ಈ ದೇಶ ತಲುಪುವುದು ಎಲ್ಲಿಗೆ?

Update: 2016-06-26 18:38 GMT

ನರೇಂದ್ರ ಮೋದಿ ನೇತೃತ್ವದಲ್ಲಿ ಅಡ್ಡಾದಿಡ್ಡಿ ಓಡುತ್ತಿರುವ ಈ ಭಾರತ ಎಂಬ ದೇಶ ಮುಂದೆ ತಲುಪುವುದು ಎಲ್ಲಿಗೆ? ಅಡಾಲ್ಫ್ ಹಿಟ್ಲರ್ ಜರ್ಮನಿಯನ್ನು ಹಾಳು ಮಾಡಿದಂತೆ ಮೋದಿ ಭಾರತವನ್ನು ಜನಾಂಗ ದ್ವೇಷದ ಕಂದಕಕ್ಕೆ ನೂಕುವರಾ? ಈಗ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ, ಹಿಟ್ಲರ್ ಕಾಲದ ಜರ್ಮನಿಯ ದಿನಗಳು ನೆನಪಿಗೆ ಬರುತ್ತವೆ. ಕಾರ್ಯಾಂಗ, ನ್ಯಾಯಾಂಗಗಳನ್ನು ಹಿಟ್ಲರ್ ನಿಷ್ಕ್ರಿಯಗೊಳಿಸಿದಂತೆ ಇಲ್ಲಿ ಇವುಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಸಂಚು ನಡೆದಿದೆ.

ರೋಹಿತ್ ವೇಮುಲಾ ಆತ್ಮಹತ್ಯೆ, ಕನ್ಹಯ್ಯೆಕುಮಾರ್ ಬಂಧನ, ಪುಣೆ ಚಲನಚಿತ್ರ ಇನ್‌ಸ್ಟಿಟ್ಯೂಟ್‌ನ ಕೇಸರೀಕರಣ ಯತ್ನ, ಪೆಹಲಾಜ್ ನೆಹಲಾನಿ ಹಗರಣ ಇವೆಲ್ಲ ಒತ್ತಟ್ಟಿಗಿರಲಿ ರಘುರಾಮ ರಾಜನ್ ಅವರಂತಹ ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞರಿಗೆ ಮೋದಿ ಸರಕಾರ ಮಾಡಿದ ಅವಮಾನ ಅತ್ಯಂತ ಹೀನಾಯವಾದುದು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ರಿಸರ್ವ್ ಬ್ಯಾಂಕ್ ಸಾರಥ್ಯವಹಿಸಿ ಪರಿವರ್ತನೆಯ ಹರಿಕಾರ ಎನ್ನಿಸಿದ್ದ ರಘುರಾಮ ರಾಜನ್ ತೇಜೋವಧೆಗೆ ಸುಬ್ರಮಣಿಯನ್ ಸ್ವಾಮಿ ಎಂಬ ಕೋಡಂಗಿಯನ್ನು ಮೋದಿ ಸರಕಾರ ಬಳಸಿಕೊಂಡ ರೀತಿ ಖಂಡನೀಯವಾದುದು. ಈಗ ಸರಕಾರದ ಆರ್ಥಿಕ ಮುಖ್ಯ ಸಲಹೆಗಾರ ಅರವಿಂದ್ ಸುಬ್ರಮಣ್ಯನ್ ವಿರುದ್ಧ ಇದೇ ಸ್ವಾಮಿ ನಡೆಸಿದ ವಾಗ್ದಾಳಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಇದು ಮೇಲ್ನೋಟಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಅನ್ನಿಸಿದರೂ ಆಳದಲ್ಲಿ ಬಿಜೆಪಿ ಮಾತ್ರವಲ್ಲ ಸಂಘ ಪರಿವಾರದ ಕೈವಾಡ ಇರುವುದು ಸ್ಪಷ್ಟವಾಗುತ್ತದೆ. ಯೋಗಿ ಆದಿತ್ಯನಾಥ, ಸಾಧ್ವಿ ಪ್ರಾಚಿ, ನಿರಂಜನಜ್ಯೋತಿ, ಸಾಕ್ಷಿ ಮಹಾರಾಜ ಮುಂತಾದವರ ಮೂಲಕ ಹೇಳಿಕೆ ನೀಡಿಸಿ, ನಂತರ ಸರಕಾರಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿ ಜಾರಿಕೊಳ್ಳುವ ಯತ್ನ ನಡೆದಿದೆ. ಸುಬ್ರಮಣಿಯನ್ ಸ್ವಾಮಿ ಪ್ರಕರಣದಲ್ಲೂ ಅದೇ ಆಗಿದೆ.
ಪರಿಸ್ಥಿತಿ ಎಷ್ಟು ಭಯಾನಕವಾಗುತ್ತಿದೆಯೆಂದರೆ, ಮೋದಿಯನ್ನು ಮತ್ತು ರಾಮನನ್ನು ನಿಂದಿಸಿದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಬಿ.ಪಿ.ಮಹೇಶ್ಚಂದ್ರ ಗುರು ಅವರನ್ನು ಜೈಲಿಗೆ ತಳ್ಳಲಾಯಿತು. ನಂತರ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಅವರನ್ನು ಸೇವೆಯಿಂದ ಅಮಾನತು ಮಾಡಿತು. ಬಹುಶಃ ಡಾ. ಬಿ.ಆರ್.ಅಂಬೇಡ್ಕರ್ ಬದುಕಿದ್ದರೆ ಅವರೂ ಜೈಲಿಗೆ ಹೋಗಬೇಕಾಗುತ್ತಿತ್ತು. ಯಾಕೆಂದರೆ, ಹಿಂದೂ ಧರ್ಮವನ್ನು ವಿಮರ್ಶಿಸಿ ಅನೇಕ ಪುಸ್ತಕಗಳನ್ನು ಅವರು ಬರೆದಿದ್ದಾರೆ. ‘‘ರಾಮಕೃಷ್ಣರ ಬಾನಗಡಿ’’ ಎಂಬ ಪುಸ್ತಕ ಕನ್ನಡದಲ್ಲೂ ಬಂದಿದೆ.

ಎಲ್ಲಕ್ಕಿಂತ ಆತಂಕದ ಸಂಗತಿಯೆಂದರೆ, ಕೆಲ ನ್ಯಾಯಮೂರ್ತಿಗಳಿಂದ ಬರುತ್ತಿರುವ ತೀರ್ಪುಗಳು. 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರನ್ನು ಜೀವಂತ ಸುಟ್ಟು ಹಾಕಲಾಯಿತು. ಈ ಕುರಿತು ಸುದೀರ್ಘ ವಿಚಾರಣೆ ನಂತರ ಗುಜರಾತ್ ಹೈಕೋರ್ಟ್ ನೀಡಿದ ತೀರ್ಪು ಕಳವಳಕಾರಿಯಾಗಿದೆ. ಅಹ್ಮದಾಬಾದ್‌ನ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಕಟ್ಟಡದಲ್ಲಿ ವಾಸಿಸುತ್ತಿದ್ದ ಜಾಫ್ರಿ ಅವರನ್ನು ಉದ್ರಿಕ್ತ ಕೋಮುವಾದಿಗಳ ಗುಂಪು ಸುತ್ತುವರಿದು ಇರಿದು ಸುಟ್ಟು ಹಾಕಿತು. ಈ ಘಟನೆಯಲ್ಲಿ ಅನೇಕರು ಕೊಲ್ಲಲ್ಪಟ್ಟರು. ಉದ್ರಿಕ್ತ ಗುಂಪು ತಮ್ಮನ್ನು ಶಸ್ತ್ರಾಸ್ತ್ರದೊಂದಿಗೆ ಸುತ್ತುವರಿದಾಗ, ಜಾಫ್ರಿ ಪ್ರಾಣಭಿಕ್ಷೆಗೆ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಫೋನ್ ಮಾಡಿ ಮೊರೆಯಿಡುತ್ತಾರೆ. ದಿಲ್ಲಿಯ ಎಲ್ಲಾ ನಾಯಕರಿಗೂ ಫೋನ್ ಮಾಡುತ್ತಾರೆ. ಅದೇ ರೀತಿ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರಿಗೆ ಫೋನ್ ಮಾಡಿ, ತಮ್ಮನ್ನು ಬದುಕಿಸುವಂತೆ ಕೇಳಿಕೊಳ್ಳುತ್ತಾರೆ. ಕುಲದೀಪ್ ನಯ್ಯರ್, ಜಾಫ್ರಿಗೆ ರಕ್ಷಣೆ ನೀಡುವಂತೆ ಕೇಂದ್ರ ಗೃಹ ಸಚಿವ ಇಲಾಖೆಗೆ ಮನವಿ ಮಾಡುತ್ತಾರೆ. ಈ ಬಗ್ಗೆ ಗುಜರಾತ್ ಸರಕಾರದ ಗಮನಕ್ಕೆ ತರುವುದಾಗಿ ಗೃಹ ಇಲಾಖೆ ವಕ್ತಾರರು ಹೇಳುತ್ತಾರೆ. ಆದರೆ ಜಾಫ್ರಿ ರಕ್ಷಣೆಗೆ ಯಾರೂ ಬರುವುದಿಲ್ಲ. ಜಾಫ್ರಿ ಮತ್ತೆ ಕುಲದೀಪ್ ನಯ್ಯರ್‌ಗೆ ಫೋನ್‌ಮಾಡುತ್ತಾರೆ. ಕುಲದೀಪ್ ಮತ್ತೆ ಗೃಹ ಇಲಾಖೆ ಗಮನಕ್ಕೆ ತರುತ್ತಾರೆ. ಫೋನಿನಲ್ಲಿ ಪ್ರಾಣ ರಕ್ಷಣೆಗಾಗಿ ಜಾಫ್ರಿ ಆಕ್ರಂದಿಸುತ್ತಿರುವುದು ಕೇಳುತ್ತಿರುತ್ತದೆ. ಆದರೆ ಅಸಹಾಯಕ ಕುಲದೀಪ್ ಅವರಿಗೆ ಏನನ್ನೂ ಮಾಡಲು ಆಗುವುದಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯ ಏನು ತೀರ್ಪು ನೀಡಿದೆಯೆಂದರೆ, ಉದ್ರಿಕ್ತ ಜನಜಂಗುಳಿಯನ್ನು ಪ್ರಚೋದಿಸಿದರು. ಅದಕ್ಕಾಗಿ ಹೀಗಾಯಿತು ಎಂದು ಹೇಳಲಾಗಿದೆ. ಈ ತೀರ್ಪಿನಲ್ಲಿ ನ್ಯಾಯಾಲಯದ ಲೋಪವೇನಿಲ್ಲ. ರಾಜ್ಯ ಸರಕಾರದ ಪೊಲೀಸರು ಸಿದ್ಧಪಡಿಸಿದ ಸಾಕ್ಷ್ಯಾಧಾರಗಳ ಪಟ್ಟಿಯಾಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡಿದೆ. ಇದರ ಅರ್ಥ ಪ್ಯಾಶಿಸ್ಟ್‌ಸರಕಾರದ ಕೈಯಲ್ಲಿ ಅಧಿಕಾರ ಸಿಕ್ಕರೆ, ಏನನ್ನಾದರೂ ಮಾಡಿ ಅಧಿಕಾರ ದಕ್ಕಿಸಿಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ.
ಎಹ್ಸಾನ್ ಜಾಫ್ರಿ ಮೂಲಭೂತವಾದಿಯಲ್ಲ. ಸೆಕ್ಯುಲರ್ ಮನೋಭಾವದ ಸಂಭಾವಿತ ಮನುಷ್ಯನೆಂದು ಎಲ್ಲರಿಗೂ ಗೊತ್ತಿದೆ. ಆದರೆ ಹಲ್ಲೆಕೋರರ ಹೃದಯ ಕರಗಲಿಲ್ಲ. ಇದು ದೇಶದ ಇಂದಿನ ಪರಿಸ್ಥಿತಿ. ಎಹ್ಸಾನ್ ಜಾಫ್ರಿ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶಂಸಿಸಲ್ಪಡಬಹುದು. ಆಗ ಸತ್ಯಾಂಶವನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಬಹುದು. ಅದರೆ ದೊಂಬಿಕೋರರ ಗುಂಪಿನಿಂದ ಚಿತ್ರಹಿಂಸೆ ಅನುಭವಿಸಿದ ಜಾಫ್ರಿ ಗುಂಪನ್ನು ಪ್ರಚೋದಿಸಿದರು ಎಂದು ಹೇಳುವುದು ನೋವಿನ ಸಂಗತಿ. ಭಾರತ ಇಂದಿಗೂ ಜಾತ್ಯತೀತ ದೇಶ. ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು ಎಲ್ಲರೂ ಸೇರಿದ ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನದಲ್ಲಿ ಈ ದೇಶ ನಡೆಯುತ್ತ ಬಂದಿದೆ. ಆದರೆ ಸಕಲರಿಗೂ ಸಮಾನ ಅವಕಾಶ ನೀಡಿದ ಈ ಸಂವಿಧಾನವನ್ನೇ ಬುಡಮೇಲು ಮಾಡುವ ಹುನ್ನಾರಗಳು ನಡೆಯುತ್ತಿವೆ. ಆರೆಸ್ಸೆಸ್ ಸಿದ್ಧಾಂತಿ ಗೋವಿಂದಾಚಾರ್ಯ ಸಂವಿಧಾನ ಪರಿಷ್ಕರಣೆಗೆ ಒತ್ತಾಯಿಸಿದ್ದಾರೆ. ಸಂವಿಧಾನದಲ್ಲಿ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸಬೇಕೆಂದು ಅವರು ಹೇಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರರು ರೂಪಿಸಿದ ಸಂವಿಧಾನದ ಅಡಿಪಾಯದಲ್ಲಿ ಅಸ್ತಿತ್ವಕ್ಕೆಬಂದಿರುವ ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾರ್ಪಡಿಸಲು ಮಸಲತ್ತು ನಡೆಯುತ್ತಿವೆ. ಸರ್ವಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂಪು ಅವರು ವರ್ಣಿಸಿದ ಈ ದೇಶವನ್ನು ಜನಾಂಗ ದ್ವೇಷದ ಸ್ಮಶಾನವನ್ನಾಗಿ ಮಾಡಲು ಪ್ಯಾಶಿಸ್ಟ್ ಶಕ್ತಿಗಳು ಮಸಲತ್ತು ನಡೆಸಿವೆ.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇದು ಅತ್ಯಂತ ತೀವ್ರ ಗತಿಯಲ್ಲಿ ಸಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು ಬರುತ್ತಿವೆ.
ಭಾರತದ ಬಹುಮುಖಿ ಸಮಾಜವನ್ನು ನಾಶ ಮಾಡಿ ಹಿಟ್ಲರ್ ಮಾದರಿಯ ನಾಝಿ ರಾಷ್ಟ್ರ ಕಟ್ಟಲು ಹೊರಟಿರುವ ಈ ಶಕ್ತಿಗಳು ವೈಚಾರಿಕ ಬೆಳಕನ್ನು ನೀಡುವ ಮಹಾನ್ ಚೇತನಗಳ ಮೇಲೆ ಹಲ್ಲೆ ನಡೆಸಿವೆ. ಧಾಬೋಳ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆಗಳ ಹಂತಕರು ಇನ್ನೂ ಪತ್ತೆಯಾಗಿಲ್ಲ. 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಳಿಸಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ದಳ್ಳುರಿ ಎಬ್ಬಿಸಿದ ಶಕ್ತಿಗಳು ಈಗ ದಲಿತ ಸಮುದಾಯದ ನಾಶಕ್ಕೆ ಸಂಚು ಹೂಡಿವೆ.
ಅಂತಲೇ ಈಗ ಎಲ್ಲೆಡೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಕಲ್ಪ ದಿನಾಚರಣೆಗಳು ನಡೆಯುತ್ತಿವೆ. ಕಳೆದ ವಾರ ನಾನು ಕಲಬುರಗಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಚರಿಸಿದಾಗ ದಾರಿಯುದ್ದಕ್ಕೂ ಪ್ರತಿ ಗ್ರಾಮಗಳಲ್ಲಿ ಬಜರಂಗ ದಳ, ಶ್ರೀರಾಮ ಸೇನೆ ಬಾವುಟಗಳು ಕಂಡವು. ನಂಜುಂಡಸ್ವಾಮಿ ಕಾಲದಲ್ಲಿ ಪ್ರತಿ ಹಳ್ಳಿಯಲ್ಲಿ ರೈತ ಸಂಘದ ಬೋರ್ಡ್‌ಗಳು ಇರುತ್ತಿದ್ದಂತೆಯೇ ಈಗ ಬಜರಂಗ ದಳದ ಬೋರ್ಡ್‌ಗಳು ಕಾಣಿಸುತ್ತಿವೆ.
ಇದಕ್ಕೆ ಪ್ರತಿಯಾಗಿ ಜಾತ್ಯತೀತ, ಪ್ರಗತಿಪರ ಸಂಘಟನೆಗಳ ಪ್ರತಿರೋಧ ಬರೀ ಸಾಂಕೇತಿಕ ಆಗುತ್ತದೆ. ರಾಷ್ಟ್ರಮಟ್ಟದ ಪಕ್ಷಗಳು ಕರೆ ಕೊಟ್ಟಾಗ ಮಾತ್ರ ಕಾಟಾಚಾರಕ್ಕೆ ಎಂಬಂತೆ ಕೋಮುವಾದಿ ವಿರೋಧಿ ಸಭೆಗಳು ನಡೆಯುತ್ತಿವೆ. ಭಾರತದಲ್ಲಿ ಪ್ಯಾಶಿಸಂ ಎಷ್ಟು ಆಳವಾಗಿ ಪ್ರವೇಶಿಸಿದೆಯೆಂದರೆ, ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲೂ ಅದರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.
ಮೋದಿ ಸರಕಾರ ಪ್ರಜಾಪ್ರಭುತ್ವದ ಹಳಿ ತಪ್ಪಿಸುತ್ತಿದೆ. ಇಂತಹ ಕಷ್ಟಕಾಲದಲ್ಲಿ ನಮ್ಮ ಬಹುಮುಖಿ ಸಮಾಜದ ಜಾತ್ಯತೀತ ಭಾರತ ಉಳಿಸಿಕೊಳ್ಳುವುದರ ಜೊತೆಗೆ ಪ್ರಜಾಪ್ರಭುತ್ವದ ಹಳಿ ತಪ್ಪದಂತೆ ನೋಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News