ಮಕ್ಕಳನ್ನು ದಿಕ್ಕು ತಪ್ಪಿಸುತ್ತಿರುವ ವೀಡಿಯೊ ಗೇಮ್ ಎಂಬ ವೈರಸ್!
ಒಂದು ನೂತನ ಸಮೀಕ್ಷೆಯ ಪ್ರಕಾರ ಅತಿಹೆಚ್ಚು ವೀಡಿಯೊ ಆಟಗಳನ್ನು ಆಡುವ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತಗೊಂಡು ಅವರ ಅಂಕಗಳಲ್ಲಿ ಭಾರೀ ಬದಲಾವಣೆ ಕಂಡುಬರುತ್ತದೆ. ಅದೇ ಹೊತ್ತಿನಲ್ಲಿ ಮಕ್ಕಳು ತಮ್ಮ ವಯಸ್ಸಿಗನುಗುಣವಾಗಿ ತೋರಬೇಕಾದ ಆಸಕ್ತಿಯನ್ನು ಇತರ ವಿಷಯಗಳತ್ತ ತೋರದೇ ಕೇವಲ ಆಟ ಮತ್ತು ಆಟದಲ್ಲಿ ಬರುವ ಪಾತ್ರಗಳತ್ತಲೇ ಕೇಂದ್ರೀಕರಿಸುವ ಮೂಲಕ ಸಮಾಜದಿಂದಲೂ ದೂರವಾಗುತ್ತಾ ಬರುತ್ತಾರೆ.
ಈ ವಿಷಯವನ್ನು ಅಭ್ಯಸಿಸಿದ ಸಂಶೋಧಕರು ಮಕ್ಕಳು ತಮ್ಮ ಗೇಮ್‌ಗಳಲ್ಲಿ ಕಳೆಯುವ ಸಮಯಕ್ಕೂ ಅವರ ಅಭ್ಯಾಸದ ಮೂಲಕ ಕಲಿಯಬೇಕಾದ ವಿಷಯಗಳಲ್ಲಿ ಕಡಿಮೆಯಾಗಿರುವುದಕ್ಕೂ ನೇರ ಸಂಬಂಧವಿರುವುದನ್ನು ದೃಢೀಕರಿಸಿದ್ದಾರೆ. ವೀಡಿಯೊ ಗೇಮ್‌ಗಳಿಗೆ ವ್ಯಸನರಾಗಿರುವ ಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಸಂಶೋಧಕರು ಅಭ್ಯಸಿಸಿ ಅವರ ಪರೀಕ್ಷೆಯ ಅಂಕಗಳನ್ನೂ ಇತರ ಚಟುವಟಿಕೆಗಳನ್ನೂ ಮತ್ತು ಸ್ವತಃ ಇತರ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳುವ ಮೂಲಕ ಅಪಾರ ಮಾಹಿತಿ ಕಲೆಹಾಕಿ ಅಮೂಲ್ಯ ಮಾಹಿತಿಗಳನ್ನು ನೀಡಿದ್ದಾರೆ.
ಇದರ ಫಲಿತಾಂಶವೇನೆಂದರೆ ಕಂಪ್ಯೂಟರ್ ಮತ್ತು ವೀಡಿಯೊ ಗೇಮ್ ಗಳಲ್ಲಿ ಕೊಂಚಕಾಲ, ಅಂದರೆ ಪಾಲಕರು ನಿಗದಿಪಡಿಸಿದಷ್ಟು ಕಾಲ ಮಾತ್ರ ಆಡಿದ ಮಕ್ಕಳು ಉತ್ತಮ ಸಾಧನೆ ತೋರಿದ್ದು ಅತಿಹೆಚ್ಚು ಆಟ ಆಡಿದವರೂ, ಕೊಂಚವೂ ಆಡದೇ ಇದ್ದವರೂ ಕಳಪೆ ಸಾಧನೆ ತೋರಿದ್ದಾರೆ. ಅಲ್ಲದೇ ಮನೆಯಲ್ಲಿ ಕಂಪ್ಯೂಟರ್ ಇಲ್ಲದೇ ಇರುವ ಅಥವಾ ಇದ್ದರೂ ಆಡಲಿಕ್ಕೆ ಅವಕಾಶವೇ ಇಲ್ಲದ ಮಕ್ಕಳೂ ಅತಿ ಕಳಪೆ ಅಂಕಗಳನ್ನು ಪಡೆದಿದ್ದಾರೆ. ಅದರಲ್ಲೂ ಯಾವ ಆಟದಲ್ಲಿ ಕೊಲ್ಲುವ ಮೂಲಕ ಗೆಲುವನ್ನು ಸಾಧಿಸಲಾಗುತ್ತದೋ ಆ ಮಕ್ಕಳಲ್ಲಿ ಕೋಪ, ಸೇಡಿನ ಮನೋಭಾವಗಳೇ ತುಂಬಿಕೊಳ್ಳುತ್ತಾ ದೊಡ್ಡವರಾದ ಬಳಿಕ ಭಿನ್ನವಾಗಿ ಯೋಚಿಸುವಂತೆ, ತನ್ಮೂಲಕ ಸಮಾಜಘಾತುಕರಾಗಲೂ ಕಾರಣವಾಗುತ್ತದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಆದ್ದರಿಂದ ಮಕ್ಕಳಿಗೆ ಕಂಪ್ಯೂಟರ್ ಆಟವೂ ಇತರ ಆಟಗಳಂತೆ ಒಂದು ನಿರ್ದಿಷ್ಟ ಸಮಯದವರೆಗೆ ಮಾತ್ರ ಆಡಲು ನೀಡಿ ಇತರ ಚಟುವಟಿಕೆ ಗಳಲ್ಲಿಯೂ ಭಾಗಿಯಾಗುವಂತೆ ಮಾಡುವ ಮೂಲಕ ಉತ್ತಮ ಭಾವನಾತ್ಮಕ ಸಂಬಂಧ ಹೊಂದಲು ಸಾಧ್ಯ.
-ಮಾಹಿತಿ