ಆಗ ಇವರು ಎಲ್ಲಿದ್ದರು?

Update: 2016-08-07 17:30 GMT

ಮತ್ತೆ ಸ್ವಾತಂತ್ರ್ಯ ದಿನ ಬಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡದ ಪರಿವಾರಕ್ಕೆ ಸೇರಿದ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಮುಂದಿನ ವಾರ ಕೆಂಪು ಕೋಟೆಯಲ್ಲಿ ನಿಂತು ರಾಷ್ಟ್ರಧ್ವಜ ಆರೋಹಣ ಮಾಡುತ್ತಾರೆ. ಕೇವಲ ಶೇ.30ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದಿದ್ದರೂ ಅವರು ನಮ್ಮ ಪ್ರಧಾನಿ. ಅವರ ಮಾತನ್ನು ನಾವು ಗೌರವದಿಂದ ಆಲಿಸಬೇಕಾಗುತ್ತದೆ. ಅದು ನಮ್ಮ ಸಂಸ್ಕೃತಿ. ಕರ್ನಾಟಕದ ಮುಖ್ಯಮಂತ್ರಿಗಳ ಬಗ್ಗೆ ಭಕ್ತರು ನಡೆದುಕೊಂಡಂತೆ ನಾವು ನಡೆದುಕೊಳ್ಳಲು ಬರುವುದಿಲ್ಲ. ಈ ದೇಶದಲ್ಲಿ 60 ವರ್ಷಗಳಲ್ಲಿ ಯಾರೂ ಏನನ್ನೂ ಮಾಡಲಾಗದ್ದನ್ನು ಮೋದಿಯವರು ಮಾಡುತ್ತಿದ್ದಾರೆಂದು ನಿನ್ನೆ ಮೊನ್ನೆ ಹುಟ್ಟಿದ ಯುವಕರು ಆಡುತ್ತಿರುವ ಮಾತುಗಳನ್ನು ಕೇಳಿದಾಗ, ಅವರ ಬಗ್ಗೆ ಅನುಕಂಪ ಉಂಟಾಗುತ್ತದೆ. ದೇಶವೆಂದರೆ ಗೊತ್ತಿಲ್ಲದ, ಸ್ವಾತಂತ್ರ್ಯ ಹೋರಾಟದ ಅರಿವಿಲ್ಲದ, ಚರಿತ್ರೆ ಸರಿಯಾಗಿ ಓದಿಕೊಳ್ಳದ ಈ ಯುವಕರು ಆಡುತ್ತಿರುವ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರೂ ಇಲ್ಲ. ಇಲ್ಲವೆಂದರೆ, ಈ ಮಾತನ್ನು ಕೇಳಿ ಅವರು ತುಂಬಾ ಯಾತನೆ ಪಡುತ್ತಿದ್ದರು.

ಈ ದೇಶವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಮುಕ್ತಗೊಳಿಸಲು ನಡೆದ ಹೋರಾಟದ ಸಂದಭರ್ದಲ್ಲಿ ಬಿಜೆಪಿ ಅಸ್ತಿತ್ವದಲ್ಲಿ ಇರಲಿಲ್ಲ. ಜನಸಂಘವೂ ಇರಲಿಲ್ಲ. ಆದರೆ ಆ ಪಕ್ಷದ ಸೈದ್ಧಾಂತಿಕ ಸ್ಫೂರ್ತಿಯಾದ ಆರೆಸ್ಸೆಸ್ ಅಸ್ತಿತ್ವದಲ್ಲಿ ಇತ್ತು. 1925ರಲ್ಲಿ ಸ್ಥಾಪನೆಯಾದ ಈ ಸಂಘಟನೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಇವರು ಬ್ರಿಟಿಷ್ ಪೊಲೀಸರಿಗೆ ಹಿಡಿದುಕೊಟ್ಟ ಉದಾಹರಣೆಗಳಿವೆ.

ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಕಮ್ಯುನಿಸ್ಟರು ಹೀಗೆ ಎಲ್ಲರನ್ನೂ ಕಟ್ಟಿಕೊಂಡು ಮಹಾತ್ಮಾ ಗಾಂಧಿ ನಡೆಸಿದ ಹೋರಾಟದ ಬಗ್ಗೆ ಆರೆಸ್ಸೆಸ್‌ಗೆ ಅಸಮಾಧಾನವಿತ್ತು. ಹಿಂದೂ ರಾಷ್ಟ್ರ ನಿರ್ಮಾಣದ ಗುರಿಗೆ ಸ್ವಾತಂತ್ರ್ಯ ಹೋರಾಟ ಅಡ್ಡಿಯಾಗಿದೆ ಎಂಬ ಅಭಿಪ್ರಾಯ ಈ ಸಂಘಟನೆಯದ್ದು ಆಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಯುವಕರು ಮನೆಮಾರು ತೊರೆದು ಗಾಂಧಿ ಜೊತೆ ಸೇರಿದರು. ಸುಭಾಶ್ಚಂದ್ರ ಬೋಸ್ ವಿದೇಶಕ್ಕೆ ಹೋಗಿ ಆಝಾದ್ ಹಿಂದ್ ಪೌಝ್ ಕಟ್ಟಿದರು. ಶಹೀದ್ ಭಗತ್ ಸಿಂಗ್ ಲೆನಿನ್ ಪುಸ್ತಕ ಓದಿ, ಮುಗಿಸಿ ಇಂಕ್ವಿಲಾಬ್ ಜಿಂದಾಬಾದ್ ಎಂದು ಹೇಳಿ ಗಲ್ಲಿಗೇರಿದರು. ಅಪ್ಘಾನಿಸ್ತಾನದಿಂದ ಬಂದ ಖಾನ್ ಅಬ್ದುಲ್ ಗಫಾರ್ ಖಾನ್ ಬಾಪೂಜಿ ಜೊತೆ ಹೆಗಲಿಗೆ ಹೆಗಲು ಕೊಟ್ಟು ಓಡಾಡಿ ಗಡಿನಾಡು ಗಾಂಧಿ ಎಂದು ಕರೆಸಿಕೊಂಡರು. ಈ ದೇಶ ವಿಮೋಚನೆಗಾಗಿ ನಡೆದ ಈ ಮಹಾಸಮರದಲ್ಲಿ ಈಗ ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ಪರಿವಾರದವರು ಇರಲಿಲ್ಲ.

ಭಗತ್ ಸಿಂಗ್ ತಮ್ಮ ನೆತ್ತರನ್ನು ನೀಡಿ ಸ್ವಾತಂತ್ರ್ಯದ ಜ್ಯೋತಿ ಬೆಳಗಿಸಿದರು. ಸುಭಾಶ್ಚಂದ್ರ ಬೋಸ್ ಆಝಾದ್ ಹಿಂದ್ ಸೇನೆ ಕಟ್ಟಿ ಬ್ರಿಟಿಷರನ್ನು ನಡುಗಿಸಿದರು. ಮಹಾತ್ಮಾಗಾಂಧಿ, ಜವಾಹರಲಾಲ್ ನೆಹರೂ ತಮ್ಮದೇ ದಾರಿಯಲ್ಲಿ ಆಂಗ್ಲರಿಗೆ ಪಾಠ ಕಲಿಸಿದರು. ಡಾ. ಅಂಬೇಡ್ಕರ್ ದೇಶಕ್ಕೆ ಸಂವಿಧಾನದ ಬೆಳಕನ್ನು ನೀಡಿದರು. ಆದರೆ ಈಗ ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ಇವರು ಏನು ನೀಡಿದರು? ಇವರು ರಾಷ್ಟ್ರಕ್ಕೆ ನೀಡಿದ ಏಕೈಕ ಕೊಡುಗೆ ನಾಥುರಾಮ್ ಗೋಡ್ಸೆ.

ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಸಂಘ ಪರಿವಾರದವರು ಈಗ ತಮ್ಮದಲ್ಲದ ಪರಂಪರೆಯ ವಾರಸ್ದಾರರು ಆಗಲು ಹೊರಟಿದ್ದಾರೆ. ಹಿಂದೂ ಮುಸ್ಲಿಂ ಏಕತೆ ಪ್ರತಿಪಾದಿಸಿದ ಸುಭಾಶ್ಚಂದ್ರ ಬೋಸ್, ತಾನು ಎಡಪಂಥನೆಂದು ಘೋಷಿಸಿಕೊಂಡ ಭಗತ್ ಸಿಂಗ್, ಹಿಂದೂವಾಗಿ ಹುಟ್ಟಿದರೂ ಹಿಂದೂವಾಗಿ ಸಾಯುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿ ಬುದ್ಧನ ಮಾರ್ಗ ಹಿಡಿದ ಡಾ. ಅಂಬೇಡ್ಕರ್ ಇವರೆಲ್ಲರ ಫೋಟೊಗಳನ್ನು ಈ ನಕಲಿಗಳು ಬಳಸಿಕೊಳ್ಳುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಚಳವಳಿ ನಡೆದಾಗ, ಅದರಲ್ಲಿ ಭಾಗವಹಿಸಬಾರದೆಂದು ಅಂದಿನ ಸರಸಂಘ ಚಾಲಕ ಗೋಳ್ವಾಲ್ಕರ್ ಸ್ವಯಂ-ಸೇವಕರಿಗೆ ಕರೆ ನೀಡಿದ್ದರು. ಅಂತಲೇ ‘‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಸಾವಿರಾರು ಮುಸ್ಲಿಮರನ್ನು ತೋರಿಸುತ್ತೇನೆ. ಆದರೆ ಒಬ್ಬನೇ ಒಬ್ಬ ಆರೆಸ್ಸೆಸ್ ಕಾರ್ಯಕರ್ತನನ್ನು ನೀವು ತೋರಿಸಿ’’ ಎಂದು ಸ್ವಾಮಿ ಅಗ್ನಿವೇಶ್ ಅವರು ಹಾಕಿದ ಸವಾಲಿಗೆ ಇವರಿಂದ ಇನ್ನೂ ಉತ್ತರ ಬಂದಿಲ್ಲ.

ಈ ದೇಶ ಸುಮಾರು ಸಾವಿರ ವರ್ಷ ಕಾಲ ವಿದೇಶಿ ದಾಸ್ಯದಲ್ಲಿ ನರಳಿದೆಯೆಂದು ಇವರು ಹೇಳುತ್ತಾರೆ. ಆದರೆ ವಿದೇಶಿ ದಾಳಿಕೋರರು ಬಂದಾಗ, ಅವರಿಗೆ ರತ್ನಗಂಬಳಿ ಹಾಸಿ ಪರಾಕು ಹೇಳಿ ತಮ್ಮ ಸ್ವಾರ್ಥ ಸಾಧಿಸಿಕೊಂಡವರು ಯಾರು? ಆಗ ಆಸ್ಥಾನದಲ್ಲಿ ಭಟ್ಟಂಗಿತನ ಮಾಡಿದ್ದಕ್ಕೆ ಬ್ರಿಟಿಷ್ ಸರಕಾರ ಮತ್ತು ಮೊಘಲರು ಇವರಿಗೆ ನೂರಾರು ಎಕರೆ ಜಮೀನು ಉಂಬಳಿ ಹಾಕಿಕೊಟ್ಟರು. ಇಂಥವರನ್ನು ದೇಶದ ಬಹುತೇಕ ಭಾಗದಲ್ಲಿ, ಅದರಲ್ಲೂ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ದೇಶಪಾಂಡೆ, ದೇಶಮುಖ್ ಪಾಟೀಲ ಎಂದು ಕರೆಯುತ್ತಾರೆ. ಈಗ ಇಂಥವರೇ ಸಂಘ ಪರಿವಾರ ಸೇರಿ, ಈ ದೇಶ ಕಟ್ಟಿದ ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ರಾಷ್ಟ್ರಭಕ್ತಿಯ ಪಾಠ ಮಾಡುತ್ತಾರೆ.

 ಮಾತೆತ್ತಿದರೆ, ಅಲ್ಪಸಂಖ್ಯಾತರ ರಾಷ್ಟ್ರನಿಷ್ಠೆಯನ್ನು ಇವರು ಪ್ರಶ್ನಿಸುತ್ತಾರೆ. ಆದರೆ ಕಿತ್ತೂರು ಚನ್ನಮ್ಮಗೆ ದ್ರೋಹ ಬಗೆದ ವೆಂಕರಾವ್, ಸಂಗೊಳ್ಳಿರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟು ಭಕ್ಷೀಸು ಪಡೆದ ಇನಾಮದಾರರು, ಟಿಪ್ಪು ಸುಲ್ತಾನ್‌ಗೆ ದ್ರೋಹ ಬಗೆದ ಪೂರ್ಣಯ್ಯ, ಸಿಂಧೂರ್ ಲಕ್ಷ್ಮಣನನ್ನು ಹಿಡಿದುಕೊಟ್ಟು ಪಾಟೀಲರಾದವರು ಯಾರೂ ಅಲ್ಪಸಂಖ್ಯಾತರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಇವರು ನಡೆದು ಬಂದ ದ್ರೋಹದ ದಾರಿಯನ್ನು ಬರೆಯಲು ಈ ಅಂಕಣ ಸಾಕಾಗುವುದಿಲ್ಲ. ಪದೇ ಪದೇ ಈ ದೇಶವನ್ನು 60 ವರ್ಷ ಆಳಿದರೂ ಏನು ಮಾಡಿದರು ಎಂದು ಕೆಣಕುವ ಇವರಿಗೆ ಈ ಭಾರತ ಜಗತ್ತಿನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಯಾರು ಕಾರಣ ಎಂಬುದು ಗೊತ್ತಿಲ್ಲ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರಿಂದ ಹಿಡಿದು ಇಲ್ಲಿಯವರೆಗೆ ಆರು ದಶಕಗಳ ಕಾಲ ಹಂತಹಂತವಾಗಿ ಎಲ್ಲರೂ ಕಟ್ಟಿ ಬೆಳೆಸಿದ ದೇಶವಿದು.

ಬ್ರಿಟಿಷರು ದೇಶ ಬಿಟ್ಟು ಹೋಗುವಾಗ, ಬಹುತೇಕ ಗ್ರಾಮಗಳು ಕಗ್ಗತ್ತಲ ಕೂಪಗಳಾಗಿದ್ದವು. ರಸ್ತೆ, ಶಾಲೆ, ನೀರಾವರಿ ಸೌಕರ್ಯಗಳು ಇರಲಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹಮ್ಮಿಕೊಂಡ ಪಂಚವಾರ್ಷಿಕ ಯೋಜನೆಯಿಂದ ಈ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿತು. ಪಿ.ವಿ.ನರಸಿಂಹರಾಯರ ಜಾಗತೀಕರಣದ ಕರಾಳ ಯುಗ ಬರುವವರೆಗೆ ಈ ದೇಶ ನಡೆದು ಬಂದ ದಾರಿ ಗಮನಾರ್ಹವಾದದ್ದು.

 ಎಲ್ಲಕ್ಕಿಂತ ಮುಖ್ಯವಾಗಿ ಕಳೆದ 60 ವರ್ಷಗಳಲ್ಲಿ ಈ ದೇಶ ಸಾಧಿಸಿದ ಬಹುದೊಡ್ಡ ಸಾಧನೆಯೆಂದರೆ, ಇಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿರುವುದು. ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗಿ ಸರ್ವಾಧಿಕಾರಿಗಳು ಬಂದಿದ್ದಾರೆ. ಆದರೆ ಇಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದು ಗೆದ್ದವರು ಅಧಿಕಾರ ವಹಿಸಿಕೊಳ್ಳುತ್ತಾರೆ. ಈ ಪ್ರಜಾಪ್ರಭುತ್ವ ವ್ಯವಸ್ಥೆ ಇರದಿದ್ದರೆ, ಈ ನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ಸಂಘದ ಯಾವುದಾದರೂ ಶಾಖೆಯಲ್ಲಿ ವ್ಯಾಯಾಮ ಮಾಡಬೇಕಾಗಿರುತಿತ್ತು. ಇದೆಲ್ಲ ವಾಜಪೇಯಿ, ಅಡ್ವಾಣಿಯವರಿಗೆ ಗೊತ್ತು. ಆದರೆ ಈ ಭಕ್ತರಿಗೆ ಗೊತ್ತಿಲ್ಲ. ಸ್ವಾತಂತ್ರ್ಯ ಪಡೆದು ಆರು ದಶಕಗಳ ಕಾಲ ಸುರಕ್ಷಿತವಾಗಿ ನಡೆದುಕೊಂಡು ಬಂದ ಈ ದೇಶ ಬಿಕ್ಕಟ್ಟಿನ ಸುಳಿಗೆ ಸಿಕ್ಕಿದೆ. ಇಲ್ಲಿ ಸಂಪತ್ತು ಕೊಳ್ಳೆ ಹೊಡೆಯಲು ಬಂಡವಾಳಶಾಹಿಗಳು ಬಾಯ್ತೆರೆದು ನಿಂತಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳು ದೇಶವನ್ನು ನುಂಗಲು ನಿಂತಿವೆ. ಇದ್ಯಾವುದನ್ನೂ ಪ್ರಶ್ನಿಸದ ಭಕ್ತರು ದನ ಸಾಗಣೆ ಮಾಡುವವರ ಮೇಲೆ ಹಲ್ಲೆ ಮಾಡಿ, ರಾಷ್ಟ್ರಭಕ್ತಿ ಪ್ರದರ್ಶಿಸುತ್ತಿದ್ದಾರೆ. ಈ ಗೋರಕ್ಷಕರೆಲ್ಲ ಕ್ರಿಮಿನಲ್‌ಗಳೆಂದು ಸ್ವತಃ ಮೋದಿ ಹೇಳಬೇಕಾದಂತಹ ಪರಿಸ್ಥಿತಿ ಬಂದಿದೆ.

ಈ ದೇಶ ಯಾವುದೇ ಜಾತಿ ಅಥವಾ ಧರ್ಮದ ಸ್ವತ್ತಲ್ಲ. ಎಲ್ಲಾ ಸಮುದಾಯಗಳ ಶ್ರಮಜೀವಿಗಳು ಸೇರಿ ಇದನ್ನು ಕಟ್ಟಿದ್ದಾರೆ. ಅಂತಲೇ ಡಾ. ಅಂಬೇಡ್ಕರ್ ಈ ದೇಶಕ್ಕೆ ನಿರಂತರವಾಗಿ ಬೆಳಕನ್ನು ನೀಡುವ ಸಂವಿಧಾನ ನೀಡಿದರು. ಆ ಸಂವಿಧಾನವನ್ನೇ ಬುಡಮೇಲು ಮಾಡಲು ಇವರು ಹುನ್ನಾರ ನಡೆಸಿದ್ದಾರೆ.

ಯಾವ ಚರಿತ್ರೆಯನ್ನು ಓದದ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತವಾಗಿ ವರ್ತಿಸುವ ಯುವಕರನ್ನು ಸರಿಯಾದ ದಾರಿಗೆ ತರುವ ಜವಾಬ್ಧ್ದಾರಿ ಪ್ರಗತಿಪರ ಸಂಘಟನೆಗಳ ಮೇಲಿದೆ. ಇಂದಲ್ಲ, ನಾಳೆ ಅವರು ಸರಿದಾರಿಗೆ ಬರುತ್ತಾರೆ.

ಇಲ್ಲವಾದರೆ, ಅವರು ಬಾರೀ ಬೆಲೆ ತೆರಬೇಕಾಗುತ್ತದೆ. ಬಿಜೆಪಿ ನಾಯಕರು ಕೂಡ ಇವರು ಹೇಳಿದಂತೆ ಕೇಳುವುದಿಲ್ಲ. ಸಿದ್ದರಾಮಯ್ಯ ಅವರ ಪುತ್ರ ಅಸುನೀಗಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಒಂದೆಡೆ ಇವರು ಸಂಭ್ರಮಪಟ್ಟರೆ, ಬಿಜೆಪಿ ನಾಯಕರಾದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಈಶ್ವರಪ್ಪ ಅವರು ಮುಖ್ಯಮಂತ್ರಿ ಬಳಿ ಬಂದು ಸಂತೈಸಿದರು. ಸಂಘ ಪರಿವಾರದವರನ್ನು ಸೃಷ್ಟಿಸಿದ ಅವಿವೇಕಿಗಳನ್ನು ಸರಿ ದಾರಿಗೆ ತರುವುದು ಸುಲಭವಲ್ಲ.

ಇದು ಜಾತ್ಯತೀತ ಜನತಂತ್ರ ಭಾರತ. ಇದು ಅದೇ ದಾರಿಯಲ್ಲಿ ಮುನ್ನಡೆಯುತ್ತದೆ. ಇದನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಹೊರಟವರು ಚರಿತ್ರೆಯ ಕಸದ ಬುಟ್ಟಿಗೆ ಸೇರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News