ಆರೋಗ್ಯದಲ್ಲಿ ವ್ಯಾಯಾಮದ ಪಾತ್ರ

Update: 2016-07-29 17:52 GMT

ವಾಹನಗಳು ಇಲ್ಲದಿದ್ದ ಹಿಂದಿನ ಕಾಲದಲ್ಲಿ ಜನರು ಮೈಲುಗಟ್ಟಲೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು. ಈಗ ಸ್ಕೂಟರ್, ಕಾರು, ಬಸ್ಸು, ರೈಲು ಮತ್ತು ವಿಮಾನದ ಸೌಕರ್ಯವಿದೆ. ಹಿಂದಿನ ಕಾಲದಲ್ಲಿ ನೀರು ಸೇದುತ್ತಿದ್ದರು, ಸೊಪ್ಪು ಸದೆಗಳನ್ನು ಹೊತ್ತು ತರುತ್ತಿದ್ದರು, ಭತ್ತ ಕುಟ್ಟುತ್ತಿದ್ದರು, ಅಕ್ಕಿ, ರಾಗಿ ಬೀಸುತ್ತಿದ್ದರು. ಸೌದೆ ಕತ್ತರಿಸುತ್ತಿದ್ದರು. ಈಗ ಅವೆಲ್ಲಾ ಹೋಗಿ ನಾವು ‘ನಾಗರಿಕ’ರಾಗಿದ್ದೇವೆ. ಸ್ವಲ್ಪದೂರ ಹೋಗಲು ಬಸ್ಸಿಗಾಗಿ ಗಂಟೆಗಟ್ಟಲೆ ಕಾಯುತ್ತೇವೆ. ಕುಳಿತೇ ಕೆಲಸ ಮಾಡುತ್ತೇವೆ. ನಡೆಯಲು ಪುರುಸೊತ್ತಿಲ್ಲ. ಆಫೀಸಿನಲ್ಲಿ ಪಕ್ಕದ ಟೇಬಲಿನ ಪುಸ್ತಕವನ್ನು ಎತ್ತಿಕೊಡಲು ನಮಗೆ ನೌಕರ ಬೇಕು. ಗಂಡಸು ಎಲ್ಲವನ್ನೂ ಕುಳಿತಲ್ಲೇ ಕೆಲಸ ಮಾಡಿದರೆ ಮನೆಯ ಹೆಂಗಸರು ಓಡಾಡುತ್ತಾ, ಚುರುಕಾಗಿ ದುಡಿಯುತ್ತಾ ಇರುತ್ತಾರೆ. ಹೀಗಾಗಿಯೇ ಹೆಂಗಸರಲ್ಲಿ ಹೃದಯ ರೋಗ ಕಡಿಮೆಯನ್ನಬಹುದು.
ಹೃದಯದ ಧಮನಿಗಳಲ್ಲಿ ಕೊಬ್ಬುಸೇರಿ ಹಾಳಾಗು ವುದನ್ನು ತಪ್ಪಿಸಲು ಇರುವ ಉಪಾಯವೆಂದರೆ ವ್ಯಾಯಾಮ ಹಾಗೂ ನಡಿಗೆ. ಆದರೆ ಯವೌನದುದ್ದಕ್ಕೂ ಸುಮ್ಮನಿದ್ದು ವಯಸ್ಸಾದ ಮೇಲೆ ವ್ಯಾಯಾಮ ಶುರು ಮಾಡಿದರೆ ಒಂದಷ್ಟು ಕಷ್ಟವಾಗಬಹುದು.
ವ್ಯಾಯಾಮ ಮಾಡಿದಷ್ಟೂ ಹೃದಯ ರೋಗವು ಕಡಿಮೆಯಾಗುತ್ತದೆ. ದಿನವೂ ತುಂಬಾ ಅಡ್ಡಾಡುವ ಅಂಚೆ ಪೇದೆಯಲ್ಲಿ ಈ ರೋಗ ಕನಿಷ್ಠವಾಗಿದ್ದು, ಕೂತು ಕೆಲಸ ಮಾಡುವ ವೈದ್ಯ, ಲಾಯರು, ಅಧಿಕಾರಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ವ್ಯಾಯಾಮ ಒಂದು ತರಹದ ಪವಾಡದಂತಹ ಮದ್ದು ಎನ್ನಬಹುದು. ಏನೂ ಖರ್ಚಿಲ್ಲದೆ ಬೇಕಾದ ಹಾಗೆ ಸಿಗುವ ಔಷಧವಾಗಿದೆ! ಇದರಿಂದ ರಕ್ತಕಣಗಳು ಹೆಚ್ಚುತ್ತವೆ. ರಕ್ತವರ್ಧಕವಾಗುತ್ತದೆ, ಪುಪ್ಪುಸಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಸ್ನಾಯು, ಮಾಂಸಖಂಡಗಳ ಸಾಮರ್ಥ್ಯವನ್ನು ಹೆಚ್ಚಿಸಿ ಮೂಳೆ ಗಳಲ್ಲಿ ಕ್ಯಾಲ್ಸಿಯಂ ಸೇರಿಸಿ ಕೊಬ್ಬನ್ನು ಕರಗಿಸುತ್ತದೆ. ಇದು ಪ್ರಕೃತಿ ನೀಡುವ ನೆಮ್ಮದಿಯ ಔಷಧವಾಗಿದೆ.

ವ್ಯಾಯಾಮ ಹೇಗೆ?
ನಿಧಾನವಾಗಿ ವ್ಯಾಯಾಮವನ್ನು ಆರಂಭಿಸಬೇಕು. ಅಲ್ಲದೆ, ಕಾಯಿಲೆಯೇನಾದರೂ ಇದ್ದರೆ ಅದು ವಾಸಿಯಾದ ನಂತರವೇ ವ್ಯಾಯಾಮ ಮಾಡಬೇಕು. 35 ವರ್ಷ ದಾಟಿದವರು ಕಠಿಣವಾದ ವ್ಯಾಯಾಮವನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
ಸಿಹಿಮೂತ್ರ ರೋಗಿಗಳು ವ್ಯಾಯಾಮ ಮಾಡುವು ದಾದರೆ ವೈದ್ಯರ ಸಲಹೆ ಪಡೆದು ಅವರು ಸೇವಿಸುತ್ತಿರುವ ಮದ್ದುಗಳ ಪ್ರಮಾಣವನ್ನು ಇಳಿಸಬೇಕಾಗುತ್ತದೆ. ಹಾಗೆಯೇ ಏರಿದ ರಕ್ತದ ಒತ್ತಡ (ಹೈ ಬಿ.ಪಿ.)ದವರೂ ಮದ್ದುಗಳ ಸೇವನೆಯನ್ನು ಇಳಿಸಬೇಕಾಗುವುದು.

ವ್ಯಾಯಾಮವನ್ನು ನಿಯಮಿತವಾಗಿ ಬಾಳಿನುದ್ದಕ್ಕೂ ಮಾಡಬೇಕು. ಸಾಧ್ಯವಾಗದವರು ವಾರದಲ್ಲಿ ಕನಿಷ್ಠ 3 ದಿನಗಳಾದರೂ ಮಾಡಿದರೂ ಒಳ್ಳೆಯದು. ಯಾವಾಗಲೋ ಮನಸ್ಸು ಬಂದಾಗ ವ್ಯಾಯಾಮ ಮಾಡುವುದರಿಂದ ಪರಿಣಾಮ ಕಡಿಮೆ. ವ್ಯಾಯಾಮ ಮಾಡುವಾಗ ಮನಸ್ಸು ನಿರಾಳವಾಗಿ, ಉಲ್ಲಾಸವಾಗಿರಬೇಕು. ಮೈಯೆಲ್ಲಾ ದಣಿಯದೆಯೇ ಮೈಯಲ್ಲಿನ ಕಲ್ಮಶ, ಹೊರಬೀಳಬೇಕು. ಅದರಲ್ಲೂ ನಡೆಯುವ ವ್ಯಾಯಾಮ ಎಲ್ಲರಿಗೂ ಸುಲಭವಾಗಿ ಖರ್ಚಿಲ್ಲದೆ ಆಗುತ್ತದೆ. ಇದಕ್ಕಾಗಿ ವಿಶಿಷ್ಟ ಉಡುಗೆ, ತೊಡುಗೆ, ಸಿದ್ಧತೆ ಯಾವುದೂ ಬೇಕಿಲ್ಲ. ಅನುಕೂಲ ಕಂಡಾಗ ಸಮಯಸಿಕ್ಕಾಗ ನಡೆಯಬಹುದು. ಒಂದೇ ದಿನ ಮೈಲುಗಟ್ಟಲೆ ನಡೆದು ಸುಸ್ತಾಗಬಾರದು. ದಣಿವಾಗುವಷ್ಟು ದೂರ ನಡೆದು ಸುಧಾರಿಸಿಕೊಂಡು ಹಿಂದಾಗಬೇಕು. ಮಾರನೆಯ ದಿನ ಇನ್ನೂ ದೂರ ನಡೆಯಬೇಕು. ಇದರ ಪರಿಣಾಮ- ಪ್ರಭಾವ ಕ್ರಮೇಣ ನಿಮಗೇ ಅರಿವಾಗುತ್ತದೆ.
ಯೋಗ: ಹಿಂದಿನ ಕಾಲದಿಂದಲೂ ಮೈಮನಸ್ಸಿನ ಪೂರ್ಣ ಆರೋಗ್ಯಕ್ಕಾಗಿ ಯೋಗಾಭ್ಯಾಸ ಆಚರಣೆ ಯಲ್ಲಿದೆ. ಸುಲಭ ಸರಳ ಯೋಗಾಸನಗಳಿಂದ ಹೆಚ್ಚಿನ ಅನುಕೂಲಗಳಿವೆ. ಆಚರಿಸಲು ಶ್ರದ್ಧೆ ಮತ್ತು ಅಸಕ್ತಿ ಇರಬೇಕು. ಕಲಿಯುವುದೂ ಸುಲಭ. ಆದರೆ ಇದನ್ನು ಪುಸ್ತಕಗಳಿಂದ ಕಲಿಯುವಂತಿಲ್ಲ. ನುರಿತ ಪರಿಣತರಿಂದಲೇ ಕಲಿಯಬೇಕು. ಶವಾಸನ, ಸುಖಾಸನ, ಹಲಾಸನಗಳಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಪ್ರಾಣಾಯಾಮದಿಂದ ರಕ್ತದಲ್ಲಿ ಆಮ್ಲಜನಕ ಚೆನ್ನಾಗಿ ತುಂಬಿಕೊಳ್ಳುವುದರಿಂದ ರಕ್ತದ ಒತ್ತಡ ಇರುವವರಿಗೂ, ಹೃದಯರೋಗಿಗಳಿಗೂ ಇದು ವಿಶೇಷ ಪ್ರಯೋಜನಕಾರಿಯಾಗಿದೆ.
ಆದರೆ ಈಗಿನ ಕಾಲಘಟ್ಟದಲ್ಲಿ ವ್ಯಾಯಾಮಕ್ಕಾಗಿ ಸಮಯವೇ ಇಲ್ಲವೆನ್ನುವವರು ಇಂದಲ್ಲ ನಾಳೆಯಾ ದರೂ ಕಾಯಿಲೆಗೆ ಸಮಯವನ್ನು ಕಾಯ್ದಿರಿಸ ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News