕಾಣಿಸಿತು. ಸ್ನಾನ ಮಾಡುವಾಗ ತೆಂಗಿನ ನಾರಿನಿಂದ ಅವರ ಬೆನ್ನುಜ್ಜಬೇಕು. ಆಗಲೇ ಅವರಿಗೆ ದೇಹ ಶುದ್ಧವಾದಂತೆ ತೃಪ್ತಿಯಾಗುವುದು. ಆದರೆ ಇಂದು ಅದಕ್ಕೆ ಐಸುವನ್ನು ಕರೆಯಲೇ ಇಲ್ಲ. ಐಸು ಮನಸ್ಸಿನಲ್ಲೇ ನಕ್ಕಳು. ಒಣಗಿಸಿ ಮಡಿಚಿಟ್ಟ ಅವರ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಹೋಗಿ ಅವರ ಕೋಣೆಯಲ್ಲಿಟ್ಟು ಬರುವಾಗ ಸಂಜೆಯ ನಮಾಝ್‌ನ ಕರೆ ಕೇಳಿಸಿತು.
ಇಡೀ ದಿನ ಊಟ ಬೇಕಾದರೂ ಬಿಟ್ಟಿರ್ತಾರೆ, ಆದರೆ ಸಂಜೆಯ ನಮಾಝ್ ಆದ ತಕ್ಷಣ ಅಜ್ಜಿಗೆ ಚಾ ಬೇಕೇ ಬೇಕು. ಚಾದ ಜೊತೆಗೆ ತಿನ್ನಲು ಏನಾದರೂ ಕೊಡಲೇಬೇಕು. ಸ್ವಲ್ಪತಡವಾದರೂ ರಂಪಾಟ ತಪ್ಪಿದ್ದಲ್ಲ. ಐಸು ಚಾಕ್ಕೆ ನೀರಿಟ್ಟು ಅವಲಕ್ಕಿಗೆ ಎಳ್ಳು, ಬೆಲ್ಲ, ಕಾಯಿ ತುರಿ ಹಾಕಿ ಕಲಸಿದಳು. ಅದನ್ನು ಅವರ ಕೋಣೆಗೆ ತೆಗೆದುಕೊಂಡು ಹೋದಾಗ ಅವರು ನಮಾಝ್ ಮಾಡುತ್ತಿದ್ದರು.
ತಾಹಿರಾ ಈಗ ಒಮ್ಮೆ ಮನೆಯ ಒಳಗೆ-ಒಮ್ಮೆ ಹೊರಗೆ-ಒಮ್ಮೆ ಅಂಗಳಕ್ಕೆ-ಒಮ್ಮೆ ಹಿತ್ತಲಿಗೆ ತಿರುಗಾಡುತ್ತಾ ಮರ-ಗಿಡ, ಮನೆ-ನೆಲ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಿದ್ದಳು. ಕಾಂಕ್ರಿಟ್ ಕಾಡಿನ ಮಧ್ಯೆ ಬೆಳೆದ ಅವಳಿಗೆ ಎಲ್ಲವೂ ಹೊಸತು. ಹಗ್ಗ ಬಿಚ್ಚಿ ಬಿಟ್ಟ ಕರುವಿನಂತೆ ಅವಳು ಖುಷಿಯಿಂದ ಓಡಾಡಿದಳು.
‘‘ತಾಹಿರಾ...’’ ಐಸು ಕರೆದಾಗ ‘‘ಓ... ಬಂದೆ...’’ ಎಂದು ಜಿಗಿಯುತ್ತಾ ಅಡುಗೆ ಕೋಣೆಗೆ ನಡೆದಳು. ಅವಳಿಗೆ ಈಗ ಆ ಮನೆ, ಆ ಇಡೀ ಪರಿಸರ ಅದೆಷ್ಟೊ ವರ್ಷಗಳಿಂದ ಪರಿಚಯ ಎಂಬಂತೆ ಭಾಸವಾಗತೊಡಗಿತ್ತು. ಐಸು ಕೊಟ್ಟ ಅವಲಕ್ಕಿ ತಿನ್ನುತ್ತಾ, ‘‘ಮಾಮಿ, ಅಜ್ಜಿ ಕೋಪ ಕಮ್ಮಿಯಾಯಿತಾ, ನನಗೆ ಅವರಲ್ಲಿ ತುಂಬಾ ಮಾತನಾಡಲಿಕ್ಕಿದೆ’’ ಎಂದಳು.
‘‘ಇವತ್ತು ಬೇಡ, ನಾಳೆ ನೋಡುವಾ. ಈಗ ನಿನ್ನನ್ನು ನೋಡಿದರೆ ಮತ್ತೆ ಕೋಪಗೊಳ್ಳುತ್ತಾರೆ. ಮತ್ತೆ ಊಟವೂ ಮಾಡೋದಿಲ್ಲ. ನಿದ್ದೆನೂ ಮಾಡುವುದಿಲ್ಲ’’.
‘‘ಅದೇಕೆ ಮಾಮಿ ಅಜ್ಜಿಗೆ ನನ್ನ ಮೇಲೆ ಅಷ್ಟೊಂದು ಕೋಪ? ನಾನೇನು ಮಾಡಿದ್ದೇನೆ’’
‘‘ನಿನ್ನ ಮೇಲೆ ಕೋಪ ಅಲ್ಲ. ನಿನ್ನನ್ನು ನೋಡಿದರೆ ಅವರಿಗೆ... ಅದೆಲ್ಲ ಬೇಡ ಬಿಡು. ಇನ್ನೊಂದೆರಡು ದಿನಗಳಲ್ಲಿ ಸರಿ ಹೋಗ್ತಾರೆ. ಆಮೇಲೆ ಅವರ ಕೋಣೆಯಲ್ಲಿ, ಅವರ ಜೊತೆಯಲ್ಲಿಯೇ ಇದ್ದು ಎಷ್ಟು ಬೇಕಾದರೂ ಮಾತನಾಡುವಿ ಯಂತೆ’’
‘‘ಮಾಮಿ, ಅಜ್ಜಿಯ ಮಕ್ಕಳು- ನನ್ನ ದೊಡ್ಡಮ್ಮನವರೆಲ್ಲ ಈಗ ಎಲ್ಲಿದ್ದಾರೆ?’’
ದೊಡ್ಡ ಮಗಳು ಮೈಮುನಾ. ಇಲ್ಲಿಯೇ ಮಸೀದಿಯಿಂದ ಸ್ವಲ್ಪ ಮುಂದೆ ಮನೆ.’’
‘‘ಅವರಿಗೆ ಎಷ್ಟು ಮಂದಿ ಮಕ್ಕಳು?’’
‘‘ಏನು...! ಎಲ್ಲವನ್ನೂ ಇವತ್ತೇ ತಿಳಿದುಕೊಳ್ಳಬೇಕಾ, ಸ್ವಲ್ಪ ನಾಳೆಗೆ ಇಟ್ಟರೆ ಆಗೋದಿಲ್ಲವಾ...’’ ಕುತೂಹಲದಿಂದ ಉತ್ತರಕ್ಕಾಗಿ ತನ್ನ ಮುಖವನ್ನೇ ನೋಡುತ್ತಾ ಕುಳಿತಿದ್ದ ಅವಳನ್ನು ನೋಡಿ ಐಸು ನಕ್ಕಳು.
‘‘ಹೇಳಿ ಮಾಮಿ, ನನಗೆ ಎಲ್ಲ ತಿಳಿದುಕೊಳ್ಳ ಬೇಕೂಂತ ಆಸೆ ಆಗ್ತಾ ಇದೆ’’
‘‘ಮೈಮುನಾರಿಗೆ ಮೂವರು ಮಕ್ಕಳು. ಮೂರೂ ಹೆಣ್ಣೆ. ಎಲ್ಲರಿಗೂ ಮದುವೆಯಾಗಿದೆ. ಅಜ್ಜಿಯ ಮಕ್ಕಳಲ್ಲಿ ಬಡವರು ಎಂದರೆ ಇವರೊಬ್ಬರೇ. ಗಂಡನ ಆರೋಗ್ಯ ಚೆನ್ನಾಗಿಲ್ಲ. ಅವರು ದೊಡ್ಡ ಮೊಯ್ಲಾರ್ ಆಗಿದ್ದವರು. ಅವರ ಮತಪ್ರಸಂಗ ಕೇಳಬೇಕಿತ್ತು ನೀನು, ಎಷ್ಟು ಚೆನ್ನಾಗಿ ಹೇಳ್ತಾ ಇದ್ದರು ಗೊತ್ತಾ? ಎಲ್ಲೆಲ್ಲಿಯ ಜನರೆಲ್ಲ ಬಂದು ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈಗ ಏನೂ ಇಲ್ಲ. ನಿನ್ನ ದೊಡ್ಡಮ್ಮನಿಗೆ ಮನೆಗೆ ಖರ್ಚಿಗೆ ಅಜ್ಜಿಯೇ ದುಡ್ಡು ಕೊಡುವುದು. ಮೂರು ಮಕ್ಕಳ ಮದುವೆಯೂ ಅಜ್ಜನೇ ಮಾಡಿಸಿದ್ದು.’’
‘‘ಎರಡನೆಯವರು ಆಮಿನಾ. ಇವರು ಕುದ್ರೋಳಿಯಲ್ಲಿದ್ದಾರೆ. ಇವರಿಗೆ ಏಳು ಮಕ್ಕಳು ಎರಡು ಗಂಡು, ಐದು ಹೆಣ್ಣು. ಎಲ್ಲರಿಗೂ ಮದುವೆಯಾಗಿದೆ. ಇವರಿಗೆ ಬಂದರ್‌ನಲ್ಲಿ ದೊಡ್ಡ ಬಂಡಸಾಲೆಯಿದೆ. ಗಂಡುಮಕ್ಕಳು ತಂದೆಯೊಟ್ಟಿಗೆ ಇರುವುದು. ಇವರು ತುಂಬಾ ಶ್ರೀಮಂತರು. ದೊಡ್ಡ ಬಂಗಲೆ, ಕಾರು ಎಲ್ಲಾ ಇವೆ. ಕಳೆದ ವರ್ಷ ಗಂಡ-ಹೆಂಡತಿ ಹಜ್‌ಗೆ ಹೋಗಿ ಬಂದರು. ಹೋಗುವಾಗ ಅಜ್ಜಿಯನ್ನು ಕರೆದಿದ್ದರು. ಒತ್ತಾಯ ಮಾಡಿದರೂ ಅಜ್ಜಿ ಹೋಗಲಿಲ್ಲ.’’
‘‘ಯಾಕೆ?’’
‘‘ಅವರು ಹಾಗೆಯೇ, ಅಜ್ಜ ತೀರಿಕೊಂಡ ಮೇಲೆ ಈ ಮನೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ’’
‘‘ಮತ್ತೊಬ್ಬಳು ಝುಬೈದಾಂತ. ಬಂಟ್ವಾಳದಲ್ಲಿದ್ದಾರೆ. ಅವರಿಗೆ ಅಜ್ಜಿಯಂತೆ ಗಂಡು ಮಕ್ಕಳಿಲ್ಲ. ನಾಲ್ಕೂ ಹೆಣ್ಣು ಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ಅವರಿಗೆ ಅಲ್ಲಿಯೇ ತೋಟ, ಗದ್ದೆಯೆಲ್ಲಾ ಇದೆ. ತಕ್ಕಮಟ್ಟಿಗೆ ಅವರೂ ಶ್ರೀಮಂತರೇ’’
‘‘ನಾಲ್ಕನೆಯವರು ಝೈನಬಾಂತ ಅವರು ಕನ್ನಂಗಾರ್‌ನಲ್ಲಿದ್ದಾರೆ...’’
ಅಜ್ಜಿ ಜೋರಾಗಿ ಕೆಮ್ಮುವುದು ಕೇಳಿ, ‘‘ಈಗ ಬಂದೆ’’ ಎನ್ನುತ್ತಾ ಎದ್ದು ಹೋದಳು ಐಸು. ತಾಹಿರಾ ‘‘ನಾನು ಬರ್ತೇನೆ’’ ಎಂದು ಎದ್ದು ನಿಂತಳು. ‘‘ಬೇಡ ನಾನು ಈಗ ಬರ್ತೇನೆ, ನೀನು ಚಾ ಕುಡಿ’’ ಎಂದು ಐಸು ಎದ್ದು ಹೋದವಳು ಮತ್ತೆ ಬಂದು ತಾಹಿರಾಳ ಮುಂದೆ ಕುಳಿತಳು.
‘‘ಏನಾಗಿದೆ ಅಜ್ಜಿಗೆ?’’
‘‘ಏನಿಲ್ಲ, ಚೆನ್ನಾಗಿದ್ದಾರೆ. ಎಲೆ-ಅಡಿಕೆ ಹಾಕಲಿಕ್ಕೆ ಹೊಗೆಸೊಪ್ಪು ಮುಗಿದಿದೆ ಅದಕ್ಕೆ ಸಿಗ್ನಲ್. ಕೊಟ್ಟು ಬಂದೆ’’
‘‘ಅಜ್ಜಿಯನ್ನು ನೀವು ಎಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೀರಿ ಮಾಮಿ. ಸ್ವಂತ ಮಕ್ಕಳು ಕೂಡಾ ಇಷ್ಟೊಂದು ಚೆನ್ನಾಗಿ ನೋಡಿಕೊಳ್ಳುವುದಿಲ್ಲ.’’

‘‘ಹೌದು, ಅವರು ಕೂಡಾ ನನ್ನನ್ನು ಸ್ವಂತ ಮಗಳಿಗಿಂತ ಚೆನ್ನಾಗಿ ನೋಡಿಕೊಂಡಿದ್ದಾರೆ... ಆ ಋಣ ನಾನು ಎಷ್ಟು ಮಾಡಿದರೂ ಮುಗಿಯೋಲ್ಲ... ಅದಿರ್ಲಿ ನಾನು ಎಲ್ಲಿ ನಿಲ್ಲಿಸಿದ್ದು.?’’ ‘‘ಝೈನಬಾ ದೊಡ್ಡಮ್ಮನ ಬಗ್ಗೆ...’’
‘‘ಹಾಂ... ಝೈನಬಾರಿಗೆ ಮೂವರು ಮಕ್ಕಳು. ಎರಡು ಹೆಣ್ಣು, ಒಂದು ಗಂಡು. ಮೂವರಿಗೂ ಮದುವೆಯಾಗಿದೆ. ಇವರ ಗಂಡ ದೊಡ್ಡ ಕಾಂಟ್ರಾಕ್ಟರ್. ಒಳ್ಳೆಯ ಸ್ಥಿತಿಯಲ್ಲಿದ್ದಾರೆ. ಇನ್ನು ಕೊನೆಯವಳು ನಿನ್ನ ತಾಯಿ’’
‘‘ಮಾಮಿ, ನನಗೆ ದೊಡ್ಡಮ್ಮನವರನ್ನೆಲ್ಲ ನೋಡಬೇಕೂಂತ ತುಂಬಾ ಆಸೆ ಇದೆ. ಅವರ ಮನೆಗಳೆಲ್ಲ ಎಲ್ಲೀಂತ ನಿಮಗೆ ಗೊತ್ತಾ...?’’
‘‘ನಾನು ಎಲ್ಲರ ಮನೆಗೂ ತುಂಬಾ ಸಲ ಹೋಗಿ ದ್ದೇನೆ. ಆದರೆ ಅವರ ಮನೆ ಎಲ್ಲಿ ಅಂತ ನನಗೆ ಗೊತ್ತಾಗಲಿಕ್ಕಿಲ್ಲ. ಎಲ್ಲರ ಫೋನ್ ನಂಬರ್ ಇದೆ, ಬೇಕಾದರೆ ಕೊಡ್ತೇನೆ’’
‘‘ಫೋನ್ ನಂಬ್ರ ಬೇಡ ಮಾಮಿ, ನನಗೆ ಅವರ ಮನೆಯ ವಿಳಾಸ ಬೇಕು. ಫೋನ್ ಮಾಡಿದ್ರೆ ಅವರು ನನ್ನನ್ನು ಬರಬೇಡಾಂತ ಹೇಳಿದರೆ. ಅದಕ್ಕೆ ವಿಳಾಸ ಇದ್ದರೆ ಇಲ್ಲಿಗೆ ಬಂದ ಹಾಗೆ ದಿಢೀರಂತ ಹೋಗಬಹುದು. ಆಗ ಅವರಿಗೆ ಏನೂ ಮಾಡ್ಲಿಕ್ಕೆ ಆಗುವುದಿಲ್ಲ.’’
‘‘ಬಹಳ ಚೂಟಿ ಇದ್ದಿ ನೀನು’’ ಐಸು ಅವಳನ್ನು ಮೆಚ್ಚುಗೆಯಿಂದ ನೋಡಿದಳು.

(ಗುರುವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News