ಮುಳ್ಳನ್ನು ಮುಳ್ಳಿನಿಂದಲೇ ತೆಗಿ!

Update: 2016-08-02 14:48 GMT

ಬೀಜಿಂಗ್, ಆ. 2: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತಿನಂತೆ, ಡೆಂಗಿ, ಕಾಮಾಲೆ ಮತ್ತು ಝಿಕಾದಂಥ ಕಾಯಿಲೆಗಳನ್ನು ಹರಡುವ ಸೊಳ್ಳೆಗಳ ವಿರುದ್ಧ ಹೋರಾಡಲು ಚೀನಾ ವಿಜ್ಞಾನಿಗಳು ಸೊಳ್ಳೆಗಳನ್ನೇ ಬಳಸುತ್ತಿದ್ದಾರೆ.

ದಕ್ಷಿಣ ಚೀನಾದಲ್ಲಿರುವ ವಿಜ್ಞಾನಿಗಳು ಪ್ರತಿ ವಾರ 30 ಲಕ್ಷ ಬ್ಯಾಕ್ಟೀರಿಯ ಸೋಂಕಿತ ಸೊಳ್ಳೆಗಳನ್ನು 3 ಕಿ.ಮೀ. ಉದ್ದದ ದ್ವೀಪವೊಂದರಲ್ಲಿ ಬಿಡುತ್ತಾರೆ.

ವಿಜ್ಞಾನಿಗಳು ಪ್ರಯೋಗಾಲಯವೊಂದರಲ್ಲಿ ಸೊಳ್ಳೆಗಳ ತತ್ತಿಗಳಿಗೆ ‘ವೊಲ್ಬಾಚಿಯ’ ಬ್ಯಾಕ್ಟೀರಿಯವನ್ನು ಚುಚ್ಚುತ್ತಾರೆ ಹಾಗೂ ಬಳಿಕ ಸೋಂಕಿತ ಗಂಡು ಸೊಳ್ಳೆಗಳನ್ನು ಗುವಾಂಗ್‌ಝೂ ನಗರದ ಹೊರವಲಯದಲ್ಲಿರುವ ದ್ವೀಪದಲ್ಲಿ ಬಿಡುತ್ತಾರೆ.

 28 ಶೇಕಡ ಕಾಡು ಸೊಳ್ಳೆಗಳಲ್ಲಿ ಪ್ರಾಕೃತಿಕವಾಗಿ ಉತ್ಪತ್ತಿಯಾಗುವ ಈ ಬ್ಯಾಕ್ಟೀರಿಯವು, ಸೋಂಕಿತ ಗಂಡು ಸೊಳ್ಳೆಗಳು ಹೆಣ್ಣು ಸೊಳ್ಳೆಗಳನ್ನು ಕೂಡಿದಾಗ ಅವುಗಳು ಬಂಜೆಯಾಗುವಂತೆ ಮಾಡುತ್ತವೆ.
‘‘ರೋಗಗಳನ್ನು ಹರಡಬಲ್ಲ ಸೊಳ್ಳೆಗಳ ಸಾಂದ್ರತೆಯನ್ನು ಒಂದು ನಿರ್ದಿಷ್ಟ ಹಂತಕ್ಕೆ ತಗ್ಗಿಸಲು ಯತ್ನಿಸುವುದು ಈ ಪ್ರಯೋಗದ ಉದ್ದೇಶವಾಗಿದೆ’’ ಎಂದು ವಿಜ್ಞಾನಿ ಝಿಯಾಂಗ್ ಕ್ಸಿ ಹೇಳುತ್ತಾರೆ.
‘‘ಸೊಳ್ಳೆಗಳ ಸಾಂದ್ರತೆ ಅಧಿಕ ಸಂಖ್ಯೆಯಲ್ಲಿರುವ ಕೆಲವು ಪ್ರದೇಶಗಳು ಇರುತ್ತವೆ. ಅಂಥ ಸ್ಥಳಗಳನ್ನು ಗುರಿಯಾಗಿಸಿ ಈ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಅದು ರೋಗ ಪ್ರಸರಣವನ್ನು ಗಣನೀಯವಾಗಿ ತಗ್ಗಿಸುತ್ತದೆ’’ ಎಂದರು.
ಗಂಡು ಸೊಳ್ಳೆಯೊಂದಿಗೆ ಕೂಡಿದ ಹೆಣ್ಣು ಸೊಳ್ಳೆಗೆ ವೊಲ್ಬಾಚಿಯ ಬ್ಯಾಕ್ಟೀರಿಯ ಹರಡಿದಾಗ ಅದು ಬಂಜೆಯಾಗುತ್ತದೆ. ಅದೇ ವೇಳೆ, ವೊಲ್ಬಾಚಿಯ ಬ್ಯಾಕ್ಟೀರಿಯ ಚುಚ್ಚಲ್ಪಟ್ಟ ಹೆಣ್ಣು ಸೊಳ್ಳೆಗಳು ವೊಲ್ಬಾಚಿಯ ಸೋಂಕಿತ ಮರಿಗಳಿಗೆ ಜನ್ಮ ನೀಡುತ್ತವೆ. ವೊಲ್ಬಾಚಿಯ ಸೋಂಕಿತ ಹೆಣ್ಣ ಸೊಳ್ಳೆಗಳಲ್ಲಿರುವ ಡೆಂಗಿ, ಕಾಮಾಲೆ ಮತ್ತು ಝಿಕಾ ವೈರಸ್‌ಗಳು ನಾಶಗೊಳ್ಳುತ್ತವೆ. ಹಾಗಾಗಿ, ಈ ಸೊಳ್ಳೆಗಳಿಗೆ ಈ ವೈರಸ್‌ಗಳನ್ನು ಮಾನವರಿಗೆ ಹರಡಲು ಅಸಾಧ್ಯವಾಗುತ್ತವೆ.
ಝಿಯಾಂಗ್ ಕ್ಸಿ ಯ ಪ್ರಯೋಗಾಲಯದಲ್ಲಿ ಒಂದು ವಾರದಲ್ಲಿ 50 ಲಕ್ಷ ಸೊಳ್ಳೆಗಳನ್ನು ಉತ್ಪಾದಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News